Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಟ್ರಂಪ್ ಏಷ್ಯಾ ಪ್ರವಾಸ ಭಾರತಕ್ಕೆ ಶುಭತರಲಿ

Friday, 03.11.2017, 3:03 AM       No Comments

| ಎನ್​ ಪಾರ್ಥಸಾರಥಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ.5ರಿಂದ 13ರವರೆಗೆ ಏಷ್ಯಾ ಖಂಡದ ಪ್ರವಾಸ ಕೈಗೊಳ್ಳಲಿದ್ದು, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್ ಮತ್ತು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ಕಾರ್ಯಸೂಚಿಯಲ್ಲಿ ಭಾರತ ಸೇರ್ಪಡೆಯಾಗಿಲ್ಲ. ಈ ಪ್ರವಾಸದ ಕೇಂದ್ರಬಿಂದು ಚೀನಾ. ಆದರೂ, ಏಷ್ಯಾದ ಅಮೆರಿಕಸ್ನೇಹಿ ರಾಷ್ಟ್ರಗಳ ಹಿತಕಾಯುವ ಎಡೆಗಿನ ಬದ್ಧತೆಯನ್ನು ಅವರು ಮರುಖಾತ್ರಿಪಡಿಸಬೇಕಾಗುತ್ತದೆ. ಹಾಗಾಗಿಯೇ ನ.5ರಂದು ಜಪಾನ್ ಭೇಟಿಯೊಂದಿಗೆ ಅವರು ಪ್ರವಾಸ ಆರಂಭಿಸುತ್ತಿದ್ದಾರೆ.

ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಂದಾಗಿ ಈ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಜತೆಗೆ ಮಾತುಕತೆ ನಡೆಸುವ ಜತೆಗೆ, ಟ್ರಂಪ್ ಅವರು ಉತ್ತರ ಕೊರಿಯಾ ಅಪಹರಿಸಿರುವ ಜಪಾನೀಯರ ಕುಟುಂಬ ವರ್ಗದವರನ್ನು ಸಹ ಭೇಟಿಯಾಗಲಿದ್ದಾರೆ. ಈ ವಲಯದಲ್ಲಿ ಹೆಚ್ಚುತ್ತಿರುವ ಉತ್ತರ ಕೊರಿಯಾದ ದೌರ್ಜನ್ಯಗಳ ಕುರಿತು ಜಾಗತಿಕವಾಗಿ ಗಮನಸೆಳೆಯುವುದು ಇದರ ಉದ್ದೇಶ. ದಕ್ಷಿಣ ಚೀನಾ ಸಾಗರ ಮಾರ್ಗದ ಮುಕ್ತ ಬಳಕೆ ನಿಟ್ಟಿನಲ್ಲಿ ಅಮೆರಿಕ, ಜಪಾನ್ ಬೆಂಬಲಕ್ಕೆ ನಿಲ್ಲಲಿದೆ ಎಂಬುದನ್ನು ಖಾತ್ರಿಪಡಿಸುವುದು ಸಹ ಅವರ ಪ್ರಮುಖ ಕಾರ್ಯಸೂಚಿಯಾಗಿದೆ.

ನ.7ರಂದು ದಕ್ಷಿಣ ಕೊರಿಯಾಕ್ಕೆ ತೆರಳುವ ಅಧ್ಯಕ್ಷ ಟ್ರಂಪ್, ಈ ಪ್ರದೇಶದಲ್ಲಿ ಮೂಡಿರುವ ಉದ್ವಿಗ್ನತೆಯನ್ನು ಶಮನ ಮಾಡಲು ಉತ್ತರ ಕೊರಿಯಾ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗುವಂತೆ ಮಾಡಲು ಯತ್ನಿಸಲಿದ್ದಾರೆ. ದಕ್ಷಿಣ ಕೊರಿಯಾ ಸಾರ್ವಭೌಮತ್ವ ರಾಷ್ಟ್ರವಾಗಿದ್ದರೂ, ಉತ್ತರ ಕೊರಿಯಾ ಜತೆ ಯುದ್ಧವೇನಾದರೂ ನಡೆದಲ್ಲಿ, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸೇನಾಪಡೆ ನೇತೃತ್ವ ಅಮೆರಿಕದ ಸೇನಾ ಕಮಾಂಡರ್​ದೇ ಆಗಿರುತ್ತದೆ.

ಟ್ರಂಪ್ ನ.8ರಂದು ಬೀಜಿಂಗ್ ತಲುಪಲಿದ್ದು, ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜತೆ ಮಾತುಕತೆ ನಡೆಸಲಿದ್ದಾರೆ. ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ, ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉತ್ತರ ಕೊರಿಯಾದ ಮನವೊಲಿಸಲು ಪಯತ್ನಿಸುವಂತೆ ಚೀನಾ ಮೇಲೆ ಒತ್ತಡ ಹೇರುವ ನಿರೀಕ್ಷೆ ಇದೆ. ವಾಣಿಜ್ಯಾತ್ಮಕವಾಗಿ ಉತ್ತರ ಕೊರಿಯಾ ಚೀನಾವನ್ನೇ ಅವಲಂಬಿಸಿದೆ. ಈ ಜೀವನಾಡಿಯನ್ನು ತುಂಡರಿಸುವ ಬೆದರಿಕೆಯೊಡ್ಡಿಯಾದರೂ ಆ ರಾಷ್ಟ್ರವನ್ನು ಸರಿದಾರಿಗೆ ತರಲು ಚೀನಾಕ್ಕೆ ಅವಕಾಶ ಇರುವುದೇ ಇದಕ್ಕೆ ಕಾರಣ. ಇದೇ ವೇಳೆ, ದಕ್ಷಿಣ ಚೀನಾ ಸಾಗರ ಮಾರ್ಗ ಬಳಕೆ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಪಾಲಿಸುವಂತೆ ಮತ್ತು ಎಲ್ಲ ರಾಷ್ಟ್ರಗಳಿಗೂ ಈ ಮಾರ್ಗದ ಮುಕ್ತ ಬಳಕೆಗೆ ಅವಕಾಶವೀಯುವಂತೆ ಟ್ರಂಪ್ ಚೀನಾವನ್ನು ಆಗ್ರಹಿಸಲಿದ್ದಾರೆ. ಅಮೆರಿಕ-ಚೀನಾ ನಡುವೆ ಬೃಹತ್ ಪ್ರಮಾಣದ ವ್ಯಾಪಾರ ವ್ಯವಹಾರಗಳಿವೆ. ಆದರೆ, ಸದ್ಯ ಅಮೆರಿಕದ ವ್ಯಾಪಾರ ಕೊರತೆಯಲ್ಲಿ (ವಾರ್ಷಿಕವಾಗಿ 22.61 ಲಕ್ಷ ಕೋಟಿ ರೂ.) ಅರ್ಧಕ್ಕೂ ಹೆಚ್ಚು ಪಾಲು ಚೀನಾದ್ದು. ಹೀಗಾಗಿ ಈ ವ್ಯಾಪಾರ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕದ ರಫ್ತಿಗೆ ಹೆಚ್ಚು ಅವಕಾಶ ನೀಡಬೇಕೆಂಬ ಆಗ್ರಹವನ್ನು ಟ್ರಂಪ್ ಮಾಡುವ ನಿರೀಕ್ಷೆಯಿದೆ.

ಚೀನಾದಲ್ಲಿ 3 ದಿನಗಳ ಕಾಲ ತಂಗಲಿರುವ ಟ್ರಂಪ್, ನ.10ರಂದು ವಿಯೆಟ್ನಾಂಗೆ ತೆರಳಲಿದ್ದಾರೆ. ಡನಾಂಗ್​ನಲ್ಲಿ ನಿಗದಿಯಾಗಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಪಿಇಸಿ ಸಿಇಒ ಶೃಂಗದಲ್ಲಿ ಅವರು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತಾವರಣ ಸೃಷ್ಟಿಸುವ ಅಮೆರಿಕದ ಮಾರ್ಗಸೂಚಿಯನ್ನು ಸಾದರಪಡಿಸಲಿದ್ದಾರೆ. ನ.11ಕ್ಕೆ ಹನೋಯಿಗೆ ತೆರಳಿ, ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆಯ (ಆಸಿಯಾನ್) ಸುವರ್ಣ ಮಹೋತ್ಸವ ನಿಮಿತ್ತ ನ.12ರಂದು ಮನಿಲಾದಲ್ಲಿ ಆಯೋಜನೆಗೊಂಡಿರುವ ಭೋಜನ ಕೂಟದಲ್ಲಿ ಟ್ರಂಪ್ ಪಾಲ್ಗೊಳ್ಳಲಿದ್ದಾರೆ. ನ.14ಕ್ಕೆ ನಿಗದಿಯಾಗಿರುವ ಪೂರ್ವ ಏಷ್ಯಾ ಶೃಂಗದಲ್ಲೂ (ಇಎಎಸ್) ಅವರು ಭಾಗವಹಿಸಬೇಕಿತ್ತು. ಆದರೆ, ತುರ್ತು ಕಾರ್ಯನಿಮಿತ್ತ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ. ಪ್ರತಿವರ್ಷ ನಡೆಯುವ ಇಎಎಸ್ ಶೃಂಗದಲ್ಲಿ ಆಸಿಯಾನ್​ನ ಎಲ್ಲ 10 ಸದಸ್ಯ ರಾಷ್ಟ್ರಗಳಲ್ಲದೆ, ಮಾತುಕತೆಯ ಪಾಲುದಾರ ರಾಷ್ಟ್ರಗಳಾದ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ, ಭಾರತ, ಜಪಾನ್, ರಷ್ಯಾ ಮತ್ತು ದಕ್ಷಿಣ ಕೊರಿಯಾದ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.

ಭಾರತಕ್ಕೆ ಶುಭಸುದ್ದಿ: ಟ್ರಂಪ್ ಭಾರತಕ್ಕೆ ಬಾರದಿರುವ ಬಗ್ಗೆ ಅನ್ಯಥಾ ಭಾವಿಸಬೇಕಾಗಿಲ್ಲ. ಉತ್ತರ ಕೊರಿಯಾ ಯುದ್ಧೋನ್ಮಾದ ಕಡಿಮೆ ಮಾಡುವುದು ಹಾಗೂ ಚೀನಾದೊಂದಿಗಿನ ವ್ಯಾಪಾರ ಕೊರತೆ ತಗ್ಗಿಸುವ ಪ್ರಮುಖ ಕಾರ್ಯಸೂಚಿ ಯೊಂದಿಗೆ ಅವರು ಚೀನಾಕ್ಕೆ ತೆರಳುತ್ತಿದ್ದಾರೆ. ತಮ್ಮ ‘ನಿಜಮಿತ್ರ’ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಆಹ್ವಾನವನ್ನು ಸ್ವೀಕರಿಸಿರುವ ಟ್ರಂಪ್, ಸದ್ಯದಲ್ಲೇ ಭಾರತದ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವರ ಪುತ್ರಿ ಇವಾಂಕಾ ಈ ತಿಂಗಳು ಹೈದರಾಬಾದ್​ನಲ್ಲಿ ನಿಗದಿಯಾಗಿರುವ ಜಾಗತಿಕ ಉದ್ಯಮದಾರರ ಶೃಂಗದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.

ಮನಿಲಾ ಆತಿಥ್ಯವಹಿಸುತ್ತಿರುವ ಪೂರ್ವ ಏಷ್ಯಾ ಶೃಂಗದ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಮತ್ತೊಮ್ಮೆ ಭೇಟಿಯಾಗಬೇಕಿತ್ತು. ಆದರೆ, ಟ್ರಂಪ್ ಪ್ರವಾಸ ಮೊಟಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಆದರೆ, ಪ್ರಸ್ತುತ ಪ್ರವಾಸದಲ್ಲಿ ಅವರು ಅಮೆರಿಕದ ಏಳಿಗೆ ಮತ್ತು ಭದ್ರತೆ ದೃಷ್ಟಿಯಿಂದ ಇಂಡೊ-ಪೆಸಿಫಿಕ್ ಪ್ರದೇಶದ ರಾಷ್ಟ್ರಗಳ ಅಭಿವೃದ್ಧಿ ಕುರಿತು ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಇಂಡೋ-ಪೆಸಿಫಿಕ್ ವಲಯದ ಅಮೆರಿಕದ ಮಾರ್ಗಸೂಚಿ ನೀತಿಯಲ್ಲಿ ಭಾರತ ಪ್ರಾಮುಖ್ಯ ಪಡೆದಿದೆ. ಭಾರತವು, ಅಮೆರಿಕ ಮಿಲಿಟರಿ ಯೋಜನೆಯ ಪೆಸಿಫಿಕ್ ಕಮಾಂಡ್​ನ ವ್ಯಾಪ್ತಿಯಲ್ಲಿದೆ. ಈ ಪ್ರದೇಶ ಹಾಗೂ ಅಫ್ಘಾನಿಸ್ತಾನದ ಮರುನಿರ್ವಣದಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡುವಂತೆ ಅಧ್ಯಕ್ಷ ಟ್ರಂಪ್ ಭಾರತವನ್ನು ಆಗ್ರಹಿಸುತ್ತಿದ್ದಾರೆ. ಭಾರತದೊಂದಿಗಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ರಕ್ಷಣಾ ಕಾರ್ಯದರ್ಶಿ ಜೇಮ್್ಸ ಮ್ಯಾಟಿಸ್ ಬದ್ಧತೆ ತೋರಿದ್ದಾರೆ. ‘ಈ ಶತಮಾನದಲ್ಲಿ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರ, ಹೆಚ್ಚಿನ ಪ್ರಾಮುಖ್ಯತೆ ಹೊಂದಿವೆ. ಈ ಪ್ರದೇಶದ ಸ್ಥಿರ ಮತ್ತು ನಿಯಮಬದ್ಧ ಅಭಿವೃದ್ಧಿಗೆ ಚೀನಾ ಬಹುದೊಡ್ಡ ಸವಾಲಾಗಿದೆ. ಈ ಪ್ರದೇಶದಲ್ಲಿ ಪ್ರಬುದ್ಧ ರಾಷ್ಟ್ರ ಭಾರತ, ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದೆ’ ಎಂದು ಸೆಕ್ರಟರಿ ಆಫ್ ಸ್ಟೇಟ್ ಟಿಲ್ಲರ್​ಸನ್ ಹರ್ಷ ವ್ಯಕ್ತಪಡಿಸಿದ್ದರಲ್ಲದೆ, ಚೀನಾದ ಸವಾಲುಗಳನ್ನು ಮೆಟ್ಟಿನಿಲ್ಲಲು ಭಾರತವನ್ನು ಪಾಲುದಾರ ರಾಷ್ಟ್ರವನ್ನಾಗಿಸಿಕೊಳ್ಳುವ ವಿಷಯದಲ್ಲಿ ಬದ್ಧತೆ ತೋರಿದ್ದರು.

ಚೀನಾ, ಭಾರತದ ಪಾಲಿಗೆ ಬಹುದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಭಾರತವನ್ನು ಸಂಕಷ್ಟದ ಸುಳಿಗೆ ಸಿಲುಕಿಸುವಂಥ ನೀತಿಗಳ ನಿರೂಪಣೆ, ದಕ್ಷಿಣ ಚೀನಾ ಸಾಗರ ತನ್ನ ಸ್ವಂತದ್ದು ಎಂಬ ಚೀನಾದ ಪ್ರತಿಪಾದನೆ ಇದಕ್ಕೆ ಸಾಕ್ಷಿ. ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದ ಪ್ರಭಾವವನ್ನು ಕ್ಷೀಣಿಸುವಂತೆ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸಿತು. ಆದರೆ, ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಭಾರತ ಮತ್ತಷ್ಟು ಪ್ರಭಾವಶಾಲಿಯಾಗಿ ಬೆಳೆಯಲಿದೆ ಎಂಬರ್ಥದ ಸಂದೇಶ ಹೊತ್ತ ಅಧ್ಯಕ್ಷ ಟ್ರಂಪ್ ನೀಡಿದ ಹೇಳಿಕೆಗಳು ಭಾರತಕ್ಕೆ ವರದಾನವಾದವು. ಹಾಗೆಂದು, ಇಂತಹ ಮೆಚ್ಚುಗೆಯ ಮಾತುಗಳಿಗೆ ಉಬ್ಬದೆ, ಟ್ರಂಪ್ ವ್ಯವಹಾರಚತುರ ಎಂಬುದನ್ನು ಭಾರತ ಮರೆಯಬಾರದು. ಪಾಕಿಸ್ತಾನವನ್ನು ಇನ್ನಿಲ್ಲದಂತೆ ಝಾಡಿಸುತ್ತಿದ್ದ ಅವರು, ತಮ್ಮ ರಾಷ್ಟ್ರದ ಪ್ರಜೆ ಮತ್ತವರ ಕುಟುಂಬವನ್ನು ಉಗ್ರರಿಂದ ಪಾರು ಮಾಡುತ್ತಲೇ ವರಸೆಯನ್ನೇ ಬದಲಿಸಿದರು. ಈ ವಲಯದಲ್ಲಿ ಪಾಕಿಸ್ತಾನಕ್ಕೂ ಮುಖ್ಯ ಪಾತ್ರವಿದೆ ಎಂಬ ರಾಗ ಆರಂಭಿಸಿದರು. ಉತ್ತರ ಕೊರಿಯಾದ ವಿಷಯದಲ್ಲಿ ಸ್ವಲ್ಪ ಗಟ್ಟಿ ನಿಲುವು ತಳೆಯುವ ಜತೆಗೆ, ಅಮೆರಿಕದ ರಫ್ತಿಗೆ ತನ್ನ ಕೆಲವು ವಲಯಗಳನ್ನು ಮುಕ್ತಗೊಳಿಸಿದರೆ ಚೀನಾ ಬಗ್ಗೆ ಕೂಡ ಟ್ರಂಪ್ ರಾಗ ಬದಲಾದರೆ ಅಚ್ಚರಿಯೇನೂ ಇಲ್ಲ. ತಾವು ತಳೆದ ದೃಢ ನಿಲುವಿನಿಂದಾಗಿ ಈ ಗೆಲುವು ದಕ್ಕಿತು ಎಂದು ಬೀಗುತ್ತಾ, ದಕ್ಷಿಣ ಚೀನಾ ಸಾಗರದ ವಿಷಯದಲ್ಲಿ ನಿಲುವು ಸಡಿಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ಸಂಪುರ್ಣವಾಗಿ ಸ್ಥಗಿತಗೊಳಿಸುವಂತೆ ಮಾಡಲು ಪೂರಕ ನೀತಿಗಳನ್ನು ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಅಮೆರಿಕ ಕಳೆದೆರಡು ದಶಕಗಳಿಂದ ವಿಫಲವಾಗಿದೆ. ಈ ಅವಧಿಯಲ್ಲಿ ಉತ್ತರ ಕೊರಿಯಾ, ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ಹೊಂದಿ, ಮೆರೆದಾಡುತ್ತಿದೆ. ಇನ್ನು ಎರಡು ವರ್ಷಗಳಲ್ಲಿ ಉತ್ತರ ಕೊರಿಯಾವನ್ನು ಕಟ್ಟಿಹಾಕಲು ಅಮೆರಿಕಕ್ಕೆ ಸಾಧ್ಯವಾಗದಿದ್ದರೆ, ಅಮೆರಿಕ ಮೇಲೇ ದಾಳಿ ಮಾಡಲು ಸಾಧ್ಯವಾಗುವಂತೆ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಬಹುದಾದ ಐಸಿಬಿಎಂಗಳನ್ನು ಉ.ಕೊರಿಯಾ ಸಿದ್ಧಪಡಿಸುವುದರಲ್ಲಿ ಅನುಮಾನವಿಲ್ಲ. ದಕ್ಷಿಣ ಕೊರಿಯಾ ಅಥವಾ ಜಪಾನ್ ಅನ್ನು ಉತ್ತರ ಕೊರಿಯಾ ಬೆದರಿಸಲು ಪ್ರಯತ್ನಿಸಿದರೆ, ಅಮೆರಿಕ ನೆರವಿಗೆ ಮುಂದಾಗುತ್ತದೆಯೇ ಎಂಬುದು ಪ್ರಶ್ನೆ. ಏಕೆಂದರೆ, ಅದಕ್ಕೇ ಉತ್ತರ ಕೊರಿಯಾದ ಅಣ್ವಸ್ತ್ರ ದಾಳಿ ಬೆದರಿಕೆಯಿದೆಯಲ್ಲ. ಈ ಕಾರಣದಿಂದಾಗಿ, ಟ್ರಂಪ್ ಅವರ ‘ಅಮೆರಿಕ ಮೊದಲು’ ನೀತಿ ಕುರಿತು ಜಪಾನ್ ಮತ್ತಿತರ ರಾಷ್ಟ್ರಗಳಲ್ಲಿ ಸಂದೇಹ ಮನೆ ಮಾಡಿದೆ. ಭವಿಷ್ಯದಲ್ಲಿ ಜಪಾನ್ ಅಥವಾ ದಕ್ಷಿಣ ಕೊರಿಯಾ ಮೇಲೆ ದಾಳಿ ಮಾಡುವುದಾಗಿ ಚೀನಾ ಬೆದರಿಸಿದರೂ ಇಂಥದ್ದೇ ಸ್ಥಿತಿ ನಿರ್ವಣವಾಗುವ ಸಾಧ್ಯತೆ ಇಲ್ಲದಿಲ್ಲ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಕಷ್ಟಪಟ್ಟು ರೂಪಿಸಿದ್ದ ಟ್ರಾನ್ಸ್-ಪೆಸಿಫಿಕ್ ಪಾಲುದಾರಿಕೆ ಒಪ್ಪಂದವನ್ನು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಟ್ರಂಪ್ ರದ್ದುಗೊಳಿಸಿದ್ದನ್ನು ನಾವಿಲ್ಲಿ ನೆನೆಯಬಹುದು. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಭದ್ರತೆ ದೃಷ್ಟಿಯಿಂದ, ಅವು ಒಗ್ಗೂಡಿ ಪ್ರಾದೇಶಿಕ ಜಾಲ (ಅಮೆರಿಕದ ಬೆಂಬಲದೊಂದಿಗೆ) ನಿರ್ವಿುಸಿಕೊಳ್ಳಲು ಮುಂದಾಗುತ್ತಿವೆ. ಈ ಜಾಲ ನಿರ್ವಣದಲ್ಲಿ ಭಾರತ ಕೈಜೋಡಿಸಬೇಕು ಹಾಗೂ ನಾಯಕತ್ವ ವಹಿಸಬೇಕು ಎಂಬುದು ಜಪಾನ್ ಮತ್ತು ಆಸ್ಟ್ರೇಲಿಯಾ ಬಯಕೆ.

ಇಂತಹ ಜವಾಬ್ದಾರಿ ವಹಿಸಿಕೊಂಡು, ಬಹುಪಕ್ಷೀಯ ಸಂಘಟನೆಯ ನಾಯಕತ್ವವಹಿಸಲು ಭಾರತ ಸನ್ನದ್ಧವಾಗಿದೆಯೇ ಎಂಬುದು ಪ್ರಶ್ನೆ. ಅದು ಚೀನಾಕ್ಕೆ ಸೆಡ್ಡು ಹೊಡೆಯಲು ಈ ಪ್ರದೇಶದ ಎಲ್ಲ ರಾಷ್ಟ್ರಗಳ ದೊಡ್ಡಣ್ಣನಾಗುವ ಉತ್ಸಾಹ ತೋರುತ್ತದೆಯೇ? ಡೋಕ್ಲಂ ವಿಷಯದಲ್ಲಿ ಪ್ರಧಾನಿ ಮೋದಿ ಕಠಿಣ ನಿಲುವು ತಳೆದು, ಬಿಕ್ಕಟ್ಟು ಶಮನಗೊಳಿಸುವಲ್ಲಿ ಯಶಸ್ವಿಯಾದರು ಎಂಬುದು ನಿಜ. ಚೀನಾದ ಸವಾಲು ನಿರ್ವಹಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗಿನ ಬಾಂಧವ್ಯದ ಪ್ರಭಾವವನ್ನು ಅದು ಬಳಸಿಕೊಳ್ಳುವುದೇ? ಈ ವಲಯದ ನಾಯಕತ್ವ ವಹಿಸುವ ಬಯಕೆ ಒಂದು ವಿಷಯವಾದರೆ, ನಾಯಕತ್ವ ವಹಿಸಿಕೊಳ್ಳುವ ಸಂಕಲ್ಪ ಸಂಪೂರ್ಣ ಭಿನ್ನವಾದುದು ಎಂಬುದನ್ನು ಮರೆಯಬಾರದು.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top