Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಚಾಳಿ ಬಿಡದ ಚೀನಾ

Tuesday, 12.12.2017, 3:00 AM       No Comments

ಭಾರತ-ಭೂತಾನ್-ಟಿಬೆಟ್ ಗಡಿಗಳ ಸಂಗಮಸ್ಥಾನ ಅಥವಾ ‘ತ್ರಿಸಂಧಿ ಸ್ಥಾನ’ ಎಂದೇ ಕರೆಸಿಕೊಳ್ಳುವ ಡೋಕ್ಲಾಂ ಭೂಭಾಗ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದೆ. 1500ಕ್ಕೂ ಹೆಚ್ಚಿನ ಚೀನಿ ಯೋಧರು ಈ ಚಳಿಗಾಲದಲ್ಲೂ ಇಲ್ಲಿ ಠಿಕಾಣಿ ಹೂಡಿರುವುದು, ಸಿದ್ಧ ಗುಡಾರಗಳು ಮಾತ್ರವಲ್ಲದೆ ಒಂದಿಡೀ ಚಳಿಗಾಲವನ್ನು ಕಳೆಯಲು ಬೇಕಾಗುವ ಸಲಕರಣೆ-ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ತಳ್ಳಿಹಾಕುವಂಥ ಸಂಗತಿಯಲ್ಲ. ಕಾರಣ, ಚಳಿಗಾಲದಲ್ಲಿ ಇಂಥ ಆಕ್ರಮಣಕ್ಕೆ ಮುಂದಾಗದಿರುವುದು ಅಥವಾ ಸಮರೋನ್ಮಾದ ಹುಟ್ಟುಹಾಕದಿರುವುದು ಬಹುತೇಕ ದೇಶಗಳ ಸೇನಾವ್ಯವಸ್ಥೆಗಳಲ್ಲಿ ವಾಡಿಕೆಯಲ್ಲಿರುವ ಒಂದು ‘ಅಲಿಖಿತ/ಅಘೋಷಿತ’ ನಿಯಮ. ಆದರೆ ಈ ನಿಯಮವನ್ನೂ ಮೀರಿ ಕುತಂತ್ರದ ಬಲೆ ಹೆಣೆದ ಪಾಕಿಸ್ತಾನ ಕೆಲವೇ ವರ್ಷಗಳ ಹಿಂದೆ ಭಾರತದ ಕಾರ್ಗಿಲ್ ಪ್ರದೇಶಕ್ಕೆ ತನ್ನ ಸೈನಿಕರನ್ನು ನುಗ್ಗಿಸಿ ಅದನ್ನು ವಶಮಾಡಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಿದ್ದು ಚಳಿಗಾಲದಲ್ಲೇ ಎಂಬುದನ್ನು ಮರೆಯಲಾಗದು. ಇಂಥ ಕುತಂತ್ರದ ವಿಷಯದಲ್ಲಿ ಪಾಕಿಸ್ತಾನಕ್ಕಿಂತ ಕಮ್ಮಿಯೇನೂ ಇಲ್ಲದ ಚೀನಾ, ಭೀಕರ ಚಳಿಯ ನಡುವೆಯೂ ಡೋಕ್ಲಾಂ ತ್ರಿಸಂಧಿಸ್ಥಾನದಲ್ಲಿ ಯೋಧರನ್ನು ಜಮಾವಣೆಗೊಳಿಸಿದೆ ಎಂದರೆ, ಅದು ಕೀಳಂದಾಜು ಮಾಡುವಂಥ ಬಾಬತ್ತಲ್ಲ.

ಡೋಕ್ಲಾಂ ಪ್ರದೇಶದ ಹಕ್ಕುದಾರಿಕೆಯ ಕುರಿತು ಚೀನಾ ಮತ್ತು ಭೂತಾನ್ ನಡುವೆ ಈಗಲೂ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಅಂತಾರಾಷ್ಟ್ರೀಯ ಗಡಿಗೆ ತಾಕಿಕೊಂಡಂತಿರುವ ಇಂಥ ಪ್ರದೇಶಗಳಲ್ಲಿ ‘ಯಥಾಸ್ಥಿತಿ ಬದಲಿಸುವ’ ಯಾವುದೇ ಕ್ರಮಕ್ಕೆ ಯಾವುದೇ ರಾಷ್ಟ್ರ ಮುಂದಾಗುವುದಕ್ಕೂ ಮೊದಲು, ಗಡಿ ಹಂಚಿಕೊಂಡಿರುವ ಮಿಕ್ಕ ರಾಷ್ಟ್ರಗಳೊಂದಿಗೆ ಸಮಾಲೋಚಿಸಬೇಕಾಗುತ್ತದೆ. ಆದರೆ ಪ್ರಸಕ್ತ ವರ್ಷದ ಜೂನ್​ನಲ್ಲಿ ಈ ವಿವಾದಿತ ಪ್ರದೇಶಕ್ಕೆ ಲಗ್ಗೆಯಿಟ್ಟ ಚೀನಿ ಯೋಧರು ಗಸ್ತು ಚಟುವಟಿಕೆಗಳಿಗೆ ಹೊರತಾದ ಸೇನಾ ಅಸ್ತಿತ್ವ/ಕಾರ್ಯಾಚರಣೆಯ ಮೂಲಕ ಭಾರತವನ್ನು ಕೆರಳಿಸಲು ಮುಂದಾದಾಗ, ಭಾರತವೂ ಅಲ್ಲಿ ಸೇನೆಯನ್ನು ನಿಯೋಜಿಸಬೇಕಾಗಿ ಬಂತು. ತರುವಾಯದಲ್ಲಿ ಎರಡೂ ಸೇನೆಗಳ ನಡುವೆ ಘರ್ಷಣೆ ನಡೆದೇಬಿಡುವಂಥ ಉದ್ವಿಗ್ನ ಪರಿಸ್ಥಿತಿ ರೂಪುಗೊಂಡಿತಾದರೂ, ಭಾರತದ ರಾಜತಾಂತ್ರಿಕ ನಡೆಗಳು ಹಾಗೂ ಅಂತಾರಾಷ್ಟ್ರೀಯ ಒತ್ತಡಗಳ ಪರಿಣಾಮವಾಗಿ ಡೋಕ್ಲಾಂನಿಂದ ಚೀನಾ ಹಿಮ್ಮೆಟ್ಟಬೇಕಾಯಿತು. ಹೀಗೆ ಅನವಶ್ಯಕವಾಗಿ ರೂಪುಗೊಂಡ ಸಮರೋನ್ಮಾದ ಸ್ಥಿತಿ ಬರೋಬ್ಬರಿ 73 ದಿನಗಳವರೆಗೆ ಮುಂದುವರಿದು ಅಂತ್ಯಗೊಂಡಿತು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಚೀನಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು, ಡೋಕ್ಲಾಂನಲ್ಲೂ ಶಾಂತಿ ನೆಲೆಸಿತ್ತು.

ಆದರೆ, ಈ ಶಾಂತಸ್ಥಿತಿ ಅಬಾಧಿತವಾಗಿರಲಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಚೀನಾ ಮತ್ತೊಂದು ಸುತ್ತಿನ ಕಿತಾಪತಿಗೆ ಚಾಲನೆ ನೀಡಿರುವುದು ನೋಡಿದರೆ, ಇದು ಭಾರತವನ್ನು ಮತ್ತೊಮ್ಮೆ ಕೆರಳಿಸುವ, ಕಾಲುಕೆರೆದು ಜಗಳಕ್ಕೆ ನಿಲ್ಲುವ ಹುಂಬಯತ್ನ ಎನ್ನಬೇಕಾಗುತ್ತದೆ. ಚೀನಾ ಇಂಥದೊಂದು ಜಗಳಗಂಟತನವನ್ನು ಮತ್ತೊಮ್ಮೆ ಮೆರೆಯಬಹುದು ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಳೆದ ಸೆಪ್ಟೆಂಬರ್​ನಲ್ಲೇ ಎಚ್ಚರಿಸಿದ್ದರು ಎಂಬುದಿಲ್ಲಿ ಸ್ಮರಣಾರ್ಹ.

ಭಾರತದ ಸಾಂಪ್ರದಾಯಿಕ ಶತ್ರುವಾಗಿರುವ ಪಾಕಿಸ್ತಾನದ ಹೆಗಲಮೇಲೆ ಕೈಹಾಕಿರುವ ಚೀನಾಕ್ಕೆ ಭಾರತವನ್ನು ಹಣಿಯುವುದೇ ಒಂದಂಶದ ಕಾರ್ಯಸೂಚಿಯಾಗಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ತನ್ನಲ್ಲಿ ಉತ್ಪಾದನೆಯಾಗುವ ವೈವಿಧ್ಯಮಯ ಸರಕುಗಳಿಗೆ ಭಾರತದ ಮಾರುಕಟ್ಟೆಯನ್ನು ‘ಡಂಪಿಂಗ್ ಯಾರ್ಡ್’ನಂತೆ ಮಾಡಿಕೊಂಡಿರುವ ಚೀನಾ, ನಮ್ಮಿಂದ ವಾಣಿಜ್ಯಿಕ-ವ್ಯಾವಹಾರಿಕ ಪ್ರಯೋಜನಗಳನ್ನು ದಶಕಗಳಿಂದ ದಕ್ಕಿಸಿಕೊಂಡೇ ಬಂದಿದ್ದರೂ, ಅದರ ಸಾಮರಿಕ ಹಸಿವು ಇನ್ನೂ ತೀರಿದಂತಿಲ್ಲ. ಚೀನಾದ ಈ ಕುತಂತ್ರಕ್ಕೆ ಕಡಿವಾಣ ಹಾಕದಿದ್ದಲ್ಲಿ, ದಕ್ಷಿಣ ಏಷ್ಯಾದಲ್ಲಿನ ಶಾಂತಿ-ನೆಮ್ಮದಿಗಳಿಗೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಚೀನಾವನ್ನು ಹಣಿಯುವ ವ್ಯೂಹಾತ್ಮಕ ಕಾರ್ಯತಂತ್ರ ಹೆಣೆಯಲು ಭಾರತಕ್ಕಿದು ಸಕಾಲ.

Leave a Reply

Your email address will not be published. Required fields are marked *

Back To Top