Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಜವಾಬ್ದಾರಿ ನಿಭಾಯಿಸೋಣ, ಇಲ್ಲವೇ ಸಹಕರಿಸೋಣ…

Thursday, 16.02.2017, 8:18 AM       No Comments

ಜವಾಬ್ದಾರಿಗಳನ್ನು ‘ಹೆಮ್ಮೆಯ ತುರಾಯಿ’ ಎಂದೇ ಭಾವಿಸಿದವರು, ಅವನ್ನು ಬಿಟ್ಟುಕೊಡುವ, ಇನ್ನೊಬ್ಬರೂ ತಮ್ಮಷ್ಟೇ ಹೊಣೆ ನಿಭಾಯಿಸಬಲ್ಲರು ಎಂದು ಯೋಚಿಸುವ ಗೋಜಿಗೇ ಹೋಗುವುದಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಏನೂ ನಡೆಯದು ಎಂಬುದು ಇಂಥವರ ಭಾವನೆ. ಯಾರಿಲ್ಲದಿದ್ದರೂ ಈ ಪ್ರಪಂಚ ನಡೆಯುತ್ತದೆ ಎಂಬ ಸತ್ಯವರಿತು ಕರ್ತವ್ಯ ನಿಭಾಯಿಸಿದರೆ ಇಂಥ ಅಹಂ ತಗ್ಗಬಹುದೇನೋ.

ಮದುವೆಮನೆ ಒಂದರಲ್ಲಿ ಮಾತಿಗೆ ಸಿಕ್ಕ ಗೆಳತಿ ಅನುಜಾ ತುಂಬಾ ಡಿಪ್ರೆಸ್ ಆದಂತಿದ್ದಳು. ನನ್ನ ಪ್ರಶ್ನಾರ್ಥಕ ಮುಖಭಾವಕ್ಕೆ ‘ನಿಂಗೆ ಸಮಯ ಇದ್ರೆ ಆ ಕಡೆ ಇರುವ ದೇವಸ್ಥಾನದ ಕಾಂಪೌಂಡಲ್ಲಿ ಕುಳಿತು ಮಾತಾಡೋಣ್ವಾ?’ ಎಂದಳು. ಕುತೂಹಲ ಎನ್ನುವುದು ಮನುಷ್ಯಸಹಜ ದೌರ್ಬಲ್ಯ. ನಾನು ಅದಕ್ಕೆ ಒಳಗಾಗದಿದ್ದರೆ ನನ್ನನ್ನು ಮನುಷ್ಯರ ಪಟ್ಟಿಯಿಂದ ಹೊರಗಿಟ್ಟಂತಾಗದೇ? ಅವಳ ಜತೆಗೇ ಹೆಜ್ಜೆಹಾಕಿದ್ದೆ. ಒಳಗಿನ ಸಂಭ್ರಮದ ಸದ್ದಿಗೆ ಕೆಪ್ಪಾಗಿದ್ದ ಕಿವಿಗಳನ್ನು ಮೌನಕ್ಕೆ ಹೊಂದಿಸಿಕೊಳ್ಳುವ ವ್ಯರ್ಥಪ್ರಯತ್ನ ಮಾಡುತ್ತಲೇ- ‘ಎಂತಾಯ್ತೇ?’- ಕುಳಿತುಕೊಳ್ಳುವಷ್ಟು ಸಮಯ ಕೊಡದೇ ಕೇಳಿದೆ.

‘ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ, ಒಂಟಿ ಅನ್ನಿಸ್ತಾ ಇದೆ. ಬದುಕು ಭಾರ ಆಗ್ಬಿಟ್ಟಿದೆ. ನನ್ನದೇ ಅಂತ ಒಂದು ಜೀವವೂ ಇಲ್ಲಿಲ್ಲ ಅನ್ನಿಸ್ತಿದೆ. ಎಲ್ಲಿಗಾದ್ರೂ ದೂರ ಒಬ್ಬಳೇ ಹೋಗ್ಬೇಕು ಮಾರಾಯ್ತಿ’- ಬಡಗುಟ್ಟುತ್ತಿರುವಾಗಲೇ ಹನಿಗಳು ಕಣ್ಣುತುಂಬುತ್ತಿದ್ದವು.

ದೊಡ್ಡ ಸಂಸಾರದ ಹೊಣೆಹೊತ್ತ ಹೆಣ್ಣುಮಗಳಾಕೆ. ಕೂಡುಕುಟುಂಬದ ಹಿರಿಸೊಸೆ. ದೊಡ್ಡ ಮೈದುನ ದುಬೈಯಲ್ಲಿ ಕೆಲಸ ಮಾಡುತ್ತಿದ್ದರೆ, ಅವನ ಹೆಂಡತಿ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿ. ಎರಡು ಮಕ್ಕಳ ತಾಯಿ. ಎರಡನೆಯ ಮೈದುನ ತನ್ನದೇ ಸಂಸ್ಥೆಯೊಂದನ್ನು ನಡೆಸುತ್ತಿದ್ದ. ಅವನ ಹೆಂಡತಿಯೂ ಅಲ್ಲಿನ ಮುಖ್ಯ ಹುದ್ದೆಯನ್ನಲಂಕರಿಸಿದ್ದ ಕಾರಣ, ಗಂಡನ ಜತೆಯೇ ಹೊರಟುಬಿಡುವವಳು. ಅವಳಿಗಿನ್ನೂ ಎರಡು ವರ್ಷದ ಮಗಳು ಮಾತ್ರ, ಅನುಜಾಳ ಮಡಿಲಿನಲ್ಲೇ ಬೆಳೆಯುತ್ತಿತ್ತು. ಒಬ್ಬಳು ನಾದಿನಿ ಮದುವೆಯಾಗಿದ್ದರೆ, ಇನ್ನೊಬ್ಬಳು ವಿದ್ಯಾಭ್ಯಾಸಕ್ಕೆಂದು ದೂರದ ಹಾಸ್ಟೆಲ್ಲಿನಲ್ಲಿದ್ದಳು. ಗಂಡ ಮೆಡಿಕಲ್ ಸ್ಟೋರೊಂದರ ಮಾಲೀಕ. ಮಿಲಿಟ್ರಿ ರಿಟೈರ್ಡ್ ಆದ ಮಾವ ಮನೆಯಲ್ಲೂ ಅಂತಹದ್ದೇ ಶಿಸ್ತನ್ನು ಬಯಸುವವರು. ಹಳೇಕಾಲದ ದೊಡ್ಡಮನೆ ತುಂಬಿ ತುಳುಕುತ್ತಿತ್ತು. ಅನುಜಾಳಿಗೆ ಮಕ್ಕಳಿಲ್ಲ. ಆದರೆ ಮನೆಯ ಮಕ್ಕಳೆಲ್ಲ ಅನುಜಾ ಹಾಕಿದ ಗೆರೆಯನ್ನು ದಾಟದೇ ಆ ಕೊರತೆಯನ್ನೂ ಅವಳಿಗೆ ತುಂಬಿಕೊಟ್ಟಿದ್ದಾರೆ ಎಂದು ಅವಳೇ ಆಗಾಗ ಹೇಳುವುದಿತ್ತು. ‘ಇದ್ದರೆ ಅನುಜಾಳಂಥ ಸೊಸೆ ಇರಬೇಕು’ ಎಂದು ಎಲ್ಲರ ಬಾಯಲ್ಲಿ ಹೊಗಳಿಸಿಕೊಂಡಾಕೆಯ ಬಾಯಲ್ಲಿ ಇಂತಹ ಮಾತ್ಯಾಕೆ ಎಂಬುದೇ ಅರ್ಥವಾಗಲಿಲ್ಲ.

‘ಯಾಕೇ, ಯಾರಾದ್ರೂ ಏನಾದ್ರೂ ಅಂದ್ರೇನೇ ನಿಂಗೆ?’ ಎಂದೆ.

ಇಲ್ಲ ಎಂಬಂತೆ ತಲೆ ಅಡ್ಡಡ್ಡ ಅಲುಗಿತು.

ಇದ್ದಕ್ಕಿದ್ದಂತೆ ಏನೋ ನೆನಪಾದವಳಂತೆ, ಮೊಬೈಲ್ ತೆಗೆದು ಮನೆಗೆ ಫೋನ್ ಮಾಡಿ ‘ಮಾವ ಮಾತ್ರೆ ತಗೊಂಡ್ರಾ’ ಎನ್ನುತ್ತಲೇ ಅಲ್ಲಿಂದ ಬಂದ ಉತ್ತರಗಳಿಗೆ ‘ಆಯ್ತು, ಸರಿ ಮಾವ’ ಎಂದು ಫೋನ್ ಆಫ್ ಮಾಡಿದವಳ ಮುಖ ಇನ್ನಷ್ಟು ಸಪ್ಪೆಯಾಗಿತ್ತು. ‘ನೋಡಿದ್ಯಾ, ಇದ್ರಿಂದಲೇ ಗೊತ್ತಾಗುತ್ತೆ, ನನ್ನ ಅಗತ್ಯ ಯಾರಿಗೂ ಇಲ್ಲ ಅಂತ’- ಮಾತು ಒಗಟಿನಂತಿತ್ತು.

‘ಏನಾಯ್ತೇ?’ ಎಂದೆ ಕೈ ಹಿಡಿದು.

ಕಣ್ಣಲ್ಲಿ ಗಂಗಾ-ಯಮುನೆ, ಬಿಕ್ಕುಗಳು ಸದ್ದುಮಾಡಿದ್ದವು. ಸಮಾಧಾನ ಮಾಡಿಕೊಳ್ಳಲೆಂದು ಸುಮ್ಮನೆ ಕುಳಿತೆ.

ನನಗೆ ಅವಳ ಮನೆಯವರೆಲ್ಲರ ಪರಿಚಯ ಚೆನ್ನಾಗಿಯೇ ಇತ್ತು ಮಾತ್ರವಲ್ಲದೇ, ಅವಳ ಮೈದುನಂದಿರ ಹೆಂಡತಿಯರು ಆತ್ಮೀಯ ಸ್ನೇಹಿತೆಯರೇ ಆಗಿದ್ದರು. ಒಂದು ದಿನಕ್ಕಾದರೂ ಅನುಜಾಳ ಬಗ್ಗೆ ಅವರು ಕೊಂಕೆತ್ತಿದ್ದನ್ನು ನಾನು ಕಂಡದ್ದಿಲ್ಲ. ಮತ್ತೇನಾಯಿತು ಇವಳಿಗೆ ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡಿತು.

‘ಅಲ್ಲಾ ಕಣೇ, ನಾಲ್ಕು ತಿಂಗಳ ಮೊದಲು ನಾನು ಜಾರಿಬಿದ್ದು ಕಾಲಿಗೆ ಹೇರ್​ಲೈನ್ ಫ್ರಾಕ್ಚರ್ ಆಗಿ, ರೆಸ್ಟಿಗೆ ಅಂತ ಅಮ್ಮನ ಮನೆಗೆ ಹೋಗಿದ್ದು ನೆನಪಿದೆ ತಾನೇ. ಅದೂ ನಾನಾಗಿ ಹೋಗಿದ್ದಲ್ಲ. ಎಲ್ಲರೂ ಒತ್ತಾಯದಿಂದಲೇ ದೂಡಿದ್ದು. ಒಂದು ತಿಂಗಳು ಇದ್ದಿದ್ದಷ್ಟೇ ಅಲ್ಲಿ. ಇನ್ನು ತೊಂದ್ರೆ ಇಲ್ಲ, ಎಲ್ಲ ನಾರ್ಮಲ್ ಆಗಿದೆ ಅಂದಮೇಲೆಯೇ ನನ್ನನ್ನಿವರು ಕರೆಸಿಕೊಂಡಿದ್ದು. ಆದರೆ ನಾನು ಮರಳಿ ಬರುವಷ್ಟರಲ್ಲಿ ಆಗಬಾರದ ಅನಾಹುತ ಆಗಿತ್ತು’.

‘ಅಯ್ಯೋ ಏನಾಯ್ತೇ?’.

‘ಎಲ್ಲರೂ ನಾನಿಲ್ಲದೆಯೇ ಬದುಕಲು ಕಲಿತಿದ್ದರು..’.

‘ಅಂದ್ರೆ.. ನಿನ್ನ ಮಾತಿನ ಅರ್ಥ ಆಗಲಿಲ್ಲ’.

‘ನಾನು ಹೋಗುವ ಮೊದಲು ಪ್ರತಿ ಕೆಲಸಕ್ಕೂ ನಾನು ಬೇಕಿತ್ತು. ಮಕ್ಕಳ ತಿಂಡಿಯಿಂದ ಹಿಡಿದು ಮಾವನ ಆರೋಗ್ಯದವರೆಗೆ, ಗಂಡನ ಅಂಗಿಯಿಂದ ಹಿಡಿದು ತಂಗಿಯ ಸೀರೆಯವರೆಗೆ ನನ್ನ ಆಯ್ಕೆಯಿತ್ತು. ಅಷ್ಟೇಕೆ ಕೆಲಸದವರು ಕೂಡ ನನ್ನನ್ನು ಕೇಳದೇ ಒಂದು ಕೆಲಸ ಮಾಡಿದ್ದಿದ್ದರೆ ಕೇಳು. ಅದೇ ಈಗ ಪರಿಸ್ಥಿತಿ ಬದಲಾಗಿದೆ. ನಾನು ಎದ್ದು ಗಂಡನ ಅಂಗಿ ಹುಡುಕುವ ಮೊದಲೇ ಅವರೊಂದನ್ನು ಹಾಕಿ ಹೊರಟಾಗಿರುತ್ತದೆ. ಮಕ್ಕಳಿಗೇನು ಬೇಕು ಅಂತ ಅವರೇ ಡಿಸೈಡ್ ಮಾಡ್ತಾರೆ. ಮಾವ ತಮ್ಮ ಮಾತ್ರೆಗಳನ್ನು ತಾವೇ ತೆಗೆದುಕೊಳ್ತಾರೆ. ಕೆಲಸದವರು ಯಾರು ಹೇಳಿದರೂ ಕೆಲಸ ಮಾಡಿಬಿಡುತ್ತಾರೆ. ಎಲ್ಲರೂ ನನ್ನ ಜತೆ ನಗುನಗುತ್ತಾ ಮಾತಾಡಿದರೂ ನಾನೊಬ್ಬಳು ಇದ್ದೂ ಇಲ್ಲದಂತಾಗಿದ್ದೇನೆ’.

ನಾನು ಅವಳ ತಲೆಗೊಂದು ಮೊಟಕಿ ‘‘ಸುಮ್ನಿರು, ನಿನ್ನದೆಲ್ಲ ಅತಿಯಾದ ಆಲೋಚನೆಗಳೇ; ನೀನು ಇಷ್ಟು ದಿನ ಎಷ್ಟೆಲ್ಲ ಮಾಡ್ತಾ ಇದ್ದೆ, ಅದರಿಂದಾಗಿ ನಿನಗೆಷ್ಟು ತೊಂದರೆಯಾಗಿರಬಹುದು ಅಂತ ಆಲೋಚಿಸಿಯೇ ಅವರು ಕೆಲವನ್ನಾದರೂ ತಾವು ಮಾಡುವ ಪ್ರಯತ್ನ ಮಾಡ್ತಾ ಇದ್ದಾರೆ ಅನ್ಸುತ್ತೆ. ‘ಎಲ್ಲ ಜವಾಬ್ದಾರಿ ನನ್ನ ತಲೆಯ ಮೇಲೆಯೇ ಇದೆ, ಯಾರೂ ಹಂಚಿಕೊಳ್ಳುವವರಿಲ್ಲ. ಒಂದ್ಲೋಟ ನೀರು ಕೂಡ ಕೈಗೆ ಹಿಡಿಸಿದರೇ ಗಂಟಲಿಗಿಳಿಯೋದು ನಮ್ಮನೆಯವರಿಗೆ. ನನ್ನದೇ ಅಂತ ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಒಂದಿಷ್ಟು ಹೊತ್ತೂ ಇಲ್ಲ’ ಅಂತ ಗೊಣಗ್ತಾ ಇದ್ದೆಯಲ್ಲಾ, ಸಮಯ ಇದ್ದಿದ್ರೆ ಒಂದಷ್ಟು ಪುಸ್ತಕ ಓದಬೇಕು, ಮೂವಿ ನೋಡಬೇಕು ಎಂತೆಲ್ಲಾ ಕನಸು ಕಾಣ್ತಾ ಇದ್ದೆಯಲ್ಲಾ, ಅದೆಲ್ಲಾ ಎಲ್ಲಿ ಮರೆಯಾಯಿತೀಗ? ನಿನ್ನದೇ ಅಂತ ಒಂದಿಷ್ಟು ಹೊತ್ತು ಸಿಕ್ಕಿದೆ ಅಲ್ವಾ ನಿನಗೆ? ಅದನ್ನು ನಿನಗೆ ಬೇಕಾದಂತೆ ಉಪಯೋಗಿಸಿಕೊಳ್ಳಲೇನು ಅಡ್ಡಿ?’’.

‘‘ಇಲ್ಲ ಕಣೇ ಆಗ್ತಿಲ್ಲ. ಏನೋ ಗಿಲ್ಟ್ ಕಾಡಿದಂತೆ ಆಗ್ತಿದೆ. ಅದೂ ಅವರೆಲ್ಲಾ ಅವಸರದಲ್ಲಿರುವವರು, ನನ್ನಿಂದಾಗಿ ಇನ್ನಷ್ಟು ತೊಂದ್ರೆ ಎಳೆದುಹಾಕ್ಕೊಳ್ತಿದ್ದಾರೆ ಅನ್ಸುತ್ತೆ. ಈಗ ನಾನೊಬ್ಬಳು ಮಾತ್ರ ಯಾರೋ ಬೇರೆ, ಅವರೆಲ್ಲಾ ಒಂದು ಅನ್ನಿಸ್ತಾ ಇದೆ. ಮೈದುನನ ಮಗಳನ್ನು ಈಗ ‘ಪ್ಲೇ ಹೋಮ್​ಗೆ ಹಾಕ್ತಾರಂತೆ; ಇಷ್ಟರವರೆಗೆ ನನ್ನ ಜತೆಯೇ ಬೆಳೆದ ಮಗುವನ್ನು ಈಗ್ಯಾಕೆ ಅಲ್ಲಿಗೆ ತಳ್ಬೇಕು? ನಾನೇನು ನೋಡಿಕೊಳ್ಳಲು ಕಷ್ಟ ಅಂದಿಲ್ಲ. ಮೊನ್ನೆ ನನ್ನ ನಾದಿನಿ ಪ್ರಿಯಾ ಫೋನ್ ಮಾಡಿದ್ದಳು. ಅದೂ ನನಗಲ್ಲ ಮಾವನಿಗೆ. ಮಾವ ಸ್ವಲ್ಪ ಖಡಕ್ ಆಗಿ ‘ನೋಡು ಹೀಗೆಲ್ಲಾ ನಿನ್ನ ಫ್ರೆಂಡ್ಸನ್ನು ಕರ್ಕೆಂಡು ಬರ್ಬೇಡಾ, ಇಲ್ಲಿ ಕಷ್ಟ ಆಗುತ್ತೆ’ ಅಂತಾ ಇದ್ರು. ನನ್ನ ಹತ್ತಿರ ಆ ವಿಷಯವನ್ನು ಮತ್ತೆ ಡಿಸ್ಕಸ್ ಕೂಡ ಮಾಡಲಿಲ್ಲ; ಪ್ರಿಯಾ ಏನು ತಿಳ್ಕೊಂಡಿರ್ಬೇಡ ನನ್ನ ಬಗ್ಗೆ. ಅಡುಗೆ ಮಾಡುವಾಗ ಮೊದಲೆಲ್ಲಾ ಯಾರೂ ಕೋಣೆಯೊಳಗೆ ಬರ್ತಾ ಇರ್ಲಿಲ್ಲ. ಈಗ ಹಾಗಲ್ಲ, ತಂಗಿ ಏನಾದ್ರು ತರಕಾರಿ ಹೆಚ್ಚಿಟ್ಟು ಹೋಗ್ತಾಳೆ, ನಾನು ಯಾವ ಅಡುಗೆ ಅಂತ ಆಲೋಚನೆ ಮಾಡುವಷ್ಟು ಸಮಯವೂ ಕೊಡದೇ. ಮಕ್ಕಳಿಗೆ ಅಂತ ಸಂಜೆ ತಿಂಡಿಮಾಡಲು ಹೊರಟ್ರೆ ಅವಳದ್ದು ಫೋನ್ ಬರುತ್ತೆ, ‘ಮಕ್ಕಳಿಗೆ ಏನೂ ಮಾಡ್ಬೇಡಿ, ಬರ್ತಾ ಕ್ಯಾಂಟೀನಿನಿಂದಲೇ ತರ್ತೀನಿ, ಇಲ್ಲಿ ಫ್ರೆಶ್ ಸಿಗುತ್ತೆ’ ಅಂತ. ಹಾಗಿದ್ರೆ ನಾನೇನೂ ಅಲ್ವಾ ಈ ಮನೆಗೆ.. ಎಲ್ಲವನ್ನೂ ಅವರೇ ನಿಶ್ಚಯ ಮಾಡುವಂತಿದ್ದರೆ.. ಇನ್ನು ಇವರಂತೂ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೇ ‘ನಿನ್ನ ಪಾಡಿಗೆ ಸ್ವಲ್ಪ ಆರಾಮವಾಗಿರು’ ಅಂತಾರೆ’’.

‘‘ಅಮ್ಮಾ ತಾಯೀ, ನಿನ್ನ ತಲೆಗೆ ಈ ಸಲದ ‘ಭಯಂಕರ ಆಲೋಚನೆ’ಯ ಜ್ಞಾನಪೀಠ ಅವಾರ್ಡ್ ಗ್ಯಾರಂಟಿ. ನೋಡು ನಿನ್ನ ಕಾಲಿಗೆ ಈಗಲೇ ಇನ್ನಷ್ಟು ಕೆಲಸ ಸಿಕ್ಕಿದ್ರೆ ಮತ್ತೆ ತೊಂದರೆ ಆಗಬಹುದು ಎಂಬ ಚಿಂತೆ ಅವರದ್ದಿರಬಹುದು. ಅಥವಾ ನೀನೊಬ್ಬಳೇ ಇದುವರೆಗೆ ಹೊತ್ತಿದ್ದ ಕೆಲಸದ ಭಾರ ಅವರಿಗೂ ಈಗ ಕಂಡು ನಿನಗೊಂದಿಷ್ಟು ಸಹಾಯ ಆಗಲಿ ಅಂತಲೇ ಕೆಲಸ ಹಂಚಿಕೊಂಡಿದ್ದಾರಷ್ಟೇ. ನಿನ್ನ ಮಾವ ನಾದಿನಿಗೆ ಬೈದದ್ದೂ ಅದಕ್ಕೇ. ನಿನಗಿಲ್ಲಿ ಹುಷಾರಿಲ್ಲದಾಗ ಅವಳ ಗೆಳತಿಯರು ಬಂದ್ರೆ ಅವರ ಉಪಚಾರ ಅಂತೆಲ್ಲಾ ಓಡಾಡಿ ಇನ್ನಷ್ಟು ಆಯಾಸ ಮಾಡ್ಕೊಳ್ತೀಯ ಅಂತಷ್ಟೇ.. ಈಗ್ಲೂ ನೀನು ‘ಫಿಟ್ ಆಂಡ್ ಫೈನ್’ ಅಂತ ನಿನಗನ್ನಿಸಿದ್ರೆ ನೀನೇ ಹೇಳಬಹುದು ತಾನೇ? ನಂಗ್ಯಾರಾದ್ರೂ ಇಷ್ಟು ಕೆಲಸ ಮಾಡಿಕೊಡುವವರು ಸಿಕ್ಕಿದ್ರೆ ಹಾಯಾಗಿ ಕತೆಪುಸ್ತಕ ಕೈಯಲ್ಲಿ ಹಿಡಿದು ಬಿದ್ಕೊಳ್ತಾ ಇದ್ದೆ. ಇನ್ನೂ ಒಂದು ಮಾತು ಹೇಳ್ತೀನಿ ಕೇಳು. ನಿಮ್ಮತ್ತೆ ಇರುವಾಗ ಅವರೂ ಹೀಗೆಯೇ ಯೋಚಿಸಿ ನಿನಗೇನೂ ಜವಾಬ್ದಾರಿಗಳನ್ನು ಹೊರಿಸದೇ ಇದ್ದಿದ್ದರೆ ನೀನು ಈಗಿರುವಂತೆ ಮನೆಯನ್ನು ನಡೆಸಲು ಸಾಧ್ಯವಾಗ್ತಿತ್ತಾ.. ಯೋಚಿಸು’’.

ಒಂದಿಷ್ಟು ಯೋಚನೆಗೆ ಬಿದ್ದಳು. ‘ಹಾಗಂತೀಯಾ? ನಾನು ಆ ರೀತಿ ಯೋಚಿಸಿಯೇ ಇರಲಿಲ್ಲ. ನನ್ನನ್ನು ದೂರ ಇಡ್ತಾರೆ ಅನ್ನೋದು ಮಾತ್ರ ನನ್ನ ಚಿಂತೆಯಾಗಿತ್ತು’- ಬೀಳ್ಕೊಂಡು ಹೊರಡುವಾಗ ಸಮಾಧಾನವಾದಂತಿದ್ದಳು.

ಅವಳು ಹೋದಮೇಲೆ ನಾನೂ ಅದೇ ಚಿಂತೆಗೆ ಬಿದ್ದೆ. ನಾನು ಕೂಡ ಅವಳ ಸ್ಥಾನದಲ್ಲಿದ್ರೆ ಅವಳಂತೆಯೇ ಯೋಚಿಸುತ್ತಿದ್ದೆ. ನಾವು ನಮ್ಮ ಜವಾಬ್ದಾರಿಗಳನ್ನು ‘ಹೆಮ್ಮೆಯ ತುರಾಯಿ’ ಎಂದು ತಲೆಯ ಮೇಲೆಯೇ ಇಟ್ಟುಕೊಂಡಿರುತ್ತೇವೆ. ಬಿಟ್ಟುಕೊಡಲಾಗಲೀ, ಇನ್ನೊಬ್ಬರು ಕೂಡ ನಮ್ಮಷ್ಟೇ ಚೆನ್ನಾಗಿ ನಿಭಾಯಿಸಬಲ್ಲರು ಎಂದು ಯೋಚಿಸಲಾಗಲೀ ಹೋಗುವುದೇ ಇಲ್ಲ. ‘ನಾವೇ ಎಲ್ಲ… ನಾವಿಲ್ಲದಿದ್ರೆ ಏನೂ ಇಲ್ಲ’ ಅನ್ನಿಸುವುದು. ನಮ್ಮ ಇರುವಿಕೆಯೇ ಮುಖ್ಯ, ಅದಿಲ್ಲದೇ ಇದ್ದರೆ ಇಲ್ಲೇನೂ ನಡೆಯದು ಎಂಬುದು ನಮ್ಮ ಭಾವನೆ. ಇದು ಮನೆಯಲ್ಲಿ ಅಂತಲ್ಲ, ಎಲ್ಲ ಕಡೆಯೂ ನಡೆಯುವಂಥದ್ದೇ. ನಾವಿಲ್ಲದಿದ್ದರೂ ಪ್ರಪಂಚ ನಡೆಯುತ್ತದೆ ಎಂಬ ಸತ್ಯವನ್ನು ಹೊತ್ತುಕೊಂಡೇ ಕರ್ತವ್ಯ ನಿಭಾಯಿಸಿದರೆ ನಮ್ಮ ಅಹಂ ಕೊಂಚ ತಗ್ಗಬಹುದೇನೋ.

ನಮ್ಮ ಜವಾಬ್ದಾರಿಗಳನ್ನು ನಿಭಾಯಿಸೋಣ, ನಿಭಾಯಿಸುವವರು ಬಂದರೆ ಸಹಕರಿಸೋಣ.

Leave a Reply

Your email address will not be published. Required fields are marked *

Back To Top