Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಗ್ರಹಿಕೆ ಬದಲಾಗುತ್ತಿದೆ, ಗ್ರಾಹಕನೂ ಬದಲಾಗುತ್ತಿದ್ದಾನೆ

Sunday, 01.10.2017, 3:05 AM       No Comments

ಅನುದಿನವೂ ಅನುಕ್ಷಣವೂ ಗ್ರಾಹಕರೇ ಆಗಿರುವ ನಮಗೆ ನಿತ್ಯವೂ ಗ್ರಾಹಕೋತ್ಸವವೇ ಆಗಿಬಿಟ್ಟಿದೆ! ಆದರೆ ನಮಗೆ ನಿಜಕ್ಕೂ ಪ್ರಸ್ತುತವಿರುವುದು ನಮ್ಮ ಸುತ್ತಲಿನ ಪ್ರಪಂಚ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎನ್ನುವುದು. ಏಕೆಂದರೆ, ಈ ಬದಲಾವಣೆಗಳಿಂದ ನಮ್ಮ ಜೀವನವೂ, ಜೀವನಶೈಲಿಯೂ ಬದಲಾಗುತ್ತದೆ.

 ‘ಪ್ರಪಂಚ ಬದಲಾಗುತ್ತಿದೆ!’ ಎಂದರೆ, ಆ ಮಾತನ್ನು ಯಾರೂ ನಿರಾಕರಿಸುವುದಿಲ್ಲ. ಏಕೆಂದರೆ, ಎಲ್ಲ ಕಾಲಮಾನಗಳಲ್ಲಿಯೂ ಎಲ್ಲರಿಗೂ ಹೀಗೆಯೇ ಅನ್ನಿಸಿದೆ! ಪ್ರಪಂಚ ಬದಲಾಗಿದೆ ಎನ್ನುವಾಗ ನಮ್ಮ ಮನಸ್ಸಿನಲ್ಲಿ ಮೂಡುವುದು ಜಾಗತಿಕ ಮಟ್ಟದ ಬದಲಾವಣೆಯ ಚಿತ್ರವಾದರೆ, ಅದು ನಮ್ಮ ಮನಸ್ಸಿನಲ್ಲಿ ಅತೀವವಾದ ಸಂತೋಷವನ್ನೋ ಸಂತಾಪವನ್ನೋ ಪ್ರಾಯಶಃ ಬಿತ್ತಲಾರದು. ಏಕೆಂದರೆ, ಬದಲಾವಣೆಯೇ ಶಾಶ್ವತವೆನ್ನುವುದು ಎಲ್ಲರಿಗೂ ಸದೃಶವಾದ ವೈಚಿತ್ರ್ಯ ಮತ್ತು ವಿರೋಧಾಭಾಸ.

ಗ್ರಾಹಕರಾಗಿ ನೀವು ಕಳೆದೆರಡು ವಾರದ ವಿದ್ಯಮಾನಗಳನ್ನು ಗಮನಿಸಿದ್ದೀರಿ. ‘ಬಿಗ್ ಬಿಲಿಯನ್ ಸೇಲ್’, ‘ಗ್ರೇಟ್ ಇಂಡಿಯನ್ ಸೇಲ್’ಗಳು ಆನ್​ಲೈನ್ ಗ್ರಾಹಕರನ್ನು ಸೆಳೆದರೆ, ಶೇ 10ರಿಂದ 50ರವರೆಗಿನ ಹಬ್ಬದ ರಿಯಾಯಿತಿಗಳು ಆಫ್​ಲೈನ್ ಗ್ರಾಹಕರನ್ನು ತಮ್ಮ ಬಳಿಗೆ ಕರೆಸಿ ಮೆರೆಸುತ್ತಿವೆ. ಗ್ರಾಹಕರಾಗಿ ನೀವು ಮುಂದಿನ ಎರಡು ವಾರದ ವಿದ್ಯಮಾನಗಳನ್ನೂ ಗಮನಿಸಲಿದ್ದೀರಿ. ನಿಮಗೆ ಇನ್ನಷ್ಟು ಸುಗ್ಗಿ ಕಾದಿದೆ. ಈ ಎಲ್ಲ ಸೇಲ್, ರಿಯಾಯಿತಿ, ಕಡಿತ, ಉಚಿತ, ಡಿಸ್ಕೌಂಟ್​ಗಳು ಹಬ್ಬದ ಮಾಸದುದ್ದಕ್ಕೂ ನಿಮ್ಮನ್ನು ಕೈಬೀಸಿ ಕರೆಯಲಿವೆ. ಅಷ್ಟೇ ಏಕೆ? ಪ್ರೀತಿಸುವವರಿಗೆ ನಿತ್ಯವೂ ‘ವ್ಯಾಲಂಟೈನ್ಸ್ ಡೇ’ ಇರುವಂತೆ, ಅನುದಿನವೂ ಅನುಕ್ಷಣವೂ ಗ್ರಾಹಕರೇ ಆಗಿರುವ ನಮಗೆಲ್ಲರಿಗೂ ಹುಡುಕಿ ಹೊರಟರೆ ನಿತ್ಯವೂ ಗ್ರಾಹಕೋತ್ಸವವೇ! ಹೀಗಿರುವಾಗ, ವಿಶ್ವ ಗ್ರಾಹಕರಾದ ನಾವು ಏನನ್ನು ಅಪೇಕ್ಷಿಸಬೇಕು. ಏನನ್ನು ಅಪೇಕ್ಷಿಸಬಾರದು ಎನ್ನುವುದನ್ನು ವಿಮಶಿಸಲು ನಿಷ್ಕರ್ಷಿಸಲು ಈ ಹಬ್ಬದ ಸಂಭ್ರಮ ಒಳ್ಳೆಯ ನೆವ.

ಗ್ರಾಹಕರಾದ ನಮಗೆ ನಿಜಕ್ಕೂ ಪ್ರಸ್ತುತವಿರುವುದು ನಮ್ಮ ಸುತ್ತಲಿನ ಪ್ರಪಂಚ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎನ್ನುವುದು. ಏಕೆಂದರೆ, ನಮ್ಮ ಸುತ್ತಲೂ ನಡೆಯುವ ಬದಲಾವಣೆಗಳ ಪರಿಣಾಮ ನಮ್ಮ ಮೇಲೆ ನೇರವಾಗಿ ಆಗುತ್ತದೆ. ಈ ಬದಲಾವಣೆಗಳಿಂದ ನಮ್ಮ ಜೀವನವೂ, ಜೀವನಶೈಲಿಯೂ ಬದಲಾಗುತ್ತದೆ. ಅದರಿಂದ, ನಮಗಾಗುವ ಲಾಭ, ನಷ್ಟಗಳಲ್ಲಿ ಏರುಪೇರಾಗಬಹುದು. ನಮ್ಮ ಸಂಬಂಧಗಳು ಬದಲಾಗಬಹುದು. ಒಟ್ಟಿನಲ್ಲಿ, ನಮ್ಮ ಜೀವನದ ಗತಿ, ಪ್ರಗತಿಗಳಲ್ಲಿ ವ್ಯತ್ಯಯಗಳಾಗಬಹುದು. ಆದ್ದರಿಂದ, ಸದಾ ಗ್ರಾಹಕರೇ ಆದ ನಮಗೆ, ನಮ್ಮ ದೈನಂದಿನ ಜೀವನದ ಓಟದಲ್ಲಿ ನಮ್ಮ ಸುತ್ತಲೂ ನಡೆಯುವ ಬದಲಾವಣೆಗೇ ಹೆಚ್ಚಿನ ಮಹತ್ವ.

ಆದರೆ, ನಮ್ಮ ಸುತ್ತಲೂ ನಡೆಯುವ ಸಣ್ಣ ಬದಲಾವಣೆಗಳಿಗೂ, ದೇಶ/ಜಾಗತಿಕ ಸ್ತರದಲ್ಲಿ ಆಗುವ ದೊಡ್ಡ ಬದಲಾವಣೆಗಳಿಗೂ ನೇರವಾದ ಮತ್ತು ಅವಿಚ್ಛಿನ್ನವಾದ ಸಂಬಂಧವಿದೆ. ಈ ಹಿಂದೆ, ಆರ್ಥಿಕ ಮತ್ತು ರಾಜಕೀಯ ವಲಯಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಬಂಧ, ಇಂದು, ಅವೆರಡಕ್ಕಿಂತ ನಾಜೂಕಾದ ಸಾಮಾಜಿಕ ವಲಯಕ್ಕೂ ವಿಸ್ತರಿಸಿದೆ. ಇದರಿಂದಾಗಿ, ಮನುಷ್ಯ ಸಂಬಂಧಗಳ ಮೇಲಿನ ಪರಿಣಾಮ ಹೆಚ್ಚಿದೆ. ಜಾಗತೀಕರಣಗೊಂಡ ಇಂದಿನ ಪ್ರಪಂಚದಲ್ಲಿ, ಸಾಮಾನ್ಯ ಜನರಾದ ನಾವು ಪ್ರಗತಿಯ ಒಂದೊಂದು ಮೆಟ್ಟಿಲನ್ನು ಏರುತ್ತಿದ್ದಂತೆ, ವಿಶ್ವವ್ಯಾಪಿ ಪ್ರವೃತ್ತಿಗಳ ಸೆಳೆತಕ್ಕೆ ಹೆಚ್ಚು ಹೆಚ್ಚು ಒಳಪಡುತ್ತಿದ್ದೇವೆ.

ಉದಾಹರಣೆಗೆ, ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸುತ್ತಲೂ ಆಗಿರುವ ಬದಲಾವಣೆಗಳನ್ನೇ ಗಮನಿಸಿ. ಒಂದೂವರೆ ದಶಕದ ಕೆಳಗೆ ಜಾಗತಿಕವಾಗಿ ಆದ ಬದಲಾವಣೆಗಳಲ್ಲೊಂದು- ಮೊಬೈಲ್ ತಂತ್ರಜ್ಞಾನದಲ್ಲಾದ ಪ್ರಗತಿ. ವಾಣಿಜ್ಯ ಬಳಕೆಗಾಗಿ ಆರಂಭಗೊಂಡ ಮೊಬೈಲ್ ತಂತ್ರಜ್ಞಾನದ ಬಳಕೆ, ಮೊದಮೊದಲಿಗೆ ಉದ್ಯಮ ವಲಯಗಳಿಗೆ ಮಾತ್ರ ಸೀಮಿತವಾಗಿತ್ತು. ಸಾಮಾನ್ಯರು ಸ್ಥಿರ ದೂರವಾಣಿಗೆ ಪರ್ಯಾಯವಿಲ್ಲವೆಂಬಂತೆಯೇ ಇದ್ದರು. ಕೆಲವೇ ವರ್ಷಗಳ ನಂತರ ನೋಡಿದರೆ, ನಮ್ಮ ನಗರಗಳಲ್ಲೆಲ್ಲೂ ಎಸ್​ಟಿಡಿ ಬೂತ್​ಗಳೇ ಕಾಣಸಿಗದಂಥ ಪರಿಸ್ಥಿತಿ! ನಮಗಿಷ್ಟವಿರಲಿ ಬಿಡಲಿ, ನಮಗೆ ಹತ್ತಿರದವರ ಸಂಪರ್ಕದಲ್ಲಿರಬೇಕಾದರೆ, ಮೊಬೈಲ್ ಫೋನ್ ಕೊಳ್ಳಲೇಬೇಕು ಎನ್ನುವ ಪರಿಸ್ಥಿತಿ ಬಂತು. ಈಗ, ಮಾಮೂಲಿ ಮೊಬೈಲ್ ಫೋನ್ ಬದಲಾಗಿ, ಎಲ್ಲರ ಕೈಗೆ ಸ್ಮಾರ್ಟ್​ಫೋನ್ ಬರುತ್ತಿದೆ (ಈಗಾಗಲೇ ಸ್ಮಾರ್ಟ್​ಫೋನ್​ಗಳು ಮೊಬೈಲ್ ಬಳಕೆದಾರರಲ್ಲಿ ಪ್ರತಶತ 65-70 ಮಂದಿಯನ್ನು ತಲುಪಿದೆ ಎನ್ನುತ್ತದೆ ಒಂದು ಸ್ಥೂಲ ಅಂದಾಜು). ಕೆಲವೇ ದಿನಗಳಲ್ಲಿ, ಇದು ಯಾರ ಆಯ್ಕೆಯಾಗಿಯೂ ಉಳಿಯುವುದಿಲ್ಲ! ಪರ್ಯಾಯವಿಲ್ಲದ ಅನಿವಾರ್ಯವಾಗಿಬಿಡುತ್ತದೆ. ಕೈಗೆ ಸ್ಮಾರ್ಟ್​ಫೋನ್ ಬಂದಮೇಲೆ- ಅದರಲ್ಲೂ ಅಂತರ್ಜಾಲ ಸಂಪರ್ಕವುಳ್ಳ ಡಿವೈಸ್ ಬಂದಮೇಲೆ- ಜಗತ್ತಿನ ಎಲ್ಲಾ ಸೇವೆ-ಉತ್ಪನ್ನಗಳು ನಿಮ್ಮ ಬೆರಳತುದಿಗೆ ಬಂದಂತೆ. ಇದರಿಂದಾಗಿ, ನೀವು ಎಲ್ಲಿದ್ದರೂ ಒಬ್ಬಂಟಿಯಲ್ಲ ಎನ್ನುವುದು ವೈಯಕ್ತಿಕ ಸತ್ಯವಾದರೆ, ನಿಮಗೆ ಯಾವುದೋ ಉತ್ಪನ್ನವನ್ನೋ ಸೇವೆಯನ್ನೋ ಮಾರಲು ಹವಣಿಸುವ ವರ್ತಕ-ಪ್ರವರ್ತಕರು, ನಿಮ್ಮನ್ನು ಒಬ್ಬಂಟಿಯಾಗಿರಲು ಬಿಡುವುದಿಲ್ಲ ಎನ್ನುವುದು ಸಾಮಾಜಿಕ/ವಾಣಿಜ್ಯಾತ್ಮಕ ಸತ್ಯ. ಹಾಗೆಯೇ, ನಾವು ಎಲ್ಲಿದ್ದರೂ ನಮ್ಮ ಗುರುತು/ಸುಳಿವು ಪತ್ತೆ ಹಚ್ಚುವುದು ಮೊಬೈಲ್ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಜಿಪಿಎಸ್ ತಂತ್ರಜ್ಞಾನವನ್ನು ಉಪಯೋಗಿಸಿ- ‘ಇಗೊಳ್ಳಿ, ನಿಮ್ಮ ಕಾರು/ಬೈಕು ಈ ದಿಕ್ಕಿನಲ್ಲಿ, ಇಷ್ಟು ವೇಗದಲ್ಲಿ ಚಲಿಸುತ್ತಿದೆ’ ಎನ್ನುವ ನಿರ್ದಿಷ್ಟ ಮಾಹಿತಿ ನಮಗೀಗ ಅತಿ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಲಭ್ಯ. ಆದರೆ, ಇದೇ ಮೊಬೈಲ್​ನಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಮಾತ್ರವಲ್ಲ, ಫೋನ್​ನಲ್ಲಿ ಮಾತನಾಡುವ ಭರದಲ್ಲಿ ಎದುರಿಗಿರುವವರನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಎಷ್ಟೋ ಸಮಯದ ಮೇಲೆ ಭೇಟಿಯಾದ ಇಬ್ಬರು ಉಭಯ ಕುಶಲೋಪರಿಯನ್ನು ಹೊರತುಪಡಿಸಿ ಬೇರೇನೂ ಮಾತನಾಡದೆ ‘ಮಿಕ್ಕಿದ್ದನ್ನು ಫೋನ್​ನಲ್ಲಿ ಮಾತನಾಡಿಕೊಳ್ಳೋಣ’ ಎನ್ನುವುದು ನಿತ್ಯದ ದೃಶ್ಯವಾಗಿದೆ. ಒಟ್ಟಿನಲ್ಲಿ ಮೊಬೈಲ್ ಸರ್ವಾಂತರ್ಯಾಮಿಯಾಗಿದೆ. ಅದು ಸ್ಮಾರ್ಟ್ ಆದ ಮೇಲಂತೂ, ಸರ್ವಸ್ವವೇ ಆಗಿದೆ. ಇದು, ಸಾಮಾಜಿಕ ಪರಿಣಾಮವಾದರೆ, ಮೊಬೈಲ್ ತಂತ್ರಜ್ಞಾನದಿಂದಾಗಿರುವ ಆರ್ಥಿಕ ಪರಿಣಾಮ ಇನ್ನೂ ದೊಡ್ಡದು. ಅದು ಹೇಗೆಂದರೆ- ಯಾವುದೇ ಅರ್ಥವ್ಯವಸ್ಥೆಯ ಚಲನಾತ್ಮಕತೆಯನ್ನು ನಿರ್ಧರಿಸುವುದು ಆ ವ್ಯವಸ್ಥೆಯೊಳಗೆ ನಡೆಯುವ ಚಟುವಟಿಕೆಯ ಮಟ್ಟ. ಚಟುವಟಿಕೆಯ ಮಟ್ಟವನ್ನು ನಿರ್ಧರಿಸುವುದು, ಮಾಹಿತಿ ವಿನಿಮಯದ ಗತಿ. ಮಾಹಿತಿ ವಿನಿಮಯದ ಗತಿಯನ್ನು ನಿರ್ಧರಿಸುವುದು, ಅದಕ್ಕಾಗಿ ಲಭ್ಯವಿರುವ ಸಲಕರಣೆಗಳು ಮತ್ತು ಅವು ಕೈಗೆಟುಕುವಂತಿವೆಯೇ ಎನ್ನುವುದು. ಸಲಕರಣೆಗಳು ಕೈಗೆಟುಕುವಂತಾಗುವುದು ಜನರ ಕೊಳ್ಳುವ ಶಕ್ತಿ ಹೆಚ್ಚಿದಾಗ. ಆದರೆ, ಕೊಳ್ಳುವ ಶಕ್ತಿ ಹೆಚ್ಚುವುದು, ಅರ್ಥವ್ಯವಸ್ಥೆ ಚಲನಾತ್ಮಕವಾದಾಗ. ಅಂದರೆ, ಇದೊಂದು ವರ್ತಲ! ಸ್ಮಾರ್ಟ್ ಮೊಬೈಲ್ ತಂತ್ರಜ್ಞಾನ ಸರ್ವವ್ಯಾಪಿಯಾಗಿ ಉಪಕರಣ ಮತ್ತು ಮೊಬೈಲ್ ಸೇವೆಯ ಬೆಲೆ ಕಡಿಮೆಯಾಗುತ್ತಿದ್ದಂತೆ, ಅದರ ನೇರ ಪರಿಣಾಮ ಆರ್ಥಿಕ ವ್ಯವಸ್ಥೆ ಮತ್ತು ಪ್ರಗತಿಯ ಮೇಲಾಗುತ್ತದೆ. ಹತ್ತು ವರ್ಷದ ಕೆಳಗೆ ನಾವು ಕಂಡುಕೇಳರಿಯದ ಉಪಕರಣ- ದುಡ್ಡಿರುವವರ ಆಟಿಕೆ ಎಂದು ಸಾಮಾನ್ಯರು ಮೂಗು ಮುರಿಯುತ್ತಿದ್ದ ಅಂದಿನ ದುಬಾರಿ ಮತ್ತು ಫ್ಯಾನ್ಸಿ ಗ್ಯಾಜೆಟ್- ಇಂದು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನಶೈಲಿಗಳೆರಡನ್ನೂ ನಿಯಂತ್ರಿಸುತ್ತಿದೆ. ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಆವರಿಸಿಕೊಂಡುಬಿಟ್ಟಿದೆ. ಇದು, ಜಾಗತಿಕ ಮಟ್ಟದ ಬದಲಾವಣೆ ಹೇಗೆ ನಮ್ಮ ಸುತ್ತಲೂ ನಡೆಯುತ್ತಿರುವ ಚಟುವಟಿಕೆಯನ್ನು ಶಾಶ್ವತವಾಗಿ ಬದಲಿಸಬಲ್ಲದು ಎನ್ನುವುದಕ್ಕೆ ಸಣ್ಣ ಮತ್ತು ಅತಿಸರಳೀಕೃತವಾದ ಉದಾಹರಣೆ ಮಾತ್ರ. ಇಂತಹ ಅನೇಕ ಬದಲಾವಣೆಯ ವಾಹಕಗಳು ಇಂದು ನಮ್ಮ ಸುತ್ತಲೂ ತಮ್ಮ ನೆಲೆಯನ್ನು ಸ್ಥಾಪಿಸಿಕೊಳ್ಳಲಾರಂಭಿಸಿವೆ. ನಮ್ಮ ನಡವಳಿಕೆಯನ್ನು ಬದಲಿಸುತ್ತಿವೆ. ಕೆಲವನ್ನು ಮಾತ್ರ ಉದಾಹರಿಸುವುದಾದರೆ- ನಮ್ಮ ಅತ್ಯಂತ ಆಪ್ತರಿಗೂ ಹೇಳಲು ಹಿಂಜರಿಯುತ್ತಿದ್ದ ವಿಷಯಗಳನ್ನು ‘ಫೇಸ್​ಬುಕ್’ನಂತಹ ಸಾಮಾಜಿಕ ಮಾಧ್ಯಮದಲ್ಲಿ ಎಗ್ಗಿಲ್ಲದೆ ಬಿತ್ತರಿಸಿಬಿಡುತ್ತಿದ್ದೇವೆ! ‘ಟ್ವಿಟರ್’ನಲ್ಲಿ ಏನನ್ನೋ ಹೇಳಿಕೊಂಡ ಮಂತ್ರಿಗಳು, ದೊಡ್ಡ ಕಂಪನಿಗಳ ಹಿರಿಯ ಅಧಿಕಾರಿಗಳು ಕೆಲಸ ಕಳೆದುಕೊಂಡು ಮನೆಗೆ ಹೋದ ಘಟನೆಗಳು, ನಮ್ಮ ದೇಶದಲ್ಲಿಯೇ ನಡೆದುಬಿಟ್ಟಿವೆ. ವೈಯಕ್ತಿಕ ಮಾಧ್ಯಮಕ್ಕೂ ಅರೆ-ಸಾಮೂಹಿಕ ಮಾಧ್ಯಮಕ್ಕೂ ಇರುವ ವ್ಯತ್ಯಾಸವನ್ನು ಜನರು ಗ್ರಹಿಸುವಷ್ಟರಲ್ಲಿ, ಸಾಮಾಜಿಕ ಮಾಧ್ಯಮ ನಮ್ಮೆಲ್ಲರ ಜೀವನಗಳನ್ನು ಆವರಿಸಿಕೊಂಡುಬಿಟ್ಟಿದೆ.

ಇದರಿಂದಾಗಿ, ನಾವು ನಮ್ಮ ವೈಯಕ್ತಿಕ ರುಚಿ, ಅಭಿರುಚಿಗಳ ಬಗ್ಗೆ ಕಾಪಾಡಿಕೊಳ್ಳಬೇಕೆಂದಿದ್ದ ರಹಸ್ಯಗಳೆಲ್ಲ ಈಗಾಗಲೇ ಬಟಾಬಯಲಾಗಿ, ಗ್ರಾಹಕರಾಗಿ ನಾವು ನಮ್ಮ ಬಗೆಗಿನ ಎಲ್ಲ ಮಾಹಿತಿಯನ್ನೂ ದೊಡ್ಡ ಕಂಪನಿಗಳ ಕೈಗಿತ್ತು, ನಗ್ನರಾಗಿ ಕುಳಿತಿದ್ದೇವೆ. ನಾವು ಯಾರು, ನಮ್ಮ ಅಭ್ಯಾಸ/ಧೋರಣೆ/ಪ್ರವೃತ್ತಿಗಳೇನು ಎನ್ನುವುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿರುವ ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳಿಗೆ ಮೂಲಸರಕನ್ನು ನಾವೇ ಉಚಿತವಾಗಿ ಒದಗಿಸುತ್ತಿದ್ದೇವೆ. ಗ್ರಾಹಕರಾಗಿ ನಾವು ಇಂದು ಹೆಚ್ಚು ಹೆಚ್ಚು ಪಾರದರ್ಶಕವಾಗಿದ್ದೇವೆ. ಮಾರುವವರಿಗೆ ಸುಲಭವಾಗಿ ದಕ್ಕುವಂತಾಗಿದ್ದೇವೆ! ಇನ್ನು, ಹೂಡಿಕೆಯ ವಿಷಯದಲ್ಲಿಯೂ ಜನರ ಧೋರಣೆ ಬದಲಾಗಿದೆ. ಕಳೆದ ದಶಕದಲ್ಲಿ ಜಗತ್ತು ಕಂಡ ರಿಸೆಷನ್/ಸ್ಲೋಡೌನ್​ಗಳ ನಂತರ ಜನರ ‘ರಿಸ್ಕ್ ಪ್ರೊಫೈಲ್’ ಬದಲಾಗಿ, ಜನರು ಸ್ವಲ್ಪ ತಣ್ಣಗಾಗಬಹುದು ಎಂಬ ಊಹೆ ಸುಳ್ಳಾಗಿದೆ! ಜನರಲ್ಲಿ ಕೊಳ್ಳುಬಾಕತನ ಹೆಚ್ಚಾಗಿರುವುದು ಮಾತ್ರವಲ್ಲ, ಅಪಾಯ/ಫೈನಾನ್ಷಿಯಲ್ ರಿಸ್ಕ್ ಹೆಚ್ಚಿರುವ ಸಾಧನಗಳಲ್ಲಿನ ಹೂಡಿಕೆ ಹಿಂದಿಗಿಂತಲೂ ಹೆಚ್ಚಾಗಿದೆಯಂತೆ! ನಾವು ಪಾಠ ಕಲಿಯಲು ಬಿಡದಂತಹ ವ್ಯವಸ್ಥೆಯೊಂದು ಪರದೆಯ ಹಿಂದಿರುವುದು, ಸುದ್ದಿ-ವಿಶ್ಲೇಷಣೆಗಳು ಮತ್ತು ಮಾಹಿತಿ ಯಥೇಚ್ಛವಾಗಿ ಲಭ್ಯವಿರುವ ಈ ಯುಗದಲ್ಲಿಯೂ ಹೂಡಿಕೆದಾರರ ಗ್ರಹಿಕೆಗೆ ಬರುತ್ತಿಲ್ಲ. ಒಮ್ಮೊಮ್ಮೆ ಬಂದರೂ, ಗ್ರಾಹಕರಾಗಿ ನಾವು ಹೇಗೆ ಎಚ್ಚರಿಕೆಯಿಂದಿರಬೇಕು ಎನ್ನುವುದರ ಬಗ್ಗೆ ಕನಿಷ್ಠಪಕ್ಷ ಗೂಗಲ್​ನಲ್ಲಾದರೂ ಸಂಶೋಧನೆ ಮಾಡಲು ಯಾರಿಗೂ ಸಮಯ ವ್ಯವಧಾನಗಳಿಲ್ಲ!

ಇದಕ್ಕೆ ಕಾರಣ ವಿವರಿಸಲು ತಜ್ಞರು ತಿಣುಕಾಡುತ್ತಿರುವಾಗಲೇ, ದೇಶದ ಸಣ್ಣ-ಪುಟ್ಟ ಊರುಗಳಲ್ಲಿಯೂ ಷೇರುಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುವ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಿದೆ. ಒಂದೆಡೆ, ‘ಚಿನ್ನ ಕೊಳ್ಳಿ’ ಎಂದು ನಮ್ಮನ್ನು ಪ್ರೇರೇಪಿಸುವ ಜಾಹೀರಾತುಗಳು ಕಂಡುಬಂದರೆ, ಪಕ್ಕದಲ್ಲೇ ‘ನಿಮ್ಮ ಬಳಿ ಇರುವ ಚಿನ್ನವನ್ನು ಅಡ ಇಟ್ಟು, ಇಂದಿನ ಜೀವನವನ್ನು ಸುಗಮವಾಗಿಸಿಕೊಳ್ಳಿ’ ಎಂದು ಉತ್ತೇಜಿಸುವ ಬೃಹತ್ ಫಲಕಗಳು ಅಣಕಿಸುತ್ತವೆ. ಹತ್ತಿರದ ‘ಸೇಠು-ಅಂಗಡಿ’ಯವ ಮಾಡುತ್ತಿದ್ದ ಒಡವೆಗಳನ್ನು ಮಾರುವ ಮತ್ತು ಅಡ ಇಟ್ಟು ಬಡ್ಡಿಗೆ ಹಣ ಕೊಡುವ ಲೇವಾದೇವಿಯನ್ನು, ಇಂದು ಸಾವಿರಾರು ಶಾಖೆಗಳುಳ್ಳ ಬೃಹತ್ ಕಂಪನಿಗಳು ಮಾಡುತ್ತಿವೆ! ಇನ್ನೊಂದೆಡೆ, ಪಕ್ಕದ ಕಿರಾಣಿ ಅಂಗಡಿಯವ ಕೊಡಲಾಗದ ರಿಯಾಯಿತಿ ದರದಲ್ಲಿ ದೊಡ್ಡ ಸೂಪರ್​ವಾರ್ಕೆಟ್​ಗಳು ತಮ್ಮ ಸರಕನ್ನು ಮಾರುತ್ತಿವೆ. ಆದರೆ, ದೊಡ್ಡ ನಗರಗಳ ಜನರಿಗೆ ಸೂಪರ್ ಮಾರ್ಕೆಟ್​ಗೆ ಹೋಗಲೂ ಸೋಮಾರಿತನ. ಆದ್ದರಿಂದ, ವಜ್ರಾಭರಣಗಳಿಂದ ಹಿಡಿದು ಸೊಪ್ಪು-ತರಕಾರಿಗಳವರೆಗೆ, ಪುಸ್ತಕಗಳಿಂದ ಹಿಡಿದು ಡಯಾಪರ್​ಗಳವರೆಗೆ ಎಲ್ಲವನ್ನೂ ಅಂತರ್ಜಾಲದ ಮುಖೇನ ಮನೆಯ ಬಾಗಿಲಿಗೇ ತರಿಸಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಯಾವ ಗತಿಯಲ್ಲಿ ಇ-ವಾಣಿಜ್ಯ ಬೆಳೆಯುತ್ತಿದೆಯೋ, ಪ್ರಗತಿಶೀಲವಾದ ನಮ್ಮ ರಾಜ್ಯದಲ್ಲಿ ಅದಕ್ಕಿಂತಲೂ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದೆ!

ಇನ್ನು, ಇದೆಲ್ಲದರ ತಲೆಯ ಮೇಲೆ ರೀಟೇಲ್​ನಲ್ಲಿ ವಿದೇಶಿ ಹಣ ಹೂಡಿಕೆ (ಎಫ್​ಡಿಐ) ಬೇರೆ ಬರಲಾಗಿ, ‘ಅದು, ಮಾರುವ-ಕೊಳ್ಳುವ ಜಗತ್ತಿನ ನಕಾಶೆಯನ್ನೇ ಬದಲಾಯಿಸುತ್ತಿದೆ’ ಎಂದು ಬಲ್ಲವರು ಹೆದರಿಸುತ್ತಿದ್ದಾರೆ.

ಕಳೆದ ಐದಾರೇ ವರ್ಷಗಳಲ್ಲಿ, ಆರೋಗ್ಯ ಮತ್ತು ಶಿಕ್ಷಣದ ವಿಷಯದಲ್ಲೂ ಅದೆಷ್ಟೋ ಬದಲಾವಣೆಗಳಾಗಿವೆ. ವಿಚಿತ್ರವೆನಿಸಿದರೂ, ಉನ್ನತ ಓದುಗಳಾದ ಎಂಬಿಎ, ಎಮ್​ಸ್ಗಳು ಭಾರತಕ್ಕಿಂತಲೂ ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲೇ ಅಗ್ಗವಂತೆ! ಇದಕ್ಕೆ ವೈದೃಶ್ಯವೆಂಬಂತೆ, ಮುಂದುವರಿದ ದೇಶಗಳಲ್ಲಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಕೆಲವು ವರ್ಷಗಳ ಕೆಳಗೆ ದಂತಚಿಕಿತ್ಸೆಯಂತಹ ಅಪಾಯವಿಲ್ಲದ ಚಿಕಿತ್ಸೆಗಳಿಗೆ ಮಾತ್ರ ಸೀಮಿತವಾಗಿದ್ದ ‘ಮೆಡಿಕಲ್ ಟೂರಿಸಂ’, ಈಗ ಹೃದಯದ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗಳಿಗೂ ವಿಸ್ತಾರಗೊಂಡಿದೆ. ಅಂತೂ ಗ್ರಾಹಕರಾದ ನಮಗೆ ವೈದ್ಯಕೀಯ ಸೇವೆಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ, ಚಿನ್ನಾಭರಣಗಳ ಖರೀದಿಯಿಂದ ಹಿಡಿದು, ಬದನೆಕಾಯಿ ಕೊಳ್ಳುವುದರವರೆಗೆ- ಮಾಹಿತಿಗಾಗಲೀ ಆಯ್ಕೆಗಾಗಲೀ ಕೊರತೆಯಿಲ್ಲ. ಇವುಗಳಲ್ಲಿ ಯಾವುದು ಸಕಾರಾತ್ಮಕ ಬೆಳವಣಿಗೆ ಮತ್ತು ಯಾವುವು ನಕಾರಾತ್ಮಕ ಸಾಮಾಜಿಕ ಪಿಡುಗುಗಳು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವುದು ಕಷ್ಟ. ‘ಬಳಕೆದಾರ’ರಾದ ನಾವು ನಮ್ಮ ಸುತ್ತಲಿನ ಮಾಹಿತಿಯನ್ನು ಹೇಗೆ ಬಳಸುತ್ತಿದ್ದೇವೆ ಮತ್ತು ಲಭ್ಯವಿರುವ ಆಯ್ಕೆಗಳನ್ನು ಹೇಗೆ ಮಾಡುತ್ತಿದ್ದೇವೆ ಎನ್ನುವುದಷ್ಟೇ ಮುಖ್ಯ. ಅಂತೂ ಮಾಹಿತಿಯ ಕೊರತೆ ಇಲ್ಲದಿರುವುದರಿಂದ, ಸ್ವಲ್ಪವಾದರೂ ಎಚ್ಚೆತ್ತಿರುವ ಗ್ರಾಹಕನಿಗೆ ಹೊಂದಿಕೊಳ್ಳಲು ಮಾರುಕಟ್ಟೆ ಪ್ರಯತ್ನಿಸುತ್ತಿದೆ. ಗ್ರಾಹಕರಾಗಿ ಇಂದು ನಮ್ಮ ಬಳಿ ಯಥೇಚ್ಛವಾದ ಮಾಹಿತಿ ಇದೆ. ಬದಲಾವಣೆಗೂ ಮುನ್ನ ಮಾಹಿತಿ ಕಾಲಿಡುವುದು ಜಗದ ನಿಯಮ. ಒಟ್ಟಿನಲ್ಲಿ, ‘ ಕನ್ಸ್ಯೂಮರ್ ಈಸ್ ದಿ ಕಿಂಗ್’ ಎನ್ನುವುದು ನಿಧಾನವಾಗಿಯಾದರೂ ನಿಜವಾಗುವ ಲಕ್ಷಣಗಳು ಕಾಣುತ್ತವೆ..

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top