Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಟ್ರಂಪ್ ನಡೆಯಿಂದ ಇಕ್ಕಟ್ಟು

Saturday, 09.09.2017, 3:00 AM       No Comments

ನಪ್ರಿಯ ನಿರೀಕ್ಷೆಯನ್ನು ಹುಸಿಗೊಳಿಸುವ ರೀತಿಯಲ್ಲಿ ಅಮೆರಿಕದ ಅಧ್ಯಕ್ಷ ಗಾದಿಗೇರಿದ ಡೊನಾಲ್ಡ್ ಟ್ರಂಪ್, ಆರಂಭದಿಂದಲೂ ಒಂದಿಲ್ಲೊಂದು ವಿಲಕ್ಷಣ ನಡೆಗಳಿಂದಾಗಿ ಸುದ್ದಿಯಾಗುತ್ತಿದ್ದಾರೆ. ‘ಅಮೆರಿಕ ಮೊದಲು’ ಎಂಬ ಇವರ ಧ್ಯೇಯವಾಕ್ಯಕ್ಕೆ, ಕೆಲ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧ ವಿಧಿಸುವ ಇವರ ನಡೆಗೆ ಬಹುತೇಕರ ಬೆಂಬಲ ದಕ್ಕಿತಾದರೂ, ಕೆಲ ವಲಯಗಳಿಂದ ವ್ಯತಿರಿಕ್ತ ದನಿಗಳೂ ಹೊಮ್ಮುತ್ತಿರುವುದನ್ನು ತಳ್ಳಿಹಾಕಲಾಗದು. ಪ್ರಸ್ತುತ, ಅಕ್ರಮ ಯುವ ವಲಸಿಗರಿಗೆ ಅಮೆರಿಕದಲ್ಲಿ ನೆಲೆಸಲು ಅವಕಾಶ ನೀಡುವ ‘ಡಾಕಾ’ ಯೋಜನೆಯನ್ನು ಟ್ರಂಪ್ ರದ್ದುಗೊಳಿಸಿರುವುದು ಹಲವೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಂಪ್ ಆದೇಶವನ್ನು ವಿರೋಧಿಸಿ ಅಲ್ಲಿನ 15 ಸಂಸ್ಥಾನಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಅನ್ಯದೇಶದಲ್ಲಿ ಹುಟ್ಟಿ, ವಲಸಿಗರಾಗಿ ಅಮೆರಿಕ ಪ್ರವೇಶಿಸಿ ಅಧಿಕೃತ ದಾಖಲೆಯಿಲ್ಲದಂತೆ ವರ್ಧಿಸುವ ಯುವಸಮೂಹದ ರಕ್ಷಣೆಗೆಂದು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ಜಾರಿಗೆ ತಂದಿದ್ದೇ ‘ಡಾಕಾ’ (ಡಿಫರ್ಡ್ ಆಕ್ಷನ್ ಫಾರ್

ಚೈಲ್ಡ್​ಹುಡ್ ಅರೈವಲ್ಸ್) ಯೋಜನೆ. ಇದರನ್ವಯ ಅನಧಿಕೃತ ಯುವ ವಲಸಿಗರು ಅಮೆರಿಕದಲ್ಲಿ ಕೆಲಸ ಮಾಡಲು ಅಧಿಕೃತ ಪರವಾನಗಿ ಪಡೆಯುತ್ತಾರೆ. ಇದರ ರದ್ದತಿಗೆ ಮುಂದಾಗಿರುವ ಟ್ರಂಪ್ ನಡೆ ಅಸಾಂವಿಧಾನಿಕ ಎಂಬ ಈ ಸಂಸ್ಥಾನಗಳ ಆರೋಪದಲ್ಲಿಯೂ ಹುರುಳಿದೆ. ಕಾರಣ, ಅಮೆರಿಕದ ಅಸ್ತಿತ್ವ ಮತ್ತು ಬೆಳವಣಿಗೆಗೆ ಅಸೀಮ ಕೊಡುಗೆ ನೀಡಿದವರಲ್ಲಿ ಬಾಲ್ಯಾವಸ್ಥೆಯಲ್ಲೇ ಅಮೆರಿಕ ಪ್ರವೇಶಿಸಿದ ವಲಸಿಗರೂ ಸೇರಿದ್ದಾರೆ ಎಂಬುದನ್ನು ಮರೆಯಲಾಗದು. ಇವರಿಗೆ ದೇಶದ ಪೌರತ್ವ ದಕ್ಕಿಲ್ಲದಿರಬಹುದು; ಆದರೆ ಇವರ ಪರಿಶ್ರಮ, ಕಾರ್ಯನಿಷ್ಠೆ ಹಾಗೂ ದೇಶನಿಷ್ಠೆಯ ಬಗ್ಗೆ ಅಮೆರಿಕದ ಜನರಿಗೂ ಹೆಮ್ಮೆ-ಸಹಾನುಭೂತಿ ಇದೆ ಎಂಬುದು, ಈ ಕುರಿತಾಗಿ ನಡೆದ ಜನಮತ ಸಂಗ್ರಹದಲ್ಲೂ ವ್ಯಕ್ತವಾಗಿದೆ. ಶಾರೀರಿಕ ಶ್ರಮದ ಕೆಲಸಗಳು ಮಾತ್ರವಲ್ಲದೆ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿನ ಪರಿಣತರು ಅಮೆರಿಕದ ವೈಭವ, ಸಿದ್ಧಿ-ಪ್ರಸಿದ್ಧಿ, ಸಿರಿವಂತಿಕೆಗೆ ಕೊಡುಗೆ ನೀಡುತ್ತ ಬಂದಿದ್ದಾರೆಂಬುದು ನಿಜ. ಹೀಗಿರುವಾಗ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರತಿಭಾವಂತ ವಲಸಿಗರನ್ನು ಹೊರದೂಡುವ ‘ಟ್ರಂಪ್ ಹಠ’ ಹಲವು ಗುಣಗ್ರಾಹಿಗಳ ಕಣ್ಣುಕೆಂಪಾಗಿಸಿರುವುದಂತೂ ಹೌದು. ಈ ನಿಲುವಿನ ಕುರಿತು ಕಿಡಿಕಾರಿರುವ ಔದ್ಯಮಿಕ ವಲಯ, ಪ್ರತಿಭಾವಂತ ವಲಸಿಗರನ್ನು ಗಡಿಪಾರು ಮಾಡಿದರೆ ಅಮೆರಿಕಕ್ಕೇ ನಷ್ಟ ಎಂಬುದನ್ನು ಟ್ರಂಪ್​ಗೆ ಮನವರಿಕೆ ಮಾಡಿಕೊಡುವ ಕಸರತ್ತಿನಲ್ಲಿ ವ್ಯಸ್ತರಾಗಿದ್ದಾರೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ವಲಸಿಗರನ್ನು ಒತ್ತಾಯಪೂರ್ವಕವಾಗಿ ಹೊರಹಾಕಿದ್ದೇ ಆದಲ್ಲಿ, ಅಮೆರಿಕದ ಆರ್ಥಿಕತೆಗೆ ಗಣನೀಯ ಪೆಟ್ಟು ಬೀಳುವುದರ ಜತೆಗೆ, ಉದ್ಯಮ ಮಾಲೀಕರು ಅವರಿಗೆ ಅಧಿಕ ಮೊತ್ತದ ಪರಿಹಾರಧನ ನೀಡಬೇಕಾಗುತ್ತದೆ. ಇದಲ್ಲದೆ, ಏಕಾಏಕಿ ಪ್ರತಿಭಾವಂತರನ್ನು ಹೊರತಳ್ಳಿದರೆ ಅಷ್ಟೇ ಸಂಖ್ಯೆಯಲ್ಲಿ ಪರ್ಯಾಯ ನೌಕರರನ್ನು ನೇಮಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಮತ್ತೊಂದು ಕಹಿವಾಸ್ತವ.

ಔದ್ಯಮಿಕ ಹಿನ್ನೆಲೆಯ ಟ್ರಂಪ್ ಇಂಥ ಅಪ್ರಬುದ್ಧ ನಿರ್ಣಯಗಳನ್ನು ತಳೆಯುತ್ತಿರುವುದಕ್ಕೆ ಅವರಿಗೆ ಯಾವುದೇ ರಾಜಕೀಯ ಅನುಭವ ಇಲ್ಲದಿರುವುದು ಮತ್ತು ಇಂಥ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಲಹೆಗಾರರೊಂದಿಗೆ ಸಮಾಲೋಚಿಸದಿರುವುದೇ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ದೇಶದ ಆರ್ಥಿಕತೆಯ ಸಂರಕ್ಷಣೆ ಮಾತ್ರವಲ್ಲದೆ, ವಿದೇಶಿ ಬಾಂಧವ್ಯಕ್ಕೆ ಧಕ್ಕೆಯಾಗದಂತಿರಲು ಟ್ರಂಪ್ ತಮ್ಮ ಚಿಂತನೆಯನ್ನು ಪರಿಷ್ಕರಿಸಿಕೊಳ್ಳಬೇಕಿದೆಯೆಂಬುದು ತಜ್ಞರ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ.

Leave a Reply

Your email address will not be published. Required fields are marked *

Back To Top