Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ತತ್ತ್ವ-ಮಂತ್ರದ್ರಷ್ಟಾರ ಮಹರ್ಷಿ ಅರವಿಂದರು

Sunday, 24.09.2017, 3:00 AM       No Comments

ಶ್ರೇಷ್ಠ ಸಾಹಿತಿ, ಕವಿ, ಯೋಗಿ, ತತ್ತ್ವಜ್ಞಾನಿ, ಮಹಾನ್​ಚಿಂತಕರಾಗಿದ್ದ ಅರವಿಂದರು, ಅಧ್ಯಾತ್ಮಸಾಧಕರಾಗಿ, ಯೋಗಿಯಾಗಿ ಅಖಂಡ ಮಾನವಚಿಂತನೆಯನ್ನು ಮಾಡಿದ ಧೀಮಂತ ಪುರುಷ. ರಾಷ್ಟ್ರವು ಸ್ವರಾಜ್ಯವಾಗಲು ಗುಪ್ತಕ್ರಾಂತಿಕಾರರಾಗುವುದು ಅನಿವಾರ್ಯವೆಂದು ಅರವಿಂದರು ಭಾವಿಸಿದ್ದರು. ಕರ್ನಾಟಕದ ಅನೇಕ ಸಾಹಿತಿಗಳು, ವಿದ್ವಾಂಸರು ಅವರಿಂದ ಪ್ರಭಾವಿತರಾಗಿದ್ದಾರೆ.

 

ಕಲ್ಕತ್ತ ಭಾರತದ ಮುಖ್ಯ ಸಾಂಸ್ಕೃತಿಕ ನಗರ. ಇದು ಏಕಕಾಲಕ್ಕೆ ರಾಷ್ಟ್ರಯೋಧರು, ಕವಿಗಳು ಮತ್ತು ದಾರ್ಶನಿಕರು ಬಾಳಿದ ಮಹಾನಗರ. ಬಂಗಾಳದಲ್ಲಿ ವೈಷ್ಣವಪಂಥ ಮೂಡಿ ಸಮಾಜದಲ್ಲಿ ಭಕ್ತಿಯ ಪಾರಮ್ಯವನ್ನು ಸೃಷ್ಟಿಸಿತು. ರವೀಂದ್ರರ ಮೂಲಕ ಕಾವ್ಯ ಮತ್ತು ಲಲಿತಕಲೆ ಉದಿತೋದಿತವಾಗಿ ಬೆಳೆಯಿತು. ಬಂಕಿಮಚಂದ್ರರ ‘ವಂದೇಮಾತರಂ’ ಗೀತದ ಮೂಲಕ ರಾಷ್ಟ್ರೀಯ ಮಹಾಚಳವಳಿಗೆ ಈ ನೆಲವು ಕಾರಣವಾಯಿತು! ಬ್ರಹ್ಮಸಮಾಜ, ಶ್ರೀರಾಮಕೃಷ್ಣ ಮಹಾಸಂಘಗಳು ಮೈದಾಳಿದ್ದು ಇಲ್ಲಿಯೇ. ಇಲ್ಲಿ ಸ್ವಾಮಿ ವಿವೇಕಾನಂದರು ಅವತರಿಸಿ ಭಾರತದ ಆಧ್ಯಾತ್ಮಿಕ ಔನ್ನತ್ಯವನ್ನು ಸಾರಿದ್ದು ಇದೀಗ ಇತಿಹಾಸ. ಹೀಗೆ, ವಿವೇಕಾನಂದ, ಸೋದರಿ ನಿವೇದಿತಾ ಮುಂತಾದವರ ಪರೋಕ್ಷ ಹಾಗೂ ಪ್ರತ್ಯಕ್ಷ ಪ್ರೋತ್ಸಾಹದ ಬಲದಿಂದ ಅರವಿಂದ ಘೊಷರು ಸ್ವಾತಂತ್ರ್ಯಯೋಧರಾಗಿ ಬ್ರಿಟಿಷರ ವಿರುದ್ಧ ಸಾರಿದ ಸಮರ, ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬರೆದಿಡಬೇಕಾದದ್ದು.

ಜನನ-ವಿದ್ಯಾಭ್ಯಾಸ: ಅರವಿಂದರು ಕಲ್ಕತ್ತದಲ್ಲಿ 1872ರ ಆಗಸ್ಟ್ 15ರಂದು ಜನಿಸಿದರು. ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ತಿಂಗಳು ಮತ್ತು ದಿನವಷ್ಟೆ! ಇದು ಅರವಿಂದರ ಹುಟ್ಟಿದ ತಿಂಗಳು ಮತ್ತು ದಿನವಾದದ್ದು ಯೋಗಾಯೋಗ. ಬಾಲ್ಯದಲ್ಲಿ ಅರವಿಂದರನ್ನು ಪ್ರೀತಿಯಿಂದ ‘ಅರೋ’ ಎಂದು ಕರೆಯುತ್ತಿದ್ದರು. ಇವರ ತಂದೆ ಕೃಷ್ಣಧನ ಘೊಷ್ ಬ್ರಿಟಿಷ್ ಸಂಸ್ಕೃತಿಗೆ ಮಾರುಹೋದವರು. ತಾಯಿ ಸ್ವರ್ಣಲತಾ ದೇವಿ. ಇವರ ಆರು ಮಕ್ಕಳಲ್ಲಿ ಅರವಿಂದರು ಮೂರನೆಯವರು. ಕೃಷ್ಣಧನ ಘೊಷರು ವಿದೇಶಕ್ಕೆ ಹೋಗಿ ಬಂದದ್ದರಿಂದ ಸಮಾಜದಿಂದ ಬಹಿಷ್ಕಾರಕ್ಕೊಳಗಾಗಿದ್ದರು. ಇದು ಭಾರತೀಯ ಸಂಸ್ಕೃತಿಯ ಬಗೆಗೆ ಅವರಲ್ಲಿ ನಿರಾಸಕ್ತಿ ಬೆಳೆಯಲು ಕಾರಣವಾಯಿತೆಂದು ತೋರುತ್ತದೆ. ಡಾರ್ಜಿಲಿಂಗ್​ನ ಇಂಗ್ಲಿಷ್ ಕಾನ್ವೆಂಟ್ ಶಾಲೆಗೆ ಐದನೆಯ ವರ್ಷಕ್ಕೆ ಅರವಿಂದರನ್ನು ಸೇರಿಸಲಾಯಿತು. ಅನಂತರ 1879ರಲ್ಲಿ ಮೂವರು ಮಕ್ಕಳ ಜತೆ ಇಂಗ್ಲೆಂಡಿಗೆ ಹೋಗಿ ಮ್ಯಾಂಚೆಸ್ಟರ್​ನಲ್ಲಿದ್ದ ಡ್ರುವೆಟ್ ದಂಪತಿಯ ಬಳಿ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಕೃಷ್ಣಧನ ಘೊಷರು ಬಿಟ್ಟರು. ಆಗ ಅರವಿಂದರಿಗೆ ಏಳುವರ್ಷ! ಭಾರತೀಯ ಸಂಸ್ಕೃತಿಯ ಯಾವ ಸೋಂಕಿಲ್ಲದೆ ಬೆಳೆಯಬೇಕೆಂಬ ಕಟ್ಟಪ್ಪಣೆ ಕೃಷ್ಣಧನ ಘೊಷರದ್ದಾಗಿತ್ತು. ಅರವಿಂದರು ಒಟ್ಟು 14 ವರ್ಷ ವಿದ್ಯಾಭ್ಯಾಸದಲ್ಲಿ ತೊಡಗಿದ್ದು ಅಲ್ಲಿಯೇ. ರೆವರೆಂಡ್ ವಿಲಿಯಂ ಎಚ್. ಡ್ರುವೆಟ್ ಪಾದ್ರಿಗಳಾಗಿದ್ದರು. ಅರವಿಂದರು ಡ್ರುವೆಟ್ ಅವರಲ್ಲಿ ಇಂಗ್ಲಿಷ್ ಮತ್ತು ಲ್ಯಾಟಿನ್​ಭಾಷೆಗಳನ್ನು ಕಲಿತರು. ಅರವಿಂದರನ್ನು ಕಂಡರೆ ಆ ದಂಪತಿಗೆ ಬಲುಪ್ರೀತಿ. ಅರವಿಂದರಿಗೆ ಬಿಡುವಿನ ವೇಳೆಯಲ್ಲಿ ಕತೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧಗಳನ್ನು ಬರೆಯುವ ಹವ್ಯಾಸವಿತ್ತು. ಅವರು ಬೈಬಲ್ ಕೃತಿಯನ್ನು ಚಿಕ್ಕವಯಸ್ಸಿಗೇ ಅಧ್ಯಯನ ಮಾಡಿದ್ದರು. ಸದಾ ಹೊಸ ಪುಸ್ತಕಗಳನ್ನು ಓದುವ ಹುಚ್ಚು. ಆದರೆ ಕ್ರೀಡಾಸಕ್ತಿ ಇರಲಿಲ್ಲ. ಅರವಿಂದರಿಗೆ 12ನೇ ವಯಸ್ಸಿನಲ್ಲಿ ‘ಸ್ವಾರ್ಥ’ ಭಾವವನ್ನು ಬಿಡಬೇಕೆಂದು ಅನ್ನಿಸಿ, ಕೂಡಲೇ ಅದನ್ನು ತ್ಯಜಿಸಲು ನಿರ್ಧರಿಸಿದರು. 5 ವರ್ಷ ಮಾತ್ರ ಮ್ಯಾಂಚೆಸ್ಟ್​ರ್​ನಲ್ಲಿದ್ದ ಅರವಿಂದರು, ನಂತರ 1884ರಲ್ಲಿ ಡ್ರುವೆಟ್ ಆಸ್ಟೇಲಿಯಾಕ್ಕೆ ಹೋದ ಮೇಲೆ ಅವರ ತಾಯಿ ವಾಸವಾಗಿದ್ದ ಲಂಡನ್ ನಗರದ ಮನೆಯಲ್ಲಿ ಸೋದರರೊಂದಿಗೆ ಬಂದು ಸೇರಿಕೊಂಡರು. ಅಲ್ಲಿನ ಸೇಂಟ್​ಪಾಲ್ಸ್ ಶಾಲೆಗೆ ಅರವಿಂದರು ದಾಖಲಾದರು. ಲ್ಯಾಟಿನ್, ಇಂಗ್ಲಿಷ್, ಗಣಿತ ವಿಷಯಗಳಲ್ಲಿನ ಅವರ ಮೇಧಾವಿತನಕ್ಕೆ ಶಾಲೆಯ ಮುಖ್ಯಸ್ಥರೇ ಬೆರಗಾದರು. ಅರವಿಂದರು ಶೆಲ್ಲಿ, ಕೀಟ್ಸ್, ಷೇಕ್ಸ್​ಪಿಯರ್​ರಂಥ ಮಹಾನ್ ಕವಿಗಳ ಕವಿತೆಗಳನ್ನು ಓದುತ್ತ ಓದುತ್ತ ಕವಿತೆಯ ರಚನೆ ಮಾಡುವ ಹಂತಕ್ಕೆ ತಲುಪಿದರು. ಜರ್ಮನ್-ಫ್ರೆಂಚ್ ಮಹಾಗ್ರಂಥಗಳನ್ನು ಓದಿ ವಿಮಶಿಸುವ ಮಟ್ಟಕ್ಕೂ ಬೆಳೆದರು. ಕೃಷ್ಣಧನ ಘೊಷರು ಬರಬರುತ್ತ ಹಣ ಕಳುಹಿಸುವುದನ್ನು ನಿಲ್ಲಿಸಿದರು. ಲಂಡನ್ನಿನಲ್ಲಿದ್ದ ಮೂವರು ಸೋದರರ ಊಟಕ್ಕೆ ತತ್ವಾರವಾಯಿತು. ಕೆಲವೊಮ್ಮೆಯಂತೂ ಬ್ರೆಡ್ಡು ತಿಂದು ಬದುಕುವ ಬವಣೆ. ಈ ನಡುವೆ ಅರವಿಂದರು ಐ.ಸಿ.ಎಸ್. ಪರೀಕ್ಷೆಗೆ ಕುಳಿತರು. ಸ್ವಸಾಮರ್ಥ್ಯದಿಂದ ಪ್ರವೇಶ ಪಡೆದು ಗ್ರೀಕ್, ಲ್ಯಾಟಿನ್ ಹಾಗೂ ಕಲೆ-ಸಂಸ್ಕೃತಿಗಳನ್ನು ಅಧ್ಯಯನದ ವಿಷಯವಾಗಿ ಆರಿಸಿಕೊಂಡರು. ಐ.ಸಿ.ಎಸ್. ಪರೀಕ್ಷೆ ಆಗಿನ ಕಾಲಕ್ಕೆ ಕಠಿಣವಾಗಿತ್ತು. ಆದರೆ, ವಿಶೇಷ ತರಬೇತಿ ಇಲ್ಲದೆ ಸ್ವತಃ ಅಭ್ಯಾಸಮಾಡಿ ಉನ್ನತಸ್ಥಾನ ಪಡೆದು ಪಾಸಾದರು. ಆದರೆ, ಕುದುರೆ ಸವಾರಿ ಪರೀಕ್ಷೆಗೆ ಗೈರುಹಾಜರಾದ ಕಾರಣ ಐ.ಸಿ.ಎಸ್ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಲಿಲ್ಲ.

ಅರವಿಂದರು 1890-1892ರವರೆಗೆ ಕೇಂಬ್ರಿಜ್​ನಲ್ಲಿದ್ದರು. ವಿದ್ಯಾಭ್ಯಾಸದ ಜತೆಗೆ ಹಲವು ಪರೀಕ್ಷೆಗಳಿಗೆ ಕುಳಿತುಕೊಳ್ಳುವುದು, ಬೇರೆಬೇರೆ ಭಾಷೆಗಳ ಶ್ರೇಷ್ಠಕೃತಿಗಳ ಅಧ್ಯಯನ ಅರವಿಂದರ ದಿನಚರ್ಯುಯೇ ಆಗಿತ್ತು. ಭಾರತದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗೆಗೆ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಕೃಷ್ಣಧನ ಘೊಷರು ಕತ್ತರಿಸಿ ಆಗಾಗ್ಗೆ ಅರವಿಂದರಿಗೆ ಕಳುಹಿಸುತ್ತಿದ್ದರು. ಭಾರತದ ದೇಶಭಕ್ತಿ ಚಟುವಟಿಕೆಗಳು ಅರವಿಂದರಿಗೆ ತಿಳಿಯತೊಡಗಿದುವು. ಬ್ರಿಟಿಷರ ದಬ್ಬಾಳಿಕೆ ಕಂಡು ಮರುಗುತ್ತಿದ್ದರು. ಇಂಗ್ಲೆಂಡಿನಲ್ಲಿದ್ದಾಗ ಗೆಳೆಯರೊಡನೆ ಗುಪ್ತವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು, ಬ್ರಿಟಿಷರನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಇದೇ ವೇಳೆ ಲಂಡನ್ನಿಗೆ ಬಂದಿದ್ದ ಬರೋಡಾದ ಮಹಾರಾಜ ಸಯ್ಯಾಜಿರಾವ್ ಗಾಯಕವಾಡರಿಗೆ ಅರವಿಂದರು ಕಂಡರು. ಅರವಿಂದರ ಜ್ಞಾನ, ಸ್ವದೇಶಿಪ್ರೇಮ, ಭಾಷಾಪಾಂಡಿತ್ಯ ಕಂಡು ಮಾರುಹೋದ ಗಾಯಕವಾಡರು, ತಮ್ಮ ಸಂಸ್ಥಾನದಲ್ಲಿ ಉದ್ಯೋಗ ಮಾಡಲು ಅರವಿಂದರನ್ನು ಆಹ್ವಾನಿಸಿದರು. ತಾಯ್ನಾಡಿಗೆ ಮರಳಬೇಕೆಂಬ ಅರವಿಂದರ ಹಂಬಲಕ್ಕೆ ಇದು ಅನುಕೂಲವೇ ಆಗಿ, 21ನೆಯ ವಯಸ್ಸಿನಲ್ಲಿ ಬರೋಡಾಕ್ಕೆ ಬಂದು, 200 ರೂ. ಸಂಬಳಕ್ಕೆ ಮಹಾರಾಜರ ಬಳಿ ಸೇರಿಕೊಂಡರು.

ಭಾರತಕ್ಕೆ ಆಗಮನ: 1893ರ ಫೆಬ್ರವರಿ 6ರಂದು ಭಾರತಕ್ಕೆ ಕಾಲಿರಿಸಿದಾಗ ತಮಗೆ ಆವರೆಗೂ ಕವಿದಿದ್ದ ಒಂದು ಬಗೆಯ ಕತ್ತಲ ಪರದೆ ಬಿಟ್ಟುಹೋಯಿತೆಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಅವರು ಭಾರತದ ನೆಲಕ್ಕೆ ಕಾಲಿಟ್ಟಾಗ ಮೈಯೊಳಗೆ ದಿವ್ಯಶಕ್ತಿಯೊಂದು ಹರಡಿದಂತಾಯಿತು. ಭಾರತಮಾತೆಯ ಮಣ್ಣನ್ನು ಹಣೆಗೊತ್ತಿಕೊಂಡರು. ಬರೋಡಾ ಮಹಾರಾಜರ ಆಣತಿಯಂತೆ ಸರ್ಕಾರದ ಬೇರೆಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದರು. ಅವರ ಪ್ರತಿಯೊಂದು ಕೆಲಸದಲ್ಲೂ ಪರಿಣತಿ ಎದ್ದುಕಾಣುತ್ತಿತ್ತು. 1893ರಿಂದ 1895ರವರೆಗೆ ಹೀಗೆ ದುಡಿದ ಅವರು, 1897ರಲ್ಲಿ ಬರೋಡಾ ಕಾಲೇಜಿನ ಪ್ರೊಫೆಸರ್ ಪ್ರಾಧ್ಯಾಪಕ ಹುದ್ದೆಗೆ ಸೇರಿಕೊಂಡರು. ಅದು ಅವರಿಗೆ ಬಲುಪ್ರಿಯವಾಗಿತ್ತು. ಈ ಸಮಯದಲ್ಲಿ ಅರವಿಂದರು ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡಿದರು. ಭಾರತದ ಸಂಸ್ಕೃತಿ-ನಾಗರಿಕತೆಗಳನ್ನು ಚೆನ್ನಾಗಿ ಅರಿತರು. ಬಂಗಾಲಿಯನ್ನು ಆಳವಾಗಿ ತಿಳಿದುಕೊಂಡರು. ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರಾಗಿದ್ದ ಅವರು ‘ಇಂದುಪ್ರಕಾಶ’ ಎಂಬ ಬಂಗಾಲಿ ಪತ್ರಿಕೆಗೆ ಲೇಖನಗಳನ್ನು ಬರೆಯತೊಡಗಿದರು. ಒಂದೆಡೆ ಬರಹ, ಇನ್ನೊಂದೆಡೆ ಉಪನ್ಯಾಸ, ಮತ್ತೊಂದೆಡೆ ರಾಷ್ಟ್ರಭಕ್ತಿ- ಈ ತ್ರಿವಳಿಸತ್ಯಗಳ ನೇಯ್ಗೆಯಲ್ಲಿ ಅರವಿಂದರು ಮಗ್ನರಾದರು. 1901ರಲ್ಲಿ ಮೃಣಾಲಿನಿದೇವಿಯ ಜತೆ ವಿವಾಹವಾಗಿ ಅವರಿಬ್ಬರೂ ಕೆಲಕಾಲ ಜತೆಯಲ್ಲಿದ್ದರು. ಆದರೆ, ಬೇರೆಬೇರೆ ಕಾರಣಗಳಿಂದ ಅಗಲಿರಬೇಕಾಗುತ್ತಿತ್ತು. ಆದರೆ, ಅವರ ದಾಂಪತ್ಯಜೀವನ ಅಲ್ಪಾಯುವಾಗಿತ್ತು. ಮೃಣಾಲಿನಿದೇವಿ 29ನೆಯ ವಯಸ್ಸಿನಲ್ಲಿ ನಿಧನಹೊಂದಿದರು.

ಕ್ರಾಂತಿಕಾರಿ: ರಾಷ್ಟ್ರವು ಸ್ವರಾಜ್ಯವಾಗಲು ಗುಪ್ತಕ್ರಾಂತಿಕಾರರಾಗುವುದು ಅನಿವಾರ್ಯವೆಂದು ಅರವಿಂದರು ಭಾವಿಸಿದ್ದರು. ಅದಕ್ಕಾಗಿ ‘ಇಂಡಿಪೆಂಡೆನ್ಸ್’ ನಮಗೆ ಬೇಕೆಂದು ಮೊದಲ ಬಾರಿಗೆ ‘ಸ್ವಾತಂತ್ರ್ಯ’ ಎಂಬ ಮಾತಿಗೆ ಬದಲಾಗಿ ಬಳಸಿದರು. ರಾಷ್ಟ್ರವು ಸ್ವತಂತ್ರವಾಗಲು ಬ್ರಿಟಿಷರಲ್ಲಿ ಅಂಗಲಾಚುವ ಬದಲು, ಅವರ ವಿರುದ್ಧ ಉಗ್ರಹೋರಾಟ ಮಾಡುವುದು ಸರಿಯೆಂದು ಹೇಳತೊಡಗಿದರು. ಸೋದರಿ ನಿವೇದಿತಾ ಮಾರ್ಗದರ್ಶನವೂ ಅರವಿಂದರಿಗೆ ಇತ್ತು. ಹೋರಾಟದ ಪ್ರತೀಕವಾಗಿ ‘ಭವಾನಿ ಮಂದಿರ’ವನ್ನು ಸ್ಥಾಪಿಸಿದರು. 1898ರಲ್ಲಿ ಜಿತೇಂದ್ರನಾಥ ಬ್ಯಾನರ್ಜಿ ಬರೋಡಾಕ್ಕೆ ಬಂದಾಗ ತಮ್ಮ ಕಡೆ ಸೆಳೆದುಕೊಂಡರು. ಆತ ಶೂರನೂ ಧೀರನೂ ಆಗಿದ್ದನು. ಇದೇ ಸಮಯಕ್ಕೆ ಅರವಿಂದರ ಅಣ್ಣ ಬಾರಿಂದ್ರನೂ ಕ್ರಾಂತಿಕಾರಕ ಚಟುವಟಿಕೆಗೆ ಧುಮುಕಿದನು. ಈ ನಡುವೆ ವಿಂಧ್ಯಪರ್ವತದಲ್ಲಿ ಬಾರಿಂದ್ರನಿಗೆ ಜ್ವರ ಕಾಣಿಸಿಕೊಂಡಿತು. ಒಬ್ಬ ಸಂನ್ಯಾಸಿ ಮಂತ್ರಿಸಿಕೊಟ್ಟ ನೀರಿನಿಂದ ಬಾರಿಂದ್ರರ ಜ್ವರ ಹೊರಟುಹೋಯಿತು. ಇದು ಅರವಿಂದರಿಗೆ ಅಚ್ಚರಿ ತಂದಿತಲ್ಲದೆ, ಅಲೌಕಿಕ ಸಿದ್ಧಿ ಇದೆಯೆಂಬ ಭಾವ ಹೊಳೆಯಿತು. ಬಂಗಾಳ-ಮಹಾರಾಷ್ಟ್ರ ಕೇಂದ್ರಗಳಲ್ಲಿ ಕ್ರಾಂತಿಕಾರಕ ಚಟುವಟಿಕೆಗಳಿಗೆ ಇವರು ಕಾರಣರಾದರು. ತಿಲಕ್ ಮತ್ತು ಅರವಿಂದರ ಸ್ನೇಹ ಈ ಮೂಲಕ ಗಾಢವಾಯಿತು. ‘ಇಂದುಪ್ರಕಾಶ’ ಪತ್ರಿಕೆಯಲ್ಲಿನ ಅವರ ಲೇಖನಗಳು ಸ್ಪೋಟಕವಾಗಿರುತ್ತಿದ್ದವು. 1893ರಲ್ಲಿ ಅರವಿಂದರು ಬರೆದ New light for old Lamps ಎಂಬ ಲೇಖನಮಾಲೆ ರಾಷ್ಟ್ರದ ಹೋರಾಟಕ್ಕೆ ಉಪಜೀವ್ಯವಾಯಿತು. 1906ರಲ್ಲಿ ಬಿಪಿನ್​ಪಾಲರು ಪ್ರಾರಂಭಿಸಿದ ‘ವಂದೇ ಮಾತರಂ’ ಪತ್ರಿಕೆಗೂ ಅರವಿಂದರು ಲೇಖನ ಬರೆಯತೊಡಗಿದರು. 1906ರಲ್ಲಿ ಬಾರಿಂದ್ರನ ಸಲಹೆಯಂತೆ ‘ಯುಗಾಂತರ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಚಳುವಳಿ ಮತ್ತು ಗೆರಿಲ್ಲಾ ಯುದ್ಧನೀತಿಗಳನ್ನು ಕುರಿತು ಲೇಖನಗಳನ್ನು ಅದರಲ್ಲಿ ಬರೆಯತೊಡಗಿದರು. ಈ ನಡುವೆ ಮುಜಫ್ಪರಪುರದಲ್ಲಿ ನಡೆದ ಬಾಂಬ್ ಪ್ರಕರಣದಲ್ಲಿ ಬಾರಿಂದ್ರನ ಜತೆ ಅರವಿಂದರನ್ನೂ ದಸ್ತಗಿರಿ ಮಾಡಲಾಯಿತು. ಆಲಿಪುರ ಜೈಲಿನಲ್ಲಿ ಅರವಿಂದರನ್ನು ಇರಿಸಿದರು. ಜೈಲು ಇವರಿಗೆ ಆಶ್ರಮವಾಯಿತು, ಆಧ್ಯಾತ್ಮಿಕ ಸಾಧನೆಗೆ ವೇದಿಕೆಯಾಯಿತು. ಪ್ರಾಣಾಯಾಮ-ಧ್ಯಾನದ ಕಡೆಗೆ ಮನಸ್ಸನ್ನು ನೀಡಿದರು. ನ್ಯಾಯವಾದಿ ಚಿತ್ತರಂಜನದಾಸರು ಅರವಿಂದರ ಪರವಾಗಿ ವಾದಮಾಡಿ ಜೈಲಿನಿಂದ ಬಿಡುಗಡೆಗೊಳಿಸಿದರು. ಆದರೆ, ಜೈಲಿನಲ್ಲಿದ್ದಾಗ 15 ದಿನಗಳ ಕಾಲ ಸ್ವಾಮಿ ವಿವೇಕಾನಂದರ ವಾಣಿ ಅವರಿಗೆ ಕೇಳಿಸುತ್ತಿತ್ತಂತೆ, ಅವರ ಸಾಮೀಪ್ಯದ ಅನುಭವವೂ ಆಗಿತ್ತಂತೆ. ಇದು ಅರವಿಂದರು ದೈವೀಯಾತ್ರೆಯ ಕಡೆ ಹೊರಳಲು ಸಹಾಯವಾಯಿತು. 1909ರ ಮೇ 30ರಂದು ಉತ್ತರಪಾಡಾ ಎಂಬಲ್ಲಿ ಅರವಿಂದರು ಉಪನ್ಯಾಸ ನೀಡಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಜೈಲಿನಲ್ಲಿ ಆದ ‘ವಾಸುದೇವ ಸಾಕ್ಷಾತ್ಕಾರ’ಗಳ ಬಗೆಗೆ ಮಾತನಾಡಿದರು. ಈ ನಡುವೆ ಅರವಿಂದರನ್ನು ಬಂಧಿಸುವ ಯತ್ನಗಳು ನಿವೇದಿತಾಗೆ ತಿಳಿದು, ಅವರನ್ನು 1910 ಏಪ್ರಿಲ್ 4ರಂದು ಪಾಂಡಿಚೆರಿಗೆ ಕಳುಹಿಸಲು ನೆರವಾದರು. ಅರವಿಂದ ಘೊಷ್ ಈಗ ಯೋಗಿಯಾಗಿ ಶ್ರೀ ಅರವಿಂದರಾದರು. ಅವರ ಬದುಕಿನಲ್ಲಿ ಇದು 3ನೆಯ ಘಟ್ಟ. ಭಾರತದಿಂದ ಇಂಗ್ಲೆಂಡಿಗೆ ಹೋಗಿದ್ದು ಮೊದಲ ಘಟ್ಟವಾದರೆ, ಭಾರತಕ್ಕೆ ಮರಳಿ ಉಗ್ರರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿದ್ದು ಎರಡನೆಯ ಘಟ್ಟ. ಇದೀಗ ಪಾಂಡಿಚೆರಿಗೆ ಬಂದದ್ದು ಮೂರನೆಯ ಘಟ್ಟ.

ಪೂರ್ಣಯೋಗ: ಪಾಂಡಿಚೆರಿಗೆ ಬಂದ ಮೇಲೆ ಅವರು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಯಿತು. ಪಾಂಡಿಚೆರಿ ಫ್ರೆಂಚ್ ಸರ್ಕಾರದ ಅಧೀನದಲ್ಲಿ ಇದ್ದುದರಿಂದ ಅರವಿಂದರು ಸುರಕ್ಷಿತರಾಗೇನೋ ಇದ್ದರು. 1910ರಿಂದ 1950ರವರೆಗೆ ನಿರಂತರವಾಗಿ ಯೋಗಸಾಧನೆ, ಸಾಹಿತ್ಯರಚನೆಗಳಲ್ಲಿ ತೊಡಗಿ ಅಸಾಮಾನ್ಯ ಸಾಧನೆ ಮಾಡಿದರು. 1914 ಮಾರ್ಚ್​ನಲ್ಲಿ ಮೀರಾ ರಿಚರ್ಡ್ ಎಂಬ ಫ್ರೆಂಚ್ ಮಹಿಳೆ ಅರವಿಂದರ ದೈವತ್ವ ಮತ್ತು ಮಹಾಯೋಗವನ್ನು ಗುರುತಿಸಿ ಅವರೊಡನೆ ಇರತೊಡಗಿದರು. ಅನಂತರ ಎಂ.ಪಿ. ಪಂಡಿತರು ಅರೋವಿಲ್​ಗೆ ಬಂದು ಶ್ರೀಮಾತಾರವಿಂದರ ಪೂರ್ಣದರ್ಶನ ಹಾಗೂ ಪೂರ್ಣಯೋಗದ ಮಾಧ್ಯಮವೇ ಆದರು. ಕರ್ನಾಟಕದ ಅನೇಕ ಸಾಹಿತಿಗಳು, ಲೇಖಕರು, ವಿದ್ವಾಂಸರು ಅರವಿಂದರ ಪ್ರಭಾವಕ್ಕೆ ಒಳಗಾದರು. ಅರವಿಂದರು ಭಕ್ತಿ, ಕರ್ಮ, ಜ್ಞಾನ ಹಾಗೂ ರಾಜಯೋಗಗಳ ಕುರಿತು ವಿಶ್ಲೇಷಿಸುತ್ತ ಯೋಗಗಳನ್ನು ಸಮನ್ವಯಗೊಳಿಸಿ ಮಾನವನ ಮನಸ್ಸನ್ನು ಉನ್ನತ ಸ್ಥಾನಕ್ಕೆ ಕರೆದೊಯ್ದು ‘ಅತಿಮಾನವ’ನನ್ನಾಗಿ ರೂಪಿಸುವುದರ ಕಡೆ ಗಮನಹರಿಸಿದರು. ಮಾನವ ‘ಪೂರ್ಣಯೋಗ’ದ ಕಡೆ ಹೋಗುವುದು ಅನಿವಾರ್ಯವಾಗಿದೆಯೆಂದೂ ಇದು ಉಳಿದ ಯೋಗಗಳಿಗಿಂತ ಭಿನ್ನವಾಗಿದೆಯೆಂದೂ ಪರಮಾತ್ಮನ ಸ್ವರೂಪದ ಬಗೆಗೆ ಬಹಿರಂಗದಲ್ಲಿ ಪ್ರಕಟಿಸಿ ಭೌತಿಕ ಜೀವನದಲ್ಲಿ ದೈವತ್ವವನ್ನು ಒಳಗೊಳಿಸುವುದು ಪೂರ್ಣಯೋಗದ ಗುರಿಯೆಂದೂ ಸಾರಿದರು. ಯೋಗಶಕ್ತಿಯ ಅನುಭವದ ಜತೆಯಲ್ಲಿ ಮನುಷ್ಯನ ಅಲೌಕಿಕ ಅತೀಂದ್ರಿಯ ಶಕ್ತಿಗಳು, ಸತ್ಯಗಳು ಇವೆಯೆಂದು ಪ್ರತ್ಯಕ್ಷ ನಿದರ್ಶನಗಳನ್ನು ನೀಡತೊಡಗಿದರು. ರಾಮಕೃಷ್ಣರಿಂದ ಅರವಿಂದರು ಅನೇಕ ವಿಷಯಗಳಲ್ಲಿ ಪ್ರಭಾವಿತರಾಗಿದ್ದರು. ಅರವಿಂದರು ಪೂರ್ಣಯೋಗದ ಜತೆಗೆ 1926ರ ನವೆಂಬರ್ 24ರಂದು ಬೆಳಗಿನ ಜಾವ ‘ಅಧಿಮಾನಸ’ ಅವತರಣವನ್ನು ಸಾಧಿಸಿಕೊಂಡರು. ಆ ಅನುಭವವನ್ನು ಬರಹದಲ್ಲಿ ಅವರು ದಾಖಲಿಸಿದ್ದಾರೆ. ಅಂದು ಬೆಳಗಿನ ಜಾವ ಅರವಿಂದರು ಪೀಠವೊಂದರಲ್ಲಿ ವಿರಾಜಮಾನರಾಗಿದ್ದರು. ಶ್ರೀಮಾತೆಯವರ ಆದೇಶದಂತೆ ಆಶ್ರಮದ ಸಾಧಕರೆಲ್ಲರೂ ಅಲ್ಲಿ ನೆರೆದಿದ್ದರು. ಆ ವಾತಾವರಣದಲ್ಲಿ ಗಂಭೀರತೆ ವ್ಯಾಪಿಸಿತ್ತು. ಇದ್ದಕ್ಕಿದ್ದಂತೆ ಎಲ್ಲರಿಗೂ ವಿದ್ಯುತ್ ಸ್ಪಂದನದ ಅನುಭವವಾಯಿತು. ‘ಊರ್ಧ್ವತರ ಶಕ್ತಿ’ಯೊಂದು ಇಳೆಗೆ ಇಳಿದು ಬಂದಿದ್ದರ ಅನುಭವವಾಯಿತು. ಇದೇ ಅಧಿಮಾನಸ ಸಿದ್ಧಿ. ಇದನ್ನು ಅವರು ‘ದಿವ್ಯಜೀವನ’ ಎಂಬ ಗದ್ಯದಲ್ಲೂ ‘ಸಾವಿತ್ರಿ’ ಎಂಬ ಮಹಾಕಾವ್ಯದಲ್ಲೂ ಪ್ರತಿಮಾರೂಪಕವಾಗಿ ಹೇಳಿದ್ದಾರೆ. ಅರವಿಂದರು ಒಂದೆಡೆ ‘ಶ್ರೀಕೃಷ್ಣ ಅತಿಮಾನಸ ಜ್ಯೋತಿಯಲ್ಲ. ಶ್ರೀಕೃಷ್ಣನ ಅವತರಣಿಕೆ ಎಂದರೆ ಅಧಿಮಾನಸ ದೈವದ ಅವತರಣಿಕೆಯೆಂದೇ ಅರ್ಥ. ಇದು ಅತಿಮಾನಸ ಮತ್ತು ಆನಂದವನ್ನು ಅವತರಿಸುವಂತೆ ಮಾಡುವ ಪೂರ್ವಸಿದ್ಧತೆಯೇ ಸರಿ. ಕೃಷ್ಣನು ಆನಂದಮಯ ಅಧಿಮಾನಸದ ಮೂಲಕ ತನ್ನನ್ನು ಆನಂದದ ಭೂಮಿಕೆಗೆ ಕರೆದೊಯ್ಯಲು ಚಿನ್ಮಯವಿಕಾಸಕ್ಕೆ ಆಧಾರವಾಗುತ್ತಾನೆ’ ಎಂದು ಹೇಳಿದ್ದಾರೆ.

ಅರವಿಂದರು 1926ರ ನಂತರ ಹೆಚ್ಚಾಗಿ ಏಕಾಂತದಲ್ಲಿಯೇ ಇರತೊಡಗಿದರು. ಆಶ್ರಮವು ‘ಅರೋವಿಲ್’ ಆಗಿ ರೂಪಾಂತರಗೊಂಡಿತು. ಶ್ರೀಮಾತಾ, ಅವರ ಶಿಷ್ಯರು ಅರವಿಂದರ ‘ಪೂರ್ಣಯೋಗ’ದ ನೆಲೆಯನ್ನು ಹೇಳತೊಡಗಿದರು. ಅನೇಕ ಸಾಧಕರಿಗೆ ಅರವಿಂದರು ಪತ್ರಗಳ ಮೂಲಕ ಉತ್ತರಿಸತೊಡಗಿದರು. 1926ರಿಂದ 1950ರವರೆಗೆ ಏಕಾಂತದಲ್ಲಿದ್ದು ಅವ್ಯಾಹತವಾಗಿ ಸಾಹಿತ್ಯರಚನೆ ಮಾಡತೊಡಗಿದರು. ಅವರು ಬರೆದ ಗ್ರಂಥರಾಶಿಯಂತೂ ಅಮೂಲ್ಯವಾದುದು. The Life Divine ( (ದಿವ್ಯಜೀವನ), The Synthesis of Yoga ((ಯೋಗಸಮನ್ವಯ),The Essay on Gita(ಗೀತಾ ಪ್ರಬಂಧಗಳು),The Secrets of Veda ( (ವೇದರಹಸ್ಯ) ಉಪನಿಷತ್ತುಗಳು, The Future Poetry (ಭವಿಷ್ಯಕಾವ್ಯ), The Human Cycle (ಮಹಾಕಾವ್ಯ ಮತ್ತು ಮಾನವಚಕ್ರ), he Ideal of World Unity, The Foundation of Indian Culture ಮುಂತಾದ ಗ್ರಂಥಗಳನ್ನು ಬರೆದು ‘ಪೂರ್ಣಯೋಗ’ದ ನೆಲೆಗಳನ್ನು ವಿಸ್ತಾರವಾಗಿ ನಿರೂಪಿಸಿದರು. ಇವುಗಳ ಜತೆ ಜಾಗತಿಕ ಮಟ್ಟದ ದಾರ್ಶನಿಕ ಮಹಾಕಾವ್ಯ ‘ಸಾವಿತ್ರಿ’ಯನ್ನು ಸೃಜಿಸುವುದರ ಮೂಲಕ, ಸಾವನ್ನು ಗೆದ್ದ ಸಾವಿತ್ರಿಯ ಭವ್ಯಕಥನವನ್ನು ಲೋಕಕ್ಕೆ ನೀಡಿದರು. ಈ ಮಹಾಕೃತಿಯು 20ನೇ ಶತಮಾನದ ಜಾಗತಿಕ ಮಹಾಕಾವ್ಯವಾಗಿ ಇಂದಿಗೂ ಬೆಳಗುತ್ತಿದೆ. ಭಾರತದ ಬೇರೆಬೇರೆ ಭಾಷೆಗಳಲ್ಲಿ ಅರವಿಂದರ ಕೃತಿಗಳು ಅನುವಾದಗೊಂಡಿವೆ. ಅರವಿಂದರು ಶ್ರೇಷ್ಠ ಸಾಹಿತಿ, ಕವಿ, ಯೋಗಿ, ತತ್ತ್ವಜ್ಞಾನಿ, ಮಹಾನ್​ಚಿಂತಕರಾಗಿದ್ದುದು ವಿಶೇಷವೇ ಸರಿ. ಇವುಗಳ ಜತೆಗೆ ಭಾರತಕ್ಕೆ ಸ್ವಾತಂತ್ರ್ಯ ಬರುತ್ತದೆಂದೂ ತಮ್ಮ ಚಿತ್​ತಪಸ್​ಶಕ್ತಿಯು ಅದಕ್ಕೆ ಪೂರಕವಾಗಿದೆಯೆಂದೂ ದೃಢವಾಗಿ ಅವರು ನಂಬಿದ್ದರು. ಅದರಂತೆ ಅವರು ಹುಟ್ಟಿದ ದಿನ-ತಿಂಗಳಿನಲ್ಲಿಯೇ ಭಾರತವು ಸ್ವತಂತ್ರವಾಯಿತು.

ಅರವಿಂದರು ಮಹಾನ್ ರಾಷ್ಟ್ರಭಕ್ತರಾಗಿ, ಕವಿಯಾಗಿ, ದಾರ್ಶನಿಕರಾಗಿ, ಅಧ್ಯಾತ್ಮಸಾಧಕರಾಗಿ, ಯೋಗಿಯಾಗಿ ಅಖಂಡ ಮಾನವಚಿಂತನೆಯನ್ನು ಮಾಡಿದರು. ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ಇವರ ಹೆಸರಿತ್ತು. ಅವರು 1950ರಂದು ಮಹಾಸಮಾಧಿ ಹೊಂದಿದುದರಿಂದ ಆ ಪ್ರಶಸ್ತಿಗೆ ಭಾಜನರಾಗಲಿಲ್ಲ. ಅವರು ಆಗಾಗ್ಗೆ ತಮ್ಮ ಆಯಸ್ಸು 63 ಎಂದು ಹೇಳಿ, ಯೌಗಿಕಶಕ್ತಿಯಿಂದ ಆಯಸ್ಸನ್ನು 15 ವರ್ಷ ಹೆಚ್ಚಿಸಿಕೊಂಡರು. ದೇಹಕ್ಕೆ ವ್ಯಾಧಿ ತಗುಲಿದ್ದರೂ ಯೋಗಸಾಧನೆಯಿಂದ ಅದನ್ನು ಮೀರಿದ್ದ ಅರವಿಂದರು 1950 ಡಿಸೆಂಬರ್ 5ರಂದು ದೇಹವನ್ನು ಬಿಟ್ಟು ಪೂರ್ಣಯೋಗದ ಕಡೆ ನಡೆದರು. ಮಹಾನಿರ್ಯಾಣ ಪಡೆದ 4 ದಿನಗಳವರೆಗೆ ಅವರ ಶರೀರ ಸುವರ್ಣಕಾಂತಿಯಂತೆ ಹೊಳೆಯುತ್ತಿತ್ತು. ಶ್ರೀಮಾತಾ ಅವರು ಅರವಿಂದರ ಅಂತರಾತ್ಮದ ಜತೆ ಸಂಭಾಷಣೆ ಮಾಡಿದ್ದರಂತೆ. ಶ್ರೀಮಾತಾ ಅರವಿಂದರಿಗೆ ಮತ್ತೆ ದೇಹಧಾರಣೆ ಮಾಡಿ ಬರಬೇಕೆಂದು ಕೇಳಿಕೊಂಡಾಗ ‘ನಾನು ಉದ್ದೇಶಪೂರ್ವಕವಾಗಿಯೇ ಈ ದೇಹವನ್ನು ತ್ಯಜಿಸಿದ್ದೇನೆ. ನಾನು ಅದನ್ನು ಹಿಂತೆಗೆದುಕೊಳ್ಳುವುದಿಲ್ಲ. ಮರಳಿ ಅತಿಮಾನಸ ರೀತಿಯಿಂದ ದೇಹಧಾರಣೆ ಮಾಡಿ ಅವತರಿಸುತ್ತೇನೆ’ ಎಂದು ಉತ್ತರಿಸಿದರಂತೆ. 4 ದಿನಗಳ ನಂತರ ನಿಸ್ತೇಜಗೊಂಡ ಅವರ ಶರೀರವನ್ನು, ಆಶ್ರಮದ ಅಂಗಳದಲ್ಲೇ ಬೃಹದಾಕಾರದ ‘ಸೇವಾವೃಕ್ಷ’ದ ಅಡಿಯಲ್ಲಿ ಮಹಾಸಮಾಧಿ ಮಾಡಲಾಯಿತು. ಮಹರ್ಷಿ ಅರವಿಂದರು ರಾಷ್ಟ್ರಭಕ್ತರಾಗಿ, ಪೂರ್ಣಯೋಗದ ಮಂತ್ರದ್ರಷ್ಟಾರರಾಗಿ, ಭಾರತೀಯ ಸಂಸ್ಕೃತಿಯ ಔನ್ನತ್ಯವನ್ನು ಜಗತ್ತಿಗೆ ಸಾರಿದ ಪೂರ್ಣಯೋಗಿಗಳು! ಅಖಂಡ ಧ್ಯಾನ-ಯೋಗಗಳಿಂದ ಪ್ರಾಚೀನ ಕಾಲದ ವೇದಋಷಿಗಳಂತೆ 20ನೆಯ ಶತಮಾನದಲ್ಲಿ ಬಾಳಿದವರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

 

Leave a Reply

Your email address will not be published. Required fields are marked *

Back To Top