Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಡಾ. ರಾಜ್ ಅಭಿಮಾನಿಗಳ ಹಬ್ಬವಾದ ವರ್ಷ

Friday, 06.04.2018, 3:05 AM       No Comments

ಮತ್ತೆ ಏಪ್ರಿಲ್ ಬಂದಿದೆ. ಇದು ವರನಟ ಡಾ. ರಾಜ್​ಕುಮಾರ್ ಅವರ ಮಾಸದ ನೆನಪಿನ ಮಾಸ. ಹೌದು, ಒಂದೇ ತಿಂಗಳಲ್ಲಿ ಸಾವು-ಬದುಕಿನಾಟ ನಡೆದೇ ಹೋಯಿತು. ಏಪ್ರಿಲ್ 12ರಂದು ಈ ಮಹಾನ್ ಚೇತನ ಅಸ್ತಂಗತವಾಯಿತು. ಅದೇ ಏ. 24ರಂದು ಹುಟ್ಟುಹಬ್ಬ. ಮೊದಲು ಸಾವಿನ ದಿನಾಂಕ, ನಂತರ ಹುಟ್ಟಿದ ದಿನಾಂಕ! ಈ ನಟಸಾರ್ವಭೌಮನಿಗೆ ಎಂದೂ ಸಾವಿಲ್ಲ ಎನ್ನುವುದು ಇದಕ್ಕೇನಾ? ಇಂಥ ವಿಶೇಷ ಮಾಸದಂದು ನೆನಪಿಗೆ ಬರುವ ವರ್ಷ 1977. ಏಕೆಂದರೆ ಇದೂ ಕೂಡ ರಾಜ್ ವರ್ಷ! ಅಭಿಮಾನಿಗಳ ಪಾಲಿಗೆ ಹಬ್ಬವಾದ ದಿವ್ಯ ವರ್ಷ. ವರ್ಷಕ್ಕೊ ಎರಡು ವರ್ಷಕ್ಕೊ ರಾಜ್ ಅವರ ಒಂದು ಚಿತ್ರ ಬಿಡುಗಡೆಯಾದರೂ ಸಾಕು ಕುಣಿದು ಕುಪ್ಪಳಿಸುವ ಅಭಿಮಾನಿಗಳಿಗೆ ಒಂದೇ ವರ್ಷ ಐದು ಚಿತ್ರಗಳು ತೆರೆಕಂಡರೆ ಹೇಗಾಗ ಬೇಡ ನೀವೇ ಹೇಳಿ? ನಿಜವಾದ ಅರ್ಥದಲ್ಲಿ ಅದು ಸುವರ್ಣ ಕಾಲ. 1977ರಲ್ಲಿ ತೆರೆಕಂಡ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ ಬರೋಬ್ಬರಿ 50! ಇವುಗಳಲ್ಲಿ ಐದು ರಾಜ್ ಚಿತ್ರಗಳು. ಅದರ ಅರ್ಥ ಒಂದೇ ವರ್ಷದಲ್ಲಿ ಒಂದೇ ಸಮನೆ ಚಿತ್ರೀಕರಣ ಮುಗಿಸಿ ಅದೇ ವರ್ಷ ಐದು ಚಿತ್ರಗಳು ತೆರೆ ಕಂಡವು ಎಂದಲ್ಲ. ತೆರೆಕಂಡ ವರ್ಷ ಒಂದೇ ಆದರೂ ಚಿತ್ರೀಕರಣವಾದ ಬೇರೆ ಬೇರೆ ಚಿತ್ರಗಳ ಕಾಲಮಾನ ಬೇರೆ ಬೇರೆ! ಇರಲಿ, ರಾಜಕುಮಾರ್ ನಟನೆಯ ಆ ಐದು ಅದ್ಭುತ ಚಿತ್ರಗಳು ವಿವರ ಹೀಗಿದೆ..

| ಗಣೇಶ್ ಕಾಸರಗೋಡು

ಬಬ್ರುವಾಹನ

ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ಮಹತ್ವಾಕಾಂಕ್ಷೆಯ ಚಿತ್ರವಿದು. ಈ ಕಾರಣಕ್ಕಾಗಿಯೇ ಈ ಚಿತ್ರದ ಮುಹೂರ್ತ ನಡೆದದ್ದು ಬೆಂಗಳೂರಿನ ಹೊರವಲಯದ ರಾಮೋಹಳ್ಳಿಯ ದೊಡ್ಡಾಲದ ಮರದ ಬುಡದಲ್ಲಿ. ಮುಹೂರ್ತದಂದು ಹುಣಸೂರರು ಹೇಳಿದ ಒಂದು ಮಾತು ಇಲ್ಲಿ ಪ್ರಸ್ತುತ; ‘ಜೈಮಿನಿ ಭಾರತ ವಿತ್ ಫುಲ್ ಆಫ್ ಮಸಾಲೆ ’! ಆಶ್ಚರ್ಯವಾಯಿತಾ? ಇದು ನಿಜ. ಆ ಕಾಲದಲ್ಲಿ ಅದ್ದೂರಿ ವೆಚ್ಚದ ಈ ಪೌರಾಣಿಕ ಸಿನಿಮಾ ಮಾಡಲು ಹೊರಟಾಗ ಗಾಂಧಿನಗರದ ಮಂದಿ ಎಂದಿಗಿಂತಲೂ ಹೆಚ್ಚು ಲೇವಡಿಯಾಡಿಬಿಟ್ಟರು. ಕೋಟ್ಯಂತರ ರೂ. ಹಣ ವಿನಿಯೋಗವಾಗಲಿರುವ ಚಿತ್ರದ ಬಗ್ಗೆ ಲಘುವಾಗಿ ಮಾತಾಡಿದ್ದನ್ನು ಕೇಳಿಸಿಕೊಂಡ ಹುಣಸೂರರು ಇಂಥವರಿಗೆ ತಿರುಗೇಟು ನೀಡಲೆಂದೇ ಹೇಳಿದ ಈ ಮಾತು ಮಾರ್ವಿುಕವಾಗಿತ್ತು. ಪೌರಾಣಿಕ ವಿಷಯದ ಚಿತ್ರವಾದರೂ ಎಲ್ಲ ಮಸಾಲೆ ಅಂಶಗಳನ್ನು ಒಳಗೊಂಡಿದ್ದರಿಂದ ಪ್ರೇಕ್ಷಕರು ಹಾರ್ದಿಕವಾಗಿ ಸ್ವೀಕರಿಸಿದರು. ರಾಜಕಮಲ್ ಆರ್ಟ್ಸ್ ಲಾಂಛನದಲ್ಲಿ ಕೆ.ಸಿ.ಎನ್. ಗೌಡರು ನಿರ್ವಿುಸಿದ ಈ ಚಿತ್ರ ಆ ಕಾಲದ ಅದ್ದೂರಿ ಚಿತ್ರಗಳಲ್ಲಿ ಒಂದು ಮೈಲುಗಲ್ಲಾಗಿ ನಿಂತಿತು. ನೀರಿನಂತೆ ಖರ್ಚು ಮಾಡಿದ್ದು ಫಲ ನೀಡಿತು. ಆರ್ಥಿಕವಾಗಿ ದೊಡ್ಡ ಯಶಸ್ಸು ಕಂಡ ಈ ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಟಿ.ಜಿ. ಲಿಂಗಪ್ಪ ಅವರ ಸೊಗಸಾದ ಸಂಗೀತ ಸಂಯೋಜನೆ. ಅರ್ಜುನ-ಬಬ್ರುವಾಹನರಾಗಿ ದ್ವಿಪಾತ್ರದಲ್ಲಿ ನಟಿಸಿದ ರಾಜ್​ಕುಮಾರ್ ಅವರೇ ಈ ಚಿತ್ರದ ಮೊದಲ ಆಕರ್ಷಣೆ. ಕಾಂಚನಾ ಮತ್ತು ಬಿ. ಸರೋಜಾದೇವಿ ಅವರ ಅಭಿನಯ ಮನೋಜ್ಞ. ಅಂದಹಾಗೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಮಕೃಷ್ಣ ಅವರದ್ದು ತುಂಟ ಕೃಷ್ಣ ಪಾತ್ರ!

ಗಿರಿಕನ್ಯೆ

ಕೊಡಗಿನ ಸಾಹಿತಿ ಭಾರತೀಸುತ ಅವರ ಕಾದಂಬರಿ ಆಧರಿಸಿ ತಯಾರಾಗಿರುವ ಈ ಚಿತ್ರದಲ್ಲಿ ಅದೇ ಕೊಡಗಿನ ಜನರ ಬದುಕಿನ ಸ್ವಾರಸ್ಯಕರ ಹಿನ್ನೆಲೆಯ ವಿಷಯವಿದೆ. ರಾಜ್​ಕುಮಾರ್ ಜತೆ ನಾಯಕಿಯಾಗಿ ನಟಿಸಿದವರು ಜಯಮಾಲಾ. ಈ ಚಿತ್ರದ ನಂತರ ಜಯಮಾಲಾ ಅವರನ್ನು ಪ್ರೀತಿಯಿಂದ ಮಾಧ್ಯಮದ ಮಂದಿ ‘ಗಿರಿಕನ್ಯೆ’ಎಂದೇ ಕರೆದರು! ಕೊಡಗಿನ ಜನರ ವಾಮಾಚಾರದ ನಂಬಿಕೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸುವ ಕಥಾ ಹಂದರದ ಈ ಚಿತ್ರಕ್ಕೆ ರಾಜನ್-ನಾಗೇಂದ್ರ ನೀಡಿದ ಸಂಗೀತ ಆ ಕಾಲದಲ್ಲಿ ಜನರನ್ನು ಹುಚ್ಚೆಬ್ಬಿಸಿತ್ತು! ದೊರೈ-ಭಗವಾನ್ ಜೋಡಿ ನಿರ್ದೇಶನದ ಈ ಚಿತ್ರದ ಗೀತೆ ಮತ್ತು ಸಂಭಾಷಣೆಯನ್ನು ಚಿ.ಉದಯಶಂಕರ್ ಬರೆದಿದ್ದಾರೆ.

ಭಾಗ್ಯವಂತರು

ಆವರೆಗೆ ಸಹ ನಿರ್ದೇಶಕರಾಗಿ ಹೆಸರು ಮಾಡಿದ್ದ ಭಾರ್ಗವ ಸ್ವತಂತ್ರವಾಗಿ ನಿರ್ದೇಶಿಸಿದ ಮೊಟ್ಟ ಮೊದಲ ಚಿತ್ರ ’ಭಾಗ್ಯವಂತರು’. ದ್ವಾರಕೀಶ್ ಚಿತ್ರಾ ಲಾಂಛನದಲ್ಲಿ ನಟ ದ್ವಾರಕೀಶ್ ತಯಾರಿಸಿದ ಈ ಚಿತ್ರ ಆ ಕಾಲದಲ್ಲಿ ಜನಮನ ಸೂರೆಗೊಂಡದ್ದು ನಿಜ. ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರದ ‘ಭಾಗ್ಯವಂತರು’ ಚಿತ್ರದಲ್ಲಿ ರಾಜ್​ಕುಮಾರ್ ಮತ್ತು ಬಿ. ಸರೋಜಾದೇವಿಯವರ ಅಭಿನಯವನ್ನು ನೋಡಿಯೇ ಸವಿಯಬೇಕು! ರಾಜನ್-ನಾಗೇಂದ್ರ ಅವರ ಸಂಗೀತ ಸಂಯೋಜನೆ ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದವರು ರಾಜ್ ಅವರ ಫೇವರಿಟ್ ಚಿ. ಉದಯಶಂಕರ್. ಡಿ.ವಿ.ರಾಜಾರಾಮ್ ಅವರ ಛಾಯಾಗ್ರಹಣ ಕೂಡ ಈ ಚಿತ್ರದ ಯಶಸ್ಸಿಗೆ ಪೂರಕ.

ಒಲವು ಗೆಲುವು ರಾಜ್​ಕುಮಾರ್ ಅಭಿನಯದ ‘ಭಾಗ್ಯವಂತರು’ ಚಿತ್ರ ಹಿಟ್ ಆದದ್ದೇ ತಡ ನಿರ್ದೇಶಕ ಭಾರ್ಗವ ಅವರಿಗೆ ಡಿಮಾಂಡ್ ಏರಿತು. ತಕ್ಷಣಕ್ಕೆ ಸಿಕ್ಕ ಅವಕಾಶವೆಂದರೆ ‘ಒಲವು ಗೆಲುವು’ ಚಿತ್ರದ್ದು. ಸಾಲಿಗ್ರಾಮದ ಎಸ್.ಎ. ಶ್ರೀನಿವಾಸ್ ನಿರ್ವಿುಸಿದ ಈ ಚಿತ್ರದ ಹಿಂದಿನ ಮಿದುಳು ಯಥಾ ಪ್ರಕಾರ ಚಿ. ಉದಯಶಂಕರ್! ಕಥೆ-ಚಿತ್ರಕಥೆ ಬರೆದವರು ಆ ಕಾಲದ ಸ್ಟಾರ್ ರೈಟರ್ ಎಂದೇ ಗುರುತಿಸಲ್ಪಡುತ್ತಿದ್ದ ಶಂಕರ್-ಸುಂದರ್! ರಾಜ್​ಕುಮಾರ್ ಅವರ ಫೇವರಿಟ್ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸೊಗಸಾದ ಸಂಗೀತ ನೀಡಿದ ಕೆಲವು ಹಾಡುಗಳು ಈಗಲೂ ಎಫ್​ಎಂ ಕೇಳುಗರ ಫೇವರಿಟ್. ಅದರಲ್ಲೂ ‘ನನ್ನೆದೆ ಕೋಗಿಲೆಯ…’ ಹಾಡಂತೂ ಎಲ್ಲ ಸಂಗೀತ ಪ್ರಿಯರ ಎದೆಯಲ್ಲಿ ಹಸಿರಾಗಿದೆ! ರಾಜ್​ಕುಮಾರ್ ಜತೆ ನಾಯಕಿಯಾಗಿ ನಟಿಸಿದ ಜೂಲಿ ಲಕ್ಷ್ಮೀ ಪ್ರೇಕ್ಷಕರ ಮನ ಸೂರೆಗೊಂಡರು! ಡಿ.ವಿ.ರಾಜಾರಾಮ್ ಅವರ ಕ್ಯಾಮರಾ ಕೆಲಸ ಒಟ್ಟು ಚಿತ್ರದ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದು ನಿಜ! ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಚೇತನ್ ರಾಮರಾವ್, ಸಂಪತ್… ಮೊದಲಾದ ಕಲಾವಿದರ ತಂಡ ಇಡೀ ಚಿತ್ರವನ್ನು ಒಂದು ಅದ್ಭುತ ಅನುಭವವನ್ನಾಗಿ ಮಾಡಿದ್ದು ಈಗ ಇತಿಹಾಸ.

ಸನಾದಿ ಅಪ್ಪಣ್ಣ

ವಿಕ್ರಮ್ ಶ್ರೀನಿವಾಸ್ ಅವರು ಪುತ್ರ ಮುರಳಿಯ (ನಂಜುಂಡಿ ಕಲ್ಯಾಣ’ ಚಿತ್ರದ ಶತದಿನ ಸಮಾರಂಭಕ್ಕೆ ಚೆನ್ನೈನಿಂದ ಬರುತ್ತಿದ್ದಾಗ ಕಾರು ಅಪಘಾತದಲ್ಲಿ ಮೃತಪಟ್ಟ ಹುಡುಗ) ಹೆಸರಿನಲ್ಲಿ ನಿರ್ವಿುಸಿರುವ ‘ಸನಾದಿ ಅಪ್ಪಣ್ಣ’ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಈ ಚಿತ್ರದ ನಿಜವಾದ ಹೀರೋ ರಾಜ್​ಕುಮಾರ್ ಅವರಾದರೂ ಸಂಗೀತಪ್ರಿಯರಿಗೆ ಜಿ.ಕೆ. ವೆಂಕಟೇಶ್ ಅವರೇ ನಿಜವಾದ ಹೀರೋವಾಗಿ ಕಂಡಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ! ರಾಜ್​ಕುಮಾರ್ ಅವರ ವೃತ್ತಿಬದುಕಿನಲ್ಲಿ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿ ನಿಂತ ಚಿತ್ರ ‘ಸನಾದಿ ಅಪ್ಪಣ್ಣ’. ರಾಜ್-ಜಯಪ್ರದಾ ನಟನೆ ಮತ್ತು ಬಿಸ್ಮಿಲ್ಲಾ ಖಾನ್ ಅವರ ಅಮೋಘ ಶಹನಾಯಿ ವಾದನ ಇಡಿಯ ಚಿತ್ರವನ್ನು ಯಾವುದೋ ಎತ್ತರಕ್ಕೇರಿಸಿದ್ದು ನಿಜ. ಜತೆಗೆ ಜಿ.ಕೆ. ವೆಂಕಟೇಶ್ ಅವರ ಅದ್ಭುತ ಸಂಗೀತ ಕೂಡ ಒಟ್ಟು ಚಿತ್ರದ ಯಶಸ್ಸಿಗೆ ಪೂರಕವಾಯಿತು. ಕೃಷ್ಣಮೂರ್ತಿ ಪುರಾಣಿಕ ಅವರ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರದ ಶತದಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದವರು ಅದೇ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ.

Leave a Reply

Your email address will not be published. Required fields are marked *

Back To Top