Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಗೆಳೆಯರಾದ ಎಳೆಯರು

Saturday, 03.06.2017, 3:00 AM       No Comments

ಡ್ರಾಮಾ ಜೂನಿಯರ್ಸ್ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ಮಕ್ಕಳ ಪೈಕಿ 10ಮಂದಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಹಿರಿತೆರೆ ಎಂಬ ಪರದೆಯಲ್ಲಿ. ಶುಕ್ರವಾರ(ಜೂ.2)ರಾಜ್ಯಾದ್ಯಂತ 150 ಚಿತ್ರ ಮಂದಿರಗಳಲ್ಲಿ ತೆರೆಕಂಡ ‘ಎಳೆಯರು ನಾವು ಗೆಳೆಯರು’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಿರುವ ಚಿಣ್ಣರು ಈ ಸಿನಿಮಾ ಜರ್ನಿ ಕುರಿತು ‘ಪುಟಾಣಿ’ ಜತೆ ಮಾತನಾಡಿದ್ದಾರೆ.

 

| ಅರುಣ ಎಂ.ಜಿ. ಬೆಂಗಳೂರು

ಎಳೆಯರು ನಾವು ಗೆಳೆಯರು.. ಊರಿಗೆಲ್ಲ ನಾವೇ ರಾಜರೂ… ಹೌದು, ಈ ಹಾಡಿಗೆ ತಕ್ಕಂತೆ ನೃತ್ಯ ಮಾಡಿರುವ ಮಕ್ಕಳೆಲ್ಲರೂ ಗೆಳೆಯರು, ನಟನಾ ಲೋಕದಲ್ಲಿ ಮಿಂಚುತ್ತಿರುವ ಪ್ರತಿಭೆ ಕುಡಿಗಳು. ಅವರೇ ಅಚಿಂತ್ಯ, ನಿಹಾಲ್, ಅಮೋಘ ಕೆರೂರ, ಅಭಿಷೇಕ್, ಪುಟ್ಟರಾಜು, ತುಷಾರ, ಮಹತಿ, ತೇಜಸ್ವಿನಿ, ಮಹೇಂದ್ರ ಮತ್ತು ಸೂರಜ್. ಇವರೆಲ್ಲರೂ ಸಿನಿಮಾ ಮಾತ್ರವಲ್ಲ, ವಾಸ್ತವದಲ್ಲೂ ಸ್ನೇಹಿತರು. ಒಬ್ಬೊಬ್ಬರಲ್ಲೂ ವಿಭಿನ್ನ ಪ್ರತಿಭೆ ಅಡಗಿದೆ. ಅವರು ಅಭಿನಯಿಸಿರುವ ‘ಎಳೆಯರು ನಾವು ಗೆಳೆಯರು’ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಸದ್ಯ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗಾಗಿ ಕಾಯುತ್ತಿದ್ದಾರೆ. ತೆರೆಹಿಂದಿನ ಕೆಲ ಸ್ವಾರಸ್ಯಕರ ಸಂಗತಿಗಳನ್ನು ಇದೇ ಸಂದರ್ಭದಲ್ಲಿ ಮಕ್ಕಳು ಹಂಚಿಕೊಂಡಿದ್ದಾರೆ.

ಹೇಗಿತ್ತು ಶೂಟಿಂಗ್ ಅಂದ್ರೆ, ‘ಅಯ್ಯೋ ನಾವು ಶೂಟಿಂಗ್​ಗೆ ಹೋಗಿದ್ವಿ ಅಂತಾನೇ ಅನ್ಸಿಲ್ಲ. ಎಲ್ಲರೂ ಟ್ರಿಪ್​ಗೆ ಹೋಗಿದ್ವಿ ಅನ್ನೋ ಅಷ್ಟು ಖುಷಿಯಾಗಿ ಕಾಲ ಕಳೆದ್ವಿ’ ಎನ್ನುತ್ತಲೇ ಮಾತಿಗಿಳಿದ ಮಹತಿ, ‘ಶೂಟಿಂಗ್ ನಡೀವಾಗಲೂ ಎಂಜಾಯ್ ಮಾಡಿದ್ವಿ. ಸೀನ್ ಸ್ಟಾರ್ಟ್ ಆಗೋ ಟೈಂನಲ್ಲಿ ರೆಡಿ ಅಂದ್ರೆ ಚಿಕ್ಕವರು ಎಲ್ಲೆಲ್ಲೋ ಓಡೋಗ್ತಿದ್ರು… ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಟೂಟೂ-ಸೇ ಆಗ್ತಿತ್ತು…’ ಎನ್ನುತ್ತಲೇ ಅಚಿಂತ್ಯ ಮತ್ತು ನಿಹಾಲ್​ನ ತುಂಟಾಟ ಬಿಚ್ಚಿಟ್ಟಳು.

‘ದಿವ್ಯಾ..! ನಾನು ರಾಜ.. ಹೀರೋ ರಾಜ ಕರೀತಿದ್ದೀನಿ ಬರಲ್ವಾ?.. ಬರಲ್ವಾ?.. ಬರಲ್ವಾ?’ ಎಂದು ಡೈಲಾಗ್ ಹೇಳುವ ರಾಜ ಅಲಿಯಾಸ್ ಹೀರೋ ರಾಜನ ಪಾತ್ರ ಅಚಿಂತ್ಯನದ್ದು.

‘ಡ್ರಾಮಾದಲ್ಲಿ ದೊಡ್ಡ ದೊಡ್ಡ ಡೈಲಾಗ್ ಹೇಳಬೇಕಿತ್ತು. ಸಿನಿಮಾದಲ್ಲಿ ರೀ ಟೇಕ್ ಇರೋದ್ರಿಂದ ಆಕ್ಟಿಂಗ್ ಸುಲಭ’ ಎನ್ನುವ ಅಚಿಂತ್ಯ, ‘ಏಯ್ ಸೇಟು, ದೊಡ್ಡದೊಡ್ಡ ಹೀರೋಗಳು ಮಾತ್ರ ಗಾಳಿ ಮಳೆ ಬರಿಸೋದಲ್ಲ, ನನಗೂ ಬರುತ್ತೆ…’ ಎನ್ನುತ್ತಲೇ ‘ಇದು ನನಗಿಷ್ಟವಾದ ಡೈಲಾಗ್. ಸಿನಿಮಾ ಕ್ಲೈಮಾಕ್ಸ್​ನಲ್ಲಿ ಬರೋ ಫೈಟಿಂಗ್ ಸೀನ್​ನಲ್ಲಿ ನಾನೇ ಫೈಟ್ ಶುರು ಮಾಡೋದು…’ ಎಂದು ಒಮ್ಮೆ ಹೀರೋ ಬಿಲ್ಡಪ್ ಕೊಟ್ಟ.

‘ಕೂ.. ಕೂ.. ಕೂಹೂ, ಹಕ್ಕಿಗಳ ಶಬ್ದ ಎಷ್ಟು ಚೆನ್ನಾಗಿದೆ ಅಲ್ವಾ? ನಿಜ ಅನ್ಕೊಂಡ್ರಾ? ಹಾಂ. ಕೂ.. ಕೂಹೂ.. ಕೋ ಕೋ.. ನಾನು ರಾಮ, ಹಕ್ಕಿಪಿಕ್ಕಿ ರಾಮ. ಯಾವ ಹಕ್ಕಿ ತೋರಿಸಿದ್ರೂ ಆ ಹಕ್ಕಿ ಶಬ್ದ ಮಾಡ್ತೀನಿ’ ಹೀಗೆಂದವನು ಪುಟ್ಟರಾಜು. ಹೌದು ಆತನ ಪಾತ್ರವೇ ಅದು. ಪಕ್ಷಿಗಳ ಕೂಗನ್ನು ಮಿಮಿಕ್ರಿ ಮಾಡುವ ಕಲೆ ಆತನಲ್ಲಿದೆ. ‘ಮೈಸೂರಿನಲ್ಲಿ ಪ್ರೊಡ್ಯೂಸರ್ ನಾಗರಾಜ್ ಸರ್ ಅವರ ಎಸ್ಟೇಟ್​ನಲ್ಲಿ ಶೂಟಿಂಗ್​ಗೆ ಹೋಗಿದ್ವಿ. ಅಲ್ಲಿ ಟರ್ಕಿ ಕೋಳಿಯಂತೆ ಕೂಗುತ್ತಿದ್ದೆ. ಆಗ ನಿಜವಾದ ಟರ್ಕಿ ಕೋಳಿ ಕೂಡ ಕೂಗ್ತು. ಸಖತ್ ಖುಷಿ ಆಯ್ತು’ ಎನ್ನುತ್ತಲೇ ಮಿಮಿಕ್ರಿ ಶಕ್ತಿ ಬಗ್ಗೆ ಹೆಮ್ಮೆಯಿಂದ ವಿವರಿಸಿದ. ‘ಡ್ರಾಮಾ ಜೂನಿಯರ್ಸ್ ಮಕ್ಕಳಾದ ನಾವು ಈ ಸಿನಿಮಾದಲ್ಲೂ ಸ್ಕೂಲ್ ಡೇ ಪ್ರಯುಕ್ತ ಒಂದು ಡ್ರಾಮಾ ಮಾಡಿದ್ವಿ. ಖುಷಿಯಾಯ್ತು’ ಎಂದ.

ಅಷ್ಟೊತ್ತಿಗೆ ಮಾತು ಶುರು ಮಾಡಿದ ಮಹತಿ ಮತ್ತು ಮಹೇಂದ್ರ, ‘‘ಹೌದು ಆ ಡ್ರಾಮಾದಲ್ಲಿ ಎಮೋಷನಲ್ ಸೀನ್ ಇತ್ತು. ವಿದ್ಯಾ ಪಾತ್ರಧಾರಿ(ಮಹತಿ) ‘ಮರಳಿ ಬರುತ್ತೇನೆ..’ ಎನ್ನುವ ಡೈಲಾಗ್ ಹೇಳುವಾಗ ಆಕಳಿಸುತ್ತ ‘ಬುರ್ರ್’ ಎಂದು ಜೋರಾಗಿ ಶಬ್ದ ಮಾಡಿಬಿಟ್ಟ ಅಮೋಘ. ನಾವೆಲ್ಲ ಗೊಳ್ಳ್ ಅಂತ ನಗ್ತಿದ್ವಿ. ಆ ಡೈಲಾಗ್ ಬಂದಾಗಲೆಲ್ಲ ‘ಬುರ್ರ್’ ಎನ್ನುತ್ತಿದ್ದ. ಮತ್ತೆ ಮತ್ತೆ ಟೇಕ್ ತೆಗೆದುಕೊಳ್ಳಬೇಕಾಯ್ತು. ಕೊನೆಗೆ ಅವನನ್ನ ದೂರ ಕರೆದುಕೊಂಡು ಹೋಗಿ ಮತ್ತೆ ವಿದ್ಯಾಳ ಶಾಟ್ ಮುಗ್ಸಿದ್ರು’’ ಎನ್ನುವಾಗ ಅವರಲ್ಲಿ ಅದೇ ನಗು ಇತ್ತು.

‘ಐಸ್​ಪ್ಲೆಸ್, ಮರಕೋತಿ ಆಟ, ಚೌಕಾಬಾರ, ಅಳಿಗುಳಿ ಮನೆ… ಇನ್ನು ಏನೇನೋ ಆಟ ಆಡುದ್ವಿ. ಆ ಸೀನ್ ಶೂಟಿಂಗ್ ಟೈಂನಲ್ಲಿ ಎರಡು ದಿನ ಸ್ವಲ್ಪ ಜ್ವರ ಇತ್ತು. ಇಲ್ದೆ ಇದ್ದಿದ್ರೆ ಎಲ್ಲ ಆಟನೂ ಚೆನ್ನಾಗಿ ಆಡ್ತಿದ್ದೆ’ ಎಂದ ನಿಹಾಲ್, ಶೂಟಿಂಗ್ ಪರಿಣಾಮ ಗ್ರಾಮೀಣ ಆಟದ ಮೇಲೆ ಒಲವು ಮೂಡಿರುವ ಬಗ್ಗೆ ಹೇಳುವುದನ್ನೂ ಮರೆಯಲಿಲ್ಲ.

‘ಈ ಫಿಲಂ ಉದ್ದೇಶ ಮಕ್ಕಳು ಯಾವಾಗಲೂ ಧೈರ್ಯದಿಂದ ಇರಬೇಕು. ಅವರವರ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು…’ ಎಂದ ಮಹೇಂದ್ರನ ಮಾತಿಗೆ ಧ್ವನಿಗೂಡಿಸಿದ ಪುಟ್ಟರಾಜು, ‘ನಮ್ ಸಿನಿಮಾ ನೋಡಿದ್ರೆ ದೊಡ್ಡವರಿಗೂ ಬಾಲ್ಯದ ನೆನಪಾಗುತ್ತೆ. ಈ ಆಟಗಳನ್ನು ನಾವೂ ಆಡ್ತಾಯಿದ್ವಿ(ಹಳ್ಳಿ ಸೊಗಡಿನ ಆಟ) ಅನ್ಸುತ್ತೆ. ಹಳ್ಳಿ ಮಕ್ಕಳ ಸಾಹಸ, ಫೈಟ್, ಸಂಗೀತ ಎಲ್ಲವೂ ಚೆನ್ನಾಗಿದೆ…’ ಎಂದು ವಿವರಿಸಿದ.

ಪೇಪರ್ ಮೋಹನ ಎಂಬ ಪಾತ್ರಧಾರಿ ತುಷಾರ್​ಗೆ, ನಿತ್ಯವೂ ಪೇಪರ್ ಓದುವ ಹವ್ಯಾಸ. ‘ಸ್ವಾಭಾವಿಕ ಅಳುವ ಕಲೆ ನನಗೆ ಗೊತ್ತು. ಅಳುವ ಸೀನ್​ನಲ್ಲಿ ಇದು ತುಂಬಾ ಯೂಸ್ ಆಯ್ತು’ ಎನ್ನುವ ತುಷಾರ್, ಅಚಿಂತ್ಯ ಶೂಟಿಂಗ್ ಟೈಮ್ಲ್ಲಿ ಹೆಚ್ಚಾಗಿ ತುಷಾರ್ ಅಣ್ಣನ ಮಾತು ಕೇಳುತ್ತಿದ್ದ’ ಎನ್ನುವ ಮೂಲಕ ಅಚಿಂತ್ಯ ಮತ್ತು ತುಷಾರ್​ನ ಬಾಂಧವ್ಯ ಬಿಚ್ಚಿಟ್ಟ.

ಹಲ್ಕಿರಿ ವಜ್ರಪ್ಪ ಪಾತ್ರಧಾರಿ ಅಭಿಷೇಕ್ ನಗುಮುಖದವ. ಆತನಿಗೆ ಅಳೋದು ಕಷ್ಟವಂತೆ. ‘ಅಳುವ ಸೀನ್ ಬಂದಾಗ ಮನೆಯಲ್ಲಿದ್ದ ಅಮ್ಮ, ತಂಗಿಯ ನೆನಪು ಮಾಡ್ತಿದ್ರು ಅಪ್ಪ. ಆಗ ಮನೆಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಫೀಲ್ ಬರ್ತಿತ್ತು. ಅಲ್ಲಿಗೆ ಅಳುವ ಸೀನ್ ಮುಗಿಸಿಬಿಡುತಿದ್ದ್ದೆ’ ಎಂದ. ಇನ್ನು ಅಮೋಘ್ ಅಲಿಯಾಸ್ ಗೊರಕೆ ಶಂಕ್ರಪ್ಪ ಶೂಟಿಂಗ್ ಟೈಂನಲ್ಲಿ ನಿಜವಾಗ್ಲೂ ಗೊರಕೆ ಹೊಡೆಯುತ್ತಿದ್ದನಂತೆ.

‘ನನ್ನ ಬ್ಯಾಗ್​ನಲ್ಲಿ ಯಾವಾಗಲೂ ತಿಂಡಿ ಇರೋದು. ಬೇರೆ ಮಕ್ಕಳು ಕೇಳಿದಾಗೆಲ್ಲ ಕೊಡೋಕೆ ಆಗ್ತಿರಲಿಲ್ಲ. ಯಾಕಂದ್ರೆ ಶೂಟಿಂಗ್​ಗೆ ಬೇಕಿತ್ತು. ನಾನು ಹೆಸರಿಗಷ್ಟೆ ತಿಂಡಿಪೋತಿ ಪದ್ಮಾ’ ಎಂದ ತೇಜಸ್ವಿನಿಗೆ ಒಳ್ಳೆಯ ಪಾತ್ರ ಸಿಕ್ಕಿದ್ದ ಖುಷಿ ಇದೆ.

ಇನ್ನೇನು ಶೂಟಿಂಗ್ ಸ್ಟಾರ್ಟ್ ಎನ್ನುವಾಗ ಓಡಿ ಬರ್ತಿದ್ದ ನಿಹಾಲ್ ಯಾವಾಗಲೂ ಬೀಳ್ತಿದ್ದ. ಬಿದ್ದ ಕೂಡಲೇ ಅವ್ಂ… ಅಂತ ಅಳ್ತಿದ್ದ. ಹಾಗಾಗಿ ಅವನಿಗೆ ಫಾಲಿಂಗ್ ಸ್ಟಾರ್(ಬೀಳುವ ನಕ್ಷತ್ರ) ಎಂದು ಫನ್ ಮಾಡ್ತಿದ್ರಂತೆ ಇತರೆ ಮಕ್ಕಳು.

‘ನಾವೊಂದು ಒಳ್ಳೆ ಸಿನಿಮಾ ಮಾಡಿದ್ವಿ.. ನೋಡಿ.. ಹರಸಿ’ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ ಅಚಿಂತ್ಯ. ಹೀಗೆ ಹೇಳಲು ಯಾರು ಹೇಳಿಕೊಟ್ಟಿದ್ದು ಅಂದ್ರೆ, ‘ಅಪ್ಪ… ಅಲ್ಲ ಅಲ್ಲ.. ನಾವಾಗೇ ಕಲ್ತಕೊಂಡ್ವಿ’ ಎನ್ನುತ್ತಲೇ ನಗೆ ಬೀರಿದ.

ಕಥೆ ಏನು?

ಎಳೆಯರು ನಾವು ಗೆಳೆಯರು ಸಿನಿಮಾದಲ್ಲಿ ಒಬ್ಬ ಹುಡುಗನನ್ನು ಮಾತ್ರ ಹೀರೋ ಮಾಡಿಲ್ಲ. ಇಲ್ಲಿ ಎಲ್ಲರೂ ಹೀರೋಗಳೇ. ಪ್ರತಿ ಮಕ್ಕಳಲ್ಲೂ ಒಂದೊಂದು ವಿಭಿನ್ನ ಪ್ರತಿಭೆ ಅಡಗಿರುತ್ತದೆ. ಕಷ್ಟ ಕಾಲದಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ, ಹೇಗೆ ಬಳಸಿಕೊಳ್ಳಬೇಕು ಎಂಬುದೇ ಕಥಾ ಹಂದರ. ಓದಿನೊಂದಿಗೂ ಇತರೆ ಚಟುವಟಿಕೆ ಇದ್ದರೆ ಆಗುವ ಲಾಭ, ಹಳ್ಳಿ ಸೊಗಡು, ಫಸ್ಟ್ ರ್ಯಾಂಕ್ ವಿದ್ಯಾರ್ಥಿಯೊಬ್ಬಳು ಸಿಟಿಯಿಂದ ಸರ್ಕಾರಿ ಶಾಲೆಗೆ ದಾಖಲಾದಾಗ ಅಲ್ಲಿನ ಮಕ್ಕಳೊಂದಿಗೆ ಸ್ನೇಹ ಚಿಗುರುವಿಕೆ… ಎಲ್ಲವನ್ನೂ ಮನರಂಜನೆ ಮೂಲಕ ತೋರಿಸಲಾಗಿದೆ. 10ಮಕ್ಕಳ ಪೈಕಿ ಒಬ್ಬಳು ಯಾವುದೋ ಒಂದು ತೊಂದರೆಯಲ್ಲಿ ಸಿಕ್ಕಿಕೊಂಡಿದ್ದು, ಉಳಿದ ಮಕ್ಕಳು ತಮ್ಮಲ್ಲಿರುವ ವಿಶೇಷ ಟ್ಯಾಲೆಂಟ್ ಬಳಸಿಕೊಂಡೇ ಅವಳನ್ನು ಪಾರು ಮಾಡುತ್ತಾರೆ. ಇದೇ ಚಿತ್ರದ ಕ್ಲೈಮಾಕ್ಸ್. ಮೂಲತಃ ಚೈಲ್ಡ್ ಆಕ್ಟರ್ ಆಗಿದ್ದ ವಿಕ್ರಮ್ ಸೂರಿ ಅವರು ನಿರ್ದೇಶನ ಮಾಡಿದ ಸಿನಿಮಾ ಇದು. ಮಕ್ಕಳಿಂದ ಮಕ್ಕಳಿಗಾಗಿ ಚಿತ್ರವನ್ನು ನಿರ್ದೇಶಿಸಿದ್ದು ವಿಶೇಷ.

ಡೈರೆಕ್ಟರ್ ಹೆಸರು ಕೇಳಿಯೇ ಒಪ್ಪಿಕೊಂಡ್ರು…

ಡ್ರಾಮಾ ಜೂನಿಯರ್ಸ್ ನಲ್ಲಿ 6 ತಿಂಗಳ ಕಾಲ ಜತೆಯಲ್ಲೇ ಇದ್ದ ನಮಗೆ ಮತ್ತೆ ಎಲ್ಲರೂ 40ದಿನ ಒಟ್ಟಿಗೆ ಇರುವ ಅವಕಾಶ ಸಿಕ್ಕಿದ್ದು, ‘ಎಳೆಯರು ನಾವು ಗೆಳೆಯರು’ ಸಿನಿಮಾ ಶೂಟಿಂಗ್ ಟೈಂನಲ್ಲಿ. ಇದೊಂದು ಒಳ್ಳೆಯ ಎಕ್ಸ್​ಪೀರಿಯನ್ಸ್. ಡ್ರಾಮಾ ಜೂನಿಯರ್ಸ್​ನ ಮೆಂಟರ್ ವಿಕ್ರಮ್ ಸೂರಿ ಮತ್ತು ಹರೀಶ್ ಭಟ್ ಅವರೇ ನಿರ್ದೇಶಕ, ಸಹ ನಿರ್ದೇಶಕ ಎನ್ನುವ ವಿಷಯ ಕೇಳಿ ‘ಏ ವಿಕ್ರಮ್ ಹರೀಶ್ ಸಾರೇ ಹೇಳಿಕೊಡೋದು, ಅವರೇ ಡೈರೆಕ್ಟರ್. ನಾನೂ ಮಾಡ್ತೀನಿ…’ ಎಂದರಂತೆ ಈ ಮಕ್ಕಳು.

ಮೈಸೂರು ಇಷ್ಟವಾಯ್ತು…

ಮೈಸೂರು, ಚನ್ನಪಟ್ಟಣ, ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯಿತು. ಈ ಪೈಕಿ ಎಲ್ಲ ಮಕ್ಕಳಿಗೂ ಮೈಸೂರಿನಲ್ಲಿ ನಡೆದ ಶೂಟಿಂಗ್ ಇಷ್ಟವಾಯ್ತಂತೆ. ಅಲ್ಲಿ ಪ್ರೊಡ್ಯೂಸರ್ ನಾಗರಾಜ್ ಗೋಪಾಲ್ ಅವರ ಫಾಮರ್್​ಹೌಸ್​ನಲ್ಲಿ ಎರಡು ದಿನ ಶೂಟಿಂಗ್ ಇತ್ತು. ತೋಟದಲ್ಲಿದ್ದ ನಾಯಿ, ಕೋತಿ, ಬಾತುಕೋಳಿ, ಕೋಳಿ, ಮೊಲಗಳ ಜತೆ ಆಟವಾಡಲು ಮಕ್ಕಳಿಗೆ ಫುಲ್ ಫ್ರೀ ಸಿಕ್ಕಿತ್ತು. ಎಲ್ಲ ಮಕ್ಕಳ ಪಾಲಕರೂ ಜತೆಯಲ್ಲೇ ಇದ್ದರು.

ನೋವಲ್ಲೂ ಸೂರಜ್​ಗೆ ಖುಷಿ

ಶೂಟಿಂಗ್ ಸ್ಟಾರ್ಟ್ ಆಗೋ ನಾಲ್ಕು ದಿನ ಮುಂಚೆ ಬೈಕ್ ಆಕ್ಸಿಡೆಂಟ್​ನಲ್ಲಿ ಸೂರಜ್ ಕಾಲಿಗೆ ಪೆಟ್ಟಾಗಿ 17 ಸ್ಟಿಚ್ ಹಾಕಲಾಗಿತ್ತು. ಆದರೂ ಶೂಟಿಂಗ್ ಹೋಗಲೇಬೇಕೆಂದು ನಿರ್ಧರಿಸಿದೆ. ಸ್ವಲ್ಪ ನೋವಿತ್ತು, ಗಾಯ ಸಂಪೂರ್ಣವಾಗಿ ವಾಸಿ ಆಗಿರಲಿಲ್ಲ. ಹಾಗಾಗಿ ಕಾಲಿಗೆ ಹಾಕಿದ್ದ ಬ್ಯಾಂಡೇಜ್ ಸಿನಿಮಾದಲ್ಲೂ ಇದೆ. ಈ ಬಗ್ಗೆ ಮಾತನಾಡಿದ ಸೂರಜ್ ‘ಕಾಲಿಗೆ ಗಾಯವಾಗಿದ್ದರೂ ಫೈಟಿಂಗ್, ಮರ ಹತ್ತುವ ಸೀನ್ ಮಾಡಿದೆ. ನನ್ನಪ್ಪ ಸುಭಾಷ್ ಆಚಾರ್ಯ ಬೆಂಬಲವಾಗಿ ನಿಂತರು’ ಎಂದ.

ಮನಸೆಳೆದ ಹಾಡು…

ಎಳೆಯರು ನಾವು ಗೆಳೆಯರು ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ‘ಎಳೆಯರು ನಾವು ಗೆಳೆಯರು…’ ಹಾಡಿನಲ್ಲಿ ಡಿಫರೆಂಟ್ ಲುಕ್ಸ್​ನಲ್ಲಿ 10ಮಕ್ಕಳೂ ಕಾಣಿಸಿಕೊಂಡಿದ್ದಾರೆ. ಗಾಗಲ್, ಕಚ್ಚೆಪಂಚೆ ಸೇರಿ ವಿವಿಧ ರೀತಿಯ ಡ್ರೆಸ್ ಹಾಕಿಕೊಂಡು ಮಿಂಚಿದ್ದಾರೆ. ಒಂದೇ ಹಾಡಿನಲ್ಲಿ ಹಲವು ಡ್ರೆಸ್ ಹಾಕಲು ಅವಕಾಶ ಸಿಕ್ಕಿದ್ದಕ್ಕೆ ಮಕ್ಕಳು ಫುಲ್ ಖುಷಿಯಾಗಿದ್ದಾರೆ.

ತಾನಾನ ತಾನ.. ತಾನಾನ ತಾನ… ಕರಿಗಿರಿ ಮುಡಿ ಮೇಲೆ…

ಚಿಕುಬುಕು ರೈಲಿಗೆ ಹತ್ತುವಾರೆ ಮೆಲ್ಲಗೆ ಹೋಗುವ ಸುಕುಮಾರಿ…

ಈ ಹಾಡುಗಳು ಎಲ್ಲ ಮಕ್ಕಳಿಗೂ ಫೇವರೆಟ್ ಅಂತೆ.

ಚೇಷ್ಟೆ ಮಾಡುತ್ತಲೇ ಸೈ ಎನಿಸಿದ್ರು

ಶೂಟಿಂಗ್ ಮಾಡ್ತಾಯಿರೋ ಕ್ಯಾಮರಾಮೆನ್ ಬೆನ್ನಿಗೆ ನೇತಾಡೋದು, ವಿಕ್ರಮ್ ಸರ್​ಗೆ ಕಚಕುಳಿ ಕೊಡೋದು, ಹರಿಶ್ ಭಟ್​ಗೆ ಇರೋ ಉದ್ದ ಕೂದಲನ್ನು ಎಳೆಯೋದು, ಪ್ರೊಡ್ಯೂಸರ್ ತೊಡೆಮೇಲೆ ಕುಳಿತು ಆಟವಾಡೋದು… ಹೀಗಿತ್ತಂತೆ ಪುಟಾಣಿ ನಟರ ತುಂಟಾಟ. ಏನೆಲ್ಲ ಚೇಷ್ಟೆ ಮಾಡಬೇಕಿತ್ತೋ ಅದನ್ನೆಲ್ಲ ಮಾಡುತಿದ್ದರಂತೆ ಮಕ್ಕಳು. ‘ಅಯ್ಯೋ, ಈ ಮಕ್ಕಳತ್ರ ಹೇಗೆ ಆಕ್ಟ್ ಮಾಡ್ಸೋದು ಅನ್ನುತಿದ್ರು ನೃತ್ಯ ನಿರ್ದೇಶಕಿ ಹರಿಣಿ ಮೇಡಂ. ಔಟ್​ಫುಟ್ ಬಂದ ಬಳಿಕ ಹರಿಣಿ ಮೇಡಂ ತುಂಬಾ ಖುಷಿ ಪಟ್ರು’ ಎಂದು ಸ್ಮರಿಸಿಕೊಂಡರು ಅಚಿಂತ್ಯನ ತಂದೆ ಅವಿನಾಶ್.

ಅಚಿಂತ್ಯ- ಹೀರೋ ರಾಜ

ನಿಹಾಲ್- ಕಂಬರ್ ಸ್ವಾಮಿ

ಅಮೋಘ- ಗೊರಕೆ ಶಂಕರ

ಅಭಿಷೇಕ್- ಹಲ್ಕಿರಿ ವಜ್ರಪ್ಪ

ಪುಟ್ಟರಾಜು- ಹಕ್ಕಿಪಿಕ್ಕಿ ರಾಮ

ತುಷಾರ-ಪೇಪರ್ ಮೋಹನ್

ಮಹತಿ-ರ್ಯಾಂಕ್ ವಿದ್ಯಾ

ತೇಜಸ್ವಿನಿ- ತಿಂಡಿಪೋತಿ ಪದ್ಮಾ

ಮಹೇಂದ್ರ- ಮರಕೋತಿ ಸೀನ

ಸೂರಜ್- ಮೆಕಾನಿಕ್ ಉಸ್ತಾದ್

Leave a Reply

Your email address will not be published. Required fields are marked *

Back To Top