Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಜೀವಭಾವ ತುಂಬುವ ಮಳೆಯ ಸೊಬಗು…

Thursday, 31.08.2017, 3:05 AM       No Comments

‘ಅಪರೂಪಕ್ಕೆ ಬಿಳಗಿ ಹೊಳೆ ಉಕ್ಕಿ ಹರಿಯುತ್ತಿದೆ. ನೋಡಬೇಕೆಂದರೆ ತಕ್ಷಣ ಹೊರಟು ಬಾ’ ಎಂದು ಅಡಕೆ ಎಲೆಗವಳದ ನಶೆ ಏರಿಸಿಕೊಂಡ ದನಿಯಲ್ಲಿ ತಮ್ಮನ ಫೋನು ಬಂದೊಡನೆ ವಶೀಕರಣಕ್ಕೊಳಗಾದ ಪ್ರಾಣಿಯಂತೆ ತವರಿನತ್ತ ಧಾವಿಸಿದೆ. ಸಾಮಾನ್ಯವಾಗಿ ಕಾಲೇಜು ಆರಂಭದ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ನಾವು ಮೇಷ್ಟ್ರುಗಳು ರಜೆ ಹಾಕುವುದು ಕಡಿಮೆ. ಹೊಸ ಮಕ್ಕಳು, ಹೊಸ ಸಿಲಬಸ್ ನಡುವೆ ಮಳೆ ಬಿಸಿಲುಗಳು ನಮ್ಮನ್ನು ಹೆಚ್ಚು ಬಾಧಿಸದೆ ಕರ್ತವ್ಯನಿರತರಾಗಿ ಪಾಠ ಮಾಡುವುದು ಇಷ್ಟು ವರ್ಷದ ನನ್ನ ವೃತ್ತಿಜೀವನದ ಪರಿಪಾಠ. ಆದರೆ ಇದೀಗ ಎರಡು ತಿಂಗಳೇ ಆಯ್ತು ನನ್ನ ವೃತ್ತಿ ನನಗೆ ವಿದಾಯ ಹೇಳಿ. ‘ಎಲೈ ಉದ್ಯೋಗಸ್ಥ ಗೃಹಿಣಿ ಪ್ರಾಣಿಯೇ, ಇವತ್ತು ನಿನ್ನನ್ನು ಬಾಡಿಗೆ ಕುದುರೆ ಬದುಕಿನಿಂದ ವಿಮುಕ್ತಿಗೊಳಿಸಿದ್ದೇನೆ. ನೀನಿನ್ನು ಸ್ವತಂತ್ರಳು. ಹೋಗು, ಮಳೆಯಲ್ಲಾದರೂ ನೆನೆದುಕೋ, ಹೊಳೆಯಲ್ಲಾದರೂ ಹಾರಿಕೋ. ಅರ್ಜಿ ಬರೆದಿಟ್ಟು ಲೆಕ್ಕಾಚಾರದ ರಜೆ ಹಾಕಬೇಕಿಲ್ಲ. ನಿನಗಿನ್ನು ನಿತ್ಯರಜೆ, ತಗೋ ಸ್ವಾತಂತ್ರ್ಯದ ಕಹಳೆ….’ ಎಂದು ಹೇಳಿ ನನ್ನನ್ನು ಬಿಡುಗಡೆಗೊಳಿಸಿತ್ತಲ್ಲ. ಮಳೆಯ ಕಹಳೆ ಮೊಳಗಿಸಲು ಹೊಳೆಯ ಕರೆ ಬಂದಾಗ ಹಳೆಯ ನೆನಪುಗಳೊಂದಿಗೆ ಊರಿಗೆ ಓಡದಿರುತ್ತೇನೆಯೇ?

ಮಳೆಗಾಲ ಎಲ್ಲಿದ್ದರೂ ಚಂದವೇ. ಆದರೆ ನಗರಗಳಲ್ಲಿ ಮರ ಉರುಳಿ, ರಾಜ ಕಾಲುವೆಗಳಲ್ಲಿ ಬಂಗಲೆಗಳು ಎದ್ದು, ಚರಂಡಿಗಳು ಉಕ್ಕಿಹರಿದು, ರಸ್ತೆಗಳೇ ಹೊಳೆಗಳಾದಾಗ ಉಂಟಾಗುವ ಮನುಷ್ಯಕೃತ ಅನಾಹುತಗಳು ಹಳ್ಳಿಗಳಲ್ಲಿ ಉಂಟಾಗುವುದಿಲ್ಲ. ಅಲ್ಲೇನಿದ್ದರೂ ಗದ್ದೆಮೇಲೆ ಹೊಳೆ ಹೋಗುವುದು, ಅಡಕೆಗೆ ಕೊಳೆರೋಗ ಬರುವುದು, ದನಕರುಗಳಿಗೆ ಮಗೆಮಳೆ ಥಂಡಿರೋಗ ಬರುವುದು… ಇತ್ಯಾದಿ ನಿಸರ್ಗಸಹಜ ಸುಭಗ ಲಕ್ಷಣಗಳು. ಮಲೆನಾಡಿನ ‘ಕಾರ್ಗಾಲದ ವೈಭವ’ವನ್ನು ಅನುಭವಿಸುತ್ತಲೇ ಬೆಳೆದ ನನ್ನಂಥವರು ನೆನಪಿನಲ್ಲಿ ತೋಯಿಸಿಕೊಳ್ಳುವ ಹಿತಾನುಭವಕ್ಕಾಗಿ ಮಳೆಗಾಲಕ್ಕೆ ಎಂದೂ ಋಣಿಗಳೇ.

ಹಳ್ಳಿಗಳಲ್ಲಿ ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿ ಮೈದಳೆಯುವ ಮಳೆಗಾಲದ ಖದರೇ ಬೇರೆ. ಇನ್ನೂ ಎರಡು ತಿಂಗಳು ಇರುವಾಗಲೇ ಮಳೆರಾಯನ ಸ್ವಾಗತಕ್ಕೆ ಹಳ್ಳಿಯ ಹಂಚಿನ ಮನೆಗಳು ಸಿದ್ಧಗೊಳ್ಳುತ್ತವೆ. ‘ಹನಿಹಿಡಿಯುವ ದಿನ ಬಂದೋತು ಮಾರಾಯಾ. ಒಂದು ಕೆಲಸವೂ ಸುಸೂತ್ರ ಮುಗಿದಿಲ್ಲ…’ ಎನ್ನುತ್ತ ಅಡಕೆ ತೋಟದವರು ತುರುಸಾಗಿ ಮಳೆಗಾಲದ ತಯಾರಿ ಕೆಲಸ ಪ್ರಾರಂಭಿಸುತ್ತಾರೆ.

ನಮ್ಮ ಬಾಲ್ಯದ ಧಾರಾಳ ಮಳೆಯ ಮಹೋನ್ನತ ಮಳೆಗಾಲ ಹಾಗಿತ್ತು. ಪ್ರತಿ ಮನೆಯ ಗೋಡೆಗೂ ಸೋಣೆಯ ‘ಜಡಿತಟ್ಟಿ’ಯ ರಕ್ಷಣಾ ಕವಚ ಕಟ್ಟಲ್ಪಟ್ಟು ಮನೆಯೊಳಗೆ ನಸುಗತ್ತಲಿನ ಹಗಲುಗಳನ್ನು ನಿರ್ವಿುಸುತ್ತಿತ್ತು. ನುಣುಪಾಗಿ ಜಾರುವ ಅಂಗಳಕ್ಕೆ ಅಡಕೆ ಮರದ ಕಾಲುಸಂಕ, ದಣಪೆ ಬಾಗಿಲಿನಿಂದ ಮನೆಬಾಗಿಲಿಗೆ, ಬಚ್ಚಲಿಗೆ, ಕೊಟ್ಟಿಗೆಗೆ ಎಂದು ಅಡ್ಡ ಉದ್ದ ಗೆರೆ ಎಳೆದಂತೆ ಪ್ರತ್ಯೇಕ ಸಂಕಗಳು ಸಿದ್ಧಗೊಳ್ಳುತ್ತವೆ. ಕಾಳು ಕಡಿ, ಹಿಂಡಿ ಹತ್ತಿಕಾಳು, ಹಪ್ಪಳ ಸಂಡಿಗೆ, ಹಲಸಿನ ಬೀಜ, ಗೇರುಬೀಜ, ಬಚ್ಚಲೊಲೆ ಹೊಡಸಲು ಬೆಂಕಿಗೆ (ಕಂಬಳಿ ಒಣಗಿಸುವ ಅಗ್ಗಿಷ್ಟಿಕೆ) ಬೇಕಾದ ಕಟ್ಟಿಗೆ ಸಂಗ್ರಹ ಎಲ್ಲರ ಮನೆಯಲ್ಲೂ ನಡೆಯುತ್ತದೆ. ತೋಟದಲ್ಲಿ ಕೆಲಸ ಮಾಡುವ ಗಂಡು ಹೆಣ್ಣಾಳುಗಳಿಗೆ ಕಂಬಳಿ ತೊಪ್ಪೆ, ಪ್ಲಾಸ್ಟಿಕ್ ತೊಪ್ಪೆಗಳು, ಗದ್ದೆಯಲ್ಲಿ ಕೆಲಸ ಮಾಡುವವರಿಗೆ ತಾಳೆಗರಿಯ ಗೊರಬಲುಗಳ ದಿರಿಸು ಸಿದ್ಧವಾಗುತ್ತಿತ್ತು. ಹನಿ ಹಿಡಿಯಿತೆಂದರೆ ಮತ್ತೆ ನಾಲ್ಕು ತಿಂಗಳು ನಿತ್ಯಪರ್ಜನ್ಯವೇ.

ಹಳ್ಳಿಗಳ ವಿಶಾಲ ಅಂಗಳದಲ್ಲಿ ಚಪ್ಪರದಂತೆ ಹಾಕುವ ಅಡಕೆ ಅಟ್ಟ ಮಳೆಗಾಲದಲ್ಲಿ ಒಳಸೇರಬೇಕು ಮತ್ತು ಬೇಸಿಗೆಯಲ್ಲಿ ಚೀಲ ತುಂಬಿಟ್ಟ ಡೇರೆಹೂವಿನ ಗಿಡದ ಗಡ್ಡೆಗಳು ಮಳೆಬೀಳುತ್ತಿದ್ದಂತೆ ಅಂಗಳದಲ್ಲಿ ಸಾಲಾಗಿ ನೆಡಲ್ಪಟ್ಟು ಶ್ರಾವಣಮಾಸಕ್ಕೆ ಸರಿಯಾಗಿ ಅಂಗಳದ ತುಂಬ ಅರಳಿನಿಂತು ತಮ್ಮ ವಿವಿಧ ಬಣ್ಣ, ಆಕಾರ ಹಾಗೂ ವೈಶಿಷ್ಟ್ಯಗಳಿಂದ ಮನೆಯ ಅಂಗಳವನ್ನು ವರ್ಣರಂಜಿತ ಡೇರೆ ಹೂದೋಟವನ್ನಾಗಿಸಿ ನಂದನವನದಂತೆ ಕಂಗೊಳಿಸುವ ಹಾಗೆ ಮಾಡಿಬಿಡುತ್ತವೆ. ಡೇರೆ ಹೂಗಳು ಎಷ್ಟು ಕೋಮಲವಾದ ದಂಡಿನ ಮೇಲೆ ಅರಳುತ್ತವೆ, ಎಷ್ಟು ಬಗೆಯ ಡೇರೆ ಹೂಗಳು ಎಷ್ಟು ಬಣ್ಣದವು ಎಷ್ಟು ವಿನ್ಯಾಸದಲ್ಲಿ ಅರಳಬಲ್ಲವು ಎಂಬುದನ್ನು ನೋಡಲಾದರೂ ಮಲೆನಾಡಿನ ಅಡಕೆಯಂಗಳಕ್ಕೆ ಹೋಗಬೇಕು.

ನಾನು ‘ಸ್ವಾತಂತ್ರೊ್ಯೕತ್ಸವ’ ಆಚರಿಸಲೆಂಬಂತೆ ಈ ಬಾರಿ ತವರ ಮನೆಯಂಗಳಕ್ಕೆ ಹೋಗಿಳಿದಾಗ ಸಾಲು ಡೇರೆಹೂವುಗಳು ‘ಬಣ್ಣಾಣಗಿತ್ತಿ’ಯರಂತೆ ಸ್ವಾಗತಿಸಿದ ಸಂಭ್ರಮಕ್ಕೆ ಖುಷಿಯಿಂದ ತತ್ತರಿಸಿಹೋದೆ. ಎಷ್ಟು ಬಣ್ಣ ಎಷ್ಟು ವೈವಿಧ್ಯ! ಮಳೆಗಾಲ ಮುಗಿದ ಮೇಲೆ ಡೇರೆಹೂಗಳು ಅರಳುವುದೇ ಇಲ್ಲ! ನೀರು ಸುರಿದರೂ ಕರುಣೆ ತೋರದೇ ಕರ್ತವ್ಯ ಮುಗಿಸಿ ಗಡ್ಡೆಗಳ ಘನರೂಪಕ್ಕೆ ಮರಳಿಬಿಡುತ್ತವೆ. ಮತ್ತೆ ಅವು ಚಿಗುರಲು ಮಳೆಗಾಲವೇ ಬರಳಬೇಕು. ಕೃಷ್ಣಾಷ್ಟಮಿ ಚೌತಿಗಳ ಅಲಂಕಾರಕ್ಕೆ ತಮ್ಮನ್ನೂ ಅರ್ಪಿಸಿಕೊಳ್ಳುವ ಡೇರೆಹೂಗಳು ನವರಾತ್ರಿ, ದೀಪಾವಳಿಯವರೆಗೂ ಕಾಯಲಾರವು.

ನನ್ನ ಹಳ್ಳಿ ಕತ್ರಗಾರಿಗೆ ಪ್ರವೇಶಿಸುವಾಗಲೇ ಎಡಕ್ಕೆ ಹೊಳೆ, ಗದ್ದೆ. ಬಲಕ್ಕೆ ಅಡಕೆತೋಟ. ಈಗ ಟಾರ್​ರೋಡು, ಬಸ್​ಸ್ಟಾ್ಯಂಡುಗಳು ಬಂದಿವೆಯಾದರೂ ಹೊಸದಾದ ವ್ಯಕ್ತಿ ರಸ್ತೆಯ ಮೇಲೆ ಗೋಚರಿಸಿ ಊರೊಳಗೆ ಪ್ರವೇಶಿಸಿದರೆ ಒಂದಾದರೂ ಕಂಬಳಿಕೊಪ್ಪೆ ‘ನಿಮಗೆ ಎಲ್ಲಾತು?’ (ಯಾವ ಊರು ನಿಮ್ಮದು?) ಎಂದು ಕೇಳದೇ ಬಿಡುವುದಿಲ್ಲ್ಲ

ಮಳೆಗಾಲದಲ್ಲಿ ಶಾಲೆಯ ರಸ್ತೆಯ ತುಂಬ ಬೆಟ್ಟೊರತೆಗಳೆದ್ದು ನೀರು ಚಿಮ್ಮಿಸುತ್ತ ವಿಸ್ಮಯದ ಲೋಕವನ್ನೇ ಸೃಷ್ಟಿಸುತ್ತಿದ್ದವು. ಅದರಲ್ಲಿ ಆಡಿ ಮಿಂದೆದ್ದು ಒದ್ದೆಯಾಗಿ ಶಾಲೆಗೆ ಹೋಗಿಬಂದ ಶಾಸ್ತ್ರ ಮಾಡುವ ಮಕ್ಕಳಿಗೆ ಬೋಳುಕಾಳು ಕಷಾಯ (ಕಾಳು ಮೆಣಸು) ಕೊಡಲಾಗುತ್ತಿತ್ತು. ಹೊಡಸಲ ಬೆಂಕಿಯ ಬಳಿ ಕುಳಿತು ಮೈ ಕಾಸಿಕೊಳ್ಳುತ್ತ ಮಗ್ಗಿ ಬಾಯಿಪಾಠ ಒಪ್ಪಿಸಬೇಕಿತ್ತು. ನಡುನಡುವೆ ಹಲಸಿನ ಹಪ್ಪಳ, ಸುಟ್ಟ ಗೇರುಬೀಜ ಸರಬರಾಜು. ಅಜ್ಜಿಯರಿರುವ ಮನೆಯಲ್ಲಿ ಮೊಮ್ಮಕ್ಕಳ ದರಬಾರು ಜೋರು. ಅಪ್ಪ ಅಮ್ಮನನ್ನು ದರ್ದೇ ಮಾಡದ ಹಾವಳಿ. ‘ಮಳೆ ನಿಂತಿದ್ರೆ ಆಡಲಿಕ್ಕೆ ಹೊರಗಾದ್ರೂ ಹೋಗ್ತಿದ್ದವು. ಇಡೀ ದಿನ ಮನೆ ಒಳಗೇ ಹೋಳಿ… ಈ ಪುಂಡರದ್ದು’ ಎಂದು ಬೈಸಿಕೊಳ್ಳುವ ಮಕ್ಕಳು ಮೂರು ಸಂಜೆಗೆಲ್ಲ ತೂಕಡಿಸುತ್ತಿದ್ದವು. ಧೋ ಎಂಬ ಮಳೆಯ ಸದ್ದು ಜೋಗುಳ ಬೇರೆ ಹಾಡುತ್ತಿತ್ತು. ಮಧ್ಯಾಹ್ನವೇ ಸಂಜೆಯಾದಂತೆ ಇರುವ, ಬೆಳಗಾದರೂ ಬೆಳಕಿರದ ಹಗಲುಗಳೇ ಮಳೆಗಾಲದುದ್ದಕ್ಕೂ. ಮಳೆಗಾಲ ಮನುಷ್ಯ ಸಂಬಂಧಗಳನ್ನು ಆರ್ದ್ರಗೊಳಿಸುತ್ತದೆಯೇ ಎಂಬೊಂದು ಸಂಶಯ ನನಗೆ ಆಗಾಗ ಬರುವುದುಂಟು. ಆಷಾಢಕ್ಕೆ ಹೊಸ ಸೊಸೆಯನ್ನು ತವರಿಗೆ ಕಳಿಸುವ ಸಂಪ್ರದಾಯವಿತ್ತು. ಹೊಸದಾಗಿ ಗಂಡನ ಮನೆಗೆ ಹೊಂದಿಕೊಳ್ಳಲಾರದೆ ಚಡಪಡಿಸುತ್ತಿದ್ದ ಸೊಸೆಗೆ ರಿಲೀಫ್. ತಿಂಗಳು ಕಾಲ ತವರಿನಲ್ಲಿದ್ದುಬರುವ ಯೋಗ. ಈಗಿನ ಉದ್ಯೋಗಸ್ಥ ಸೊಸೆಯಂದಿರಿಗೆ ಈ ತವರಭಾಗ್ಯವಿಲ್ಲ. ಕಡುಬೇಸಿಗೆಯಲ್ಲಿ ಸೆಕೆಯ ತಾಪದಲ್ಲಿ ಒಬ್ಬರಿಗೊಬ್ಬರು ಎಗರಿಬಿದ್ದು ಕಿರುಚುವುದನ್ನು ನೋಡಿದರೆ ತಂಪುಹವೆಯ ಮಳೆಗಾಲ ಮಂಡೆಬಿಸಿ ಕಡಿಮೆಮಾಡಿ ಜಗಳಗಳ ತಾಪವನ್ನೂ ತಗ್ಗಿಸೀತೇ ಎಂಬ ಸಂಶೋಧನೆಯನ್ನು ಯಾರಾದರೂ ಮಾಡಿದರೆ ಸೊಗಸಾದ ‘ವರ್ತನಾಶಾಸ್ತ್ರದಲ್ಲಿ ಹವಾಮಾನದ ಪಾತ್ರ’ ಎಂಬ ಸಂಶೋಧನಾ ಪ್ರಬಂಧ ಸಿದ್ಧವಾದೀತು. ಒಮ್ಮೆ ಚಿಕ್ಕ ಶಿಶುವೊಂದು ಬಸ್ಸಿನಲ್ಲಿ ಒಂದೇ ಸಮನೆ ಅಳುತ್ತಿತ್ತು. ಹೊಸದಂಪತಿಯಂತೆ ತೋರುವ ತಾಯ್ತಂದೆಯರು ಅದನ್ನು ಸುಮ್ಮನಿರಿಸಲಾರದೆ ಒದ್ದಾಡುತ್ತಿದ್ದರು. ಹಾಲು ಕುಡಿಸಿ, ಗಿಲಕಿ ಅಲುಗಾಡಿಸಿ, ‘ಲಲ್ಲಲಾ’ ಎಂದು ಮುದ್ದುಮಾಡಿದರೂ ಮಗು ಸುಮ್ಮನಾಗುತ್ತಿಲ್ಲ. ಬಸ್ಸಿನಲ್ಲಿದ್ದವರೆಲ್ಲರಿಗೂ ಒಂದು ರೀತಿ ಕಿರಿಕಿರಿ, ಸಹಾನುಭೂತಿ… ಯಾರೂ ಏನೂ ಮಾಡುವಂತಿಲ್ಲ. ಬಸ್ಸು ಹೋಗುತ್ತಲೇ ಇತ್ತು, ಮಗು ಅಳುತ್ತಲೇ ಇತ್ತು. ಆಗ ಹಿರಿಯರೊಬ್ಬರು ಎದ್ದುಬಂದು ಮಗುವಿನ ತಾಯಿಯ ಬಳಿ ‘ಆ ಕಿಟಕಿ ಓಪನ್ ಮಾಡಿಯಮ್ಮ. ಮಗು ಸೆಕೆಯಿಂದ ಅಳ್ತಿದೆ’ ಎಂದರು. ಕಿಟಕಿ ಸರಿಸಿ ತಂಗಾಳಿ ಮೆಲ್ಲನೆ ಮಗುವಿನ ಮುಖ ಸವರುತ್ತಿದ್ದಂತೆ ಮಗು ಅಳು ನಿಲ್ಲಿಸಿ ನಿದ್ದೆಹೋಯಿತು. ಬಸ್ಸಿನವರೆಲ್ಲ ನಿಟ್ಟುಸಿರುಬಿಟ್ಟರು. ಹೀಗೆಯೇ ಕಾಲುಕೆದರಿ ಜಗಳಕಾಯುವ ಅತ್ತೆ-ಸೊಸೆಯಂದಿರು ಮಳೆ ಜೋರಾದಂತೆ ಮಳೆಗೆ ಬಯ್ಯುತ್ತ ತಮ್ಮ ಒಳಸೇಡನ್ನು ತೀರಿಸಿಕೊಳ್ಳುವಂತಿದ್ದರೆ ಅಪ್ಪನೋ ಮಗನೋ ನಿಶ್ಚಿಂತೆಯಿಂದ ದಿನದೂಡಬಹುದಿತ್ತು. ‘ನಾಚಿಕೆಗೆಟ್ಟ ಮಳೆ ಹೆಂಗೆ ಸುರೀತದೆ ನೋಡು. ಅಂಗಳವೆಲ್ಲ ನೀರು, ಜಗುಲಿ ಎಲ್ಲಾ ಸೋರಿ ಸೋರಿ ಹೊಳೆ. ನಾನೊಬ್ಬಳು ಇದ್ದೇನಲ್ಲ ಸ್ವಚ್ಛ ಮಾಡಲಿಕ್ಕೆ…’ ಎಂದು ಸೊಸೆಯೋ ಅತ್ತೆಯೋ ಗೊಣಗಿಕೊಂಡರೆ ಅದು ಮಳೆಗೆ ಬಯ್ದಂತೆ ಕಂಡರೂ, ಎಣ್ಣೆ ಅಥವಾ ಸೀಗೆಕಾಯಿಯ ಕುರಿತಾಗಿಯೇ ಇರುತ್ತದೆ. ಮಳೆಗಾಲದ ಹೊಳೆಗಳು ಸಾಮಾನ್ಯವಾಗಿ ಕೆಂಬಣ್ಣದಿಂದ ಕೂಡಿದ್ದು ಭಯಹುಟ್ಟಿಸುವ ಹರಿವನ್ನು ಹೊತ್ತು ತರುತ್ತವೆ. ನಮ್ಮ ಮನೆಯ ಸಮೀಪ ಇರುವ ಬಿಳಗಿ ಹೊಳೆಯನ್ನು ನೋಡಲು ನಾವು ಶಾಲೆ ತಪ್ಪಿಸಿ ಹೋಗುತ್ತಿದ್ದೆವು. ಸೇತುವೆ ಮೇಲೆ ನಿಂತು ರಭಸದಿಂದ ಹರಿಯುವ ಹೊಳೆಯನ್ನೇ ತದೇಕಚಿತ್ತದಿಂದ ನೋಡುತ್ತ ನಿಂತರೆ ಕೆಲವೇ ಕ್ಷಣಗಳಲ್ಲಿ ಸೇತುವೆ ಸೇತುವೆಯೇ ತೇಲಲು ಪ್ರಾರಂಭವಾಗುತ್ತಿತ್ತು. ನಾವೂ ತೇಲುವಂತೆ ಭಾಸವಾಗಿ, ಸುತ್ತಲಿನ ಮರಗಿಡಗಳೂ ಬೆಟ್ಟಗಳೂ ಮೆಲ್ಲನೆ ಚಲಿಸಲಾರಂಭಿಸುತ್ತಿದ್ದವು. ನಮ್ಮ ಕಣ್ಣು ಹರಿವ ನೀರಿನ ಮೇಲಿರುವಷ್ಟೂ ಹೊತ್ತು ಈ ತೇಲಾಟ ಮೇಲಾಟ ನಡೆದೇ ಇರುತ್ತಿತ್ತು.

ನಾವೊಮ್ಮೆ ಮಧ್ಯಾಹ್ನ ಮನೆಗೆ ಬಂದವರು ಜೋರುಮಳೆಯ ಕಾರಣ ಶಾಲೆ ತಪ್ಪಿಸಲು ಅಜ್ಜಿಯಿಂದ ಪರ್ವಿುಷನ್ ಪಡೆದು ಹಿರಿಯರೆಲ್ಲ ಮಲಗಿದ ಮೇಲೆ ಇಡೀ ಶಾಲೆಯ ಮಕ್ಕಳು ನಿಂತು ತೇಲುವ (ತಲೆತಿರುಗುವ!) ಅನುಭವದಿಂದ ಕೇಕೆಹಾಕುತ್ತಿದ್ದೆವು. ಮೇಲೆ ಕೊಡೆ ತೂತು ಬೀಳಿಸುವ ದಪ್ಪಹನಿಗಳ ರಭಸದ ಪಟಪಟ ಸ್ವರ. ಕೆಳಗೆ ಹರಿಯುವ ರಭಸದ ನೀರಿನ ಪ್ರವಾಹ. ಸೇತುವೆಯ ತೇಲುತೆಪ್ಪದ ಮಾಯಾಲೋಕ. ಎಷ್ಟು ಹೊತ್ತು ಮೈಮರೆತಿದ್ದೆವೋ ಗೊತ್ತಿಲ್ಲ. ಹಿಂದಿನಿಂದ ಎಲ್ಲರಿಗೂ ಕುಂಡೆಯ ಮೇಲೆ ಟಪ್ಪೆಂದು ತೆಳೆಸೆಳೆಯ ಬಿಸಿಹೊಡೆತ ಬಿದ್ದಾಗಲೇ ಮೈಮೇಲೆ ಪ್ರಜ್ಞೆ ಮರಳಿತ್ತು. ನೋಡಿದರೆ ರೌದ್ರಾವತಾರ ತಾಳಿದ ಹೆಡ್​ವಾಸ್ಟ್ರು ಕೈಯಲ್ಲಿ ಬೆತ್ತ. ‘ಬಸ್ಸಲ್ಲಿ ಬರ್ತಾ ಇದ್ದೆ. ಇಡೀ ಶಾಲೆಯೇ ಇಲ್ಲಿದೆ. ಈ ಥರಾ ಮಳೆಯಲ್ಲಿ ಹೊಳೆಮೇಲೆ ನಿಂತ್ಕೊಂಡು ಕೇಕೆ ಹಾಕ್ತೀರಿ. ಏನಾದ್ರೂ ಹೆಚ್ಚೂಕಡಿಮೆ ಆದರೆ ಮನೆಯವರು ಕೇಳೋದು ನಮ್ಮನ್ನು. ನಿಮ್ಮನ್ನೀಗ ಏನು ಮಾಡ್ತೀನೋ ಗೊತ್ತಿಲ್ಲ’ ಎಂದು ಜಬರಿಸಿದಾಗ ಕಕ್ಕಾಬಿಕ್ಕಿಯಾದ ನಾವು ಚೆಲ್ಲಾಪಿಲ್ಲಿಯಾಗಿದ್ದೆವು. ಅಂದಿನಿಂದ ಮಳೆಯಲ್ಲಿ ಹೊಳೆನೋಡಲು ಹೋಗುವುದು ಮಕ್ಕಳಿಗೆ ನಿಷೇಧ ಎಂದು ಊರಿಡೀ ಕಟ್ಟಾಜ್ಞೆಯಾಗಿತ್ತು.

ಅಂದು ಕೈಬಿಟ್ಟಿದ್ದ ತೇಲುತೆಪ್ಪದ ದರ್ಶನದ ಭಾಗ್ಯ ಸಿಕ್ಕಿದ್ದು ಈ ಬಾರಿ. ಮಳೆರಾಯ ಕೆಲ ಊರಲ್ಲಿ ಧಾರಾಳಿ, ಕೆಲಕಡೆ ಜಿಪುಣನಂತೆ ಮಳೆ ಸುರಿಸಿ ಇಳೆರಾಯ್ತಿಯ ಒಡಲನ್ನು ತುಂಬಿಸುವ ಕೃಪೆ ತೋರಿದ್ದಾನೆ. ಉತ್ತರಕನ್ನಡವಿಡೀ ಮಳೆಯಲ್ಲೇ ಸುತ್ತಿ ಅಂಕೋಲೆಯ ಕಾವ್ಯಶ್ರಾವಣದಲ್ಲಿ ಭಾಗವಹಿಸಿ ಮಂಗಳೂರಿಗೆ ಬಂದಿಳಿದರೆ ಇಲ್ಲೂ ರಭಸದ ಮಳೆಗಾಲ.

ಸಿದ್ದಾಪುರದ ಬಳಿಯಿರುವ ‘ಕೆಪ್ಪಜೋಗ’ ಮಳೆಗಾಲದಲ್ಲಿ ಕೂಗುತ್ತದೆ. ಅಂದರೆ ಅದರ ಸದ್ದು ನಮ್ಮ ಹಳ್ಳಿಗಳಲ್ಲಿ ಮೊರೆಯುತ್ತದೆ. ಇಲ್ಲಿ ಮಂಗಳೂರಿನಲ್ಲಿ ಕಡಲ ಮೊರೆತದ ಸದ್ದು ಕೇಳತೊಡಗಿದೆ. ಕಡಲು ಕೂಗಿತೆಂದರೆ ಮಳೆ ಹೆಚ್ಚಾಗುತ್ತದೆಯೆನ್ನುತ್ತಾರೆ. ನಿಜ, ಕಡಲಿಗೆ ಮಳೆಯಾಸೆ ಮುಗಿಯದ್ದು. ಏಕೆಂದರೆ ಇದೇ ಕಡಲು ಕಾದು ಆವಿಯಾಗಿ ಮೋಡಗಟ್ಟಿ ಮಳೆ ಸುರಿದರೆ ನಮ್ಮ ಋಷಿಗಳ ‘ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನಿ’ (ಕಾಲಕಾಲಕ್ಕೆ ಮಳೆ ಸುರಿಯಲಿ, ಪೃಥ್ವಿಯು ಸಸ್ಯಶಾಲಿನಿಯಾಗಿ ಮೆರೆಯಲಿ) ಎಂಬ ಹಾರೈಕೆಯ ಮಂತ್ರಗಳು ಫಲಿಸಿದಂತೆ. ಭೂಮಿಯ ಒಡಲನ್ನು ತುಂಬಿ ಹಸಿರಾಗಿಸಬಲ್ಲ, ನಮ್ಮ ಹೃದಯಗಳನ್ನು ತುಂಬಿ ಮಿದುವಾಗಿಸಬಲ್ಲ ಮಳೆಗಿದೋ ಒದ್ದೆನಮನಗಳು.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top