Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಜನೋಪಯೋಗಿ ಜನಧನ

Wednesday, 18.10.2017, 3:00 AM       No Comments

ರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಕೃಷಿಕರಿಗೆ ಸಲ್ಲಬೇಕಾದ ಸಹಾಯಧನ/ಆರ್ಥಿಕ ನೆರವಿನ ಮೊತ್ತಗಳು ನೇರವಾಗಿ ಅವರ ‘ಜನಧನ’ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗುತ್ತಿರುವುದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲೀಗ ಬೀಡಿ-ಸಿಗರೇಟು, ಮದ್ಯ, ಗುಟ್ಖಾ ಸೇವನೆಯಂಥ ದುಶ್ಚಟಗಳ ಪ್ರಮಾಣ ತಗ್ಗುತ್ತಿದೆ ಎಂಬ ಸ್ವಾರಸ್ಯಕರ ಸಂಗತಿಯು ಸಮೀಕ್ಷೆಯೊಂದರಲ್ಲಿ ಹೊರಹೊಮ್ಮಿದೆ. ಬ್ಯಾಂಕ್ ಖಾತೆಗಳಿಗೆ ಸಹಾಯಧನದ ಜಮೆಯಾಗುವುದಕ್ಕೂ, ದುಶ್ಚಟಗಳ ಪ್ರಮಾಣ ತಗ್ಗುವುದಕ್ಕೂ ಏನು ಸಂಬಂಧ? ಎಂಬ ಆಶ್ಚರ್ಯಯುಕ್ತ ಪ್ರಶ್ನೆಯಿಲ್ಲಿ ಹುಟ್ಟಿಕೊಳ್ಳಬಹುದು. ಆದರಿದು ಸತ್ಯ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಕೈಗೊಂಡಿರುವ ಸಮೀಕ್ಷೆಯ ಅನುಸಾರ, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳಗಳಲ್ಲಿ ಈ ಪ್ರವೃತ್ತಿ ಕಂಡುಬಂದಿದ್ದು, ತನ್ಮೂಲಕ ಜನರ ಜೀವನಮಟ್ಟವೂ ಸುಧಾರಿಸುತ್ತಿದೆ ಎಂಬುದು ಸಮಾಧಾನಕರ ಅಂಶ.

ಇಂಥದೊಂದು ಬೆಳವಣಿಗೆಗೆ ಕಾರಣವಾಗಿರುವ ಮನಶ್ಶಾಸ್ತ್ರೀಯ ಅಂಶದ ಕಡೆಗೊಮ್ಮೆ ಗಮನ ಹರಿಸಬೇಕಾದ್ದು ಇಲ್ಲಿ ಸೂಕ್ತ. ಸಾಮಾನ್ಯವಾಗಿ, ಹಣವು ಅನಾಯಾಸವಾಗಿ ಹಾಗೂ ನೇರವಾಗಿ ಕೈಸೇರಿಬಿಟ್ಟಿತೆಂದರೆ ಮನಸ್ಸು ಹತ್ತು ಹಲವು ಪ್ರಲೋಭನೆಗಳ ಗಾಳಕ್ಕೆ ಸಿಲುಕುವುದು ದಿಟ. ಬೀಡಿ-ಸಿಗರೇಟು, ಮದ್ಯ ಸೇವನೆಯಂಥ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ದುರ್ಬಲ ಮನಸ್ಸುಗಳಿಗೆ ಆಗ ಕುಮ್ಮಕ್ಕು ಸಿಕ್ಕಂತಾಗಿ, ಪರಿಶ್ರಮದ ಪ್ರಯೋಜನ ಅಥವಾ ಫಲ ನೋಡನೋಡುತ್ತಿದ್ದಂತೆಯೇ ಕರಗುತ್ತದೆ. ಪರಿಣಾಮವಾಗಿ ಕುಟುಂಬದ ಮಿಕ್ಕ ಆಶ್ರಿತರು ಮತ್ತೆ ಅನಿಶ್ಚಿತತೆಯಲ್ಲೇ, ಹಸಿವಿನಲ್ಲೇ ದಿನದೂಡುವಂತಾಗುತ್ತದೆ ಎಂಬುದು ಕಹಿವಾಸ್ತವ. ಆದರೆ ಸರ್ಕಾರಿ ಸಹಾಯಧನವು ಹೀಗೆ ಜನಧನ ಖಾತೆಯ ಮೂಲಕವಾಗಿ ಫಲಾನುಭವಿಗಳನ್ನು ತಲುಪುತ್ತಿರುವುದರಿಂದ ‘ಆ ಕ್ಷಣದ’ ಚಪಲವನ್ನು ನೀಗಿಸಿಕೊಳ್ಳಲು ಖಾತೆಗೆ ಕೈ ಹಾಕಲಾಗದಂಥ ಅನಿವಾರ್ಯತೆ ಸೃಷ್ಟಿಯಾಗಿದೆ ಮತ್ತು ಇದು ಪರೋಕ್ಷವಾಗಿ ಸಕಾರಾತ್ಮಕ ಪರಿಣಾಮವನ್ನೇ ಉಂಟುಮಾಡಿದೆ ಎನ್ನಬೇಕು.

ಕಳೆದ ವರ್ಷದ ನವೆಂಬರ್​ನಲ್ಲಿ ಸರ್ಕಾರದಿಂದ ಅಧಿಕ ಮುಖಬೆಲೆಯ ನೋಟುಗಳ ಅಮಾನ್ಯೀಕರಣವಾದಾಗ ಕಪು್ಪಹಣವನ್ನು ಬಚ್ಚಿಡಲು ಕೆಲವರು ಕಂಡುಕೊಂಡ ಒಂದಷ್ಟು ‘ವಾಮಮಾರ್ಗೀಯ’ ಮಾಗೋಪಾಯಗಳಲ್ಲಿ ಪರಿಚಯಸ್ಥ ಅಮಾಯಕರ ಜನಧನ ಬ್ಯಾಂಕ್ ಖಾತೆಗಳಲ್ಲಿ ತಮ್ಮ ದುಡ್ಡನ್ನು ಜಮೆಮಾಡುವ ಪರಿಪಾಠವೂ ಒಂದಾಗಿತ್ತು ಎಂಬುದೀಗ ಜಗಜ್ಜಾಹೀರು. ಹೀಗಾಗಿ ತನ್ನದಲ್ಲದ ತಪ್ಪಿನಿಂದಾಗಿ ‘ಜನಧನ’ ಖಾತೆಗಳು ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿತ್ತು! ಆದರೀಗ, ಈ ವ್ಯವಸ್ಥೆಯಿಂದ ಹೀಗೊಂದು ಸಕಾರಾತ್ಮಕ, ಆರೋಗ್ಯಕರ ಬೆಳವಣಿಗೆಯೂ ಆಗಲು ಸಾಧ್ಯ ಎಂಬ ಸಂಗತಿಯ ಅನಾವರಣವಾಗಿರುವುದು ಸಂತೋಷದ ಸಂಗತಿಯೇ ಸರಿ. ಹೀಗೆ ಹಣದ ಸದ್ಬಳಕೆ, ಉಳಿತಾಯದಿಂದಾಗಿ ಶ್ರೀಸಾಮಾನ್ಯರ ಆರ್ಥಿಕ ಸ್ಥಿತಿಯ ಸುಧಾರಣೆಯಾಗುವುದರ ಜತೆಗೆ, ತಮಗೇ ಅರಿವಿಲ್ಲದಂತೆ ದುಶ್ಚಟಗಳಿಂದ ಅವರು ವಿಮುಖರಾಗುವುದರಿಂದ ಆರೋಗ್ಯ ಸ್ಥಿತಿಯ ಸಂರಕ್ಷಣೆಯೂ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಜನಿಕರು ಸ್ವಾಸ್ಥ್ಯ ಸಂರಕ್ಷಣೆಗೆ ಸ್ವತಃ ಹೀಗೆ ಕಟಿಬದ್ಧರಾಗುವಂತಾದಲ್ಲಿ, ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ಉದ್ಭವಿಸುವ ‘ಆಹ್ವಾನಿಸಿ ತಂದುಕೊಳ್ಳುವಂಥ’ ಕಾಯಿಲೆಗಳ ಉಪಶಮನಕ್ಕೆ ಸರ್ಕಾರಿ ಬೊಕ್ಕಸದ ಮೇಲಾಗುವ ಹೊರೆಯೂ ತಗ್ಗುತ್ತದೆ. ಇದೇ ರೀತಿಯಲ್ಲಿ ಬ್ಯಾಂಕಿಂಗ್ ಸಾಕ್ಷರತೆಯ ವರ್ಧನೆಗೆ ಮತ್ತಷ್ಟು ಬದ್ಧಯತ್ನಗಳಾದಲ್ಲಿ, ಅದು ಗ್ರಾಮೀಣ ಪ್ರದೇಶಗಳಲ್ಲಿ ಹಲವು ನೆಲೆಗಟ್ಟಿನ ಸುಧಾರಣೆಗಳಿಗೆ ಹುರುಪು ತುಂಬುವುದರಲ್ಲಿ ಸಂದೇಹವಿಲ್ಲ.

ಎಲ್ಲೆಡೆಯೂ ಈಗ ದೀಪಾವಳಿ ಹಬ್ಬದ ಸಂಭ್ರಮ. ದೀಪಾವಳಿ ಬೆಳಕಿನ ಹಬ್ಬ. ಬೆಳಕು ಎಂಬುದು ಜ್ಞಾನದ ಸಂಕೇತ, ಅರಿವಿನ ದ್ಯೋತಕ. ಪ್ರಗತಿಯೆಡೆಗೆ ದಾಪುಗಾಲು ಹಾಕುವ ಆಶಯವಿರುವವರನ್ನು ಹಿಂದಕ್ಕೆ ಸೆಳೆಯುತ್ತಿರುವ, ತೊಡಕಾಗಿ ಪರಿಣಮಿಸಿರುವ ಯಾವುದೇ ತೆರನಾದ ಪ್ರಲೋಭನೆ, ಕತ್ತಲೆ ಅಥವಾ ತಡೆಗೋಡೆಯನ್ನು ತೊಡೆಯಲು ಇಂಥದೊಂದು ಅರಿವಿನ ಬೆಳಕು ನಿತ್ಯಸಖನಾಗಲಿ.

Leave a Reply

Your email address will not be published. Required fields are marked *

Back To Top