Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಚಾಬಹಾರ್ ಆಚೆಗಿನ ಮೋದಿ ಕಾರುಬಾರು

Wednesday, 06.12.2017, 3:03 AM       No Comments

ಚಾಬಹಾರ್, ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಪಾಕಿಸ್ತಾನದ ಹಂಗಿಲ್ಲದೆ ಸಾಗುವ ಸಂಪರ್ಕ ಸೇತುವೆಯಷ್ಟೇ ಅಲ್ಲ, ಮಧ್ಯ ಏಷ್ಯಾದಲ್ಲಿ ಚೀನಾದ ದೂರಗಾಮಿ ಯೋಜನೆಗಳಿಗೆ ಸ್ಪರ್ಧೆಯೊಡ್ಡುವ ಕ್ರಮವೂ ಆಗಿದೆ. ಮೋದಿಯವರ ರಾಜತಾಂತ್ರಿಕ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ದೃಷ್ಟಿ ಚಾಬಹಾರ್​ನಾಚೆಗೂ ವಿಸ್ತರಿಸಿರುವುದನ್ನು ಗುರುತಿಸಬಹುದು.

ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನಗಳನ್ನು ಸಂರ್ಪಸುವ ಚಾಬಹಾರ್ ಬಂದರಿನ ಮೊದಲ ಹಂತ ಇದೇ ಭಾನುವಾರ, ಡಿಸೆಂಬರ್ 3ರಂದು ಉದ್ಘಾಟನೆಗೊಂಡಿತು. ಈ ಮೂಲಕ, ಸಮುದ್ರತೀರವಿಲ್ಲದ ಅಫ್ಘಾನಿಸ್ತಾನ, ಭಾರತವೂ ಸೇರಿದಂತೆ ಹೊರಜಗತ್ತಿನೊಂದಿಗೆ ಆರ್ಥಿಕವಾಗಿ ವ್ಯವಹರಿಸಲು ದಾರಿಯೊಂದನ್ನು ಕಂಡುಕೊಂಡಂತಾಗಿದೆ. ಹಾಗೆಯೇ, ತನ್ನ ಕೋಳಿಯಿಲ್ಲದೆ ಬೆಳಗಾಗುವುದಿಲ್ಲ ಎಂದು ಭ್ರಮಿಸಿ ಭಾರತ ಮತ್ತು ಅಫ್ಘಾನಿಸ್ತಾನಗಳ ನಡುವೆ ತನ್ನ ನೆಲದ ಮೂಲಕ ಸಂಪರ್ಕ ಅವಕಾಶ ನೀಡಲು ನಿರಾಕರಿಸಿದ್ದ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದಂತೆಯೂ ಆಗಿದೆ. ಚಾಬಹಾರ್ ಬಂದರನ್ನು ಮೂರೂ ದೇಶಗಳ ಅಗತ್ಯಕ್ಕನುಗುಣವಾಗಿ ಅಭಿವೃದ್ಧಿಪಡಿಸಲು ಒಪ್ಪಂದವಾದದ್ದು ಕಳೆದ ವರ್ಷದ ಮೇ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಇರಾನ್​ಗೆ ಅಧಿಕೃತ ಭೇಟಿ ನೀಡಿದಾಗ. ಆ ಭೇಟಿಯಲ್ಲಿ ಭಯೋತ್ಪಾದನಾ ನಿಗ್ರಹ, ಸೈಬರ್ ಅಪರಾಧ ನಿಗ್ರಹ ಸೇರಿದಂತೆ ಹನ್ನೆರಡು ಪ್ರಮುಖ ಕ್ಷೇತಗಳಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ವೃದ್ಧಿಸುವ ಒಪ್ಪಂದಗಳಿಗೆ ಸಹಿ ಬಿತ್ತು. ಅದರ ಮರುದಿನವೇ ಪ್ರಧಾನಿ ಮೋದಿ, ಇರಾನ್ ಅಧ್ಯಕ್ಷ ಹಸನ್ ರುಹಾನಿ ಮತ್ತು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ನಡುವಿನ ತ್ರಿಪಕ್ಷೀಯ ಮಾತುಕತೆಗಳು ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುವುದನ್ನೇ ಕೇಂದ್ರವಾಗಿಟ್ಟುಕೊಂಡಿದ್ದವು. ಮೂರೂ ದೇಶಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೂವರು ನೇತಾರರೂ ಕ್ಷಿಪ್ರ ಅವಧಿಯಲ್ಲಿ ಚಾಬಹಾರ್ ಬಂದರನ್ನು ಕಾರ್ಯಾರಂಭ ಮಾಡುವ ಒಪ್ಪಂದಗಳಿಗೆ ಸಹಿ ಹಾಕಿದರು.

ಇತಿಹಾಸದ ಪರಿಚಯ ಅಗತ್ಯ: ಚಾಬಹಾರ್ ಬಂದರಿನ ಮೇಲೆ ಭಾರತದ ಕಣ್ಣು ಬಿದ್ದದ್ದು ವಾಜಪೇಯಿ ಆಡಳಿತಾವಧಿಯಲ್ಲಿ. ಹಿಂದಿನ ಕೆಲವು ದಶಕಗಳಲ್ಲಿ ನಮ್ಮ ವಿರುದ್ಧವಾಗಿ ತಿರುಗಿದ ಈ ವಲಯದ ಭೂ-ರಾಜಕೀಯ, ಭೂ-ಆರ್ಥಿಕ ಹಾಗೂ ಭೂ-ಸಾಮರಿಕ ವಾಸ್ತವಗಳನ್ನು ಗಂಭೀರವಾಗಿ ವಿಶ್ಲೇಷಿಸಿದ ಆ ದೂರದೃಷ್ಟಿಯ ಚಿಂತಕ-ರಾಜಕಾರಣಿ ಅಂತಿಮವಾಗಿ ಆಯ್ದುಕೊಂಡದ್ದು ಚಾಬಹಾರ್ ಬಂದರನ್ನು. ಇದು ನಿಮಗೆ ವಿಶದವಾಗಬೇಕಾದರೆ ಒಂದಷ್ಟು ಇತಿಹಾಸದ ಪರಿಚಯ ಅಗತ್ಯ. ಭಾರತೀಯ ಉಪಖಂಡದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತವಿದ್ದ ದಿನಗಳಲ್ಲಿ ಅಫ್ಘಾನಿಸ್ತಾನ ರಾಜಕೀಯವಾಗಿ ಸ್ವತಂತ್ರವಾಗಿದ್ದರೂ ಆರ್ಥಿಕವಾಗಿ ಭಾರತದ ಭಾಗವೇ ಆಗಿತ್ತು. ಅಫ್ಘಾನಿಸ್ತಾನದ ಎಲ್ಲಾ ಆರ್ಥಿಕ ಅಗತ್ಯಗಳನ್ನು ಪೂರೈಸುವುದಲ್ಲದೆ ಸಮುದ್ರತೀರವಿಲ್ಲದ ಆ ದೇಶ ಕರಾಚಿ ಬಂದರಿನ ಮೂಲಕ ಹೊರಜಗತ್ತಿನೊಂದಿಗೆ ವ್ಯವಹರಿಸಲು ಭಾರತ ಅವಕಾಶ ಮಾಡಿಕೊಟ್ಟಿತ್ತು. ಆದರೆ ದೇಶವಿಭಜನೆ ಇದೆಲ್ಲವನ್ನೂ ಬದಲಾಯಿಸಿಬಿಟ್ಟಿತು. ಅಫ್ಘಾನಿಸ್ತಾನ ಮತ್ತು ಭಾರತಗಳ ನಡುವೆ ಎರಡು ದೇಶಗಳಿಗೂ ಸಮಾನ ಶತ್ರುವಾದ ಪಾಕಿಸ್ತಾನ ಅವತರಿಸಿದ್ದರ ಜತೆಗೆ ವಾಯವ್ಯ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಆಕ್ರಮಿಸಿಕೊಂಡದ್ದು ಮತ್ತು ಅದನ್ನು ತೆರವುಗೊಳಿಸಲು ಭಾರತ ಅಕ್ಷರಶಃ ಯಾವುದೇ ಪ್ರಯತ್ನ ಮಾಡದೇಹೋದದ್ದರ ಪರಿಣಾಮವಾಗಿ ಅಘ್ಘಾನಿಸ್ತಾನ ಮತ್ತು ಭಾರತಗಳ ನಡುವೆ ಭೂಸಂಪರ್ಕ ಕತ್ತರಿಸಿಹೋಯಿತು. ಬದಲಾದ ಸನ್ನಿವೇಶದಲ್ಲಿ ಎರಡೂ ದೇಶಗಳು ತನ್ನ ನೆಲದ ಮೂಲಕ ಆರ್ಥಿಕ ವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡಲು ಪಾಕಿಸ್ತಾನ ಶತಾಯಗತಾಯ ತಯಾರಿಲ್ಲದ ಕಾರಣ ಭಾರತ ಮತ್ತು ಅಫ್ಘಾನಿಸ್ತಾನಗಳ ನಡುವೆ ಆರ್ಥಿಕ ಸಂಪರ್ಕ ಸರಿಸುಮಾರು ನಿಂತೇಹೋಯಿತು. ಇದರಿಂದ ಹಾನಿ ಅನುಭವಿಸಿದ್ದು ಅಫ್ಘಾನಿಸ್ತಾನ. ಪಾಕಿಸ್ತಾನಕ್ಕೆ ಸೇರಿಹೋದ ಕರಾಚಿ ಬಂದರಿನ ಮೂಲಕ ತನ್ನ ವಿದೇಶವ್ಯಾಪಾರವನ್ನು ನಡೆಸಬೇಕಾದ ಸನ್ನಿವೇಶದಲ್ಲಿ ಅಫ್ಘಾನಿಸ್ತಾನ ಸಹಜವಾಗಿಯೇ ಹಲವು ವಿಷಯಗಳಲ್ಲಿ ಪಾಕಿಸ್ತಾನದ ಮರ್ಜಿಗನುಗುಣವಾಗಿ ಹೆಜ್ಜೆ ಹಾಕಬೇಕಾದ ಒತ್ತಡಕ್ಕೂ ಒಳಗಾಗಬೇಕಾಯಿತು. ಕಾಬೂಲ್​ನಲ್ಲಿ 1978ರಲ್ಲಿ ಕಮ್ಯೂನಿಸ್ಟ್ ಸರ್ಕಾರ ಬಂದ ನಂತರ ಅಫ್ಘಾನಿಸ್ತಾನ ಮತ್ತು ಸೋವಿಯೆತ್ ಒಕ್ಕೂಟಗಳ ನಡುವೆ ಅತ್ಯಂತ ಘನಿಷ್ಠ ಸಂಬಂಧಗಳು ಏರ್ಪಟ್ಟಾಗ ಪಾಕಿಸ್ತಾನದ ಮೇಲಿನ ಅಫ್ಘಾನಿಸ್ತಾನದ ಅವಲಂಬನೆ ಅಂತ್ಯಗೊಂಡದ್ದೇನೋ ನಿಜ, ಆದರೆ ಆ ಹನ್ನೆರಡು ವರ್ಷಗಳು ಭೀಕರ ಸಂಘರ್ಷದಿಂದ ಕೂಡಿದ ಕಾರಣ ಸೋವಿಯೆತ್ ಸ್ನೇಹ ಆಪ್ಘನ್ನರಿಗೆ ಫಲದಾಯಕವೇನೂ ಆಗಲಿಲ್ಲ. ಕಾಬೂಲ್​ನಲ್ಲಿ ಕಮ್ಯೂನಿಸ್ಟ್ ಸರ್ಕಾರ ಪತನಗೊಂಡು, ಅಲ್ಪಕಾಲದ ಮುಜಾಹಿದೀನ್ ಆಡಳಿತದ ನಂತರ 1994ರಲ್ಲಿ ಪಾಕಿಸ್ತಾನ ತನ್ನ ಕೈಗೊಂಬೆ ತಾಲಿಬಾನ್ ಅನ್ನು ಕಾಬೂಲ್​ನಲ್ಲಿ ಪ್ರತಿಷ್ಠಾಪಿಸಿದಾಗ ಅಫ್ಘಾನಿಸ್ತಾನ ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿತ್ತು. ಸ್ವಾಭಿಮಾನಿ ಆಫ್ಘನ್ನರ ಆ ಪುರಾತನ ದೇಶ ಪಾಕಿಸ್ತಾನದ ಒಂದು ವಿಸ್ತರಣವಾಗಿಹೋಯಿತು. ಅಲ್ಲಿಗೆ ಭಾರತ ಮತ್ತು ಅಫ್ಘಾನಿಸ್ತಾನಗಳ ನಡುವಿನ ಇದ್ದಬದ್ದ ಸಂಪರ್ಕವೂ ಕಳಚಿಹೋಯಿತು. ನಂತರ ಇತಿಹಾಸ ಮತ್ತೊಂದು ತಿರುವು ಪಡೆದದ್ದು 2001ರಲ್ಲಿ. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್​ಗಳ ಮೇಲೆ ಅಲ್-ಖೈದಾ ಭಯೋತ್ಪಾದಕ ದಾಳಿಗಳಿಗೆ ಉತ್ತರವಾಗಿ ಸೇನಾಕಾರ್ಯಾಚರಣೆ ಕೈಗೊಂಡ ಅಮೆರಿಕ ಕಾಬೂಲ್​ನಲ್ಲಿ ಪಾಕ್-ಪರ, ಮೂಲಭೂತವಾದಿ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆದು, ಹಮೀದ್ ಕರ್ಜಾಯ್ ನೇತೃತ್ವದ ಪ್ರಜಾಪ್ರಭುತ್ವವಾದಿ ಸರ್ಕಾರದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತಷ್ಟೇ. ಭಾರತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಕರ್ಜಾಯ್ ಈ ದೇಶದ ಬಗ್ಗೆ ಅಪಾರ ಒಲವನ್ನಷ್ಟೇ ಅಲ್ಲ, ಭಾರತದ ಜತೆಗೆ ಘನಿಷ್ಠ ಆರ್ಥಿಕ ಸಂಬಂಧಗಳು ತನ್ನ ದೇಶಕ್ಕೆ ಅತ್ಯಗತ್ಯ ಎಂದು ನಂಬಿದ್ದರು. ಆದರೆ ಈಗಲೂ ತಡೆಯಾದದ್ದು ಪಾಕಿಸ್ತಾನ. ಇದೆಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರಧಾನಮಂತ್ರಿ ವಾಜಪೇಯಿ ಆಗ ಇರಾನ್ ಕಡೆಗೆ ತಿರುಗಿದರು. ಅವರ ಯೋಜನೆಗಳಿಗೆ ಹಮೀದ್ ಕರ್ಜಾಯ್ ಪೂರ್ಣ ಸಹಕಾರಕ್ಕೆ ತಯಾರಾದರು. ಈ ಜಂಟಿ ಆಶಯಕ್ಕೆ ಇರಾನ್ ಉತ್ಸಾಹದಿಂದ ಸ್ಪಂದಿಸಿತು. ಚಾಬಹಾರ್ ಕನಸು ರೂಪುಗೊಂಡದ್ದು ಹೀಗೆ. ಆಗಿನ ಇರಾನ್ ಅಧ್ಯಕ್ಷ ಮೊಹಮದ್ ಖತಾಮಿ 2003ರಲ್ಲಿ ನವದೆಹಲಿಗೆ ಭೇಟಿ ನೀಡಿದಾಗ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುವ ಬಗ್ಗೆ ವಿಶದವಾಗಿ ರ್ಚಚಿಸಿ ವ್ಯಾವಹಾರಿಕ ಯೋಜನೆಯೊಂದನ್ನು ರೂಪುಗೊಳಿಸಲಾಯಿತು. ಆದರೆ ಇತಿಹಾಸ ಬೇರೊಂದು ದಾರಿ ಹಿಡಿಯಿತು. 2004ರಲ್ಲಿ ವಾಜಪೇಯಿ ಸರ್ಕಾರ ಪತನಗೊಂಡು ಮನಮೋಹನ್ ಸಿಂಗ್ ಸರ್ಕಾರ ಬಂದದ್ದೇ ಚಾಬಹಾರ್ ಬಗ್ಗೆ ಭಾರತದ ಆಸಕ್ತಿ ಕಮರಿಹೋಯಿತು. ಇದರಲ್ಲಿ ಅಮೆರಿಕದ ಪಾತ್ರವನ್ನೂ ನಾವು ಗಮನಿಸಬೇಕು. 2005ರಲ್ಲಿ ಅಮೆರಿಕದ ಜತೆ ನಾಗರಿಕ ಅಣು ಒಪ್ಪಂದ ಮಾಡಿಕೊಂಡ ಮನಮೋಹನ್ ಸಿಂಗ್ ಸರ್ಕಾರ ಇರಾನ್ ಬಗೆಗಿನ ತನ್ನ ನೀತಿಯನ್ನು ದೊಡ್ಡಣ್ಣನ ಇಚ್ಛೆಗನುಗುಣವಾಗಿ ಬದಲಾಯಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದು ನಿಜ. ಅದು ಆ ದಿನದ ವಾಸ್ತವ ಎನ್ನುವುದನ್ನು ಒಪ್ಪಿಕೊಂಡರೂ ಅಮೆರಿಕ ಜತೆಗಿನ ಅಣು ಒಪ್ಪಂದಕ್ಕಾಗಿ ಚಾಬಹಾರ್ ಬಂದರನ್ನು ಬಲಿಗೊಟ್ಟ ಸಿಂಗ್ ಸರ್ಕಾರ ಅಣು ಒಪ್ಪಂದವನ್ನೂ ಕಾರ್ಯಗತಗೊಳಿಸಲಿಲ್ಲ. ಸಹಿ ಹಾಕಿ ಮರೆತುಬಿಟ್ಟಿತು.

ಕಾರ್ಯಪ್ರವೃತ್ತರಾದ ಮೋದಿ: 2014ರಲ್ಲಿ ಎನ್​ಡಿಎ ಮತ್ತೆ ಅಧಿಕಾರ ಗಳಿಸಿಕೊಂಡ ನಂತರ, ಮೋದಿ ಸರ್ಕಾರ ಅಮೆರಿಕ ಜತೆಗಿನ ಅಣು ಒಪ್ಪಂದವನ್ನು ಕಾರ್ಯಗತಗೊಳಿಸಲು ಮುಂದಾದದ್ದಷ್ಟೇ ಅಲ್ಲ, ಚಾಬಹಾರ್ ಬಂದರತ್ತಲೂ ಗಮನ ಹರಿಸಿತು. ಕಳೆದೊಂದು ದಶಕದಿಂದ ಅಮೆರಿಕ ಮತ್ತು ಇರಾನ್ ನಡುವಿನ ವೈಷಮ್ಯಕ್ಕೆ ಪ್ರಮುಖ ಕಾರಣವಾಗಿದ್ದ ಇರಾನ್​ನ ಅಣ್ವಸ್ತ್ರ ಕಾರ್ಯಕ್ರಮಗಳು ಇತ್ತೀಚೆಗೆ ನಿಲುಗಡೆಗೆ ಬಂದಿವೆ. ಅಮೆರಿಕ, ಜರ್ಮನಿ ಸೇರಿದಂತೆ ಪಶ್ಚಿಮದ ನಾಲ್ಕು ಅಣ್ವಸ್ತ್ರ ಕಾರ್ಯಕ್ರಮ-ವಿರೋಧಿ ರಾಷ್ಟ್ರಗಳ ಜತೆ ಇರಾನ್ ಡಿಸೆಂಬರ್ 2015ರಲ್ಲಿ ಒಪ್ಪಂದ ಮಾಡಿಕೊಂಡ ಪರಿಣಾಮವಾಗಿ ಇರಾನ್ ಬಗ್ಗೆ ದೊಡ್ಡಣ್ಣನ ನೀತಿಗಳು ಮೃದುವಾಗತೊಡಗಿದವು. ಹೀಗೆ, ಅಮೆರಿಕ ಹಾಗೂ ಇರಾನ್ ಜತೆ ಏಕಕಾಲದಲ್ಲಿ ಸಂಬಂಧವೃದ್ಧಿಯ ಅವಕಾಶವನ್ನು ಕಂಡ ಮೋದಿ ಕಾರ್ಯಪ್ರವೃತ್ತರಾದರು. ಇರಾನ್​ಗೆ ಭೇಟಿ ನೀಡಿ ಇರಾನಿ ಹಾಗೂ ಆಫ್ಘನ್ ಅಧ್ಯಕ್ಷರ ಜತೆ ಒಪ್ಪಂದಗಳಿಗೆ ಸಹಿ ಹಾಕಿಯೇಬಿಟ್ಟರು. ಚಾಬಹಾರ್ ಬಂದರನ್ನು ಅಭಿವೃದ್ಧಿಗೊಳಿಸಿ ಅಲ್ಲಿಂದ ಅಫ್ಘಾನಿಸ್ತಾನ ಗಡಿಯ ಝುಹೆದಾನ್ ಪಟ್ಟಣಕ್ಕೆ ರೈಲುಹಾದಿ ನಿರ್ವಿುಸುವ ಕೆಲಸ ಆರಂಭವಾಯಿತು. ಅದರ ಮೊದಲ ಹಂತದ ಕೆಲಸ ಮುಗಿದು ಬಂದರು ಇದೀಗ ಉದ್ಘಾಟನೆಯಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಮೋದಿ ದೃಷ್ಟಿ ಚಾಬಹಾರ್​ನಾಚೆಗೂ ವಿಸ್ತರಿಸಿರುವುದನ್ನು ಗುರುತಿಸಬಹುದು.

ವರ್ಧಿಸುತ್ತಿದೆ ಚೀನಾ ಪ್ರಭಾವ: ಚಾಬಹಾರ್ ಕೇವಲ ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಪಾಕಿಸ್ತಾನದ ಹಂಗಿಲ್ಲದೆ ಸಾಗುವ ಸಂಪರ್ಕ ಸೇತುವೆಯಷ್ಟೇ ಅಲ್ಲ, ಅದಕ್ಕಿಂತಲೂ ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಚೀನಾದ ದೂರಗಾಮಿ ಯೋಜನೆಗಳಿಗೆ ಸ್ಪರ್ಧೆಯೊಡ್ಡುವ ಕ್ರಮವೂ ಆಗಿದೆ. 26 ವರ್ಷಗಳ ಹಿಂದೆ ಸೋವಿಯೆತ್ ಒಕ್ಕೂಟ ಛಿದ್ರಗೊಂಡಾಗಿನಿಂದ ಮಧ್ಯ ಏಷ್ಯಾದಲ್ಲಿ ಚೀನಾದ ಪ್ರಭಾವ ಏಕಪ್ರಕಾರವಾಗಿ ಏರುತ್ತಿದೆ. ಮೊದಲಿಗೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಮಧ್ಯ ಏಷ್ಯಾದ ಮುಸ್ಲಿಂ ಗಣರಾಜ್ಯಗಳು, ಮುಖ್ಯವಾಗಿ ಕಝಾಖ್​ಸ್ತಾನ್, ಪಶ್ಚಿಮ ಚೀನಾದ ಉಯ್ಘರ್ ಮುಸ್ಲಿಮರ ಸ್ವಾತಂತ್ರ್ಯದ ಅಭಿಲಾಷೆಗೆ ನೀರೆರೆದು ಅವರು ಚೀನಾದ ವಿರುದ್ಧ ಬಂಡೇಳುವಂತೆ ಮಾಡುವ ರಹಸ್ಯ ಕಾರ್ಯಯೋಜನೆಗಳನ್ನು ನಿವಾರಿಸಿಕೊಂಡ ಚೀನಾ ನಂತರ ಅತಿಶೀಘ್ರದಲ್ಲೇ ಆ ದೇಶಗಳಲ್ಲಿ ಮಹತ್ವಪೂರ್ಣ ಆರ್ಥಿಕ ಹೆಜ್ಜೆಗಳನ್ನಿಟ್ಟಿತು. ಇತ್ತೀಚೆಗಂತೂ, ತೈಲವೂ ಸೇರಿದಂತೆ ಅಗಾಧ ನೈಸರ್ಗಿಕ ಸಂಪನ್ಮೂಲಗಳ ಭಂಡಾರವಾಗಿರುವ ಆ ದೇಶಗಳನ್ನು ಬೆಲ್ಟ್ ಆಂಡ್ ರೋಡ್ ಯೋಜನೆಯ ಮೂಲಕ ಚೀನೀ ಅರ್ಥವ್ಯವಸ್ಥೆಗೆ ಬಲವಾಗಿ ಬಂಧಿಸುವ ಮಹತ್ವಾಕಾಂಕ್ಷೆಯನ್ನು ಬೀಜಿಂಗ್ ದೊಡ್ಡದಾಗಿಯೇ ಪ್ರದರ್ಶಿಸುತ್ತಿದೆ. ಇದು ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಕಳೆದ ವಾರ ಹಂಗರಿಯ ರಾಜಧಾನಿ ಬುಡಾಪೆಸ್ಟ್​ನಲ್ಲಿ ನಡೆದ ಸಮಾವೇಶವೊಂದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಭಾರತದಲ್ಲಿ ಹೆಚ್ಚಿನ ಜನರ ಗಮನಕ್ಕೆ ಬಾರದೇಹೋದ ಇದು ‘C-CEEC’ (China and 16 Central and East European Countries) ಎಂದು ಕರೆಸಿಕೊಳ್ಳುವ ಹದಿನೇಳು ರಾಷ್ಟ್ರಗಳ ಗುಂಪಿನ ವಾರ್ಷಿಕ ಸಮಾವೇಶ. ಹೆಸರೇ ಹೇಳುವಂತೆ ಇದು ಪೂರ್ವ ಯುರೋಪ್ ಹಾಗೂ ಮಧ್ಯ ಎಷ್ಯಾದ 16 ದೇಶಗಳ ಜತೆ ಚೀನಾ ಸೇರಿ ನಿರ್ವಿುಸಿಕೊಂಡಿರುವ ಆರ್ಥಿಕ ಸಹಕಾರ ಸಂಘಟನೆ. ಇದು ‘ಹದಿನಾರು ಮತ್ತು ಒಂದು’ (sixteen plus one) ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. ತನ್ನ ಅರ್ಥಿಕ ಕಬಂಧಬಾಹುವನ್ನು ಮಧ್ಯ ಏಷ್ಯಾದಾಚೆಗೂ ವಿಸ್ತರಿಸಿ ಪೂರ್ವ ಯುರೋಪಿನ ಹಿಂದಿನ ಕಮ್ಯೂನಿಸ್ಟ್ ದೇಶಗಳನ್ನು ತನ್ನ ಆರ್ಥಿಕ ತೆಕ್ಕೆಗೆ ತೆಗೆದುಕೊಳ್ಳುವುದು ಚೀನಾದ ಹುನ್ನಾರ. ಇದರ ದೂರಗಾಮಿ ದುಷ್ಪರಿಣಾಮ ಮುಖ್ಯವಾಗಿ ತಟ್ಟುವುದು ರಷ್ಯಾಕ್ಕೆ. ಒಂದುಕಾಲದಲ್ಲಿ ಮಧ್ಯ ಏಷ್ಯಾದ ದೇಶಗಳು ಸೋವಿಯೆತ್ ಒಕ್ಕೂಟದ ಭಾಗಗಳೇ ಆಗಿದ್ದರೆ, ಪೂರ್ವ ಯುರೋಪಿಯನ್ ದೇಶಗಳು ಆ ಕಮ್ಯೂನಿಸ್ಟ್ ದೈತ್ಯನ ಉಪಗ್ರಹಗಳಾಗಿದ್ದವು. ಈಗ ಅವೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಷ್ಯಾವನ್ನು ಏಕಾಂಗಿಯಾಗಿಸುವ ಸಂಚು ಚೀನಾದ್ದು. ತನ್ನ ಯೋಜನೆಯಲ್ಲಿ ಯಶಸ್ವಿಯಾಗುತ್ತಿದ್ದಂತೆ ರಷ್ಯಾದಿಂದ ತನಗಾಗಿರುವ ‘ಐತಿಹಾಸಿಕ ಹಾನಿ’ಯನ್ನು ತುಂಬಿಕೊಳ್ಳಲು ಚೀನಾ ಮುಂದಾಗುತ್ತದೆ. ತನ್ನ ಸುಮಾರು ಐದೂವರೆ ಲಕ್ಷ ಚದರ ಕಿ.ಮೀ. ವಿಶಾಲ ಪ್ರದೇಶವನ್ನು ಝಾರ್ ಅರಸರ ಕಾಲದಲ್ಲಿ ರಷ್ಯಾ ಆಕ್ರಮಿಸಿಕೊಂಡಿತು ಎಂಬ ಕೂಗನ್ನು ಚೀನಾ 60ರ ದಶಕದ ಆದಿಭಾಗದಿಂದಲೂ ಹೊಮ್ಮಿಸುತ್ತಲೇ ಇದೆ. ರಷ್ಯಾದ ಅಗಾಧ ಸೇನಾಶಕ್ತಿಗೆ ಹೆದರಿ ಯಾವುದೇ ಕಾರ್ಯ ಯೋಜನೆಗಳನ್ನು ಚೀನಾ ಇದುವರೆಗೆ ಕೈಗೊಂಡಿಲ್ಲ. ಆದರೆ ಕಳೆದುಹೋದ ಪ್ರದೇಶಗಳ ಪ್ರಸ್ತಾಪ ಮಾಡುವುದನ್ನೂ ನಿಲ್ಲಿಸಿಲ್ಲ. ರಷ್ಯಾವನ್ನು ಸುತ್ತುವರೆದು, ಅದನ್ನು ಆರ್ಥಿಕವಾಗಿ ಏಕಾಂಗಿಯಾಗಿಸಿ, ಆ ಮೂಲಕ ಅದರ ಸೇನಾಶಕ್ತಿಯನ್ನು ಅರ್ಥಹೀನಗೊಳಿಸಿದ ಬಳಿಕ ಮಾಸ್ಕೋಗೆ ಸವಾಲೆಸೆಯುವುದು ಬೀಜಿಂಗ್​ಗೆ ಸುಲಭವಾಗುತ್ತದೆ. ದುರಂತವೆಂದರೆ ಅತಿ ಚಾಣಾಕ್ಷನಾದ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಈ ಅಪಾಯದ ಅರಿವು ತಟ್ಟಿಲ್ಲ.

ಚೀನಾದ ಈ ಎಲ್ಲ ಯೋಜನೆಗಳಿಂದ ಭಾರತಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಮೋದಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಅದರ ಭಾಗವಾಗಿಯೇ ಅದೀಗ ಇರಾನ್ ಜತೆಗೆ ಘನಿಷ್ಠ ಸಹಕಾರವನ್ನು ಸ್ಥಾಪಿಸಿಕೊಂಡು ಆ ಮೂಲಕ ಅಫ್ಘಾನಿಸ್ತಾನಕ್ಕೆ ಹತ್ತಿರವಾಗಿದೆ. ಅದರ ಮುಂದಿನ ಹೆಜ್ಜೆ ತುರ್ಕ್ ಮೆನಿಸ್ತಾನ್​ಗೆ ಸಾಗಿ ತೈಲದ ಮೇಲೆ ತೇಲುತ್ತಿರುವ ಆ ದೇಶವನ್ನು ಭಾರತಕ್ಕೆ ಹತ್ತಿರಾಗಿಸಿಕೊಳ್ಳುವುದು; ಅಷ್ಟರ ಮಟ್ಟಿಗೆ ಅದು ಚೀನಾದ ತೆಕ್ಕೆಗೆ ಸಿಕ್ಕಿಹೋಗದಂತೆ ನೋಡಿಕೊಳ್ಳುವುದು ದೂರಗಾಮಿ ಯೋಜನೆಯಂತೆ ಕಾಣುತ್ತಿದೆ. ಮಧ್ಯ ಏಷ್ಯಾವನ್ನು ಪೂರ್ವ ಯುರೋಪಿಗೆ ಜೋಡಿಸುವ ತುರ್ಕ್​ವೆುನಿಸ್ತಾನ್ ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಆಂಡ್ ರೋಡ್ ಯೋಜನೆಯ ಅತಿಮುಖ್ಯ ಕೊಂಡಿ ಎನ್ನುವುದನ್ನು ಗುರುತಿಸಿದರೆ ಮೋದಿ ಸರ್ಕಾರದ ಯೋಜನೆಯ ಮಹತ್ವ ಹಾಗೂ ಅಗಾಧತೆ ನಮ್ಮ ದೃಷ್ಟಿಗೆ ನಿಲುಕಬಲ್ಲದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top