Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಜಿಎಸ್​ಟಿಗೆ ನೂರು ದಿನ, ಒಂದು ರಿಯಾಲಿಟಿ ಚೆಕ್

Friday, 13.10.2017, 3:02 AM       No Comments

ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ವ್ಯವಸ್ಥೆ ಜಾರಿಯಾಗಿ 100 ದಿನಗಳು ಪೂರ್ಣಗೊಂಡಿವೆ. ಈ ಹಂತ ಅವಲೋಕನಕ್ಕೆ ಒಂದು ನಿಮಿತ್ತವಾಗಿದ್ದು, ಲೋಪದೋಷಗಳ ಜತೆಗೆ ಧನಾತ್ಮಕ ಬದಲಾವಣೆಗಳನ್ನೂ ದಾಖಲಿಸುವ ಪ್ರಯತ್ನ ಇದು. ಸದ್ಯದ ಸಮಸ್ಯೆಗಳು ಏನೇ ಇದ್ದರೂ, ಅಂತಿಮವಾಗಿ ಇದರಿಂದ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ.

  ‘ಒಂದು ದೇಶ ಒಂದು ತೆರಿಗೆ’ (ಸರಕು ಮತ್ತು ಸೇವಾ ತೆರಿಗೆ-ಜಿಎಸ್​ಟಿ) ಜಾರಿಗೆ ಬಂದು ಈಗಾಗಲೇ 100 ದಿನಗಳಾಗಿವೆ. ಐತಿಹಾಸಿಕ ಪರೋಕ್ಷ ತೆರಿಗೆ ಕಾನೂನಿನ ಅವಲೋಕನಕ್ಕೆ ಇದು ಸಕಾಲವೂ ಹೌದು. ಈ ಹೊಸ ಕಾನೂನಿನ ಪರಿಣಾಮ, ಪ್ರಭಾವ ಒಂದಿಲ್ಲೊಂದು ರೀತಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಆಗಿದೆ, ಆಗುತ್ತಿದೆ. ಸ್ವಾತಂತ್ರ್ಯಾನಂತರದಲ್ಲಿ ದೇಶದ ತೆರಿಗೆ ವ್ಯವಸ್ಥೆ ಮೇಲೆ ಈ ಮಟ್ಟದ ಪ್ರಭಾವ ಬೀರಿದ ಕಾರಣ ಇದನ್ನು ಐತಿಹಾಸಿಕ ಎಂದೇ ಉಲ್ಲೇಖಿಸಿದ್ದೇನೆ.

ನಮ್ಮ ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ನಮ್ಮ ಫೆಡರಲ್ ವ್ಯವಸ್ಥೆಯೊಳಗಿರುವ 29 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು ತೆರಿಗೆ ಸಂಗ್ರಹಿಸಿ, ಆಡಳಿತೋದ್ದೇಶಕ್ಕೆ ಬಳಸಬಹುದು. ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಗಳಿಗೂ ಈ ತೆರಿಗೆಗಳಿಗೂ ಯಾವುದೇ ಸಂಬಂಧ ಇಲ್ಲ. ರಾಜ್ಯ ಸರ್ಕಾರಗಳು ಸ್ವತಂತ್ರವಾಗಿ ವಿಧಿಸುವ ತೆರಿಗೆಗಳಿವು. ಆದಾಗ್ಯೂ, ಕೆಲವೊಂದು ವಿನಾಯಿತಿಗಳೊಂದಿಗೆ ಆದಾಯ ತೆರಿಗೆ ಸಂಗ್ರಹ ಕೇಂದ್ರ ಸರ್ಕಾರದ ವಿಶೇಷಾಧಿಕಾರವಾಗಿ ಉಳಿದುಕೊಂಡಿದೆ. ಇನ್ನುಳಿದಂತೆ, ನಗರ, ಪಟ್ಟಣ ಆಡಳಿತಗಳು ಕೂಡ ಸರಕುಗಳ ಮೇಲೆ ತೆರಿಗೆ ವಿಧಿಸುತ್ತವೆ. ಸರಕುಗಳ ಮೇಲಿನ ಈ ಎಲ್ಲ ತೆರಿಗೆಗಳು ಕಾಲಾನುಕ್ರಮದಲ್ಲಿ ಹಲವು ಬಾರಿ ಪರಿಷ್ಕರಣೆಗೊಳಗಾಗಿವೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಶುಲ್ಕ ವಸೂಲಿ ವಿನ್ಯಾಸ ಮತ್ತು ದರಗಳಲ್ಲೂ ಬದಲಾವಣೆಗಳಾಗಿವೆ. ಇದರ ಪರಿಣಾಮ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ತೆರಿಗೆ ದರ, ವಿಶಿಷ್ಟ ಅಂಶಗಳು ಮತ್ತು ಪ್ರಕ್ರಿಯೆಯನ್ನು ಹೊಂದಿ ಪ್ರತ್ಯೇಕ ಪ್ರತ್ಯೇಕ ದ್ವೀಪಗಳಂತೆ ಉಳಿಯುವಂತಾಯಿತು.

ಇಂತಹ ಬಹುತೇಕ ತೆರಿಗೆ ಕಾನೂನುಗಳು ಪುರಾತನವಾಗಿದ್ದು, ಕಾಲಕಾಲಕ್ಕೆ ಸರಿಯಾಗಿ ಪರಿಷ್ಕರಣೆಗೊಳ್ಳದೆ ಅಪ್ರಸ್ತುತವೆನಿಸಿದ್ದವು. ಇದರ ಪರಿಣಾಮವಾಗಿ ತೀರಾ ಸಂಕೀರ್ಣವಾದ, ಅದಕ್ಷ, ಪರೋಕ್ಷ ತೆರಿಗೆ ವ್ಯವಸ್ಥೆ ವ್ಯತಿರಿಕ್ತ ಪರಿಣಾಮಗಳನ್ನು ಬೀರತೊಡಗಿತ್ತು. ದೇಶದುದ್ದಗಲ ವಹಿವಾಟುಗಳು ಹುಚ್ಚಾಟದಂತಾಗಿ, ಗೊಂದಲಗಳಿಂದ ಕೂಡಿದ್ದವು. ಪರಿಣಾಮ ವಿಪರೀತ ವ್ಯಾಜ್ಯಗಳು ಹುಟ್ಟಿಕೊಂಡವು. ತೆರಿಗೆ ವ್ಯವಸ್ಥೆಯಲ್ಲಿನ ಹಲವು ನಿರ್ಣಯಗಳು ಭ್ರಷ್ಟಾಚಾರಕ್ಕೆ ಇಂಬು ನೀಡುವಂತೆ ಇದ್ದವು. ಸುಗಮ ವ್ಯಾಪಾರೋದ್ಯಮ ನಿರ್ವಹಣೆಗೆ ಇವು ಕಂಟಕವಾಗಿದ್ದವು. ಅಂದಿನ ತೆರಿಗೆ ವ್ಯವಸ್ಥೆಗಳು ದೇಶದ ಅರ್ಥ ವ್ಯವಸ್ಥೆಯನ್ನು ಕುಗ್ಗಿಸುವಂಥವಾಗಿದ್ದ ಕಾರಣ, ಆಧುನಿಕ ಪರೋಕ್ಷ ತೆರಿಗೆ ಕಾನೂನಿನ ಅಗತ್ಯ ಅಂದಿನ ತುರ್ತು ಕೂಡ ಆಗಿತ್ತು.

ಉದಾರೀಕರಣ ನೀತಿಗೊಳಪಟ್ಟ ನಂತರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬದಲಾಗುತ್ತಿರುವ ಬೇಡಿಕೆಗೆ ಅನುಗುಣವಾಗಿ ಅದಕ್ಕೆ ಹೊಂದುವಂತಹ ಹಾಗೂ ಸರಳ ತೆರಿಗೆ ಕಾನೂನುಗಳನ್ನು ಬಯಸುತ್ತಿತ್ತು. ಅಂತಹ ಸಂದರ್ಭದಲ್ಲಿ ವಿವಿಧ ದೇಶಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯವಸ್ಥೆ ಜಾರಿಗೆ ಬಂದಿತ್ತು. ಅದರ ಯಶಸ್ಸಿನ ಬಗ್ಗೆ ಯಾವುದೇ ಸಂದೇಹ ಉಳಿದಿರಲಿಲ್ಲ. ನಮ್ಮ ದೇಶದ ಸರ್ಕಾರ 2000ನೇ ಇಸವಿಯ ಆಸುಪಾಸಿನಲ್ಲಿ ವಿವಿಧ ದೇಶಗಳ ಜಿಎಸ್​ಟಿ ಅಂಶಗಳನ್ನು ಇರಿಸಿಕೊಂಡು ಅಂಥ ಕಾನೂನು ಜಾರಿಗೊಳಿಸುವ ಇಂಗಿತ ವ್ಯಕ್ತಪಡಿಸಿತ್ತು. ಅಲ್ಲದೇ ಈ ಕುರಿತು ಸಂಬಂಧಪಟ್ಟ ವಲಯದವರ ಜತೆಗೆ ಮಾತುಕತೆಯನ್ನೂ ಆರಂಭಿಸಿತ್ತು. ಆಗ ಆರಂಭವಾದ ಈ ಪ್ರಕ್ರಿಯೆಗೆ ಒಂದು ಸ್ಪಷ್ಟ ಸ್ವರೂಪ ಸಿಕ್ಕಿದ್ದು 2014ರಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದಾಗ.

‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆ ಎಂಬುದೇ ಜಿಎಸ್​ಟಿಯ ಮೂಲ ತತ್ತ್ವ. ಇದರ ಅನುಷ್ಠಾನದ ಮೂಲಕ ತೆರಿಗೆಗಳ ಸರಣಿ ಪರಿಣಾಮ ತಡೆಯುವುದು ಮತ್ತು ಚಾಲ್ತಿಯಲ್ಲಿರುವ ಎಲ್ಲ ಪರೋಕ್ಷ ತೆರಿಗೆ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತೆರಿಗೆಗಳನ್ನು ರದ್ದುಗೊಳಿಸುವುದು ಸರ್ಕಾರದ ಉದ್ದೇಶವಾಗಿತ್ತು. ಈ ವ್ಯವಸ್ಥೆ ಉತ್ಪಾದನೆಯಿಂದ ಹಿಡಿದು ಬಳಕೆಯ ತನಕದ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯನ್ನೇ ಉಂಟುಮಾಡಿದ್ದು, ಅದರ ಪ್ರಯೋಜನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗುತ್ತಿದೆ.

ಎಲ್ಲ ರಾಜಕೀಯ ಪಕ್ಷಗಳಿಂದ ಬೆಂಬಲಿಸಲ್ಪಟ್ಟ ಜಿಎಸ್​ಟಿ ಅತೀಅವಶ್ಯವಾದ ತೆರಿಗೆ ವ್ಯವಸ್ಥೆ ಬದಲಾವಣೆ ಪ್ರಕ್ರಿಯೆಯಾಗಿದ್ದು, ಜಾರಿಗೆ ಬರಲು ಬರೋಬ್ಬರಿ ಎರಡು ದಶಕ ತೆಗೆದುಕೊಂಡಿತು.

ಆದಾಗ್ಯೂ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಬಲ್ಲ ಏಕರೂಪದ ನೀತಿ ರೂಪಿಸುವುದು ಬಹಳ ಕಷ್ಟದ ಕೆಲಸವೇ ಆಗಿತ್ತು. ಜಿಎಸ್​ಟಿ ಕೌನ್ಸಿಲ್ ನಿರಂತರವಾಗಿ ಹಲವು ಸುತ್ತುಗಳ ಮೀಟಿಂಗ್ ನಡೆಸಿ, ಕರಡು ನೀತಿ, ನಿಯಮಗಳಲ್ಲಿ ಪರಿಷ್ಕರಣೆ ಮಾಡಿದ್ದರ ಫಲ ಇದು. ಸಹಜವಾಗಿಯೇ ಭಾರಿ ತಂತ್ರಜ್ಞಾನಾಧಾರಿತ ತೆರಿಗೆ ನೀತಿ ಪರಿಪೂರ್ಣ ಎನಿಸಲಾರದು. ಕೊನೆಗೂ, ಹಲವು ಮುಂದೂಡಿಕೆಗಳ ಬಳಿಕ ಸರ್ಕಾರ ಹೊಸ ಜಿಎಸ್​ಟಿ ಕಾನೂನನ್ನು ಕಳೆದ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಿತು. ಅದಾಗಿ ಈಗ 100 ದಿನಗಳಷ್ಟೇ ಕಳೆದಿವೆಯಾದರೂ, ಜಿಎಸ್​ಟಿ ವ್ಯವಸ್ಥೆ ಕುರಿತ ರಿಯಾಲಿಟಿ ಚೆಕ್ ಮಾಡುವುದು ತಪ್ಪೇನಿಲ್ಲ ಎಂದು ಭಾವಿಸುತ್ತೇನೆ.

ಮೊದಲನೆಯದಾಗಿ, ವೆಬ್ ಆಧಾರಿತ ವ್ಯವಸ್ಥೆಯನ್ನು ಪ್ರಥಮ ಸಲ ಬಳಸುವಾಗ ನೋಂದಣಿಕಾರರು ಹಲವು ಸವಾಲುಗಳನ್ನು ಎದುರಿಸಿದರು. ನಿರ್ವಹಣಾ ಬದಲಾವಣೆ, ಇಂಟರ್​ನೆಟ್ ಲಭ್ಯತೆ, ಹೊಸ ವ್ಯವಸ್ಥೆ ಕಲಿಕೆಗೆ ಅಡ್ಡಿ, ಅಗತ್ಯಗಳ ಕಡೆಗಣನೆ ಸೇರಿ ಹಲವು ಸವಾಲುಗಳು ಕಂಡುಬಂದವು.

ಜಿಎಸ್​ಟಿ ಜಾರಿಗೆ ಮುನ್ನ ದೇಶದಲ್ಲಿ 70 ಲಕ್ಷ ವ್ಯಾಪಾರಿ/ಉದ್ದಿಮೆದಾರರು ಕೇಂದ್ರೀಯ ತೆರಿಗೆ, ಸೇವಾ ತೆರಿಗೆ ಮತ್ತು ರಾಜ್ಯಗಳ ವ್ಯಾಟನ್ನು ಪಾವತಿಸುತ್ತಿದ್ದರು. ತೆರಿಗೆ ವ್ಯವಸ್ಥೆ ಬದಲಾವಣೆಯಿಂದ ತೆರಿಗೆದಾರರ ಸಂಖ್ಯೆ ಒಮ್ಮೆಲೇ 98 ಲಕ್ಷಕ್ಕೆ ಏರಿಕೆಯಾಯಿತು. ಅಲ್ಲದೆ, ಈ ಸಂಖ್ಯೆ ನಿತ್ಯವೂ ಏರಿಕೆಯಾಗುತ್ತಲೇ ಇದೆ. ಆದರೆ, ಜಿಎಸ್​ಟಿ ಜಾರಿಯಾದ ಮೊದಲ ತಿಂಗಳಲ್ಲಿ ಅಂದರೆ ಜುಲೈ ತಿಂಗಳ ರಿಟರ್ನ್ಸ್ ಫೈಲ್ ಮಾಡಿದ್ದು ಶೇಕಡ 70 ವ್ಯಾಪಾರಿ/ಉದ್ದಿಮೆದಾರರಷ್ಟೇ. ಈ ಸಂಖ್ಯೆ ಹಳೆಯ ವ್ಯವಸ್ಥೆಯಲ್ಲಿ ತೆರಿಗೆ ಪಾವತಿಸುತ್ತಿದ್ದವರ ಸಂಖ್ಯೆಗೆ ಸಮನಾಗಿದೆ. ಈ ಸಂಗತಿ ಸರ್ಕಾರಕ್ಕೆ ತಬ್ಬಿಬ್ಬು ಉಂಟುಮಾಡಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಹೀಗಾಗಿ ಹಲವು ಬಾರಿ ರಿಟರ್ನ್ಸ್ ಫೈಲ್ ಮಾಡುವುದಕ್ಕೆ ಇರುವ ಗಡುವನ್ನು ಸರ್ಕಾರ ವಿಸ್ತರಿಸಿದೆ. ಇದರಿಂದ ಪ್ರಯೋಜನ ಹೇಳುವಷ್ಟೇನೂ ಆಗಿಲ್ಲ.

ಐದು ಸ್ತರದ ತೆರಿಗೆ ವ್ಯವಸ್ಥೆ ಮತ್ತು ಎಲ್ಲ ಸರಕು ಮತ್ತು ಸೇವೆಗಳನ್ನೂ ಒಳಗೊಂಡಿರುವ ಜಿಎಸ್​ಟಿ ಈಗ ಟೀಕೆ ಟಿಪ್ಪಣಿ, ದುಃಖ ದುಮ್ಮಾನಗಳಂಥ ಸಮಸ್ಯಾಪೆಟ್ಟಿಗೆಯನ್ನೇ ತೆರೆಯಿತು ಎನ್ನಬೇಕು. ಬಹುತೇಕ ಉತ್ಪಾದಿತ ಸರಕುಗಳು ಶೇಕಡ 28ರ ತೆರಿಗೆ ಸ್ಲ್ಯಾಬ್​ನಲ್ಲಿ ಸೇರ್ಪಡೆಗೊಂಡಿದ್ದು, ಅವುಗಳಿಗೆ ಕಂಟಕವೆನಿಸಿದೆ. ಅದೇ ರೀತಿ, ಶೂನ್ಯ ವ್ಯಾಟ್​ನ ಉತ್ಪನ್ನಗಳು ಶೇಕಡ 5 ತೆರಿಗೆ ಸ್ಲ್ಯಾಬ್​ನಲ್ಲಿ ಕಾಣಿಸಿಕೊಂಡಿವೆ. ಇಂತಹ ಹಲವು ಸಮಸ್ಯೆಗಳನ್ನು ಗುರುತಿಸಿದ ಜಿಎಸ್​ಟಿ ಕೌನ್ಸಿಲ್ ಸೂಕ್ತ ರೀತಿಯಲ್ಲಿ ಅವುಗಳನ್ನು ಬಗೆಹರಿಸಿದೆ. ಆದಾಗ್ಯೂ, ಉದ್ಯಮ ಪ್ರತಿನಿಧಿಗಳು ಇಂತಹ ಅನೇಕ ದೂರುಗಳೊಂದಿಗೆ ಮಂಡಳಿಯನ್ನು ಸಂರ್ಪಸುತ್ತಲೇ ಇದ್ದಾರೆ. ಹೀಗಾಗಿ, ಇಂತಹ ಸಮಸ್ಯೆಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

ಉದ್ಯಮಗಳು ಎದುರಿಸುತ್ತಿರುವ ಇನ್ನೊಂದು ದೊಡ್ಡ ಸವಾಲು ರಫ್ತಿನ ಮೇಲಿನ ಜಿಎಸ್​ಟಿ ರಿಫಂಡ್ ಮತ್ತು ಇನ್​ಪುಟ್ ಮತ್ತು ಔಟ್​ಪುಟ್ ಜಿಎಸ್​ಟಿ ವ್ಯತ್ಯಾಸದ ಮೊತ್ತದ ರಿಫಂಡ್ ಪಡೆದುಕೊಳ್ಳುವ ತ್ರಾಸದ ಕೆಲಸ. ಸಣ್ಣ ಪ್ರಮಾಣದ ರಫ್ತುದಾರ ವ್ಯಾಪಾರಿಗಳ ದುಡಿಮೆ ಬಂಡವಾಳ ಒಂದೆಡೆ ಉಳಿದುಕೊಳ್ಳುವುದರಿಂದಾಗಿ ಹಣಕಾಸಿನ ಸಮಸ್ಯೆ ಎದುರಿಸುತ್ತಾರೆ. ತಡವಾಗಿಯಾದರೂ ಜಿಎಸ್​ಟಿ ಕೌನ್ಸಿಲ್ ಈ ಸಮಸ್ಯೆಗೆ ಒಂದು ಸೂಕ್ತ ಪರಿಹಾರವನ್ನು ಒದಗಿಸಿದೆ. ಅದರ ಫಲಿತಾಂಶಕ್ಕಾಗಿ ನಾವೀಗ ಕಾಯಬೇಕಾಗಿದೆ. ಹಲವು ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಹಲವು ಸಣ್ಣಪುಟ್ಟ ಲೋಪದೋಷಗಳನ್ನು ಜಿಎಸ್​ಟಿ ಮಂಡಳಿ ಗಮನಕ್ಕೆ ತಂದಿದ್ದಾರೆ. ಹಳೆಯ ವಹಿವಾಟುಗಳನ್ನು ಹೊಸ ತೆರಿಗೆ ವ್ಯವಸ್ಥೆಗೆ ಒಗ್ಗಿಸುವ ಪ್ರಕ್ರಿಯೆಯಲ್ಲಿ ಭಾರಿ ಕಂದಕ ಇರುವಂತೆ ಭಾಸವಾಗುತ್ತಿದೆ. ಇದುವೇ ಎಲ್ಲರಿಗೂ ಕಿರಿಕಿರಿ ಉಂಟುಮಾಡುತ್ತಿರುವ ವಿಷಯವೂ ಹೌದು.

ಈ ವ್ಯವಸ್ಥೆ ಜಾರಿಯಿಂದಾಗಿ ಪ್ರಮುಖ ಧನಾತ್ಮಕ ಪರಿಣಾಮ ಬೀರಿದ್ದು ಸರಕು ಸಾಗಣೆ ಕ್ಷೇತ್ರದ ಮೇಲೆ. ಎಲ್ಲ ಚೆಕ್​ಪೋಸ್ಟ್​ಗಳು ರದ್ದುಗೊಂಡಿದ್ದು, ಸರಕು ಸಾಗಣೆ ಅವಧಿ ಕಡಿಮೆಯಾಗಿದೆ. ಈ ಕ್ಷೇತ್ರದ ಮಟ್ಟಿಗೆ ಜಿಎಸ್​ಟಿ ವರವಾಗಿದೆ.

ತಾಂತ್ರಿಕವಾಗಿ ಸಮರ್ಪಕ ತಯಾರಿ ಇಲ್ಲದೆ ಅನುಷ್ಠಾನಕ್ಕೆ ಹೊರಟಿದ್ದು ಸರ್ಕಾರದ ಕಡೆಯಿಂದ ಆಗಿರುವ ಪ್ರಮುಖ ಹಿನ್ನಡೆ ಎನ್ನಬಹುದು. ಇಡೀ ಜಿಎಸ್​ಟಿ ವ್ಯವಸ್ಥೆಯ ಬೆನ್ನಲುಬೇ ತಂತ್ರಜ್ಞಾನ. ಅದರಲ್ಲಿ ಪದೇಪದೆ ಕಿರಿಕಿರಿಗಳಾಗುತ್ತಿದ್ದು, ಪರಿಣಾಮ ಸರ್ಕಾರದ ಉತ್ತಮ ಪ್ರಯತ್ನ ಮಸುಕಾಗುತ್ತಿದೆ.

ಒಟ್ಟಾರೆ ಹೇಳುವುದಾದರೆ, ಜಿಎಸ್​ಟಿಯ ಅನುಷ್ಠಾನದ ಪ್ರಕ್ರಿಯೆ ಸರಿಯಾದ ಚಾಲನೆಯನ್ನೇ ಪಡೆದಿದೆ. ಇದನ್ನು ಒಂದು ದೊಡ್ಡ ಮೂಲಸೌಕರ್ಯದ ಯೋಜನೆ ಎಂದು ಪರಿಗಣಿಸಿ ಸರಿಯಾಗಿ ನೆಲೆಯೂರುವುದಕ್ಕೆ ಕೆಲಕಾಲ ಬೇಕು ಎಂಬುದನ್ನು ಮನಗಾಣಬೇಕು. ಈ ವ್ಯವಸ್ಥೆಯೊಳಗಿನ ಎಲ್ಲ ಭಾಗಿದಾರರು ಕೂಡ ಈಗ ಕಲಿಕೆಯ ಹಂತದಲ್ಲಿದ್ದು, ಎದುರಾಗುವ ಸವಾಲುಗಳು, ಸಮಸ್ಯೆಗಳನ್ನು ಸರಿಯಾಗಿ ದಾಖಲಿಸಿಕೊಂಡು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾದ್ದು ಅನಿವಾರ್ಯ ಮತ್ತು ಅಗತ್ಯವೂ ಹೌದು. ಲೋಪದೋಷಗಳನ್ನು ಗುರುತಿಸಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೊಂಚ ಧನಾತ್ಮಕ ನಡವಳಿಕೆಯನ್ನು ತೋರಬೇಕಾಗಿದೆ. ಆದಾಗ್ಯೂ, ಆ ಪ್ರಕ್ರಿಯೆ ಕೊಂಚ ನಿಧಾನವಾಗಿದ್ದರೂ, ಪರಿಷ್ಕರಣೆಯನ್ನು ಸಹಜವಾಗಿಯೇ ಸ್ವೀಕರಿಸಲಾಗುತ್ತಿದೆ.

ಜಿಎಸ್​ಟಿ ವ್ಯವಸ್ಥೆ ಕಾಲಾನುಕ್ರಮದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಉಂಟುಮಾಡಲಿದ್ದು, ಭಾರತದಲ್ಲಿ ಉತ್ತಮ ವ್ಯಾವಹಾರಿಕ ಪರಿಸರವನ್ನು ನಿರ್ವಿುಸಿಕೊಡಲಿದೆ ಎಂಬುದು ನನ್ನ ಖಚಿತ ವಿಶ್ವಾಸ.

(ಲೇಖಕರು ಆರ್ಥಿಕ ತಜ್ಞರು)

Leave a Reply

Your email address will not be published. Required fields are marked *

Back To Top