Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ತನಿಖಾ ಲೋಪಕ್ಕೆ ಬುಲೆಟ್ ಸಾಕ್ಷ್ಯ

Wednesday, 15.11.2017, 3:04 AM       No Comments

ಮಡಿಕೇರಿ: ಡಿವೈಎಸ್ಪಿ ಎಂ.ಕೆ.ಗಣಪತಿ ಶವ ಪತ್ತೆಯಾದ 17 ತಿಂಗಳ ತರುವಾಯ ಮಡಿಕೇರಿ ವಿನಾಯಕ ಲಾಡ್ಜ್​ನ 315ನೇ ಕೊಠಡಿಯಲ್ಲಿ ಸಿಬಿಐ ತಂಡಕ್ಕೆ ಬುಲೆಟ್ ಸಿಕ್ಕಿದೆ! ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ದಿವ್ಯನಿರ್ಲಕ್ಷ್ಯ ವಹಿಸಿರುವುದಕ್ಕೆ ಈ ಗುಂಡು ಸಾಕ್ಷಿಯಾಗಿದೆ! ಇದರೊಂದಿಗೆ ಗಣಪತಿ ಸಾವಿನಲ್ಲಿ ಮೂಡಿರುವ ಅನುಮಾನ ಮತ್ತಷ್ಟು ಬಲವಾಗಿದೆ.

ಚೆನ್ನೈ ಸಿಬಿಐ ಡಿವೈಎಸ್​ಪಿ ಜಿ.ಕಲೈಮಣಿ ಸೇರಿ 10 ಮಂದಿ ವಿಶೇಷ ತಂಡ ಮಂಗಳವಾರ ಮಡಿಕೇರಿಗೆ ತೆರಳಿ ಗಣಪತಿ ಸಹೋದರ ಸತೀಶ್ ಮಾಚಯ್ಯರಿಂದ ಮಾಹಿತಿ ಪಡೆಯಿತು. ನಂತರ ಬೆಳಗ್ಗೆ 11ಕ್ಕೆ ಮಡಿಕೇರಿ ಟೌನ್ ಇನ್​ಸ್ಪೆಕ್ಟರ್​ಗಳಾದ ಐ.ಪಿ.ಮೇದಪ್ಪ, ಮಾನಿಪಂಡ ಭರತ್​ರನ್ನು ಗಣಪತಿ ಶವ ಪತ್ತೆಯಾದ ವಿನಾಯಕ ಲಾಡ್ಜ್​ನ ಕೊಠಡಿಗೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಬುಲೆಟ್ ಪತ್ತೆಯಾಗಿದೆ. ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಸೋಮವಾರವಷ್ಟೇ ಕೊಡಗು ಎಸ್​ಪಿ ರಾಜೇಂದ್ರ ಪ್ರಸಾದ್​ಗೆ ಸಾಕ್ಷ್ಯಾಧಾರ ಸಂಗ್ರಹ ಮಾಡಿಲ್ಲವೆಂದು ತರಾಟೆಗೆ ತೆಗೆದುಕೊಂಡಿತ್ತು.

ಇದೀಗ ಸಿಬಿಐ ಪರಿಶೀಲನೆ ವೇಳೆ ಕೊಠಡಿಯಲ್ಲಿ ಬುಲೆಟ್ ಪತ್ತೆಯಾಗಿರುವುದು ಕರ್ತವ್ಯಲೋಪವನ್ನು ಎತ್ತಿ ತೋರಿಸಿದೆ.

2 ಬಾರಿ ಮಹಜರು ನಡೆದಿದೆ!

2016 ಜುಲೈ 7ರಂದು ವಿನಾಯಕ ಲಾಡ್ಜ್​ನ 315ನೇ ಕೊಠಡಿಯಲ್ಲಿ ಗಣಪತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗಣಪತಿ ಸರ್ವಿಸ್ .99 ಪಿಸ್ತೂಲ್​ನಲ್ಲಿ ಇದ್ದ 10 ಗುಂಡುಗಳ ಪೈಕಿ 2 ಸುತ್ತು ಗುಂಡುಗಳು ಹಾಸಿಗೆಗೆ ಹಾರಿಸಲಾಗಿತ್ತು. ಗಣಪತಿ ಶವವನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಮಡಿಕೇರಿನಗರ ಪೊಲೀಸರು ಮತ್ತು ಜುಲೈ 9ರಂದು ಸಿಐಡಿ ಪೊಲೀಸರು ಮಹಜರ್ ಮಾಡಿದ್ದರು. ಕೊಠಡಿಯಲ್ಲಿ 2 ಖಾಲಿ ಕಾಡ್ರೇಜ್ ಪತ್ತೆಯಾಗಿರುವುದಾಗಿ ಮಹಜರ್ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಸಿಐಡಿ ತನಿಖೆ ಮುಗಿದ ಬಳಿಕ 315ನೇ ಕೊಠಡಿಯನ್ನು ಬಾಡಿಗೆ ನೀಡಲಾಗಿತ್ತು. ಈ ನಡುವೆ ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಭೇಟಿ ಲಾಡ್ಜ್​ಗೆ ಭೇಟಿ ಕೊಟ್ಟಾಗ ಗ್ರಾಹಕನಿದ್ದ. ಇದಾದ ಮೇಲೆ 2017ಕ್ಕೆ ಸೆ.5ಕ್ಕೆ ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿದ ಬಳಿಕ ಕೊಠಡಿಯನ್ನು ಸೀಜ್ ಮಾಡಲಾಗಿತು ಎಂದು ತಿಳಿದುಬಂದಿದೆ.

ಗಣಪತಿ ಕೇಸ್ ಮರುಸೃಷ್ಟಿ :

ಲಾಡ್ಜ್ ಕೊಠಡಿಯಲ್ಲಿ ಸಿಬಿಐ ಅಧಿಕಾರಿಗಳು ಮಡಿಕೇರಿನಗರ ಇನ್​ಸ್ಪೆಕ್ಟರ್​ಗಳಾದ ಐ.ಪಿ.ಮೇದಪ್ಪ, ಮಾನಿಪಂಡ ಭರತ್​ರನ್ನು ತೀವ್ರ ವಿಚಾರಣೆ ನಡೆಸಿದರು. ಶವ ಯಾವ ಫ್ಯಾನ್​ನಲ್ಲಿ ಇತ್ತು. ಅಲ್ಲಿಂದ ಯಾರು ತೆಗೆದುಕೊಂಡು ಹೋದರು ಎಂಬುದರಿಂದ ಹಿಡಿದು ಆಸ್ಪತ್ರೆಗೆ ಸಾಗಿಸುವವರೆಗೂ ಎಳೆ ಎಳೆಯಾಗಿ ಮಾಹಿತಿ ಕಲೆ ಹಾಕಿ 2016 ಜು.7ರಂದು ನಡೆದ ದೃಶ್ಯಾವಳಿಯನ್ನು ಮರುಸೃಷ್ಟಿಸಿದರು. ಕೊಠಡಿ ಪರಿಶೀಲನೆ ವೇಳೆ ಕೆಲ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದರು. ಊಟಕ್ಕೂ ತೆರಳದ ಅಧಿಕಾರಿಗಳು ಕೊಠಡಿಗೆ ಪಪ್ಸ್, ಬಿಸ್ಕೆಟ್, ನೀರು ತರಿಸಿಕೊಂಡರು. ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಶೈಲಜಾ ಅವರನ್ನು ಲಾಡ್ಜ್​ಗೆ ಕರೆಸಿಕೊಂಡು ವಿಚಾರಣೆ ನಡೆಸಿದರು. ಅಲ್ಲದೆ, ಮರಣೋತ್ತರ ಪರೀಕ್ಷೆ ವರದಿ ಕುರಿತು ಮಾಹಿತಿ ಪಡೆದರು. ಶವ ವಸತಿ ಗೃಹದಿಂದ ತೆಗೆದುಕೊಂಡು ಹೋಗುವ ವೇಳೆ ಇದ್ದವರು, ವಸತಿ ಗೃಹದಲ್ಲಿ ಕೆಲಸ ಮಾಡುತ್ತಿದ್ದವರಿಂದಲೂ ಮಾಹಿತಿ ಪಡೆಯಲಾಯಿತು.

ಮತ್ತೊಂದೆಡೆ ಹೊಸ ದೆಹಲಿಯಿಂದಲೇ ಆಗಮಿಸಿದ್ದ ಸಿಬಿಐ ವಿಧಿವಿಜ್ಞಾನ ಪ್ರಯೋಗಾಲಯದ ಐವರು ತಜ್ಞರು ಲಾಡ್ಜ್​ನ 315ನೇ ಕೊಠಡಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಬುಧವಾರವೂ ತನಿಖೆ ಮುಂದುವರೆಸುವ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದೆ.

ಲಾಡ್ಜ್​ಗೆ ಬಿಗಿ ಭದ್ರತೆ :

ವಿನಾಯಕ ಲಾಡ್ಜ್ ಹತ್ತಿರ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಸುಳಿಯದಂತೆ ಪ್ರವೇಶದ್ವಾರದಲ್ಲಿಯೇ ತಡೆಯಲಾಯಿತು. ಮಡಿಕೇರಿ ಟೌನ್ ಪೊಲೀಸರು ಬಂದೋಬಸ್ತ್ ಒದಗಿಸಿದರು.

ಟೀಮ್​ನಲ್ಲಿ ಕನ್ನಡಿಗರು

ಎಸ್​ಪಿ ಶರವಣ, ಡಿವೈಎಸ್ಪಿ ಕಲೈಮಣಿ ನೇತೃತ್ವದ 12 ಮಂದಿ ವಿಶೇಷ ತಂಡದಲ್ಲಿ ಬೆಂಗಳೂರು ಮತ್ತು ತುಮಕೂರು ಮೂಲದ ಸಿಬಿಐನ ಇಬ್ಬರು ಸಬ್​ಇನ್​ಸ್ಪೆಕ್ಟರ್​ಗಳು ಇದ್ದಾರೆ. ಭಾಷಾ ಸಮಸ್ಯೆ ಹಾಗೂ ಗಣಪತಿ ಪ್ರಕರಣದ ದಾಖಲೆ ಮತ್ತು ಬಿ ರಿಪೋರ್ಟ್ ವರದಿ ಕನ್ನಡ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರ ಸಹಾಯ ಪಡೆಯದೆ ತನಿಖೆ ನಡೆಸಲು ಕನ್ನಡಿಗ ಅಧಿಕಾರಿಗಳನ್ನು ತಂಡದಲ್ಲಿ ಕರೆತರಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸಿಬಿಐ ತನಿಖೆಗೆ ಎಲ್ಲಾ ಸಹಕಾರ ಕೊಡುತ್ತೇವೆ. ಒಳ್ಳೆ ರೀತಿಯ ತನಿಖೆಯಾಗುವ ವಿಶ್ವಾಸವಿದೆ. ಕೊಠಡಿ ಪರಿಶೀಲನೆ, ವೈದ್ಯರ ವಿಚಾರಣೆ ನಡೆಸಿದರು. ತಪಾಸಣೆ ನಡೆಸಿ ಸಹಿ ಪಡೆದರು.

|ಎಂ.ಕೆ.ಮಾಚಯ್ಯ, ಗಣಪತಿ ಸಹೋದರ

ಸಿಐಡಿ ಕಾಣದ್ದನ್ನು ಸಿಬಿಐ ಕಂಡಿತು..!

# ವಿನಾಯಕ ಲಾಡ್ಜ್​ನ ರೂಂ ನಂಬರ್ 315ರಲ್ಲಿ ಪರಿಶೀಲನೆ ವೇಳೆ ಮಂಚದಲ್ಲಿ ಪತ್ತೆಯಾದ ಗುಂಡು

# ದೆಹಲಿಯಿಂದ ಬಂದಿದ್ದ ಸಿಬಿಐನ ಎಫ್​ಎಸ್​ಎಲ್ ತಜ್ಞರು, ಪೊಲೀಸ್ ಅಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು ಪರಿಶೀಲನೆ

# ಲಾಡ್ಜ್ ಕೊಠಡಿಯನ್ನು ಸೀಲ್ ಮಾಡಿ ವಶಕ್ಕೆ ಪಡೆದ ಸಿಬಿಐ ತಂಡ, ತನಿಖಾಧಿಕಾರಿ ಕಲೈಮಣಿ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ

Leave a Reply

Your email address will not be published. Required fields are marked *

Back To Top