Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಡಾ ವಿಂಚಿ ಚಿತ್ರಕ್ಕೆ 2,925 ಕೋಟಿ ರೂ.!

Saturday, 18.11.2017, 3:01 AM       No Comments

ನ್ಯೂಯಾರ್ಕ್: ಖ್ಯಾತ ಚಿತ್ರಕಲಾವಿದ ಲಿಯೋನಾಡೋ ಡಾ ವಿಂಚಿ ಕ್ರಿ.ಶ. 1500ರಲ್ಲಿ ಬರೆದಿದ್ದಾನೆ ಎನ್ನಲಾದ, ಎಡಗೈಯಲ್ಲಿ ಕ್ರಿಸ್ಟಲ್​ನ ಬಟ್ಟಲು ಹಿಡಿದು ಬಲಗೈನಲ್ಲಿ ಆಶೀರ್ವದಿಸುತ್ತಿರುವ, ಪುನರುತ್ಥಾನದ ಉಡುಪಿನಲ್ಲಿರುವ ಯೇಸು ಕ್ರಿಸ್ತನ ಚಿತ್ರ ನ್ಯೂಯಾರ್ಕ್​ನ ಹರಾಜುಗಟ್ಟೆಯಲ್ಲಿ ದಾಖಲೆಯ 2,925.61 ಕೋಟಿ ರೂ.ಗೆ ಮಾರಾಟವಾಗಿದೆ. ಆ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಚಿತ್ರ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.

ಪ್ಯಾಬ್ಲೋ ಪಿಕಾಸೋನ ‘ದಿ ವುಮೆನ್ ಆಫ್ ಆಲ್ಜೀರ್ಸ್’ ಎಂಬ ಚಿತ್ರ 1,170.24 ಕೋಟಿ ರೂ.ಗೆ ಹರಾಜಾಗಿದ್ದು ಇದುವರೆಗಿನ ದಾಖಲೆಯಾಗಿತ್ತು.

ಸೇವಿಯರ್ ಆಫ್ ದಿ ವರ್ಲ್ಡ್: ಕಲಾವಿದ ಲಿಯೋನಾಡೋ ಡಾ ವಿಂಚಿ ಕ್ರಿ.ಶ. 1500ರಲ್ಲಿ ಮೊದಲಿಗೆ ಈ ಚಿತ್ರವನ್ನು ಬರೆದಿದ್ದ. ಇದರ ಸೌಂದರ್ಯಕ್ಕೆ ಮಾರುಹೋದ ಹಲವು ಕಲಾವಿದರು ಇದರ ಮಾದರಿಯನ್ನು ರಚಿಸಿದ್ದರು. ಆದರೆ, ಡಾ ವಿಂಚಿಯ ಮೂಲಚಿತ್ರಕ್ಕೆ ಅವನ್ನು ಹೋಲಿಕೆ ಮಾಡುವಂತಿರಲಿಲ್ಲ. ಇದುವರೆಗೂ ಇಂತಹ 20 ಚಿತ್ರಗಳು ಪತ್ತೆಯಾಗಿವೆ.

ಫ್ರಾನ್ಸ್​ನ ರಾಜಮನೆತನದವರಿಗೆ ಕೊಡಲೆಂದೇ ಡಾ ವಿಂಚಿ ಈ ಚಿತ್ರವನ್ನು ಬರೆದಿದ್ದ ಎನ್ನಲಾಗಿದೆ. ಇಂಗ್ಲೆಂಡ್​ನ ಮಹಾರಾಜ ಮೊದಲನೇ ಚಾರ್ಲ್ಸ್​ನನ್ನು 1625ರಲ್ಲಿ ವರಿಸಿದ ಮಹಾರಾಣಿ ಹನ್ರಿಯೆಟ್ಟಾ ಮರಿಯಾ ಈ ಚಿತ್ರವನ್ನು ತಮ್ಮೊಂದಿಗೆ ಇಂಗ್ಲೆಂಡ್​ಗೆ ಕೊಂಡೊಯ್ದರು ಎಂದು ಹೇಳಲಾಗುತ್ತಿದೆ. ಆದರೆ 1763ರಲ್ಲಿ ಈ ಚಿತ್ರ ದಿಢೀರನೆ ಕಣ್ಮರೆಯಾಗಿತ್ತು. ಅಂದಾಜು ಒಂದೂವರೆ ಶತಮಾನದ ಬಳಿಕ 1900ರಲ್ಲಿ ಲಂಡನ್​ನಲ್ಲಿದ್ದ ಕುಕ್ ಕಲೆಕ್ಷನ್ ಎಂಬ ಚಿತ್ರಸಂಗ್ರಹಾಗಾರಕ್ಕಾಗಿ ಸರ್ ಚಾರ್ಲ್ಸ್ ರಾಬಿನ್​ಸನ್ ಇದನ್ನು ಖರೀದಿಸಿದ್ದರು. ಆಗ ಇದು ಡಾ ವಿಂಚಿ ಬರೆದಿರುವ ಚಿತ್ರ ಎಂಬುದು ಯಾರಿಗೂ ತಿಳಿದಿರಲಿಲ್ಲ.

‘ಸಾಲ್ವಟಾ ಮುಂಡಿ’ ಎಂಬ ಪರ್ಯಾಯ ಹೆಸರನ್ನೂ ಹೊಂದಿರುವ ಡಾ ವಿಂಚಿಯ ಚಿತ್ರ 1958ರಲ್ಲಿ ಕೇವಲ 45 ಪೌಂಡ್​ಗಳಿಗೆ (ಇಂದಿನ ಡಾಲರ್ ಬೆಲೆಯಲ್ಲಿ ಕೇವಲ 60 ಡಾಲರ್, ಅಂದರೆ 3900 ರೂ.) ಹರಾಜಾಗಿತ್ತು. ನಂತರದಲ್ಲಿ ಇದು ಹರಾಜುಗಟ್ಟೆಯಿಂದ ಕಣ್ಮರೆಯಾಗಿತ್ತು. 2005ರಲ್ಲಿ ಅಮೆರಿಕದ ಲೂಸಿಯಾನದಲ್ಲಿ ಇದು ಮತ್ತೆ ಪತ್ತೆಯಾಯಿತು. ಆಗ ನ್ಯೂಯಾರ್ಕ್ ಮೂಲದ ಚಿತ್ರಗಳ ಸಂಗ್ರಾಹಕ ಮತ್ತು ಡಾ ವಿಂಚಿ ಚಿತ್ರಗಳ ತಜ್ಞ ರಾಬರ್ಟ್ ಸೈಮನ್ ಮತ್ತು ಚಿತ್ರಗಳ ವರ್ತಕ ಅಲೆಕ್ಸಾಂಡರ್ ಪ್ಯಾರಿಷ್ ಇದನ್ನು ಪತ್ತೆ ಮಾಡಿ, 6.50 ಲಕ್ಷ ರೂ.ಗಳಿಗೆ ಖರೀದಿಸಿದ್ದರು.

ಮೊದಲ ನೋಟಕ್ಕೆ ಇದು ಡಾ ವಿಂಚಿ ಚಿತ್ರದ ಮಾದರಿ ಆಗಿರಬಹುದು ಎಂದು ಭಾವಿಸಿದ್ದೆ. ಅದನ್ನು ಗಮನವಿಟ್ಟು ನೋಡಿದಾಗ, ತುಂಬಾ ಆಸಕ್ತಿದಾಯಕವೆನಿಸತೊಡಗಿತು. ಮತ್ತಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಡಾ ವಿಂಚಿಯ ಮೂಲಕೃತಿ ಇರಬಹುದು ಎಂಬ ಅನುಮಾನ ಮೂಡಿತು. ಬಳಿಕ ಅದನ್ನು ಆಮೂಲಾಗ್ರ ವಿಶ್ಲೇಷಣೆಗೆ ಒಳಪಡಿಸಲು ನಿರ್ಧರಿಸಿದೆ. ಚಿತ್ರದ ಮೇಲೆ ಮಾಸಿದ ಬಣ್ಣವನ್ನು ಸರಿಪಡಿಸಲು ಪದೇಪದೆ ಬಣ್ಣದ ಟಚ್​ಅಪ್ ಮಾಡಿರುವುದು ಕಂಡಿತು ಎಂದು ರಾಬರ್ಟ್ ಸೈಮನ್ ಹೇಳಿದ್ದಾರೆ. ಬಳಿಕ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಚಿತ್ರಗಳ ಸಂರಕ್ಷಣಾ ವಿಭಾಗದ ಪ್ರೊ. ಡಯಾನ್ನೆ ಡ್ವಾಯರ್ ಮಾಸ್ಟಿನಿ ಅವರನ್ನು ಸಂರ್ಪಸಿ, ಚಿತ್ರವನ್ನು ಆಮೂಲಾಗ್ರ ವಿಶ್ಲೇಷಣೆಗೆ ಒಳಪಡಿಸುವಂತೆ ಕೇಳಿಕೊಂಡೆ. 2007ರಲ್ಲಿ ಈ ಕೆಲಸ ಆರಂಭವಾಗುವವರೆಗೂ ಇದೊಂದು ಡಾ ವಿಂಚಿ ಕೃತಿಯ ಮಾದರಿ ಎಂದೇ ಭಾವಿಸಲಾಗಿತ್ತು. ನಂತರ ದಪ್ಪನಾಗಿ ಟಚ್​ಅಪ್ ಮಾಡಲಾಗಿದ್ದ ಬಣ್ಣದ ಪದರಗಳನ್ನು ತೆಗೆಯುತ್ತ ಹೋದರು. ಮೊದಲ ಬಣ್ಣದ ಪದರ ತೆಗೆಯುತ್ತಲೇ ಡಯಾನ್ನೆ ಅವರಲ್ಲಿ ವಿಶಿಷ್ಟ ಆನುಭೂತಿ ಉಂಟಾಯಿತು. ಕ್ರಿಸ್ತನ ಗುಂಗುರು ಕೂದಲು ತುಂಬಾ ಪರಿಚಿತ ಎಂಬ ಭಾವನೆ ಅವರಲ್ಲಿ ಮೂಡಿತು ಎಂದು ವಿವರಿಸಿದ್ದಾರೆ.

ಚಿತ್ರವನ್ನು ಎಕ್ಸ್​ರೇ ಪರೀಕ್ಷೆಗೆ ಒಳಪಡಿಸಿದಾಗ ಮೂಲಬಣ್ಣದ ಮೇಲೆ ಹಲವು ಪದರದ ಬಣ್ಣಗಳು ಇದ್ದದ್ದು ಸ್ಪಷ್ಟವಾಗಿ ಗೋಚರಿಸಿತು. ಮೂಲಚಿತ್ರ ಬರೆಯುವಾಗ ಕ್ರಿಸ್ತನ ಬಲಗೈ ಹೆಬ್ಬೆರಳು ಬೇರೆಡೆಗೆ ತಿರುಗಿತ್ತು. ಆದರೆ, ಚಿತ್ರ ಬರೆದಾದ ಮೇಲೆ ಡಾ ವಿಂಚಿಗೆ ಇದು ಸರಿಕಾಣದ್ದರಿಂದ, ಅದನ್ನು ಈಗಿನ ಚಿತ್ರದಲ್ಲಿರುವ ದಿಕ್ಕಿಗೆ ತಿರುಗಿಸಿರುವುದು ಖಚಿತವಾಯಿತು ಎಂದು ಹೇಳಿದ್ದಾರೆ.

2011ರಲ್ಲಿ ಈ ಚಿತ್ರ ಡಾ ವಿಂಚಿ ಕುಂಚದಲ್ಲೇ ಮೂಡಿದ್ದು ಎಂದು ಕಲಾವಿದರ ಬಳಗ ತೀರ್ವನಿಸಿತು. ಬಳಿಕ ಇದನ್ನು ಲಂಡನ್​ನ ನ್ಯಾಷನಲ್ ಗ್ಯಾಲರಿಯಲ್ಲಿ ಡಾ ವಿಂಚಿಯ ಮೂಲಚಿತ್ರ ಎಂದು ಹೇಳಿ ಪ್ರದರ್ಶನಕ್ಕಿಡಲಾಗಿತ್ತು.

ದಾಖಲೆ ಮೊತ್ತಕ್ಕೆ ಮಾರಾಟವಾದ ಇತರೆ ಚಿತ್ರಗಳು

· ಪ್ಯಾಬ್ಲೋ ಪಿಕಾಸೋನ ‘ದಿ ವುಮೆನ್ ಆಫ್ ಆಲ್ಜೀರ್ಸ್ (ವರ್ಷನ್ 0)’ 1,170.24 ಕೋಟಿ ರೂ.

· ಅಮೆಡಿಯೋ ಮೊದಿಗ್ಲಿಯಾನಿಯ ‘ನ್ಯೂ ಕೌಚ್’ 1,111.74 ಕೋಟಿ ರೂ.

· ಫ್ರಾನ್ಸಿಸ್ ಬೆಕಾನ್​ನ ‘ತ್ರೀ ಸ್ಟಡೀಸ್ ಆಫ್ ಲ್ಯೂಸಿಯನ್ ಫ್ರೀಯುಡ್’ 929.70 ಕೋಟಿ ರೂ.

· ಎಡ್ವರ್ಡ್ ಮಂಚ್​ನ ‘ದಿ ಸ್ಕ್ರೀಂ’ 780.17 ಕೋಟಿ ರೂ.

· ಜೀನ್ ಮೈಕೆಲ್ ಬಸ್ಕಿಯಾಟ್​ನ 1982 ‘ಅನ್​ಟೈಟೆಲ್ಡ್’ 721.63 ಕೋಟಿ ರೂ.

· ಪಿಕಾಸೋ ಅವರ ‘ನ್ಯೂ ಔ ಪ್ಲಾ್ಯಟೂ ದಿ ಸ್ಕಲ್ಪಚರರ್’ (ನ್ಯೂಡ್ ಗ್ರೀನ್ ಲೀವ್ಸ್ ಆಂಡ್ ಬಸ್ಟ್) 695.15 ಕೋಟಿ ರೂ.

· ಆಂಡಿ ವಾರ್​ಹಾಲ್​ನ ಸಿಲ್ವರ್ ಕಾರ್ ಕ್ರ್ಯಾಶ್ (ಡಬ್ಬಲ್ ಡಿಸಾಸ್ಟರ್) 689.15 ಕೋಟಿ ರೂ.

· ಅಲ್ಬರ್ಟ್ ಗಿಯಾಕಾಮೆಟ್ಟಿಯ ‘ವಾಕಿಂಗ್ ಮ್ಯಾನ್ 1’ 682.65 ಕೋಟಿ ರೂ.

· ಪಿಕಾಸೋ ಅವರ ‘ಬಾಯ್ ವಿತ್ ಎ ಪೈಪ್’ 680 ಕೋಟಿ ರೂ.

ವಿವಾದವೂ ತಳಕು

2013ರಲ್ಲಿ ಈ ಚಿತ್ರವನ್ನು 832.18 ಕೋಟಿ ರೂ.ಗೆ ರಷ್ಯಾದ ಡಿಮಿಟ್ರಿ ರೈಬೋಲೊವೆಲ್ವ ಎಂಬ ಅತಿಶ್ರೀಮಂತ ವ್ಯಕ್ತಿ ಖರೀದಿಸಿದ್ದ. ಆದರೆ, ಇದರ ಮೂಲಬೆಲೆ ಕಡಿಮೆಯಾಗಿದ್ದರೂ, ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಮೊನ್ಯಾಕೋ ಮೂಲದ ಚಿತ್ರಗಳ ವರ್ತಕ ವೈವೆಸ್ ಬೌವಿಯರ್ ಇದರ ಬೆಲೆ ಹೆಚ್ಚಿಸಿ ವಂಚಿಸಿದ್ದಾಗಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸೌತ್​ಬೆ ಹರಾಜು ಸಂಸ್ಥೆ ಮೂಲಕ ಬೌವಿಯರ್ ಈ ಚಿತ್ರವನ್ನು 520.11 ಕೋಟಿ ರೂ.ಗೆ ಖರೀದಿಸಿದ್ದರು. ಸ್ವಲ್ಪಕಾಲದಲ್ಲೇ ಅದನ್ನು ಡಿಮಿಟ್ರಿ ಅವರಿಗೆ 832.18 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಈ ರೀತಿ ಅವರು 312.06 ಕೋಟಿ ರೂ.ಗಳ ಲಾಭ ಮಾಡಿಕೊಂಡಿದ್ದರು. ಇದು ಡಿಮಿಟ್ರಿ ಕೋಪಕ್ಕೆ ಕಾರಣವಾಗಿತ್ತು. ಆದರೆ, ಇದರ ವಿಚಾರಣೆ ಏನಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

Leave a Reply

Your email address will not be published. Required fields are marked *

Back To Top