Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಚಂದ್ರನತ್ತ ದೃಷ್ಟಿ ನೆಟ್ಟಿರುವ ಟೀಮ್ ಇಂಡಸ್

Wednesday, 26.07.2017, 3:00 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಸ್ಟಾರ್ಟಪ್ ಜಗತ್ತು ಇಂದು ಎಲ್ಲಾ ಕ್ಷೇತ್ರಗಳನ್ನೂ ಪ್ರವೇಶಿಸಿದೆ. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆಯಾದರೂ ಅಂತರಿಕ್ಷಯಾನಕ್ಕೆ ಯಾವುದೆ ಖಾಸಗಿ ಕಂಪನಿಗಳು ಮುಂದಾಗಿರಲಿಲ್ಲ. ಇದೀಗ ಆಕ್ಸಿಯೋಂ ರಿಸರ್ಚ್ ಲ್ಯಾಬ್ಸ್ ಪ್ರೈವೇಟ್ ಲಿ., ಒಡೆತನದ ಟೀಮ್ ಇಂಡಸ್, ರೋವರ್ ಒಂದನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಸಾಹಸಕ್ಕೆ ಮುಂದಾಗಿದೆ. ಗೂಗಲ್ ಪ್ರಾಯೋಜಕತ್ವದ ಲೂನಾರ್ ಎಕ್ಸ್​ಪ್ರೈಝå್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಜಗತ್ತಿನ ಐದು ಕಂಪನಿಗಳಲ್ಲಿ ಏಕೈಕ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಗಳಿಸಿದೆ. ಈ ವರ್ಷಾಂತ್ಯಕ್ಕೆ ಇಸ್ರೋದ ಅಂತರಿಕ್ಷ ನೌಕೆ ಪಿಎಸ್​ಎಲ್​ವಿ ನೆರವಿನೊಂದಿಗೆ ತನ್ನ ರೋವರ್​ಅನ್ನು ಚಂದ್ರನ ಕಕ್ಷೆಗೆ ಉಡ್ಡಯಿಸುವ ಯೋಜನೆ ರೂಪುಗೊಳಿಸಿದೆ ಟೀಮ್ ಇಂಡಸ್.

ಟೀಮ್ ಇಂಡಸ್ 2010ರಲ್ಲಿ ರಾಹುಲ್ ನಾರಾಯಣ್ ಆರಂಭಿಸಿದ ನವೋದ್ಯಮ. ಈ ಕಂಪನಿಯ ಆರಂಭದ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ರಾಹುಲ್ ದೆಹಲಿಯ ಐಐಟಿಯಿಂದ ಪದವಿ ಪಡೆದು ತಮ್ಮದೆ ಸಾಫ್ಟ್​ವೇರ್ ಉದ್ಯಮ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಮೆರಿಕದ ತಮ್ಮ ಗ್ರಾಹಕ ಸಂಸ್ಥೆಯೊಂದಿಗೆ ಸಂವಹನ ನಡೆಸುತ್ತಿದ್ದಾಗ ಗೂಗಲ್​ನ ಲೂನಾರ್ ಎಕ್ಸ್​ಪ್ರೈಝå್ ಸ್ಪರ್ಧೆ ಬಗ್ಗೆ ತಿಳಿಯತು. ಅದರ ಬಗ್ಗೆ ಅಂತರ್ಜಾಲದಲ್ಲಿ ತಡಕಾಡಿದಾಗ ಯಾವುದೆ ಭಾರತೀಯ ಕಂಪನಿ ಅದರಲ್ಲಿ ಪಾಲ್ಗೊಳ್ಳದಿರುವುದು ತಿಳಿದು ಭಾರತೀಯ ಕಂಪನಿಯೊಂದು ಏಕೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಾರದು ಎಂದು ಆಲೋಚಿಸಿ ತಮ್ಮ ಸಾಫ್ಟ್​ವೇರ್ ಕಂಪನಿಯನ್ನು ಮುಚ್ಚಿ ಟೀಮ್ ಇಂಡಸ್ ಸ್ಥಾಪನೆಗೆ ಮುಂದಾದರು. ಇದರ ಬಗ್ಗೆ ಆಸಕ್ತಿ ಹೊಂದಿದ್ದ ಸಮಾನ ಮನಸ್ಕರ ತಂಡ ಕಟ್ಟಿ ರೂಪುರೇಷೆ ತಯಾರಿಸಿದರು. ತಮಗೆ ಈ ಕ್ಷೇತ್ರದಲ್ಲಿ ಅನುಭವ ಇಲ್ಲದ ಕಾರಣ ಅನುಭವ ಇರುವವರ ಸಲಹೆ ಪಡೆಯಲು ನಿರ್ಧರಿಸಿ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರನ್ನು ಸಂರ್ಪಸಿ ಅವರ ಸಲಹೆಯಂತೆ ಇಸ್ರೋದ ನೆರವು ಪಡೆದು ಯೋಜನೆ ಆರಂಭಿಸಿದರು.

ಲೂನಾರ್ ಎಕ್ಸ್​ಪ್ರೈಝå್ ಸ್ಪರ್ಧೆ 2007ರಲ್ಲಿಯೇ ಘೊಷಣೆಯಾಗಿತ್ತು ಅದರಲ್ಲಿ ಪಾಲ್ಗೊಳ್ಳಲು 2010ರ ಡಿಸೆಂಬರ್ 31 ಕಡೆಯ ದಿನಾಂಕವಾಗಿತ್ತು. ಸ್ಪರ್ಧೆಯಲ್ಲಿ ನೋಂದಾಯಿಸಿ ಕೊಳ್ಳಲು 50,000 ಅಮೆರಿಕನ್ ಡಾಲರ್ ಹಣ ಕಟ್ಟಬೇಕಿತ್ತು ಹೇಗೋ ಹಣ ಹೊಂದಿಸಿ ಕೊನೆಯ ಕ್ಷಣದಲ್ಲಿ ನೋಂದಾಯಿಸಿಕೊಂಡು ಅಂತಿಮ ಐದು ಕಂಪನಿಗಳಲ್ಲಿ ಒಂದಾಗಿ ಹೊರ ಹೊಮ್ಮುವುದರೊಂದಿಗೆ ಗೂಗಲ್​ನಿಂದ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಮೈಲ್​ಸ್ಟೋನ್ ಬಹುಮಾನವನ್ನೂ ಗೆದ್ದಿದೆ. ಗೂಗಲ್​ನ ಲೂನಾರ್ ಎಕ್ಸ್​ಪ್ರೈಝå್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಖಾಸಗಿಯಾಗಿ ಹಣ ಹೂಡಿಕೆಯಾದ ಕಂಪನಿಗಳು ಮಾತ್ರ ಅರ್ಹವಾಗಿರುತ್ತವೆ. ಯಾವ ಕಂಪನಿಯ ರೋವರ್ ಮೊದಲಿಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿ, ಕಕ್ಷೆಯಲ್ಲಿ ರೋವರ್ 500 ಮೀಟರ್ ಚಲಿಸಿ ಅಲ್ಲಿಂದ ಭೂಮಿಗೆ ಹೈಡೆಫನಿಷನ್ ವಿಡಿಯೋ ಹಾಗೂ ಛಾಯಾಚಿತ್ರ ರವಾನಿಸುತ್ತದೋ ಅದು ವಿಜಯಿಯಾಗುತ್ತದೆ. ವಿಜೇತ ತಂಡಕ್ಕೆ 20 ಮಿಲಿಯನ್ ಅಮೆರಿಕನ್ ಡಾಲರ್(129 ಕೋಟಿ ರೂಪಾಯಿ) ಬಹುಮಾನ ಲಭಿಸುತ್ತದೆ. ದ್ವಿತೀಯ ಬಹುಮಾನ ಪಡೆದವರಿಗೆ 5 ಮಿಲಿಯನ್ ಅಮೆರಿಕನ್ ಡಾಲರ್ ಲಭಿಸುತ್ತದೆ.

ಒಟ್ಟಾರೆ ಯೋಜನೆಗೆ 400-450 ಕೋಟಿ ರೂಪಾಯಿ ತಗುಲಲಿದ್ದು, ನಂದನ್ ನಿಲೇಕಣಿ, ರತನ್ ಟಾಟಾ, ಫ್ಲಿಪ್ ಕಾರ್ಟ್​ನ ಸಚಿನ್ ಹಾಗೂ ಬಿನ್ನಿ ಬನ್ಸಲ್ ಸೇರಿದಂತೆ ದಿಗ್ಗಜ ಉದ್ಯಮಿಗಳಿಂದ ಸುಮಾರು ನೂರು ಕೋಟಿ ಬಂಡವಾಳ ಪಡೆದಿದ್ದು, ಉಡ್ಡಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ, ಚಂದ್ರನ ಮೇಲೆ ಹೆಸರು ದಾಖಲಿಸಲು ಇಂತಿಷ್ಟು ಹಣ ಎಂಬ ಮಾದರಿ, ಕ್ರೌಡ್ ಫಂಡಿಂಗ್ ಹಾಗೂ ಇತರೆ ಮೂಲಗಳಿಂದ ಬಂಡವಾಳ ಗಳಿಸುವ ಉದ್ದೇಶ ಹೊಂದಿದೆ. ಇಸ್ರೋದ 12 ಮಾಜಿ ವಿಜ್ಞಾನಿಗಳು ಹಾಗೂ ಯುವ ಇಂಜಿನಿಯರ್​ಗಳ ಸುಮಾರು 100 ಉದ್ಯೋಗಿಗಳ ತಂಡ ಹೊಂದಿರುವ ಟೀಮ್ ಇಂಡಸ್, ಈ ವರ್ಷದ ಡಿಸೆಂಬರ್ ಅಂತ್ಯದಲ್ಲಿ ನಡೆಸಲು ಉದ್ದೇಶಿಸಿರುವ ಉಡ್ಡಯನಕ್ಕೆ ಸಮರೋಪಾದಿಯಲ್ಲಿ ತಯಾರಿ ನಡೆಸಿದೆ. ಒಂದು ವೇಳೆ ಈ ಉಡ್ಡಯನ ಯಶಸ್ವಿಯಾದರೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಲಭ್ಯವಿರುವ ಅಪಾರವಾದ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಟೀಮ್ ಇಂಡಸ್​ಗೆ ಸಾಧ್ಯವಾಗಲಿದೆ. ಅಂತರಿಕ್ಷ ಯಾನದಂತಹ ಕಠಿಣ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಹೊರಟಿರುವ ಟೀಮ್ ಇಂಡಸ್​ನ ಕಾರ್ಯಕ್ಕೆ ಯಶ ದೊರೆಯಲಿ ಎಂದು ಹಾರೈಸೋಣ.

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *

Back To Top