Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಜಿಎಸ್​ಟಿ ಸನ್ನಿಹಿತ ತೆರಿಗೆಗಿಲ್ಲ ವರಾತ

Thursday, 16.03.2017, 11:05 AM       No Comments

 

ಜುಲೈ ತಿಂಗಳಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ತೆರಿಗೆ ಸಂಗ್ರಹ ಲೆಕ್ಕಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅಬಕಾರಿ ಹಾಗೂ ನೋಂದಣಿ-ಮುದ್ರಾಂಕ ತೆರಿಗೆ ತಿದ್ದುಪಡಿ ಹೊರತುಪಡಿಸಿದರೆ ಇನ್ಯಾವುದಕ್ಕೂ ಕೈ ಹಾಕದೆ ಜಿಎಸ್​ಟಿ ಮಂಡಳಿಯತ್ತ ರಾಜ್ಯ ಮುಖಮಾಡಿದೆ.

ಈಗಾಗಲೇ ಕೇಂದ್ರ ಸರ್ಕಾರ ಘೊಷಿಸಿರುವಂತೆ ಜುಲೈನಿಂದ ಜಿಎಸ್​ಟಿ ಜಾರಿಗೆ ಬರಲಿದೆ. ಇದಕ್ಕೆ ರಾಜ್ಯ ಸರ್ಕಾರವೂ ಸಂಪೂರ್ಣ ತಯಾರಾಗಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಸಂರಚನೆಯಲ್ಲಿ ಹೆಚ್ಚಿನ ಬದಲಾವಣೆ ಮಾಡುತ್ತಿಲ್ಲ ಎಂದು ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಜಿಎಸ್​ಟಿ ನೀತಿ ಚೌಕಟ್ಟು ರೂಪಿಸುವಲ್ಲಿ ರಾಜ್ಯ ಸರ್ಕಾರವು ಸಕ್ರಿಯವಾಗಿ ಪಾಲ್ಗೊಂಡಿದ್ದು, ಅನುಷ್ಠಾನಕ್ಕಾಗಿ ಈಗಾಗಲೇ ಇ-ಉಪಾಸ್ ಹಾಗೂ ಇ-ಉಪಕ್ರಮ ಜಾರಿಗೊಳಿಸಲಾಗಿದೆ. ಈಗಾಗಲೇ ಶೇ.80ಕ್ಕೂ ಅಧಿಕ ತೆರಿಗೆದಾರರು ನೂತನ ತಂತ್ರಜ್ಞಾನಕ್ಕೆ ಸ್ಥಿತ್ಯಂತರವಾಗಿದ್ದಾರೆ. ತೆರಿಗೆದಾರರು ಮತ್ತು ವೃತ್ತಿನಿರತರೊಂದಿಗೆ ಕಾರ್ಯಾಗಾರ, ರೋಡ್​ಶೋ ನಡೆಸಿ ಮಾಹಿತಿ ನೀಡಲಾಗಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ 3 ಸಾವಿರಕ್ಕೂ ಹೆಚ್ಚಿನ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಕರಸಮಾಧಾನ ಯೋಜನೆ: ಮೌಲ್ಯವರ್ಧಿತ ತೆರಿಗೆ ಬದಲಾಗಿ ಜಿಎಸ್​ಟಿ ಲಾಗೂ ಆಗುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಪೂರ್ಣ ತೆರಿಗೆ ಅಥವಾ ದಂಡ ಹಾಗೂ ಬಡ್ಡಿಯ ಶೇ.10ರಷ್ಟನ್ನು ಈ ವರ್ಷದ ಮೇ 31ರೊಳಗೆ ಪಾವತಿಸಿದರೆ ಉಳಿದ ಶೇ.90ರ ಬಡ್ಡಿ ಹಾಗೂ ದಂಡ ಮನ್ನಾ ಮಾಡಲು ನಿರ್ಧರಿಸಲಾಗಿದೆ.

ಮದ್ಯಪಾನ ದುಬಾರಿ: ಸ್ಪಿರಿಟ್ ರಫ್ತಿನ ಮೇಲೆ ಪ್ರತಿ ಲೀಟರ್​ಗೆ 2 ರೂ ಹಾಗೂ ಆಮದಿನ ಮೇಲೆ 1 ರೂ ಆಡಳಿತಾತ್ಮಕ ಶುಲ್ಕ ಕೈಬಿಡಲಾಗಿದೆ. ಆದರೆ ಅಬಕಾರಿ ಸುಂಕದ ಎಲ್ಲ 17 ಸ್ಲ್ಯಾಬ್​ಗಳ ಮೇಲೆ ಶೇ.6ರಿಂದ 16ರವರೆಗೆ ಸುಂಕ ಹೆಚ್ಚಿಸಲಾಗಿದೆ. ಈಗಾಗಲೇ ಇರುವ ಮೌಲ್ಯವರ್ಧಿತ ತೆರಿಗೆಯನ್ನು ಬಿಯರ್, ಫೆನ್ನಿ, ಲಿಕ್ಯುಯರ್ ಹಾಗೂ ವೈನ್ ಮೇಲೆ ಏ.1ರಿಂದ ತೆಗೆದುಹಾಕಲಾಗುವುದು. ಇದರಿಂದ ವಿಸ್ಕಿ ದರ ಹೆಚ್ಚಾಗಲಿದೆ.

ಮುದ್ರಾಂಕದಲ್ಲಿ ಇಳಿಕೆ: ಕರ್ನಾಟಕ ಮುದ್ರಾಂಕ ಕಾಯ್ದೆಯ 30ನೇ ಕಲಂಗೆ ತಿದ್ದುಪಡಿ ಕೋರಲಾಗಿದ್ದು, ಭದ್ರತಾ ಪತ್ರಗಳ ಮೌಲ್ಯದ ಮೇಲೆ 10 ಸಾವಿರ ರೂಪಾಯಿ ಅಥವಾ ಅದರ ಭಾಗಕ್ಕೆ 30 ಪೈಸೆ ಮುದ್ರಾಂಕ ಶುಲ್ಕ ವಿಧಿಸಲಾಗುತ್ತದೆ. ನೋಟು ಅಪಮೌಲ್ಯೀಕರಣದಿಂದ ಪ್ರಸಕ್ತ ವರ್ಷದಲ್ಲಿ 1,350 ಕೋಟಿ ರೂ ನಷ್ಟವಾಗಿದೆ ಎಂದಿರುವ ಸರ್ಕಾರ, ಮುಂದಿನ ಸಾಲಿನಲ್ಲಿ 9 ಸಾವಿರ ಕೋಟಿ ರೂ ಸಂಗ್ರಹಣೆಯ ಗುರಿ ಹೊಂದಿದೆ.

 • ಜಿಎಸ್​ಟಿ ಹಿನ್ನೆಲೆಯಲ್ಲಿ ಹೊಸ ತೆರಿಗೆ ಘೊಷಣೆ ಇಲ್ಲ. ಜನ ಸಾಮಾನ್ಯರಿಗೆ ಹೆಚ್ಚುವರಿ ಹೊರೆಯಿಲ್ಲ.
 • ಮುದ್ರಾಂಕ ಶುಲ್ಕದಲ್ಲಿ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ತುಸು ಅನುಕೂಲ
 • ಪ್ರವಾಸೋದ್ಯಮ ಸಂಬಂಧಿತ ಮೂಲ ಸೌಕರ್ಯಕ್ಕೆ ಒತ್ತು. ಪ್ರವಾಸಿ ತಾಣಗಳ ಅಭಿವೃದ್ಧಿ
 • 2017ನೇ ವರ್ಷವನ್ನು ‘ವನ್ಯಜೀವಿ’ ವರ್ಷ’ ಎಂಬುದಾಗಿ ಘೊಷಿಸಲಾಗಿದೆ.
 • ‘ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ’ ಪ್ರಸಕ್ತ ಸಾಲಿನಿಂದ ಆರಂಭ
 • ಬಾಕಿ ಇರುವ ಪೂರ್ಣ ತೆರಿಗೆ ಅಥವಾ ದಂಡ ಹಾಗೂ ಬಡ್ಡಿಯ ಶೇ.10ರಷ್ಟನ್ನು ಈ ವರ್ಷದ ಮೇ 31ರೊಳಗೆ ಪಾವತಿಸಿದರೆ ಉಳಿದ ಶೇ.90ರ ಬಡ್ಡಿ ಹಾಗೂ ದಂಡ ಮನ್ನಾ
 • ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ 385 ಕೋಟಿ ರೂ. ಅನುದಾನ

ಎಲ್ಲರಿಗೂ ಅಷ್ಟಿಷ್ಟು…

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್ಟನ್ನು ರೂಪಿಸುವಾಗ ಅವರ ಮನಸ್ಸಿನಲ್ಲಿ ದೊಡ್ಡ ಚಿತ್ರವೇನೂ ಇರಲಿಕ್ಕಿಲ್ಲ. ಏಕೆಂದರೆ ಪರಿಸ್ಥಿತಿಯೂ ಹಾಗೇ ಇದೆ. ತೆರಿಗೆ ಸಂಗ್ರಹ ನಿರೀಕ್ಷೆಯಷ್ಟು ಆಗಿಲ್ಲ. ಇನ್ನೊಂದೆಡೆ, ನೋಟು ನಿಷೇಧದಿಂದಾಗಿ ವಿಶೇಷವಾಗಿ ಮುದ್ರಾಂಕ ಶುಲ್ಕ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮವಾಗಿದ್ದು, ಈ ಬಾಬತ್ತಿನಲ್ಲಿನ ಆದಾಯ 1,300 ಕೋಟಿ ರೂ.ಗಳಷ್ಟು ತಗ್ಗಬಹುದೆಂದು ಅಂದಾಜಿಸಲಾಗಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಿಲ್ಲದೆ ದೂರಗಾಮಿ ಪರಿಣಾಮದ, ದೊಡ್ಡ ದೊಡ್ಡ ಯೋಜನೆಗಳನ್ನು ಬಜೆಟ್​ನಲ್ಲಿ ಘೊಷಿಸುವುದು ಎಂಥ ಚತುರ ಹಣಕಾಸು ಸಚಿವರಿಗೂ ಕಷ್ಟವೇ. 2018ರ ಏಪ್ರಿಲ್, ಮೇನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಿದ್ದು, ಜನರನ್ನು ಒಲಿಸುವ ನಿಟ್ಟಿನಲ್ಲಿ ಇದು ಕೊನೆಯ ಅವಕಾಶ. ಆ ಲೆಕ್ಕದಲ್ಲಿ ನೋಡಿದರೆ ಸಿದ್ದರಾಮಯ್ಯ ಅವರು ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಸಮಾಜದ ಎಲ್ಲ ವರ್ಗಗಳಿಗೂ ಒಂದಿಲ್ಲೊಂದು ಕೊಡುಗೆ ನೀಡುವ ಮೂಲಕ ಅವರ ಮನವೊಲಿಸಲು ಯತ್ನಿಸಿದ್ದಾರೆ. ಯುವಜನರು ಹಾಗೂ ಮಹಿಳೆಯರತ್ತ ವಿಶೇಷ ಗಮನ ನೀಡಿದ್ದಾರೆ. ಆದರೆ ರೈತರ ಸಾಲಮನ್ನಾ ನಿರೀಕ್ಷೆ ಈಡೇರಿಲ್ಲ. ಕಳೆದ ಮೂರು ವರ್ಷಗಳ ಬರದಿಂದಾಗಿ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈ ಮೂಲಕ ನಿರಾಸೆ ಉಂಟುಮಾಡಿದ್ದಾರೆ. ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಶೇ.50 ಮನ್ನಾ ಮಾಡಿದರೆ ರಾಜ್ಯದ ರೈತರು ಸಹಕಾರ ವಲಯದಲ್ಲಿ ಮಾಡಿರುವ ಸಾಲದ ಶೇ.50ನ್ನು ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಅವರು ಹೇಳುತ್ತಲೇ ಬಂದಿದ್ದರು ಹಾಗೂ ಈ ಬಗ್ಗೆ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದರು. ಆದರೆ ಈ ನಿಟ್ಟಿನಲ್ಲಿ ತಾವೇ ಮೊದಲ ಹೆಜ್ಜೆ ಇಡಲು ಮನಸ್ಸು ಮಾಡಿಲ್ಲ. ಇದಕ್ಕೆ ಕಾರಣವೂ ಸ್ಪಷ್ಟ. ಈ ಕ್ರಮಕ್ಕೆ ಮುಂದಾದರೆ 5 ಸಾವಿರ ಕೋಟಿ ರೂ.ಗಿಂತ ಹೆಚ್ಚು ಹಣ ಬೇಕಾಗುತ್ತದೆ. ಸದ್ಯ ಅಷ್ಟು ಹಣ ಭರಿಸುವ ಶಕ್ತಿ ರಾಜ್ಯ ಬೊಕ್ಕಸಕ್ಕಿಲ್ಲ. ಈ ಬಜೆಟ್​ನಲ್ಲಿ ಒಂದು ಮುಖ್ಯ ಘೊಷಣೆಯನ್ನೂ ನಾವು ಗಮನಿಸಬೇಕು. ರೋಬಾಟಿಕ್ಸ್, 3ಡಿ ಪ್ರಿಂಟಿಂಗ್, ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸ್ಟೆಮ್ ಸೆಲ್ ಸಂಶೋಧನೆ ಇತ್ಯಾದಿ ಹೈಟೆಕ್ ಉದ್ಯಮಗಳಿಗೆ ಸಂಬಂಧಿಸಿ ನೀತಿ ರೂಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು, ಕಾಲಕ್ಕೆ ತಕ್ಕಂತೆ ಸ್ಪಂದಿಸುವ ಬಗೆ ಎಂದು ಹೇಳಬಹುದು. ದೇಶದ ರಾಜಕೀಯ ವಾತಾವರಣ ಗಮನಿಸಿದರೆ, ಬಿಜೆಪಿ ನೆಲೆ ವಿಸ್ತರಿಸುತ್ತಿದ್ದರೆ ಕಾಂಗ್ರೆಸ್ ಇರುವ ನೆಲೆಯನ್ನೂ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಕೈಲಿರುವ ಬೆರಳೆಣಿಕೆಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ ರಾಜ್ಯವಾದರೂ ಕೈತಪ್ಪದಂತೆ ನೋಡಿಕೊಳ್ಳುವ ಪ್ರಯತ್ನದ ಅಂಗವಾಗಿ ಸಿದ್ದರಾಮಯ್ಯನವರು ಈ ಆಯವ್ಯಯಕ್ಕೆ ಅಂತಿಮಸ್ಪರ್ಶ ನೀಡಿದಂತಿದೆ. ಈ ಕಸರತ್ತಿನ ಪ್ರಯೋಜನವೇನೆಂಬುದು ನಂತರವೇ ತಿಳಿಯಬೇಕಾದರೂ, ಇದು, ಭಾಗ್ಯ ಯೋಜನೆಗಳನ್ನು ದಂಡಿಯಾಗಿ ಪ್ರಕಟಿಸುವ ಸಿದ್ದು ಬ್ರ್ಯಾಂಡ್ ಬಜೆಟ್ ಎನ್ನಲಡ್ಡಿಯಿಲ್ಲ.

ರಾಜ್ಯದ ಸಾಲ 2,42,420 ಕೋಟಿಗೆ ಏರಿಕೆ

ಸಾಲ ಮಾಡಿ ತುಪ್ಪ ತಿನ್ನುವ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯೂ ಮುಂದಾಗಿದ್ದು, ರಾಜ್ಯದ ಬಜೆಟ್ ಗಾತ್ರವನ್ನು 1,86,561 ಕೋಟಿ ರೂ.ಗೆ ಏರಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು 22 ಸಾವಿರ ಕೋಟಿ ರೂ ಹೆಚ್ಚಳವಾಗಿದೆ. ಚುನಾವಣೆಗೆ ಒಂದು ವರ್ಷವಿರುವಾಗ ಜನಪ್ರಿಯ ಬಜೆಟ್​ಗೆ ಮುಂದಾಗಿರುವ ಸರ್ಕಾರವು, ಹೊಸದಾಗಿ 37,092 ಕೋಟಿ ರೂ ಸಾಲ ಮಾಡಲಿದೆ. ಇನ್ನೊಂದೆಡೆ ಈ ಬಾರಿಯೂ 4442 ಕೋಟಿ ರೂ ವಿತ್ತೀಯ ಕೊರತೆಯಾಗಿದೆ.

ಈ ಸಾಲಿನಲ್ಲಿ ಒಟ್ಟು ಜಮೆಯು 1,82,119 ಕೋಟಿ ರೂಗಳಾಗಬಹುದು ಎಂದು ಅಂದಾಜಿಸಲಾಗಿದ್ದು, 1,44,892 ಕೋಟಿ ರೂಗಳು ರಾಜಸ್ವದಿಂದ ಜಮೆಯಾಗಲಿದೆ. ಇದರಲ್ಲಿ ಈ ಬಾರಿ ಸಾಲ ಮರುಪಾವತಿಗೆ 8,176 ಕೋಟಿ ವ್ಯಯವಾಗುತ್ತದೆ. ಒಟ್ಟಾರೆ ರಾಜಸ್ವದಲ್ಲಿ 137 ಕೋಟಿ ರೂ. ಏರಿಕೆಯಾಗಿ, ವಿತ್ತೀಯ ಕೊರತೆಯು 33,359 ಕೋಟಿ ರೂ.ಗೆ ಏರುತ್ತಿದೆ. ಇದರಿಂದಾಗಿ ರಾಜ್ಯದ ಒಟ್ಟಾರೆ ಸಾಲವು 2,42,420 ಕೋಟಿ ರೂ.ಗಳಾಷ್ಟಗಲಿದೆ. ವಿತ್ತೀಯ ಪರಿಣಾಮದ ಮಿತಿಯಲ್ಲೇ ಸಾಲ ಹಾಗೂ ವಿತ್ತೀಯ ಕೊರತೆ ಇರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಂಪನ್ಮೂಲ ಕ್ರೋಡೀಕರಣ: 2017-18ನೇ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಶೇ.9.42ರ ಏರಿಕೆಯಲ್ಲಿ 89,957 ಕೋಟಿ ರೂ ಸಂಗ್ರಹವಾಗುವ ನಿರೀಕ್ಷೆಯಿದೆ. ತೆರಿಗೆಯೇತರ ರಾಜಸ್ವದಿಂದ 6,945 ಕೋಟಿ ರೂ, ಕೇಂದ್ರದ ತೆರಿಗೆ ಪಾಲಿನಲ್ಲಿ 31,908 ಕೋಟಿ ರೂ ಹಾಗೂ ಕೇಂದ್ರದಿಂದ 16,082 ಕೋಟಿ ರೂ ಸಹಾಯಧನವನ್ನು ರಾಜ್ಯ ನಿರೀಕ್ಷಿಸಿದೆ.

ರಾಜ್ಯದ ಪ್ರತಿ ವ್ಯಕ್ತಿಯ ಮೇಲೆ 37 ಸಾವಿರ ರೂ ಸಾಲ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಿಡಿಯುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಾಲವು 1.14 ಲಕ್ಷ ಕೋಟಿ ರೂ. ನಷ್ಟಿತ್ತು. ಆ ಸಂದರ್ಭದಲ್ಲಿ ರಾಜ್ಯದ ಬಜೆಟ್ ಗಾತ್ರವು 1.17 ಲಕ್ಷ ಕೋಟಿಯಷ್ಟಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಬಜೆಟ್ ಗಾತ್ರಕ್ಕಿಂತಲೂ ಸಾಲದ ಪ್ರಮಾಣ ಹೆಚ್ಚಿದೆ. ನಾಲ್ಕು ವರ್ಷದ ಅವಧಿಯಲ್ಲಿ 69 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಳವಾದರೆ, ಬರೋಬ್ಬರಿ 1.28 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಈ ಲೆಕ್ಕದಲ್ಲಿ ರಾಜ್ಯದ ಆರೂವರೆ ಕೋಟಿ ಜನರಲ್ಲಿ ಪ್ರತಿಯೊಬ್ಬರ ಮೇಲೂ 37,300 ರೂ. ಸಾಲವಿದೆ.

‘ಬೆಳ್ಳಿ ಶೃಂಗ’

ರಾಜ್ಯದ 16 ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಬಜೆಟ್ ಒತ್ತು ನೀಡಿದೆ. ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳಾದ ಲಕ್ಕುಂಡಿ, ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬನವಾಸಿ ಇತ್ಯಾದಿ ಸ್ಥಳಗಳನ್ನು ಪುನಶ್ಚೇತನಗೊಳಿಸಿ ಆಕರ್ಷಣೀಯವಾಗಿ ಮಾಡಲು ಕಾರವಾರದಿಂದ ವಿಜಯಪುರದವರೆಗೆ, ಬೆಳಗಾವಿಯಿಂದ ಬಳ್ಳಾರಿವರೆಗೆ ಮತ್ತು ಬೀದರ್​ನಿಂದ ಕೊಪ್ಪಳದವರೆಗೆ ಪ್ರವಾಸಿ ‘ಬೆಳ್ಳಿ ಶೃಂಗ’ ಸ್ಥಾಪಿಸಲಾಗುವುದು.

ಕರಾವಳಿಯಲ್ಲಿ ಸರ್ಫಿಂಗ್ ಉತ್ಸವ

ಕರ್ನಾಟಕದ ಕರಾವಳಿ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಮಂಗಳೂರಿನ ಸಸಿಹಿತ್ಲು ಬೀಚ್​ನಲ್ಲಿ ‘ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ’ವನ್ನು ಪ್ರಸಕ್ತ ಸಾಲಿನಿಂದ ಏರ್ಪಡಿಸಲಾಗುವುದು.

2017 ವನ್ಯಜೀವಿ ವರ್ಷ

ಕರ್ನಾಟಕದಲ್ಲಿ ಅರಣ್ಯ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಲು ಮುಂದಾಗಿರುವ ಸರ್ಕಾರ, ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿಗೆ 385 ಕೋಟಿ ರೂ.ಗಳನ್ನು ಒದಗಿಸಿದೆ. ಜತೆಗೆ 2017ನೇ ವರ್ಷವನ್ನು ‘ವನ್ಯಜೀವಿ’ ವರ್ಷ’ (ಛಿಚ್ಟ ಟ್ಛ ಠಿಜಛಿ ಗಜ್ಝಿಛ) ಎಂಬುದಾಗಿ ಘೊಷಿಸಲಾಗಿದೆ.

ರಾಜ್ಯಾದ್ಯಂತ ಅರಣ್ಯ ಪ್ರವಾಸೋದ್ಯಮ ಮತ್ತು ಚಾರಣ ಪಥಗಳನ್ನು (ಎಕೋ-ಟ್ರೇಲ್ಸ್) ಜನಪ್ರಿಯಗೊಳಿಸಲು, ನಿರ್ಜನ ಕಾಡು ಪ್ರದೇಶ ಮತ್ತು ವನ್ಯಜೀವಿಗಳನ್ನು ಅನ್ವೇಷಿಸಲು ಪ್ರವಾಸಿಗರಿಗೆ 2017ನೇ ವರ್ಷವನ್ನು ‘ವನ್ಯಜೀವಿ’ ವರ್ಷವಾಗಿ ಘೊಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 2017-18ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಒಟ್ಟು 572 ಕೋಟಿ ರೂಪಾಯಿ ಒದಗಿಸಲಾಗಿದ್ದು, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 385 ಕೋಟಿ ರೂ. ಒದಗಿಸಲಾಗುವುದು. ಈ ಅನುದಾನದ ಅಡಿಯಲ್ಲಿ ಈ ಕೆಳಗಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಪೌರಾಡಳಿತಕ್ಕೆ ಸಿಕ್ಕಿದ್ದೇನು?

 • ನಗರೋತ್ಥಾನ 3ನೇ ಹಂತದಲ್ಲಿ (ಮಹಾನಗರ ಪಾಲಿಕೆ)1 ಸಾವಿರ ಕೋಟಿ ರೂ. ವೆಚ್ಚದಲ್ಲಿ 1,565 ಕಾಮಗಾರಿಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸುವುದು
 • ನಗರೋತ್ಥಾನ 2ನೇ ಹಂತದಲ್ಲಿ (ಪುರಸಭೆ/ನಗರಸಭೆ) 2,060 ಕೋಟಿ ರೂ. ವೆಚ್ಚದಲ್ಲಿ 2,050 ಕಾಮಗಾರಿಗಳನ್ನು ಪೂರ್ಣಗೊಳಿಸುವುದು
 • ನಗರೋತ್ಥಾನ 3ನೇ ಹಂತದಲ್ಲಿನ (ಪುರಸಭೆ/ನಗರಸಭೆ) 2,886 ಕೋಟಿ ರೂ. ಅನುದಾನದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಕುಡಿಯುವ ನೀರು ಮತ್ತು ಮೂಲಸೌಕರ್ಯ ಒದಗಿಸುವ ಕಾಮಗಾರಿಗಳ ಅನುಷ್ಠಾನ
 • ರಾಜೀವ್ ಆವಾಸ್ ಯೋಜನೆಯಡಿ 550 ಕೋಟಿ ರೂ. ವೆಚ್ಚದಲ್ಲಿ 22,133 ವಸತಿಗೃಹಗಳ ನಿರ್ಮಾಣ
 • ಸೂರು ಅಭಿಯಾನದಡಿ 2,612 ಕೋಟಿ ರೂ. ವೆಚ್ಚದಲ್ಲಿ 60 ಸಾವಿರ ಮನೆಗಳ ನಿರ್ಮಾಣ
 • 134 ನಗರಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆ ಅಡಿಯಲ್ಲಿ 3.29 ಲಕ್ಷ ವೈಯಕ್ತಿಕ ಶೌಚಗೃಹಗಳ ನಿರ್ಮಾಣ
 • ಜಲನಿಧಿ, ವ್ಯಾಪಾರ್, ಇ-ಆಸ್ತಿ ಮತ್ತು ಜನಹಿತ ಯೋಜನೆ ಗಳಿಗೆ ಸಂಬಂಧಿಸಿದಂತೆ ಆನ್​ಲೈನ್ ಸ್ವೀಕೃತಿ, ಅನುಮೋದನೆ ಮತ್ತು ಸೇವಾ ವಿತರಣೆಗಾಗಿ ವೆಬ್ ಅಪ್ಲಿಕೇಷನ್ ಅಭಿವೃದ್ಧಿ

ಉದ್ದಿಮೆಗಳ ಮೌಲ್ಯಮಾಪನ

ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಯ ನಿರ್ವಹಣೆ, ದಕ್ಷತೆ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ಗರಿಷ್ಠ ಮಟ್ಟಕ್ಕೇರಿಸಲು ಅನುವಾಗುವ ಕ್ರಿಯಾವರದಿ ಸಿದ್ಧಪಡಿಸಲು ಹಾಗೂ ಕಾರ್ಯದ ತಾಂತ್ರಿಕ ಮೌಲ್ಯಮಾಪನ ನಡೆಸುವುದಾಗಿ ಸರ್ಕಾರ ತಿಳಿಸಿದೆ.

ಜಿಡಿಪಿ ಕುಸಿತ

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ 2016-17ನೇ ಸಾಲಿನಲ್ಲಿ ಶೇ.6.9ರಷ್ಟು ಪ್ರಗತಿಯಾಗಿದೆ. 2015-16ರಲ್ಲಿ ಶೇ.7.3 ಪ್ರಗತಿ ದಾಖಲಾಗಿತ್ತು. ಕೈಗಾರಿಕಾ ಹಾಗೂ ಸೇವಾ ವಲಯಗಳಲ್ಲಿ ಬೆಳವಣಿಗೆ ಕುಂಠಿತವಾಗಿರುವುದರಿಂದ ಪ್ರಸಕ್ತ ಸಾಲಿನ ದರ ಕಡಿಮೆಯಾಗಿದೆ. ಕೈಗಾರಿಕಾ ವಲಯ ಎರಡೂ ವರ್ಷ ಶೇ.2.2ರ ಬೆಳವಣಿಗೆ ದಾಖಲಿಸಿದ್ದರೆ ಸೇವಾ ವಲಯದ ಬೆಳವಣಿಗೆ ಶೇ.10.4ರಿಂದ ಶೇ.8.5ಕ್ಕೆ ಇಳಿದಿದೆ.

ಹಳೆಯ ಯೋಜನೆಗಳ ಪುನರಾವರ್ತನೆ

ಈ ಬಾರಿಯ ಆಯವ್ಯಯದಲ್ಲಿ ಹಳೆಯ ಯೋಜನೆಗಳಿಗೆ ಇನ್ನಷ್ಟು ಶಕ್ತಿ ನೀಡಿರುವ ಮುಖ್ಯಮಂತ್ರಿ, ಈ ಹಿಂದೆ ಅನುಷ್ಠಾನವಾಗದ ಕೆಲ ಯೋಜನೆಗಳನ್ನು ಬಜೆಟ್​ನಲ್ಲಿ ಮರುಘೊಷಣೆ ಮಾಡಿದ್ದಾರೆ. ಇನ್ನು ಕೆಲವು ಯೋಜನೆಗಳಿಗೆ ಈಗಾಗಲೇ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದರೂ ಸೇರಿಸಿಕೊಂಡಿದ್ದಾರೆ. ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಕೆ, ಚೂಡಿದಾರ ವಿತರಣೆ, ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಕಾರ್ಡ್ ವಿತರಣೆ, ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನವನ, ಪರಿಹಾರ ಹಣ ವಿತರಣೆಗೆ ತಂತ್ರಾಂಶ, ರಸ್ತೆ ಬದಿಯಲ್ಲಿ ಮರಗಳ ನಿರ್ವಣ, ರೇಲ್ವೆ ಮೇಲ್ಸೇತುವೆ ನಿರ್ವಣಗಳಿಗೆ ಅನುದಾನ ವಿಚಾರವು ಈ ಹಿಂದೆಯೂ ಘೊಷಣೆಯಾಗಿದ್ದು, ಕೆಲವು ಅನುಷ್ಠಾನ ಗೊಂಡಿರಲಿಲ್ಲ. ಕೆಲವು ಜಾರಿಯಾಗಿ ಅನುಷ್ಠಾನವೂ ಆಗಿಹೋಗಿದೆ.

ಬರದಿಂದ ಜನತೆ ಕಂಗೆಟ್ಟಿದ್ದಾರೆ. ಸರ್ಕಾರ ಈ ವರ್ಷವಾದರೂ ಸಾಲಮನ್ನಾ ಮಾಡಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಬಜೆಟ್​ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿರೀಕ್ಷಿತ ಪ್ರಮಾಣದ ಅನುದಾನ ನೀಡಿಲ್ಲ. ಸಿದ್ದರಾಮಯ್ಯ ಅವರು ಬಡ ವರ್ಗದ ಜನರನ್ನು ನಿರ್ಲಕ್ಷಿಸಿರುವುದರಿಂದ ಇದೊಂದು ನಿರಾಶಾದಾಯಕ ಬಜೆಟ್.

| ಡಾ.ಪ್ರಭಾಕರ ಕೋರೆ ರಾಜ್ಯಸಭೆ ಸದಸ್ಯ, ಬೆಳಗಾವಿ

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಬೆಂಗಳೂರಿಗೆ ಅಧಿಕ ಮೂಲಸೌಲಭ್ಯ ಕಲ್ಪಿಸಿರುವುದು ರಿಯಾಲ್ಟಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಮೆಟ್ರೋ 3ನೇ ಹಂತದ ಕಾಮಗಾರಿ ಬಗ್ಗೆ ಉಲ್ಲೇಖಿಸಿರುವುದು ಬೆಂಗಳೂರು ಉತ್ತರ ವಲಯದ ಅಭಿವೃದ್ಧಿಗೆ ಪೂರಕವಾಗಿದೆ.

| ಸಿ.ಎನ್.ಗೋವಿಂದರಾಜು ವೈಷ್ಣವಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರು.

 

ಸರ್ವರನ್ನೂ ಖುಷಿಗೊಳಿಸುವ ಉದ್ದೇಶದ ಬಜೆಟ್

| ಡಿ.ಮುರಳೀಧರ

ಅನುಭವಿ ರಾಜಕಾರಣಿ ಸಿದ್ದರಾಮಯ್ಯ ರಾಜಕೀಯ ವೃತ್ತಿಜೀವನದ 12ನೇ ಆಯವ್ಯಯವನ್ನು ಮಂಡಿಸಿದ್ದಾರೆ. ಅವರು ಎದುರಿಸುತ್ತಿದ್ದ ನಿರ್ಬಂಧಗಳು ಅಥವಾ ಇತಿಮಿತಿಗಳನ್ನೊಮ್ಮೆ ಪರಿಗಣಿಸಿದರೆ, ಯಥೋಚಿತ ರೀತಿಯಲ್ಲೇ ಅವರು ಈ ಕಸರತ್ತನ್ನು ನೆರವೇರಿಸಿದ್ದಾರೆ ಎನ್ನಲಡ್ಡಿಯಿಲ್ಲ.

ಇದು ಮುಂಬರುವ ಚುನಾವಣೆಗೂ ಮುಂಚಿನ ಬಜೆಟ್ ಆಗಿರುವುದರಿಂದ, ರಾಜಕೀಯ ಸವಾಲುಗಳು ಮಾತ್ರವಲ್ಲದೆ ಸಮಾಜದ ವಿಭಿನ್ನ ವರ್ಗಗಳ ನಿರೀಕ್ಷೆಗಳೂ ಅವರೆದುರು ಇದ್ದುದು ದಿಟ. ಕೇವಲ ಒಂದಂಕಿಯ ಬೆಳವಣಿಗೆ ಹೊಂದಿದ್ದ, ನಿರೀಕ್ಷಿತ ಲವಲವಿಕೆ ತೋರದ ಆದಾಯದಿಂದಾಗಿ ಅವರು ಹಣಕಾಸಿನ ಇತಿಮಿತಿಗಳನ್ನು ಎದುರಿಸುತ್ತಿದ್ದುದೂ ಹೌದು. ರಾಜ್ಯದ ಪ್ರಗತಿಯನ್ನು ಸೂಚಿಸುವ ಜಿಎಸ್​ಡಿಪಿ ಬೆಳವಣಿಗೆ ಪ್ರಮಾಣವೂ ಶೇ. 7.4ರಿಂದ 6.9ಕ್ಕೆ ಕುಸಿದಿದೆ; ಇದರ ದೋಷವನ್ನು ಅನಾಣ್ಯೀಕರಣ ಪ್ರಕ್ರಿಯೆಯು ಹೊರಬೇಕಾಗಿ ಬಂದಿದ್ದು ‘ಸುಲಭ ಬಲಿಪಶು’ ಎನಿಸಿಕೊಳ್ಳುವಂತಾಗಿದೆ.

ಇವೆಲ್ಲದರ ನಡುವಿನ ಅತ್ಯಂತ ನಿರಾಶಾದಾಯಕ ಸಂಗತಿಯೆಂದರೆ, ನಿರಂತರ ಕ್ಷಾಮ ಹಾಗೂ ನೋಟುಗಳ ಅನಾಣ್ಯೀಕರಣದ ಕಾರಣದಿಂದಾಗಿ ತೊಂದರೆಗೊಳಗಾದ ಕೃಷಿಕರ ಸಾಲಮನ್ನಾ ಆಗುವುದೆಂಬ ನಿರೀಕ್ಷೆಯನ್ನು ಸಿದ್ದರಾಮಯ್ಯ ನೆರವೇರಿಸದಿರುವುದು. ಕೃಷಿವಲಯಕ್ಕೆ ಸಂಬಂಧಿಸಿದ ಹಂಚಿಕೆಗಳು ಹೆಚ್ಚಿವೆಯಾದರೂ, ಸಾಲದ ಭಾಗಶಃ ಮನ್ನಾ ಆಗಿದ್ದರೂ ಅನೇಕ ಬಡ ಕೃಷಿಕರಿಗೆ ಎಷ್ಟೋ ನೆರವಾಗುತ್ತಿತ್ತು. ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿ ಈಗಾಗಲೇ ರಾಜ್ಯದ ಕೆಲವೊಂದು ಭಾಗಗಳಲ್ಲಿ ಪ್ರತಿಭಟನೆಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಹಿಂದಿನ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ವಲಯದಲ್ಲೂ ಕೈಗೊಂಡ ಕಾರ್ಯದ ಸಾರಾಂಶವನ್ನು ಉಲ್ಲೇಖಿಸಿ, ತರುವಾಯದಲ್ಲಿ ಪ್ರಸಕ್ತ ಆಯವ್ಯಯದ ವಿವರಗಳನ್ನು ಹಂಚಿಕೊಂಡಿದ್ದು ಈ ವರ್ಷದ ಬಜೆಟ್ ಭಾಷಣದ ಒಂದು ವಿಶೇಷ ಅಂಶವೆನ್ನಬೇಕು.

ಬಜೆಟ್ ಗಾತ್ರವು 1,86,561 ಕೋಟಿ ರೂ.ಗಳಿಗೆ ಹಿಗ್ಗಿದೆ. ಒಟ್ಟು ಸಾಲದ ಪ್ರಮಾಣವು 2,42,400 ಕೋಟಿ ರೂ.ಗಳಷ್ಟಾಗುವ ಸಂಭವವಿದ್ದು, ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯು ಶಿಫಾರಸು ಮಾಡಿದ ಜಿಎಸ್​ಡಿಪಿಯ ಶೇ. 25ರಷ್ಟು ಪ್ರಮಾಣಕ್ಕೆ ತಕ್ಕಂತಿದೆ. ಆದರೆ, ಈ ಸಾಲಗಳನ್ನು ಸ್ಥಿರಾಸ್ತಿಗಳ ಸಮರ್ಪಕ ಸೃಷ್ಟಿಗೆ ವಿನಿಯೋಗಿಸಲಾಗುತ್ತದೆಯೇ ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. 150 ಪುಟಗಳಷ್ಟಿದ್ದ ಮುಖ್ಯಮಂತ್ರಿಗಳ ಸುದೀರ್ಘ ಬಜೆಟ್ ಭಾಷಣ ಸರ್ಕಾರದ ಪ್ರತಿಯೊಂದು ವಿಭಾಗವನ್ನೂ ಒಳಗೊಂಡಿದ್ದು, ಪ್ರತಿಯೊಬ್ಬರನ್ನೂ ಖುಷಿಪಡಿಸುವಂಥ ಏನಾದರೊಂದು ಅಂಶವನ್ನು ಒಳಗೊಂಡಂತಿತ್ತು. ಇನ್ನು ವಲಯವಾರು ಹಣ ಹಂಚಿಕೆಯ (ಕೋಟಿ ರೂ.ಗಳಲ್ಲಿ) ವಿವರ ಹೀಗಿದೆ:

ಭ ಕೃಷಿ-5080 ಭ ಜಲಸಂಪನ್ಮೂಲ-15,929 ಭ ಸಣ್ಣ ನೀರಾವರಿ-2,000 ಭ ಶಿಕ್ಷಣ-4,400 ಭ ಮಹಿಳಾ ಮತ್ತು ಮಕ್ಕಳ ಆರೋಗ್ಯ-4,926 ಭ ಸಮಾಜ ಕಲ್ಯಾಣ-6,363 ಭ ಹಿಂದುಳಿದ ವರ್ಗಗಳು-3,154 ಭ ಗೃಹನಿರ್ವಣ-4,708 ಭ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್-14,061. ಮಿಕ್ಕುಳಿದ ಹಂಚಿಕೆಗಳು ಬಹುತೇಕ ನಿರೀಕ್ಷಿತ ಪ್ರಮಾಣದಲ್ಲೇ ಇವೆಯೆನ್ನಬೇಕು.

ಹಿಂದಿನಂತೆ, ರಾಜ್ಯದ ಆದಾಯದ ಸುಮಾರು ಶೇ. 56ರ ಕೊಡುಗೆ ನೀಡುವ ಬೆಂಗಳೂರು, ನಗಣ್ಯವೆನ್ನಬಹುದಾದ ಮತ್ತು ತೇಪೆಹಾಕಿದಂತಿರುವ ಹಂಚಿಕೆಯನ್ನು ಪಡೆದುಕೊಂಡಿದೆ. ಇಲ್ಲಿನ ಯೋಜನೆಗಳ ಪ್ರಗತಿಯು ಕರುಣಾಜನಕ ಸ್ಥಿತಿಯಲ್ಲಿದ್ದು, ಈ ಸಂಬಂಧದ ವಿದ್ಯಮಾನಗಳು ಸರ್ಕಾರ ಮತ್ತು ಅಧಿಕಾರಿಶಾಹಿಯನ್ನೂ ಮೀರಿಸುವಂತಿವೆ. ಕಳಪೆ ಮೂಲಸೌಕರ್ಯದ ಕಾರಣದಿಂದಾಗಿ ಬೆಂಗಳೂರಿನ ವಾತಾವರಣ ನಿಧಾನವಾಗಿ ಹದಗೆಡುತ್ತ ಅಂತಾರಾಷ್ಟ್ರೀಯ ಮಹತ್ವವನ್ನು ಕಳೆದುಕೊಳ್ಳುತ್ತಿರುವುದರಿಂದಾಗಿ, ಇಂಥ ದೂರಾಲೋಚನೆಯ ಕೊರತೆಯು ರಾಜ್ಯದ ಪಾಲಿಗೆ ದುಬಾರಿಯಾಗಿ ಪರಿಣಮಿಸಲಿದೆ. ಬೆಂಗಳೂರಿನ ಎಲ್ಲ ಆದಾಯ ಹುಟ್ಟುವಳಿಯನ್ನೂ ಇಲ್ಲೇ ವಿನಿಯೋಗಿಸಿಬಿಡಬೇಕು ಎಂದು ವಾದಿಸುವುದು ಮೂರ್ಖತನವಾಗುತ್ತದೆಯಾದರೂ, ಬೆಂಗಳೂರನ್ನು ಈ ಮಟ್ಟಿಗೆ ನಿರ್ಲಕ್ಷಿಸಿದರೆ ಅದು ಆತ್ಮಘಾತಕ ವರ್ತನೆಯಾಗಿ ಪರಿಣಮಿಸಬಲ್ಲದು ಎನ್ನಬಹುದೇನೋ?

ಸರ್ಕಾರ ಪ್ರಸ್ತಾವಿಸಿರುವ ಕೆಲವೊಂದು ಹೊಸ ಉಪಕ್ರಮಗಳು ನಿಜಕ್ಕೂ ಸ್ವಾಗತಾರ್ಹವಾಗಿವೆ; ಆದರೆ ನಿವೃತ್ತಿ ವಯಸ್ಸಿಗೆ ಮತ್ತು ಖಾಸಗಿ ವಲಯದಲ್ಲಿನ ಮೀಸಲಾತಿಗೆ ಶಿಫಾರಸು ಮಾಡುವುದು ಅಸಮರ್ಥನೀಯ ಎನ್ನಲಡ್ಡಿಯಿಲ್ಲ. 2-ಸ್ಟ್ರೋಕ್ ಇಂಜಿನ್ ಆಟೋರಿಕ್ಷಾಗಳ ಹಿಂದೆಗೆತದ ಪ್ರಸ್ತಾವನೆಯು ಒಳ್ಳೆಯ ಉಪಕ್ರಮವೇ. ಜತೆಗೆ ನಗರ ಪ್ರದೇಶಗಳಲ್ಲಿ ಶುರುಮಾಡಲು ಉದ್ದೇಶಿಸಿರುವ ‘ನಮ್ಮ ಕ್ಯಾಂಟೀನ್’ ಯೋಜನೆಯು ಶ್ಲಾಘನೀಯವಾದರೂ, ಅಂಥ ಅಗಾಧ ವ್ಯಾಪ್ತಿ ಇಲ್ಲದ ಕಾರಣ ಅವುಗಳನ್ನು ನಡೆಸುವ ಹೊಣೆಗಾರಿಕೆಯಿಂದ ಸರ್ಕಾರ ಹಿಂದೆ ಸರಿಯಬೇಕಷ್ಟೇ.

ರೋಬೋಟಿಕ್ಸ್, 3-ಡಿ ಮುದ್ರಣ, ನ್ಯಾನೊ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕಾಂಡಕೋಶ ಸಂಶೋಧನೆ ಇವೇ ಮೊದಲಾದ ಉನ್ನತ ತಂತ್ರಜ್ಞಾನದ ಉದ್ಯಮಗಳಿಗೆ ಸಂಬಂಧಿಸಿದ ಕಾರ್ಯನೀತಿಯೊಂದನ್ನು ರೂಪಿಸಲು ಮುಂದಾಗಿರುವುದು ಈ ಆಯವ್ಯಯದ ಅತ್ಯಂತ ಪ್ರಬುದ್ಧ ಉಪಕ್ರಮ. ‘ಜ್ಞಾನಾಧಾರಿತ’ ನಗರವಾಗಿರುವ ಬೆಂಗಳೂರಿನಲ್ಲಿ ಇಂಥ ಪಾರಸ್ಪರಿಕ ಕ್ರಿಯೆಗಳನ್ನು ಸುಲಭದಲ್ಲಿ ಸಾಧಿಸಬಹುದಾಗಿದೆ.

ಇಲ್ಲಿ ಮತ್ತೊಂದು ಅಂಶವನ್ನು ಹೇಳಲೇಬೇಕು- ‘ಸರಳೀಕೃತ ವ್ಯವಹಾರ ಕಾರ್ಯಾಚರಣೆ’ಗೆ ಅನುವುಮಾಡಿಕೊಡುವ ಪ್ರದೇಶಗಳ ಪಟ್ಟಿಯಲ್ಲಿ ವಿಶ್ವಬ್ಯಾಂಕು ಬೆಂಗಳೂರಿಗೆ ತೀರಾ ಕೆಳಗಿನ ಶ್ರೇಯಾಂಕವನ್ನು ನೀಡಿದೆ. ಆದ್ದರಿಂದ, ಭಾವಿ ಹೂಡಿಕೆದಾರರ ವಿಶ್ವಾಸಾರ್ಹತೆ/ಸ್ವೀಕಾರಾರ್ಹತೆಯನ್ನು ಹೆಚ್ಚೆಚ್ಚು ದಕ್ಕಿಸಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಪೂರ್ವಗ್ರಹವಿಲ್ಲದೆ ಕೆಲಸ ಮಾಡಬೇಕಿದೆ.

ಬಜೆಟ್​ನಲ್ಲಿ ಹಣ ವಿನಿಯೋಗದ ಕುರಿತು ಧಾರಾಳ ವಿವರಗಳಿವೆ. ಆದರೆ ಕಂದಾಯ ಕ್ರೋಡೀಕರಣ ಹಾಗೂ ಅಧಿಕ ಅಭಿವೃದ್ಧಿ ಸಾಧಿಸುವ ಬಗ್ಗೆ ಕ್ರಿಯಾಯೋಜನೆ ಕಾಣುತ್ತಿಲ್ಲ. ಜಾಣ ರಾಜಕಾರಣಿ ಸಿದ್ದರಾಮಯ್ಯನವರು ಎಲ್ಲರನ್ನೂ ಸಂತಸಪಡಿಸುವ ಸುಲಭದಾರಿ ಆರಿಸಿಕೊಂಡಂತಿದೆ.

(ಲೇಖಕರು ಆರ್ಥಿಕ ತಜ್ಞರು, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top