Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ತತ್ತ್ವವಾದದ ಮೇರುಶಿಖರ ಶ್ರೀವಿದ್ಯಾಮಾನ್ಯತೀರ್ಥರು

Sunday, 02.07.2017, 3:05 AM       No Comments

ತತ್ತ್ವವಾದದ ಮೇರುಶಿಖರವಾದ ಶ್ರೀವಿದ್ಯಾಮಾನ್ಯರು ಅಗಾಧ ಪಾಂಡಿತ್ಯ ಹೊಂದಿದ್ದರೂ, ಮುಗ್ಧಹೃದಯಿಯಾಗಿದ್ದರು. ಇವರು ವಿದ್ಯೆಯಿಂದ ಮಾನ್ಯರಾದರು, ವಿದ್ಯೆಯು ಇವರಿಂದ ಮಾನ್ಯವಾಯಿತು. ಅಚ್ಯುತಪ್ರಜ್ಞರ ಸಂಸ್ಥಾನ ಮತ್ತು ಪೂರ್ಣಪ್ರಜ್ಞರ ಸಂಸ್ಥಾನವನ್ನು ಆಳಿದ ಏಕಮಾತ್ರ ಯತಿ ಇವರಾಗಿದ್ದರು. ಇವರ ಕಣ್ಣ ಬೆಳಕಿನಲ್ಲಿ ಪುನೀತರಾದ ಯತಿಗಳು, ವಿದ್ವಾಂಸರು, ಶಿಷ್ಯರು ಒಬ್ಬಿಬ್ಬರಲ್ಲ.

ಕರ್ನಾಟಕದ ಮಹಾಕ್ಷೇತ್ರಗಳಲ್ಲಿ ಉಡುಪಿಯೂ ಒಂದು. ಆಚಾರ್ಯ ಮಧ್ವರು ಈ ಕ್ಷೇತ್ರವನ್ನು ಬೆಳಗಿಸಿದ್ದಾರೆ, ಬೆಳಗಿಸುತ್ತಿದ್ದಾರೆ. ಈಗ ಪೇಜಾವರ ಶ್ರೀಗಳು ಲೋಕೋತ್ತರ ಖ್ಯಾತಿ ಪಡೆದು ನಮ್ಮೊಂದಿಗಿದ್ದು ಆಶೀರ್ವದಿಸುತ್ತಿದ್ದಾರೆ. ಇವರ ಗುರುಗಳೇ ಶ್ರೀವಿದ್ಯಾಮಾನ್ಯತೀರ್ಥರು. ಇವರು ವಿಪುಲ ವಿದ್ವತ್ತಿನಿಂದ, ಅಪಾರ ತಪಶ್ಶಕ್ತಿಯಿಂದ ‘ಗಗನಂ ಗಗನಾಕಾರಂ’ ಎಂಬಂತೆ ಅನೇಕ ಯತಿಗಳಿಗೂ ವಿದ್ವಾಂಸರಿಗೂ ದಾರಿ ತೋರಿಸಿದ ಪೂರ್ಣತಪಸ್ವಿಗಳು. ಇವರ ಮೂಲಕ ಶ್ರೀಕೃಷ್ಣ ಮತ್ತು ಆಚಾರ್ಯ ಮಧ್ವರ ಕೀರ್ತಿ ಅಖಿಲಭಾರತದಲ್ಲಿ ದಿಗಂತ ವಿಶ್ರಾಂತವಾಗಿದೆ. ಇವರು ಸ್ವಾಧ್ಯಾಯ-ಪ್ರವಚನಗಳಿಂದಲೇ ಬದುಕಿದವರು.

ಜನನ-ವಿದ್ಯಾಭ್ಯಾಸ: ಉಡುಪಿಯಿಂದ ದಕ್ಷಿಣಕ್ಕೆ 20 ಕಿ.ಮೀ. ದೂರದಲ್ಲಿ ಎರ್ವಳು ಎಂಬ ಪುಟ್ಟಗ್ರಾಮವಿದೆ. ಇದು ಶ್ರೀಜನಾರ್ದನರೂಪಿ ಭಗವಂತನ ಧಾಮ. ಈ ಊರಿನಲ್ಲಿ ವೇದಮೂರ್ತಿ ಶ್ರೀರಾಮಕೃಷ್ಣ ತಂತ್ರಿಗಳು ವಾಸಿಸುತ್ತಿದ್ದರು. ಜನ ಇವರನ್ನು ‘ಕುಪ್ಪಣ್ಣತಂತ್ರಿ’ಗಳೆಂದು ಕರೆಯುತ್ತಿದ್ದರು. ಇವರು ಮಹಾಶ್ರೋತ್ರಿಯರು, ಸದಾಚಾರ ಸಂಪನ್ನರು, ಶ್ರೌತ-ಸ್ಮಾರ್ತ ಕರ್ವನುಷ್ಠಾನಗಳನ್ನು ಮಾಡಿಸುವುದರಲ್ಲಿ ನಿಷ್ಣಾತರು. ಇವರಿಗೆ ಅನುರೂಪಳಾದ ಸಾಧ್ವಿಮಣಿ ಶ್ರೀಮತಿ ರಾಧಮ್ಮ. ಕುಪ್ಪಣ್ಣತಂತ್ರಿಗಳು ತಿರುವಾಂಕೂರಿನ ಬಳಿ ಇರುವ ಕೊಚ್ಚಿಗೆ ಹೋಗಿ ತಂತ್ರಶಾಸ್ತ್ರದಲ್ಲಿ ಪ್ರವೀಣರೆನಿಸಿದ್ದರು. ಉಡುಪಿಯ ಆದಮಾರು ಮಠದ ಆಸ್ಥಾನ ವಿದ್ವಾಂಸರೆನಿಸಿಕೊಂಡಿದ್ದರು. ಇವರ ಮೂರನೆಯ ಮಗನೇ ಶ್ರೀವಿದ್ಯಾಮಾನ್ಯತೀರ್ಥರು. ಇವರು ಪ್ರಮಾದಿ ಸಂವತ್ಸರದ ಆಷಾಢಮಾಸದ ಕೃಷ್ಣಪಕ್ಷ ನವಮಿ ತಿಥಿ ರವಿವಾರ (27.07.1913)ದಂದು ಜನ್ಮಿಸಿದರು. ಇವರ ಜನ್ಮನಾಮ ನಾರಾಯಣ. ಇವರಿಗೆ ಒಬ್ಬ ಅಣ್ಣ ಶ್ರೀನಿವಾಸ ತಂತ್ರಿ ಹಾಗೂ ಮೂವರು ಸೋದರಿಯರಿದ್ದರು. ಭಾಗೀರಥಿ ಅಕ್ಕ, ಮಹಾಲಕ್ಷ್ಮೀ-ಕಾವೇರಿಯರು ಈತನ ತಂಗಿಯರು. ಕುಟುಂಬದ ಎಲ್ಲರಿಗೂ ನಾರಾಯಣ ಅಕ್ಕರೆಯ ಕೂಸು. ಚಿಕ್ಕವರಿದ್ದಾಗಲೇ ಶಾಂತಸ್ವಭಾವ. ತುಸುಗಂಭೀರ. ಆದರೆ, ಕುಶಾಗ್ರಮತಿ. ನಾರಾಯಣನಿಗೆ ಮೂರುವರ್ಷ ಇರುವಾಗ ಅಕ್ಷರಾಭ್ಯಾಸ ಆಯಿತು. ತಂದೆಯೇ ಸ್ತೋತ್ರಗಳನ್ನು ಹೇಳಿಕೊಡುತ್ತಿದ್ದರು. ಮನೆಯಲ್ಲಿ ಸಾಂಗವಾಗಿ ವಿದ್ಯಾಭ್ಯಾಸ ಆಗುತ್ತಿರುವಾಗಲೇ ನಾರಾಯಣ 7 ವರ್ಷ ಕಳೆದು 8 ವರ್ಷದ ಹುಡುಗನಾದ. ತಂದೆಗೆ ಉಪನಯನ ಮಾಡಬೇಕೆಂಬ ಆಸೆ. ಅದಕ್ಕಾಗಿ 2-3 ಮುಹೂರ್ತಗಳನ್ನು ನಿಗದಿಪಡಿಸಿಟ್ಟುಕೊಂಡಿದ್ದರು. ಶ್ರೀಪುತ್ತಿಗೆ ಮಠದ ಶ್ರೀಸುಧೀಂದ್ರತೀರ್ಥ ಶ್ರೀಪಾದರು ಪೆಜಮಾಡಿಯಿಂದ ಉಡುಪಿಗೆ ಬರುತ್ತಿರುವ ವಿಷಯ ತಂತ್ರಿಗಳಿಗೆ ಹೇಗೊ ತಿಳಿಯಿತು. ಅವರು ಎರ್ವಳು ಗ್ರಾಮ ಪ್ರವೇಶ ಮಾಡುತ್ತಿದ್ದಂತೆ, ತಮ್ಮ ಮನೆಯಲ್ಲಿ ಒಂದು ದಿನದ ವಾಸ್ತವ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಪಾದರು ಸಂತೋಷದಿಂದ ಒಪ್ಪಿದರು. ಹಿರಿಯ ಶ್ರೀಗಳ ಆಗಮನ ಮನೆಯಲ್ಲಿ ಸಂಭ್ರಮದ ವಾತಾವರಣವನ್ನೇ ಸೃಷ್ಟಿಸಿತು. ತಮ್ಮ ಮಗ ನಾರಾಯಣನಿಗೆ ಉಪನಯನ ನೆರವೇರಿಸಬೇಕೆಂದು ನಿರ್ಧಾರ ಮಾಡಿದರು. ಶ್ರೀಪಾದರು ವಟುವಿಗೆ ಶ್ರೀಕೃಷ್ಣ ಷಡಕ್ಷರ ಮಂತ್ರದ ಉಪದೇಶವನ್ನು ನೀಡಿ ಅನುಗ್ರಹಿಸಿದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಗೆ ಇವರು ಪ್ರವೇಶ ಪಡೆದರು. ಆದಮಾರು ಮಠದಲ್ಲಿ ವಾಸ, ಶ್ರೀಕೃಷ್ಣ ಮಠದಲ್ಲಿ ಊಟ, ಪಾಠಶಾಲೆಯಲ್ಲಿ ಅಧ್ಯಯನ- ಈ ಮೂರೂ ಇವರ ದಿನಚರಿಗಳಾದವು.

ಯತಿವರ್ಯ: ಆಗ ನಾರಾಯಣ ತಂತ್ರಿಗೆ ಹನ್ನೆರಡು ವರ್ಷ. ಭಂಡಾರಕೇರಿ ಸಂಸ್ಥಾನದ ಶ್ರೀಗಳಿಗೆ ಅನಾರೋಗ್ಯ. ತಮ್ಮ ಉತ್ತರಾಧಿಕಾರಿಯನ್ನಾಗಿ ಸೂಕ್ತರನ್ನು ನೇಮಿಸಲು ಆದಮಾರು ಮಠದ ಶ್ರೀವಿಬುಧಪ್ರಿಯರಿಗೆ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಅವರು ತಮ್ಮ ಮುಂದೆ ಓಡಾಡುತ್ತಿದ್ದ ನಾರಾಯಣ ತಂತ್ರಿಯನ್ನು ಕರೆದು ‘ನಿನ್ನನ್ನು ಭಂಡಾರಕೇರಿ ಮಠದ ಸ್ವಾಮಿಗಳನ್ನಾಗಿ ಮಾಡುತ್ತೇವೆ. ಒಪ್ಪಿಗೆಯೆ?’ ಎಂದು ಕೇಳಿದರು. ಈ ಮಾತಿಗೆ ನಾರಾಯಣ ತಂತ್ರಿ ನಗುನಗುತ್ತಲೇ ಒಪ್ಪಿಗೆ ನೀಡಿದರು. ಅದರಂತೆ ಫಲಮಂತ್ರಾಕ್ಷತೆಗಳನ್ನು ನೀಡಲಾಯಿತು. ಇದಾವುದೂ ಕುಪ್ಪಣ್ಣ ತಂತ್ರಿಗಳಿಗೆ ಗೊತ್ತಿರಲಿಲ್ಲ. ಅವರನ್ನು ಉಡುಪಿಗೆ ಕರೆಸಿ ಸಂನ್ಯಾಸ ಸ್ವೀಕಾರದ ವಿಷಯ ತಿಳಿಸಿದಾಗ ತಾಯಿಯ ಕರುಳು ಸಹಜವಾಗಿಯೇ ಮರುಗಿತು. ಆದರೆ, ತಂದೆಗೆ ಮಗನು ತತ್ತ್ವವಾದ ಸಾಮ್ರಾಜ್ಯದ ಅಧಿಪತಿಯಾಗುವ ಗೌರವ ತಿಳಿದು ಒಪ್ಪಿಕೊಂಡರು. ಅವರಿಗೆ ಆದಮಾರು ಮಠದ ಶ್ರೀವಿಬುಧಪ್ರಿಯರು ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕವನ್ನು ಮಾಡಿ ಶ್ರೀವಿದ್ಯಾಮಾನ್ಯತೀರ್ಥರೆಂದು ನಾಮಕರಣ ಮಾಡಿದರು. ದಂಡ, ಕಮಂಡಲು, ಕೌಪೀನ, ಕಾಷಾಯವಸ್ತ್ರ ಧರಿಸಿ ಸತ್ಯತೀರ್ಥ ಪರಂಪರೆಯ 32ನೆಯ ಯತಿಯಾಗಿ ವಿದ್ಯಾಮಾನ್ಯತೀರ್ಥರೆಂದೆನಿಸಿಕೊಂಡರು. ಇವರು ಆಶ್ರಮ ಸ್ವೀಕರಿಸುವಾಗ ಶ್ರೀವಿಬುಧಪ್ರಿಯರು ಪರ್ಯಾಯದಲ್ಲಿದ್ದರು.

ಶ್ರೀವಿಬುಧಪ್ರಿಯರು ಪರ್ಯಾಯವನ್ನು ಮುಗಿಸಿ ಘಟಿಕಾಚಲಕ್ಷೇತ್ರಕ್ಕೆ ಹೊರಟರಷ್ಟೆ. ಆಗ ಶ್ರೀವಿದ್ಯಾಮಾನ್ಯತೀರ್ಥರು ಅವರನ್ನು ಹಿಂಬಾಲಿಸಿದರು. ಅವರಲ್ಲಿ ಶ್ರೀಮದಾಚಾರ್ಯರ ಅನುಷ್ಠಾನಕ್ರಮವನ್ನು ಮೊದಲಿಗೆ ತಿಳಿದುಕೊಂಡರು. ನಂತರ ಪ್ರಾಥಮಿಕ ಗ್ರಂಥಗಳ ಅಧ್ಯಯನ ನಡೆಸಿದರು. ಅಧ್ಯಯನ, ಅರ್ಚನ ಮತ್ತು ಅನುಷ್ಠಾನಗಳೇ ವಿದ್ಯಾಮಾನ್ಯರ ಪ್ರತಿನಿತ್ಯದ ಸ್ಮರಣೆಗಳಾದವು. ಅವರು 3 ವರ್ಷ ಶ್ರೀವಿಬುಧಪ್ರಿಯರ ಸಾನ್ನಿಧ್ಯದಲ್ಲಿ ಇದ್ದು ಭಂಡಾರಕೇರಿ ಮಠಕ್ಕೆ ಬಂದರು. ನಂತರ ವಿದ್ವಾಂಸರಾದ ಇನ್ನ ವಾಸುದೇವಾಚಾರ್ಯರಲ್ಲಿ ದಶಪ್ರಕರಣ, ಉಪನಿಷತ್​ಭಾಷ್ಯಗಳು, ತತ್ತ್ವಪ್ರಕಾಶಿಕ ಅಧ್ಯಯನಗಳು ಹಂತಹಂತವಾಗಿ ಆದವು. ಆದರೆ, ದ್ವೈತವೇದಾಂತದ ಉಚ್ಚತಮ ಗ್ರಂಥಗಳ ಅಧ್ಯಯನಕ್ಕೆ ಸರ್ವಶ್ರೇಷ್ಠ ಗುರುಗಳನ್ನು ಅವರು ಅರಸುತ್ತಿದ್ದರು. ಆಗ ಶ್ರೀವಿದ್ಯಾಮಾನ್ಯರಿಗೆ ಶ್ರೀಸತ್ಯಧ್ಯಾನತೀರ್ಥರೇ ತಮ್ಮ ಶ್ರೇಷ್ಠ ಗುರುಗಳೆಂದು ತಿಳಿದು ಅವರ ಆಶ್ರಯಕ್ಕೆ ಬಂದರು. ಹಾಲತೊರೆಗೆ ಬೆಲ್ಲವು ಸೇರಿಕೊಂಡಂತಾಯಿತು. ತತ್ತ್ವವಾದದ ಉಚ್ಚತಮ ಗ್ರಂಥಗಳ ಪಾಠ ಶ್ರೀಸತ್ಯಧ್ಯಾನ ತೀರ್ಥರಲ್ಲಿ ಅನುಗ್ರಹಿತವಾಯಿತು. ಶ್ರೀವಿದ್ಯಾಮಾನ್ಯರು ಶ್ರೀಸತ್ಯಧ್ಯಾನತೀರ್ಥರಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯಲಾರಂಭಿಸಿದರು. ಆಗ ಶ್ರೀಸತ್ಯಧ್ಯಾನತೀರ್ಥರು ತಮ್ಮ ಪ್ರಿಯಶಿಷ್ಯ ಪಿ.ಕೆ. ಹರಿದಾಸಾಚಾರ್ಯರಿಗೆ ‘ತತ್ತ್ವಪ್ರಕಾಶಿಕ’ ಪಾಠ ಹೇಳುತ್ತಿದ್ದರು. ಶ್ರೀವಿದ್ಯಾಮಾನ್ಯರು ಅದನ್ನು ಕೇಳಿಕೊಂಡ, ಕಿರಿಯರಿಗೆ ಆಸಕ್ತಿಯಿಂದ ಪಾಠವನ್ನು ಮಾಡುತ್ತಿದ್ದರು. ಶ್ರೀಸತ್ಯಧ್ಯಾನ ತೀರ್ಥರಿಗೊ ಪರಮಾನಂದ ಉಂಟಾಗಿ ಅನುವ್ಯಾಖ್ಯಾನದೊಡನೆ ನ್ಯಾಯಸುಧೆಯನ್ನು ಶ್ರೀವಿದ್ಯಾಮಾನ್ಯರಿಗೆ ಪಾಠ ಹೇಳಿದರು. ನಂತರ ತಿರುಪತಿಯಲ್ಲಿ ಸುಧಾಮಂಗಲೋತ್ಸವವು ಸಂಭ್ರಮದಿಂದ ನೆರವೇರಿತು.

ಶ್ರೀವಿದ್ಯಾಮಾನ್ಯತೀರ್ಥರ ಅಧ್ಯಯನದ ಹಸಿವು ಇನ್ನೂ ಹಿಂಗಿರಲಿಲ್ಲ. ಶ್ರೀವ್ಯಾಸರಾಜ ಗುರುಸಾರ್ವಭೌಮರ ‘ನ್ಯಾಯಾಮೃತ’ ಪಾಠವನ್ನು ಹೇಳಿಸಿಕೊಂಡರು. ಶ್ರೀಪಾದರ ಬುದ್ಧಿ ಬಲು ಹರಿತವಾದುದು. ಒಂದೆಡೆ ಶ್ರೀಸತ್ಯಧ್ಯಾನತೀರ್ಥರಿಂದ ಅಧ್ಯಯನ, ಮತ್ತೊಂದೆಡೆ ಅಧ್ಯಾಪನ ಹಗಲು-ಇರುಳು ನಡೆದವು. ನಂತರ ತರ್ಕತಾಂಡವ, ಚಂದ್ರಿಕಾ ಗ್ರಂಥಗಳ ಅಧ್ಯಯನ ನಿಶಿತವಾಗಿ ನಡೆಯಿತು. ವ್ಯಾಕರಣ ಮತ್ತು ಮೀಮಾಂಸಾಶಾಸ್ತ್ರದ ಅಧ್ಯಯನವೂ ಜತೆಜತೆಗೆ ಆಯಿತು. ಹೀಗೆ, ನಾಲ್ಕು ವರ್ಷ ಅಖಂಡವಾಗಿ ಅಧ್ಯಯನ-ಅಧ್ಯಾಪನಗಳು ನಡೆದುವು. ಪಂಡಿತರ ಸಭೆಯಲ್ಲಿ ವಾಕ್ಯಾರ್ಥವನ್ನು ನಡೆಸಿ ಶ್ರೀಸತ್ಯಧ್ಯಾನತೀರ್ಥರಿಂದಲೂ ಅನೇಕ ವಿದ್ವಾಂಸರಿಂದಲೂ ಶ್ರೀವಿದ್ಯಾಮಾನ್ಯರು ಸೈ ಎನಿಸಿಕೊಂಡರು. ಈ ನಡುವೆ ನ್ಯಾಯಾಮೃತ ಮಂಗಲೋತ್ಸವವೂ ಜರುಗಿತು. ಶ್ರೀಪಾದರು ಅಧ್ಯಯನ ಮುಗಿಸಿ ತಮ್ಮ ಗ್ರಾಮಕ್ಕೆ ಹೊರಡಲು ಶ್ರೀಸತ್ಯಧ್ಯಾನತೀರ್ಥರ ಅಪ್ಪಣೆ ಬೇಡಿದರು. ಆದರೆ, ಗುರುಗಳಿಗೆ ಶ್ರೀವಿದ್ಯಾಮಾನ್ಯರು ತಮ್ಮಲ್ಲಿಯೇ ಇರಬೇಕೆಂದು ಆಸೆ. ಆದರೆ, ಗುರುವಿನ ಅನುಗ್ರಹ ತಮ್ಮ ಮೇಲಿರಲೆಂದು ಹೇಳಿ, ಅಪ್ಪಣೆಪಡೆದು ಹೊರಟರು.

ಪ್ರವಚನ: ಶ್ರೀವಿದ್ಯಾಮಾನ್ಯತೀರ್ಥರು ಭಂಡಾರಕೇರಿಗೆ ಹಿಂದಿರುಗಿದ ಮೇಲೆ ಅಹರ್ನಿಶಿ ಸ್ವಾಧ್ಯಾಯ ಪ್ರವಚನಗಳಲ್ಲಿ ಮುಳುಗಿದರು. ಪಾಠ-ಪ್ರವಚನಗಳೆಂದರೆ ಶ್ರೀಗಳಿಗೆ ಎಲ್ಲಿಲ್ಲದ ಉತ್ಸಾಹ. ವಿಶೇಷವಾಗಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಶ್ರೀವಿದ್ಯಾಮಾನ್ಯತೀರ್ಥರಲ್ಲಿ ತತ್ತ್ವಸಂಖ್ಯಾನ, ತರ್ಕಸಂಗ್ರಹದಿಂದ ಪ್ರಾರಂಭಗೊಂಡು ವ್ಯಾಸತ್ರಯ, ನ್ಯಾಯಸುಧಾದಿ ಉದಂಥಗಳನ್ನು ಅಭ್ಯಸಿಸಿದರು. ಭಂಡಾರಕೇರಿ ಗ್ರಾಮದ ವಿಶಾಲಮಠದಲ್ಲಿ ಪೇಜಾವರ ಶ್ರೀಪಾದಂಗಳವರಿಗೂ ಅನೇಕ ಸಾಧಕ ವಿದ್ವಾಂಸರಿಗೂ ವಿದ್ಯಾಮಾನ್ಯತೀರ್ಥರು ಶಾಸ್ತ್ರಾನುಗ್ರಹವನ್ನು ನೆರವೇರಿಸಿದರು. ಅದೊಂದು ಸುಂದರ ಸ್ಥಳ. ಮುಂದೆ ಪೇಜಾವರ ಶ್ರೀಗಳಿಗೆ ಸುಧಾಮಂಗಲೋತ್ಸವವು ವಿಜೃಂಭಣೆಯಿಂದ ನಡೆಯಿತು! ಆದಮಾರು ಮಠದ ಕಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥರು ಶ್ರೀವಿದ್ಯಾಮಾನ್ಯರಲ್ಲಿ ಶಾಸ್ತ್ರಾಧ್ಯಯನಕ್ಕಾಗಿ ಬಂದು ಸೇರಿದರು. ಇವರೊಡನೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರೂ ಸೇರಿಕೊಂಡರು. ಭಂಡಾರಕೇರಿ ಗುರುಕುಲವು ಬ್ರಹ್ಮಚಾರಿಗಳಿಂದಲೂ ಗೃಹಸ್ಥರಿಂದಲೂ ಕೂಡಿಕೊಂಡಿತು. ಆಗ ನೂರಕ್ಕೂ ಹೆಚ್ಚು ಜನರು ವಿದ್ಯಾಭ್ಯಾಸಕ್ಕೆ ಮಠದಲ್ಲಿ ಸೇರಿಕೊಂಡಿದ್ದರು. ಅನತಿ ಕಾಲದಲ್ಲೆ ಶ್ರೀವಿದ್ಯಾಮಾನ್ಯತೀರ್ಥರಿಂದ ಸಂನ್ಯಾಸದೀಕ್ಷೆ ಪಡೆದ ಶ್ರೀವಿದ್ಯಾಧೀಶ ತೀರ್ಥರು ಮತ್ತು ಶ್ರೀವಿದ್ಯೇಶ ತೀರ್ಥರು ಈ ಗುರುಕುಲದ ಅಂತೇವಾಸಿಗಳಾದರು. ನಾಲ್ವರು ಯತಿಗಳಿಗೆ ಶ್ರೀಪಾದರು ಪಾಠಹೇಳತೊಡಗಿದರು. ಶ್ರೀಗಳ ಜತೆಗಿನ ಅಂದಿನ ದಿನಚರಿಯಂತೂ ಅಪೂರ್ವವಾಗಿರುತ್ತಿತ್ತು. ಬೆಳಗ್ಗೆ ದೇವಳದ ಗಂಟೆಯನಾದ ಮೊಳಗಿದೊಡನೆ ಎಲ್ಲ್ಲ ವಿದ್ಯಾರ್ಥಿಗಳು ಅಲ್ಲಿ ಹಾಜರಿರುತ್ತಿದ್ದರು. ಅಷ್ಟರಲ್ಲಿ ನಾಲ್ವರು ಯತಿಗಳೊಂದಿಗೆ ವಿದ್ಯಾಮಾನ್ಯರು ಬರುತ್ತಿದ್ದರು. ಮಂಗಳಾಷ್ಟಕ ಪ್ರಾರಂಭವಾಗುತ್ತಿತ್ತು. ವಿದ್ಯಾರ್ಥಿಗಳು ಬಿಸಿನೀರಲ್ಲಿ ಮಿಂದೆದ್ದರೆ, ಯತಿಗಳು ತೀರ್ಥದಲ್ಲಿ ಮಜ್ಜನ ಮಾಡುತ್ತಿದ್ದರು. ನಂತರ ಪ್ರಾಂಗಣದ ಉದ್ದಕ್ಕೂ ವಿದ್ಯಾರ್ಥಿಗಳು ಸಂಧ್ಯಾವಂದನೆಗೆ ಕೂರುತ್ತಿದ್ದರು. ಅಗ್ನಿಕಾರ್ಯ ಪ್ರಾರಂಭವಾಗುತ್ತಿತ್ತು. ನಾಲ್ವರು ಯತಿಗಳ ನಡುವೆ ಶ್ರೀವಿದ್ಯಾಮಾನ್ಯರು. ಐವರು ಶ್ರೀಗಳು ಪ್ರಣವಾದಿ ಮಂತ್ರಗಳಲ್ಲಿ ನಿರತರಾಗುತ್ತಿದ್ದರು. ನಂತರ ದೇವರಪೂಜೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ವೇದಪಠಣ ಮಾಡುತ್ತಿದ್ದರು. ಮಹಾಪೂಜೆ ಸಾಂಗವಾಗಿ ಮುಕ್ತಾಯವಾದ ನಂತರ ವಿದ್ಯಾರ್ಥಿಗಳೆಲ್ಲರಿಗೂ ಗಂಜಿಯ ಊಟ. ಅದಕ್ಕೆ ತುಪ್ಪ ಮತ್ತು ಉಪ್ಪಿನಕಾಯಿ. ಗಂಜಿ ಊಟ ಆದಮೇಲೆ ಶಾಸ್ತ್ರಪಾಠ ಪ್ರಾರಂಭ. ಕಿರಿಯ ಯತಿಗಳು ಒಂದೊಂದು ವರ್ಗಕ್ಕೆ ಪಾಠ ಮಾಡುತ್ತಿದ್ದರು. ಸೂರ್ಯ ನೆತ್ತಿಗೆ ಬಂದಾಗ ಎಲ್ಲರಿಗೂ ಸುಗ್ರಾಸ ಪ್ರಸಾದ. ನಂತರ ಐವರು ಯತಿಗಳಿಂದ ಸಸ್ವರ ವೇದಮಂತ್ರ ಪಠಣ. ಅಲ್ಪವಿಶ್ರಾಂತಿಯ ನಂತರ ನ್ಯಾಯ-ವ್ಯಾಕರಣ-ದ್ವೈತವೇದಾಂತದ ಉದಂಥಗಳ ಪಾಠ. ಸಂಜೆ ಸಂಧ್ಯಾವಂದನೆ. ಅಗ್ನಿಕಾರ್ಯಕ್ಕೆ ಎಲ್ಲರೂ ಸಿದ್ಧರಾಗುತ್ತಿದ್ದರು. ಐವರು ಯತಿಗಳು ಸ್ನಾನ ಮುಗಿಸಿ ಪ್ರಣವಾದಿ ಜಪತರ್ಪಣ, ದೇವರುಗಳಿಗೆ ಅರ್ಚನೆ, ಮಹಾಗುರುಗಳಿಂದ ಭಾಗವತವೇ ಮೊದಲಾದ ಗ್ರಂಥಗಳಲ್ಲಿ ಬರುವ ತತ್ತ್ವ-ನೀತಿಗಳ ಮನೋಜ್ಞ ಬೋಧನೆ. ಆದಿನ ನಡೆದ ಪಾಠಗಳ ಮರುಚಿಂತನೆ. ಆಮೇಲೆ ಎಲ್ಲರೂ ಮಲಗಲು ತಯಾರಾಗುತ್ತಿದ್ದರು. ಇದೊಂದು ಅಚ್ಚುಕಟ್ಟಾದ ಅಧ್ಯಯನಕ್ರಮ. ಇದು ಪ್ರತಿನಿತ್ಯ ನಡೆಯುತ್ತಿತ್ತು.

ಶ್ರೀಸತ್ಯಧ್ಯಾನ ತೀರ್ಥರ ಬಳಿ ಅಧ್ಯಯನ ಮುಗಿಸಿ ಬಂದಮೇಲೆ 12 ವರ್ಷ ಭಂಡಾರಕೇರಿ ಮಠದಲ್ಲಿದ್ದು ಅವಿಚ್ಛಿನ್ನವಾಗಿ ಶಾಸ್ತ್ರಪಾಠ ಮಾಡುವ ಮೂಲಕ ಜ್ಞಾನದಾನವೆಂಬ ಮಹಾಯಜ್ಞವನ್ನು ಶ್ರೀಪಾದರು ನೆರವೇರಿಸಿದರು. ಈ ನಡುವೆ ಕಾಶಿಯಿಂದ ಹರಿದ್ವಾರಕ್ಕೆ ಪ್ರಯಾಣ ಬೆಳಸಿ, ನಂತರ ಕಾಲುನಡಿಗೆಯಲ್ಲೆ ಭಾಷ್ಯಪಾರಾಯಣ ಮಾಡುತ್ತ ಬದರಿಯನ್ನು ತಲುಪಿದರು. ಅಲ್ಲಿ ಒಂದು ವಾರ ಇದ್ದು ನಾರಾಯಣ ಸ್ಮರಣೆಯನ್ನು ನಡೆಸಿದರು. ಅಲ್ಲಿಂದ ಗಯೆಗೆ ಬಂದು ಚಾತುರ್ವಸ್ಯ ವ್ರತವನ್ನು ಕೈಗೊಂಡರು. ಶ್ರೀಪಾದರು ಶ್ರೀವಿಷ್ಣುಪಾದಕ್ಕೆ ಪವಮಾನ ಸೂಕ್ತದ ಪಠನಪೂರ್ವಕ ಅಭಿಷೇಕಮಾಡಿದ ಪರಿಣಾಮವಾಗಿ ಫಲ್ಗು ನದಿಯಲ್ಲಿ ಪ್ರವಾಹ ಆಗುವಷ್ಟು ಮಳೆಸುರಿದದ್ದು ಒಂದು ವಿಶೇಷ ಸಂಗತಿ.

ವಾಕ್ಯಾರ್ಥ ಸಂಭ್ರಮ: ಶ್ರೀವಿದ್ಯಾಮಾನ್ಯ ತೀರ್ಥರು ತತ್ತ್ವವಾದದ ಡಿಂಡಿಮವನ್ನು ಬಾರಿಸಲು ಯಾತ್ರೆ ನಡೆಸಿದ್ದೊಂದು ಅವಿಸ್ಮರಣೀಯ ಘಟನೆ. 1940ನೇ ಇಸವಿ ನವೆಂಬರ್ ಕಾರ್ತಿಕಮಾಸದಲ್ಲಿ ವಿಜಯನಗರ ಸಂಸ್ಥಾನಕ್ಕೆ ಬಂದರು. ಅಲ್ಲಿ ಪ್ರಕಾಂಡ ವಿದ್ವಾಂಸರಾದ ತಾತಾ ಸುಬ್ರಾಯ ಶಾಸ್ತ್ರಿಗಳು, ನೂರಾರು ವಿದ್ಯಾರ್ಥಿಗಳಿಗೆ ಅದ್ವೈತ ವೇದಾಂತದ ಪಾಠ ಮಾಡುತ್ತಿದ್ದ ಆಚಾರ್ಯರು. ಅವರ ಮನೆಯೇ ಗುರುಕುಲವಾಗಿತ್ತು. ಶಾಸ್ತ್ರಿಗಳ ವಿದ್ವತ್ತು, ಅನುಭವ ಸಂಪತ್ತು ಕೇಳಿದ ಶ್ರೀವಿದ್ಯಾಮಾನ್ಯರಿಗೆ ಅವರೊಡನೆ ವಾಕ್ಯಾರ್ಥ ನಡೆಸಬೇಕೆಂಬ ಅಪೇಕ್ಷೆ ಉಂಟಾಯಿತು. ಇದು ಶ್ರೀಪಾದರ ಮೊದಲ ವಾಕ್ಯಾರ್ಥ. ಅನೇಕ ಶಾಸ್ತ್ರಗಳು, ಯುಕ್ತಾಯುಕ್ತ ಚರ್ಚೆಗಳು ಅಲ್ಲಿ ನಡೆದವು. ಕೊನೆಗೆ ವಿದ್ಯಾಮಾನ್ಯರ ವಾದಕೌಶಲ ಎಲ್ಲರಿಗೂ ತಿಳಿಯಿತು. ಆಚಾರ್ಯ ಸುಬ್ರಾಯಶಾಸ್ತ್ರಿಗಳು ಶ್ರೀಪಾದರನ್ನು ಮನೆಗೆ ಬರಮಾಡಿಕೊಂಡು ಪಾದಪೂಜೆ ಮಾಡಿ ಸತ್ಕರಿಸಿದರು. ನಂತರ ಶ್ರೀಪಾದರು ಸುಬ್ರಾಯಶಾಸ್ತ್ರಿಗಳಿಗೆ ವಿಪುಲ ಸಂಭಾವನೆ ನೀಡಿ ಸತ್ಕರಿಸಿದರು. ಕಂಚಿ ಪರಮಾಚಾರ್ಯರು 1956ರ ಮಾರ್ಚ್ 27ರಿಂದ 3 ದಿನ ಅದ್ವೈತವೇದಾಂತ ಪ್ರತಿಷ್ಠಾಗೋಷ್ಠಿಯೊಂದನ್ನು ಕಂಚಿಯಲ್ಲಿ ಏರ್ಪಡಿಸಿದ್ದರು. ಅದಕ್ಕಾಗಿ ಮಹಾಮಹೋಪಾಧ್ಯಾಯ ಅನಂತಕೃಷ್ಣಶಾಸ್ತ್ರೀ, ಸುಂದರಶಾಸ್ತ್ರೀ, ಸುಬ್ರಹ್ಮಣ್ಯಶಾಸ್ತ್ರೀ ಮುಂತಾದ ಅದ್ವೈತ ದಿಗ್ದಂತಿ ಪಂಡಿತರೆಲ್ಲರನ್ನು ಅಲ್ಲಿ ಸೇರಿಸಿದ್ದರು. ಈ ಸಭೆಗೆ ಶ್ರೀವಿದ್ಯಾಮಾನ್ಯರನ್ನು ಆಹ್ವಾನಿಸಲಾಯಿತು. ಉಭಯ ಶ್ರೀಪಾದರು ಕುಶಲಪ್ರಶ್ನೆ ನಡೆಸಿದ ಬಳಿಕ ಕಂಚಿ ಪರಮಾಚಾರ್ಯರು ‘ಅದ್ವೈತಶಾಸ್ತ್ರವನ್ನು ಚೆನ್ನಾಗಿ ವಿಮರ್ಶೆ ಮಾಡಿದ್ದೀರೆಂದು ನಾವು ಕೇಳಿದ್ದೇವೆ. ನಿಮ್ಮಿಂದ ಒಂದು ವಿಷಯವನ್ನು ತಿಳಿಯಬೇಕೆಂದಿದ್ದೇವೆ’ ಎಂದು ಪ್ರಸ್ತಾಪಿಸಿದಾಗ ‘ಮನುಷ್ಯನು ಸರ್ವದಾ ತತ್ತ್ವಚಿಂತನೆಯನ್ನು ಮಾಡುತ್ತಿರಬೇಕೆಂದು ಉಪನಿಷತ್ತುಗಳು ಸಾರುತ್ತವೆ. ನಮ್ಮ ಬುದ್ಧಿಗೆ ತೋಚಿದಷ್ಟು ವಿಚಾರ ಮಾಡುತ್ತೇವೆ’ ಎಂದು ಶ್ರೀವಿದ್ಯಾಮಾನ್ಯರು ಉತ್ತರಿಸಿದರು. ‘ದ್ವೈತದ ಅಪೂರ್ವತೆ’ ಕುರಿತು ಭಂಡಾರಕೇರಿ ಶ್ರೀಗಳು, ‘ದ್ವೈತಸಿದ್ಧಾಂತ ಅಪೂರ್ವವಲ್ಲ- ಎಂದು ಕಂಚಿಶ್ರೀಗಳೇ ಆದಿಯಾಗಿ ಉಳಿದ ವಿದ್ವಾಂಸರು ನಾಲ್ಕಾರು ಗಂಟೆ ಅಖಂಡವಾಗಿ ವಾಕ್ಯಾರ್ಥವನ್ನು ನಡೆಸಿದರು. ಸಿದ್ಧಾಂತದ ಸಮರ್ಥನೆಗಾಗಿ ಅನಂತಕೃಷ್ಣ ಶಾಸ್ತ್ರಿಗಳು ಮಾತಾಡಿದರು. ಕೊನೆಗೆ ವಿದ್ಯಾಮಾನ್ಯರು ಪೂರ್ವಪಕ್ಷಗಳನ್ನು ಖಂಡಿಸಿ ‘ದ್ವೈತಕ್ಕೆ ಅಪೂರ್ವತಾ’ ಎಂಬ ಲಿಂಗವುಂಟೆಂದು ಸಮರ್ಥಿಸಿ ಸಿದ್ಧಾಂತ ಮಾಡಿದರು. ಆಗ ಪರಮಾಚಾರ್ಯರು ‘ಅಪೂರ್ವತಾ ಎಂಬ ತಾತ್ಪರ್ಯಲಿಂಗವನ್ನು ಚೆನ್ನಾಗಿ ಸಮರ್ಥಿಸಿದ್ದಾರೆ. ಇಲ್ಲಿಗೆ ವಿಚಾರವನ್ನು ಸಾಕುಮಾಡೋಣ’ ಎಂದು ಹೇಳಿ ಪೀತಾಂಬರ, ಸಹಸ್ರಾರು ರೂ.ಗಳ ಕಾಣಿಕೆ-ಫಲಗಳೊಂದಿಗೆ ಶ್ರೀವಿದ್ಯಾಮಾನ್ಯರನ್ನು ಆದರದಿಂದ ಸತ್ಕರಿಸಿದರು. ಮುಂದೆ 1958 ನವೆಂಬರ್ 30ರಂದು ಕಾಶಿಯ ವಿದ್ವತ್ ಸಭೆಯಲ್ಲಿ ನಡೆದ ವಾಕ್ಯಾರ್ಥವೂ ಅಪೂರ್ವವಾಗಿತ್ತು. ಮಹಾಮಹೋಪಾಧ್ಯಾಯ ಗಿರಿಧರಶರ್ವ ಚತುರ್ವೆದಿ ಇವರ ಅಧ್ಯಕ್ಷತೆಯಲ್ಲಿ ಇದು ನಡೆಯಿತು. ಕಾಶಿಯ ಪಂಡಿತ ಮಂಡಳಿ ಅಲ್ಲಿ ಸೇರಿತ್ತು. ‘ದ್ವೈತದ ಅಪೂರ್ವತೆ’ ಕುರಿತು ವಾಕ್ಯಾರ್ಥ ಅಲ್ಲಿ ನಡೆಯಿತು. ಆ ಸಭೆಯಲ್ಲಿ ಕಮಲಾಕಾಂತ ಮಿಶ್ರಾ, ಯಜ್ಞೇಶ್ವರ ಝಾ, ದ್ರವಿಡ ರಾಜರಾಜೇಶ್ವರಿ ಶಾಸ್ತ್ರೀ ಜಯರಾಮಶುಕ್ಲ, ರಾಮಚಂದ್ರಷಡಂಗ, ಬದರಿನಾಥಶಾಸ್ತ್ರೀ ಹಾಗೂ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ನಿರೀಕ್ಷಪತಿ ಮಿಶ್ರಾ ಸೇರಿದ್ದರು. ಇವರೆಲ್ಲರೂ ಪ್ರಾಚೀನ ಪರಂಪರೆಯಲ್ಲಿ ಅಧ್ಯಯನ ಮಾಡಿದ ಮಹಾವಿದ್ವಾಂಸರು, ಅಖಿಲ ಭಾರತೀಯ ಪಂಡಿತೋತ್ತಮರು. ಶ್ರೀಪಾದರ ಪ್ರಖರಪಾಂಡಿತ್ಯ, ವಾದಕೌಶಲ, ಅಪಾರಪ್ರತಿಭೆಗೆ ಎಲ್ಲರೂ ಮೂಕವಿಸ್ಮಿತರಾದರು. ನಂತರ ಮುಕ್ತಮನಸ್ಸಿನಿಂದ ಮಾನಪತ್ರ ಅರ್ಪಿಸಿ ಸನ್ಮಾನಿಸಿದರು. ಶ್ರೀಪಾದರ ವಾದದ ಕೋಟಿಕ್ರಮಘಟಿತವಾದ ಅಸ್ಖಲಿತ ಅನುವಾದ, ಧಾತೃತ್ವಶಕ್ತಿ ಹಾಗೂ ತಪಸ್ಸಿದ್ಧಿಗಳನ್ನು ಮಾನಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ದೆಹಲಿಯಲ್ಲಿ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯ ಶ್ರೀರಾಮಚಂದ್ರಶಾಸ್ತ್ರಿ ಷಡಂಗರೊಡನೆ ವಾಕ್ಯಾರ್ಥ, 1964ರಲ್ಲಿ ಹರಿದ್ವಾರದಲ್ಲಿ ನಡೆದ ದ್ವೈತಾದ್ವೈತ ಚರ್ಚೆ, 1989ರಲ್ಲಿ ಶೃಂಗೇರಿಯ ಅಭಿನವ ವಿದ್ಯಾತೀರ್ಥರೊಡನೆ ನಡೆದ ಸಂವಾದಗಳು ಹೆಸರಿಸಬಹುದಾದವುಗಳು.

ಶ್ರೀವಿದ್ಯಾಮಾನ್ಯರ ತತ್ತ್ವಜ್ಞಾನದ ಹಾದಿಯಲ್ಲಿ ಫಲಿಮಾರು ಮಠಕ್ಕೆ ಅಧಿಪತಿಗಳಾಗಿ 1969ರ ಫೆಬ್ರವರಿ 3ರಂದು ಅಧಿಕಾರವನ್ನು ಸ್ವೀಕರಿಸಿದ್ದು ವಿಶೇಷ. ಇದೊಂದು ಚಾರಿತ್ರಿಕ ಸಂದರ್ಭ. ಫಲಿಮಾರು ಮಠಕ್ಕೆ ಹೊಸ ಸ್ವರೂಪವನ್ನೇ ಶ್ರೀಪಾದರು ತಂದುಕೊಟ್ಟರು. ಅವರು ಆಧಿಪತ್ಯವನ್ನು ಸ್ವೀಕರಿಸಿದ ಮರುವರ್ಷವೇ ಪರ್ಯಾಯದ ಸರದಿ ಬಂದಿತು. ಇವರು ಪರ್ಯಾಯ ಸ್ವೀಕರಿಸುವಾಗ ಪೇಜಾವರ ಶ್ರೀಗಳು ದ್ವಿತೀಯ ಪರ್ಯಾಯದಲ್ಲಿದ್ದರು. 1970ರ ಜನವರಿ 18ರ ಪ್ರಾತಃಕಾಲದಲ್ಲಿ ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯರಿಗೆ ಶ್ರೀಕೃಷ್ಣಮಠದ ಅಧಿಕಾರವನ್ನು ಪೇಜಾವರರು ಹಸ್ತಾಂತರಗೊಳಿಸಿದರು. ಇದು ಶಿಷ್ಯನಿಂದ ಗುರುವಿಗೆ ಸಮರ್ಪಿತವಾದ ಪರ್ಯಾಯ. ಇವರ ಪರ್ಯಾಯದಲ್ಲಿ ಸರ್ವಮೂಲಗ್ರಂಥಗಳ ಶಾಂತಿಪುರಸ್ಸರ ಪಾಠ ಆದದ್ದೊಂದು ವಿಶೇಷ. ತಮ್ಮ ಪ್ರಥಮ ಪರ್ಯಾಯದ ಸ್ಮರಣೆಯಾಗಿ ಚಿನ್ನದ ತೊಟ್ಟಿಲನ್ನು ಕೃಷ್ಣನಿಗೆ ಅರ್ಪಿಸಿದರು. ಅಧ್ಯಯನ-ಅನುಷ್ಠಾನ-ಪ್ರವಚನಗಳ ಜತೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದಾದ ನಂತರ 1986 ಜನವರಿ 18ರಂದು ದ್ವಿತೀಯ ಪರ್ಯಾಯವು ಸಂಭ್ರಮದಿಂದ ಜರುಗಿತು. ವಿದ್ಯಾಮಾನ್ಯರು ಸರ್ವಜ್ಞಪೀಠವನ್ನು ಏರಿದರು. ಉಡುಪಿಗೆ ಉಡುಪಿಯೇ ಸಂಭ್ರಮಿಸಿತು. ಅಷ್ಟಮಠದ ಯತಿಗಳೆಲ್ಲರೂ ಭಾಗವಹಿಸಿ ವಿದ್ಯಾಮಾನ್ಯರ ಪರ್ಯಾಯ ಉತ್ಸವಕ್ಕೆ ನೆರವಾದರು. ವಿದ್ಯಾಮಾನ್ಯರು ಶ್ರೀಕೃಷ್ಣನಿಗೆ ಸುವರ್ಣರಥವನ್ನು ಅರ್ಪಿಸಿದ್ದೊಂದು ದ್ವಿತೀಯ ಪರ್ಯಾಯದ ವಿಶೇಷ. ಹೃಷಿಕೇಶತೀರ್ಥರು ಬರೆದಿದ್ದ ಸರ್ವಮೂಲಗ್ರಂಥಗಳನ್ನು ಡಾ. ಬನ್ನಂಜೆ ಗೋವಿಂದಾಚಾರ್ಯರು ಶುದ್ಧವಾಗಿ ಸಂಪಾದಿಸಿದರು. ಅದನ್ನು ಪ್ರಕಟಿಸಿದ ಶ್ರೇಯಸ್ಸು ಶ್ರೀಪಾದಂಗಳವರಿಗೆ ಸೇರಿದ್ದು. ಹೀಗೆ, ಪರ್ಯಾಯವನ್ನು ವಿಶೇಷ ರೀತಿಯಿಂದ ನಡೆಸಿದ್ದು ಶ್ರೀವಿದ್ಯಾಮಾನ್ಯರ ಹೆಗ್ಗಳಿಕೆಯೇ ಸರಿ.

ಆಚಾರ್ಯಮಧ್ವರ ತತ್ತ್ವವಾದವನ್ನು ಪಸರಿಸುವ ಕಾರ್ಯದಲ್ಲಿ ಹಗಲಿರುಳು ತೊಡಗಿಕೊಂಡ ಶ್ರೀವಿದ್ಯಾಮಾನ್ಯರು ಭಾರತಾದ್ಯಂತ ಸಂಚರಿಸಿದರು. ದೆಹಲಿಯಲ್ಲಿದ್ದ ಸನಾತನಧರ್ಮ ಪ್ರತಿನಿಧಿ ಸಭಾಕ್ಕೆ 1962ರಿಂದ 3 ವರ್ಷ ಅಧ್ಯಕ್ಷರಾಗಿದ್ದರು. 1963ರಲ್ಲಿ 5ನೇ ಮಾಧ್ವತತ್ತ್ವಜ್ಞಾನದ ಉದ್ಘಾಟನೆಯನ್ನು ನೆರವೇರಿಸಿದರು. 1966ರಲ್ಲಿ ಗೋಹತ್ಯೆ ನಿಷೇಧಿಸಲು 2 ದಿನ ನಿರಶನ ವ್ರತವನ್ನು ಪೇಜಾವರ ಶ್ರೀಗಳ ಜತೆ ಮಾಡಿದರು. 1986ರಲ್ಲಿ ಪ್ರಯಾಗದಲ್ಲಿ ‘ಮಾಧ್ವಪೀಠ’ದ ಸ್ಥಾಪನೆ ಮಾಡಿದರು. ಆಚಾರ್ಯ ಮಧ್ವರ 750ನೆಯ ಜಯಂತಿ ಪ್ರಯುಕ್ತ 1989ರಲ್ಲಿ ಬದರಿ ಕ್ಷೇತ್ರದಲ್ಲಿ ಶ್ರೀಮಧ್ವರ ಪ್ರತೀಕದ ಪ್ರತಿಷ್ಠಾಪನೆಯನ್ನು ನೆರವೇರಿಸಿದರು. 1994ರಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಸಂಶೋಧನ ಕೇಂದ್ರವನ್ನು ಸ್ಥಾಪನೆ ಮಾಡಲು ಪ್ರೋತ್ಸಾಹ ನೀಡಿದರು. ಶ್ರೀವಿದ್ಯಾಮಾನ್ಯರು ಅನೇಕ ಕಿರುಕೃತಿಗಳ ಜತೆಗೆ ‘ತತ್ತ್ವವಾದ’ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಕಾಲಕಾಲಕ್ಕೆ ಬರೆದರು. ಅವರು ಸಂಸ್ಕೃತದಲ್ಲಿ ಬರೆದ ಅದ್ವೈತ ತತ್ತ್ವಸುಧಾಸಮೀಕ್ಷಾ, ತತ್ತ್ವಮಾರ್ತಾಂಡ ವಿಮರ್ಶಾ, ನ್ಯಾಯಸುಧಾಮಂಡನ, ಕ್ಷೇತ್ರಜ್ಞ ಶಬ್ದಾರ್ಥವಿಚಾರ, ಶಾಂಕರಭಾಷ್ಯ ವಿಮರ್ಶಾ ಈ ಎಲ್ಲ ಗ್ರಂಥಗಳು ಶ್ರೀಪಾದರ ವ್ಯಾಪಕವ್ಯಾಸಂಗ, ತತ್ತ್ವವಿಮರ್ಶೆಯ ಸೂಕ್ಷ್ಮತೆ, ಖಾಚಿತ್ಯನಿಲುವು ಹಾಗೂ ಅವರ ಅಪಾರ ಪ್ರತಿಭೆಯನ್ನು ಶ್ರುತಪಡಿಸುತ್ತವೆ.

ಮಹಾಪ್ರಸ್ಥಾನ: ವಿಕ್ರಮ ಸಂವತ್ಸರ ವೈಶಾಖಮಾಸ ಶುದ್ಧ ಏಕಾದಶೀ (14.05.2000) ಆ ದಿನ ವೇದವ್ಯಾಸ ಜಯಂತಿ. ಶ್ರೀಗಳಿಗೆ ಎಂಭತ್ತೇಳರ ಇಳಿವಯಸ್ಸು. 5 ದಿನಗಳಿಂದ ತೀರ್ಥ ಮಾತ್ರ ತೆಗೆದುಕೊಂಡಿದ್ದರು. ಕೆಲಹೊತ್ತಿನಲ್ಲಿ ತಮ್ಮ ಪ್ರಿಯಶಿಷ್ಯ ವಿದ್ಯಾಧೀಶತೀರ್ಥರನ್ನು ನೋಡನೋಡುತ್ತಲೇ ಇರುವಾಗ ಪ್ರಾಣದೇವರು ಇವರ ದೇಹದಿಂದ ದೂರವಾಯಿತು. ಆಗ ಸಮಯ ಸಂಜೆ 7.32. ಎಲ್ಲರ ಕಣ್ಣುಗಳಲ್ಲಿ ಕಂಬನಿ ಮಿಡಿಯಿತು. ಮಹಾಗುರುಗಳ ಪಾರ್ಥಿವ ಶರೀರವನ್ನು ಉಡುಪಿಯಿಂದ ಫಲಿಮಾರಿಗೆ ತಂದಾಗ ರಾತ್ರಿ 11.30. ಶಾಸ್ತ್ರೋಕ್ತ ರೀತಿಯಲ್ಲಿ ಶ್ರೀಪಾದಂಗಳವರ ಪಾರ್ಥಿವಶರೀರವನ್ನು ಸಮಾಧಿ ಮಾಡಲಾಯಿತು.

ತತ್ತ್ವವಾದದ ಮೇರುಶಿಖರವಾದ ಶ್ರೀವಿದ್ಯಾಮಾನ್ಯರು ಮುಗಿಲಿನೆತ್ತರದ ಪಾಂಡಿತ್ಯವನ್ನು ಹೊಂದಿದ್ದರು. ಆದರೆ ಮಗುವಿನಂಥ ಹೃದಯ ಅವರೊಳಗೆ ಮನೆಮಾಡಿಕೊಂಡಿತ್ತು. ಅಚ್ಯುತಪ್ರಜ್ಞರ ಸಂಸ್ಥಾನ ಮತ್ತು ಪೂರ್ಣಪ್ರಜ್ಞರ ಸಂಸ್ಥಾನವನ್ನು ಆಳಿದ ಏಕಮಾತ್ರ ಯತಿ ಇವರಾಗಿದ್ದರು. ಇವರು ವಿದ್ಯೆಯಿಂದ ಮಾನ್ಯರಾದರು, ವಿದ್ಯೆಯು ಇವರಿಂದ ಮಾನ್ಯವಾಯಿತು. ಎಷ್ಟೋ ಜನ ಯತಿಗಳು, ವಿದ್ವಾಂಸರು, ಶಿಷ್ಯರು ಇವರ ಕಣ್ಣಿನ ಬೆಳಕಿನಲ್ಲಿ ಪುನೀತರಾದರು. ಸದಾ ಅಧ್ಯಯನ-ಅನುಷ್ಠಾನ-ಪ್ರವಚನಗಳಿಂದ ಎಲ್ಲರ ಹೃದಯಕ್ಕೂ ಇವರು ಹತ್ತಿರವಾಗಿದ್ದರು. ಸಂಪ್ರದಾಯವಾದಿಗಳಾಗಿದ್ದರೂ ಮಹಾಕ್ರಾಂತಿಕಾರರೂ ಆಗಿದ್ದರು. ಹಳೆಯದನ್ನು ಒಪ್ಪಿ ಹೊಸತನ್ನು ಸ್ವಾಗತಿಸುವ ಹೃದಯ ವೈಶಾಲ್ಯ ಇವರದಾಗಿತ್ತು. ಉಡುಪಿ ಕ್ಷೇತ್ರದ ವಿಪುಲಸ್ತಂಭ ದೀಪಿಕೆಯಂತೆ 87 ವರ್ಷ ಸಾರ್ಥಕ ಯತಿಜೀವನವನ್ನು ಶ್ರೀಪಾದರು ನಡೆಸಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top