Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಜಿಎಸ್​ಟಿಯಿಂದ ಆರ್ಥಿಕ ಬಲ

Thursday, 09.11.2017, 3:02 AM       No Comments

ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ರಾಷ್ಟ್ರದ ಆರ್ಥಿಕ ರಂಗದ ಚಿತ್ರಣವನ್ನೇ ಬದಲಾಯಿಸಿ, ಅದಕ್ಕೆ ಬಲ ತುಂಬಲಿದೆ ಎಂಬ ವಿಶ್ಲೇಷಣೆಯನ್ನು ಆಗಾಗ ಆರ್ಥಿಕ ತಜ್ಞರು ಮತ್ತು ಪರಿಣತರು ದೊಡ್ಡ ದನಿಯನ್ನೇ ಮಂಡಿಸಿದ್ದುಂಟು. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ವ್ಯವಸ್ಥೆಯನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಈ ಹಿಂದಿನ ಸರ್ಕಾರಗಳು ಕೂಡ ಪ್ರಯತ್ನಿಸಿದ್ದವು. ಆದರೆ, ರಾಜ್ಯಗಳ ನಡುವೆ ಒಮ್ಮತ ಮೂಡದ್ದರಿಂದ ಈ ಮಹತ್ವದ ಸುಧಾರಣಾ ಕ್ರಮ ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ನೋಟು ಅಮಾನ್ಯೀಕರಣದ ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ ತರುವಾಯ ಈ ವರ್ಷದ ಜುಲೈಯಿಂದ ಜಿಎಸ್​ಟಿಯನ್ನು ಅನುಷ್ಠಾನಕ್ಕೆ ತಂದಿದ್ದು ಗೊತ್ತಿರುವಂಥದ್ದೇ. ಆದರೆ, ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಜಿಎಸ್​ಟಿಯಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ, ತೆರಿಗೆ ಸಂಗ್ರಹ ತಗ್ಗುತ್ತಿದೆ, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದೆಲ್ಲ ಆರೋಪಿಸಿಕೊಂಡು ಬಂದವು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಲವು ಸಾರ್ವಜನಿಕ ಸಭೆಗಳಲ್ಲಿ ಜಿಎಸ್​ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ವ್ಯಂಗ್ಯವಾಡಿದರೇ ಹೊರತು ಈ ತೆರಿಗೆ ವ್ಯವಸ್ಥೆಯಲ್ಲಿನ ದೋಷಗಳೇನು ಎಂಬುದು ಜನರ ಮುಂದಿಡಲಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಹ ಜಿಎಸ್​ಟಿಯಿಂದ ರಾಜ್ಯದ ತೆರಿಗೆ ಸಂಗ್ರಹದ ಮೇಲೆ ಹೊಡೆತ ಬಿದ್ದಿದೆ ಎಂದು ಹಲವು ಬಾರಿ ಆರೋಪಿಸಿದ್ದರು. ಆದರೆ, ಈ ಆರೋಪಗಳೆಲ್ಲ ರಾಜಕೀಯ ಪ್ರೇರಿತವಾಗಿ ಕೂಡಿವೆ ಎಂಬುದಕ್ಕೆ ಕರ್ನಾಟಕದಲ್ಲಿ ತೆರಿಗೆ ಸಂಗ್ರಹ ಹೆಚ್ಚಳದ ಅಂಕಿಅಂಶಗಳೇ ಸಾಕ್ಷಿಯಾಗಿವೆ.

‘ನೋಟು ಅಮಾನ್ಯೀಕರಣದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ 2017-2018ರ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಆದರೆ, ಪ್ರಸಕ್ತ ಹಣಕಾಸು ವರ್ಷದ ಯಾವುದೇ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿಲ್ಲ. ಪ್ರತಿ ತಿಂಗಳೂ 2016ಕ್ಕಿಂತ ಹೆಚ್ಚಿನ ತೆರಿಗೆ ಲಭಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ವಾರ್ಷಿಕ ಗುರಿಯ ಶೇ.44ರಷ್ಟು ಸಂಗ್ರಹವಾಗಿದ್ದರೆ, ಈ ವರ್ಷ ಬಹುತೇಕ ಶೇ.2ರಷ್ಟು ಹೆಚ್ಚಳ ಅಂದರೆ ಶೇ.45.9ರಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಲಭಿಸಿದೆ. ಹಾಗಾಗಿ, ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ಕುರಿತಾದ ಆರೋಪಗಳು ವಾಸ್ತವದಿಂದ ದೂರವಾಗಿವೆ ಎಂಬುದು ದಿನಗಳೆದಂತೆ ಸ್ಪಷ್ಟವಾಗುತ್ತಿದೆ. ಕರ್ನಾಟಕದ ಚಿತ್ರಣ ಮಹಾಲೇಖಪಾಲರ ವರದಿಯಿಂದ ಸ್ಪಷ್ಟಗೊಂಡಿದೆ. ಉಳಿದೆಡೆಗಳಲ್ಲೂ ಇದೇ ಸ್ಥಿತಿ ಇರುವ ಸಾಧ್ಯತೆ ಇದ್ದು, ಹೊಸ ವ್ಯವಸ್ಥೆ, ಸುಧಾರಣೆಗಳ ಕುರಿತಂತೆ ರಾಜಕೀಯ ಪ್ರೇರಿತ ಆರೋಪಗಳು ಸಲ್ಲದು ಎಂಬುದನ್ನು ಸಂಬಂಧಪಟ್ಟವರು ಅರ್ಥಮಾಡಿಕೊಳ್ಳಬೇಕು.

ಜಿಎಸ್​ಟಿ ಜಾರಿ ಹಂತದಲ್ಲಿ ಕೆಲ ತೊಡರುಗಳು ಎದುರಾದರೂ ಅದನ್ನು ನಿವಾರಿಸಿಕೊಳ್ಳಲಾಗಿದೆ. ಅಲ್ಲದೆ, ಜಿಎಸ್​ಟಿ ಮಂಡಳಿಯ ಎರಡು ದಿನಗಳ ಮಹತ್ವದ ಸಭೆ ಗುರುವಾರ ಆರಂಭವಾಗಲಿದ್ದು, ದಿನಬಳಕೆಯ ಶಾಂಪೂ, ಪ್ಲಾಸ್ಟಿಕ್ ವಸ್ತುಗಳೂ ಸೇರಿದಂತೆ 150-200 ಸರಕುಗಳ ಮೇಲಿನ ಸುಂಕ ತಗ್ಗುವ ನಿರೀಕ್ಷೆ ಇದೆ. ಜನರಿಗೆ, ಸಣ್ಣ ವ್ಯಾಪಾರಿಗಳಿಗೆ ಹೊರೆಯಾಗುವಂಥ ತೆರಿಗೆ ದರಗಳನ್ನು ಇಳಿಸುವ ನಿಟ್ಟಿನಲ್ಲಿ ಚಿಂತನೆ, ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಜಿಎಸ್​ಟಿ ಅಳವಡಿಕೆಯ ನಂತರ ಅದರ ಫಲ ಕಾಣಲು ಒಂದಷ್ಟು ಕಾಲಾವಕಾಶ ಬೇಕು ಎಂದು ವಿತ್ತೀಯ ತಜ್ಞರೇ ಸ್ಪಷ್ಟಪಡಿಸಿದ್ದುಂಟು. ಆದರೂ, ವಿರೋಧಕ್ಕಾಗಿ ವಿರೋಧ ಎಂಬ ರೀತಿಯಲ್ಲಿ ಪ್ರತಿಪಕ್ಷಗಳು ವರ್ತಿಸುವುದು ಸರಿಯಲ್ಲ. ರಾಜಕೀಯದ ಸಮರ ಎಷ್ಟೇ ತೀವ್ರವಾಗಿರಲಿ ಆದರೆ ಸುಧಾರಣೆಯ ವಿಷಯ ಬಂದಾಗ ದೇಶ ಒಂದಾಗಿ ಮುಂದಡಿ ಇಡಬೇಕು

Leave a Reply

Your email address will not be published. Required fields are marked *

Back To Top