ರಾಂಚಿ: ಬರೋಬ್ಬರಿ 11 ಗಂಟೆಗಳ ಮ್ಯಾರಥಾನ್ ಇನಿಂಗ್ಸ್ ಆಡಿದ ಚೇತೇಶ್ವರ ಪೂಜಾರ ಅವರ ವೃತ್ತಿಜೀವನದ ಮೂರನೇ ದ್ವಿಶತಕ ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ ಬಾರಿಸಿದ ಸ್ಮರಣೀಯ ಶತಕ ರಾಂಚಿ
ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಬೆವರಿಳಿಸಿದೆ. ಪೂಜಾರ-ಸಾಹ ಜೋಡಿಯ ಮಹೋನ್ನತ 199 ರನ್ಗಳ ಜತೆಯಾಟ ಹಾಗೂ ದಿನದ ಕೊನೆಯಲ್ಲಿ ರವೀಂದ್ರ ಜಡೇಜಾರ ಮಾರಕ ಸ್ಪಿನ್ ಬೌಲಿಂಗ್ ಸಹಾಯ ಪಡೆದ ಭಾರತ ತಂಡ ರಾಂಚಿ ಟೆಸ್ಟ್ನಲ್ಲಿ ಗೆಲುವಿನತ್ತ ಸಾಗಿದೆ. ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಸದ್ಯ ಗೆಲುವಿನ ಅವಕಾಶ ಇರುವುದು ಭಾರತಕ್ಕೆ ಮಾತ್ರ. ಇದಕ್ಕೆ ಕಾರಣವಾಗಿದ್ದು ಪೂಜಾರ (202 ರನ್, 525 ಎಸೆತ, 21 ಬೌಂಡರಿ) ಬಾರಿಸಿದ ದ್ವಿಶತಕ ಹಾಗೂ ಸಾಹ (117 ರನ್, 233 ಎಸೆತ, 8 ಬೌಂಡರಿ, 1 ಸಿಕ್ಸರ್) ಬ್ಯಾಟ್ನಿಂದ ಸಿಡಿದ 3ನೇ ಶತಕ. 91 ರನ್ಗಳ ಹಿನ್ನಡೆಯೊಂದಿಗೆ 6 ವಿಕೆಟ್ಗೆ 360 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ, ಒಟ್ಟಾರೆ 210 ಓವರ್ ಆಟವಾಡಿ 9 ವಿಕೆಟ್ಗೆ 603 ರನ್ ಬಾರಿಸಿ 152 ರನ್ ಮುನ್ನಡೆಯೊಂದಿಗೆ ಡಿಕ್ಲೇರ್ ಘೊಷಿಸಿತು. ನಂತರ ಭಾನುವಾರ ದ್ವಿತೀಯ ಇನಿಂಗ್ಸ್ನಲ್ಲಿ 8 ಓವರ್ ಎದುರಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡುವಲ್ಲಿ ವಿರಾಟ್ ಕೊಹ್ಲಿ ಟೀಮ್ ಯಶ ಕಂಡಿದೆ. ರವೀಂದ್ರ ಜಡೇಜಾರ (6ಕ್ಕೆ 2) ಡಬಲ್ ಸ್ಟ್ರೈಕ್ಗೆ ನಲುಗಿರುವ ಆಸೀಸ್ 7.2 ಓವರ್ಗಳಲ್ಲಿ 23 ರನ್ಗೆ 2 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಆಸ್ಟ್ರೇಲಿಯಾ ಇನ್ನೂ 129 ರನ್ ಬಾರಿಸಬೇಕಿದೆ.
ಕಾಡಿದ ಜಡೇಜಾ: ಸ್ಪಿನ್ನರ್ಗಳ ಮೂಲಕ ಆಸೀಸ್ಅನ್ನು ಕಟ್ಟಿಹಾಕಲು ಆರಂಭಿಸಿದ ಭಾರತಕ್ಕೆ 6ನೇ ಓವರ್ನಲ್ಲಿ ಮೊದಲ ಯಶ ಸಿಕ್ಕಿತು. 16 ಎಸೆತದಲ್ಲಿ 3 ಬೌಂಡರಿ ಇದ್ದ 14 ರನ್ ಬಾರಿಸಿದ್ದ ಡೇವಿಡ್ ವಾರ್ನರ್, ಜಡೇಜಾ ಎಸೆತದಲ್ಲಿ ಬೌಲ್ಡ್ ಆದರು. ನೈಟ್ವಾಚ್ವುನ್ ಆಗಿ ಬಂದ ನಾಥನ್ ಲ್ಯಾನ್ (2) ಕೂಡ ಜಡೇಜಾ ಎಸೆತದಲ್ಲೇ ಬೌಲ್ಡ್ ಆದಾಗ ದಿನದಾಟವನ್ನು ಮುಗಿಸಲಾಯಿತು. ಮ್ಯಾಟ್ ರೆನ್ಶಾ (7) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. -ಏಜೆನ್ಸೀಸ್
ದ್ರಾವಿಡ್ ದಾಖಲೆ ಮುರಿದ ಪೂಜಾರ
525 ಎಸೆತ ಎದುರಿಸುವ ಮೂಲಕ ಚೇತೇಶ್ವರ ಪೂಜಾರ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಲ್ಲಿದ್ದ ಅಪರೂಪದ ಭಾರತೀಯ ದಾಖಲೆಯನ್ನು ಮುರಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಎಸೆತ ಎದುರಿಸಿದ ಭಾರತೀಯ ಬ್ಯಾಟ್ಸ್ಮನ್ ಎನ್ನುವ ಗೌರವ ಪೂಜಾರ ಪಾಲಾಗಿದೆ. 2004ರಲ್ಲಿ ನಡೆದ ರಾವಲ್ಪಿಂಡಿ ಟೆಸ್ಟ್ ನಲ್ಲಿ ದ್ರಾವಿಡ್ 495 ಎಸೆತ ಎದುರಿಸಿದ್ದು ಈವರೆಗಿನ ದಾಖಲೆ ಎನಿಸಿತ್ತು. 1997ರಲ್ಲಿ ನವಜೋತ್ ಸಿಂಗ್ ಸಿಧು 491 ಎಸೆತ (ವೆಸ್ಟ್ ಇಂಡೀಸ್) ಎದುರಿಸಿದ್ದು ನಂತರದ ಸ್ಥಾನದಲ್ಲಿದೆ.
ಚೇತೇಶ್ವರ ಪೂಜಾರ ಆಡಿದ 525 ಎಸೆತಗಳ ಇನಿಂಗ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ 29ನೇ ದೀರ್ಘ ಇನಿಂಗ್ಸ್ ಎನಿಸಿಕೊಂಡಿದೆ. 1938ರಲ್ಲಿ ಇಂಗ್ಲೆಂಡ್ನ ಲಿಯೋನಾರ್ಡ್ ಹಟನ್, ಆಸ್ಟ್ರೇಲಿಯಾ ವಿರುದ್ಧ 847 ಎಸೆತಗಳ ಇನಿಂಗ್ಸ್ ಆಡಿದ್ದು ವಿಶ್ವದಾಖಲೆ. 2015ರಲ್ಲಿ ಇಂಗ್ಲೆಂಡ್ ತಂಡದ ನಾಯಕ ಅಲಸ್ಟೈರ್ ಕುಕ್ ಪಾಕಿಸ್ತಾನ ವಿರುದ್ಧ ಅಬುಧಾಬಿ ಟೆಸ್ಟ್ನಲ್ಲಿ 528 ಎಸೆತಗಳ ಇನಿಂಗ್ಸ್ ಆಡಿದ ಬಳಿಕ ಟೆಸ್ಟ್ ಕ್ರಿಕೆಟ್ನ ಮೊದಲ 500ಪ್ಲಸ್ ಎಸೆತದ ಇನಿಂಗ್ಸ್ ಇದು.
ಮೂರು ದಿನಗಳ ಪೂಜಾರ ಆಟ
ಚೇತೇಶ್ವರ ಪೂಜಾರ ಒಟ್ಟು ಮೂರು ದಿನಗಳ ಕಾಲ ಬ್ಯಾಟಿಂಗ್ ನಡೆಸಿದರು. 668 ನಿಮಿಷ ಕ್ರೀಸ್ನಲ್ಲಿದ್ದ ಸೌರಾಷ್ಟ್ರ ಬ್ಯಾಟ್ಸ್ ಮನ್ 202 ರನ್ಗಾಗಿ 91 ಸಿಂಗಲ್ಸ್ (91ರನ್), 12 ಡಬಲ್ಸ್ (24 ರನ್), 1 ಟ್ರಿಪಲ್ (3ರನ್), 21 ಬೌಂಡರಿ (84 ರನ್) ಬಾರಿಸಿದ್ದರು.
ಶುಕ್ರವಾರ 10 ರನ್, 38 ನಿಮಿಷ, 26 ಎಸೆತ, 1 ಬೌಂಡರಿ
ಶನಿವಾರ 120 ರನ್, 372 ನಿಮಿಷ, 302 ಎಸೆತ, 16 ಬೌಂಡರಿ
ಭಾನುವಾರ 72 ರನ್, 258 ನಿಮಿಷ, 197 ಎಸೆತ, 4 ಬೌಂಡರಿ
525 – ಭಾರತದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಎಸೆತ ಎದುರಿಸಿದ ಬ್ಯಾಟ್ಸ್ಮನ್ ಎನ್ನುವ ಗೌರವಕ್ಕೆ ಪೂಜಾರ ಪಾತ್ರರಾದರು. ಇದಕ್ಕೂ ಮುನ್ನ 2005ರ ಬೆಂಗಳೂರು ಟೆಸ್ಟ್ನಲ್ಲಿ ಪಾಕಿಸ್ತಾನದ ಯೂನಿಸ್ ಖಾನ್ 267 ರನ್ಗಾಗಿ 504 ಎಸೆತ ಎದುರಿ ಸಿದ್ದು ದಾಖಲೆ ಎನಿಸಿತ್ತು.
210 – ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಇನಿಂಗ್ಸ್ನಲ್ಲಿ ಗರಿಷ್ಠ ಓವರ್ಗಳನ್ನು ಎದುರಿಸಿದ ದಾಖಲೆಯನ್ನೂ ಭಾರತ ಮಾಡಿತು. ರಾಂಚಿ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ 210 ಓವರ್ ಆಡುವ ಮೂಲಕ, 1985ರ ಡಿಸೆಂಬರ್ನಲ್ಲಿ ಅಡಿಲೇಡ್ನಲ್ಲಿ ನಡೆದ ಟೆಸ್ಟ್ನಲ್ಲಿ 202 ಓವರ್ಗಳನ್ನು ಎಸೆದ ದಾಖಲೆ ಮುರಿಯಿತು.
11 – ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರ 11ನೇ ದ್ವಿಶತಕ ಬಾರಿಸಿದ್ದು, ಜಂಟಿ ಗರಿಷ್ಠ. ವಿಜಯ್ ಮರ್ಚೆಂಟ್ ಕೂಡ ಇಷ್ಟೇ ದ್ವಿಶತಕ ಸಿಡಿಸಿದ್ದರು. ಅಲ್ಲದೆ, ತವರಿನ ಒಂದೇ ಋತುವಿನಲ್ಲಿ 2 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನ್ನುವ ಗೌರವವನ್ನೂ ಒಲಿಸಿಕೊಂಡರು.
521 – ಪೂಜಾರ ದ್ವಿಶತಕ ಬಾರಿಸಲು 521 ಎಸೆತ ಆಡಿದರು. ಇದು ಭಾರತೀಯನ ನಿಧಾನಗತಿಯ ದ್ವಿಶತಕ ಎನಿಸಿದೆ. 1996-97ರಲ್ಲಿ ವಿಂಡೀಸ್ ವಿರುದ್ಧ ನವಜೋತ್ ಸಿಂಗ್ ಸಿಧು 488 ಎಸೆತದಲ್ಲಿ ದ್ವಿಶತಕ ಬಾರಿಸಿದ್ದು ಹಿಂದಿನ ದಾಖಲೆ.
3 – ವೃದ್ಧಿಮಾನ್ ಸಾಹ ಟೆಸ್ಟ್ನಲ್ಲಿ 3ನೇ ಶತಕ ಸಿಡಿಸಿದರು. ಆ ಮೂಲಕ ಗರಿಷ್ಠ ಟೆಸ್ಟ್ ಶತಕ ಸಿಡಿಸಿದ ಭಾರತದ 2ನೇ ವಿಕೆಟ್ಕೀಪರ್ ಎನಿಸಿದರು. 6 ಶತಕ ಸಿಡಿಸಿರುವ ಧೋನಿ ಅಗ್ರಸ್ಥಾನದಲ್ಲಿದ್ದಾರೆ.
521 – ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಎಸೆತ ಎದುರಿಸಿದ ದಾಖಲೆಯೂ ಪೂಜಾರ ಪಾಲಾಯಿತು. ಇದಕ್ಕೂ ಮುನ್ನ 1992ರ ಸಿಡ್ನಿ ಟೆಸ್ಟ್ನಲ್ಲಿ ರವಿಶಾಸ್ತ್ರಿ 206 ರನ್ಗಾಗಿ 477 ಎಸೆತ ಎದುರಿಸಿದ್ದು ದಾಖಲೆ ಎನಿಸಿತ್ತು.
78 ಓವರ್ಗಳ ತಾಳ್ಮೆಯ ಆಟ
ಪೂಜಾರ ಹಾಗೂ ವೃದ್ಧಿಮಾನ್ ಸಾಹ ಆಡಿದ ಅಂದಾಜು 78 ಓವರ್ಗಳ 199 ರನ್ಗಳ ಜತೆಯಾಟ 3ನೇ ಟೆಸ್ಟ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿತು. ಮೊದಲ ಮೂರು ದಿನದಾಟದ ವೇಳೆ ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ ಹೊಂದಿದ್ದರೂ, ನಾಲ್ಕನೇ ದಿನದ ಏಕೈಕ ಜತೆಯಾಟ ಪಂದ್ಯ ಭಾರತದತ್ತ ವಾಲುವಂತೆ ಮಾಡಿದೆ. 6 ವಿಕೆಟ್ಗೆ 360 ರನ್ಗಳಿಂದ ಭಾನುವಾರದ ಆಟ ಆರಂಭಿಸಿದ ಭಾರತ, ಆಸೀಸ್ ಮೊತ್ತದ ಸನಿಹ ಹೋಗುವ ವಿಶ್ವಾಸ ಹೊಂದಿತ್ತು. ಇನ್ನೊಂದೆಡೆ ಸ್ಮಿತ್ ಪಡೆ ವೇಗಿಗಳಾದ ಕಮ್ಮಿನ್ಸ್ ಹಾಗೂ ಹ್ಯಾಸಲ್ವುಡ್ ಮೂಲಕ ಭಾರತವನ್ನು ನಿಯಂತ್ರಿಸುವ ಇರಾದೆಯಲ್ಲಿತ್ತು. ಆದರೆ, ಪೂಜಾರ-ಸಾಹ ಜೋಡಿಯ ಮನಮೋಹಕ ಜತೆಯಾಟ ಇದಕ್ಕೆ ಅವಕಾಶ ನೀಡಲಿಲ್ಲ. 328 ರನ್ಗೆ 6ನೇ ವಿಕೆಟ್ ಕಳೆದುಕೊಂಡಿದ್ದಾಗ, ಪೂಜಾರ ಹಾಗೂ ಸಾಹ ಜತೆಯಾಗಿದ್ದರು. ಜೋಡಿ ಒಂದೊಂದು ರನ್ ಕದಿಯುತ್ತಿದ್ದಾಗ ಭಾರತೀಯ ಪಾಳಯದಲ್ಲಿ ಸಂಭ್ರಮ ಕಾಣಿಸಿದರೆ, ಆಸ್ಟ್ರೇಲಿಯಾ ಆಶಾಭಂಗಕ್ಕೆ ಒಳಗಾಯಿತು. ಪ್ರವಾಸಿ ತಂಡದ ಯಾವೊಬ್ಬ ಬೌಲರ್ ಕೂಡ ಈ ಜೋಡಿಗೆ ಸವಾಲು ನೀಡಲಿಲ್ಲ. ದಿನದ 7ನೇ ಎಸೆತದಲ್ಲೇ ಔಟ್ ಆಗುವ ಅಪಾಯ ಎದುರಿಸಿದ್ದ ಸಾಹ ರಕ್ಷಣಾತ್ಮಕ ಆಟವಾಡಿ ಪೂಜಾರಗೆ ಸಾಥ್ ನೀಡಿದರು. ಮುನ್ನಡೆ 76 ರನ್ ಆಗಿದ್ದಾಗ ಪೂಜಾರ ಕೆಟ್ಟ ಶಾಟ್ ಬಾರಿಸಿದ್ದರಿಂದ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿ ಹೊರನಡೆದರು. ಪೂಜಾರ ಹೊರನಡೆದ ಮೊತ್ತಕ್ಕೆ 14 ರನ್ ಕೂಡಿಸುವ ವೇಳೆಗೆ ಸಾಹ ಕೂಡ ಓಕೀಫ್ ಎಸೆತದಲ್ಲಿ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿದರು.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 451
ಭಾರತ ಮೊದಲ ಇನಿಂಗ್ಸ್: 210 ಓವರ್ಗಳಲ್ಲಿ 9 ವಿಕೆಟ್ಗೆ 603 ಡಿ. (ಶನಿವಾರ 6 ವಿಕೆಟ್ಗೆ 360)
ಪೂಜಾರ ಸಿ ಮ್ಯಾಕ್ಸ್ವೆಲ್ ಬಿ ಲ್ಯಾನ್ 202
ಸಾಹ ಸಿ ಮ್ಯಾಕ್ಸ್ವೆಲ್ ಬಿ ಓಕೀಫ್ 117
ರವೀಂದ್ರ ಜಡೇಜಾ ಅಜೇಯ 54
ಉಮೇಶ್ ಸಿ ವಾರ್ನರ್ ಬಿ ಓಕೀಫ್ 16
ಇಶಾಂತ್ ಶರ್ಮ ಔಟಾಗದೆ 0
ಇತರೆ: 19. ವಿಕೆಟ್ ಪತನ: 6-328, 7-527, 8-541, 9-595. ಬೌಲಿಂಗ್: ಜೋಸ್ ಹ್ಯಾಸಲ್ವುಡ್ 44-10-103-1, ಪ್ಯಾಟ್ ಕಮ್ಮಿನ್ಸ್ 39-10-106-4, ಸ್ಟೀವ್ ಓಕೀಫ್ 77-17-199-3, ಲ್ಯಾನ್ 46-2-163-1, ಮ್ಯಾಕ್ಸ್ವೆಲ್ 4-0-13-0.
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್:
7.2 ಓವರ್ಗಳಲ್ಲಿ 2 ವಿಕೆಟ್ಗೆ 23
ಡೇವಿಡ್ ವಾರ್ನರ್ ಬಿ ಜಡೇಜಾ 14
ಮ್ಯಾಟ್ ರೆನ್ಶಾ ಬ್ಯಾಟಿಂಗ್ 7
ನಾಥನ್ ಲ್ಯಾನ್ ಬಿ ಜಡೇಜಾ 2
ಇತರೆ: 0. ವಿಕೆಟ್ ಪತನ: 1-17, 2-23. ಬೌಲಿಂಗ್: ಆರ್. ಅಶ್ವಿನ್ 4-0-17-0, ರವೀಂದ್ರ ಜಡೇಜಾ 3.2-1-6-2.
ಆಸೀಸ್ ತಂಡ 23 ವರ್ಷಗಳ ಬಳಿಕ ಇನಿಂಗ್ಸ್ ಒಂದರಲ್ಲಿ 200ಕ್ಕೂ ಅಧಿಕ ಓವರ್ ಬೌಲಿಂಗ್ ಮಾಡಿತು. 1994ರಲ್ಲಿ ದ. ಆಫ್ರಿಕಾ ವಿರುದ್ಧ ಡರ್ಬನ್ನಲ್ಲಿ 205.2 ಓವರ್ ಬೌಲಿಂಗ್ ಮಾಡಿತ್ತು.
ಓಕೀಫ್ ಗರಿಷ್ಠ ಮ್ಯಾಕ್ಸ್ವೆಲ್ ಕನಿಷ್ಠ
ಪೂಜಾರ ಎದುರಿಸಿದ 525 ಎಸೆತಗಳ ಪೈಕಿ ಸ್ಟೀವ್ ಓಕೀಫ್ರಿಂದ ಗರಿಷ್ಠ ಎಸೆತ ಎದುರಿಸಿದರೆ, ಗ್ಲೆನ್ ಮ್ಯಾಕ್ಸ್ವೆಲ್ರಿಂದ ಕನಿಷ್ಠ ಎಸೆತ ಎದುರಿಸಿದರು. ಓಕೀಫ್ರ 215 ಎಸೆತಗಳಿಂದ ಪೂಜಾರ 65 ರನ್ ಬಾರಿಸಿದರೆ, ಹ್ಯಾಸಲ್ವುಡ್ರ 123 ಎಸೆತಗಳಿಂದ 50 ರನ್, ಲ್ಯಾನ್ರ 96 ಎಸೆತಗಳಿಂದ 39 ರನ್, ಕಮ್ಮಿನ್ಸ್ರ 74 ಎಸೆತಗಳಿಂದ 42 ರನ್ ಹಾಗೂ ಮ್ಯಾಕ್ಸ್ ವೆಲ್ರ 17 ಎಸೆತಗಳಿಂದ 6 ರನ್ ಕಸಿದರು.
ಪೂಜಾರ, ಸಾಹ ಹಾಗೂ ಜಡೇಜಾ ಭಾನುವಾರದ ಆಟದಲ್ಲಿ ಗಮನಸೆಳೆದ ಕ್ರಿಕೆಟಿಗರು. ಹಿನ್ನಡೆಯ ಭೀತಿಯಲ್ಲಿ ದಿನದಾಟ ಆರಂಭಿಸಿದ್ದ ಭಾರತಕ್ಕೆ ಪಂದ್ಯ ಗೆಲ್ಲುವ ಸ್ಪಷ್ಟ ಅವಕಾಶ ಸೃಷ್ಟಿಸಿದ್ದು ಈ ಮೂವರು. ಪೂಜಾರ ಇನಿಂಗ್ಸ್ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯಲಿದೆ. ಬೌಲಿಂಗ್ ಮಾಡಿಯೇ ಸುಸ್ತಾದಂತಿರುವ ಆಸ್ಟ್ರೇಲಿಯಾ ಸಂಪೂರ್ಣ ತಿರುವು ಪಡೆದುಕೊಂಡಿರುವ ಪಿಚ್ನಲ್ಲಿ 5ನೇ ದಿನ ಹೇಗೆ ಆಡಲಿದೆ ಎನ್ನುವುದೇ ಸದ್ಯದ ಕುತೂಹಲ. ಸ್ಲೆಡ್ಜಿಂಗ್ ಮಾತ್ರವೇ ಕ್ರಿಕೆಟ್ ಅಲ್ಲ. ಶಿಸ್ತು, ಕೌಶಲ ಹಾಗೂ ಅತೀವ ಸಹನೆಯ ಆಟವೇ ಕ್ರಿಕೆಟ್ ಎನ್ನುವುದು ರಾಂಚಿ ಟೆಸ್ಟ್ನ 4ನೇ ದಿನದ ವಿಶೇಷತೆ.
ಪೂಜಾರಗೆ ಶಾಕ್ ನೀಡಿದ ಅಂಪೈರ್!
ದಿನದಾಟದ ವೇಳೆ ಚೇತೇಶ್ವರ ಪೂಜಾರಗೆ ಅಂಪೈರ್ ಕೂಡ ಅಚ್ಚರಿ ನೀಡಿದರು. ಭಾರತದ ಇನಿಂಗ್ಸ್ ನ 140ನೇ ಓವರ್. ಜೋಸ್ ಹ್ಯಾಸಲ್ವುಡ್ ಎಸೆತದಲ್ಲಿ ಪೂಜಾರ ಪುಲ್ ಮಾಡಲು ಯತ್ನಿಸಿದ್ದರು. ಪೂಜಾರ ಬ್ಯಾಟ್ ಸಮೀಪದಿಂದಲೇ ಸಾಗಿದ ಚೆಂಡು ವಿಕೆಟ್ಕೀಪರ್ ಕೈಸೇರಿತು. ಹ್ಯಾಸಲ್ವುಡ್ ಸೇರಿದಂತೆ ಆಸ್ಟ್ರೇಲಿಯಾದ ಸ್ಲಿಪ್ ಫೀಲ್ಡರ್ಗಳು ಅರ್ಧ ಮನಸ್ಸಿನಲ್ಲಿ ಹಾಗೂ ಸಣ್ಣ ದನಿಯಲ್ಲಿ ಅಪೀಲ್ ಮಾಡಿದರು. ಈ ವೇಳೆ ಅಂಪೈರ್ ಕ್ರಿಸ್ ಗ್ಯಾಫನಿ ಕೂಡ ಔಟ್ ಎಂದು ಬೆರಳು ಏರಿಸುತ್ತಿರುವಾಗಲೇ ಆಸೀಸ್ ಆಟಗಾರರಿಂದ ಬಂದ ಸಣ್ಣ ದನಿಯ ಅಪೀಲ್ ಕೇಳಿ, ಟೋಪಿಯನ್ನು ಕೆರೆದುಕೊಂಡರು.
ಪ್ಲೆಸಿಸ್ರಂತೆ ಆಡಿ ಎಂದ ಲೆಹ್ಮನ್!
ರಾಂಚಿ ಟೆಸ್ಟ್ನಲ್ಲಿ ಸೋಲನ್ನು ತಪ್ಪಿಸಿಕೊಳ್ಳಲು ಕೆಲ ವರ್ಷಗಳ ಹಿಂದೆ ಅಡಿಲೇಡ್ ಟೆಸ್ಟ್ನಲ್ಲಿ ಫಾಪ್ ಡು ಪ್ಲೆಸಿಸ್ ಆಡಿದ ಇನಿಂಗ್ಸ್ಅನ್ನು ಆಡಬೇಕಿದೆ ಎಂದು ಆಸ್ಟ್ರೇಲಿಯಾ ಕೋಚ್ ಡ್ಯಾರೆನ್ ಲೆಹ್ಮನ್ ಹೇಳಿದ್ದಾರೆ. ‘ಪಂದ್ಯ ನಮ್ಮ ಕೈತಪ್ಪುವ ಮುನ್ನವೇ ಆದಷ್ಟು ಎದುರಾಳಿ ತಂಡದ ಎಸೆತಗಳನ್ನು ಬ್ಲಾಕ್ ಮಾಡಿ. ಕೆಲ ವರ್ಷಗಳ ಹಿಂದೆ ಅಡಿಲೇಡ್ ಟೆಸ್ಟ್ ನಲ್ಲಿ ಪ್ಲೆಸಿಸ್ ಆಡಿದ್ದ ರೀತಿಯನ್ನು ನೆನೆಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ನಲ್ಲಿ 430 ರನ್ ಬೆನ್ನಟ್ಟಬೇಕಿದ್ದ ದಕ್ಷಿಣ ಆಫ್ರಿಕಾ 4ನೇ ದಿನದ ಅಂತ್ಯಕ್ಕೆ 77 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಅಂತಿಮ ದಿನ ವಿಲಿಯರ್ಸ್ ಹಾಗೂ ಪ್ಲೆಸಿಸ್ ಸಾಹಸದಿಂದ ಪಂದ್ಯ ಡ್ರಾ ಮಾಡಿಕೊಂಡಿತ್ತು. ವಿಲಿಯರ್ಸ್ 220 ಎಸೆತ ಎದುರಿಸಿ 33 ರನ್ ಬಾರಿಸಿದ್ದರೆ, ಪ್ಲೆಸಿಸ್ 376 ಎಸೆತ ಆಡಿ 110 ರನ್ ಬಾರಿಸಿದ್ದರು.
ಜಡೇಜಾ ಬಿರುಸಿನ ಅರ್ಧಶತಕ
100ರ ಆಸುಪಾಸಿನ ಮುನ್ನಡೆ ಪಡೆದುಕೊಳ್ಳುವ ಹಂತದಲ್ಲಿದ್ದ ವೇಳೆ ರವೀಂದ್ರ ಜಡೇಜಾ (54*ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಅರ್ಧಶತಕ ಬಾರಿಸಿದ್ದು ತಂಡದ ನೆರವಿಗೆ ಬಂತು. ಅದಾಗಲೇ ನೀರಸಗೊಂಡಿದ್ದ ಆಸೀಸ್ ಬೌಲಿಂಗ್ ಮೇಲೆ ಬ್ಯಾಟಿಂಗ್ ಪ್ರಹಾರ ನಡೆಸಿದ ಜಡೇಜಾ, ಉಮೇಶ್ ಯಾದವ್ (16) ಜತೆ 9ನೇ ವಿಕೆಟ್ಗೆ 54 ರನ್ಗಳ ಜತೆಯಾಟವಾಡಿದರು. ಈ ನಡುವೆ ಲ್ಯಾನ್ ಹಾಗೂ ಓಕೀಫ್ಗೆ ಒಂದೊಂದು ಸಿಕ್ಸರ್ ಕೂಡ ಸಿಡಿಸಿದರು. ಕಮ್ಮಿನ್ಸ್ ಎಸೆತದಲ್ಲಿ ಫೈನ್ಲೆಗ್ನಲ್ಲಿ ಬೌಂಡರಿ ಬಾರಿಸಿ ತಂಡದ ಮೊತ್ತವನ್ನು 600 ಹಾಗೂ ಮುನ್ನಡೆಯನ್ನು 150ರ ಗಡಿ ದಾಟಿಸಿದ ಬಳಿಕ ಕೊಹ್ಲಿ ಡಿಕ್ಲೇರ್ ಘೊಷಣೆ ಮಾಡಿದರು.