Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಜಿಎಸ್​ಟಿ ಬದಲಿಸಲಿದೆ ಅರ್ಥವ್ಯವಸ್ಥೆಯ ಚಿತ್ರಣ

Friday, 21.04.2017, 3:00 AM       No Comments

ಬರುವ ಜುಲೈ 1ರಿಂದ ರಾಷ್ಟ್ರಾದ್ಯಂತ ಜಾರಿಗೆ ಬರಲಿರುವ ಜಿಎಸ್​ಟಿ ತೆರಿಗೆ ವ್ಯವಸ್ಥೆಯ ಲಾಭಗಳು, ಅನುಕೂಲಗಳು ಹಲವು. ಈ ಕಾಯ್ದೆಯಡಿ ನೋಂದಣಿ ವ್ಯವಸ್ಥೆ ಹೇಗಿರುತ್ತದೆ ಮತ್ತು ಯಾರ್ಯಾರಿಗೆ ನೋಂದಣಿ ತೆಗೆದುಕೊಳ್ಳುವ ಬಾಧ್ಯತೆ ಇರುತ್ತದೆ ಎಂಬ ವಿವರ ಒಳಗೊಂಡ ಲೇಖನವಿದು.

ಳೆದ ಮಾರ್ಚ್ 29ರ ಯುಗಾದಿಯ ಪರ್ವದಲ್ಲಿ ಲೋಕಸಭೆಯು ಕೇಂದ್ರ ಜಿಎಸ್​ಟಿ, ಏಕೀಕೃತ ಜಿಎಸ್​ಟಿ, ಕೇಂದ್ರಾಡಳಿತ ಪ್ರದೇಶ ಜಿಎಸ್​ಟಿ ಹಾಗೂ ಜಿಎಸ್​ಟಿ (ರಾಜ್ಯಗಳಿಗೆ ಪರಿಹಾರ) ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಇದರಿಂದ ಪರೋಕ್ಷ ತೆರಿಗೆಯಲ್ಲಿ ಅತ್ಯಂತ ಮಹತ್ವದ ಸುಧಾರಣಾ ಕ್ರಮ ಎಂದು ಬಣ್ಣಿಸಲಾಗುತ್ತಿರುವ ಜಿಎಸ್​ಟಿ ತೆರಿಗೆ ಪರ್ವಕ್ಕೆ ದೇಶ ಸಿದ್ಧವಾಗುತ್ತಿದೆ.

ಈ ಹೊಸ ಕಾಯ್ದೆಯಡಿ ನೋಂದಣಿಯನ್ನು ಆದಾಯ ತೆರಿಗೆ ಕಾಯ್ದೆಯಡಿ ನೀಡಲಾದ ಪ್ಯಾನ್ ಅನ್ನು ಆಧಾರವಾಗಿಟ್ಟುಕೊಂಡು ನೀಡಲಾಗುತ್ತದೆ. ಈಗ ಕೇಂದ್ರ ಸರ್ಕಾರದ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಸಿ.ವಿ.ಡಿ. ಮುಂತಾದ ಕಾಯ್ದೆಗಳಡಿಯಲ್ಲಿ ಮತ್ತು ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆ, ಪ್ರವೇಶ ತೆರಿಗೆ, ಮನರಂಜನಾ ತೆರಿಗೆ, ವಿಲಾಸಿ ತೆರಿಗೆ ಮುಂತಾದ ಕಾಯ್ದೆಗಳಡಿ ನೋಂದಾಯಿತರಾದ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕಿದೆ. ಈ ದಾಖಲಾತಿ ಪ್ರಕ್ರಿಯೆಯು 2017ರ ಜನವರಿಯಿಂದಲೇ ಪ್ರಾರಂಭವಾಗಿದೆ. ಕರ್ನಾಟಕವು 93% ಕರದಾತರ ದಾಖಲಾತಿ ಮಾಡಿಸಿ, ರಾಷ್ಟ್ರದಲ್ಲಿಯೇ ಮೂಂಚುಣಿಯಲ್ಲಿದೆ. ಆದರೆ ಕೇಂದ್ರ ಸರ್ಕಾರದ ಸೇವಾ ತೆರಿಗೆದಾರರ ದಾಖಲಾತಿಯಲ್ಲಿ ಕೇವಲ ಶೇ.25 ಮಾತ್ರ ಪ್ರಗತಿಯಾಗಿದ್ದು, ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಇತ್ತೀಚೆಗೆ ಸಮರೋಪಾದಿಯಲ್ಲಿ ಕೈಗೆತ್ತಿಗೊಂಡಿದೆ. ಸರಕು ಮತ್ತು ಸೇವಾ ತೆರಿಗೆ (GSTN) ಜಾಲದ ಮುಖಾಂತರ ದಾಖಲಾತಿ ಮಾಡಿಕೊಂಡಿರುವ ಎಲ್ಲ ಕರದಾತರು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ನಿಗದಿಪಡಿಸಲಾದ ದಾಖಲೆಪತ್ರಗಳನ್ನು ಅಂದರೆ ಮಾಲೀಕತ್ವ/ಬಾಡಿಗೆ ಕರಾರುಪತ್ರಗಳು/ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಅಪ್​ಲೋಡ್ ಮಾಡಿ ಒಂದು ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪಡೆಯಬೇಕು. ಜುಲೈ 1ರಿಂದ ಜಿ.ಎಸ್.ಟಿ. ಜಾರಿಗೆ ಬಂದಾಗ ಈ ತಾತ್ಕಾಲಿಕ ನೋಂದಣಿ ಸಂಖ್ಯೆ ಅವಶ್ಯವಾಗಿದ್ದು, ನಂತರದ ಆರು ತಿಂಗಳ ಅವಧಿಯಲ್ಲಿ ಕಾಯಂ ನೋಂದಣಿ ಪತ್ರ ನೀಡಲಾಗುತ್ತದೆ.

ವಹಿವಾಟು ಮಿತಿ ಏರಿಕೆ: ಈ ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೋಂದಣಿಗೆ ವಹಿವಾಟು ಮಿತಿಯನ್ನು ಈಗಿರುವ ರೂ. 10 ಲಕ್ಷಗಳಿಂದ ರೂ. 20 ಲಕ್ಷಕ್ಕೆ ಏರಿಸಿರುವುದರಿಂದ ಚಿಕ್ಕಪುಟ್ಟ ವ್ಯಾಪಾರ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ತಮ್ಮ ಹೆಸರಿನಲ್ಲಿ ಪ್ಯಾನ್ ಸಂಖ್ಯೆ ಹೊಂದಿದ ವ್ಯಕ್ತಿ ಅಥವಾ ಒಬ್ಬ ಕಾನೂನಾತ್ಮಕ ವ್ಯಕ್ತಿ/ಹಿಂದೂ ಅವಿಭಕ್ತ ಕುಟುಂಬ ಮುಂತಾದವರಿಗೆ ಅವರ ಸರಕು ಮತ್ತು ಸೇವೆಗಳ ಪೂರೈಕೆಗಳ ವಾರ್ಷಿಕ ವಹಿವಾಟು ರೂ. 20 ಲಕ್ಷಗಳಿದ್ದರೆ ಮಾತ್ರ ನೋಂದಣಿ ಕಡ್ಡಾಯವಿರುತ್ತದೆ. ಈ ವಹಿವಾಟು ಮಿತಿ ಈಶಾನ್ಯ ರಾಜ್ಯಗಳಲ್ಲಿ ವಾರ್ಷಿಕ ರೂ. 10 ಲಕ್ಷಗಳಿಷ್ಟಿದೆ. ಆದರೆ ಈ ವಹಿವಾಟಿನ ಮಿತಿಯನ್ನು ನಿರ್ಧರಿಸುವಾಗ ಒಂದು ಪ್ಯಾನ್ ಸಂಖ್ಯೆಯಡಿ ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವ ಎಲ್ಲ ವಹಿವಾಟುಗಳನ್ನು ಲೆಕ್ಕ ಹಾಕಲಾಗುತ್ತದೆ(All India Aggregate Turnover).

ಉದಾಹರಣೆಗೆ, ಒಬ್ಬ ವ್ಯಕಿಯ ಕರ್ನಾಟಕದಲ್ಲಿನ ಸರಕು ಅಥವಾ ಸೇವೆಗಳ ಪೂರೈಕೆಗಳ ವಾರ್ಷಿಕ ವಹಿವಾಟು ರೂ. 5 ಲಕ್ಷವಾಗಿದ್ದರೂ ಇತರ ರಾಜ್ಯಗಳಲ್ಲಿ ಅದು ರೂ. 15 ಲಕ್ಷ ಮೀರಿ ದೇಶದಾದ್ಯಂತ ಒಟ್ಟು ವಹಿವಾಟು ರೂ. 20 ಲಕ್ಷಗಳಾದರೆ ನೋಂದಣಿ ಕಡ್ಡಾಯ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ, ಸದ್ಯದ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ ಸರಕುಗಳ ಮಾರಾಟ/ಖರೀದಿಯ ಮೌಲ್ಯಗಳ ಆಧಾರದ ಮೇಲೆ ಒಟ್ಟು ವಹಿವಾಟನ್ನು ನಿರ್ಧಾರ ಮಾಡಲಾಗುತ್ತಿದೆ. ಆದರೆ ಜಿಎಸ್​ಟಿ ಕಾಯ್ದೆಯಡಿಯಲ್ಲಿ ಇದನ್ನು ಸರಕು ಮತ್ತು ಸೇವೆಗಳ ‘ಪೂರೈಕೆ’ಗಳ ಮೌಲ್ಯಗಳ ಒಟ್ಟು ವಹಿವಾಟಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ವಹಿವಾಟು, ಸರಕು ಮತ್ತು ಸೇವೆಗಳ ಪೂರೈಕೆಯ ಅಂದರೆ ಅವುಗಳ ಮಾರಾಟ, ಸರಕು-ವರ್ಗಾವಣೆ (Stock Transfer), ಪರಸ್ಪರ ಕೊಡುಕೊಳ್ಳುವಿಕೆ, ವಿನಿಮಯ, ಲೈಸೆನ್ಸ್, ಭೋಗ್ಯ, ಬಾಡಿಗೆ, ಮುಂತಾದ ಎಲ್ಲಾ ವ್ಯವಹಾರಗಳನ್ನು ಒಳಗೊಂಡಿರುತ್ತದೆ. ಆದುದರಿಂದ ಜಿಎಸ್​ಟಿ ಕಾಯ್ದೆಯಲ್ಲಿ, ಸಂವಿಧಾನದ ಇತ್ತೀಚಿನ 101ನೇ ತಿದ್ದುಪಡಿಯಂತೆ ಸೇರಿಸಲಾದ ಪರಿಚ್ಛೇದ 246-ಎ ಮತ್ತು 366(29-ಎ)ರಂತೆ ಪೂರೈಕೆ ಎಂಬ ಪದದ ವ್ಯಾಪ್ತಿ ಮಾರಾಟ ಎಂಬ ಪದದ ವ್ಯಾಪ್ತಿಗಿಂತ ತುಂಬ ವಿಶಾಲವಾಗಿರುತ್ತದೆ. ಈ ಪೂರೈಕೆಯು ಸ್ಥಳೀಯ ಪೂರೈಕೆ, ಅಂತರ-ರಾಜ್ಯ ಪೂರೈಕೆ ಮತ್ತು ಪರದೇಶಗಳಿಗೆ ಮಾಡುವ ಸರಕು ಮತ್ತು ಸೇವೆಗಳ ರಫ್ತುಗಳ ವಹಿವಾಟುಗಳನ್ನು ಒಳಗೊಂಡಿದ್ದು, ತೆರಿಗೆ ವಿನಾಯಿತಿ/ಜಿಎಸ್​ಟಿ ವ್ಯಾಪ್ತಿಗೆ ಬರದ ವಹಿವಾಟುಗಳನ್ನು ಒಳಗೊಂಡಿರುತ್ತದೆ.

ಅದೇ ರೀತಿಯಲ್ಲಿ, ಅಂತರ್-ರಾಜ್ಯ ವಹಿವಾಟು ಮಾಡುವವರಿಗೆ, ನಿರ್ದಿಷ್ಟ ವ್ಯವಹಾರ ಸ್ಥಳವಿಲ್ಲದ ವ್ಯಕ್ತಿಗಳಿಗೆ ಹಾಗೂ ಅನಿವಾಸಿ ಪೂರೈಕೆದಾರರಿಗೆ ಈ 20 ಲಕ್ಷ ರೂ.ಗಳ ಮಿತಿ ಅನ್ವಯಿಸುವುದಿಲ್ಲ. ಇವರು ಒಂದು ರಾಜ್ಯದಲ್ಲಿ ಎಷ್ಟೇ ಕಡಿಮೆ ವಹಿವಾಟು ಮಾಡುವುದಾದರೂ, ಅಂದಾಜಿತ ಮುಂಗಡ ತೆರಿಗೆ ಪಾವತಿಸಿ ನೋಂದಣಿ ಪಡೆದು ವ್ಯವಹಾರ ಮಾಡಬೇಕು.

ಈಗ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿಯಲ್ಲಿ ಇರುವ ಹಾಗೆಯೇ ಜಿಎಸ್​ಟಿ ಅಡಿಯಲ್ಲಿಯೂ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮಾಡಬೇಕಾದ ಕೇಂದ್ರ/ರಾಜ್ಯ ಸರ್ಕಾರದ ಇಲಾಖೆೆಗಳು ಹಾಗೂ ತೆರಿಗೆ ಮರುಪಡೆಯಲು ಆರ್ಹತೆ ಇರುವ ಸಂಯುಕ್ತ ರಾಷ್ಟ್ರ ಸಂಘದ ಸಂಸ್ಥೆಗಳು, ವಿದೇಶಿ ರಾಯಭಾರ ಕಚೇರಿಗಳು ಪ್ರತ್ಯೇಕ ಗುರುತಿನ ಸಂಖ್ಯೆ (UIN)ಯನ್ನು ತೆಗೆದುಕೊಳ್ಳುವುದು ಕಡ್ಡಾಯ.

ಜಿಎಸ್​ಟಿ ವ್ಯಾಪ್ತಿಗಿಲ್ಲ ರೈತರು: ರೈತರನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ವ್ಯವಸಾಯಗಾರನು ತಾನು ಬೆಳೆದ ಕೃಷಿ ಉತ್ಪನ್ನಗಳ ಪೂರೈಕೆ ಮಾಡಲು ಜಿಎಸ್​ಟಿಯಲ್ಲಿ ನೋಂದಣಿ ಅವಶ್ಯಕತೆ ಇರುವುದಿಲ್ಲ.

ಶೀಘ್ರ ನೋಂದಣಿ ಮಾಡಿಕೊಳ್ಳಿ: ಬಾಧ್ಯತೆ ಇದ್ದರೂ ನಿಗದಿಪಡಿಸಿದ ಕಾಲಮಿತಿಯಲ್ಲಿ ನೋಂದಣಿ ತೆಗೆದುಕೊಳ್ಳದಿದ್ದರೆ ಸಕ್ಷಮ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಕಡ್ಡಾಯ ನೋಂದಣಿ ನೀಡುತ್ತಾರೆ. ಜೊತೆಗೆ ದಂಡ ಮತ್ತು ಸರ್ಕಾರಕ್ಕೆ ಪಾವತಿಯಾಗದಿರುವ ತೆರಿಗೆಯ ಮೇಲೆ ಬಡ್ಡಿಯನ್ನೂ ವಸೂಲಿ ಮಾಡುತ್ತಾರೆ, ಈ ಹೊರೆಗಳನ್ನು ತಪ್ಪಿಸಿಕೊಳ್ಳಲು ರೂ. 20 ಲಕ್ಷದ ವಹಿವಾಟು ಮಿತಿ ಹತ್ತಿರ ಬರುತ್ತಿರುವಾಗಲೇ ನೋಂದಣಿ ಮಾಡಿಕೊಳ್ಳುವುದು ಅಪೇಕ್ಷಣೀಯ. ಒಬ್ಬ ವ್ಯಕ್ತಿ ನಿಗದಿತ ಸಮಯದಲ್ಲಿ ನೋಂದಣಿ ಪಡೆದರೆ, ಆತನ ಹತ್ತಿರ ನೋಂದಣಿ ದಿನಾಂಕದ ಹಿಂದಿನ ದಿನ ಇದ್ದ ಸರಕು ದಾಸ್ತಾನಿನ ಮೇಲೆ ಹೂಡುವಳಿ ತೆರಿಗೆ ಪಡೆಯಬಹುದು. ಇದು ಆ ನೋಂದಣಿ ದಿನಾಂಕದ ಒಂದು ವರ್ಷದ ಒಳಗೆ ಖರೀದಿಸಲಾದ ಸರಕಿಗೆ ಮಾತ್ರ ಅನ್ವಯಿಸುತ್ತದೆ.

ಒಂದು ಪ್ಯಾನ್ ಸಂಖ್ಯೆಯಡಿ ದೇಶಾದ್ಯಂತ ಮಾಡಲಾಗುವ ವಹಿವಾಟು ರೂ. 20 ಲಕ್ಷ ಮೀರಿದ ನಂತರದ ಒಂದು ತಿಂಗಳೊಳಗಾಗಿ ನೋಂದಣಿ ತೆಗೆದುಕೊಳ್ಳಬಹುದೆಂದು ಜಿಎಸ್​ಟಿ ಕಾಯ್ದೆಯಲ್ಲಿ ಹೇಳಿದ್ದರೂ ನೋಂದಣಿ ತೆಗೆದುಕೊಳ್ಳದೇ, ಆ ಒಂದು ತಿಂಗಳಲ್ಲಿ ಮಾಡಬಹುದಾದ ಪೂರೈಕೆಗಳ ಮೇಲೆ ಮಾರಾಟ ಪಟ್ಟಿಗಳಲ್ಲಿ ತೆರಿಗೆ ಸಂಗ್ರಹಿಸಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ರೂಪದಲ್ಲಿ ನೋಂದಣಿ ಸಂಖ್ಯೆ ಸಿಕ್ಕಿದ ಮೇಲೆ ಮೊದಲು ನೀಡಲಾದ ಮಾರಾಟಪಟ್ಟಿಗಳ ಬದಲಿಗೆ, ಅನ್ವಯಿಸುವ ತೆರಿಗೆ ವಿಧಿಸಿ, ಬದಲಿ ಇನ್​ವಾಯ್್ಸ ನೀಡಲೂ ಸಹ ಈ ಕಾಯ್ದೆಯಲ್ಲಿ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಹೊಸದಾಗಿ ನೋಂದಣಿಯಾದ ಪೂರೈಕೆದಾರರಿಂದ ಮೊದಲ ಒಂದು ತಿಂಗಳಿನಲ್ಲಿ ಸರಕು/ಸೇವೆಗಳನ್ನು ಪಡೆದವರಿಗೆ ಹೂಡುವಳಿ ತೆರಿಗೆ ಪಡೆಯಲು ಅನುಕೂಲವಾಗುತ್ತದೆ. ಈ ಕುರಿತಾದ ಮತ್ತಷ್ಟು ವಿವರಗಳನ್ನು ನಾಳೆ ನೋಡೋಣ.

(ಲೇಖಕರು ವಾಣಿಜ್ಯ ತೆರಿಗೆ ನಿವೃತ್ತ ಜಂಟಿ ಆಯುಕ್ತರು, ವಿತ್ತೀಯ ಕಾರ್ಯನೀತಿ ಸಂಸ್ಥೆ ಸಲಹೆಗಾರರು)

Leave a Reply

Your email address will not be published. Required fields are marked *

Back To Top