Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಡೋಕ್ಲಂನಲ್ಲಿ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂದ ಚೀನಾ

Wednesday, 06.09.2017, 3:03 AM       No Comments

| ಪ್ರೇಮಶೇಖರ

ಭಾರತದ ಸಂಯೋಜಿತ ರಾಜತಾಂತ್ರಿಕ ಕಾರ್ಯತಂತ್ರದ ಫಲವಾಗಿ ಚೀನಾ ಸೇನೆ ಡೋಕ್ಲಂನ ವಿವಾದಿತ ಪ್ರದೇಶದಿಂದ ಹಿಂದೆಗೆದಿದೆ. ಆದರೆ ಚೀನೀ ಅಧ್ಯಕ್ಷ ಜಿನ್​ಪಿಂಗ್ ಈಗ ಹೆಡೆತುಳಿದ ಹಾವಾಗಿರುವುದರಿಂದ ಮುಂದೆ ಆ ದೇಶ ಮತ್ತೆಲ್ಲೋ ಕ್ಯಾತೆ ತೆಗೆಯುವ ಸಾಧ್ಯತೆಗಳು ಇದ್ದೇ ಇವೆ.

 ಇಡೀ ಎಪ್ಪತ್ತಮೂರು ದಿನಗಳು ಡೋಕ್ಲಂ ಪ್ರಸ್ತಭೂಮಿಯಲ್ಲಿ ಎದುರುಬದುರಾಗಿ ನಿಂತು ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳ ನಡುವೆ ಯುದ್ಧದ ಭೀತಿಯನ್ನು ಮೂಡಿಸಿದ್ದ ಭಾರತೀಯ ಹಾಗೂ ಚೀನೀ ಸೇನೆಗಳು ಆಗಸ್ಟ್ 28ರಂದು ವಿವಾದಿತ ಪ್ರದೇಶದಿಂದ ಹೊರನಡೆದಿವೆ. ಈ ಬಗ್ಗೆ ಆ ದಿನ ಬೆಳಗ್ಗೆ ಎರಡೂ ಸೇನೆಗಳ ಕರ್ನಲ್​ಗಳು ಫ್ಲಾಗ್ ಮೀಟಿಂಗ್​ನಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಅದೇ ಮಧ್ಯಾಹ್ನ ಎರಡೂ ದೇಶಗಳ ವಿದೇಶಾಂಗ ಮಂತ್ರಾಲಯಗಳು ಅಧಿಕೃತತೆಯ ಮುದ್ರೆಯೊತ್ತಿದವು. ಆದರೆ, ಡೋಕ್ಲಂ ಗಂಡಾಂತರ ಅಂತ್ಯವಾಯಿತೆಂದು ಘೊಷಿಸಿದರೂ ಅದಾದದ್ದು ಹೇಗೆ, ಮುಂದೇನಾಗಲಿದೆ ಎನ್ನುವ ಬಗ್ಗೆ ಎರಡೂ ಸರ್ಕಾರಗಳ ಹೇಳಿಕೆಗಳಲ್ಲಿ ಅಜಗಜಾಂತರ ಅಂತರವಿತ್ತು. ವಿವಾದಿತ ಪ್ರದೇಶದಲ್ಲಿನ ಸೇನಾಜಮಾವಣೆಯನ್ನು ನಿಲುಗಡೆಗೆ ತರುವ ಬಗ್ಗೆ ಎರಡೂ ಪಕ್ಷಗಳು ಒಪ್ಪಂದಕ್ಕೆ ಬಂದಿರುವುದಾಗಿಯೂ, ಅದರ ಪ್ರಕಾರ ಎರಡೂ ಪಡೆಗಳು ದೂರ ಸರಿಯುವ ಪ್ರಕ್ರಿಯೆ ಆರಂಭವಾಗಿದೆಯೆಂದೂ ಭಾರತದ ವಿದೇಶಾಂಗ ಇಲಾಖೆ ತಿಳಿಸಿದರೆ ಬೀಜಿಂಗ್​ನಿಂದ ಹೊರಟ ರಾಗವೇ ಬೇರೆ. ಚೀನೀ ವಿದೇಶಾಂಗ ಇಲಾಖೆಯ ವಕ್ತಾರೆ ‘ಕಾನೂನುಬಾಹಿರವಾಗಿ ಚೀನೀ ನೆಲದಲ್ಲಿದ್ದ ತನ್ನ ಸೈನಿಕರು ಹಾಗೂ ಉಪಕರಣಗಳನ್ನು ಭಾರತ ತನ್ನ ಎಲ್ಲೆಯೊಳಗೆ ಕೊಂಡೊಯ್ದಿದೆ… ಚೀನೀ ಸೈನಿಕರು ದೊಂಗ್ ಲಾಂಗ್ (ಡೋಕ್ಲಂಗೆ ಚೀನೀಯರು ಇಟ್ಟಿರುವ ಹೆಸರು) ಪ್ರದೇಶದಲ್ಲಿ ಪಹರೆ ನಡೆಸುತ್ತಿದ್ದಾರೆ‘ಎಂದರು. ನಂತರ ಈ ಮಾತುಗಳನ್ನೇ ಚೀನೀ ವಿದೇಶಾಂಗ ಮಂತ್ರಿ ವಾಂಗ್ ಯಿ ಪುನರುಚ್ಚರಿಸಿದರು.

ಈ ಕುಹಕಿ ಹೇಳಿಕೆಯ ಪ್ರಕಾರ ಡೋಕ್ಲಂನಿಂದ ಭಾರತೀಯ ಸೈನಿಕರು ಮಾತ್ರ ಹೊರನಡೆದಿದ್ದಾರೆ, ಚೀನೀಯರು ಅಲ್ಲೇ ಇದ್ದಾರೆ, ಅಂದರೆ ಇದರರ್ಥ ಚೀನೀ ನಿಲುವನ್ನು ಮನ್ನಿಸಿ ಭಾರತ ಚೀನಾಗೆ ತಲೆಬಾಗಿ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ ಎಂದು! ಇದೆಂತಹಾ ಸುಳ್ಳೆಂದು ಜಗತ್ತಿಗೆ ಗೊತ್ತಾಗಲು ಕೆಲವೇ ಕ್ಷಣಗಳು ಸಾಕಾದವು.

ಭಾರತ, ಭೂತಾನ್ ಹಾಗೂ ಚೀನಾದ ಗಡಿಗಳು ಸಂಧಿಸುವ ಡೋಕ್ಲಂ ಪ್ರಸ್ಥಭೂಮಿ ಭೂತಾನ್ ಮತ್ತು ಚೀನಾಗಳ ನಡುವಿನ ವಿವಾದಿತ ಪ್ರದೇಶ. ವಿವಾದ ಅಂತಿಮವಾಗಿ ಇತ್ಯರ್ಥವಾಗುವವರೆಗೆ ವಸ್ತುಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಯಾವುದೇ ದೇಶ ಪ್ರಯತ್ನಿಸಕೂಡದೆಂದು ಆ ಎರಡೂ ದೇಶಗಳು 1988 ಮತ್ತು 1998ರಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿವೆ. ಹಾಗೆಯೇ ತ್ರಿಸಂಧಿ ಪ್ರದೇಶಕ್ಕೆ ಸಂಬಂಧಿಸಿದಂತೆ ಮೂರನೆಯ ದೇಶದ ಅನುಮತಿ ಇಲ್ಲದೇ ವಸ್ತುಸ್ಥಿತಿಯನ್ನು ಬದಲಾಯಿಸಕೂಡದೆಂದು ಭಾರತ ಹಾಗೂ ಚೀನಾ 2012ರಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಆದರೆ ಚೀನಾ ಈ ಒಪ್ಪಂದಗಳೆಲ್ಲವನ್ನೂ ಗಾಳಿಗೆ ತೂರಿ ಡೋಕ್ಲಂನಲ್ಲಿ ತನಗನುಕೂಲವಾಗುವಂತೆ ರಸ್ತೆ ನಿರ್ವಿುಸಲು ಆರಂಭಿಸಿದಾಗ ಅಲ್ಲಿಂದ ಕೇವಲ 230 ಅಡಿಗಳಷ್ಟು ದೂರದಲ್ಲಿ ನೆಲೆಗೊಂಡಿದ್ದ ಭಾರತೀಯ ಸೇನೆ ಗಡಿ ದಾಟಿ ಡೋಕ್ಲಂ ಪ್ರವೇಶಿಸಿ ಚೀನೀಯರ ಕೃತ್ಯವನ್ನು ಪ್ರಶ್ನಿಸಿತು. ಇಂತಹದೊಂದು ಸನ್ನಿವೇಶ ಎದುರಾಗುತ್ತದೆಂಬ ನಿರೀಕ್ಷೆ ಭಾರತೀಯ ಸೇನೆಗಿತ್ತು. ಚೀನಾ ತಾನು ಹದಿನೈದು ದಿನಗಳ ನಂತರ ಡೋಕ್ಲಂನಲ್ಲಿ ರಸ್ತೆ ನಿರ್ವಣದ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಭಾರತಕ್ಕೆ ಜೂನ್ 1ರಂದೇ ತಿಳಿಸಿತ್ತು. ಈಗಾಗಲೇ ಇರುವ ಒಪ್ಪಂದಗಳಿಗೆ ಇದು ವಿರುದ್ಧವಾಗುತ್ತದೆಂಬ ಭಾರತದ ವಿವೇಕಯುತ ಸಲಹೆಯನ್ನು ಚೀನಾ ನಿರ್ಲಕ್ಷಿಸಿ ರಸ್ತೆ ನಿರ್ವಣವನ್ನು ಆರಂಭಿಸಿಯೇಬಿಟ್ಟಾಗ ಭಾರತೀಯ ಸೇನೆಗೆ ಅದನ್ನು ಪ್ರಶ್ನಿಸದೇ ಬೇರೆ ದಾರಿಯೇ ಇರಲಿಲ್ಲ. ಪ್ರತಿಕ್ರಿಯೆಯಾಗಿ ಚೀನೀಯರು ಉದ್ಧಟತನ ತೋರಿದಾಗ ಭಾರತೀಯ ಸೈನಿಕರು ರಸ್ತೆ ನಿರ್ವಣಕ್ಕೆ ಅವಕಾಶ ನೀಡುವುದಿಲ್ಲವೆಂದು ಡೋಕ್ಲಂನಲ್ಲಿ ಪಟ್ಟಾಗಿ ನಿಂತುಬಿಟ್ಟರು. ಇದು ವಿವಾದದ ಮೂಲ.

ಭಾರತದಿಂದ ಇಂತಹ ಉಗ್ರ ಪ್ರತಿಕ್ರಿಯೆಯನ್ನು ಚೀನಾ ನಿರೀಕ್ಷಿಸಿರಲಿಲ್ಲ. ಡೋಕ್ಲಂ ಮೇಲೆ ಚೀನಾದ ಸಾರ್ವಭೌಮತ್ವವಿದೆಯೆಂದು ಉಚ್ಚಕಂಠದಲ್ಲಿ ಕೂಗತೊಡಗಿದ ಚೀನೀ ವಿದೇಶಾಂಗ ಇಲಾಖೆ ಭಾರತದ ಕೃತ್ಯವನ್ನು ಅತಿಕ್ರಮಣ, ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ ಎಂದೆಲ್ಲಾ ಬಣ್ಣಿಸುತ್ತಾ, ಸೇನಾ ಕಾರ್ಯಾಚರಣೆಯ ಬೆದರಿಕೆಯೊಡ್ಡತೊಡಗಿದರೆ ಸರ್ಕಾರಿ ಒಡೆತನದ ಚೀನೀ ಮಾಧ್ಯಮಗಳು, 1962ರ ಯುದ್ಧವನ್ನು ನೆನಪಿಸಿ ಭಾರತದ ಮನಸ್ಥೈರ್ಯ ಕುಂದಿಸುವ ಪ್ರಯತ್ನದಲ್ಲಿ ತೊಡಗಿಕೊಂಡವು. ಆದರೆ ಇದಾವುದಕ್ಕೂ ಭಾರತದ ರಾಜಕೀಯ ನಾಯಕತ್ವ ಹಾಗೂ ಸೇನೆ ಸೊಪ್ಪುಹಾಕಲಿಲ್ಲ. ಚೀನೀಯರ ರಸ್ತೆ ನಿರ್ವಣವನ್ನು ಭೂತಾನ್ ಅಧಿಕೃತ ಹೇಳಿಕೆಯ ಮೂಲಕ ಪ್ರತಿಭಟಿಸಿದ್ದು ಹಾಗೂ ಭೂತಾನ್​ನ ರಕ್ಷಣೆಗೆ ಭಾರತ ಒಪ್ಪಂದದ ಮೂಲಕ ಬದ್ಧವಾಗಿರುವುದು ಭಾರತದ ಬೆನ್ನಿಗಿತ್ತು. ಅಲ್ಲದೇ, ಡೋಕ್ಲಂನಲ್ಲಿ ಆಯಕಟ್ಟಿನ ರಸ್ತೆ ನಿರ್ವಿುಸಿಕೊಂಡು ಚೀನಾವೇನಾದರೂ ದಕ್ಷಿಣದ ಝುಂಪೇರಿ ಬೆಟ್ಟಗಳ ನೆತ್ತಿಯ ಮೇಲೆ ಸೇನಾಠಿಕಾಣೆ ಸ್ಥಾಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿಬಿಟ್ಟರೆ ಅಲ್ಲಿಗೆ ಪೂರ್ವೇತ್ತರ ಭಾರತದ ಸುರಕ್ಷೆ ಹಾನಿಗೀಡಾಗುತ್ತದೆಂಬ ಸರಳ ಸತ್ಯ ಭಾರತೀಯ ನಾಯಕತ್ವಕ್ಕೆ ಗೊತ್ತೇ ಇತ್ತು. ಯಾಕೆಂದರೆ ಝುಂಪೇರಿ ಬೆಟ್ಟಗಳ ನೆತ್ತಿಯಿಂದ ನೈರುತ್ಯ ಭೂತಾನ್ ಹಾಗೂ ಉತ್ತರ ಬಂಗಾಲಕ್ಕೆ ಇಳಿಜಾರಿನ ಹಾದಿ.

ಅತ್ತ ಚೀನಾ ಯುದ್ಧದ ಮಾತಾಡತೊಡಗಿದರೆ ಇತ್ತ ಭಾರತದಿಂದ ಹೊರಟದ್ದು ರಾಜತಾಂತ್ರಿಕ ಮಾತುಕತೆಗಳ ಮೂಲಕವಷ್ಟೇ ಪರಿಹಾರ ಹುಡುಕಿಕೊಳ್ಳುವ ವಿವೇಕಯುತ ನಿಲುವು. ಆದರೆ ಚೀನಾಗೆ ಇದು ರುಚಿಸಿದಂತೆ ಕಾಣಲಿಲ್ಲ. ಡೋಕ್ಲಂ ಬಿಕ್ಕಟ್ಟು ಆರಂಭವಾದ ಎರಡುವಾರಗಳಲ್ಲಿ ಜರ್ಮನಿಯ ಹ್ಯಾಂಬರ್ಗ್​ನಲ್ಲಿ ನಡೆದ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಝಿ ಜಿನ್​ಪಿಂಗ್ ಮುಖಾಮುಖಿಯಾದರು. ಆಗ ಮೋದಿಯವರ ಜತೆ ಅನಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಲು ಜಿನ್​ಪಿಂಗ್ ಬಿಂಕ ಬಿಗುಮಾನ ತೋರಿದರು. ಕೊನೆಗೂ ಅವರು ಮಾತಿಗೆ ಬಂದಾಗ ಮೋದಿ ಹೇಳಿದ್ದು ರಾಷ್ಟ್ರಿಯ ಸುರಕ್ಷಾ ಸಲಹೆಗಾರರ ಮಟ್ಟದಲ್ಲಿ ಮಾತುಕತೆ ನಡೆಯಲಿ, ಅದೇ ಸರಿಯಾದ ಮಾರ್ಗ ಎಂದು. ನಂತರ ಚೀನೀ ಕಮ್ಯೂನಿಸ್ಟರು ವರ್ತಿಸಿದ್ದು ತಮಗೇ ವಿಶಿಷ್ಟವಾದ ಇಬ್ಬಗೆಯಲ್ಲಿ.

1959ರಲ್ಲಿ ಮಾವೋ ಝೆ ಡಾಂಗ್ ಹಾಗೂ ಝೌ ಎನ್ ಲೈ ದಿನನಿತ್ಯದ ವ್ರತದಂತೆ ಅಮೆರಿಕಾ ವಿರುದ್ಧ ಕಹಿ ಕಾರುತ್ತಿದ್ದರೆ ಅತ್ತ ಪೋಲೆಂಡಿನ ರಾಜಧಾನಿ ವಾರ್ಸಾದಲ್ಲಿ ಚೀನೀ ರಾಜತಂತ್ರಜ್ಞರು ದ್ವಿಪಕ್ಷೀಯ ಸಂಬಂಧವೃದ್ಧಿಯ ಬಗ್ಗೆ ಅಮೆರಿಕನ್ ರಾಜತಂತ್ರಜ್ಞರ ಜತೆ ರಹಸ್ಯ ಮಾತುಕತೆಯಲ್ಲಿ ನಿರತರಾಗಿದ್ದರು! ಪ್ರಸಕ್ತ ಸನ್ನಿವೇಶದಲ್ಲೂ ಚೀನೀಯರು ಮಾಡಿದ್ದು ಇದನ್ನೇ. ಡೋಕ್ಲಂ ಪರಿಹಾರಕ್ಕೆ ಯುದ್ಧವೊಂದೇ ಸೂಕ್ತ ಮಾರ್ಗ ಎಂದು ಚೀನೀ ವಿದೇಶಾಂಗ ಇಲಾಖೆ ಹಾಗೂ ಪತ್ರಿಕೆಗಳು ಗಟ್ಟಿಗಂಟಲಿನಲ್ಲಿ ಹೇಳತೊಡಗಿದವು. ಒಂದು ಹಂತದಲ್ಲಂತೂ ಚೀನೀ ವಿದೇಶಾಂಗ ಇಲಾಖೆ ಬೀಜಿಂಗ್​ನಲ್ಲಿನ ಅಮೆರಿಕಾ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್​ನ ರಾಯಭಾರಿಗಳನ್ನು ಕರೆದು ಇನ್ನೊಂದು ವಾರದಲ್ಲಿ ಯುದ್ಧ ಆರಂಭವಾಗಬಹುದು ಎಂಬ ಸೂಚನೆಯನ್ನೂ ನೀಡಿತು. ಆದರೆ ಇದೆಲ್ಲವೂ ತೋರಿಕೆಯಷ್ಟೇ. ತೆರೆಯ ಹಿಂದೆ ನಡೆಯುತ್ತಿದ್ದುದೇ ಬೇರೆ. ಮಾತುಕತೆಯ ಸಲಹೆಗಳನ್ನು ಬಹಿರಂಗವಾಗಿ ಖಂಡತುಂಡವಾಗಿ ತಿರಸ್ಕರಿಸುತ್ತಿದ್ದ ಚೀನಾ ತನ್ನದೇ ರಾಜಧಾನಿಯಲ್ಲಿ ಭಾರತೀಯ ರಾಜತಂತ್ರಜ್ಞರೊಂದಿಗೆ ಮಾತುಕತೆ ನಡೆಸಲು ತನ್ನ ರಾಜತಂತ್ರಜ್ಞರನ್ನು ನಿಯೋಜಿಸಿತ್ತು.

ಭಾರತದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನೀ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಯಾಂಗ್ ಜಿಯೆಚಿ ಈ ಬಗ್ಗೆ ಮೊದಲು ಭೇಟಿಯಾದದ್ದು ಹ್ಯಾಂಬರ್ಗ್​ನಲ್ಲಿ. ನಂತರ ಬ್ರಿಕ್ಸ್ ಶೃಂಗಸಭೆಯ ಪೂರ್ವತಯಾರಿಗಾಗಿ ಜೂನ್ ಅಂತ್ಯದಲ್ಲಿ ಬೀಜಿಂಗ್​ನಲ್ಲಿ ಮತ್ತೊಮ್ಮೆ ಭೇಟಿಯಾದರು. ಅಲ್ಲಿ ರ್ಚಚಿತವಾದ ವಿಷಯಗಳ ಬಗ್ಗೆ ಎರಡೂ ಪಕ್ಷಗಳು ಯಾವ ವಿವರವನ್ನೂ ಹೊರಗೆಡಹಲಿಲ್ಲ. ಆದರೆ, ನಂತರ ನಂಬಲರ್ಹ ಮೂಲಗಳಿಂದ ತಿಳಿದುಬಂದ ಮಾಹಿತಿ ರಾಜತಾಂತ್ರಿಕ ಮಾತುಕತೆಯಲ್ಲಿ ಭಾರತ ಮೇಲುಗೈ ಸಾಧಿಸಿದೆ ಎನ್ನುವುದನ್ನು ಜಗತ್ತಿಗೆ ಸಾರಿತು.

ಜಿಯೆಚಿ ಚರ್ಚೆಯನ್ನು ಆರಂಭಿಸಿದ್ದು ‘ಡೋಕ್ಲಂ ನಿಮ್ಮ ನೆಲವೇ?‘ ಎಂದು ಪ್ರಶ್ನಿಸುವುದರ ಮೂಲಕ. ದೋವಲ್​ರನ್ನು ಧೃತಿಗೆಡಿಸಿ ಮಣಿಸುವ ತಂತ್ರ ಇದು. ‘ಅದು ನಿಮ್ಮ ನೆಲವೂ ಅಲ್ಲ’ ಎಂದ ದೋವಲ್ ಮುಂದುವರಿದು ಹೇಳಿದ್ದು ಹೀಗೆ: ‘ಪ್ರತಿಯೊಂದು ವಿವಾದಿತ ಪ್ರದೇಶವೂ ಪೂರ್ವನಿರ್ಧಾರಿತವಾಗಿ ಚೀನಾಗೆ ಸೇರಿರುತ್ತದೆಯೇ?’. ಇದಕ್ಕೆ ಜಿಯೆಚಿ ಅವರಲ್ಲಿ ಉತ್ತರವಿರಲಿಲ್ಲ. ಭೂತಾನ್​ನ ರಕ್ಷಣೆ ಭಾರತದ ಜವಾಬ್ದಾರಿ, ಈ ಬಗ್ಗೆ ಅಧಿಕೃತ ಒಪ್ಪಂದಗಳಿವೆ ಎಂಬ ವಾಸ್ತವವನ್ನು ದೋವಲ್ ಚೀನೀಯರಿಗೆ ಮನವರಿಕೆ ಮಾಡಿಕೊಟ್ಟರು. ಜತೆಗೇ, ಡೋಕ್ಲಂ ಬಿಕ್ಕಟ್ಟು ಪರಿಹಾರವಾಗದಿದ್ದಲ್ಲಿ ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ಶಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಾಗದು ಎಂದೂ ದೋವಲ್ ಎಚ್ಚರಿಸಿದ್ದರೆಂದೂ ಹೇಳಲಾಗುತ್ತದೆ.

ಮುಂದಿನ ಒಂದು ತಿಂಗಳಲ್ಲಿ ಚೀನೀ ರಾಜತಂತ್ರಜ್ಞರು ಮತ್ತು ಅಧಿಕಾರಿಗಳ ಜತೆ ಬೀಜಿಂಗ್​ನಲ್ಲಿ ಮಾತುಕತೆಗಳನ್ನು ಚಾಲನೆಯಲ್ಲಿಟ್ಟವರು ಅಲ್ಲಿರುವ ಭಾರತೀಯ ರಾಯಭಾರಿ ವಿಜಯ್ ಕೇಶವ್ ಗೋಖಲೆ. ದೆಹಲಿಯ ಜತೆ ಅವರನ್ನು ನಿರಂತರವಾಗಿ ಸಂಪರ್ಕದಲ್ಲಿಟ್ಟವರು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್. ಇಡೀ ಬೆಳವಣಿಗೆಯಲ್ಲಿ ಭಾರತದ ನಿಲುವನ್ನು, ಚೀನಾದ ನಿಲುವಿನಲ್ಲಿರುವ ಹುಳುಕುಗಳನ್ನು ಮಿತ್ರದೇಶಗಳಿಗೆ, ಮುಖ್ಯವಾಗಿ ನೇಪಾಳ, ಶ್ರೀಲಂಕಾದಂತಹ ನೆರೆದೇಶಗಳಿಗೆ ಮನವರಿಕೆ ಮಾಡಿ ಅವು ಚೀನಾದ ರಾಜತಾಂತ್ರಿಕ ಹಾಗೂ ಆರ್ಥಿಕ ಒತ್ತಡಕ್ಕೆ ಸಿಲುಕಿ ಅತ್ತ ವಾಲದಂತೆ ನೋಡಿಕೊಂಡದ್ದು ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್.

ಈ ಸಂಯೋಜಿತ ಕಾರ್ಯಾಚರಣೆಯ ಹಿಂದಿದ್ದದ್ದು ಪ್ರಧಾನಿ ಮೋದಿ ಹಾಗೂ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ನೀಡಿದ್ದ ಸಂಪೂರ್ಣ ಬೆಂಬಲ. ಮಾತುಕತೆಗೆ ನಮ್ಮ ಮೊದಲ ಆದ್ಯತೆ, ಆದರೆ ಯುದ್ಧ ಅನಿವಾರ್ಯವಾದರೆ ಅದಕ್ಕೆ ತಯಾರಾಗಿಯೇ ಇದ್ದೇವೆ ಎಂಬುದು ಈ ಇಬ್ಬರು ನಾಯಕರ ದೃಢ ನಿಲುವಾಗಿತ್ತು. ಇದೆಲ್ಲದರ ಪರಿಣಾಮವಾಗಿ, 1962ರ ಭಾರತ ಇದಲ್ಲ ಎಂಬುದು ಚೀನೀಯರಿಗೆ ಮನದಟ್ಟಾಯಿತು.

ಇದರ ಜತೆಗೇ, ಭಾರತಕ್ಕೆ ಅನುಕೂಲಕರವಾಗಿ ಹಲವು ಬೆಳವಣಿಗೆಗಳಾದವು. ಚೀನೀ ನಿರೀಕ್ಷೆಗೆ ವಿರುದ್ಧವಾಗಿ ನೇಪಾಳ ಅದರ ಪರವಾಗಿ ದನಿಯೆತ್ತಲಿಲ್ಲ. ಅತ್ತ, ಅಮೆರಿಕಾ, ಬ್ರಿಟನ್ ಹಾಗೂ ಆಸ್ಟ್ರೇಲಿಯಾ ಮಾತುಕತೆಗಳಿಗೆ ಒತ್ತುನೀಡುವ ಭಾರತದ ನಿಲುವನ್ನು ಬೆಂಬಲಿಸಿದವು. ಅಂತಿಮವಾಗಿ ಜಪಾನ್ ತಾನು ಭಾರತದ ಪರವೆಂದು ಸ್ಪಷ್ಟವಾಗಿ ಘೊಷಿಸಿಬಿಟ್ಟಿತು. ಒಂದರ್ಥದಲ್ಲಿ ಇದು ನಿರೀಕ್ಷಿತವೇ ಆಗಿತ್ತು. ಸೆಂಕಾಕು ನಡುಗಡ್ಡೆಗಳಿಗೆ ಸಂಬಂಧಿಸಿದಂತೆ ಚೀನೀ ಉದ್ಧಟತನದಿಂದ ಬೇಸತ್ತ ಜಪಾನ್ ಹಿಮಾಲಯ ಹಾಗೂ ಪೂರ್ವ ಚೀನಾ ಸಮುದ್ರಗಳಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಪ್ರತಿಭಟಿಸಲು ಭಾರತ ಮತ್ತು ಜಪಾನ್ ಒಟ್ಟಾಗಬೇಕೆಂದು ಜನವರಿ 2014ರಲ್ಲೇ ಸೂಚಿಸಿತ್ತು. ಆದರೆ ಆಗಿನ ಯುಪಿಎ ಸರ್ಕಾರ ಆಸಕ್ತಿ ವಹಿಸಲಿಲ್ಲ. ಜಪಾನೀ ಸಲಹೆಯ ಮಹತ್ವವನ್ನರಿತ ಮೋದಿ ಪ್ರಧಾನಿಯಾದ ಮೂರು ತಿಂಗಳಲ್ಲಿ ಜಪಾನ್​ಗೆ ಭೇಟಿ ನೀಡಿದ್ದಲ್ಲದೇ ಚೀನಾ ವಿರುದ್ಧ ಜಪಾನ್​ಗೆ ಬೆಂಬಲ ಸೂಚಿಸಿದ್ದರು.

ಇನ್ನು ಕೆಲವು ವಾರಗಳಲ್ಲಿ ಡೋಕ್ಲಂನಲ್ಲಿ ಹಿಮ ಸುರಿಯಲಾರಂಭಿಸುತ್ತದೆ. ಆಗ ಅಲ್ಲಿ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಜತೆಗೆ, ನವೆಂಬರ್ ಮೊದಲವಾರದಲ್ಲಿ ಚೀನಿ ಕಮ್ಯೂನಿಸ್ಟ್ ಪಕ್ಷದ ಹತ್ತೊಂಬತ್ತನೇ ಅಧಿವೇಶನ ನಡೆಯಲಿದೆ. ಪಾಲಿಟ್​ಬ್ಯೂರೋ ಹಾಗೂ ಪಾಲಿಟ್ ಬ್ಯೂರೋ ಸ್ಟಾ್ಯಂಡಿಂಗ್ ಕಮಿಟಿಗೆ ತನ್ನ ಬೆಂಬಲಿಗರನ್ನೇ ತುಂಬುವ ಇರಾದೆ ಅಧ್ಯಕ್ಷ ಜಿನ್​ಪಿಂಗ್​ಗಿದೆ. ಭಾರತದೊಡನೆ ಬಿಕ್ಕಟ್ಟು ಮುಂದುವರಿದಷ್ಟೂ ಆ ಕಾರಣದಿಂದ ಅಂತಾರಾಷ್ಟ್ರೀಯ ರಂಗದಲ್ಲಿ ಚೀನಾದ ವರ್ಚಸ್ಸು ಕುಸಿದಷ್ಟೂ ತನಗೆ ಪಕ್ಷದಲ್ಲಿ ಬೆಂಬಲ ಕಡಿಮೆಯಾಗುತ್ತದೆಂಬ ಆತಂಕ ಜಿನ್​ಪಿಂಗ್​ರಿಗಿದೆ. ಇದೆಲ್ಲವೂ ಒಟ್ಟಾಗಿ ಡೋಕ್ಲಂನಿಂದ ಹಿಂತೆಗೆಯುವಂತೆ ಅವರನ್ನು ಪ್ರೇರೇಪಿಸಿದೆ. ಆದರೆ, ಅದರಿಂದ ತನ್ನ ವರ್ಚಸ್ಸು ಕುಸಿಯಬಾರದು ಎಂಬ ಎಚ್ಚರಿಕೆಯಲ್ಲೂ ಅವರಿದ್ದಾರೆ. ಹೀಗಾಗಿಯೇ, ಭಾರತೀಯ ಸೇನೆ ಡೋಕ್ಲಂನಿಂದ ಕಾಲು ತೆಗೆಯುವಂತೆ ಮಾಡಿರುವುದಾಗಿಯೂ, ಚೀನೀ ಸೇನೆ ಅಲ್ಲೇ ಗಸ್ತು ತಿರುಗುತ್ತಿದೆಯೆಂದೂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.

ವಾಸ್ತವವಾಗಿ ಡೋಕ್ಲಂನ ಪಶ್ಚಿಮ ಹಾಗೂ ಉತ್ತರ ಗಡಿಯಲ್ಲಿ ಚೀನೀ ಸೇನೆ ಲಾಗಾಯ್ತಿನಿಂದಲೂ ಗಸ್ತು ತಿರುಗುತ್ತಲೇ ಇದೆ. ಅದಕ್ಕೆ ಭಾರತದ ಅಭ್ಯಂತರವೇನೂ ಇಲ್ಲ. ಭಾರತ ಆಕ್ಷೇಪಣೆ ಎತ್ತಿದ್ದು ಚೀನೀ ಸೇನೆ ತನ್ನ ಎಲ್ಲೆ ದಾಟಿ ಬಂದು ಡೋಕ್ಲಂನಲ್ಲಿ ರಸ್ತೆ ನಿರ್ವಿುಸಹೊರಟದ್ದರ ಬಗ್ಗೆ. ಈಗ ಚೀನೀಯರ ರಸ್ತೆ ನಿರ್ಮಾಣ ನಿಂತಿದೆ. ಚೀನೀ ಸೈನಿಕರು ಡೋಕ್ಲಂನಿಂದ ಹೊರನಡೆದಿದ್ದಾರೆ. ಅಲ್ಲಿಗೆ, ಭಾರತದ ನಿಲುವನ್ನು ಚೀನಾ ಒಪ್ಪಿಕೊಂಡಿದೆ ಎನ್ನುವುದು ಜಗತ್ತಿಗೇ ಸ್ಪಷ್ಟವಾಗಿ ಮನವರಿಕೆಯಾಗಿದೆ. ನಂತರ ಚೀನಾದ ಝಿಯೆಮಿನ್​ನಲ್ಲಿ ಸೆಪ್ಟೆಂಬರ್ 2-5ರಂದು ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಮತ್ತೊಂದು ವಿಜಯ ಸಾಧಿಸಿದೆ. ಕಳೆದವರ್ಷ ನಮ್ಮದೇ ಗೋವಾದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನೀ ಭಯೋತ್ಪಾದಕ ಸಂಘಟನೆಗಳನ್ನು ಹೆಸರಿಸಿ ಖಂಡಿಸುವ ಭಾರತದ ಗೊತ್ತುವಳಿಯನ್ನು ಅಂತಿಮ ಘೊಷಣೆಯಲ್ಲಿ ಸೇರಿಸಲು ಚೀನಾ ತಡೆ ಒಡ್ಡಿತ್ತು. ರಷ್ಯಾ ಸಹ ಚೀನಾದ ಬೆನ್ನಿಗೆ ನಿಂತಿತ್ತು. ಆದರೀಗ ಚೀನಾದಲ್ಲೇ ನಡೆದ ಸಭೆಯಲ್ಲಿ ಪಾಕ್ ಭಯೋತ್ಪಾದಕ ಸಂಘಟನೆಗಳೆಲ್ಲವನ್ನೂ ಹೆಸರಿಸಿ ಖಂಡಿಸಲಾಗಿದೆ. ಇಷ್ಟಾಗಿಯೂ, ಚೀನಾ ಬಗ್ಗೆ, ಅದರ ಕುತಂತ್ರಿ ಅಧ್ಯಕ್ಷ ಜಿನ್​ಪಿಂಗ್ ಬಗ್ಗೆ ನಾವು ನಿರಾಳವಾಗಿರಲಾರದು. ಮುಂದಿನ ಬೇಸಗೆಯಲ್ಲಿ ಹಿಮ ಕರಗತೊಡಗಿದಂತೇ ಚೀನಾ ಸಮಯ ನೋಡಿಕೊಂಡು ಡೋಕ್ಲಂ ಅಥವಾ ತನಗೆ ಅನುಕೂಲವೆನಿಸಿದ ಬೇರೆಡೆ ತಂಟೆ ತೆಗೆದೇ ತೆಗೆಯುತ್ತದೆ. ಯಾಕೆಂದರೆ ಅಧ್ಯಕ್ಷ ಜಿನ್​ಪಿಂಗ್ ಈಗ ಹೆಡೆ ತುಳಿಸಿಕೊಂಡ ನಾಗರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top