Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಗೈರಾಗುವ ಅಧಿಕಾರಿ, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ

Wednesday, 11.07.2018, 10:05 PM       No Comments

ಗದಗ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ವಣಕ್ಕೆ ಜಾಗದ ಕೊರತೆ ಇದ್ದರೆ ಅಂತಹ ಕೇಂದ್ರಗಳ ಬದಲಾವಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಅನಧಿಕೃತ ಗೈರು ಹಾಜರಾಗುವ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಅಂಗನವಾಡಿ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲು ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹರ್ಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಾಪಂ ಅಧ್ಯಕ್ಷರು ಜಂಟಿಯಾಗಿ ವೀಕ್ಷಣೆ ನಡೆಸಿ ವರದಿ ನೀಡಬೇಕು. ಜೊತೆಗೆ 2017-18ನೇ ಸಾಲಿಗೆ ಕೆರೆ ನಿರ್ವಹಣೆಗಾಗಿ ಬಿಡುಗಡೆಯಾಗಿರುವ ಹಾಗೂ ಖರ್ಚಾಗಿರುವ ಅನುದಾನದ ವಿವರ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಖರ್ಚಾಗದೆ ಬಾಕಿ ಉಳಿದ ಹಣವನ್ನು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಹಾಗೂ ದುರಸ್ತಿಗೆ ಬಳಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 1,164 ಅಂಗನವಾಡಿ ಕಟ್ಟಡಗಳಿದ್ದು 330 ದುರಸ್ತಿಯಾಗಿವೆ. 369 ಅಂಗನವಾಡಿಗಳಿಗೆ ಶೌಚಗೃಹ ಮಂಜೂರಾಗಿದ್ದು 220 ಶೌಚಗೃಹ ನಿರ್ವಣವಾಗಿವೆ. 53 ಅಂಗನವಾಡಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

2017-18ನೇ ಸಾಲಿನಲ್ಲಿ ಹಂಚಿಕೆಯಾದ 9,700 ತಾಡಪತ್ರಿಗಳನ್ನು ಜಿಲ್ಲೆಯ ರೈತರಿಗೆ ವಿತರಣೆ ಮಾಡಲಾಗಿದೆ. 2018-19ನೇ ಸಾಲಿಗೆ 13,840 ತಾಡಪತ್ರಿಗಳನ್ನು ಇಲಾಖಾ ಅನುದಾನ ಬಿಡುಗಡೆ ಆಧರಿಸಿ ಸಮರ್ಪಕ ವಿತರಣೆಗೆ ವ್ಯವಸ್ಥೆಗೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಹೇಳಿದರು.

ಶಿಗ್ಲಿಯಲ್ಲಿ ಚೆಕ್ ಡ್ಯಾಂ ಕಾಮಗಾರಿ, ಸಹಕಾರ ಇಲಾಖೆಯ ಲೆಕ್ಕ ಪರಿಶೋಧನೆ ವರದಿ, ಮೇಗೂರು- ಶಿರೋಳ ರಸ್ತೆ ನಡುವೆ ಸಿಡಿ ಕಾಮಗಾರಿ, ರೋಣ ತಾಲೂಕಿನ ಮುಗಳಿ ಗ್ರಾಮದ ಬಾಬು ಜಗಜೀವನರಾಂ ಭವನ ಕಟ್ಟಡ ಕಾಮಗಾರಿ ಪ್ರಗತಿ, ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆ ಬಾವಿಗಳ ವಿವರ, ಪಶು ಸಂಗೋಪನಾ ಇಲಾಖೆಯಿಂದ ಕೋಳಿ ವಿತರಣೆ ಹಾಗೂ ವಿವಿಧ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿ ಕುರಿತು ರ್ಚಚಿಸಲಾಯಿತು.

ಜಿಪಂ ಉಪಾಧ್ಯಕ್ಷೆ ರೂಪಾ ಅಂಗಡಿ, ಜಿಪಂ ಸದಸ್ಯರಾದ ಮಂಜುಳಾ ಹುಲ್ಲಣ್ಣವರ, ರಾಜುಗೌಡ ಕೆಂಚನಗೌಡ್ರ, ಶಿವಲಿಂಗಪ್ಪ ಬಳಿಗಾರ, ಸಿದ್ದು ಪಾಟೀಲ, ಶಕುಂತಲಾ ಮೂಲಿಮನಿ, ಶಕುಂತಲಾ ಚವ್ಹಾಣ, ತಾಪಂ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಜಿಪಂ ಸದಸ್ಯರ ಬೇಸರ

ಮೂರು ತಿಂಗಳಿಗೊಮ್ಮೆ ನಡೆಯುವ ಜಿಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಪೂರಕ ಮಾಹಿತಿ ಒದಗಿಸುವುದಿಲ್ಲ. ಸಭೆಗೆ ಹಾಜರಾದ ಅವಧಿಯಲ್ಲಿ ಮಾಹಿತಿ ತಂದಿಲ್ಲ, ಪೂರಕ ಮಾಹಿತಿಯನ್ನು ನಂತರ ಒದಗಿಸುತ್ತೇನೆ ಎಂದು ಜಾರಿಕೊಳ್ಳುತ್ತಾರೆ. ಹೀಗಾದರೆ ಸಮಸ್ಯೆಗಳ ಪರಿಹಾರ ಹೇಗೆ ಸಾಧ್ಯ? ಅಧ್ಯಕ್ಷರು ಸಭೆಗೆ ಗೈರಾಗುವ ಹಾಗೂ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿ ಒದಗಿಸುತ್ತಾರೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳ ವರ್ತನೆಗೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಜಿಪಂ ಸಾಮಾನ್ಯ ಸಭೆಗೆ ಕಡ್ಡಾಯವಾಗಿ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು. ಪೂರ್ವಾನುಮತಿ ಇಲ್ಲದೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
|ವಾಸಣ್ಣ ಕುರಡಗಿ, ಜಿಪಂ ಅಧ್ಯಕ್ಷ 

Leave a Reply

Your email address will not be published. Required fields are marked *

Back To Top