Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಗೃಹಸಾಲದ ಬಡ್ಡಿದರದ ಸುತ್ತ…

Wednesday, 27.09.2017, 3:00 AM       No Comments

|  ಸಿ.ಎಸ್.ಸುಧೀರ್

ಗೃಹಸಾಲವನ್ನು ಎಂಸಿಎಲ್​ಆರ್ ಪದ್ಧತಿಗೆ ಬದಲಾಯಿಸಿಕೊಳ್ಳಬೇಕೆ?

ಮೂಲದರ (ಬೇಸ್ ರೇಟ್) ಆಧರಿಸಿದ ಗೃಹಸಾಲವನ್ನು ನಿಮ್ಮ ಬ್ಯಾಂಕಿನ ಅಥವಾ ಮತ್ತಾವುದೇ ಸಾಲದಾತ ಸಂಸ್ಥೆಯ ಎಂಸಿಎಲ್​ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್) ಪದ್ಧತಿಗೆ ಬದಲಾಯಿಸಿಕೊಳ್ಳುವುದು ಜಾಣನಿರ್ಧಾರವಾಗಬಲ್ಲದು. ಆದರೆ ಇಂಥ ನಿರ್ಧಾರವನ್ನು ಕೈಗೊಳ್ಳುವಾಗ, ಎರಡೂ ಆಯ್ಕೆಗಳಲ್ಲಿ ಹಾಲಿ ಇರುವ ಅಥವಾ ಅನ್ವಯವಾಗುವ ಬಡ್ಡಿದರ ಎಷ್ಟಿದೆ ಎಂಬುದನ್ನು ಮೊದಲು ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಇಂಥದೊಂದು ಬದಲಾವಣೆಗೆ ಮುಂದಾಗುವುದಕ್ಕೂ ಮುನ್ನ ಯಾವುದರಲ್ಲಿ ಬಡ್ಡಿದರ ಕಡಿಮೆಯಿದೆಯೋ ಅದಕ್ಕೆ ವರ್ಗಾಯಿಸುವುದರ ಕುರಿತು ಆಲೋಚಿಸಬೇಕಾಗುತ್ತದೆ. ಜತೆಜತೆಗೆ ಇಂಥ ವರ್ಗಾವಣೆಯ ಸಂದರ್ಭದಲ್ಲಿ ಅನ್ವಯವಾಗುವ ಇತರ ವೆಚ್ಚಗಳ (ಪ್ರೊಸೆಸಿಂಗ್ ಫೀ) ಕುರಿತಾಗಿಯೂ ಗಮನ ಹರಿಸಬೇಕಾಗುತ್ತದೆ. ಹೆಚ್ಚೂಕಡಿಮೆ ಕಳೆದ 1 ವರ್ಷದಿಂದೀಚೆಗೆ, ಬಡ್ಡಿದರ ಸಂಬಂಧಿತ ಎಂಸಿಎಲ್​ಆರ್ ಎಂಬ ಹೊಸ ಪದ್ಧತಿಯನ್ನು ಕಾರ್ಯರೂಪಕ್ಕೆ ತಂದಿರುವುದರಿಂದ ಗೃಹಸಾಲದ ದರ ನಿರಂತರವಾಗಿ ಕಡಿಮೆಯಾಗುತ್ತ ಬಂದಿದೆ. ಇದರ ಜತೆಗೆ, ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅಮಾನ್ಯೀಕರಣವು ಇದಕ್ಕೆ ಮಹತ್ತರ ಕೊಡುಗೆ ನೀಡಿದೆ ಎನ್ನಲಡ್ಡಿಯಿಲ್ಲ. ಇದರ ಪರಿಣಾಮವಾಗಿ, ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಗೃಹಸಾಲದ ಬಡ್ಡಿದರಗಳು ಶೇ. 8.35ರಿಂದ ಶೇ. 8.8ರಷ್ಟು ಕಡಿಮೆ ಮಟ್ಟಕ್ಕೆ ಬಂದಿದೆ.

2016ರ ಏಪ್ರಿಲ್​ಗೂ ಮುನ್ನ ಗೃಹಸಾಲದ ಬಡ್ಡಿದರವನ್ನು ಮೂಲದರ (ಬೇಸ್​ರೇಟ್)ಪದ್ಧತಿಯಡಿ ನಿಗದಿ ಮಾಡಲಾಗುತ್ತಿತ್ತು. ಎಂಸಿಎಲ್​ಆರ್​ಗೆ ಹೋಲಿಸಿದಾಗ ಈ ಪದ್ಧತಿಯಲ್ಲಿ ವಿಧಿಸಲಾಗಿರುವ ದರವು ಸಾಕಷ್ಟು ಹೆಚ್ಚಿರುತ್ತದೆ. ಭಾರತದ ವಿವಿಧ ಬ್ಯಾಂಕುಗಳಲ್ಲಿ, ಗೃಹಸಾಲದ ಮೇಲೆ ಮೂಲದರ ಪದ್ಧತಿಯಡಿ ವಿಧಿಸಲಾಗುವ ಒಟ್ಟಾರೆ ಬಡ್ಡಿದರವು ಸುಮಾರು ಶೇ. 9.50ರಿಂದ ಶೇ. 10ರವರೆಗೆ ಇದೆ.

ಬದಲಾವಣೆಯ ಕುರಿತು ನಿರ್ಧರಿಸುವುದು ಹೇಗೆ?

ಮೂಲದರ ಪದ್ಧತಿಯಿಂದ ಎಂಸಿಎಲ್​ಆರ್ ಪದ್ಧತಿಗೆ ಬದಲಾಯಿಸಿಕೊಳ್ಳಲು, ವರ್ಗಾವಣೆ/ಬದಲಾವಣೆಗೆ ಸಂಬಂಧಿಸಿದ ಖರ್ಚುವೆಚ್ಚ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಖರ್ಚುವೆಚ್ಚದ ಕುರಿತು ಮಾತನಾಡುವುದಾದರೆ, ಒಂದೊಂದೂ ಬ್ಯಾಂಕಿನ ವೈಶಿಷ್ಟ್ಯ ಮತ್ತು ಸೇವಾವೈಖರಿಯನ್ನು ಅವಲಂಬಿಸಿ ಇದು ಸುಮಾರು 5,000 ರೂ.ನಿಂದ 20,000 ರೂ.ವರೆಗೆ ಇರಬಹುದು. ಆದ್ದರಿಂದ, ಮೂಲದರ ಪದ್ಧತಿಯಡಿ ಸಾಲವನ್ನು ಪಡೆದು ಕಾಲಾನುಕಾಲಕ್ಕೆ ನಿಗದಿತ ಬಡ್ಡಿಯನ್ನು ಪಾವತಿಸುತ್ತಿರುವವರು, ಇಂಥದೊಂದು ವರ್ಗಾವಣೆ/ಬದಲಾವಣೆಯು ಒಳಗೊಂಡಿರಬಹುದಾದ ಖರ್ಚುವೆಚ್ಚಗಳ ಕುರಿತಾಗಿ ಬ್ಯಾಂಕು/ಸಾಲದಾತ ಸಂಸ್ಥೆಯಲ್ಲಿ ವಿಚಾರಿಸಿ ತಿಳಿದುಕೊಳ್ಳಬೇಕಾಗುತ್ತದೆ. ಜತೆಗೆ ಬದಲಾವಣೆಗಿರುವ ಪ್ರಮುಖ ಕಾರಣ ಅಥವಾ ಅಂಶದ ಕುರಿತು, ಅಂದರೆ ಇಎಂಐ ಸ್ವರೂಪ ಹಾಗೂ ಎಂಎಇಎಲ್​ಆರ್ ಪದ್ಧತಿಗೆ ಸಾಲದ ವರ್ಗಾವಣೆ ಮಾಡುವುದರಿಂದಾಗುವ ಬಡ್ಡಿ ವೆಚ್ಚದ ಕುರಿತು ಕೂಲಂಕಷವಾಗಿ ಅರಿಯಬೇಕಾಗುತ್ತದೆ. ಈ ಕುರಿತಾದ ಮತ್ತಷ್ಟು ಮಾಹಿತಿಯನ್ನು ಮುಂದಿನ ಕಂತಿನಲ್ಲಿ ತಿಳಿದುಕೊಳ್ಳೋಣ.

(ಲೇಖಕರು IndianMoney.com ಸಂಸ್ಥಾಪಕರು ಮತ್ತು ಸಿಇಒ)

Leave a Reply

Your email address will not be published. Required fields are marked *

Back To Top