Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಗೊಂದಲ ನಿವಾರಿಸಿ

Friday, 05.01.2018, 3:02 AM       No Comments

ಹೆಚ್ಚುತ್ತಿರುವ ರಸ್ತೆ ಅಪಘಾತ ಮತ್ತು ಬೈಕ್ ಸವಾರರ ಸಾವು ತಡೆಯಲು ಸಂಚಾರ ಪೊಲೀಸ್ ಮತ್ತು ಸಾರಿಗೆ ಇಲಾಖೆ ಫೆಬ್ರವರಿ 1ರಿಂದ ಹೊಸ ನಿಯಮ ಜಾರಿಗೆ ಮುಂದಾಗಿವೆ. ಇದರನ್ವಯ, ರಾಜ್ಯದಲ್ಲಿ ಇನ್ಮುಂದೆ ಬೈಕ್ ಸವಾರರು ಐಎಸ್​ಐ ಹೆಲ್ಮೆಟ್ ಧರಿಸುವುದು

ಕಡ್ಡಾಯವಾಗಲಿದೆ. ಈಗಾಗಲೇ, ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದರೂ ಜನರು ಹೆಸರಿಗೆ ನಿಯಮ ಪಾಲಿಸಲೆಂಬಂತೆ ಕಳಪೆ ಹೆಲ್ಮೆಟ್​ಗಳನ್ನು ಧರಿಸುತ್ತಿರುವುದರಿಂದ ಪ್ರಾಣಹಾನಿ ತಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ 1.25 ಕೋಟಿ ಬೈಕ್​ಗಳಿದ್ದು, ಆ ಪೈಕಿ ಬೆಂಗಳೂರೊಂದರಲ್ಲೇ 40 ಲಕ್ಷ ಬೈಕುಗಳಿವೆ. ಐಎಸ್​ಐ ಮಾಪನದ ಹೆಲ್ಮೆಟ್ ತಯಾರಿಕೆ ಗುಣಮಟ್ಟದಿಂದ ಕೂಡಿರಬೇಕು. ಧರಿಸಿದಾಗ ತಲೆಭಾಗ ಸಂಪೂರ್ಣ ಮುಚ್ಚಿರಬೇಕು, ಕಿವಿ, ಗದ್ದಕ್ಕೆ ರಕ್ಷಣೆ ಒದಗಿಸಬೇಕು, ಶಿರಕ್ಕೆ ಧರಿಸಿದಾಗ ಹೆಲ್ಮೆಟ್ ಲಾಕ್ ಮಾಡಲು ಸೇಪ್ಟಿ ಲಾಕ್ ಕಡ್ಡಾಯವಾಗಿ ಇರಬೇಕು ಎಂಬ ಸಂಗತಿಗಳೆಲ್ಲ ಕಾಯ್ದೆಯಲ್ಲಿ ಉಲ್ಲೇಖವಾಗಿದೆ.

ಸಾರ್ವಜನಿಕರ ಪ್ರಾಣರಕ್ಷಣೆಯನ್ನು ಪ್ರಮುಖ ಉದ್ದೇಶವಾಗಿರಿಸಿಕೊಂಡು ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂಬ ಸರ್ಕಾರದ ಹೇಳಿಕೆಯನ್ನು ಸಂಶಯಿಸಬೇಕಿಲ್ಲ. ಆದರೆ, ಈ ನಿರ್ಧಾರ ಜನರಲ್ಲಿ ಹಲವು ಅನುಮಾನ ಮತ್ತು ಗೊಂದಲಗಳನ್ನೂ ಮೂಡಿಸಿದೆ. ಪ್ರಮುಖವಾಗಿ, ಗುಣಮಟ್ಟದ ಹೆಲ್ಮೆಟ್ ಬಳಸಬೇಕು ಎಂಬ ನಿಯಮ ಮೊದಲಿನಿಂದಲೇ ಇದ್ದರೂ ಅದನ್ನು ಏಕೆ ಜಾರಿಗೆ ತಂದಿರಲಿಲ್ಲ, ಈಗ ಹಾಗೆ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದೇಕೆ ಎಂಬುದು ಸ್ವಾಭಾವಿಕವಾಗಿ ಉದ್ಭವವಾಗುವ ಪ್ರಶ್ನೆ.

ಈಗಂತೂ ಎಲ್ಲ ಉತ್ಪನ್ನಗಳ ನಕಲು ಮಾಡಲಾಗುತ್ತಿದೆ. ಇದು ಐಎಸ್​ಐ ಮಾರ್ಕ್​ಗೂ ಹೊರತಲ್ಲ. ಅಷ್ಟಕ್ಕೂ, ಅಸಲಿ ಐಎಸ್​ಐ ಮಾರ್ಕ್​ನ ಹೆಲ್ಮೆಟ್ ಗುರುತಿಸುವುದು ಕಷ್ಟಕರ. ಸಂಚಾರ ಪೊಲೀಸರ ಬಳಿಯೂ ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಎಷ್ಟೋ ಕಡೆಗಳಲ್ಲಿ ಕಳಪೆ ಹೆಲ್ಮೆಟ್​ಗಳ ಮೇಲೆಯೂ ಐಎಸ್​ಐ ಚಿಹ್ನೆ ಬಳಸಲಾಗಿದ್ದು, ಜನ ಕೊಳ್ಳುವಾಗ ಅಸಲಿ, ನಕಲಿ ಎಂದು ಅರಿಯುವುದಾದರೂ ಹೇಗೆ ಎಂಬ ಗೊಂದಲ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಕಳಪೆ, ಗುಣಮಟ್ಟದ ಹೆಲ್ಮೆಟ್ ಯಾವುದು ಎಂಬುದನ್ನು ತೀರ್ವನಿಸುವ ಅಧಿಕಾರ ಸಂಚಾರ ಪೊಲೀಸರಿಗೂ ಇಲ್ಲ. ಈಗ ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಲ್ಮೆಟ್​ಗಳನ್ನು ಬೀದಿಬದಿಯಲ್ಲೇ ಮಾರಾಟ ಮಾಡಲಾಗುತ್ತಿದ್ದು, ಸಾಕಷ್ಟು ಜನರು ಇದನ್ನೇ ಜೀವನೋಪಾಯವಾಗಿ ಮಾಡಿಕೊಂಡಿದ್ದಾರೆ. ಈ ನಿಯಮವನ್ನು ಮುಂಚೆಯೇ ಸರಿಯಾಗಿ ಮನವರಿಕೆ ಮಾಡಿದ್ದಿದ್ದರೆ ಈ ಗೊಂದಲಗಳನ್ನು ತಪ್ಪಿಸಬಹುದಿತ್ತಲ್ಲವೆ?

ಸೂಕ್ತ ಪೂರ್ವಸಿದ್ಧತೆ ಇಲ್ಲದೆ ಈ ನಿಯಮ ಜಾರಿಗೆ ತಂದರೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಜತೆಗೆ ಸಾರಿಗೆ ಇಲಾಖೆ, ಸಂಚಾರ ಪೊಲೀಸರ ಕಮಾಯಿಗೆ ಮತ್ತೊಂದು ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಈ ನಿಯಮದ ಉದ್ದೇಶ ಒಳ್ಳೆಯದಾಗಿದ್ದರೂ ಆ ಬಗ್ಗೆ ಮೊದಲು ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ, ಎಲ್ಲ ಜಿಲ್ಲೆಗಳಲ್ಲೂ ಜನಜಾಗೃತಿ ಮೂಡಿಸಬೇಕಿದೆ. ಪ್ರಾಣರಕ್ಷಣೆಗೆ ಗುಣಮಟ್ಟದ ಹೆಲ್ಮೆಟ್ ಧಾರಣೆ ಕಡ್ಡಾಯ ಎಂಬುದು ಜನರಿಗೆ ಮನವರಿಕೆಯಾದರೆ ಅವರೇ ಸ್ವಯಂಪ್ರೇರಣೆಯಿಂದ ಈ ಬದಲಾವಣೆಯನ್ನು ಸಾಕಾರಗೊಳಿಸಬಲ್ಲರು. ಹಾಗಾಗಿ, ಗುಣಮಟ್ಟ ಖಾತ್ರಿಪಡಿಸುವ, ನಿಯಮದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಮೊದಲು ನಡೆಯಲಿ, ಸಾರ್ವಜನಿಕರಲ್ಲಿ ಸೃಷ್ಟಿಯಾಗಿರುವ ಗೊಂದಲುಗಳು ನಿವಾರಣೆಯಾಗಲಿ.

Leave a Reply

Your email address will not be published. Required fields are marked *

Back To Top