Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ತಡವಾಗಿದ್ದರೂ ದೃಢವಾಗಿರಲಿ

Tuesday, 21.03.2017, 9:20 AM       No Comments

ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ಕ್ರಾಂತಿಕಾರಕ ಬೆಳವಣಿಗೆಗಳಾಗುತ್ತಿದ್ದರೂ, ಆರೋಗ್ಯ ವಿಮೆ ಸೇರಿದಂತೆ ವಿನೂತನ ಉಪಕ್ರಮಗಳು ಆರೋಗ್ಯ ಸೇವೆಯಲ್ಲಿ ಲಭ್ಯವಿದ್ದರೂ, ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಶ್ರೀಸಾಮಾನ್ಯರಿಗೆ ಕೈಗೆಟುಕುವ ರೀತಿಯಲ್ಲಿ ದೊರಕುತ್ತಿಲ್ಲ ಎಂಬುದು ಕಹಿವಾಸ್ತವ. ಇದನ್ನು ಮನಗಂಡ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಆರೋಗ್ಯ ನೀತಿಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಸಂಗತಿಯೇ ಸರಿ. ಈ ಹಿಂದೆ 2002ರಲ್ಲಿ ಆರೋಗ್ಯ ನೀತಿಯ ಜಾರಿಯಾಗಿದ್ದು ಬಿಟ್ಟರೆ, ಒಂದೂವರೆ ದಶಕದವರೆಗೆ ಈ ವಲಯದೆಡೆಗೆ ಆಳುಗರ ಗಮನ ಹರಿದಿರಲಿಲ್ಲ. ತಡವಾಗಿಯಾದರೂ ಹೊಸ ಆರೋಗ್ಯನೀತಿಗೆ ಅನುಮೋದನೆ ದೊರೆತಿರುವುದರಿಂದಾಗಿ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಬಲವರ್ಧನೆಯಾಗಲಿದೆ ಎಂಬುದು ವಿಷಯತಜ್ಞರ ಅಭಿಮತ. ಕ್ಷಯ, ಟೈಫಾಯ್್ಡ ಮಧುಮೇಹ, ಮಲೇರಿಯಾ ಸೇರಿದಂತೆ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಎರಡೂ ಬಗೆಯ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಲೇ ಇರುವ, ಜಾಗತಿಕ ಆರೋಗ್ಯ ಅಧ್ಯಯನಕ್ಕೆ ಸಂಬಂಧಿಸಿದ 188 ದೇಶಗಳ ಯಾದಿಯಲ್ಲಿ ಭಾರತ 143ನೇ ಸ್ಥಾನದಲ್ಲಿರುವ ಕಳವಳಕಾರಿ ಬೆಳವಣಿಗೆಯ ಈ ಸಂದರ್ಭದಲ್ಲಿ ಈ ನೀತಿಗೆ ಅನುಮೋದನೆ ಸಿಕ್ಕಿರುವುದು ಶುಭಸೂಚಕವೆನ್ನಬಹುದು.

ಪ್ರಸವದ ಸಮಯದಲ್ಲಿ ಸಂಭವಿಸುವ ತಾಯಂದಿರ ಮತ್ತು ಶಿಶುಗಳ ಮರಣ ಪ್ರಮಾಣ ತಗ್ಗಿಸುವುದು ಮಾತ್ರವಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ರೋಗನಿದಾನ ಮತ್ತು ಔಷಧ ಚಿಕಿತ್ಸೆಯ ಸೇವೆ ಉಚಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಆರೋಗ್ಯನೀತಿಯ ಮಹದೋದ್ದೇಶ. ಭಾಷೆ, ಪ್ರಾದೇಶಿಕತೆ, ಜನಾಂಗದಂಥ ವಿಷಯಗಳಲ್ಲಿ ವೈವಿಧ್ಯದ ದೇಶವಾದ ಭಾರತದಲ್ಲಿ ಇನ್ನೂ ಬಹಳಷ್ಟು ಕಡೆ ತಜ್ಞ ವೈದ್ಯರಿರಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಸರ್ಕಾರ ಅನುಮೋದಿಸಿರುವ ಹೊಸ ಕಾರ್ಯನೀತಿ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಕಲ್ಪ ಹೊತ್ತಿರುವುದು ಗಮನಾರ್ಹ. ಸದ್ಯಕ್ಕೆ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ನಿವ್ವಳ ರಾಷ್ಟ್ರೀಯ ಉತ್ಪನ್ನದ ಶೇ. 1ರಷ್ಟು ಮೊತ್ತವನ್ನು ವಿನಿಯೋಗಿಸಲಾಗುತ್ತಿದ್ದು, ಇದನ್ನು ಶೇ. 2.5ಕ್ಕೆ ಹೆಚ್ಚಿಸುವ ಮತ್ತು ಶಿಕ್ಷಣದ ಹಕ್ಕಿನಂತೆ ಎಲ್ಲರಿಗೂ ಆರೋಗ್ಯ ಸೇವೆಗಳನ್ನೂ ಖಾತರಿಪಡಿಸುವ ಆಶಯ ಈ ಹೊಸ ಆರೋಗ್ಯನೀತಿಯದ್ದು. ಆದರೆ ನೀತಿಯ ಅನುಷ್ಠಾನ ಎಷ್ಟು ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ಆಗಲಿದೆ ಎಂಬುದರಲ್ಲಿ ಅದರ ಸಾರ್ಥಕ್ಯ ಅಡಗಿದೆ. ಆರೋಗ್ಯವನ್ನು ಮೂಲಭೂತ ಹಕ್ಕನ್ನಾಗಿಸಬೇಕು ಎಂದು ಕೆಲವರ ವಾದಿಸುತ್ತಾರಾದರೂ, ಅಂಥ ಹೆಜ್ಜೆಯಿಂದಷ್ಟೇ ಕಾರ್ಯಸಾಧನೆಯಾಗುತ್ತದೆಯೇ ಎಂಬ ಜಿಜ್ಞಾಸೆಯೂ ಇಲ್ಲದಿಲ್ಲ. ವೈದ್ಯಕೀಯ ವೃತ್ತಿಪ್ರವೀಣರ ಸೇವೆ ಗ್ರಾಮೀಣ ಪ್ರದೇಶಗಳಿಗೆ ಲಭ್ಯವಾಗುವುದೇ ದುಸ್ತರವಾಗಿದ್ದು, ಇದಕ್ಕೊಂದು ಸಮರ್ಪಕ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ.

ಹಾಗಂತ, ಇದೇನಿದ್ದರೂ ಸರ್ಕಾರದ ಹೊಣೆಗಾರಿಕೆ ಎಂದು ಸುಮ್ಮನಾಗದೆ ಖಾಸಗಿ ಸಹಭಾಗಿತ್ವವೂ ಈ ಸದಾಶಯದ ನೆರವೇರಿಕೆಗೆ ದಕ್ಕುವಂತಾಗಬೇಕು. ರೋಗ ನಿದಾನ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಕಲ್ಪಿಸುವುದರ ಜತೆಜತೆಗೆ, ರೋಗವನ್ನು ತಡೆಗಟ್ಟುವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ. ಸಂಪನ್ಮೂಲ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಬದ್ಧತೆ ಮೆರೆದರೆ, ಸರ್ವರಿಗೂ ಆರೋಗ್ಯ ಒದಗಿಸುವ ಸರ್ಕಾರದ ಸದಾಶಯ ಸಾಕಾರಗೊಳ್ಳುವುದು ಕಷ್ಟವೇನಲ್ಲ.

Leave a Reply

Your email address will not be published. Required fields are marked *

Back To Top