Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಜಮೀನು ಗೇಣಿಯ ಆತಂಕ

Friday, 11.08.2017, 3:00 AM       No Comments

ರಡು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಾಗುವಳಿ ಸ್ಥಗಿತವಾಗಿರುವ ಕೃಷಿಭೂಮಿಯನ್ನು ಇನ್ನು ಮುಂದೆ ಗೇಣಿಗೆ ಕೊಡಲು ರಾಜ್ಯ ಸರ್ಕಾರ ತೀರ್ವನಿಸಿದೆ. ಕೃಷಿಭೂಮಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಿರುವ ಸರ್ಕಾರ ಇದಕ್ಕೆ ಆಧಾರವಾಗಿ ಭೂಸುಧಾರಣಾ ಕಾಯ್ದೆಯಲ್ಲಿನ ನಿಯಮವನ್ನು ಬಳಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಕೃಷಿಭೂಮಿ ಪ್ರಮಾಣ ಕುಸಿಯುತ್ತಿರುವುದು ಕಳವಳದ ಸಂಗತಿಯೇ ಮತ್ತು ಅದಕ್ಕೊಂದು ಪರಿಹಾರೋಪಾಯ ಕಂಡುಕೊಳ್ಳಬೇಕೆಂಬ ಸರ್ಕಾರದ ಇರಾದೆಯೂ ಸ್ವಾಗತಾರ್ಹವೇ. ಆದರೆ ಒಬ್ಬರ ಜಮೀನನ್ನು ಮತ್ತೊಬ್ಬರಿಗೆ ಗೇಣಿ ಕೊಡುವ ಕ್ರಮ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಮತ್ತು ಕಾರ್ಯಸಾಧು ಎಂಬುದರ ಅವಲೋಕನವೂ ಆಗಬೇಕಿದೆ.

ಕೃಷಿಭೂಮಿ ಯಾವ ಕಾರಣಕ್ಕಾಗಿ ಪಾಳುಬಿದ್ದಿದೆ ಅಥವಾ ಕೃಷಿಕಾರ್ಯ ಅಲ್ಲಿ ಏಕೆ ಸ್ಥಗಿತಗೊಂಡಿದೆ ಎಂಬುದನ್ನು ಮೊದಲಿಗೆ ಕಂಡುಕೊಳ್ಳುವುದು ಸೂಕ್ತ. ನಮ್ಮ ಕೃಷಿ ವ್ಯವಸ್ಥೆ ಹೇಳಿಕೇಳಿ ಮಳೆಯನ್ನೇ ನೆಚ್ಚಿರುವಂಥದ್ದು; ಮಳೆ ಬಂದರೆ ಮಾತ್ರವೇ ಬಿತ್ತನೆ, ಸಸಿ ಚಿಗುರಿ ಬೆಳೆದರಷ್ಟೇ ಫಸಲು ಎಂಬ ಸ್ಥಿತಿ ಬಹುತೇಕ ಕೃಷಿಕರದ್ದು. ಆದರೆ ಕಳೆದ 3-4 ವರ್ಷಗಳಿಂದ ಸಕಾಲಿಕ-ಸಮರ್ಪಕ ಮಳೆಯೇ ಆಗಿಲ್ಲ. ಜತೆಗೆ ಪರ್ಯಾಯ ನೀರಾವರಿ ವ್ಯವಸ್ಥೆಗಳೂ ನಮ್ಮಲ್ಲಿ ಅಷ್ಟೊಂದು ಅಭಿವೃದ್ಧಿಗೊಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ಕೃಷಿಕರು ಕೂಡ ಯಾವ ಧೈರ್ಯದ ಮೇಲೆ ಸಾಗುವಳಿ ಮಾಡಿಯಾರು?

ಕೃಷಿ ಕೂಲಿಗಳ ಅಲಭ್ಯತೆ ಮತ್ತೊಂದು ಸಮಸ್ಯೆ. ರೈತಾಪಿ ಚಟುವಟಿಕೆಗಳಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ, ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ನಗರಗಳಿಗೆ ಗುಳೆಹೋಗುವ ಕೂಲಿಕಾರ್ವಿುಕರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದಾಗಿ, ಕೃಷಿಯೋಗ್ಯ ಭೂಮಿಯಿದ್ದೂ ಖಾಲಿಬಿಟ್ಟುಕೊಂಡು ಕೂರಬೇಕಾದ ಪರಿಸ್ಥಿತಿಯಿದೆ. ಈ ಎರಡು ಸಮಸ್ಯೆಗಳ ಹೊರತಾಗಿ, ಎಷ್ಟೋ ಕೃಷಿಕರೇ ತಮ್ಮ ಕಸುಬಿನ ಕುರಿತಾಗಿ ಹಿಂದಿನಷ್ಟು ಆಸಕ್ತಿ ಉಳಿಸಿಕೊಂಡಿಲ್ಲ ಎಂಬುದು ಮತ್ತೊಂದು ಅಪ್ರಿಯ ಸತ್ಯ; ವರ್ಷಪೂರ್ತಿ ಶ್ರಮಹರಿಸಿ, ಬೆವರು ಸುರಿಸಿ ದುಡಿದು ಬೆಳೆ ಬೆಳೆದರೂ ಸಮರ್ಪಕ ಬೆಲೆಯೂ ದಕ್ಕುತ್ತಿಲ್ಲ, ಲಾಭ ತಮ್ಮ ಕೈಸೇರದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಹತಾಶೆಯೇ ಅವರ ಈ ನಿರಾಸಕ್ತಿಗೆ ಕಾರಣವಾಗಿದ್ದಿರಬಹುದು.

ಇಷ್ಟು ಮಾತ್ರವಲ್ಲದೆ ಗೇಣಿ ವ್ಯವಸ್ಥೆಯ ಕುರಿತು ಕೃಷಿಕರಲ್ಲಿ ಕೆಲವೊಂದು ಗೊಂದಲ ಮತ್ತು ಆತಂಕಗಳು ಮೂಡಿದರೆ ಅಚ್ಚರಿಯೇನಿಲ್ಲ. ಸಾಗುವಳಿಯಾಗದ ಭೂಮಿಯನ್ನು ಗೇಣಿಗೆ ಪಡೆಯುವವರು ಯಾರು ಎಂಬುದರ ಕುರಿತು ಆರಂಭಿಕ ಹಂತದಲ್ಲೇ ಸ್ಪಷ್ಟತೆ ಇಲ್ಲದಿರುವುದು ರೈತರಲ್ಲಿ ಗೊಂದಲ ಹುಟ್ಟಿಸಿದರೆ, ಹೀಗೆ ನೀಡಿದ ಜಮೀನು ಕೆಲ ಕಾಲದ ನಂತರ ತಮಗೇ ಮರಳಿ ದಕ್ಕುತ್ತದೆ ಎಂಬುದರ ಖಾತ್ರಿಯಿಲ್ಲದಿರುವುದು ಆತಂಕ ಉಂಟುಮಾಡಬಹುದು. ಹಿಂದೆ ಜಾರಿಯಲ್ಲಿದ್ದ ‘ಉಳುವವನೇ ಭೂಮಿಗೊಡೆಯ’ ಕಾಯ್ದೆಯಂಥ ಮತ್ತಾವುದಾದರೂ ಉಪಕ್ರಮ ಜಾರಿಯಾಗಿ ಜಮೀನಿನ ಹಕ್ಕನ್ನು ಕಸಿದುಕೊಳ್ಳಬಹುದು ಎಂಬ ಎಣಿಕೆಯೇ ಇದಕ್ಕೆ ಕಾರಣವಿದ್ದಿರಲಿಕ್ಕೂ ಸಾಕು.

ರಾಜ್ಯದಲ್ಲಿ ಸುಮಾರು 1,91,577 ಎಕರೆಯಷ್ಟು ಕೃಷಿಭೂಮಿ ಪಾಳುಬಿದ್ದಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆಯ ಪರಿಚ್ಛೇದ 84 ಮತ್ತು 85ರ ಅನುಸಾರ ಓರ್ವರ ಜಮೀನನ್ನು ಹೀಗೆ ಮತ್ತೊಬ್ಬರಿಗೆ ಗೇಣಿ ಕೊಡುವುದಕ್ಕೆ ಅವಕಾಶವಿದೆ ಎನ್ನಲಾಗಿದೆ. ಆದರೆ ಏಕಾಏಕಿ ಈ ಕ್ರಮದ ಅನುಷ್ಠಾನಕ್ಕೆ ಮುಂದಾಗುವುದಕ್ಕೂ ಮೊದಲು ಅದರ ಸಾಧಕ-ಬಾಧಕಗಳ ಕುರಿತೂ ಆಳುಗರು ಚಿಂತನೆ ನಡೆಸುವುದು ಯೋಗ್ಯ ನಡೆಯಾಗಬಲ್ಲದು.

Leave a Reply

Your email address will not be published. Required fields are marked *

Back To Top