Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಚೀನಾ ತಂತ್ರಕ್ಕೆ ಬೇಕು ಚತುರ ಪ್ರತಿತಂತ್ರ

Friday, 21.04.2017, 3:00 AM       No Comments

ಚೀನಾವು ಭಾರತದ ನೆರೆದೇಶಗಳಿಗೆ ನೆರವು ನೀಡುವುದರ ಮೂಲಕ ಅಲ್ಲೆಲ್ಲ ತನ್ನ ಪ್ರಾಬಲ್ಯ ಸ್ಥಾಪಿಸಲು ಹವಣಿಸುತ್ತಲೇ ಇದೆ. ಶ್ರೀಲಂಕಾದಂಥ ದೇಶ ಇದರ ದುಷ್ಪರಿಣಾಮ ಕಂಡಿದ್ದರೂ ಉಳಿದ ದೇಶಗಳು ಅದರಿಂದ ಪಾಠ ಕಲಿಯುತ್ತಿಲ್ಲ. ಇಂಥ ಹೊತ್ತಿನಲ್ಲಿ ಭಾರತ ಬಹು ಎಚ್ಚರಿಕೆಯ ನಡೆ ಇರಿಸಬೇಕಿದೆ.

|ಎನ್. ಪಾರ್ಥಸಾರತಿ

ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಅವರು ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದ ತವಾಂಗ್​ಗೆ ಭೇಟಿ ನೀಡಿದ್ದಕ್ಕೆ ಚೀನಾ ಸಿಟ್ಟಿನಿಂದ ಪ್ರತಿಭಟಿಸಿದ್ದು ನಿಮಗೂ ನೆನಪಿರಬಹುದು. ಇಲ್ಲೊಂದು ಸಂಗತಿ ಗಮನಿಸಬೇಕು. ಸಾಮಾನ್ಯವಾಗಿ ಇಂತಹ ವಿಷಯಗಳಲ್ಲಿ ಚೀನಾವನ್ನು ಓಲೈಸುವ ತನ್ನ ಮಾಮೂಲಿ ಧೋರಣೆಗೆ ಬದಲಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸುವಂತೆ ಚೀನಾಕ್ಕೆ ತಾಕೀತು ಮಾಡಿದರು.

ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಭಾರತದ ಹಿತಾಸಕ್ತಿಗಳಿಗೆ ಅಡ್ಡಗಾಲಿಕ್ಕುವ ಕೆಲಸವನ್ನು ಚೀನಾ ಮಾಡುತ್ತಲೇ ಇದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯನಾಗುವ ಹಾಗೂ ಪರಮಾಣು ಪೂರೈಕೆದಾರರ ಸಮೂಹ ಸೇರುವ ಭಾರತದ ಯತ್ನಗಳನ್ನು ಚೀನಾ ತಡೆದಿದೆ. ಜೆಇಎಂ ಭಯೋತ್ಪಾದಕ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರುವುದಕ್ಕೂ ಚೀನಾವೇ ಅಡ್ಡಿ. ಆಸಿಯಾನ್ ಪ್ರಾದೇಶಿಕ ವೇದಿಕೆ, ಪೂರ್ವ ಏಷ್ಯಾ ಶೃಂಗ ಮತ್ತು ಇತರ ಆರ್ಥಿಕ ಭದ್ರತಾ ವೇದಿಕೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಅದು ವಿರೋಧಿಸುತ್ತಲೇ ಇದೆ.

ತಾನು ಪ್ರಬಲ ಜಾಗತಿಕ ಶಕ್ತಿಯಾಗಬೇಕೆಂಬುದು ಚೀನಾದ ಕಡುಹಂಬಲ. ಕಳೆದ ಕೆಲವು ದಶಕಗಳಲ್ಲಿ ಆರ್ಥಿಕತೆಯು ಅತಿವೇಗವಾಗಿ ಬೆಳೆದ ಬಳಿಕ ಅದು ದಕ್ಷಿಣ ಚೀನಾ ಸಮುದ್ರ ಮಾತ್ರವೇ ಅಲ್ಲ ಭಾರತದ ದಕ್ಷಿಣಕ್ಕಿರುವ ಹಿಂದೂ ಮಹಾಸಾಗರದಲ್ಲಿ ತನ್ನ ಶಕ್ತಿಶಾಲಿ ನೌಕಾಪಡೆಯನ್ನು ಬೆಳೆಸುವ ಕಾರ್ಯಕ್ಕೂ ಮುಂದಾಗಿದೆ. ಭಾರತವನ್ನು ‘ಮುತ್ತಿನ ಹಾರದಂತೆ’ ಸುತ್ತುವರಿಯುವ ನೌಕಾ ಸವಲತ್ತಿನ ಜಾಲ ಹಾಗೂ ನೆಲೆಗಳನ್ನು ಸ್ಥಾಪಿಸುವ ಚೀನಾ ಯತ್ನಗಳು ಭಾರತದ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಕಳವಳಕಾರಿ. ಚೀನಾದ ಯುವಾನ್ -335 ಜಲಾಂತರ್ಗಾಮಿಯು 2015ರಲ್ಲಿ ಮರುಇಂಧನ ಭರ್ತಿ ನೆಪದಲ್ಲಿ ಕರಾಚಿಯಲ್ಲಿ ಲಂಗರು ಹಾಕಿತ್ತು. ಇಂತಹುದೇ ಹಲವಾರು ನಿಲುಗಡೆಗಳನ್ನು ಚೀನಾ ಜಲಾಂತರ್ಗಾಮಿಗಳು 2014ರಲ್ಲಿ ಕೊಲಂಬೊದಲ್ಲೂ ಮಾಡಿದ್ದವು. ಹಿಂದೂ ಮಹಾಸಾಗರದಲ್ಲಿನ ತನ್ನ ವ್ಯೂಹಾತ್ಮಕ ನೀತಿಗೆ ಚೀನಾ ಅದೆಷ್ಟು ಮಹತ್ವ ನೀಡಿದೆ ಎಂಬುದನ್ನು ಇದು ಸೂಚಿಸುತ್ತದೆ.

ಹಣಬಲದ ಹುನ್ನಾರ: ಚೀನಾ ಈಗ ಅಕ್ಷರಶಃ ಅಗಾಧ ವಿದೇಶೀ ವಿನಿಮಯ ಸಂಪತ್ತಿನ ಮೇಲೆ ಕೂತಿದೆ. ಇದನ್ನು ಬಳಸಿಕೊಂಡು ಚೀನಾವು ತನ್ನ ವ್ಯೂಹಾತ್ಮಕ ಹಿತಾಸಕ್ತಿಗಳ ರಕ್ಷಣೆಗಾಗಿ ಸಣ್ಣ ದೇಶಗಳಿಗೆ ದೊಡ್ಡ ಪ್ರಮಾಣದ ಅನುದಾನ, ರಿಯಾಯ್ತಿ ಸಾಲಗಳನ್ನು ನೀಡುತ್ತಿದೆ. ರಾಜಪಕ್ಸೆ ಅವರು ಶ್ರೀಲಂಕಾದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಚೀನೀ ಹೂಡಿಕೆಯೊಂದಿಗೆ ತಮ್ಮ ದೇಶವನ್ನು ‘ಸಿಂಗಾಪುರ’ ಆಗಿಸುವ ಕನಸು ಕಂಡರು. ಪರಿಣಾಮವಾಗಿ, ಹಂಬಂತೋಟಾದಲ್ಲಿ ರಾಜಪಕ್ಸೆ ಬಂದರು, ಸನಿಹದಲ್ಲೇ ವಿದ್ಯುತ್ ಘಟಕ, ವಿಮಾನ ನಿಲ್ದಾಣ ಮತ್ತು ಕ್ರಿಕೆಟ್ ಕ್ರೀಡಾಂಗಣಗಳು ನಿರ್ವಣಗೊಂಡವು. ಆದರೆ ಇವು ಯಾವುವೂ ಆರ್ಥಿಕವಾಗಿ ಸುಸ್ಥಿರವಾಗಲಿಲ್ಲ. ಹೀಗಾಗಿ ಸಾಲ ತೀರಿಸಲಾಗದ ಶ್ರೀಲಂಕಾ, ಬಂದರಿನ ಶೇಕಡಾ 80ರಷ್ಟು ಷೇರನ್ನು ಚೀನಾಕ್ಕೆ ವರ್ಗಾಯಿಸಿತು. ಜತೆಗೆ ಆಸುಪಾಸಿನ 15,000 ಎಕರೆ ಭೂಮಿಯನ್ನೂ ಕೈಗಾರಿಕಾ ಪಾರ್ಕ್ ಮತ್ತು ಆರ್ಥಿಕ ಒಳನಾಡು ಸ್ಥಾಪನೆಗಾಗಿ ನೀಡಿತು ಎಂಬ ವರದಿಗಳಿವೆ. ಈ ಪ್ರಸಂಗವನ್ನು ಚೆನ್ನಾಗಿಯೇ ಬಳಸಿಕೊಂಡ ಚೀನಾ ಆ ಬಂದರಿನ ಮೇಲೆ ವಸ್ತುಶಃ ತನ್ನ ನಿಯಂತ್ರಣವನ್ನು ಸಾಧಿಸಿತು, ಭಾರಿ ನಿರ್ಮಾಣ ನೆಲೆಯನ್ನೂ ನಿರ್ವಿುಸಿತು ಮತ್ತು ಶ್ರೀಲಂಕಾ ನೆಲದಲ್ಲಿ ತನ್ನ ಸಹಸ್ರಾರು ಜನರನ್ನೂ ತಂದು ನೆಲೆ ನಿಲ್ಲಿಸಿತು. ಒಟ್ಟಿನಲ್ಲಿ ಹೇಳುವುದಾದಲ್ಲಿ ಚೀನಾದ ಆಲಿಂಗನವು ಶ್ರೀಲಂಕೆಗೆ ಒಂದುರೀತಿಯಲ್ಲಿ ಆರ್ಥಿಕ ಗಂಡಾಂತರವನ್ನೇ ತಂದಿಟ್ಟಿತು.

ಹಾಗಾದರೆ ಇಂತಹ ಅನುಭವದಿಂದ ಇತರ ರಾಷ್ಟ್ರಗಳು ಪಾಠ ಕಲಿಯುತ್ತವೆಯೇ? ಖಂಡಿತವಾಗಿಯೂ ಇಲ್ಲ. ಪಾಕಿಸ್ತಾನಕ್ಕೆ ಸಮೃದ್ಧಿ ತರುವ ಮಂತ್ರದಂಡ ಎಂದು ಬಣ್ಣಿಸಲಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿಷಯವನ್ನೇ ತೆಗೆದುಕೊಳ್ಳೋಣ. ಈ ಯೋಜನೆಗೆ ಚೀನಾ ಮೂರು ಲಕ್ಷ ಕೋಟಿ ಡಾಲರ್ ನೀಡುತ್ತಿದೆ. ಗ್ವಾದರ್​ನಲ್ಲಿ ಆಳ ಸಮುದ್ರ ಬಂದರು, ವಿದ್ಯುತ್ ಘಟಕಗಳು, ವಿಸ್ತಾರವಾದ ರಸ್ತೆ, ರೈಲುಜಾಲಗಳು, ಕೈಗಾರಿಕಾ ಪಾರ್ಕ್​ಗಳು, ತೈಲ ಪೈಪ್​ಲೈನ್, ಫೈಬರ್-ಆಪ್ಟಿಕ್ ಲಿಂಕ್​ಗಳು ಇನ್ನೂ ಹತ್ತಾರು ಮೂಲಸೌಕರ್ಯ ಕಾರ್ಯಕ್ರಮಗಳು ಈ ಯೋಜನೆಯಲ್ಲಿ ಸೇರಿವೆ. ಈ ಎಲ್ಲ ಯೋಜನೆಗಳನ್ನು ಚೀನೀ ಕಂಪನಿಗಳು ಚೀನೀ ಬ್ಯಾಂಕ್​ಗಳ ಹಣಕಾಸು ನೆರವಿನಿಂದ ಕೈಗೆತ್ತಿಕೊಳ್ಳಲಿವೆ.

ಸಿಪಿಇಸಿ ಭಾರಿ ಬದಲಾವಣೆ ಉಂಟುಮಾಡಬಲ್ಲ ಯೋಜನೆ. ಇದು ಕ್ಸಿಂಜಿಯಾಂಗ್​ನ ಉಯ್ಘರ್ ಸ್ವಾಯತ್ತ ಪ್ರದೇಶದಲ್ಲಿ ಇರುವ ಚೀನಾದ ಪಶ್ಚಿಮದ ತುತ್ತ ತುದಿಯ ಕಶ್ಗರ್ ಪಟ್ಟಣವನ್ನು ಬಲೂಚಿಸ್ತಾನದಲ್ಲಿರುವ (ಪಾಕಿಸ್ತಾನ) ಬಂಜರು ಪ್ರದೇಶವಾದ ಪರ್ಯಾಯ ದ್ವೀಪ ಗ್ವಾದರ್ ಬಂದರು ಜತೆ ಸಂರ್ಪಸುತ್ತದೆ. ಈ ಬಂದರು ಹೊಮುಜ್ ಜಲಸಂಧಿ ಸಮೀಪದಲ್ಲೇ ಇದ್ದು ಒಮನ್ ಕೊಲ್ಲಿ ಮತ್ತು ಪರ್ಶಿಯನ್ ಕೊಲ್ಲಿಗಳ ಮಧ್ಯದ ಆಯಕಟ್ಟಿನ ಜಾಗದಲ್ಲಿದೆ.

ಪ್ರತಿದಿನ ಸುಮಾರು 17 ಮಿಲಿಯನ್ ಬ್ಯಾರೆಲ್ ತೈಲ ಈ ಕಡಿದಾದ 2 ಮೈಲು ದೂರದ ಕಾರಿಡಾರ್ ಮೂಲಕ ಹಿಂದೂ ಮಹಾಸಾಗರ ಪ್ರದೇಶಕ್ಕೆ ಮತ್ತು ಆಡೆನ್ ಕೊಲ್ಲಿಗೆ ಸಾಗುತ್ತದೆ. ಇದು ವಿಶ್ವದ ತೈಲ ವ್ಯಾಪಾರದ ಶೇಕಡಾ 57ರಷ್ಟಾಗುತ್ತದೆ ಎಂದರೆ ಇದರ ಅಗಾಧತೆಯನ್ನು ಊಹಿಸಬಹುದು. ಗ್ವಾದರ್ ಬಂದರು ತೈಲ ಸಮೃದ್ಧ ಪರ್ಶಿಯನ್ ಕೊಲ್ಲಿಯನ್ನು ಸಂರ್ಪಸುವ ಭಾರತದ ಸಮುದ್ರ ಮಾರ್ಗಗಳಿಗೆ ಅತ್ಯಂತ ಅಪಾಯಕಾರಿ ಎನಿಸುವಷ್ಟು ಸಮೀಪದಲ್ಲಿದೆ. ಭಾರತವು ತನ್ನ ಶೇಕಡಾ 70ರಷ್ಟು ತೈಲ ಸರಬರಾಜಿಗೆ ಇವುಗಳನ್ನೇ ಅವಲಂಬಿಸಿದೆ. ಭವಿಷ್ಯದಲ್ಲಿ ಗ್ವಾದರ್ ಬಂದರು ಸುಸಜ್ಜಿತ ಸೇನಾನೆಲೆಯಾಗಿ ಪರಿರ್ತನೆಗೊಂಡಲ್ಲಿ ಈ ಪ್ರದೇಶದಲ್ಲಿ ಚೀನಾಕ್ಕೆ ಭಾರಿ ವ್ಯೂಹಾತ್ಮಕ ಲಾಭವನ್ನು ತಂದುಕೊಡಬಲ್ಲದು.

ಚೀನಾವು ಈಗಾಗಲೇ ಗ್ವಾದರ್​ನ ಬಂದರು ಸವಲತ್ತುಗಳ ಮೇಲೆ ವಸ್ತುಶಃ ನಿಯಂತ್ರಣವನ್ನು ಪಡೆದುಕೊಂಡಿದೆ ಎಂಬುದು ಭಾರತಕ್ಕೆ ಚಿಂತೆಯ ವಿಷಯವೇ ಸರಿ. ಪಾಕಿಸ್ತಾನವು 2015ರಲ್ಲಿ 2059ರವರೆಗೆ ಅಂದರೆ 44 ವರ್ಷಗಳ ಅವಧಿಗೆ ಅಧಿಕೃತವಾಗಿಯೇ ಬಂದರನ್ನು ಚೀನಾಕ್ಕೆ ಗುತ್ತಿಗೆ ನೀಡಿದೆ. ಇದಲ್ಲದೆ ಗ್ವಾದರ್ ವಿಶೇಷ ಆರ್ಥಿಕ ವಲಯ ಅಭಿವೃದ್ಧಿ ಸಲುವಾಗಿ 2,282 ಎಕರೆ ಭೂಮಿಯನ್ನೂ ಪ್ರತ್ಯೇಕವಾಗಿ ಚೀನಾಕ್ಕೆ ಲೀಸ್ ನೀಡಿದೆ.

ವಿಸ್ತರಣೆಯ ಆತಂಕ: ಭಾರತದ ಅವಿಭಾಜ್ಯ ಅಂಗವಾಗಿರುವ, ಪಾಕಿಸ್ತಾನವು ಅತಿಕ್ರಮಿಸಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನದ ಮೂಲಕ ಸಾಗುವ ಕಾರಾಕೋರಂ ಹೆದ್ದಾರಿಯ ವಿಸ್ತರಣೆಯೂ ಸಿಪಿಇಸಿಯಲ್ಲಿನ ಒಂದು ಪ್ರಮುಖ ಕಾರ್ಯಕ್ರಮವಾಗಿರುವುದು ಭಾರತಕ್ಕೆ ಮತ್ತೊಂದು ಕಳವಳದ ವಿಷಯ. ಇದರಿಂದ ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಕಿಸ್ತಾನಿ ಮತ್ತು ಚೀನೀ ಜನರು ನೆಲೆಗೊಂಡರೆ ಅಲ್ಲಿನ ಜನಸಂಖ್ಯಾ ಸ್ವರೂಪವೂ ಗಂಭೀರವಾಗಿ ಬದಲಾಗಬಲ್ಲುದು. ಇದು ಶಿಮ್ಲಾ ಒಪ್ಪಂದದ ಉಲ್ಲಂಘನೆಯಾಗುವುದಲ್ಲದೆ, ಭಾರತಕ್ಕೆ ಭದ್ರತಾ ಬೆದರಿಕೆಯನ್ನೂ ಒಡ್ಡಬಲ್ಲುದು. ಅಲ್ಲದೆ ಆ ಪ್ರದೇಶದ ಮೂಲ ಸ್ವರೂಪವನ್ನೇ ಬದಲಿಸಲಿದೆ. ಭಾರತವು ತನ್ನ ಹಿತಾಸಕ್ತಿ ರಕ್ಷಣೆ ಸಲುವಾಗಿ ಈ ಬೆಳವಣಿಗೆಯನ್ನು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕಾದುದು ಸಮಯದ ತುರ್ತ. ಗೂಢಚರ್ಯು ಆರೋಪದ ಮೇಲೆ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ಅವರನ್ನು ಪಾಕ್ ಬಂಧಿಸಿದೆಯಲ್ಲ? ಅದಕ್ಕೆ ಪ್ರಮುಖ ಕಾರಣ ಏನು ಗೊತ್ತಾ? ಅವರು ಸಿಪಿಇಸಿ ಯೋಜನೆಯನ್ನು ಹಾಳುಗೆಡವಲು ಯತ್ನಿಸುತ್ತಿದಾರೆ ಎಂಬ ಶಂಕೆ!

ಸಿಪಿಇಸಿಯ ಯಶಸ್ಸು, ಮುಖ್ಯವಾಗಿ ಹಿಂಸಾಗ್ರಸ್ತ ಬಲೂಚಿಸ್ತಾನದಲ್ಲಿ ಯೋಜನೆ ಹೇಗೆ ಜಾರಿಯಾಗುತ್ತದೆ ಎಂಬುದನ್ನು ಅವಲಂಬಿಸಿದೆ. ಬಲೂಚಿಸ್ತಾನವು ಪಾಕಿಸ್ತಾನದಲ್ಲಿ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿರುವ ವಿಶಾಲವಾದ ಪ್ರಾಂತ್ಯವಾಗಿದೆ. ಪಾಕ್ ರಚನೆಯಾದಂದಿನಿಂದಲೂ ಇಲ್ಲಿ ನಿರಂತರವಾಗಿ ಬಂಡಾಯದ ಧ್ವಜ ಹಾರುತ್ತಿದೆ. ಬಲೂಚಿಗರಿಗೆ ಪಾಕಿಸ್ತಾನದ ಜತೆ ಇರಲು ಸುತರಾಂ ಇಷ್ಟವಿಲ್ಲ. ಬಲೂಚ್ ನಾಯಕ ಬ್ರಹ್ಮದಗ್ ಬುಗ್ತಿ ಹೇಳುವಂತೆ, ‘ಇತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ಸೇನೆ ಸಹಸ್ರಾರು ಮಂದಿ ಬಲೂಚಿ ಮಹಿಳೆಯರು, ರಾಜಕೀಯ ನಾಯಕರು, ಚಳವಳಿಕಾರರು, ವಿದ್ಯಾರ್ಥಿಗಳು, ಬರಹಗಾರರು ಮತ್ತು ಬುದ್ಧಿ ಜೀವಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಿದೆ; ನಾಪತ್ತೆಮಾಡಿದೆ. ಸಿಪಿಇಸಿಯು ಬಲೂಚಿ ಸಂಪನ್ಮೂಲವನ್ನು ಪಂಜಾಬಿನ ಲಾಭಕ್ಕಾಗಿ ದೋಚಲಿದೆ’. ಹೀಗಾಗಿಯೇ ಪಾಕ್​ನ ಕೆಲವರು ಸಿಪಿಇಸಿಯನ್ನು ‘ಚೀನಾ-ಪಂಜಾಬ್ ಆರ್ಥಿಕ ಕಾರಿಡಾರ್’ ಎಂಬುದಾಗಿ ಹೇಳುತ್ತಿದ್ದಾರೆ.

ತ್ರಿಪಕ್ಷೀಯ ಒಪ್ಪಂದ: ಅಲ್ಲಿ ಇಷ್ಟೆಲ್ಲ ಆಗುವಾಗ ಭಾರತ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಹಜ. ಸಿಪಿಇಸಿ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುವುದರ ಜತೆಗೆ, ಇನ್ನೊಂದು ಮಹತ್ವದ ಕ್ರಮವಾಗಿ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ 2012ರಲ್ಲಿ ಆಯಕಟ್ಟಿನ ಛಾಬಹಾರ್ ಬಂದರು ಅಭಿವೃದ್ಧಿಯ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು. ಛಾಬಹಾರ್ ಇರಾನಿನ ಆಗ್ನೇಯ ಭಾಗದಲ್ಲಿ ಒಮನ್ ಕೊಲ್ಲಿಯ ಕರಾವಳಿಯಲ್ಲಿ ಇರುವ ಬಂದರು. ಇದು ಗ್ವಾದರ್​ನಿಂದ ಕೇವಲ 100 ಕಿಮೀ ದೂರದಲ್ಲಿದೆ. ಈ ಬಂದರಿನ ಅಭಿವೃದ್ಧಿಗಾಗಿ ಭಾರತವು 500 ಮಿಲಿಯನ್ ಡಾಲರ್​ಗಳನ್ನು ಹೂಡಲಿದೆ. ಬಂದರಿನ ಮೂಲಸವಲತ್ತು ಅಭಿವೃದ್ಧಿಪಡಿಸಿ ಅದರ ನಿರ್ವಹಣೆಯನ್ನು ಭಾರತ ನೋಡಿಕೊಳ್ಳಲಿದೆ. ಇದು ಅಫ್ಘಾನಿಸ್ತಾನ ಜತೆಗೆ ಭಾರತಕ್ಕೆ ವಾಣಿಜ್ಯ ಮಾರ್ಗವನ್ನು ತೆರೆಯಲಿದೆ. ಅಲ್ಲಿಂದ ಇರಾನ್, ಕೇಂದ್ರ ಏಷ್ಯಾ ಮತ್ತು ಯುರೋಪ್​ಗೂ ಭಾರತಕ್ಕೆ ಮಾರ್ಗ ಲಭ್ಯವಾಗುತ್ತದೆ. ಗ್ವಾದರ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವು ಛಾಬಹಾರ್ ಬಂದರನ್ನು ಸೇನಾ ಉದ್ದೇಶಗಳಿಗಾಗಿ ಅಭಿವೃದ್ಧಿ ಪಡಿಸಲು ಆಲೋಚಿಸಬಹುದು. ಇರಾನ್​ನ ಅಬ್ಬಾಸ್ ಬಂದರು ದುರ್ಬಲವಾಗಿರುವುದರಿಂದ ಇದನ್ನು ಪರ್ಯಾಯ ನೌಕಾನೆಲೆಯಾಗಿ ಅಭಿವೃದ್ಧಿಪಡಿಸಲು ಮುಂದಾಗಬಹುದು.

ಆದರೆ ಛಾಬಹಾರ್ ಬಂದರನ್ನು ಬಳಸಲು ಭಾರತದ ನೌಕೆಗಳಿಗೆ ಇರಾನ್ ಅವಕಾಶ ನೀಡುವುದೇ ಎಂಬುದೇ ದೊಡ್ಡ ಪ್ರಶ್ನೆ. ಛಾಬಹಾರ್ ಬಂದರು ಅಭಿವೃದ್ಧಿ ಪಾಲುದಾರಿಕೆಯು ಈ ಮೂರು ರಾಷ್ಟ್ರಗಳಿಗೆ ಮಾತ್ರ ಸೀಮಿತವಲ್ಲ, ಚೀನಾ ಮತ್ತು ಪಾಕಿಸ್ತಾನಕ್ಕೂ ಅದು ಮುಕ್ತವಾಗಿದೆ ಎಂದು ಇರಾನ್ ಹೇಳಿದೆ. ಛಾಬಹಾರ್ ಕಾಮಗಾರಿ ಗ್ವಾದರ್ ಬಂದರಿನ ಅಭಿವೃದ್ಧಿಗೆ ಪ್ರತಿಕೂಲವಾದದ್ದಲ್ಲ ಎಂದೂ ಅದು ಹೇಳಿದೆ. ಪಾಕಿಸ್ತಾನವು ಚೀನೀ ಸಾಲವನ್ನು ಭರಿಸುವಷ್ಟು ಸಶಕ್ತವಲ್ಲ. ಹೀಗಾಗಿ ಅದು ಚೀನಾಕ್ಕೆ ತನ್ನ ಸಾರ್ವಭೌಮತ್ವವನ್ನು ಒಪ್ಪಿಸಬೇಕಾಗಿ ಬರಬಹುದು ಎಂಬುದು ಪಾಕ್​ನ ಕೆಲವರ ಅಂಬೋಣ. ಇದೇನೇ ಇದ್ದರೂ, ಚೀನಾವು ಗ್ವಾದರ್ ಬಂದರನ್ನು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಹುಭಾಗವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ತನ್ನ ವ್ಯೂಹಾತ್ಮಕ ಗುರಿಯನ್ನು ಈಡೇರಿಸಿಕೊಳ್ಳಬಹುದು ಎಂಬುದನ್ನು ಅಲ್ಲಗಳೆಯಲಾಗದು.

ತನ್ನ ವ್ಯೂಹಾತ್ಮಕ ಹಿತಾಸಕ್ತಿಗಳ ರಕ್ಷಣೆಗಾಗಿ, ನಿರ್ದಿಷ್ಟವಾಗಿ ಚೀನಾವು ಹಿಂದೂ ಮಹಾಸಾಗರದಲ್ಲಿ ತಳವೂರುತ್ತಿರುವುದಕ್ಕೆ ಪ್ರತಿಯಾಗಿ ಭಾರತವು ಸಾಧ್ಯವಿರುವುದನ್ನೆಲ್ಲ ಮಾಡುವುದು ಅನಿವಾರ್ಯ. ಭಾರತಕ್ಕೆ ಹಲವಾರು ಆಯ್ಕೆಗಳಿವೆ, ಆದರೆ ಅದನ್ನು ಉಪಯೋಗಿಸಿಕೊಳ್ಳುವುದೇ? ಭಾರತ ಈಗ ಎದ್ದು ನಿಲ್ಲುವ ಮತ್ತು ತನ್ನ ಹಿತಾಸಕ್ತಿಗಳನ್ನು ರಕ್ಷಿಸುವ ಧೈರ್ಯವನ್ನು ಪ್ರದರ್ಶಿಸಬೇಕಿದೆ.

Leave a Reply

Your email address will not be published. Required fields are marked *

Back To Top