Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

ಜನ ಭಾವನೆ ಗಮನಿಸಿ

Thursday, 12.10.2017, 3:00 AM       No Comments

ಪೆಟ್ರೋಲ್, ಡೀಸೆಲ್​ನಂಥ ಇಂಧನಗಳ ಬೆಲೆ ಅವಲಂಬಿತವಾಗಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಕಚ್ಚಾತೈಲದ ಬೆಲೆಯ ಮೇಲೆ. ಕಚ್ಚಾತೈಲ ಬೆಲೆಯಲ್ಲಿ ಇಳಿಕೆಯಾದಂತೆ ಅಥವಾ ಇಳಿಕೆಯಾಗುತ್ತ ಹೋದಂತೆ, ಈ ಇಂಧನಗಳ ಬೆಲೆಯಲ್ಲೂ ಸೂಕ್ತ ಪ್ರಮಾಣಾನುಗುಣವಾಗಿ ಇಳಿಕೆಯಾಗಬೇಕಾದ್ದು ಸಹಜ ಬೆಳವಣಿಗೆ ಮತ್ತು ಲೆಕ್ಕಾಚಾರ. ಆದರೆ ಭಾರತದ ವಿಷಯದಲ್ಲಿ ಇದು ನೆರವೇರದಿರುವುದು ಸಾರ್ವಜನಿಕ ಮತ್ತು ವ್ಯವಹಾರ ವಲಯಗಳ ಹುಬ್ಬೇರಿಸಿದೆ. ಒಕ್ಕೂಟ ವ್ಯವಸ್ಥೆಯಿರುವ ಭಾರತದಂಥ ರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ನಂಥ ಇಂಧನಗಳ ಮೇಲೆ ಆಯಾ ರಾಜ್ಯಗಳು ವಿಧಿಸುತ್ತಿರುವ ತೆರಿಗೆಗಳಲ್ಲಿ ಏಕರೂಪತೆ ಇಲ್ಲದಿರುವುದು ಬೆಲೆ ಇಳಿಕೆಯಾಗದಿರುವುದಕ್ಕೆ ಒಂದು ಕಾರಣವಾದರೆ ಮೂರು ತಿಂಗಳ ಹಿಂದಷ್ಟೇ ಜಾರಿಗೆ ಬಂದ ‘ಸರಕು ಮತ್ತು ಸೇವಾ ತೆರಿಗೆ‘ (ಜಿಎಸ್​ಟಿ) ವ್ಯಾಪ್ತಿಗೆ ಇಂಥ ಇಂಧನಗಳನ್ನು ಇನ್ನೂ ಸೇರಿಸದಿರುವುದು, ತತ್ಪರಿಣಾಮವಾಗಿ ಬೆಲೆಗಳಲ್ಲಿ ಏಕರೂಪತೆ ಕಾಣದಂತಾಗಿ, ಅದು ಬೆಲೆ ಇಳಿಕೆಗೂ ತೊಡಕಾಗಿ ಪರಿಣಮಿಸಿರುವ ಮತ್ತೊಂದು ಕಾರಣವಾಗಿದೆ ಎನ್ನಲಡ್ಡಿಯಿಲ್ಲ. ಪೆಟ್ರೋಲ್, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತರುವ ಚಿಂತನೆಯನ್ನು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಪ್ರಸ್ತಾವಿಸಿದ್ದಾರಾದರೂ, ಅದು ಒಂದು ನಿಯಮವಾಗಿ ರೂಪುಗೊಳ್ಳುವುದಕ್ಕೆ ಸಾಕಷ್ಟು ಕಸರತ್ತುಗಳು, ರಾಜಕೀಯ ಹಗಜಗ್ಗಾಟಗಳು ನಡೆಯುವುದು ಬಾಕಿಯಿದೆ ಎಂಬುದು ಒಪ್ಪಿತಸತ್ಯ. ಕಾರಣ, ಸದರಿ ಇಂಧನಗಳ ಮೇಲೆ ಈಗ ರಾಜ್ಯಗಳು ತಮ್ಮದೇ ಆದ ನಿಶ್ಚಿತ ತೆರಿಗೆಯನ್ನು ವಿಧಿಸುತ್ತಿದ್ದು, ಈ ಸ್ವರೂಪದಲ್ಲಿ ಬದಲಾದರೆ ಸರ್ಕಾರಿ ಬೊಕ್ಕಸಕ್ಕೆ ಬರಬೇಕಾದ ಆಮದನಿಯಲ್ಲಿ ಗಣನೀಯ ಕುಸಿತವಾಗುತ್ತದೆ ಎಂಬ ಗ್ರಹಿಕೆಯಿಂದಾಗಿ ಬಹಳಷ್ಟು ರಾಜ್ಯಗಳು ಈ ಪ್ರಸ್ತಾವವನ್ನು ವಿರೋಧಿಸುವ ಸಾಧ್ಯತೆಯಂತೂ ಇದ್ದೇ ಇದೆ.

ಇಷ್ಟಾಗಿಯೂ, ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ತಗ್ಗಿಸುವ ಮೂಲಕ ಗ್ರಾಹಕರ ಮೇಲಿನ ತೈಲದರದ ಹೊರೆಯನ್ನು ಕೊಂಚ ಪ್ರಮಾಣದಲ್ಲಿ ಇಳಿಸಿ, ಶೇ. 5ರ ಪ್ರಮಾಣದಲ್ಲಾದರೂ ತೆರಿಗೆಯನ್ನು ತಗ್ಗಿಸಬೇಕೆಂದು ರಾಜ್ಯಗಳಿಗೆ ಮನವಿ ಮಾಡಿತು. ಸಹಜವಾಗಿಯೇ ಇದಕ್ಕೆ ಪ್ರತಿಸ್ಪಂದಿಸಿರುವ ಗುಜರಾತ್, ಮಹಾರಾಷ್ಟ್ರ, ಉತ್ತರಾಖಂಡದಂಥ ಬಿಜೆಪಿ ಅಧಿಕಾರ ಗದ್ದುಗೆಯಲ್ಲಿರುವ ರಾಜ್ಯಗಳು ತೈಲದ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು ತಗ್ಗಿಸಿದ್ದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ ಕೂಡ ಶೇ. 1ರಷ್ಟು ವ್ಯಾಟ್ ಇಳಿಸಿದೆ. ಈ ನಡೆ ಮಿಕ್ಕ ರಾಜ್ಯಗಳಿಗೂ ಮೇಲ್ಪಂಕ್ತಿಯಾಗಿ, ತೆರಿಗೆಯನ್ನು ತಗ್ಗಿಸಿದಲ್ಲಿ ಗ್ರಾಹಕರ ಮುಖದಲ್ಲಿ ಮಂದಹಾಸ ಅರಳೀತು.

ಸೇವೆಗಳು, ವಾಣಿಜ್ಯೋತ್ಪನ್ನಗಳು, ಉದ್ಯೋಗ ಹೀಗೆ ವೈವಿಧ್ಯಮಯ ಬಾಬತ್ತುಗಳ ಮೇಲೆ ವಿಧಿಸಲಾಗುವ ಭಿನ್ನ ಸ್ತರ ಮತ್ತು ಸ್ವರೂಪದ ತೆರಿಗೆಯಿಂದಾಗಿಯೇ ರಾಜ್ಯ ಮತ್ತು ದೇಶದ ಆರ್ಥಿಕತೆಯ ರಾಟೆ ತಿರುಗಬೇಕು ಎಂಬುದು ಸಾರ್ವಕಾಲಿಕ ವಾಸ್ತವತೆ. ಹೀಗಾಗಿ ನಗಣ್ಯ ಎನಿಸುವಷ್ಟರ ಮಟ್ಟಿಗೆ ತೆರಿಗೆಯ ಪ್ರಮಾಣ ತಗ್ಗಲಿ ಎಂದು ನಿರೀಕ್ಷಿಸುವುದು ತರವಲ್ಲ. ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಅದು ಕಾರ್ಯಸಾಧುವೂ ಅಲ್ಲ, ಕಾರ್ಯಸಾಧ್ಯವೂ ಅಲ್ಲ. ಆದರೆ ‘ಅತಿರೇಕದ್ದು‘ ಮತ್ತು ‘ತೀರಾ ಕಡಿಮೆ‘ ಎಂಬ ಎರಡು ತುದಿಗಳಿಗೆ ಹೊರತಾದ ಮಧ್ಯಸ್ಥಮಾರ್ಗವನ್ನು ನೆಚ್ಚಿದರೆ, ಆರ್ಥಿಕತೆಗೂ ಧಕ್ಕೆಯಾಗುವುದಿಲ್ಲ ಮತ್ತು ಶ್ರೀಸಾಮಾನ್ಯನ ಹೆಗಲಮೇಲಿನ ಹೊರೆಯೂ ಇಳಿಯುತ್ತದೆ ಎಂಬುದು ದಿಟ. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಗಮನ ಹರಿಸುವಂತಾಗಲಿ.

Leave a Reply

Your email address will not be published. Required fields are marked *

Back To Top