Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಜಾಧವ್ ಗಲ್ಲಿಗೆ ತಡೆ

Friday, 19.05.2017, 3:05 AM       No Comments

ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮೇಲೆ ಬೇಹುಗಾರಿಕೆ ಆರೋಪ ಹೊರಿಸಿ, ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೆರೆಮನೆಗಟ್ಟಿ ಗಲ್ಲುಗಂಬಕ್ಕೇರಿಸಲು ಕುಣಿಕೆ ಸಿದ್ಧಪಡಿಸುತ್ತಿದ್ದ ಪಾಕಿಸ್ತಾನದ ಸಂಚಿಗೆ ಹೇಗ್​ನ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ಬ್ರೇಕ್ ಹಾಕಿದೆ. ಪ್ರಕರಣದ ಅಂತಿಮ ತೀರ್ಪು ಹೊರಬೀಳುವವರೆಗೆ ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಪಾಕಿಸ್ತಾನಕ್ಕೆ ಸೂಚಿಸಿ ಐಸಿಜೆ ಗುರುವಾರ ಮಹತ್ವದ ಆದೇಶ ನೀಡಿದೆ.

ಜಾಧವ್​ಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕ್ ಸೇನಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಐಸಿಜೆ, ಪ್ರಕರಣ ಇತ್ಯರ್ಥವಾಗುವವರೆಗೆ ಶಿಕ್ಷೆ ಜಾರಿಗೊಳಿಸುವಂತಿಲ್ಲ. ಜತೆಗೆ, ಈ ಸಂಬಂಧ ತೆಗೆದುಕೊಳ್ಳುವ ಎಲ್ಲ ಕ್ರಮಗಳ ಕುರಿತು ಉಭಯ ರಾಷ್ಟ್ರಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕೆಂದು ಸ್ಪಷ್ಟಪಡಿಸಿದೆ. ಆಗಸ್ಟ್​ನಲ್ಲಿ ಪ್ರಕರಣದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಪಾಕ್​ಗೆ ಮುಖಭಂಗ: ಅಂತಾರಾಷ್ಟ್ರೀಯ ನ್ಯಾಯಾಲಯದ ಈ ಆದೇಶದಿಂದಾಗಿ ಜಾಧವ್ ಅವರನ್ನು ಭಯೋತ್ಪಾದಕನೆಂದು ಸುಳ್ಳು ಆರೋಪ ಹೊರಿಸಿ ಗಲ್ಲು ಶಿಕ್ಷೆ ವಿಧಿಸಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಯಾವುದೇ ದೇಶಕ್ಕೆ ಇತರೆ ದೇಶದಲ್ಲಿ ಬಂಧಿಯಾಗಿರುವ ತನ್ನ ಪ್ರಜೆಯನ್ನು ಸಂರ್ಪಸುವ ಹಾಗೂ ಬಂಧಿತ ಪ್ರಜೆಗೆ ತನ್ನ ಹಕ್ಕುಗಳ ಕುರಿತು ಅರಿಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿರುವ ಐಸಿಜೆ, ಭಾರತಕ್ಕೆ ರಾಜತಾಂತ್ರಿಕ ಸಂಪರ್ಕ ನಿರಾಕರಿಸಿದ ಪಾಕ್ ಕ್ರಮ ತಪ್ಪು ಎಂದಿದೆ.

ಭಾರತ ಮುಂದಿಟ್ಟಿರುವ ಹಕ್ಕುಗಳ ಬೇಡಿಕೆ ಅರ್ಥಪೂರ್ಣ ವಾಗಿದೆ. ಭಾರತ ಹಾಗೂ ಪಾಕಿಸ್ತಾನ ಸಹಿ ಹಾಕಿರುವ ವಿಯೆನ್ನಾ ಒಪ್ಪಂದವನ್ನು ಪಾಕ್ ಉಲ್ಲಂಘಿಸಿದೆ. ಗುಪ್ತಚರ ಚಟುವಟಿಕೆ ಹಾಗೂ ಭಯೋತ್ಪಾದನೆ ಆರೋಪದಡಿ ಬಂಧನಕ್ಕೊಳಗಾದವರಿಗೆ ಈ ಒಪ್ಪಂದದ ನಿಯಮಗಳು ಅನ್ವಯವಾಗುವುದಿಲ್ಲ ಎಂಬ ಪಾಕ್ ವಾದವನ್ನು ಒಪ್ಪಲಾಗದು. ಈ ಒಪ್ಪಂದದ ನಿಯಮಗಳು ಉಭಯ ರಾಷ್ಟ್ರಗಳಿಗೆ ಸಂಪೂರ್ಣವಾಗಿ ಅನ್ವಯವಾಗುತ್ತವೆ ಎಂದು ಜಾನಿ ಅಬ್ರಾಹಂ ನೇತೃತ್ವದ 11 ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ.

ಪಾಕಿಸ್ತಾನದ ನಡೆಯೇನು?

  • ಐಸಿಜೆ ತೀರ್ಪು ಪಾಲಿಸಲು ನಿರಾಕರಿಸಬಹುದು. ಜಾಧವ್ ಗಲ್ಲು ಶಿಕ್ಷೆ ಜಾರಿಗೂ ಮುಂದಾಗಬಹುದು
  • ಮುಂದಿನ ವಿಚಾರಣೆ ವೇಳೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಬಲ ವಾದ ಮಂಡಿಸಬಹುದು.
  • ಭಾರತ ಭದ್ರತಾ ಮಂಡಳಿ ಮೊರೆ ಹೋದರೆ, ಶಾಶ್ವತ ಸದಸ್ಯ ರಾಷ್ಟ್ರ ಚೀನಾಕ್ಕಿರುವ ವಿಟೋ ಅಧಿಕಾರದ ಲಾಭ ಪಡೆಯಬಹುದು.

ಭಾರತಕ್ಕಿರುವ ಆಯ್ಕೆಗಳು

  • ಪಾಕಿಸ್ತಾನದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವುದು
  • ಪಾಕ್​ನಿಂದ ಆದೇಶ ಉಲ್ಲಂಘನೆ ಸುಳಿವು ಸಿಕ್ಕಲ್ಲಿ ಭದ್ರತಾ ಮಂಡಳಿ ಮೊರೆ ಹೋಗಬಹುದು
  • ಜಾಧವ್ ನಿದೋಷಿ ಎಂದು ಸಾಬೀತುಪಡಿಸಲು ಮತ್ತಷ್ಟು ದಾಖಲೆ ಸಂಗ್ರಹ.

ವ್ಯಾಪ್ತಿಯ ಪ್ರಶ್ನೆಯೇ ಉದ್ಭವಿಸಲ್ಲ

ಕುಲಭೂಷಣ್ ಬಂಧನ ಪ್ರಕರಣ ವಿಯೆನ್ನಾ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ, ಭಾರತ ಈ ಆದೇಶವನ್ನು ಐಸಿಜೆ ಮುಂದೆ ಪ್ರಶ್ನಿಸುವಂತಿಲ್ಲ ಎಂಬ ಪಾಕ್ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ವಿಯೆನ್ನಾ ಒಪ್ಪಂದದ 36ನೇ ಪರಿಚ್ಛೇದದ ಅನುಸಾರ, ಉಭಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ರಾಜತಾಂತ್ರಿಕ ಸಂಪರ್ಕ ನಿರಾಕರಣೆಯ ಪ್ರಕರಣಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಅಭಿಪ್ರಾಯಪಟ್ಟಿದೆ.


 3 ತಿಂಗಳಿಂದ ಸಿದ್ಧತೆ

ನವದೆಹಲಿ: ಕುಲಭೂಷಣ್ ಯಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತ ಮಹತ್ವದ ಗೆಲುವು ಸಾಧಿಸಲು ವಕೀಲ ಹರೀಶ್ ಸಾಳ್ವೆ ನೇತೃತ್ವದ ತಂಡ ಹಾಗೂ ಕೇಂದ್ರ ಸರ್ಕಾರ ನಡೆಸಿದ ಪೂರ್ವಸಿದ್ಧತೆಯೇ ಪ್ರಮುಖ ಕಾರಣ.

ಜಾಧವ್​ರನ್ನು ತರಾತುರಿಯಲ್ಲಿ ಗಲ್ಲಿಗೇರಿಸಲು ಪಾಕಿಸ್ತಾನ ತಯಾರಿ ನಡೆಸುತ್ತಿರುವ ಗುಪ್ತಚರ ಮಾಹಿತಿ ಸಂಗ್ರಹಿಸಿದ ಭಾರತ, ತಕ್ಷಣವೇ ಐಸಿಜೆಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿತ್ತು. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರನ್ನು ನಿಯೋಜಿಸಿತ್ತು. ಭಾರತ ಇಷ್ಟೊಂದು ವೇಗದಲ್ಲಿ ಐಸಿಜೆ ಮೆಟ್ಟಿಲೇರಲಿದೆ ಎಂದು ಪಾಕಿಸ್ತಾನ ಕಲ್ಪನೆ ಕೂಡ ಮಾಡಿರಲಿಲ್ಲ. ಐಸಿಜೆಯ ರಜೆ ಮುಗಿಯುತ್ತಿದ್ದಂತೆಯೇ ಅಲ್ಲಿನ ರಿಜಿಸ್ಟ್ರಾರ್ ಪ್ರಕರಣದ ಗಂಭೀರತೆ ಅರಿತು ತಕ್ಷಣ ವಿಚಾರಣೆಗೆ ದಿನಾಂಕ ನಿಗದಿಪಡಿಸಿದರು. ಆಗ ಪಾಕಿಸ್ತಾನ ಎಚ್ಚೆತ್ತುಕೊಂಡು ವಕೀಲರನ್ನು ನಿಯೋಜಿಸಿತು. ಪಾಕಿಸ್ತಾನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಜಾಧವ್ ತಪ್ಪೊಪ್ಪಿಗೆಯ ವಿಡಿಯೋ ಒಂದೇ ಪ್ರಬಲವಾಗಿ ಸಾಕ್ಷಿಯಾಗಲಿದೆ ಎಂದು ಭಾವಿಸಿತ್ತು.

ತಯಾರಿ ಇಲ್ಲದೇ ವಾದ : ಲಂಡನ್​ನಲ್ಲಿನ ಪಾಕಿಸ್ತಾನ ಮೂಲದ ವಕೀಲರೊಬ್ಬರ ಪ್ರಕಾರ, ಐಸಿಜೆಯಲ್ಲಿ ವಾದ ಮಂಡಿಸಲು ಪಾಕಿಸ್ತಾನಿ ವಕೀಲರು ಯಾವುದೇ ತಯಾರಿ ನಡೆಸಿರಲಿಲ್ಲ. ಉಭಯ ರಾಷ್ಟ್ರಗಳಿಗೆ ನೀಡಲಾದ 90 ನಿಮಿಷಗಳ ಅವಧಿಯನ್ನು ಪಾಕ್ ಸದುಪಯೋಗಪಡಿಸಿಕೊಂಡಿಲ್ಲ. 40 ನಿಮಿಷಗಳನ್ನು ವ್ಯರ್ಥ ಮಾಡಿದೆ. ಪಾಕ್ ವಕೀಲರ ವಾದದಲ್ಲಿ ಹುರುಳಿರಲಿಲ್ಲ ಎಂದಿದ್ದಾರೆ.

ಭದ್ರತಾ ಮಂಡಳಿಗೆ ದೂರು ನೀಡಲು ಅವಕಾಶ

ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡಬಹುದಾಗಿದೆ. ಅಲ್ಲಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರ, ಆಪ್ತ ದೇಶದ ಪರವಾಗಿ ವಿಟೋ ಅಧಿಕಾರ ಚಲಾಯಿಸಬಹುದು.ಚೀನಾ ಪಾಕಿಸ್ತಾನದ ಪರವಾಗಿ ವಿಟೋ ಅಧಿಕಾರ ಚಲಾಯಿಸಬಹುದು. ಇಲ್ಲವೇ, ಮಂಡಳಿ ಮಧ್ಯಪ್ರವೇಶಿಸಲು ನಿರಾಕರಿಸಬಹುದು. ಆಗ ಐಸಿಜೆ ತೀರ್ಪು ಪಾಲನೆ ಕಡ್ಡಾಯವಾಗುತ್ತದೆ. ಇಲ್ಲವೇ ಬಲವಂತದ ಆದೇಶ ಹೊರಡಿಸಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಲ್ಲಿಯವರೆಗೆ ಅಂತಹ ಕ್ರಮ ಕೈಗೊಂಡಿಲ್ಲ.

ನ್ಯಾಯಮೂರ್ತಿ ರೋನಿ ಅಬ್ರಹಾಂ

ಕುಲಭೂಷಣ್ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ್ದು ನ್ಯಾಯಮೂರ್ತಿ ರೋನಿ ಅಬ್ರಹಾಂ. 1951ರ ಡಿಸೆಂಬರ್​ನಲ್ಲಿ ಜನಿಸಿದ ಅವರು 1973ರಲ್ಲಿ ಸಾರ್ವಜನಿಕ ಕಾನೂನು ವಿಷಯದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. 1988ರಲ್ಲಿ ಪ್ಯಾರಿಸ್​ನಲ್ಲಿ ಅಂತಾರಾಷ್ಟ್ರೀಯ ಕಾನೂನು ವಿವಿಯ ಪ್ರೊಫೆಸರ್ ಆಗಿ ನೇಮಕಗೊಂಡರು. 1998ರಲ್ಲಿ ಪ್ಯಾರಿಸ್ ವಿದೇಶಾಂಗ ಸಚಿವಾಲಯದ ನಿರ್ದೇಶಕರಾಗಿ ಆಯ್ಕೆಯಾದರು. 2005ರಲ್ಲಿ ಐಸಿಜೆ ಸದಸ್ಯರಾಗಿ 2015ರ ಫೆಬ್ರವರಿಯಲ್ಲಿ ಐಸಿಜೆ ಅಧ್ಯಕ್ಷರಾಗಿ ಆಯ್ಕೆಯಾದರು.

ಪಾಕ್ ವಕೀಲರಿಗೆ ಐದು ಕೋಟಿ ರೂ.ಸಂಭಾವನೆ!

ಐಸಿಜೆನಲ್ಲಿ ಮಂಡಿಸಲು ಪಾಕಿಸ್ತಾನ ತನ್ನ ವಕೀಲರಿಗೆ ನೀಡಿದ ಸಂಭಾವನೆ ಬರೋಬ್ಬರಿ 5 ಕೋಟಿ ರೂ.! ಆದರೆ, ಭಾರತದ ಹಿರಿಯ ವಕೀಲ ಹರೀಶ್ ಸಾಳ್ವೆ ಪಡೆದಿದ್ದು ಕೇವಲ 1 ರೂ. ಜಾಧವ್ ತೀರ್ಪು ಹೊರಬಿದ್ದ ನಂತರ ಪಾಕಿಸ್ತಾನ ಮಾಧ್ಯಮದಲ್ಲಿ ತೀರ್ಪಿನ ಕುರಿತು ಭಾರಿ ಚರ್ಚೆಗಳು ನಡೆದಿದ್ದು, ಅಲ್ಪ ತಯಾರಿ ಹಾಗೂ ದುರ್ಬಲ ವಾದ ಮಂಡನೆ ಮಾಡಲಾಗಿದೆ ಎಂದು ಪಾಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಜಾಧವ್ ಗಲ್ಲು ಶಿಕ್ಷೆ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಭಾರತ ಐಸಿಜೆ ಮೊರೆ ಹೋಗಲು ತಯಾರಿ ನಡೆಸಿತ್ತು. ಆದರೆ, ಪಾಕಿಸ್ತಾನ ಬೆರಳಣಿಕೆಯ ದಿನಗಳಲ್ಲಿ ಕಾಗದಪತ್ರಗಳನ್ನು ಒಟ್ಟುಗೂಡಿಸಿಕೊಂಡು ನ್ಯಾಯಾಲಯ ತಲುಪಿದೆ. ಪಾಕಿಸ್ತಾನ ಕೇವಲ ಗಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿ ತೃಪ್ತಿ ಹೊಂದಿದಂತೆ ಕಾಣುತ್ತಿದೆ. ಭಾರತ ಏನು ಮಾಡಬಹುದು ಎಂಬುದನ್ನು ಕೂಡ ಯೋಚಿಸಲಿಲ್ಲ ಎಂದು ಮಾಧ್ಯಮವೊಂದಕ್ಕೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ, ಜಾಧವ್ ನಮ್ಮ ದೇಶದ ಪುತ್ರ. ಆತನನ್ನು ಮರಳಿ ತರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಘೊಷಿಸಿದಾಗ ಪಾಕಿಸ್ತಾನ ಎಚ್ಚೆತ್ತುಕೊಳ್ಳಲಿಲ್ಲವೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಪಾಕ್ ತನ್ನ ವಕೀಲರಿಗೆ 5 ಕೋಟಿ ರೂ. ನೀಡಿದರೆ, ಭಾರತ ಕೇವಲ 1 ರೂ. ನೀಡಿದೆ ಎಂದಿದ್ದಾರೆ. ಕೆಲ ಪಾಕ್ ಮಾಧ್ಯಮಗಳು ಮಾತ್ರ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿರುವ ಕಾರಣ ನಮ್ಮ ವಿರುದ್ಧ ತೀರ್ಪು ನೀಡಲಾಗಿದೆ ಎಂದು ಆರೋಪಿಸಿವೆ.

Leave a Reply

Your email address will not be published. Required fields are marked *

Back To Top