Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಜೀವನ್ಮುಕ್ತ ಅವಧೂತ

Thursday, 14.09.2017, 3:02 AM       No Comments

ಸಾಧುಸಂತರ ನೆಲೆವೀಡು ಎನಿಸಿದ ಭಾರತದ ಅಧ್ಯಾತ್ಮಲೋಕದ ಗಮನಾರ್ಹ ಹೆಸರು ಶ್ರೀ ಆದಿಶಂಕರಾಚಾರ್ಯರದು. ಸನಾತನಧರ್ಮದ ಉಳಿವಿಗಾಗಿ ಅವರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ದಕ್ಷಿಣ ಭಾರತದ ಶೃಂಗೇರಿ ಶಾರದಾಪೀಠವೂ ಒಂದು. ಹಲವಾರು ತಪಸ್ವಿಗಳು, ಮಹಿಮಾನ್ವಿತರೆಲ್ಲ ಈ ಪೀಠವನ್ನಲಂಕರಿಸಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರು (1836-1886) ಮತ್ತು ಶ್ರೀ ರಮಣಮಹರ್ಷಿಗಳ (1879-1950) ಹಾಗೆಯೇ ಶಾರದಾಪೀಠದ 34ನೇ ಪೀಠಾಧೀಶರಾದ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಕೂಡ ಜೀವನ್ಮುಕ್ತ, ಅವಧೂತ ಎಂದೇ ಪ್ರಸಿದ್ಧರು. ಸಾಧ್ಯವಾದಷ್ಟು ಜನರಿಗೆ ಗುರುವಿನ ಮಹಿಮೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ಇತ್ತೀಚೆಗೆ ‘ಗುರುಭಕ್ತ’ರೊಬ್ಬರು ಉಚಿತ ವಿತರಣೆಗಾಗಿ ಪ್ರಕಟಿಸಿದ ‘ಅವತಾರ ಪುರುಷ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು’ ಕೃತಿಯ ಆಯ್ದ ಭಾಗ ಇಲ್ಲಿದೆ.

| ಗುರುಭಕ್ತ

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಶೃಂಗೇರಿ ದಕ್ಷಿಣಾಮ್ನಾಯ ಪೀಠದ 34ನೇ ಜಗದ್ಗುರುಗಳು. ಜೀವನ್ಮುಕ್ತರೆಂದೇ ಹೆಸರಾಗಿದ್ದ ಇವರು ಸಾಕ್ಷಾತ್ ದಕ್ಷಿಣಾಮೂರ್ತಿಯಂತೆಯೇ 1912ರಿಂದ 1954ರವರೆಗೆ ವಿರಾಜಮಾನರಾಗಿದ್ದರು. ಇವರು ಭಕ್ತರನ್ನು ಮೌನದಿಂದಲೇ ಅನುಗ್ರಹಿಸುತ್ತಿದ್ದಿದ್ದು ವಿಶೇಷವಾಗಿತ್ತು. ಬಾಲ್ಯದಿಂದಲೇ ವೈರಾಗ್ಯಕ್ಕೆ ಅಂಟಿಕೊಂಡ ಜೀವನ. ಸಂನ್ಯಾಸಕ್ಕೆ ಮತ್ತೊಂದು ಹೆಸರು ಎನ್ನುವಂತೆ ಜೀವಿಸಿದ್ದರು.

ಬಾಲ್ಯದಲ್ಲೇ ಅವರ ತಲ್ಲೀನತೆ ಎಷ್ಟಿತ್ತೆಂದರೆ ಒಮ್ಮೆ ಮನೆಗೆ ಸಾಮಾನು ತೆಗೆದುಕೊಂಡು ಬರಲು ಹೋದ ಹುಡುಗ ವೇದಾಂತವಿಚಾರದಲ್ಲೇ ಮಗ್ನನಾಗಿ ಅಂಗಡಿಗೆ ಹೋಗುವುದನ್ನು ಮರೆತು ಬಹಳ ದೂರ ಕ್ರಮಿಸಿಬಿಟ್ಟಿದ್ದ. ಯಾರೋ ಅವನಿಗೆ ‘ಇದೇನು ಇಷ್ಟು ದೂರ ಬಂದಿದ್ದೀಯ?’ ಎಂದು ಕೇಳಿದಾಗಲೇ ಆತನಿಗೆ ತಾನು ಏತಕ್ಕಾಗಿ ಬಂದಿದ್ದು ಎಂಬ ಅರಿವಾಯಿತು. ಸದಾ ದೇವರ ಧ್ಯಾನದಲ್ಲೇ ಇರುತ್ತಿದ್ದ ಬಾಲಕ ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಇರುವ ಸೌಮ್ಯ ಸ್ವಭಾವದವ. ಬಾಲಕನ ಪ್ರಾಮಾಣಿಕತೆಯು ಅಪ್ರತಿಮವಾದದ್ದು. ಒಮ್ಮೆ ಪರೀಕ್ಷೆಯಲ್ಲಿ ಪ್ರಾಧ್ಯಾಪಕರು ತಮ್ಮ ಅಚ್ಚುಮೆಚ್ಚಿನ ನರಸಿಂಹ ಶಾಸ್ತ್ರಿಗೆ ಉತ್ತರವನ್ನು ಗುಟ್ಟಾಗಿ ಹೇಳಿಹೋದರು. ಆದರೆ ಹುಡುಗ ಆ ಉತ್ತರವನ್ನು ಬರೆದಿರಲಿಲ್ಲ. ನಂತರ ಇದನ್ನು ಗಮನಿಸಿದ ಪ್ರಾಧ್ಯಾಪಕರು ನರಸಿಂಹನನ್ನು ಮನೆಗೆ ಕರೆಸಿ, ‘ಏಕೆ ನಾನು ಹೇಳಿಕೊಟ್ಟ ಉತ್ತರವನ್ನು ಬರೆಯಲಿಲ್ಲ?’ ಎಂದು ಪ್ರಶ್ನಿಸಿದರು. ಅದಕ್ಕೆ ನರಸಿಂಹನು ‘ನೀವು ಹೇಳಿಕೊಟ್ಟ ಉತ್ತರ ನನ್ನ ಉತ್ತರವಾಗುವುದಿಲ್ಲ, ಅದಕ್ಕೇ ಬರೆಯಲಿಲ್ಲ’ ಎಂದು ಉತ್ತರಿಸಿ ಗುರುಗಳಿಗೆ ತನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದನು. ಓದುವುದರಲ್ಲಿ ಎಲ್ಲರಿಗಿಂತ ಮುಂದಿದ್ದರೂ ಸ್ವಲ್ಪವೂ ಅಹಂ ಇರಲಿಲ್ಲ. ಸಹಪಾಠಿಗಳಿಗೆ ಅರ್ಥವಾಗದ ಪಾಠಗಳನ್ನು ತಾನೇ ಹೇಳಿಕೊಡುತ್ತಿದ್ದ.

ನರಸಿಂಹಶಾಸ್ತ್ರಿಯು ಎಷ್ಟು ವಿನಯವಂತನಾಗಿದ್ದನು ಎಂಬುದಕ್ಕೆ ಉದಾಹರಣೆ, ಶ್ರೀ ನರಸಿಂಹ ಭಾರತೀ ಸ್ವಾಮಿಗಳ ಕಾಲವಾದ ನಂತರ ನರಸಿಂಹನಿಗೆ ಪಟ್ಟಾಭಿಷೇಕವಾಗಬೇಕಿತ್ತು. ಆಗ ಮಠದ ಆಡಳಿತ ಮಂಡಳಿಯ ಹಲವರು ಅದರ ಕುರಿತಾಗಿ ರ್ಚಚಿಸುತ್ತಿದ್ದರು. ಆಗ ನರಸಿಂಹನೂ ಸಹ ಅಲ್ಲಿ ಇದ್ದ. ಆತನು ನಿಂತಿರುವುದನ್ನು ಗಮನಿಸಿದ ಯಾರೋ ಒಬ್ಬರು, ‘ಜಗದ್ಗುರುವಾಗಬೇಕಿರುವ ನೀನು ನಿಲ್ಲುವುದು ಸರಿಯಲ್ಲ, ಕುಳಿತುಕೋ’ ಎಂದರೆ ನರಸಿಂಹನು ‘ಅದು ನಾಳೆ’ ಎಂದು ನಯವಾಗಿ ಹೇಳಿ ಹಿರಿಯರ ಮುಂದೆ ಕೂರಬಾರದೆಂದು ನಿಂತೇ ಇದ್ದನು. ನರಸಿಂಹ ಭಾರತೀ ಸ್ವಾಮಿಗಳ ಉತ್ತರಾಧಿಕಾರಿಯಾಗಿ ಮಾಡುವ ಸಮಯದಲ್ಲೂ ಮಹಾರಾಜರು ನರಸಿಂಹಶಾಸ್ತ್ರಿಗಳ ಒಪ್ಪಿಗೆ ಕೇಳಿದಾಗ ‘ಮಠದ ಆಡಳಿತದ ಜವಾಬ್ದಾರಿ ವಹಿಸದೆ ಬರೀ ಅಧ್ಯಾತ್ಮಸಾಧನೆಯಲ್ಲಿ ತೊಡಗಲು ಅನುಕೂಲವಾಗುವುದಿದ್ದರೆ ನನ್ನ ಒಪ್ಪಿಗೆ ಇದೆ’’ ಎಂದು ನುಡಿದಿದ್ದರು. ಇಪ್ಪತ್ತರ ವಯಸ್ಸಿಗೇ ಅಷ್ಟರಮಟ್ಟಿಗೆ ವೈರಾಗ್ಯವಿತ್ತು.

ಚಂದ್ರಶೇಖರ ಭಾರತೀ ಸ್ವಾಮಿಗಳು ಜಗದ್ಗುರುಗಳಾದ ಮೊದಲ ದಿವಸದಿಂದಲೇ ಸಾಧನೆಯಲ್ಲಿ ನಿರತರಾದರು. ಗುರುವರ್ಯರು ಮೊದಲ ನಾಲ್ಕು ವರ್ಷದಲ್ಲಿ ಅಧ್ಯಯನ, ಪೂಜೆಯ ಜೊತೆಗೆ ತಪೋನುಷ್ಠಾನಗಳಲ್ಲೂ ನಿರತರಾಗಿದ್ದರು. 1916ನೇ ಇಸವಿಯಲ್ಲಿ ನಡೆದ ಶಾರದಾಂಬೆಯ ಕುಂಭಾಭಿಷೇಕದ ನಂತರ ಸಂಪೂರ್ಣವಾಗಿ ಲೌಕಿಕ ನಿರಾಸಕ್ತಿ ಹೊಂದಿ, ಸದಾಕಾಲ ಏಕಾಂತವಾಗಿ ಧ್ಯಾನನಿರತರಾಗಿದ್ದರು. ವೈರಾಗ್ಯದ ಪರಾಕಾಷ್ಠೆಯನ್ನು ಮುಟ್ಟಿ ಅವಧೂತ ಸ್ಥಿತಿ ತಲುಪಿದ್ದರು.

ಗುರುಗಳು ಪಾಠ ಮಾಡುತ್ತಿದ್ದ ರೀತಿಯೂ ಬಹಳ ವೈಶಿಷ್ಟ್ಯಾದದ್ದು. ಯಾರಿಗಾದರೂ ಯಾವುದಾದರೂ ವಿಷಯ ಅರ್ಥವಾಗದಿದ್ದರೆ ಅದನ್ನು ಉಚ್ಚ ಸ್ವರದಲ್ಲಿ ಓದಲು ಹೇಳುತ್ತಿದ್ದರು. ಓದಿ ಮುಗಿಸುವ ಮುನ್ನವೇ ಅವರಿಗೆ ಅರ್ಥವಾಗಿಬಿಡುತ್ತಿತ್ತು. ಜಗದ್ಗುರುಗಳ ಸಂಕ್ಷಿಪ್ತ ಜೀವನವಿವರ ್ಝ

ಪೂರ್ವಾಶ್ರಮದ ಹೆಸರು: ನರಸಿಂಹಶಾಸ್ತ್ರೀ

ಜನ್ಮದಿನ: ನಂದನ ಸಂವತ್ಸರದ ಆಶ್ವಯುಜ ಬಹುಳ ಏಕಾದಶೀ

(16 ಅಕ್ಟೋಬರ್ 1892)

ತಂದೆ-ತಾಯಿ:

ಗೋಪಾಲಶಾಸ್ತ್ರಿ, ಲಕ್ಷ್ಮಮ್ಮ

ಊರು: ಶೃಂಗೇರಿ

ಸನ್ಯಾಸ ಸ್ವೀಕಾರ ದಿನ: ಪರಿಧಾವೀ ಸಂವತ್ಸರದ ಚೈತ್ರ ಬಹುಳ ಷಷ್ಠಿ

(07 ಏಪ್ರಿಲ್ 1912)

ದೇಹತ್ಯಾಗದ ದಿನ: ಜಯ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆ

(26 ಸೆಪ್ಟೆಂಬರ್ 1954)

 

ಸ್ಪಂದಿಸಿದ ಆನೆ

ಮಠದ ಆನೆ ಒಮ್ಮೆ ಚಂಡಿ ಹಿಡಿದಿತ್ತು. ಬಹಳ ದಿನಗಳವರೆಗೆ ಆಹಾರವನ್ನು ಮುಟ್ಟದೆ ತನ್ನ ಹತ್ತಿರ ಯಾರನ್ನೂ ಸೇರಿಸುತ್ತಿರಲಿಲ್ಲ. ಮಾವುತನಿಗೂ ಅದನ್ನು ಸರಿದಾರಿಗೆ ತರಲು ಆಗಲಿಲ್ಲ. ಜನರು ಆ ಆನೆಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿ ಕಾಡಿಗೆ ಕಳುಹಿಸುವ ಯೋಚನೆಯಲ್ಲಿದ್ದರು. ಅಂತಮುಖಿಗಳಾಗಿದ್ದ ಗುರುಗಳು ಒಮ್ಮೆ ಬಹಿಮುಖರಾದರು. ಆನೆಯ ಕೂಗಾಟ ಕೇಳಿಸಿತು. ಕೂಡಲೇ ಗಜಶಾಲೆಯತ್ತ ಧಾವಿಸಿದರು. ಅಲ್ಲಿದ್ದ ಜನರು ಗುರುಗಳಿಗೆ ‘ಆನೆಗೆ ಹುಚ್ಚು ಹಿಡಿದಿದೆ, ಅದರ ಹತ್ತಿರ ಹೋದರೆ ಯಾರನ್ನೂ ಬಿಡುವುದಿಲ್ಲ, ತಾವು ದಯವಿಟ್ಟು ಅದರ ಹತ್ತಿರ ಹೋಗಬೇಡಿರಿ’ ಎಂದು ವಿನಂತಿಸಿಕೊಂಡರು. ‘ಇರಲಿ, ನಾವು ಒಮ್ಮೆ ನೋಡುತ್ತೇವೆ’ ಎಂದ ಗುರುಗಳು ಆನೆಯ ಹತ್ತಿರ ಹೋಗಿ ಅದರ ಸೊಂಡಲಿನ ಮೇಲೆ ಕೈಯಾಡಿಸುತ್ತ ಮೃದುವಾದ ಧ್ವನಿಯಲ್ಲಿ ‘ಯಾಕಪ್ಪ ಏನಾಗಿದೆ?’ ಎಂದು ಕೇಳಿದರು. ಆನೆಯು ತಲೆಬಾಗಿ ತನ್ನ ಮುಂಗಾಲನ್ನು ಎತ್ತಿ ತೋರಿಸಿತು. ಗುರುಗಳು ಒಮ್ಮೆ ಅದರ ಕಾಲನ್ನು ನೋಡಿದರು. ಅದರ ಅಂಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು. ಗುರುಗಳು ನೌಕರರನ್ನು ಕರೆದು ಆ ಮೊಳೆಯನ್ನು ಜೋಪಾನವಾಗಿ ತೆಗೆಸಿದರು. ಆದ ಗಾಯಕ್ಕೆ ಚಿಕಿತ್ಸೆ ಮಾಡಿಸಲಾಯಿತು. ಆನೆ ಯಾವ ತಕರಾರನ್ನು ಮಾಡದೆ ಚಿಕಿತ್ಸೆಗೆ ಸ್ಪಂದಿಸಿತು. ಹೀಗೆ ಗುರುಗಳು ಕೇವಲ ಮನುಷ್ಯರಲ್ಲಲ್ಲದೆ ಪ್ರಾಣಿಗಳಲ್ಲಿಯೂ ದಯೆಯಿರಿಸಿ ಅದರ ಮಾತನ್ನೂ ಗ್ರಹಿಸಿ ಅದರ ಕಷ್ಟಗಳನ್ನು ಪರಿಹರಿಸುತ್ತಿದ್ದರು.

ಪಾಠ ಮಾಡುವಾಗ ಎಂದಿಗೂ ಆತುರ ಮಾಡುತ್ತಿರಲಿಲ್ಲ. ನಿಧಾನವಾಗಿ ಅರ್ಥವಾಗುವವರೆಗೂ ವಿವರಿಸುತ್ತಿದ್ದರು. ಪೂಜೆ ಮಾಡುವಾಗಲಂತೂ ಅತ್ಯಂತ ತನ್ಮಯತೆಯಿಂದ ಮಾಡುತ್ತಿದ್ದರು. ತಾವು ಪೂಜೆ ಮಾಡುತ್ತಿರುವುದು ಮೂರ್ತಿಗಲ್ಲ, ಸಾಕ್ಷಾತ್ ಶಿವನಿಗೆ ಮಾಡುತ್ತಿದ್ದೇನೆ ಎಂಬ ಭಾವ ಇರುತ್ತಿತ್ತು. ಒಮ್ಮೆ ಪೂಜಾಸಾಮಗ್ರಿಗಳನ್ನು ತೊಳೆಯುತ್ತಿದ್ದ ಪುರೋಹಿತರು, ಬಲವಂತವಾಗಿ ತಿಕ್ಕಿ ತಿಕ್ಕಿ ಒರೆಸುತ್ತಿದ್ದರು. ಅದನ್ನು ಗಮನಿಸಿದ ಗುರುಗಳು, ‘ನಾವು ಸ್ನಾನ ಮಾಡಿದ ಮೇಲೆ ಹೀಗೆ ನಿಧಾನವಾಗಿ ಒರೆಸಿಕೊಳ್ಳುತ್ತೇವೋ, ಅದೇ ರೀತಿ ಒರೆಸಬೇಕು, ಅದು ಕೇವಲ ವಿಗ್ರಹವಲ್ಲ, ಸಾಕ್ಷಾತ್ ಪರಮೇಶ್ವರ’ ಎಂದು ನುಡಿದಿದ್ದರು. ಹೀಗೆ ಅದನ್ನು ಕೇವಲ ವಿಗ್ರಹವೆಂದುಕೊಳ್ಳದೆ ದೇವರಿಗೆ ಪೂಜೆ ಮಾಡುತ್ತಿದ್ದೇವೆ ಎಂಬ ಭಾವನೆ ಅವರಲ್ಲಿರುತ್ತಿತ್ತು.

ಒಮ್ಮೆ ಮಲಹಾನಿಕರೇಶ್ವರ ದೇವಸ್ಥಾನದಲ್ಲಿ ಗುರುಗಳು ಪೂಜೆ ಮಾಡುತ್ತಿದ್ದರು. ಗರ್ಭಗುಡಿ ಕಿರಿದಾಗಿದ್ದರಿಂದ ಇಕ್ಕಟ್ಟಿನಲ್ಲೇ ಕುಳಿತುಕೊಳ್ಳಬೇಕಾಗಿತ್ತು. ಗಾಳಿ ಬೆಳಕು ಸಹ ಕಮ್ಮಿ ಇತ್ತು. ಅದು ಬಿರುಬೇಸಿಗೆಯ ಸಮಯ. ಪರಿಚಾರಕರು ಸೆಕೆಯನ್ನು ತಡೆಯಲಾರದೆ, ಘಳಿಗೆಗೊಮ್ಮೆ ಹೊರಬರುತ್ತಿದ್ದರು. ಆದರೆ ಗುರುಗಳು ಬೆಳಗ್ಗೆಯಿಂದ ಸಂಜೆಯವರೆಗೆ ಒಮ್ಮೆಯೂ ಅತ್ತಿತ್ತ ಕದಲದೆ ತದೇಕಚಿತ್ತದಿಂದ ಪೂಜೆ ಮಾಡುತ್ತಿದ್ದರು.

ಗುರುಗಳು ರಾಮಾಯಣವನ್ನು ಪಾರಾಯಣ ಮಾಡುವಾಗ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರಂತೆ. ಏಕೆಂದರೆ ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮಂತ ಬಂದೇ ಬರುತ್ತಾನೆ ಎಂದು ಅವರ ಬಲವಾದ ನಂಬಿಕೆಯಾಗಿತ್ತು. ಹೀಗಾಗಿ ರಾಮಾಯಣ ಪಾರಾಯಣ ಮಾಡಿದರೆ ಹನುಮಂತ ಬರುತ್ತಾನಾದ್ದರಿಂದ ಆತನಿಗೆ ಕೂರಲು ಒಂದು ಮಣೆ ಹಾಕುತ್ತಿದ್ದರಂತೆ.

ಗುರುವರ್ಯರು 1924ರಿಂದ 1927ರವರೆಗೆ ಮತ್ತು 1938ರಿಂದ 1940ರವರೆಗೆ ವಿಜಯಯಾತ್ರೆಯ ಸಂದರ್ಭದಲ್ಲಿ ಬಿಟ್ಟರೆ ಮಿಕ್ಕೆಲ್ಲ ಕಾಲದಲ್ಲೂ ಸದಾ ಆತ್ಮಧ್ಯಾನದಲ್ಲೇ ನಿರತರಾಗಿದ್ದರು. ಯಾವಾಗಲೂ ಅಂತಮುಖಿಗಳಾಗಿರುತ್ತಿದ್ದ ಗುರುಗಳು ವಿಜಯಯಾತ್ರೆಯ ಸಂದರ್ಭದಲ್ಲಿ ಒಮ್ಮೆಯೂ ಅಂತಮುಖರಾಗಲಿಲ್ಲ. ಯಾತ್ರೆಯು ಮುಗಿಯುವವರೆಗೂ ಬಹಿಮುಖರಾಗಿದ್ದು ಭಕ್ತರನ್ನು ಅನುಗ್ರಹಿಸುತ್ತಿದ್ದರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಗೆ ಒಬ್ಬ ವ್ಯಕ್ತಿಯು ಜೀವನ ನಡೆಸಬೇಕು ಎಂದು ಹೇಳಿರುವನೋ, ಅದೇ ರೀತಿಯ ಗುಣಗಳು ಇರುವ ಒಂದು ವ್ಯಕ್ತಿಯನ್ನು ಕಾಣಬೇಕಾದರೆ ಅದು

ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳಾಗುವುದರಲ್ಲಿ ಅನುಮಾನವೇ ಇಲ್ಲ. ಚಂದ್ರಶೇಖರ ಭಾರತೀ ಸ್ವಾಮಿಗಳ ಜೀವನಚರಿತ್ರೆಯನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ ಧ್ಯಾನ, ಸಾಧನೆ, ತಪಸ್ಸು. ತಪಸ್ಸು, ಸಾಧನೆ, ಧ್ಯಾನ.

(ಸೂಚನೆ: ಆಸಕ್ತರು ಇಮೇಲ್ ಮೂಲಕ

ಈ ಪುಸ್ತಕವನ್ನು ತರಿಸಿಕೊಳ್ಳಬಹುದು)

ಮಾರ್ಗದರ್ಶನದ ಅಗತ್ಯ

ಸಮಾಜದಲ್ಲಿ ಹೆಸರು ಗಳಿಸಿದ್ದ ವ್ಯಕ್ತಿಯೊಬ್ಬರು ಶೃಂಗೇರಿಗೆ ‘ತಾವು ಗುರುಗಳ ದರ್ಶನಕ್ಕಾಗಿ ಬರುತ್ತೇವೆ, ದಯವಿಟ್ಟು ಗುರುಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಿ’ ಎಂದು ಒಂದು ಮನವಿಪತ್ರವನ್ನು ಬರೆದರು. ಆದರೆ ಮಠದಿಂದ ಆ ವ್ಯಕ್ತಿಗೆ ಯಾವುದೇ ಉತ್ತರ ಬರಲಿಲ್ಲ.

ಆ ವ್ಯಕ್ತಿಯು ಆಗ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್​ರವರಿಗೆ ಪತ್ರ ಬರೆದು ಗುರುಗಳ ಸಂದರ್ಶನಕ್ಕೆ ಏರ್ಪಾಟು ಮಾಡಿಕೊಡುವಂತೆ ಕೇಳಿಕೊಂಡರು. ಆಗ ಮಿರ್ಜಾರವರಿಂದ ಶೃಂಗೇರಿಗೆ ಈ ವಿಷಯವಾಗಿ ಒಂದು ಕಾಗದ ಬಂದಿತು. ಅಧಿಕಾರಿಗಳು ಬೇರೆ ದಾರಿ ಕಾಣದೆ ಅದನ್ನು ಗುರುಗಳಿಗೆ ತಿಳಿಸಿದರು. ಆಗ ಗುರುಗಳು ‘ಇದಕ್ಕೆ ಹಿಂದೆ ಬರೆದ ಪತ್ರದ ಬಗ್ಗೆ ಏಕೆ ನನಗೆ ಹೇಳಿರಲಿಲ್ಲ?’ ಎಂದು ಅಧಿಕಾರಿಗಳಲ್ಲಿ ಕೇಳಿದರು. ಅದಕ್ಕೆ ಅಧಿಕಾರಿಗಳು ‘ಗುರುಗಳೇ, ಸಂದರ್ಶನ ಬಯಸಿದ್ದ ವ್ಯಕ್ತಿಯ ಚಾರಿತ್ರ್ಯ ಸರಿ ಇರಲಿಲ್ಲ. ಎಲ್ಲ ರೀತಿಯ ದುರಭ್ಯಾಸಗಳು ಇವೆ. ಆದ್ದರಿಂದ ತಮಗೆ ಅರಿಕೆ ಮಾಡಲು ಹಿಂಜರಿದಿದ್ದೆ’ ಎಂದರು.

ಅದಕ್ಕೆ ಗುರುಗಳು ‘ಉತ್ತಮ ಚಾರಿತ್ರ್ಯದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ. ಅವರಿಗೆ ಬರಲು ಪತ್ರ ಬರೆಯಿರಿ, ಅವರು ಬರಲಿ, ಶ್ರೀ ಶಾರದಾಂಬೆ, ಚಂದ್ರಮೌಳೀಶ್ವರರು ಅವರನ್ನು ಅನುಗ್ರಹಿಸುತ್ತಾರೆ’ ಎಂದರು.

ಆ ನಂತರ ಆ ವ್ಯಕ್ತಿ ಗುರುಗಳ ದರ್ಶನ ಪಡೆದುಕೊಂಡರು. ಗುರುಗಳ ದರ್ಶನಕ್ಕೆ ಬಂದ ಆ ವ್ಯಕ್ತಿ ಗುರುಗಳ ದರ್ಶನದಿಂದ ಪ್ರಭಾವಿತರಾದರು. ಕೆಲವೇ ದಿನಗಳಲ್ಲಿ ಆ ವ್ಯಕ್ತಿಯ ನಡೆ-ನುಡಿಯಲ್ಲಿ ಮಹತ್ತರ ಬದಲಾವಣೆಯಾಗಿ ಗುರುಗಳ ಪರಮ ಭಕ್ತರಾದರು. ಹೀಗೆ ಗುರುಗಳು ಎಲ್ಲರನ್ನೂ ಸಮನಾಗಿ ಕಂಡು, ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ ಸರಿ ದಾರಿಗೆ ತರುತ್ತಿದ್ದರು. ಮಳೆ ಮತ್ತು ವಿರಾಟಪರ್ವದ ಬೀಜಾಕ್ಷರ

ಚಂದ್ರಶೇಖರ ಭಾರತೀ ಸ್ವಾಮಿಗಳು ವಿಜಯಯಾತ್ರೆಯ ಕಾಲದಲ್ಲಿ ಚೆಟ್ಟಿನಾಡಿನ ದೇವಕೋಟ್ಟೈಗೆ ದಯಮಾಡಿಸಿದಾಗ, ಅಲ್ಲಿ ನೀರಿನ ಅಭಾವ ತೀವ್ರವಾಗಿತ್ತು. ಸರಿಯಾಗಿ ಮಳೆಯಾಗದೆ ಜನ ತುಂಬ ಕಷ್ಟಪಡುತ್ತಿದ್ದರು. ವ್ಯವಸ್ಥಾಪಕರು ಗುರುಗಳ ಬಿಡಾರವನ್ನು ಆ ಊರಿನಿಂದ ಮುಂದಿನ ಊರಿಗೆ ಬದಲಾಯಿಸುವ ಯೋಚನೆಯಲ್ಲಿದ್ದರು. ಗುರುಗಳಿಗೆ ಜನರ ಕಷ್ಟದ ಅರಿವಾಯಿತು. ಅವರು ಕೂಡಲೇ ಶ್ರೀಮಠದ ಪಂಡಿತರಿಂದ ಶ್ರೀಮನ್ಮಹಾಭಾರತದ ವಿರಾಟಪರ್ವದ ಪಾರಾಯಣಕ್ಕೆ ಏರ್ಪಾಟು ಮಾಡಿದರು. ತಾವೇ ಸ್ವತಃ ವರುಣಮಂತ್ರವನ್ನು ಜಪಿಸಲಾರಂಭಿಸಿದರು. ಅದೇ ದಿನ ಮಧ್ಯಾಹ್ನ ಆಕಾಶದಲ್ಲಿ ಕಾಮೋಡಗಳು ಕಾಣಿಸಿಕೊಂಡವು. ಸ್ವಲ್ಪ ಸಮಯದಲ್ಲೇ ಧಾರಾಕಾರವಾಗಿ ಮಳೆಯು ಸುರಿಯಲಾರಂಭಿಸಿತು.

ಎಡೆಬಿಡದೆ ಸತತ ನಾಲ್ಕು ಘಂಟೆಗಳ ಕಾಲ ಕುಂಭದ್ರೋಣ ಮಳೆ ಸುರಿದು ಕೆರೆ, ಕೋಡಿಗಳೆಲ್ಲ ತುಂಬಿ ಹರಿದವು. ಆಗ ವ್ಯವಸ್ಥಾಪಕರು ಗುರುಗಳ ಸನ್ನಿಧಿಗೆ ‘ಮಳೆ ಸಾಕು ಸಾಕು’ ಎನ್ನುತ್ತಾ ಓಡೋಡಿ ಬಂದರು. ಗುರುಗಳು ವಿರಾಟಪರ್ವದ ಪಾರಾಯಣವನ್ನು ನಿಲ್ಲಿಸಿ ಕರ್ಪರದ ಆರತಿ ಮಾಡಲು ಹೇಳಿದರು. ಆರತಿ ಮಾಡಿದ ತಕ್ಷಣವೇ ಮಳೆ ನಿಂತಿತು.

ಈ ಘಟನೆಯಿಂದ ಜನರಿಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವರು ಗುರುಗಳಲ್ಲಿ ಬಂದು ಭಕ್ತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಸಿದ್ಧಸಂಕಲ್ಪರಾಗಿದ್ದ ಗುರುಗಳು ಕೇವಲ ಸಂಕಲ್ಪದಿಂದಲೇ, ಇಚ್ಛಾಶಕ್ತಿಯಿಂದಲೇ ಮಳೆ ಸುರಿಯುವಂತೆ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡದೆ ನಮ್ಮ ಸಂಪ್ರದಾಯಗಳ ಮಹತ್ವವನ್ನು, ಅದರಲ್ಲಿ ಅಡಗಿರುವ ನಿಗೂಢ ರಹಸ್ಯವನ್ನು ಜನತೆಯು ತಿಳಿಯಲು ಈ ಅವಕಾಶ ಕಲ್ಪಿಸಿದರು.

ಒಮ್ಮೆ ಭಕ್ತರೊಬ್ಬರು ಈ ಘಟನೆಯನ್ನು ಕುರಿತು ಗುರುಗಳಲ್ಲಿ ವಿಜ್ಞಾಪಿಸಿದಾಗ ಗುರುಗಳು, ‘ಭಗವಾನ್ ವೇದವ್ಯಾಸರು ವರುಣಮಂತ್ರದ ಬೀಜಾಕ್ಷರಗಳನ್ನು ವಿರಾಟಪರ್ವದಲ್ಲಿ ಅಡಗಿಸಿದ್ದಾರೆ. ಭಕ್ತಿಯಿಂದ ಅದನ್ನು ಪಾರಾಯಣ ಮಾಡುವುದರಿಂದ ಮಳೆ ತರಿಸಬಹುದು’ ಎಂದರು. ಎಲ್ಲರೂ ಮಹಾಸ್ವಾಮಿಗಳವರಿಗೆ ಅದ್ವಿತೀಯ ಶಾಸ್ತ್ರಪಾಂಡಿತ್ಯದ ಜೊತೆಗೆ ಮಂತ್ರಶಾಸ್ತ್ರಗಳ ನಿಗೂಢಾಂಶಗಳ ಬಗ್ಗೆಯೂ ಇರುವ ನೈಪುಣ್ಯಕ್ಕೆ ಆಶ್ಚರ್ಯಚಕಿತರಾಗಿ ತಲೆಬಾಗಿದರು.

 

(ಪ್ರತಿಕ್ರಿಯಿಸಿ: [email protected], [email protected])

 

 

Leave a Reply

Your email address will not be published. Required fields are marked *

Back To Top