Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ತಟಸ್ಥ ವರ್ತನೆಯೇ ಸ್ಪೀಕರ್ ಹುದ್ದೆಯ ಸುವರ್ಣಸೂತ್ರ

Monday, 23.10.2017, 3:05 AM       No Comments

ಅದು 1975ರ ಕಾಲಘಟ್ಟ. 5ನೇ ಲೋಕಸಭೆಯ ಸ್ಪೀಕರ್ ಆಗಿದ್ದ ಡಾ. ಜಿ.ಎಸ್. ಧಿಲ್ಲೋನ್ ಅವರನ್ನು ಸದರಿ ಪದವಿಯಿಂದ ಕೆಳಗಿಳಿಯುವಂತೆ ಕೇಳಿದ ಅಂದಿನ ಪ್ರಧಾನಮಂತ್ರಿ, ತರುವಾಯದಲ್ಲಿ ಅವರನ್ನು ಹಡಗು ಸಾರಿಗೆ ಸಚಿವರನ್ನಾಗಿಸಿದರು; ಇದು ಭವಿಷ್ಯದಲ್ಲಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದವರು ಗುಟ್ಟಾಗಿ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದುವಂತಾಗುವುದಕ್ಕೆ ಅನುವುಮಾಡಿಕೊಟ್ಟ ಪೂರ್ವನಿದರ್ಶನವಾಗಿಬಿಟ್ಟಿತು.

‘ರಾಜಕೀಯದ ಲೇಪ’ವಿರುವಂತೆ ಹೊರತೋರಿಕೆಗೇ ಗೋಚರಿಸುವಂಥ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಶಾಸನಸಭೆಯ ಸಭಾಪತಿಗಳು ರಾಜಕೀಯ ಬಿಕ್ಕಟ್ಟೊಂದನ್ನು ಮತ್ತಷ್ಟು ತೀವ್ರವಾಗಿಸಿದಂಥ ನಿದರ್ಶನಗಳು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹೇರಳವಾಗಿ ಸಿಗುತ್ತವೆ. ಉದಾಹರಣೆಗೆ, ಪಕ್ಷಾಂತರ ಮಾಡುವ ಶಾಸನಸಭಾ ಪ್ರತಿನಿಧಿಯೊಬ್ಬನ ಸದಸ್ಯತ್ವದ ಅನರ್ಹತೆಗೆ ಅನುವುಮಾಡಿಕೊಡುವ ಮೂಲಕ ವೈಯಕ್ತಿಕ ನೆಲೆಗಟ್ಟಿನ ಪಕ್ಷಾಂತರವನ್ನು ನಿರ್ಬಂಧಿಸುವ ಆಶಯ ಹೊಂದಿರುವ ಪಕ್ಷಾಂತರ ನಿಷೇಧ ಕಾನೂನು, ಪಕ್ಷದ ನೆಲೆಗಟ್ಟಿನಲ್ಲಿ ವಿಭಜನೆಯಾಗುವುದಕ್ಕೆ (ಒಂದೊಮ್ಮೆ ಇಂಥ ಜನಪ್ರತಿನಿಧಿಗಳ ಸಂಖ್ಯೆಯು, ಶಾಸನಸಭೆಯಲ್ಲಿನ ಪಕ್ಷದ ಬಲಾಬಲದ ಮೂರನೇ ಒಂದರಷ್ಟಕ್ಕಿಂತ ಹೆಚ್ಚಿದ್ದಲ್ಲಿ ) ಅವಕಾಶ ನೀಡುತ್ತದೆ. ಪಕ್ಷಾಂತರದ ನಂತರ, ಜನಪ್ರತಿನಿಧಿಯೊಬ್ಬ ಒಂದೊಮ್ಮೆ ಅನರ್ಹತೆಗೆ ಒಳಪಡುತ್ತಾನೆಯೇ ಇಲ್ಲವೇ ಎಂಬುದರ ನಿರ್ಣಯವನ್ನು ಸದನದ ಕಲಾಪ ನಡೆಸುವಂಥ ‘ಅಗ್ರಾಸನದಲ್ಲಿರುವವರು’ ಕೈಗೊಳ್ಳುತ್ತಾರೆ. ಹೀಗಾಗಿ ಈ ನಿಟ್ಟಿನಲ್ಲಿ ‘ವಿವೇಚನಾಧಿಕಾರ’ ಚಲಾಯಿಸುವುದಕ್ಕೆ, ಅಂಥ ‘ತೀರ್ವನ ಸ್ವಾತಂತ್ರ್ಯ’ ಹೊಂದುವುದಕ್ಕೆ ಸ್ಪೀಕರ್​ಗಳಿಗೆ ವ್ಯಾಪಕ ಅವಕಾಶವಿರುತ್ತದೆ.

1998ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಘಟನೆಯೊಂದು ಇಲ್ಲಿ ಉಲ್ಲೇಖನೀಯ. ಪಕ್ಷದ ಸದಸ್ಯತ್ವವನ್ನು ತೊರೆದಿದ್ದಕ್ಕಾಗಿ ಎಐಎಡಿಎಂಕೆ ಪಕ್ಷಕ್ಕೆ ಸೇರಿದ್ದ 6 ಹಿರಿಯ ಸಚಿವರನ್ನು ಹಾಗೂ ಜಯಲಲಿತಾ-ಪರ ಬಣದೊಂದಿಗೆ ಗುರುತಿಸಿಕೊಂಡಿದ್ದ ಇತರ 27 ಶಾಸಕರನ್ನು (ಇವರು ವಿಶ್ವಾಸಮತ ಯಾಚನೆಯ ಗೊತ್ತುವಳಿಯ ಸಂದರ್ಭದಲ್ಲಿ ಹಾಜರಿರದುದ್ದಕ್ಕಾಗಿ ಅನರ್ಹಗೊಂಡರು) ಸ್ಪೀಕರ್ ಪಿ.ಎಚ್. ಪಾಂಡಿಯನ್ ಅನರ್ಹಗೊಳಿಸಿದರು. ಪಕ್ಷವನ್ನು ಅಧಿಕೃತವಾಗಿ ತೊರೆಯದಿದ್ದರೂ ಅಥವಾ ಅದರ ಮಾರ್ಗದರ್ಶಿ ಸೂತ್ರ-ಸೂಚನೆಗಳನ್ನು ಉಲ್ಲಂಘಿಸದಿದ್ದರೂ, ಅರುಣಾಚಲ ಪ್ರದೇಶ ವಿಧಾನಸಭೆಯ (ಆಡಳಿತಾರೂಢ ಪಕ್ಷದ ಒಟ್ಟು 41 ಸದಸ್ಯರ ಪೈಕಿ) 16 ಶಾಸಕರನ್ನು ಸ್ಪೀಕರ್ ನಬಂ ರೆಬಿಯಾ 2016ರಲ್ಲಿ ಅನರ್ಹಗೊಳಿಸಿದರು. ಇದೇ ರೀತಿಯಲ್ಲಿ, ಉತ್ತರಾಖಂಡ ವಿಧಾನಸಭಾ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರು, ಆಡಳಿತಾರೂಢ ಪಕ್ಷದ 9 ಶಾಸಕರನ್ನು 2016ರಲ್ಲಿ ಅನರ್ಹಗೊಳಿಸಿದರು; ಈ ಶಾಸಕರಾರೂ ಕಾಂಗ್ರೆಸ್ ಪಕ್ಷವನ್ನು ತೊರೆದಿರಲಿಲ್ಲ ಅಥವಾ ಶಾಸನಸಭೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿರಲಿಲ್ಲ ಎಂಬುದಿಲ್ಲಿ ಗಮನಿಸಬೇಕಾದ ಅಂಶ. ಇಷ್ಟೇ ಅಲ್ಲ, ಆಯವ್ಯಯವನ್ನು ವಿರೋಧಿಸುವ ‘ಅಸಮ್ಮತಿಸೂಚಕ’ ಟಿಪ್ಪಣಿಗಳ ಮೂಲಕ ಶಾಸಕರು ದನಿಯೆತ್ತಿದ್ದ ಸಂದರ್ಭದಲ್ಲಿ, ಮತದಾನ ನಡೆಯದಿದ್ದರು ಕೂಡ ‘ಆಯವ್ಯಯವು ಅನುಮೋದಿಸಲ್ಪಟ್ಟಿದೆ’ ಎಂದು ಸ್ಪೀಕರ್ ಘೋಷಿಸಿಬಿಟ್ಟರು! ಇನ್ನು ಮೇಘಾಲಯದ ಸ್ಪೀಕರ್ ಪಿ.ಕೆ. ಕ್ಯುಂಡಿಯಾ ವಿಚಾರಕ್ಕೆ ಬರೋಣ. 1992ರಲ್ಲಿ, ಮುಖ್ಯಮಂತ್ರಿ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಶಾಸನಸಭೆಯು ಚರ್ಚೆಗೆ ಕೈಗೆತ್ತಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಮುಂಚೆಯೇ, ಐವರು ಶಾಸಕರ ಮತದಾನದ ಹಕ್ಕುಗಳನ್ನು ಸದರಿ ಸ್ಪೀಕರ್ ರದ್ದುಪಡಿಸಿದ್ದು ಮಾತ್ರವಲ್ಲದೆ ತರುವಾಯದಲ್ಲಿ ಅವರನ್ನು ಅನರ್ಹಗೊಳಿಸಿಯೂಬಿಟ್ಟರು. ಪಕ್ಷಾಂತರ-ನಿಷೇಧ ಕಾಯ್ದೆಯಲ್ಲಿನ ‘ದುರ್ಬಲ ಅಂಶಗಳ’ ಕುರಿತಾಗಿ ವಿಷಾದಿಸಿ ಶಿವರಾಜ್ ಪಾಟೀಲರು, ಒಂದು ಸಲಕ್ಕೆ ಒಬ್ಬ ಶಾಸಕನಂತೆ ಪಕ್ಷ ವಿಭಜನೆಯು ಹಂತಹಂತವಾಗಿ ನಡೆಯುವಂಥದ್ದು ಎಂದು ಅಧಿಕೃತ ತೀರ್ಪಿತ್ತರು; ಪರಿಣಾಮವಾಗಿ ಪಕ್ಷಾಂತರ-ನಿಷೇಧ ಕಾಯ್ದೆಯು ಸತ್ವಹೀನವಾಗುವಂತಾಯಿತು.

ಈಗ ಐರ್ಲೆಂಡ್​ನ ಉದಾಹರಣೆಯನ್ನೇ ಪರಿಗಣಿಸೋಣ. ಇಲ್ಲಿನ ಸಂಸದೀಯ ವ್ಯವಸ್ಥೆ ಭಾರತೀಯ ವ್ಯವಸ್ಥೆಯೊಂದಿಗೆ ನಿಕಟವಾಗಿದ್ದು, ರಾಜಕೀಯ ಮಹತ್ವಾಕಾಂಕ್ಷೆಗಳನ್ನೆಲ್ಲ ತ್ಯಜಿಸಿ ಸುದೀರ್ಘ ಕಾಲದಿಂದ ವಿಶ್ವಾಸಾರ್ಹತೆ ದಕ್ಕಿಸಿಕೊಂಡಿರುವಂಥವರಿಗೆ ಅಲ್ಲಿ ಸ್ಪೀಕರ್ ಸ್ಥಾನಮಾನವನ್ನು ನೀಡಲಾಗುತ್ತದೆ. ಇಂಗ್ಲೆಂಡ್​ನ ‘ವೆಸ್ಟ್​ಮಿನಿಸ್ಟರ್’ ಸಂಸದೀಯ ವ್ಯವಸ್ಥೆಯು, ಸ್ಪೀಕರ್ ಓರ್ವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವುದನ್ನು ‘ನಿಷಿದ್ಧ ಪರಿಪಾಠ’ ಎಂದೇ ಪರಿಗಣಿಸುತ್ತದೆ. ಅಮೆರಿಕದಲ್ಲಿ ಮಾತ್ರವೇ, ಸ್ಪೀಕರ್ ಎನಿಸಿಕೊಂಡವರು ಸಕ್ರಿಯ ರಾಜಕಾರಣದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶವಿದೆ; ಅಲ್ಲಿನ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ವ್ಯವಸ್ಥೆಗಳ ನಡುವಿನ ಅಧಿಕಾರ ಹಂಚಿಕೆಗಳಲ್ಲಿ ಕಟ್ಟುನಿಟ್ಟಿನ ಪ್ರತ್ಯೇಕತೆ ಇರುವುದೇ ಇದಕ್ಕೊಂದು ಕಾರಣವೆನ್ನಬಹುದು. ಸ್ಪೀಕರ್ ಹುದ್ದೆಯಲ್ಲಿ ತೋರಿದ ಸಾಧನೆ ಭವಿಷ್ಯದಲ್ಲಿ ‘ಮಹತ್ವದ’ ಪ್ರತಿಫಲಗಳು ದಕ್ಕುವಂತಾಗುವುದು, ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗಿರುವ ಒಂದು ಏಣಿ ಅಥವಾ ಸಾಧನೋಪಾಯವಾಗಿ ಸ್ಪೀಕರ್ ಸ್ಥಾನವನ್ನು ರೂಪಾಂತರಿಸಿಬಿಟ್ಟಿದೆ ಎನ್ನಲಡ್ಡಿಯಿಲ್ಲ.

ಇನ್ನು ಸ್ಪೀಕರ್​ರಿಂದ ಹೊಮ್ಮುವ ಅಧಿಕೃತ ನಿರ್ಣಯಗಳ ಕಡೆಗೊಮ್ಮೆ ಗಮನಹರಿಸೋಣ. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನಮಾನವು ವಿರೋಧಾಭಾಸವನ್ನು ಒಳಗೊಂಡಿರುವಂಥದ್ದು ಎಂದರೆ ಅತಿಶಯೋಕ್ತಿಯಲ್ಲ. ಈ ಸ್ಥಾನವನ್ನು ಅಲಂಕರಿಸಿದವರು (ಅದು ಸಂಸತ್ತೇ ಇರಲಿ ಅಥವಾ ರಾಜ್ಯ ವಿಧಾನಸಭೆಗಳೇ ಇರಲಿ) ಸದರಿ ಹುದ್ದೆಗಾಗಿರುವ ಚುನಾವಣೆಯಲ್ಲಿ ಪಕ್ಷವೊಂದರ ಟಿಕೆಟ್ ಆಧಾರದ ಮೇಲೆ ಸ್ಪರ್ಧಿಸುತ್ತಾರೆ, ಮತ್ತು ಇಷ್ಟಾಗಿಯೂ ಅವರು ‘ನಿಷ್ಪಕ್ಷಪಾತವಾಗಿ’ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತದೆ; ಮುಂದಿನ ಚುನಾವಣಾ ಸ್ಪರ್ಧೆಗೆ ದಕ್ಕುವ ಟಿಕೆಟ್ ಕಾರಣದಿಂದಾಗಿ ಅವರು ಪಕ್ಷದೆಡೆಗೆ ‘ಉಪಕೃತ-ಭಾವ’ ಹೊಂದಿರುತ್ತಾರೆ ಎಂಬುದರ ಹೊರತಾಗಿಯೂ ಇಂಥದೊಂದು ನಿರೀಕ್ಷೆಯಿರುತ್ತದೆ! ಬಿಹಾರದಲ್ಲಿ ಜೆಡಿಯು ಪಕ್ಷದೊಂದಿಗೆ ‘ಸಮ್ಮಿಶ್ರ ಸರ್ಕಾರದ ಧರ್ಮ’ವನ್ನು ಕಾಯ್ದುಕೊಳ್ಳಬೇಕಾದ ಬದ್ಧತೆಯ ಕುರಿತಾಗಿ ತೇಜಸ್ವಿ ಯಾದವ್​ರನ್ನು ಕೇಳಿದಾಗ, ‘ಸರ್ಕಾರವು ಉಳಿದುಕೊಂಡಿರಲು ಅದರ ಮೇಲೆ ಒತ್ತಡ ಹೇರುವ ಆಶಯವೇನಾದರೂ ನಮಗೆ ಇದ್ದಿದ್ದಲ್ಲಿ, ಸ್ಪೀಕರ್ ಹುದ್ದೆಯನ್ನು ನಮ್ಮ ಬಳಿಯೇ ಉಳಿಸಿಕೊಂಡಿರುತ್ತಿದ್ದೆವು’ ಎಂದು ಉತ್ತರಿಸಿದ್ದು ಈ ಗ್ರಹಿಕೆ ದಕ್ಕಿದ ಧ್ವನಿಯೆನ್ನಬೇಕು.

ಆದ್ದರಿಂದ, ಪಕ್ಷಾಂತರ ನಿಷೇಧ ಕಾನೂನಿಗೆ ಸಂಬಂಧಿಸಿದಂತಿರುವ ಸಗ್ರಹಿಕೆಗಳಲ್ಲಿ ಮಹತ್ತರವಾದ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಿರುವುದರ ಅಗತ್ಯವನ್ನು ಇಂಥ ನಿದರ್ಶನಗಳು ಎತ್ತಿಹಿಡಿಯುತ್ತವೆ ಎನ್ನಲಡ್ಡಿಯಿಲ್ಲ. ಜನಪ್ರತಿನಿಧಿಯ ಅನರ್ಹತೆಗೆ ಸಂಬಂಧಿಸಿದ ಇಂಥ ನಿರ್ಣಾಯಕ ತೀರ್ವನಗಳನ್ನು ಸ್ಪೀಕರ್ ಬದಲಿಗೆ, ಚುನಾವಣಾ ಆಯೋಗದಿಂದ ದಕ್ಕುವ ಪೂರಕ ಮಾಹಿತಿಗಳ ನೆರವಿನೊಂದಿಗೆ ರಾಷ್ಟ್ರಪತಿಗಳೇ ಕೈಗೊಳ್ಳುವಂತಾದರೆ, ಅದು ಪ್ರಾಯಶಃ ಮತ್ತಷ್ಟು ಉತ್ತಮ ಬೆಳವಣಿಗೆಯಾದೀತು.

ಸ್ಪೀಕರ್ ಕೈಗೊಳ್ಳುವ ನಿರ್ಣಯಗಳಿಗಿರುವ ನಿರಂಕುಶತ್ವವು, ಸಂಭಾವ್ಯ ದುರುಪಯೋಗಕ್ಕೂ ಒಂದು ಉತ್ತೇಜಕ ಅಂಶವಾಗಿ ಪರಿಣಮಿಸಬಹುದು. 2016ರಲ್ಲಿ ತಮಿಳುನಾಡು ವಿಧಾನಸಭೆ ಸಾಕ್ಷಿಯಾದ ಘಟನೆಯೊಂದು ಇಲ್ಲಿ ಉಲ್ಲೇಖನೀಯ. ಶಾಸನಸಭೆಯ ಬಹುತೇಕ ಎಲ್ಲ ಸದಸ್ಯರನ್ನು ಅಮಾನತುಗೊಳಿಸಿದ, ಪ್ರತಿಭಟನಾನಿರತರಾಗಿದ್ದ ಡಿಎಂಕೆ ಪಕ್ಷದ ಸದಸ್ಯರನ್ನು ಸಾಮೂಹಿಕವಾಗಿ ಸದನದಿಂದ ಹೊರಹಾಕಿದ ನಿದರ್ಶನಗಳು ನಮ್ಮ ಪ್ರಜಾಪ್ರಭುತ್ವದ ಆರೋಗ್ಯದ ಕುರಿತಾದ ನಿರ್ಣಾಯಕ ಪ್ರಶ್ನೆಗಳನ್ನು ಎತ್ತುತ್ತವೆ ಎನ್ನಲಡ್ಡಿಯಿಲ್ಲ.

ಆದ್ದರಿಂದ, ಸ್ಪೀಕರ್ ಹುದ್ದೆಗೆ ಮೆತ್ತಿಕೊಂಡಿರುವ ಪಕ್ಷಾವಲಂಬನೆ ಅಥವಾ ಪಕ್ಷಪಾತಿ ವರ್ತನೆಯನ್ನು ಇಲ್ಲವಾಗಿಸಲು, ಇತರ ಔಪಚಾರಿಕ ರೀತಿನೀತಿಗಳ ಪ್ರಮಾಣೀಕರಣ ಅತ್ಯಗತ್ಯವಾಗಿದೆ. 1996ರವರೆಗೆ ಲೋಕಸಭೆಯ ಸ್ಪೀಕರ್ ಎನಿಸಿಕೊಂಡವರು ಆಡಳಿತಾರೂಢ ಪಕ್ಷಕ್ಕೆ ಸೇರಿದವರೇ ಆಗಿರುವಂಥ ಪರಿಸ್ಥಿತಿಯಿತ್ತು. ಕಾಂಗ್ರೆಸ್ ಪಕ್ಷದ ಪಿ.ಎ. ಸಂಗ್ಮಾ ಅವರು ಈ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಯಾಗುವುದರೊಂದಿಗೆ, ಆಡಳಿತಾರೂಢ ಪಕ್ಷಕ್ಕೆ ಹೊರತಾದ ಮತ್ತೊಂದು ಪಕ್ಷಕ್ಕೆ ಸೇರಿದವರೊಬ್ಬರು ಸ್ಪೀಕರ್ ಆಗುವಂಥ ಮತ್ತೊಂದು ಸಂಪ್ರದಾಯ ರೂಢಿಗೆ ಬಂತು. ಅಲ್ಲಿಂದೀಚೆಗೆ ಮತ್ತದೇ ಹಳೇ ಸಂಪ್ರದಾಯ ಚಾಲ್ತಿಗೆ ಬಂದು, ಆಡಳಿತಾರೂಢ ಒಕ್ಕೂಟಕ್ಕೆ ಸೇರಿದವರೇ ಸ್ಪೀಕರ್ ಆಗುವುದನ್ನು ಕಾಣುತ್ತಿದ್ದೇವೆ.

ಈ ಚರ್ಚಾವಿಷಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಹೇಳಬೇಕಾದುದಿಷ್ಟೇ- ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಡ್ಡಿಕೊಂಡಿರುವ ನಾವು, ಸ್ಪೀಕರ್ ಹುದ್ದೆ ಅಲಂಕರಿಸಿರುವವರಲ್ಲಿ ‘ಎರಡೂ ಪಕ್ಷಗಳಿಗೆ ಸೇರದ ತಟಸ್ಥ ಧೋರಣೆ’ಯನ್ನು ನಿರೀಕ್ಷಿಸುವಂತಾಗಬೇಕು ಮತ್ತು ಅಂಥದೊಂದು ಸ್ಥಿತಿಯನ್ನು ಪ್ರವರ್ತಿಸುವಂತಾಗಬೇಕು. ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಸಂಸದರ ಪಟ್ಟಿಯಲ್ಲಿ ಸ್ಪೀಕರ್ ಅವರ ಹೆಸರಿರುವಂಥ ನಿದರ್ಶನಗಳು (2008ರ ಮಧ್ಯಭಾಗದಲ್ಲಿ ಸೋಮನಾಥ ಚಟರ್ಜಿಯವರು ಇಂಥದೇ ಸನ್ನಿವೇಶದಲ್ಲಿ ಸಿಲುಕಿದ್ದರು; ತರುವಾಯದಲ್ಲಿ ಅವರು ವಿಶ್ವಾಸಮತ ಯಾಚನೆಯ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಸಮ್ಮತಿಸದೆ ಪಕ್ಷ ನೀಡಿದ್ದ ಸೂಚನೆಯನ್ನು ಧಿಕ್ಕರಿಸಿದರು) ತಪು್ಪವಂತಾಗಬೇಕು; ತನ್ಮೂಲಕ, ಸ್ಪೀಕರ್​ಗೆ ಇರಬೇಕಾದ ‘ತಾಟಸ್ಥ್ಯ’ದ ಮೇಲೆ ಅತಿಕ್ರಮಣವಾಗುವುದನ್ನು ತಡೆಗಟ್ಟಬೇಕು. ಆದರೆ, ಇಂಥ ತಟಸ್ಥ ವರ್ತನೆ ತೋರಿದವರ ಮೇಲೆ ಪಕ್ಷದಿಂದ ‘ಉಚ್ಚಾಟನೆಯ ಅಸ್ತ್ರ’ ಪ್ರಯೋಗವಾಗುವಂತಾಗಬಾರದು. ಆದರೆ ಅದು ಆದದ್ದಿದೆ- ಅವಿಶ್ವಾಸದ ನಡಾವಳಿಯನ್ನು ಜಯಿಸಿ ಸರ್ಕಾರ ಬದುಕುಳಿದ ನಂತರ, ‘ಪಕ್ಷದ ಶಿಷ್ಟಾಚಾರ/ನೀತಿ-ನಿಯಮಗಳ ಉಲ್ಲಂಘನೆಯಾಗಿದೆ’ ಎಂಬ ನೆಪವೊಡ್ಡಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್​ವಾದಿ)ವು ಸೋಮನಾಥ ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಇಂಥದೊಂದು ವಿಷಾದಕರ ನಿದರ್ಶನ. ಪಕ್ಷದ ಬಂಗಾಳ ಘಟಕದ ಕಾರ್ಯದರ್ಶಿ ಬಿಮನ್ ಬೋಸ್ ಈ ಕುರಿತಂತೆ ಮಾತನಾಡುತ್ತ, ‘ಚಟರ್ಜಿಯವರು ಭಾರತೀಯ ಸಂವಿಧಾನದ ಅನುಸಾರ ನಡೆದುಕೊಂಡಿರಬಹುದು, ಆದರೆ ಪಕ್ಷ ಸಂವಿಧಾನವೆಂಬುದು ಪಕ್ಷದ ಸದಸ್ಯರ ಪಾಲಿಗೆ ಪರಮೋಚ್ಚವಾಗಿರುತ್ತದೆ’ ಎಂದಿದ್ದು ನಮ್ಮ ಪ್ರಜಾಸತ್ತಾತ್ಮಕ ಚಿತ್ತಕ್ಕೆ ಒದಗಿರುವ ಸ್ಥಿತಿಯ ಪ್ರತಿಬಿಂಬ ಎನ್ನಲಡ್ಡಿಯಿಲ್ಲ. ಸ್ಪೀಕರ್ ಹುದ್ದೆಗಿರಬೇಕಾದ ತಟಸ್ಥ ಅಥವಾ ನಿಷ್ಪಕ್ಷಪಾತಿ ವರ್ತನೆಗೆ ಮರುಜನ್ಮ ಸಿಗಬೇಕೆಂದರೆ, ಇಂಥ ನಿರೀಕ್ಷೆಗಳು ಮೊದಲು ಬದಲಾಗಬೇಕು.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *

Back To Top