Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಜಾರ್ಜ್ ವಿರುದ್ಧ ನಿಲ್ಲದ ಬಿಜೆಪಿ ಹೋರಾಟ

Wednesday, 15.11.2017, 3:02 AM       No Comments

ಬೆಳಗಾವಿ: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಹೋರಾಟವನ್ನು ವಿಧಾನ ಪರಿಷತ್​ನಲ್ಲಿ ಒಂದೇ ದಿನಕ್ಕೆ ಕೈ ಬಿಟ್ಟ ಬಿಜೆಪಿ, ವಿಧಾನಸಭೆಯಲ್ಲಿ ಮಂಗಳವಾರ ಆರಂಭಿಸಿದೆ.

ಜಾರ್ಜ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸಬೇಡಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಹೋರಾಟ ಮುಂದುವರಿಸಲು ಬಿಜೆಪಿ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಜಗದೀಶ ಶೆಟ್ಟರ್ ವಿಷಯ ಸಂಬಂಧ ನಿಲುವಳಿ ಸೂಚನೆ ಮಂಡಿಸಿದರು. ಪರಿಣಾಮವಾಗಿ ಮಂಗಳವಾರದ ಸಂಪೂರ್ಣ ಕಲಾಪ ಇದಕ್ಕೇ ಆಹುತಿಯಾಯಿತು. ರಾಜ್ಯ ಸರ್ಕಾರ ಮಾತ್ರ ಜಾರ್ಜ್ ಬೆನ್ನಿಗೆ ನಿಂತಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಪಡೆಯುವ ಪ್ರಶ್ನೆಯಿಲ್ಲ ಎಂದು ಪುನರುಚ್ಚರಿಸಿದೆ. ಜಾರ್ಜ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಮಂಗಳವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಪ್ರತಿಯಾಗಿ ಸಂಪುಟದ ಹಿರಿಯ ಸದಸ್ಯರು ಹಾಗೂ ಆಡಳಿತ ಪಕ್ಷದ ಶಾಸಕರು ಜಾರ್ಜ್ ಪರ ವಾದ ಮಾಡಿ ಪ್ರತಿಪಕ್ಷದ ದನಿ ಅಡಗಿಸಲು ಪ್ರಯತ್ನಿಸಿದರು. ರೇಪ್ ಭಾಗ್ಯ, ಕ್ಲೀನ್​ಚಿಟ್ ಭಾಗ್ಯ, ಮರ್ಡರ್ ಭಾಗ್ಯ, ಲೂಟಿ ಭಾಗ್ಯ ಎಂದು ಬಿಜೆಪಿ ಸದಸ್ಯರು ಘೊಷಣೆ ಹಾಕುತ್ತಿದ್ದಾಗಲೇ ಸರ್ಕಾರ ನಾಲ್ಕು ವಿಧೇಯಕ ಮಂಡಿಸಿತು. ಅಂತಿಮವಾಗಿ ಸ್ಪೀಕರ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಬಿಜೆಪಿಗೆ ಉತ್ತರ ಏಟು: ರಾಜ್ಯ ಸರ್ಕಾರದ ನಾನಾ ವೈಫಲ್ಯ, ಭ್ರಷ್ಟಾಚಾರ ಪ್ರಕರಣ ಹಾಗೂ ಜಾರ್ಜ್ ರಾಜೀನಾಮೆ ಇರಿಸಿಕೊಂಡು ಹೋರಾಟಕ್ಕೆ ಮುಂದಾಗಿದ್ದ ಬಿಜೆಪಿಗೆ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಏಟು ನೀಡಿದೆ. ಜಾರ್ಜ್ ವಿರುದ್ಧ ಹೋರಾಟ ಆರಂಭಿಸುವ ಮೊದಲೇ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿಶೇಷ ಚರ್ಚೆ ಬುಧವಾರದಿಂದ ಆರಂಭವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಮೂಲಕ ಬಿಜೆಪಿ ಹಿಂದಿನ ಕಾರ್ಯಸೂಚಿ ಪ್ರಕಾರ ಹೋದರೆ ಉತ್ತರ ಕರ್ನಾಟಕ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ಸರ್ಕಾರವೇ ಸೃಷ್ಟಿಸಿದೆ.

ನಾಯಕರ ವಾಗ್ಯುದ್ಧ

ಗಣಪತಿ ಪ್ರಕರಣದಲ್ಲಿ ನ್ಯಾಯಾಲಯ ತನಿಖೆ ನಡೆಸಲು ಸಿಬಿಐಗೆ ಹೇಳಿದೆಯೇ ಹೊರತು ಯಾವುದೇ ಅನುಮಾನ ಗಳನ್ನು ವ್ಯಕ್ತಪಡಿಸಿಲ್ಲ. ಹೀಗಾಗಿ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಇದಕ್ಕೆ ಪ್ರತಿಯಾಗಿ ಜಗದೀಶ ಶೆಟ್ಟರ್ ನ್ಯಾಯಾಲಯದ ಆದೇಶ ಪ್ರಸ್ತಾಪಿಸಿ, ಈ ಕೂಡಲೇ ರಾಜೀನಾಮೆ ನೀಡಬೇಕೆಂದು ವಾದಿಸಿದರು. ಇನ್ನೊಂದೆಡೆ ಕ್ರಿಯಾಲೋಪ ಎತ್ತಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಈ ರೀತಿ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ ಎಂದರು. ಇವರ ಮಾತಿಗೆ ದನಿಗೂಡಿಸಿದ ಸಚಿವ ಶರಣ ಪ್ರಕಾಶ ಪಾಟೀಲ್, ಇದು ಸಾರ್ವಜನಿಕ ಮಹತ್ವ ವಿಷಯವೇ ಅಲ್ಲ ಎಂದು ಹೇಳಿದ್ದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಿಟ್ಟಿಗೆ ಕಾರಣವಾಯಿತು. ಒಬ್ಬ ಸರ್ಕಾರಿ ಸೇವೆಯಲ್ಲಿದ್ದ ಅಧಿಕಾರಿ ಸಚಿವರ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಖಾಸಗಿ ಆಸಕ್ತಿ ವಿಷಯವೇ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯವರು ಸುಮ್ಮನೆ ರಾಜಕೀಯಕ್ಕಾಗಿ ಮಾತನಾಡುತ್ತಿ ದ್ದಾರೆ. ಜಾರ್ಜ್ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ. ತನಿಖೆ ನಡೆದು ಸತ್ಯ ಎಲ್ಲರಿಗೂ ಗೊತ್ತಾಗುತ್ತದೆ. ವಿನಾಕಾರಣ ಗದ್ದಲ ಮಾಡುವುದು ಸರಿಯಲ್ಲ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರತಿಧ್ವನಿಸಿದ ವಿಜಯವಾಣಿ

ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯ ಸಂಗ್ರಹ ದಲ್ಲಿ ಎಡವಿರುವ ಕುರಿತು ವಿಜಯವಾಣಿ ಮುಖಪುಟದಲ್ಲಿ ಮಂಗಳವಾರ ಪ್ರಕಟವಾಗಿರುವ ವಿಶೇಷ ವರದಿ ಸದನದಲ್ಲಿ ಪ್ರತಿಧ್ವನಿಸಿತು. ಜಗದೀಶ ಶೆಟ್ಟರ್ ವರದಿಯ ತುಣುಕನ್ನು ಪ್ರದರ್ಶಿಸಿ, ತನಿಖೆ ನಡೆಯುತ್ತಿರುವಾಗ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು. ಆತ್ಮಹತ್ಯೆ ಬೆಳಕಿಗೆ ಬಂದ ನಂತರ ಏಕೆ ಸೂಕ್ತ ರೀತಿಯಲ್ಲಿ ಸಾಕ್ಷ್ಯ ಸಂಗ್ರಹ ಮಾಡಿಲ್ಲ ಎಂದು ನ್ಯಾಯಾಂಗ ತನಿಖೆ ವೇಳೆ ಅಧಿಕಾರಿ ವಿಚಾರಣೆಗೊಳಪಟ್ಟಿದ್ದರು. ಈ ವಿಚಾರವಾಗಿ ‘ವಿಜಯವಾಣಿ’ ವಿಸ್ತ್ರತ ವರದಿ ಮಾಡಿತ್ತು. ಈ ಅಂಶವನ್ನು ಪ್ರಸ್ತಾಪಿಸಿದ ಶೆಟ್ಟರ್, ಸರ್ಕಾರ ಭಂಡತನ ಬಿಟ್ಟು ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.

ಕ್ಲೀನ್​ಚಿಟ್ ಕೊಡುವುದರಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಸಿದ್ಧಿ ಪಡೆದಿದೆ. ಜಾರ್ಜ್ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಮುನ್ನವೇ ಎರಡೇ ತಿಂಗಳಲ್ಲಿ ಕ್ಲೀನ್​ಚಿಟ್ ನೀಡಿದೆ. ಸಿಬಿಐ ದಾಖಲಿಸಿರುವ ಪ್ರಕರಣದ ಮೊದಲ ಆರೋಪಿಯಾಗಿರುವ ಸಚಿವರನ್ನು ಸರ್ಕಾರ ರಕ್ಷಿಸಲು ಹೊರಟಿದೆ.

| ಸಿ.ಟಿ.ರವಿ ಬಿಜೆಪಿ ಶಾಸಕ

ಕರಿಮೆಣಸು ಆಮದು ಸುಂಕ ಹೆಚ್ಚಿಸಲು ಕೇಂದ್ರಕ್ಕೆ ಮನವಿ

ಕರಿಮೆಣಸು ಆಮದಿನ ಮೇಲೆ ಇರುವ ಸುಂಕವನ್ನು ಮತ್ತಷ್ಟು ಹೆಚ್ಚಿಸಿ ರಾಜ್ಯದ ರೈತರ ಹಿತ ಕಾಪಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಎಸ್.ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿ, ಈಗಾಗಲೆ ಸಿಎಂ ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ವಿಯೆಟ್ನಾಂನಿಂದ ಕಳಪೆ ಗುಣಮಟ್ಟದ ಕರಿಮೆಣಸು ಶ್ರೀಲಂಕಾ ಮೂಲಕ ಆಮದಾಗುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಕಳಪೆ ಗುಣಮಟ್ಟದ ಕರಿಮೆಣಸಿನ ಆಮದನ್ನು ನಿಯಂತ್ರಿಸುವುದು, ಗುಣಮಟ್ಟದ ಪರಿಶೀಲನೆ ಹಾಗೂ ರಾಸಾಯನಿಕ ಶೇಷ ಪ್ರಮಾಣಗಳ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದರು. ಶ್ರೀಲಂಕಾ ಮೂಲಕ ನಮ್ಮ ದೇಶಕ್ಕೆ ಬರುವ 2500 ಮೆಟ್ರಿಕ್ ಟನ್​ವರೆಗಿನ ಕರಿಮೆಣಸಿಗೆ ಯಾವುದೆ ರೀತಿಯ ಸುಂಕ ವಿಧಿಸಲಾಗುತ್ತಿಲ್ಲ. ಬೇರೆ ದೇಶಗಳ ಮೂಲಕ ಬರುವ ಕರಿಮೆಣಸಿಗೆ ಶೇ.50 ರಿಂದ ಶೇ.70 ಸುಂಕವನ್ನು ವಿಧಿಸಲಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಕೊಡಗಿನಲ್ಲಿ ಬೆಳೆಯುತ್ತಿರುವ ಕರಿಮೆಣಸಿಗೆ ಕಲಬೆರೆಕೆ ಮಾಡಿ ಮಾರಾಟ ಮಾಡಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ‘ಕರಿಮೆಣಸು ಕಲಬೆರಕೆ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ಎಸಿಬಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭುಗೆ ಪತ್ರ ಬರೆದಿದ್ದರು.

142 ಅಧಿನಿಯಮ ರದ್ದು

142 ಅಧಿನಿಯಮ ಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ವಿಧೇಯಕ ಮಂಡಿಸಿದೆ. 2012ರಿಂದ 2015ರ ವರೆಗಿನ ತಿದ್ದುಪಡಿ ಅಧಿನಿಯಮಗಳನ್ನು ಹಾಗೂ ಕೇಂದ್ರ ಸರ್ಕಾರ ರಚಿಸಿದ್ದ ರಾಮಾನುಜಮ್ ಸಮಿತಿ ಮಾಡಿದ್ದ ಶಿಫಾರಸಿನಂತೆ ಅವಶ್ಯಕತೆ ಇಲ್ಲದ ಅಥವಾ ಪ್ರಾಮುಖ್ಯತೆ ಕಳೆದುಕೊಂಡ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಭಾರತ ಕಾನೂನು ಆಯೋಗ ಹಾಗೂ ರಾಮಾನುಜಮ್ ಸಮಿತಿ ಶಿಫಾರಸು ಮಾಡಿರುವ ಪಟ್ಟಣಗಳಲ್ಲಿ ಸುಧಾರಣೆ ಅಧಿನಿಯಮ, 1850 (1850ರ 26) ಮತ್ತು ಬೆಂಗಳೂರು ವಿವಾಹಗಳನ್ನು ಸಿಂಧುಗೊಳಿಸುವ ಅಧಿನಿಯಮ, 1936(1936ರ 16) ಇವುಗಳನ್ನು ಸಹ ಕೆಲ ಅಧಿನಿಯಮಗಳನ್ನು ರದ್ದುಗೊಳಿಸುವ ವಿಧೇಯಕವನ್ನು 2017ರಲ್ಲಿ ಸೇರಿಸಲಾಗಿದೆ.

Leave a Reply

Your email address will not be published. Required fields are marked *

Back To Top