Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಚೀನೀ ಗುಮ್ಮನನ್ನು ಕಟ್ಟಿಹಾಕಲು ಮೋದಿ ಮಾಯಾಜಾಲ

Wednesday, 26.07.2017, 3:00 AM       No Comments

ಭಾರತೀಯ ಸೇನೆ ದೊಕ್ಲಾಮ್ಲ್ಲಿ ಚೀನೀ ಸೇನೆಗೆ ಮುಖಾಮುಖಿಯಾಗಿ ನಿಂತು ಐದು ವಾರಗಳಾಗುತ್ತಿವೆ. ಹತ್ತುಸಾವಿರ ಅಡಿಗಳೆತ್ತರದ ಜನವಿಹೀನ ಪ್ರದೇಶದಲ್ಲಿ ಎದುರುಬದುರು ನಿಂತಿರುವ ಸೈನಿಕರು ಸದ್ಯದಲ್ಲೇ ರಣಕಹಳೆ ಊದಿ ಏಷಿಯಾದ ಈ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಯುದ್ಧದ ಆರಂಭವನ್ನು ಜಗತ್ತಿಗೆ ಸಾರಲಿದ್ದಾರೆಯೇ?

ಬೀಜಿಂಗ್​ನಿಂದ ಬರುತ್ತಿರುವ ಸೂಚನೆಗಳು ಹಾಗೆಯೇ ಇವೆ. ಆದರೆ ನವದೆಹಲಿಯಿಂದ ಬರುತ್ತಿರುವುದು ಆತಂಕಕ್ಕೆ ಕಾರಣವಿಲ್ಲವೆಂಬ ಸಂಯಮದ, ಸಮಾಧಾನದ ಸೂಚನೆಗಳು. ಸೂಕ್ಷವಾಗಿ ಗಮನಿಸಿದರೆ ‘ಸದ್ಯಕ್ಕೆ‘ ಯುದ್ಧ ಆರಂಭವಾಗುವುದಿಲ್ಲ ಎಂಬ ತೀರ್ವನಕ್ಕೆ ನಾವು ಬರಬಹುದು, ಸದ್ಯಕ್ಕೆ ಇಲ್ಲ ಎಂದರೆ ಈ ವರ್ಷ ಯುದ್ಧದ ಭಯವಿಲ್ಲ ಎಂದೂ ನಿರಾಳವಾಗಬಹುದು. ಇದು ಹೇಗೆಂದು ನೋಡೋಣ. ಮೊದಲಿಗೆ, ಚೀನಾಗೆ ಯುದ್ಧಕ್ಕಿಳಿಯುವ ಸಾಮರ್ಥ್ಯ ನಿಜಕ್ಕೂ ಇದೆಯೇ?

ಚೀನಾದ ಭೂಸೇನೆ ನಮ್ಮದರ ದುಪ್ಪಟ್ಟಿದೆ. ವಾಯುಸೇನೆ ಹಾಗೂ ನೌಕಾಸೇನೆಗಳಲ್ಲೂ ಚೀನಾ ಮುಂದು. ಆದರೆ, ಸಾಮರ್ಥ್ಯದಲ್ಲೂ ಇವು ಬೃಹತ್ತಾಗಿವೆಯೇ? ಚೀನೀ ಸೇನೆ 1950ರ ದಶಕದಿಂದಲೂ ವಿಶ್ವದ ಅತಿದೊಡ್ಡ ಸೇನೆ. ಆದರೆ ರಣರಂಗದಲ್ಲಿ ಅದರ ಸಾಧನೆ ಅದರ ಸಂಖ್ಯೆಗೆ ಗೌರವ ತರುವಂತಹದೇನೂ ಅಲ್ಲ. ಜತೆಗೆ, ದೃಢವಾಗಿ ನಿಂತ ಎದುರಾಳಿಯೆದುರು ಧೈರ್ಯದಿಂದ ನಿಲ್ಲುವ ಛಲವನ್ನು ಚೀನೀ ಸೈನಿಕರಿರಲಿ, ಆ ದೇಶದ ನಾಯಕರೂ ಪ್ರದರ್ಶಿಸಿಲ್ಲ. ತಮ್ಮ ಜನಸಂಖ್ಯೆಯನ್ನೇ ಒಂದು ಅಸ್ತ್ರವನ್ನಾಗಿ ಬಳಸಿ ಎದುರಾಳಿಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಚೀನೀಯರು ನಿಸ್ಸೀಮರು. ಅವರ ಈ ತಂತ್ರ ಮೊದಲ ಬಾರಿಗೆ ಜಗತ್ತಿಗೆ ಗೋಚರವಾದದ್ದು 1950-53ರ ಕೊರಿಯಾ ಯುದ್ಧದಲ್ಲಿ. ಅಲ್ಲಿ, ಅಮೆರಿಕನ್ ಸೇನೆಗೆ ಅದೆಷ್ಟೇ ಸೈನಿಕರು ಬಲಿಯಾದರೂ ಇನ್ನಷ್ಟು ಮತ್ತಷ್ಟು ಸೈನಿಕರನ್ನು ಚೀನಾ ರಣರಂಗಕ್ಕೆ ಅಟ್ಟುತ್ತಿತ್ತು. ಅಂತಿಮ ಲೆಕ್ಕಾಚಾರದಲ್ಲಿ, ಆ ಯುದ್ಧದಲ್ಲಿ ಮಡಿದ ಪ್ರತಿ ಒಬ್ಬ ಅಮೆರಿಕನ್ ಸೈನಿಕನಿಗೆ ಪ್ರತಿಯಾಗಿ ಏಳು ಚೀನೀ ಸೈನಿಕರು ಜೀವ ತೆತ್ತಿದ್ದರು!

ಇನ್ನು ಚೀನೀ ನಾಯಕರ ಸ್ಥೈರ್ಯವನ್ನೊಮ್ಮೆ ನೋಡೋಣ. ತನ್ನ ತೀರಕ್ಕೆ ಅಂಟಿಕೊಂಡಿದ್ದ ಕ್ವಿಮೋಯ್ ಹಾಗೂ ಮತ್ಸು ದ್ವೀಪಗಳನ್ನು ತೈವಾನ್​ನಿಂದ ಕಸಿದುಕೊಳ್ಳಲು 1958ರಲ್ಲಿ ಚೀನಾ ಪ್ರಯತ್ನಿಸಿದಾಗ ಅಮೆರಿಕದ ಐಸೆನ್​ಹೋವರ್ ಸರಕಾರ ಅಣ್ವಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಸಿದಾಗ ಮಾವೋ ಸರಕಾರ ಸುಮ್ಮನಾಯಿತು. ಆನಂತರ ಆ ದ್ವೀಪಗಳತ್ತ ಚೀನಾ ಇದುವರೆಗೂ ತಿರುಗಿಯೂ ನೋಡಿಲ್ಲ. ಈಗ ಚೀನಾ-ಸೋವಿಯೆತ್ ಯೂನಿಯನ್ ಕದನವನ್ನು ನೋಡೋಣ. ಉಸ್ಸೂರಿ ನದಿಯಲ್ಲಿನ ದಮೋನ್​ಸ್ಕಿ ದ್ವೀಪದಲ್ಲಿದ್ದ ಪುಟ್ಟ ಸೋವಿಯೆತ್ ಸೇನಾ ಠಿಕಾಣೆಯ ಮೇಲೆ ಮಾರ್ಚ್ 1969ರಲ್ಲಿ ಚೀನಿ ಸೈನಿಕರು ಹಠಾತ್ ದಾಳಿಯೆಸಗಿ ಆಕ್ರಮಿಸಿಕೊಂಡರು. ಆನಂತರ ಮೇ-ಸೆಪ್ಟೆಂಬರ್ ಅವಧಿಯಲ್ಲಿ ರಷಿಯನ್ನರು ತಕ್ಕ ತಯಾರಿ ಮಾಡಿಕೊಂಡು ಕಝಾಕಸ್ತಾನ್-ಉಯ್ಘರ್ ಝಿನ್​ಜಿಯಾಂಗ್ ಗಡಿಯಲ್ಲಿ ಚೀನೀ ಸೇನೆಯನ್ನು ಹಲವಾರು ಕಡೆ ಹಲವಾರು ಸಲ ಚಚ್ಚಿದರು. ಹೆದರಿದ ಚೀನಿಯರು ಹಳೆಯ ವೈರತ್ವ ಮರೆತು ಅಮೆರಿಕದ ಸೆರಗಿನ ಮರೆಯನ್ನರಸಿ ಓಡಿದರು.

ಆ ಸಮಯದಲ್ಲಿ ರಷಿಯನ್ನರು ಬಯಸಿದ್ದರೆ ಚೀನಾವನ್ನು ಇನ್ನೆಂದೂ ಮೇಲೇಳಲಾಗದ ಹಾಗೆ ಮಾಡಬಹುದಾಗಿತ್ತು. 1952ರಲ್ಲಿ ಪೂರ್ವ ಜರ್ಮನಿ, 1956ರಲ್ಲಿ ಹಂಗೆರಿ ಮತ್ತು 1968ರಲ್ಲಿ ಜೆಕೋಸ್ಲೊವೇಕಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿ ಅವುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದರಲ್ಲಿ ಮಾಸ್ಕೋ ಯಶಸ್ವಿಯಾಗಿತ್ತು. ಆದರೆ ಅಂತಹದೇ ಬಲಪ್ರಯೋಗವನ್ನು ಚೀನಾ ಮೇಲೆ ಮಾಡಲು ರಷಿಯನ್ನರು ಹಿಂಜರಿದರು. ಅವರು ಹೆದರಿದ್ದು ಚೀನಾದ ಕೈಯಲ್ಲಿದ್ದ ಅಣ್ವಸ್ತ್ರಗಳಿಗಿಂತಲೂ ಹೆಚ್ಚಾಗಿ ಚೀನೀ ಜನಸಂಖ್ಯೆಗೆ. ಈ ಬಗ್ಗೆ ವಿಶ್ಲೇಷಕರು ಒಂದು ಕುತೂಹಲಕರ ಕಥೆ ಹೇಳುತ್ತಾರೆ. ಅದರ ಪ್ರಕಾರ- ಚೀನಾ ವಿರುದ್ಧ ಯಶಸ್ವಿಯಾಗುವುದರ ಸಾಧ್ಯತೆಯನ್ನು ವಿಶ್ಲೇಷಿಸಿ ವರದಿ ಸಲ್ಲಿಸುವಂತೆ ರಕ್ಷಣಾ ತಂತ್ರಜ್ಞರ ತಂಡವೊಂದನ್ನು ಸೋವಿಯೆತ್ ಸರ್ಕಾರ ಕೇಳಿಕೊಂಡಿತು. ಆ ತಂಡ ಸಲ್ಲಿಸಿದ ವರದಿಯ ಸಂಕ್ಷಿಪ್ತ ರೂಪ: ‘ಸೋವಿಯೆತ್-ಚೀನಾ ಯುದ್ಧ ಐದು ದಿನಗಳವರೆಗೆ ಮಾತ್ರ ನಡೆಯುತ್ತದೆ. ಮೊದಲ ದಿನ ನಾವು ಒಂದುಸಾವಿರ ಚೀನೀಯರನ್ನು ಯುದ್ಧ ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಎರಡನೆಯ ದಿನ ಹತ್ತುಸಾವಿರ, ಮೂರನೆಯ ದಿನ ಒಂದು ಲಕ್ಷ, ನಾಲ್ಕನೆಯ ದಿನ ಹತ್ತು ಲಕ್ಷ, ಐದನೆಯ ದಿನ ಒಂದು ಕೋಟಿ ಚೀನಿಯರನ್ನು ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಮತ್ತು… ಆರನೆಯ ದಿನ ನಾವು ಶರಣಾಗತರಾಗುತ್ತೇವೆ!‘. ಅಚ್ಚರಿಯಾಗುತ್ತಿದೆಯೇ? ಯುದ್ಧಕೈದಿಗಳ ಸಂಖ್ಯೆ ದಿನದಿನಕ್ಕೆ ಹತ್ತುಪಟ್ಟು ಹೆಚ್ಚುತ್ತಾಹೋದಂತೆ ಆರನೆಯ ದಿನ ರಷಿಯನ್ನರು ಹತ್ತುಕೋಟಿ ಚೀನೀ ಕೈದಿಗಳನ್ನು ಸೈಬೀರಿಯಾಗೆ ಕರೆತಂದರೆ ಅಲ್ಲಿ ರಷಿಯನ್ನರಿಗಿಂತ ಚೀನೀಯರೇ ಹೆಚ್ಚಾಗಿಬಿಡುತ್ತಾರೆ! ವಿಶಾಲ ಸೈಬೀರಿಯಾ ನಿರಾಯಾಸವಾಗಿ ಚೀನೀ ನೆಲವಾಗಿಬಿಡುತ್ತದೆ! ವರದಿ ನೋಡಿದ ಬಲಾಢ್ಯ ಸೋವಿಯೆತ್ ಸರ್ಕಾರ ಯುದ್ಧದ ಯೋಚನೆ ಕೈಬಿಟ್ಟಿತು.

ಚೀನಾ ತನ್ನ ಇದುವರೆಗಿನ ಕೊನೆಯ ಯುದ್ಧ ಮಾಡಿದ್ದು ಪುಟ್ಟ ವಿಯೆಟ್ನಾಂ ವಿರುದ್ಧ, 1979ರಲ್ಲಿ. ಆ ಪುಟ್ಟ ರಾಷ್ಟ್ರಕ್ಕೆ ಪಾಠ ಕಲಿಸುತ್ತೇವೆ ಎಂದು ಅಲ್ಲಿಗೆ ಹೋದ ಚೀನೀ ಸೇನೆ ತಾನೇ ಮರೆಯಲಾರದ ಪಾಠ ಕಲಿತು ಹಿಂದಕ್ಕೆ ಓಡಿತು.

ಹೋಗಲಿ, ಭಾರತದ ವಿರುದ್ಧವೇ ಚೀನೀ ರೆಕಾರ್ಡ್ ಹೇಗಿದೆ? 1962ರಲ್ಲಿ ಚೀನಾಗೆ ಸೋತದ್ದು ಭಾರತೀಯ ರಾಜಕೀಯ ನಾಯಕತ್ವ, ಭಾರತೀಯ ಸೇನೆಯಲ್ಲ. ತಯಾರಿಯೇ ಇಲ್ಲದ ಭಾರತೀಯ ಸೇನೆಯ ವಿರುದ್ಧ ಚೀನೀಯರು ಕೊರಿಯಾದಲ್ಲಿ ಮಾಡಿದ್ದಂತೆ ಪ್ರವಾಹದೋಪಾದಿಯಲ್ಲಿ ಎರಗಿಬಂದರು. ಕಾರಾಕೊರಂ ಪರ್ವತಗಳಿಂದಾಗಿ ಭಾರತದಿಂದ ಪ್ರತ್ಯೇಕವಾಗಿದ್ದು, ಸಾಮರಿಕವಾಗಿ ಭಾರತಕ್ಕೆ ಅನನುಕೂಲವಾಗಿದ್ದ ಅಕ್ಸಾಯ್ ಚಿನ್ ಅನ್ನು ಚೀನೀಯರು ಸುಲಭವಾಗಿಯೇ ಆಕ್ರಮಿಸಿಕೊಂಡರೇನೋ ನಿಜ, ಆದರೆ ಪೂರ್ವದಲ್ಲಿ ಚೀನೀ ಸೇನೆ ತವಾಂಗ್ ಮತ್ತು ಸೆ ಲಾಗಳನ್ನು ದಾಟಿ ಬೊಂಡಿ ಲಾವರೆಗೆ ಬಂದದ್ದು ಅಗಣಿತ ಸೈನಿಕರನ್ನು ರಣರಂಗಕ್ಕೆ ದೂಡುವುದರ ಮೂಲಕ. 1962ರ ನವೆಂಬರ್ 18ರಂದು ಲಡಾಖ್ ಗಡಿಯ ರಝಾಂಗ್ ಲಾ ಠಿಕಾಣೆಯಲ್ಲಿದ್ದ ಹದಿಮೂರನೇ ಕುಮಾಂವೂ ರೆಜಿಮೆಂಟಿನ 120 ಭಾರತೀಯ ಸೈನಿಕರ ಮೇಲೆ ಮೊದಲಿಗೆ ಸುಮಾರು 350 ಚೀನೀ ಸೈನಿಕರು ಆಕ್ರಮಣ ಮಾಡಿದರು. ಅಷ್ಟನ್ನೂ ಭಾರತೀಯ ಸೈನಿಕರು ನಿರ್ನಾಮ ಮಾಡಿದಾಗ ಚೀನೀಯರು ಮತ್ತಷ್ಟು ಸೈನಿಕರನ್ನು ಅಟ್ಟಿದರು. ಅಂತಿಮವಾಗಿ 120 ಭಾರತೀಯ ಸೈನಿಕರು 1,300ಕ್ಕಿಂತಲೂ ಹೆಚ್ಚು ಅಂದರೆ ತಮ್ಮ ಹತ್ತುಪಟ್ಟು ಚೀನೀಯರನ್ನು ಹತ್ಯೆಗೈದರು. ಭಾರತೀಯ ಪಾಳಯದ ಜೀವಹಾನಿಯ ಸಂಖ್ಯೆ ಕೇವಲ 114. ಭಾರತದಲ್ಲಿ ಆಗ ಸಮರ್ಥ, ವಿವೇಕಿ ರಾಜಕೀಯ ನಾಯಕತ್ವವಿದ್ದಿದ್ದರೆ, ಭಾರತೀಯ ಸೇನೆಗೆ ಅಗತ್ಯ ಸೌಲಭ್ಯಗಳನ್ನು ಕೊಟ್ಟಿದ್ದಿದ್ದರೆ 62ರ ಯುದ್ಧದ ಗತಿ ಸಂಪೂರ್ಣವಾಗಿ ಬದಲಾಗಿಹೋಗಿರುತ್ತಿತ್ತು. ಅಂತಹದೊಂದು ಹೆಮ್ಮೆಯ ಘಟನೆ ಘಟಿಸಿದ್ದು ಐದು ವರ್ಷಗಳ ನಂತರ. ಸೆಪ್ಟೆಂಬರ್ 11, 1967ರಂದು ನಥೂ ಲಾ ಮೇಲೆ ಆಕ್ರಮಣಗೈದ ಚೀನೀಯರನ್ನು ಭಾರತೀಯ ಸೇನೆ ಬಡಿದು ಓಡಿಸಿದ್ದಲ್ಲದೇ ಅಕ್ಟೋಬರ್ 1ರಂದು ಹತ್ತಿರದ ಚೊ ಲಾದಲ್ಲಿ ಮತ್ತೆ ತಂಟೆ ತೆಗೆದ ಚೀನೀಯರನ್ನು ಮೂರು ಕಿಲೋಮೀಟರ್ ದೂರಕ್ಕೆ ಅಟ್ಟಿಸಿಕೊಂಡು ಹೋಯಿತು. ಆಗ ಕಳೆದುಕೊಂಡ ನೆಲವನ್ನು ಮತ್ತೆ ವಾಪಸ್ ಪಡೆಯುವ ಪ್ರಯತ್ನವನ್ನು ಚೀನಿಯರು ಇದುವರೆಗೆ ಮಾಡಿಲ್ಲ.

ಹೀಗೆ ಸೋಲುಗಳನ್ನೇ ಅನುಭವಿಸಿದ ಚೀನೀ ಸೇನೆಗೆ ಅದು ಸಾಲದು ಎಂಬಂತೆ 1979ರ ನಂತರ ಯಾವ ಯುದ್ಧದ ಅನುಭವವೂ ಇಲ್ಲ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಿಯಾಚಿನ್​ನಂತಹ ದುರ್ಗಮ ಪ್ರದೇಶದಲ್ಲಿ ಪಾಕಿಸ್ತಾನೀ ಸೇನೆಗೆ ಮಣ್ಣುಮುಕ್ಕಿಸಿದೆ, ಕಾರ್ಗಿಲ್ ಯುದ್ಧವನ್ನು ಜಯಿಸಿದೆ, ಕಾಶ್ಮೀರದ ದುರ್ಗಮ ಪರ್ವತಗಳಲ್ಲಿ ಭಯೋತ್ಪಾದನೆಯ ವಿರುದ್ಧ ಸೆಣಸುತ್ತಿದೆ. ಇದರರ್ಥವೇನೆಂದರೆ ಎತ್ತರದ ಪರ್ವತಪ್ರದೇಶಗಳಲ್ಲಿ ಭಾರತೀಯ ಸೇನೆಗೆ ಯುದ್ಧದ ಅನುಭವ/ತರಬೇತಿ ನಿರಂತರವಾಗಿ ದೊರಕಿದೆ. ಇದರ ಅರಿವು ಚೀನಾಗಿದೆ. ಈಗ ಭಾರತೀಯ ಸೇನೆಗಿರುವ ಅತಿ ದೊಡ್ಡ ಅನುಕೂಲವೆಂದರೆ ಸಮರ್ಥ ರಾಜಕೀಯ ನಾಯಕತ್ವ. 1962ರಂತೆ ಈಗ ಇಲ್ಲ. ನಿರಂತರವಾಗಿ ಅಮೆರಿಕಾವನ್ನು ಬೈಯುತ್ತಾ, ಚೀನಾವನ್ನು ಹೊಗಳುತ್ತಾ ಇದ್ದ ನೆಹರೂ ಯುದ್ಧ ಆರಂಭವಾದೊಡನೇ ಸಹಾಯ ಯಾಚಿಸಿ ಅಧ್ಯಕ್ಷ ಕೆನಡಿಯವರಿಗೆ ಪತ್ರ ಬರೆದರು. ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡಲು ಹೊರಟರು.

1986ರಲ್ಲಿ ಚೀನೀ ಸೇನೆ ಅರುಣಾಚಲದ ಸೊಮ್ೊರಾಂಗ್ ಚು ಪ್ರದೇಶದಲ್ಲಿ ಅತಿಕ್ರಮಣ ಮಾಡಿದಾಗ ಅದಕ್ಕೆ ಪಾಠ ಕಲಿಸಲು ವೈಯುಕ್ತಿಕವಾಗಿ ನಿರ್ಧರಿಸಿದ್ದು ನಮ್ಮ ಭೂಸೇನಾ ದಂಡನಾಯಕ ಜನರಲ್ ಸುಂದರ್​ಜೀ. ಮೊದಲಿಗೆ ಹತಂಗ್ ಲಾನಲ್ಲಿ ಚೀನಿಯರ ಮೇಲೆ ಎರಗಿ ಸೇಡು ತೀರಿಸಿಕೊಂಡ ಭಾರತೀಯ ಸೇನೆ ಅಂತಹದೇ ಸಾಹಸಗಳಿಗೆ ಇತರೆಡೆ ಮುಂದಾಯಿತು. ಸುದ್ದಿ ತಿಳಿದ ಪ್ರಧಾನಿ ರಾಜೀವ್ ಗಾಂಧಿ ಕಳವಳಗೊಂಡರು. 1986ರ ಡಿಸೆಂಬರ್ 4ರಂದು ನೇವಿ ಡೇ ಕಾರ್ಯಕ್ರಮದ ನಂತರ ಕರೆದ ತುರ್ತು ಸಭೆಯಲ್ಲಿ ಚೀನಾ ವಿರುದ್ಧ ಯಾವ ಸಾಹಸಕ್ಕೂ ಕೈಹಾಕಬಾರದೆಂದು ಪ್ರಧಾನಿಯವರು ಸುಂದರ್​ಜೀಯವರಿಗೆ ತಾಕೀತು ಮಾಡಲು ಹೋದಾಗ ಆ ವೀರ ಸೇನಾನಿ ಹೇಳಿದ್ದು: ‘62ರಲ್ಲಿ ನಾವು ಅವಮಾನ ಅನುಭವಿಸಿದ್ದು ಸೇನೆಯ ಕೆಲಸದಲ್ಲಿ ಅನಗತ್ಯ ರಾಜಕೀಯ ಹಸ್ತಕ್ಷೇಪ ನಡೆದದ್ದರಿಂದ. ಈಗ ನಮ್ಮ ಕೆಲಸ ಮಾಡಲು ನಮಗೆ ಬಿಡಿ, ನಿಮ್ಮ ಕೆಲಸದತ್ತ ನೀವು ಗಮನ ಕೊಡಿ.‘ ಪ್ರತಿಯಾಡಲು ರಾಜೀವ್ ಗಾಂಧಿಯವರಿಗೆ ಅವಕಾಶವೇ ಇರಲಿಲ್ಲ. ಪರಿಣಾಮವಾಗಿ, 1962ರ ಅವಮಾನದ ಕೊಳೆಯನ್ನು ತಕ್ಕಮಟ್ಟಿಗಾದರೂ ಭಾರತೀಯ ಸೇನೆ ತೊಡೆದುಹಾಕಿತು.

ಅದೃಷ್ಟವಶಾತ್ ಈಗ ನಮ್ಮ ರಾಜಕೀಯ ಹಾಗೂ ಸೇನಾ ನಾಯಕತ್ವದ ನಡುವೆ ಅದ್ಭುತ ತಾಳಮೇಳವಿದೆ. ಪರಿಣಾಮವಾಗಿ, ಗಡಿಯ ನೂರು ಕಿಲೋಮೀಟರ್​ಗಳಷ್ಟು ಹತ್ತಿರದಲ್ಲಿ ಭಾರತ ಆರು ಯುದ್ಧವಿಮಾನ ನಿಲ್ದಾಣಗಳನ್ನು ಸ್ಥಾಪಿಸಿದೆ. ಕನಿಷ್ಠದೂರದ (ಠಜಟ್ಟಠಿ ್ಟ್ಞಛಿ) ಬ್ರಹ್ಮಾಸ್ತ್ರ ಎಂದೇ ಹೆಸರಾದ ಬ್ರಾಹ್ಮೋಸ್ ಕ್ಷಿಪಣಿಗಳನ್ನು ಹೊತ್ತ ಯುದ್ಧವಿಮಾನಗಳು ಆಗಸ್ಟ್ 2016ರಿಂದಲೂ ಯುದ್ಧಸನ್ನದ್ಧ ಸ್ಥಿತಿಯಲ್ಲಿವೆ. ದೊಕ್ಲಾಮ್ಲ್ಲಂತೂ ಭಾರತೀಯ ಸೇನೆ ಅತ್ಯಂತ ಸುಸ್ಥಿತಿಯಲ್ಲಿದೆ. ಅದಕ್ಕೆ ಹೋಲಿಸಿದರೆ ತಗ್ಗಿನ ಪ್ರದೇಶದಲ್ಲಿರುವ ಚೀನೀ ಸೇನೆಗೆ ಹೆಚ್ಚಿನ ಸಾಮರಿಕ ಅನುಕೂಲವಿಲ್ಲ. ಜತೆಗೆ, ಗಡಿಯಲ್ಲಿನ ಭಾರತೀಯ ಸೇನೆಯ ಡೊಕೊ ಲಾ ಠಿಕಾಣೆಗೆ ಒಳ್ಳೆಯ ಸಂಪರ್ಕ ವ್ಯವಸ್ಥೆ ಇದೆ. ಚೀನಾವನ್ನು ಎದುರಿಸಲು ಅಗತ್ಯವಾದ ಎಲ್ಲ ತಯಾರಿಯನ್ನೂ ಭಾರತ ಮಾಡಿಕೊಂಡೇ ದೊಕ್ಲಾಮ್ಲ್ಲಿ ಸೆಡ್ಡು ಹೊಡೆದುನಿಂತಿದೆ.

ವಾಸ್ತವದ ಅರಿವಿರುವ ಚೀನಾ ರಣಕಹಳೆ ಮೊಳಗಿಸುವ ತಪ್ಪನ್ನು ಮಾಡಲಾರದು. ಅದಕ್ಕೆ ಕಾರಣವಿದೆ. 1967 ಹಾಗೂ 1986-87ರಲ್ಲಿ ಚೀನಾ ಅನುಭವಿಸಿದ ಸೋಲುಗಳು ಜಗತ್ತಿನ ಗಮನಕ್ಕೆ ಬರಲಿಲ್ಲ. ಅದೊಂದು ಬಗೆಯಲ್ಲಿ ನಿರ್ಜನ ಓಣಿಯಲ್ಲಿ ವೈರಿಯನ್ನು ಕೆಣಕಿ ಒದೆತಿಂದು ಓಡಿದ ಹಾಗೆ. ಆದರೆ ಈಗ ಚೀನಾ ತಾನೇ ಜಗತ್ತಿನ ಗಮನವನ್ನು ದೊಕ್ಲಾಮ್ತ್ತ ಸೆಳೆದಿದೆ. ಅಂದರೆ ಜನನಿಬಿಡ ರಸ್ತೆಯಲ್ಲಿ ವೈರಿಯನ್ನು ಕೆಣಕಿದ ಹಾಗೆ. ಹೆದರಿ ಓಡಿದರೆ ಅವಮಾನ ಗ್ಯಾರಂಟಿ. ಹಾಗಾಗಿ ಮಾನ ಉಳಿಸಿಕೊಳ್ಳಲು ಗಂಟಲು ಎತ್ತರಿಸಿ ಧಮಕಿ ಹಾಕುತ್ತಿರಬೇಕು. ಎಲ್ಲಿಯವರೆಗೆ ಈ ಆಟ? ಚಳಿಗಾಲ ಆರಂಭವಾಗುತ್ತಿದ್ದಂತೇ, ದೊಕ್ಲಾಮ್ ಹಿಮದಲ್ಲಿ ಮುಚ್ಚಿಹೋಗುತ್ತದೆ. ಆಗ ಸದ್ದಿಲ್ಲದೇ ಜಾಗ ಖಾಲಿ ಮಾಡಿದರಾಯಿತು, ಮಾನ ಉಳಿಯುತ್ತದೆ! ಇದು ಚೀನೀ ಹಂಚಿಕೆ.

ಒಂದುವೇಳೆ, ಅವಮಾನಕ್ಕೆ ತಯಾರಿಲ್ಲದ ಚೀನಾ ತನಗೆ ಅನುಕೂಲವಿರುವ ಪಶ್ಚಿಮದ ಅಕ್ಸಾಯ್ ಚಿನ್​ನಲ್ಲಿ ಭಾರತದ ವಿರುದ್ಧ ಕನಿಷ್ಠ ಪ್ರಮಾಣದ ಹಠಾತ್ ದಾಳಿ ನಡೆಸಿ ತಾನೇ ಏಷಿಯಾದ ನಾಯಕ ಎಂದು ಜಗತ್ತಿಗೆ ತೋರಿಸಲು ಪ್ರಯತ್ನಿಸಬಹುದು. ಹಾಗೆನೋಡಿದರೆ, ಚೀನಾವನ್ನು ಯುದ್ಧರಂಗಕ್ಕೆಳೆಯುವ ಪ್ರಯತ್ನವನ್ನು ಮೋದಿ ಸರ್ಕಾರ ತಣ್ಣಗೆ ಮಾಡುತ್ತಿರುವಂತೇ ಕಾಣುತ್ತಿದೆ. ಎಲ್ಲೆಡೆ ತಯಾರಿ ಮಾಡಿಕೊಂಡ ನಂತರವೇ ದೊಕ್ಲಾಮ್ಲ್ಲಿ ಚೀನೀ ಸೇನೆಯನ್ನು ಎದುರಿಸಲು ಸರ್ಕಾರ ಸೇನೆಗೆ ಹೇಳಿದೆ. ಜತೆಗೆ, ಶಸ್ತ್ರಾಸ್ತ್ರಗಳ ದಾಸ್ತಾನು ಕೇವಲ ಹತ್ತುದಿನಗಳಿಗಾಗುವಷ್ಟು ಮಾತ್ರವಿದೆ ಎಂಬ ನಾಲ್ಕು ವರ್ಷಗಳಷ್ಟು ಹಳೆಯ ಮಾಹಿತಿಯನ್ನು ಈಗ ಬಿಡುಗಡೆ ಮಾಡಿದೆ. ಇದು ಚೀನೀಯರಲ್ಲಿ ಹುಮ್ಮಸ್ಸು ತುಂಬಿಸುವ ಉದ್ದೇಶಪೂರ್ವಕ ಪ್ರಯತ್ನದಂತೆ ಕಾಣುತ್ತಿದೆ. ಇದೆಲ್ಲವೂ ಸೂಚಿಸುವುದು ನಮ್ಮ ಗಡಿಗಳ ರಕ್ಷಣೆಗೆ ಚೀನಾದಿಂದ ಮುಂದೆಂದೂ ಅಪಾಯ ಒದಗದಂತೆ ತಡೆಯಲು ಸರ್ಕಾರ ರಹಸ್ಯವಾಗಿ ರೂಪಿಸಿರಬಹುದಾದ ದೂರಗಾಮಿ ಯೋಜನೆಯೊಂದನ್ನು. ಅಗತ್ಯವಾದ ಸೇನಾ, ರಾಜತಾಂತ್ರಿಕ ತಯಾರಿಯನ್ನೆಲ್ಲಾ ಮಾಡಿಕೊಂಡೇ ಮೋದಿ ಸರ್ಕಾರ ಅಖಾಡಕ್ಕಿಳಿದಂತಿದೆ. ಪ್ರಸಕ್ತ ಹಣಾಹಣಿಯಲ್ಲಿ ಚೀನಾ ಹಿಂದೆಗೆದರೆ ಭಾರತಕ್ಕೆ ರಾಜತಾಂತ್ರಿಕ ಗೆಲುವು, ಅಂದರೆ ಪಾಕಿಸ್ತಾನವೂ ಸೇರಿದಂತೆ ಈ ವಲಯದ ಯಾವುದೇ ಸಣ್ಣ ರಾಷ್ಟ್ರ ಚೀನೀ ಗುಮ್ಮನನ್ನು ಮುಂದೆ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲದಂತಾಗುತ್ತದೆ. ಒಂದುವೇಳೆ, ಚೀನಾ ಬೇರೆಡೆ ತಂಟೆ ತೆಗೆದರೆ ಅದಕ್ಕೆ ಪ್ರತಿಬಾಣ ಬಹುಶಃ ಸಿದ್ಧವಾಗಿಯೇ ಇದೆ. ಯಾಕೆಂದರೆ, ಈಗ ಕೇಂದ್ರದಲ್ಲಿರುವುದು ದೇಶದ ಹಿತವನ್ನೇ ಗುರಿಯಾಗಿರಿಸಿಕೊಂಡಿರುವ ರಾಷ್ಟ್ರೀಯವಾದಿ ಸರ್ಕಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

 

Leave a Reply

Your email address will not be published. Required fields are marked *

Back To Top