Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಟ್ಯಾಂಕಿಯ ನಷ್ಟ ತುಂಬಿಕೊಟ್ಟ ಕೊಳವೆಬಾವಿ

Monday, 23.10.2017, 3:03 AM       No Comments

| ಶ್ರೀ ಪಡ್ರೆ

ಕಲಬುರಗಿ ರಾಜ್ಯದ ಒಣ ನಗರಗಳಲ್ಲಿ ಒಂದು. ಬೀಳುವ ಮಳೆ 700 ಮಿ.ಮೀಟರ್ ವಾಸ್ತವವಾಗಿ ನಾನೂರು ಮಿಮೀ ಮಳೆ ಸುರಿದರೂ, ಜತನದಿಂದ ಕಾಪಿಟ್ಟು ಬಳಸಿದರೆ ಕಡಿಮೆ ಮಳೆಯೇನೂ ಅಲ್ಲ. ಆದರೆ ಈವರೆಗೆ ಅಲ್ಲಿನ ಜನಕ್ಕೆ ಎಲ್ಲರು ಕಲಿಸಿದ್ದೇ ಒಣ ಊರು ಎಂದು ಗೋಳಾಡಲು! ಬದಲಿಗೆ ಇರೋ ನೀರಲ್ಲಿ ನಗುನಗುತ್ತಾ ಬದುಕುವ ಮಾದರಿಯನ್ನು ಅಲ್ಲಿ ಸೃಷ್ಟಿಸಬೇಕಿತ್ತು. ದುರಾದೃಷ್ಟ, ಅಲ್ಲಿ ಮಳೆಕೊಯ್ಲಿನಂತಹ ಚಿಂತನೆ ಇನ್ನೂ ಹಬ್ಬಿಲ್ಲ, ಬೆಳೆದಿಲ್ಲ.

ಆದರೂ ಅರಿವಿನ ಕೊರತೆಯ ಈ ಮರಳುಗಾಡಿನಲ್ಲಿ ಒಂದು ಓಯಸಿಸ್ ಇದೆ. ನೀರೆಚ್ಚರ ಹೊಂದಿ ಜನ ನಂಬದ ಕೆಲಸ ಮಾಡಿತೋರಿಸುವ ಛಲದ ಸರಕಾರಿ ಅಧಿಕಾರಿ ಪದ್ಮಾಕರ ಕಲಕರ್ಣಿ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಅವರ ಕಚೇರಿ ಇರುವುದು ನಗರದ ಕೇಂದ್ರ ಸ್ಥಳವಾದ ರೈಲು ನಿಲ್ದಾಣದ ಎದುರು, ಹಳೆಯ ಬಸ್​ನಿಲ್ದಾಣದ ಪಕ್ಕ. ಹಿಂದೆ ಈ ಕಚೇರಿ ಆವರಣ ಬಯಲು ಶೌಚಾಲಯವಾಗಿತ್ತು. 2007ರಲ್ಲಿ ಡೆಪ್ಯುಟಿ ಕಮಿಷನರಾಗಿ ಬಡ್ತಿ ಪಡೆದ ಪದ್ಮಾಕರ್ ಅವರಿಗೆ ಕಟ್ಟಡದ ನವೀಕರಣಕ್ಕೆ ಅನುದಾನ ಸಿಕ್ಕಿತು. ಶಿಥಿಲವಾಗಿದ್ದ ಆವರಣ ಗೋಡೆಯನ್ನು ಹೊಸದಾಗಿಸಿದರು. ಕಾವಲುಗಾರನನ್ನು ನೇಮಿಸಿದರು. ಇದರೊಂದಿಗೆ ಜನ ಇಲ್ಲಿ ತಂತಮ್ಮ ‘ರೇಡಿಯೇಟರ್’ ಖಾಲಿ ಮಾಡುವುದು ಪೂರ್ತಿ ನಿಂತೇಬಿಟ್ಟಿತು.

ಆದರೆ ವಿಪರ್ಯಾಸ ನೋಡಿ. ಹೆಚ್ಚುಕಮ್ಮಿ 150 ಜನ ದುಡಿಯೋ ಕಚೇರಿ ಇದು. ದಿನಕ್ಕೆ ಕನಿಷ್ಠ 3 ಸಾವಿರ ಲೀಟರ್ ನೀರು ಬೇಕು. ಇಲ್ಲಿ ಬೇಸಿಗೆಯಲ್ಲಿ ಕಚೇರಿ ಮಧ್ಯಾಹ್ನದ ವರೆಗೆ ಮಾತ್ರ. ಆದರೂ ಕಚೇರಿ ಬದುಕು ಅಸಹನೀಯ!

ಕಚೇರಿ ಆವರಣದಲ್ಲಿದ್ದ ಎರಡು ಕೊಳವೆ ಬಾವಿಗಳಲ್ಲಿ ಒಂದು ಏಪ್ರಿಲಿನಲ್ಲೇ ಒಲ್ಲೆ ಎನ್ನುತ್ತಿತ್ತು. ಇನ್ನೊಂದು ಮೇ ಬಂದಾಗ ಏದುಸಿರು ಬಿಟ್ಟು ಅಷ್ಟಿಷ್ಟು ನೀರು ಕೊಟ್ಟು ಸುಮ್ಮನಾಗುತ್ತಿತ್ತು. ಸಾರ್ವಜನಿಕ ನೀರು ಸರಬರಾಜೂ ಇದ್ದರೂ ಅದು ಸಂಪಿನ ಮಟ್ಟ ಎತ್ತರದಲ್ಲಿತ್ತು. ನೀರು ಹತ್ತುತ್ತಿರಲಿಲ್ಲ. ಅಲ್ಲಿಗೆ ನೀರು ಏರಿಸಲೆಂದೇ ಪಂಪು ಜೋಡಿಸಿದ್ದೂ ಆಯಿತು. ಆದರೆ ನಗರಪಾಲಿಕೆ ನೀರು ಬಿಡೋ ಹೊತ್ತು ಕಾಯ್ದು ಪಂಪ್ ಚಾಲೂ ಮಾಡಿದರಷ್ಟೇ ನೀರು ದಕ್ಕುತ್ತಿತ್ತು. ಸರಕಾರಿ ಕಚೇರಿಯಲ್ಲಿ ಇಷ್ಟು ನಿಗಾ ಎಲ್ಲಿಂದ ಬರಬೇಕು? ಇವೆಲ್ಲದರ ಫಲಿತಾಂಶ ನೀರೇ ಇಲ್ಲದ ಸ್ಥಿತಿ. ಆವರಣವಿಡೀ ನಾರುವುದನ್ನು ತಪ್ಪಿಸಿದ್ದರೇನು, ಕಟ್ಟಡದ ಒಳಭಾಗವೇ ನಾರುತ್ತಿತ್ತು. ಶೌಚಾಲಯದಲ್ಲಿ ನೀರಿಲ್ಲದಿದ್ದರೆ ಮತ್ತೇನಾಗಬೇಕು? ಎರಡು ತಿಂಗಳು ಈ ಚಿತ್ರಹಿಂಸೆ.

2009ರಲ್ಲಿ ಪದ್ಮಾಕರ್ ಕಟ್ಟಡದ ಪಕ್ಕದಲ್ಲೇ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಸಂಪ್ ಕಟ್ಟಿಸಿದ್ದರು. ಮಳೆಕೊಯ್ಲು ಮಾಡುವ ಕನಸು ದಶಕದ ಮೊದಲೇ ಹೊಂದಿದ್ದ ಅವರಿಗೆ ಈ ಅದನ್ನು ನನಸು ಮಾಡುವ ಸುಯೋಗ ಕೂಡಿ ಬಂತು. ಆದರೆ ಸರಕಾರಿ ವ್ಯವಸ್ಥೆ ಅಲ್ಲವೇ? ಮಳೆಕೊಯ್ಲಿನ ವ್ಯವಸ್ಥೆ ಮಾಡಲು ಪಿಡಬ್ಲ್ಯುಡಿಯವರು ನಾಲ್ಕು ಲಕ್ಷ ರೂ.ಗಳ ಎಸ್ಟಿಮೇಟೇನೋ ಕೊಟ್ಟರು. ಆದರೆ ಅದನ್ನು ಮುಂದುವರಿಸಲು ಆಸಕ್ತಿ ತೋರಲಿಲ್ಲ. ಕೊನೆಗೆ ಪದ್ಮಾಕರ್ ಅವರೇ ಎರಡು ಮಂದಿ ಪ್ಲಂಬರುಗಳನ್ನು ಗೊತ್ತು ಮಾಡಿಕೊಂಡು ಇಳಿಪೈಪು ಜೋಡಿಸಿ ಮಳೆನೀರ ಸಂಗ್ರಹಕ್ಕೆ ಮೊದಲಾದರು.

ಇವೆಲ್ಲಾ ಒಂದೇ ವರ್ಷದಲ್ಲಿ ನಡೆದ ಕತೆಯಲ್ಲ. ಹಂತಹಂತವಾಗಿ ಅವಕಾಶ ಸಿಕ್ಕಾಗಲೆಲ್ಲಾ ಈ ಅಧಿಕಾರಿ ನನಸು ಮಾಡಹೊರಟ ಕನಸು.

ಅಂತೂ ಇಂತೂ ಚಾವಣಿಯ ಇಳಿಪೈಪುಗಳನ್ನು ಜೋಡಿಸಿ ಭೂಗತ ಟ್ಯಾಂಕಿಗೆ ಜೋಡಿಸಿದ್ದು 2015ರಲ್ಲಿ. ಇಷ್ಟೆಲ್ಲಾ ಮಾಡಿಯೂ ಕನಸು ಈಡೇರದು ಎಂದು ಗೊತ್ತಾದದ್ದೂ ಆಗಲೇ. ಇಳಿಪೈಪುಗಳ ನೀರು ಸಂಪಿನೊಳಗೆ ತುಂಬಿದರೂ ಅಲ್ಲಿ ನೀರು ಉಳಿಯುತ್ತಲೇ ಇರಲಿಲ್ಲ.

ಸರಕಾರಿ ಕೆಲಸ ದೇವರ ಕೆಲಸ ತಾನೇ? ಈ ದೇವರು ಬೇಗನೆ ಶಿಕ್ಷೆ ಕೊಡಲಾರ ಎಂಬ ಧೈರ್ಯವಿದ್ದ ಗುತ್ತಿಗೆದಾರರು ಕಟ್ಟಿದ ಟ್ಯಾಂಕಿಯ ಕಳಪೆ. ನೀರು ಹಿಡಿದಿಡುವ ಬದಲು ಅದು ಅದನ್ನು ಹಾಯಾಗಿ ಸೋರಲುಬಿಡುತ್ತಿತ್ತು!

ಆದರೆ ಪರಮಾಶ್ಚರ್ಯ! ಕೆಲವೇ ದಿನಗಳಲ್ಲಿ ಎರಡೂ ಕೊಳವೆಬಾವಿಗಳು ಜುಳುಜುಳು ಎನ್ನತೊಡಗಿದುವು. ಸೋರುವ ಟ್ಯಾಂಕಿ ನೀರು ಇಂಗಿಸಿಬಿಟ್ಟಿತ್ತು. ತೆರಿಗೆ ಇಲಾಖೆ ಕಚೇರಿಯ ಮಂದಿಯ ಭಾಗ್ಯವೇನೋ, ಸಂಪಿನಲ್ಲಿ ಕಳಕೊಂಡದ್ದು ಕೊಳವೆಬಾವಿಯಲ್ಲಿ ಸಿಗತೊಡಗಿತು. ಈಗ ಮಳೆಗಾಲದಲ್ಲಿ ಸಂಪ್ ತುಂಬಿದಾಗ ಅದರಿಂದ 500 ಲೀಟರ್ ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕಿಗೆ ನೀರು ತುಂಬುತ್ತಾರೆ. ಕಚೇರಿಯ 20 ವಾಹನ ತೊಳೆಯಲು ಇದೇ ನೀರು ಬಳಸುತ್ತಾರೆ. ಈ ಹಿಂದೆ ವಾಹನ ತೊಳೆದರೂ ಸರಿಯಾಗಿ ಕ್ಲೀನ್ ಆಗೋದಿಲ್ಲ ಎನ್ನುತ್ತಿದ್ದ ಡ್ರೖೆವರುಗಳು ಈಗ ಖುಷಿಯಲ್ಲಿದ್ದಾರೆ ಎನ್ನುತ್ತಾರೆ ಪದ್ಮಾಕರ್.

ಚಾವಣಿಯ ಒಂದು ಮೂಲೆಯಿಂದ ನೀರಿಳಿಸಿಕೊಂಡು ಈ ಅಧಿಕಾರಿ ಈಗ 5 ಸಾವಿರ ಲೀಟರ್ ಹಿಡಿಸುವ ಸಿಂಟೆಕ್ಸ್ ಟ್ಯಾಂಕಿಗೆ ತುಂಬತೊಡಗಿದ್ದಾರೆ. ಇದನ್ನು ಸರಿಯಾಗಿ ಶೋಧಿಸಿ ಸಂಗ್ರಹಮಾಡಿದರೆ ಕುಡಿಯಲು ಬಳಕೆ ಮಾಡಬಹುದು. ಮುಂದೆ ಇಂತಹ ವ್ಯವಸ್ಥೆ ಮಾಡಬೇಕು ಎನ್ನುವ ಯೋಚನೆ ಮತ್ತು ಸಂಪಿನ ಸೋರಿಕೆ ನಿಲ್ಲಿಸುವ ಇನ್ನೊಂದು ಕಾಮಗಾರಿ ಮಾಡಿಸುವ ಉದ್ದೇಶ ಕೂಡ ಇವರಿಗಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾವಣಿ ನೀರನ್ನು ಕೊಳವೆಬಾವಿ ಮರುಪೂರಣಕ್ಕೆ ಬಳಸುತ್ತಿದ್ದಾರಂತೆ. ಆದರೆ ನಗರದಲ್ಲಿ ಮಳೆನೀರನ್ನು ಕಾದಿಟ್ಟು ಕುಡಿಯಲು ಯಾರೂ ಬಳಸುತ್ತಿರುವುದಾಗಲೀ, ಆ ಬಗೆಗಿನ ಚಿಂತನೆ ಇರುವುದಾಗಲೀ ಗೊತ್ತಿಲ್ಲ ಎನ್ನುತ್ತಾರೆ ಪದ್ಮಾಕರ್.

ಇಲ್ಲಿ 2013-14, 2014-15ರಲ್ಲಿ ಬಿದ್ದ ಮಳೆ ತೀರಾ ಕಡಿಮೆ. ನಾನೂರು ಮಿ.ಮೀ ಮೀರಿರಲಾರದು ಎಂದು ಅಂದಾಜು. ಅಷ್ಟನ್ನೇ ಲೆಕ್ಕಕ್ಕೆ ಹಿಡಿದರೂ, 250 ಚದರ ಮೀಟರ್ ವಿಸ್ತೀರ್ಣದ ಚಾವಣಿಯಿಂದ ಸಿಗಬಲ್ಲ ನೀರು ಒಂದು ಲಕ್ಷ ಲೀಟರ್. ಹೆಚ್ಚು ನೀರು ಬಳಸುವ ಐದು ಜನರ ಕುಟುಂಬವೊಂದಕ್ಕೆ ಕುಡಿಯಲು ಮತ್ತು ಅಡುಗೆಗೆ ವರ್ಷಕ್ಕೆ 12 ಸಾವಿರ ಲೀಟರ್ ನೀರು ಧಾರಾಳ. ಇಷ್ಟನ್ನು ಪೂರೈಸಲು 50 ಚದರ ಮೀಟರ್ ಚಾವಣಿ ಮತ್ತು ಐದು ಸಾವಿರ ಲೀಟರ್ ಸಾಮರ್ಥ್ಯದ ಮಳೆನೀರ ಟ್ಯಾಂಕಿ ಇದ್ದರೆ ಅದೇ ಹೆಚ್ಚಾಯಿತು!

ಪದ್ಮಾಕರ್ ಕುಲಕರ್ಣಿ ಸಂಪರ್ಕ: 98442 84415 (ಸಂಜೆ 4 -6 ) [email protected]

Leave a Reply

Your email address will not be published. Required fields are marked *

Back To Top