Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಜನರು ವಿಷವುಣ್ಣಬೇಕೆ?

Thursday, 11.05.2017, 3:00 AM       No Comments

‘ಹಾಲುಂಡ ಮಕ್ಕಳೇ ಬದುಕೋದು ಕಷ್ಟ, ಇನ್ನು ವಿಷವುಂಡವರು ಬದುಕಿಯಾರೆ’ ಎಂಬುದೊಂದು ಗಾದೆ. ವಿಪರ್ಯಾಸವೆಂದರೆ ನಾವೆಲ್ಲರೂ ರಾಸಾಯನಿಕಯುಕ್ತ, ವಿಷಮಿಶ್ರಿತ ಆಹಾರವನ್ನೇ ಸೇವಿಸುವ ದುಸ್ಥಿತಿ ಬಂದೊದಗಿದೆ. ಅದರಲ್ಲೂ, ಶುದ್ಧ ಆಹಾರ ಉತ್ಪನ್ನಗಳನ್ನು ಇವರಾದರೂ ಕೊಡಬಹುದು ಎಂದು ಜನ ನಂಬಿದವರೇ ವ್ಯತಿರಿಕ್ತವಾಗಿ ನಡೆದುಕೊಂಡಾಗ ಯಾರ ಮೇಲೆ ವಿಶ್ವಾಸವಿಡುವುದು ಎಂಬ ಪ್ರಶ್ನೆ ಎದುರಾಗುತ್ತದೆ. ಬೆಂಗಳೂರಿನಲ್ಲಿ ಹಾಪ್​ಕಾಮ್್ಸ ನಡೆಸುತ್ತಿರುವ ಮಾವು ಮೇಳದಲ್ಲಿ ವಿಷಕಾರಿ ಪದಾರ್ಥ ಸೇರಿಸಿದ ಹಣ್ಣುಗಳು ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಸರ್ಕಾರಿ ಸಂಸ್ಥೆಯಾದ ಹಾಪ್​ಕಾಮ್್ಸ ಜನರಿಗೆ ಶುದ್ಧ ಉತ್ಪನ್ನಗಳನ್ನು ನೀಡುತ್ತದೆ ಎಂಬ ಭಾವನೆಯಿದ್ದು, ಈ ಪ್ರಸಂಗ ಅದಕ್ಕೆ ವಿರುದ್ಧವಾಗಿದೆ. ‘ದಿಗ್ವಿಜಯ’ ಟಿವಿ ವಾಹಿನಿ ನಡೆಸಿದ ರಿಯಾಲಿಟ್ ಚೆಕ್​ನಲ್ಲಿ ಈ ಆತಂಕಕಾರಿ ಸಂಗತಿ ಬಯಲಾಗಿದೆ. ಹಾಪ್​ಕಾಮ್ಸ್​ನಲ್ಲಿ ಖರೀದಿಸಿದ ದಶೇರಿ ಮಾವಿನಹಣ್ಣನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಅಸಿಟಲಿನ್ ಅಂಶ ಇರುವುದು ಪತ್ತೆಯಾಗಿದೆ. ಅಸಿಟಲಿನ್ ಎಂಬುದು ವಿಷಕಾರಿ ಅನಿಲವಾಗಿದ್ದು ಇದು ಕ್ಯಾಲ್ಷಿಯಂ ಕಾರ್ಬೆಡ್​ನಿಂದ ಹೊರಬರುವ ರಾಸಾಯನಿಕ. ಮಾವಿನಕಾಯನ್ನು ಹಣ್ಣಾಗಿಸಲು ಇದನ್ನು ಬಳಸುತ್ತಾರೆ. ಹೀಗೆ ಕೃತಕವಾಗಿ ಹಣ್ಣಾಗುವ ಮಾವು ಆರೋಗ್ಯಕ್ಕೆ ಹಾನಿಕರ ಎಂದು ಪ್ರಯೋಗಾಲಯದವರು ಹೇಳುತ್ತಾರೆ. ಇದರಿಂದ ನರಸಂಬಂಧಿ ಕಾಯಿಲೆ, ಅಂಗಾಂಗ ವೈಫಲ್ಯ ಇತ್ಯಾದಿ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಜನರು ಹಣ ಕೊಟ್ಟು ಅನಾರೋಗ್ಯವನ್ನು ಖರೀದಿಸಬೇಕೆ? ಅದೂ ಅಲ್ಲದೆ, 2015ರ ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ, ಕ್ಯಾಲ್ಷಿಯಂ ಕಾರ್ಬೆಡ್ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳೇ ಹೇಳುತ್ತಾರೆ. ಹಾಗಾದರೆ ಇದು ಯಾರಿಗೆ ಎಲ್ಲಿಂದ ಸಿಕ್ಕಿತು? ಬಳಸಿದ್ದು ಯಾರು? ಹೇಗೆ? ಎಂಬಿತ್ಯಾದಿ ವಿಚಾರಗಳು ತನಿಖೆಗೆ ಒಳಪಡಬೇಕಾಗಿದೆ. ಮಾರುಕಟ್ಟೆಯಲ್ಲಂತೂ ಮಾವು ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿ, ಹಣ್ಣುಗಳಲ್ಲೂ ರಾಸಾಯನಿಕ ಅಂಶಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು. ಜನರಿಗೆ ಇದು ಗೊತ್ತಿದ್ದರೂ ಅನಿವಾರ್ಯವಾಗಿ ಖರೀದಿಸುತ್ತಾರೆ. ಹಾಗಾದರೆ, ಆಹಾರ ಸುರಕ್ಷತೆಯ ಜವಾಬ್ದಾರಿ ಇರುವ ಸರ್ಕಾರದ ವಿಭಾಗಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

ಬೆಂಗಳೂರಿನಲ್ಲಿ ಈಚೆಗೆ ಸರ್ಕಾರದ ವತಿಯಿಂದ ಸಿರಿಧಾನ್ಯ ಮೇಳ ನಡೆಯಿತು. ಅದರಲ್ಲಿ ಸಿರಿಧಾನ್ಯಗಳು ಹಾಗೂ ಸಾವಯವ ಉತ್ಪನ್ನಗಳ ಬಗ್ಗೆ ಚರ್ಚೆ-ಪ್ರದರ್ಶನ ಇತ್ಯಾದಿ ನಡೆಯಿತು. ಅದೂ ಅಲ್ಲದೆ ಕರ್ನಾಟಕ ಈಚೆಗಷ್ಟೆ ಸಾವಯವ ನೀತಿಯನ್ನೂ ಪ್ರಕಟಿಸಿದೆ. ಇವೆಲ್ಲ ಶ್ಲಾಘನೀಯ ಕ್ರಮಗಳೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ರಾಸಾಯನಿಕ-ವಿಷಯುಕ್ತ ಆಹಾರ ಪದಾರ್ಥಗಳು ಮೆರೆಯುತ್ತ ಹೋದರೆ ಜನರ ಆರೋಗ್ಯದ ಗತಿಯೇನು? ಮೊದಲೇ ವಾತಾವರಣದ ಮಾಲಿನ್ಯ, ಜೀವನಶೈಲಿ ಮುಂತಾದ ಕಾರಣಗಳಿಂದಾಗಿ ಕಾಯಿಲೆಕಸಾಲೆಗಳ ಹಾವಳಿ ಹೆಚ್ಚಿದೆ. ಈ ಯಾದಿಗೆ ಆಹಾರವಸ್ತುಗಳೂ ಸೇರಿವೆ. ಬೆಳೆಗಾರ, ಮಾರಾಟಗಾರ, ಬಳಕೆದಾರ ಹಾಗೂ ಸರ್ಕಾರ ಈ ಎಲ್ಲರೂ ಸಾಮೂಹಿಕ ಹಿತಾಸಕ್ತಿಯ ನಿಟ್ಟಿನಲ್ಲಿ ಆಲೋಚಿಸಿದರೆ ಮಾತ್ರ ಪರಿಹಾರದ ಕಿರುದಾರಿ ಕಾಣಬಹುದೇನೋ? ಅದಿಲ್ಲವಾದಲ್ಲಿ ‘ಆರೋಗ್ಯ ಭಾರತ’ ಎಂಬ ಪರಿಕಲ್ಪನೆ ಕಾಗದದಲ್ಲೇ ಉಳಿಯಬೇಕಾಗುತ್ತದೆ.

Leave a Reply

Your email address will not be published. Required fields are marked *

Back To Top