Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಗಲ್ಲಿಗೇರುವುದು ಸಿಹಿಕ್ಷಣವೆಂದ ಯುವವೀರ

Thursday, 31.08.2017, 3:05 AM       No Comments

ಹದಿನೆಂಟರ ಹರಯದಲ್ಲಿ ವಯೋಸಹಜ ಕಾಮನೆಗಳ ಕಡೆ ಕಣ್ಣೆತ್ತಿಯೂ ನೋಡದೆ ದೇಶಕಾರ್ಯಕ್ಕೆ ಸಮರ್ಪಿಸಿಕೊಂಡವನು ಬೀರೇಂದ್ರನಾಥ. ಆಂಗ್ಲಪಾದಸೇವಕನಾಗಿದ್ದ ಷಂಸುಲ್ ಆಲಂ ಎಂಬ ಪೊಲೀಸ್ ಅಧಿಕಾರಿಯನ್ನು ಯಮಸದನಕ್ಕಟ್ಟಿ ಶೌರ್ಯ ಮೆರೆದ.

1909 ಫೆಬ್ರವರಿ 10ರಂದು ಆಲಿಪುರ ಮೊಕದ್ದಮೆಯಲ್ಲಿ ಅರವಿಂದರೇ ಮೊದಲಾದ ಮಹಾನ್ ಕ್ರಾಂತಿಕಾರಿಗಳ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಮನೆಮುರುಕ ಅಶುತೋಷ್ ಬಿಶ್ವಾಸನನ್ನು ಯಮಸದನಕ್ಕಟ್ಟಿ ಚಾರುಚಂದ್ರ ಬಸು ಗಲ್ಲಿಗೇರಿದ್ದ.

ಆದರೆ ಅಶುತೋಷಗಿಂತಲೂ ಭಯಂಕರ ಶತ್ರುವಾಗಿದ್ದ ಆಂಗ್ಲ ಪಾದಸೇವಕ ಷಂಸುಲ್ ಆಲಂ ಎಂಬ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್​ನು ಮೊಕದ್ದಮೆಗೆ ಬೇಕಾದ ಸಕಲ ಸಾಕ್ಷ್ಯಾಧಾರಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದ್ದ. ಬ್ರಿಟಿಷ್ ಅಧಿಕಾರಿಗಳ ನಂಬಿಕೆಯ ಈ ಷಂಸುಲ್ ಆಲಂ ಕಾರ್ಯದಕ್ಷ ಹಾಗೂ ಸಮರ್ಥ. ಅವನೂ ಕ್ರಾಂತಿಕಾರಿಗಳ ಗುರಿಪಟ್ಟಿಯಲ್ಲಿದ್ದವನೇ. ಕ್ರಾಂತಿಕಾರಿಗಳೆಲ್ಲರ ಹುಟ್ಟಡಗಿಸುವುದೇ ತನ್ನ ಗುರಿ ಎಂದೂ, ಅದು ಪೂರ್ತಿಯಾಗುವವರೆಗೂ ತಾನು ವಿಶ್ರಮಿಸುವುದಿಲ್ಲವೆಂದೂ ಅವನು ಬಹಿರಂಗವಾಗಿ ಹೇಳುತ್ತಿದ್ದ.

ಕಲ್ಕತ್ತೆಯ ಹ್ಯಾರಿಸನ್ ರಸ್ತೆಯಲ್ಲಿದ್ದ ಛಾತ್ರ ಭಂಡಾರ್ ಅಂಗಡಿಯ ಮೇಲಂತಸ್ತು ಕ್ರಾಂತಿಕಾರಿಗಳ ಅಡ್ಡೆ. ಅಲ್ಲಿ ಕ್ರಾಂತಿಕಾರಿಗಳ ನಾಯಕ ಬಾಘಾ ಜತೀನನ ಬಲಗೈ ಬಂಟ ಅತುಲ್ ಕೃಷ್ಣ ಘೊಷ್, ಬಿಪಿನ್ ಬಿಹಾರಿ ಗಂಗೂಲಿ ಉಪಸ್ಥಿತರಿದ್ದ ಸಭೆಯಲ್ಲಿ ಷಂಸುಲ್ ಆಲಂನ ವಿರುದ್ಧದ ಕಾರ್ಯಾಚರಣೆಯ ನಿರ್ಣಯ ತಳೆಯಲಾಯಿತು.

ಸತೀಶ್ ಸರ್ಕಾರ್ ಮತ್ತು ಚಂಡೀ ಮಜುಂದಾರ್ ಎಂಬಿಬ್ಬರು ಕ್ರಾಂತಿಕಾರಿಗಳ ಮೊದಲ ಎರಡು ಪ್ರಯತ್ನ ಸಫಲಗೊಳ್ಳಲಿಲ್ಲ. ಆಗ ಕ್ರಾಂತಿನಾಯಕರ ಕಣ್ಣ ಮುಂದೆ ಬಂದವನೇ ಬೀರೇಂದ್ರನಾಥ ದತ್ತ ಗುಪ್ತ.

ನನಗೊಂದು ಛಾನ್ಸ್ ಕೊಡಿ: ಬೀರೇಂದ್ರನ ವಯಸ್ಸು ಹದಿನೆಂಟರ ಆಸುಪಾಸಿನಲ್ಲಿತ್ತು. ತನಗೊಂದು ಅವಕಾಶ ಕೊಡಿ ಎಂದು ಕ್ರಾಂತಿನಾಯಕರನ್ನು ಪೀಡಿಸುತ್ತಿದ್ದ ಬೀರೇಂದ್ರ ಈ ಕೆಲಸಕ್ಕೆ ಆಯ್ಕೆಯಾಗಿದ್ದರಲ್ಲಿ ವಿಶೇಷವೇನೂ ಇರಲಿಲ್ಲ.

ಈಗಿನ ಬಾಂಗ್ಲಾದೇಶದ ಢಾಕಾ ಸಮೀಪದ ಬಿಕ್ರಮಪುರ್ ಎಂಬ ಸ್ಥಳದಿಂದ ಹೊರಹೊಮ್ಮಿದ ಈ ಧೀರ ಜಲಪಾಯಿಗುರಿಯಲ್ಲಿ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಎಂಟ್ರೆನ್ಸ್ ಪರೀಕ್ಷೆಯವರೆಗೆ ಅಲ್ಲಿಯೇ ಓದಿ ಅನಂತರ ಕಲ್ಕತ್ತೆಗೆ ಬಂದು ತನ್ನ ಅಣ್ಣನ ಮನೆಯಲ್ಲಿ ತಂಗಿದ್ದ. ಸುಮಾರು ಏಳು ವರ್ಷಗಳ ಕಾಲ ಅಲ್ಲಿದ್ದು ಆನಂತರ ಕ್ರಾಂತಿಕಾರ್ಯಗಳಿಗೆ ಅನುಕೂಲವಾಗಲೆಂದು ಬೇಚು ಚಟರ್ಜಿ ರಸ್ತೆಯಲ್ಲಿನ ಮೆಸ್​ಗೆ ತನ್ನ ನಿವಾಸವನ್ನು ಬದಲಿಸಿದ್ದ. ಅಲ್ಲಿ ಎರಡು ತಿಂಗಳು ಕಳೆಯುವ ವೇಳೆಗೆ ಅವನಿಗೆ ಷಂಸುಲ್ ಆಲಂನ ಕಾರ್ಯಾಚರಣೆಯ ಕೆಲಸವನ್ನು ಯುಗಾಂತರ ಸಂಸ್ಥೆ ಒಪ್ಪಿಸಿತು.

ಬಾಘಾ ಜತೀನ್ ಅವನ ಮನೋದಾರ್ಢ್ಯವನ್ನು ಪರೀಕ್ಷಿಸಿ ಅವನಿಗೆ ಆರು ಗುಂಡು ತುಂಬಿದ ರಿವಾಲ್ವರ್ ನೀಡಿ ಆಶೀರ್ವದಿಸಿದ್ದ. ಸುರೇಶಚಂದ್ರ ಮಜುಂದಾರ್ ಎಂಬ ಕ್ರಾಂತಿಕಾರಿಯು ಪೊಲೀಸ್ ಅಧಿಕಾರಿಯಿಂದ ಹಾರಿಸಿಕೊಂಡು ಬಂದಿದ್ದಾಗಿತ್ತು ಆ ರಿವಾಲ್ವರ್ (ಇವನೇ ಮುಂದೆ ಆನಂದ ಬಜಾರ್ ಪತ್ರಿಕಾ ಸಮೂಹ ಆರಂಭಿಸಿದ್ದು). 380 ರಂಧ್ರವಿದ್ದ ಆರು ಗುಂಡುಗಳ ವೆಲ್ಬೆ ರಿವಾಲ್ವರ್ ಅದಾಗಿತ್ತು. ಕಾರ್ಯಾಚರಣೆಗೆ ಹೊರಟು ನಿಂತ ಬೀರೇಂದ್ರನಿಗೆ ಹಿಂದಿನ ಪ್ರಯತ್ನದಲ್ಲಿ ವಿಫಲನಾಗಿದ್ದ ಸತೀಶ್ ಸರ್ಕಾರ್ ಎಂಬ ಮಿಡಿನಾಗರದಂತಿದ್ದ ಕ್ರಾಂತಿಕಾರಿಯನ್ನು ಜೊತೆ ಮಾಡಲಾಗಿತ್ತು. ಅವನಿಗೆ ಷಂಸುಲ್ ಆಲಂ ಚೆನ್ನಾಗಿ ಗುರುತಿದ್ದ ಮನುಷ್ಯ.

ಅಂದು 24 ಜನವರಿ 1910. ಸಮಯ ಸಂಜೆ ಸುಮಾರು 5-30. ಅಂದು ಬೆಳಗ್ಗೆ 10 ಗಂಟೆಗೇ ಛಾತ್ರ ಭಂಡಾರ್​ಗೆ ಬಂದಿದ್ದ ಬೀರೇಂದ್ರ ಮತ್ತು ಸತೀಶ್ ಸರ್ಕಾರ್ ಸುಮಾರು ನಾಲ್ಕರ ವೇಳೆಗೆ ಕಲ್ಕತ್ತಾ ಹೈಕೋರ್ಟ್​ಗೆ ಬಂದರು. ಕೋರ್ಟು ವ್ಯವಹಾರಗಳಿಗಾಗಿ ಬಂದಿದ್ದ ಜನರಿಂದ ದಟ್ಟವಾಗಿ ತುಂಬಿದ್ದ ಗುಂಪಿನಲ್ಲಿ ಇಬ್ಬರೂ ಸೇರಿಕೊಂಡರು. ಇಬ್ಬರೂ ಮೈ ಎಲ್ಲ ಕಣ್ಣು ಮಾಡಿಕೊಂಡು ಕೋರ್ಟಿನ ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳ ಬಳಿಗೆ ಬಂದರು. ಜರ್ಬಾಗಿ ಮಿರುಗುತ್ತಿದ್ದ ಪೊಲೀಸ್ ಸಮವಸ್ತ್ರದಲ್ಲಿದ್ದ ಷಂಸುಲ್ ಆಲಂ ಕೆಲವರು ಸರ್ಕಾರಿ ವಕೀಲರೊಂದಿಗೆ ಮಾತನಾಡಿ ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳ ಬಳಿ ಬಂದ. ಅವನ ಸಶಸ್ತ್ರ ಅಂಗರಕ್ಷಕ ಹಿಂದೆಯೇ ಹೆಜ್ಜೆ ಹಾಕುತ್ತಿದ್ದ. ಅವನ ಮುಂದೆ ಸರ್ಕಾರದ ಅಡ್ವೋಕೇಟ್ ಜನರಲ್ ಮೆಟ್ಟಿಲು ಹತ್ತುತ್ತಿದ್ದ. ಸತೀಶ್ ಸರ್ಕಾರ್ ಬೀರೇಂದ್ರನಿಗೆ ಅವನೇ ಷಂಸುಲ್ ಆಲಂ ಎಂದು ಮೆಲುದನಿಯಲ್ಲಿ ಉಸುರಿ ಅವನನ್ನು ತೋರಿಸಿದ.

ಮಿಂಚಿನ ಗತಿಯಲ್ಲಿ ಕಾರ್ಯಪ್ರವೃತ್ತನಾದ ಬೀರೇಂದ್ರ ಸರಸರನೆ ಮೆಟ್ಟಿಲು ಹತ್ತಿ ಷಂಸುಲ್ ಆಲಂ ಮೊದಲ ಮಹಡಿ ತಲಪುವ ವೇಳೆಗೆ ಅವನ ಮುಂದೆ ಯಮನಂತೆ ಹೋಗಿನಿಂತ! ಅವನು ಕೈಯಲ್ಲಿ ರಿವಾಲ್ವರ್ ಹಿಡಿದು ಮೆಟ್ಟಿಲು ಹತ್ತುತ್ತಿರುವುದನ್ನು ನೋಡಿದ ಅಂಗರಕ್ಷಕ ಎಚ್ಚರಗೊಳ್ಳುವ ಮೊದಲೇ ಷಂಸುಲ್ ಆಲಂನ ಎದುರು ನಿಂತ ಬೀರೇಂದ್ರ ಒಂದು ಕ್ಷಣದಷ್ಟೂ ವಿಳಂಬ ಮಾಡದೆ ರಿವಾಲ್ವರ್​ನಿಂದ ಗುಂಡುಗಳನ್ನು ಹಾರಿಸಿದ. ತತ್ತರಿಸಿದ ಆಲಂ ‘ಪಕೊ, ಪಕ್ಡೊ‘ ಎಂದು ಅರಚುತ್ತ ಹಿಂದಕ್ಕೆ ಬಿದ್ದ. ಅವನ ಎದೆಗುಂಡಿಗೆ ಸರಿಯಾಗಿ ಗುಂಡು ಹೊಕ್ಕು ರಕ್ತ ಹೊರ ಚಿಮ್ಮಲಾರಂಭಿಸಿತ್ತು.

ಕೆಳಕ್ಕೆ ಬಿದ್ದ ಆಲಂ ವಿಲ ವಿಲ ಒದ್ದಾಡುತ್ತಾ ಆಗಲೇ ಕೊನೆಯುಸಿರೆಳೆದ. ಸುತ್ತಲಿದ್ದವರು ಕೊಲೆ ಕೊಲೆ ಎಂದು ಕೂಗಿಕೊಳ್ಳುತ್ತಿದ್ದಾಗಲೇ ಅಡ್ಡಬಂದ ಅಂಗರಕ್ಷಕನನ್ನು ಅವನು ರಿವಾಲ್ವರ್ ತೆಗೆಯುವ ಮುನ್ನವೇ ಪಕ್ಕಕ್ಕೆ ಸರಿಸಿ ಬೀರೇಂದ್ರ ನಾಲ್ಕಾರು ನೆಗೆತಗಳಲ್ಲಿ ಮೆಟ್ಟಿಲಿಳಿದು ಓಡಲಾರಂಭಿಸಿದ. ಕೋರ್ಟಿನ ಹೆಬ್ಬಾಗಿಲಿನ ಬಳಿ ಬಂದಾಗ ಅವನ ಹಿಂದೆ ಜನರ ಗುಂಪೊಂದು ಕಳ್ಳ, ಕಳ್ಳ ಎಂದು ಕೂಗುತ್ತಾ ಅಟ್ಟಿಸಿಕೊಂಡು ಬಂತು. ಬೀರೇಂದ್ರ ಗಕ್ಕನೆ ನಿಂತು ರಿವಾಲ್ವರ್ ಕೈ ಮೇಲಕ್ಕೆತ್ತಿ ಗಾಳಿಯಲ್ಲಿ ಗುಂಡುಗಳನ್ನು ಹಾರಿಸುತ್ತಾ ಹುಷಾರ್! ಮುಂದೆ ಬಂದೀರಿ! ಎಂದು ಕೂಗು ಹಾಕಿದ. ಹಿಡಿಯ ಬಂದವರೆಲ್ಲ ಚೆದುರಿಹೋದರು. ಅವನು ಅಲ್ಲಿಂದ ಓಡುತ್ತಾ ಇನ್ನೊಂದು ಗೇಟ್ ಬಳಿ ಬಂದು ಹೆದ್ದಾರಿಗೆ ಬಂದ.

ಬೀರೇಂದ್ರನಿಗೆ ಗಲ್ಲು ಶಿಕ್ಷೆ: ಆವೇಳೆಗೆ ಆಲಿ ಅಹಮದ್ ಖಾನ್ ಎಂಬ ಪೊಲೀಸ್ ಅಧಿಕಾರಿ ತನ್ನ ಕುದುರೆಯನ್ನು ದೌಡಾಯಿಸಿಕೊಂಡು ಇವನ ಹಿಂದೆ ಬಿದ್ದ. ಸಂಜೆಯ ಜನಜಂಗುಳಿ ದಟ್ಟವಾಗಿದ್ದುದರಿಂದ ಬೀರೇಂದ್ರನಿಗೆ ತಪ್ಪಿಸಿಕೊಂಡು ಓಡುವುದು ಅಸಾಧ್ಯವಾಯಿತು. ಅವನು ಸರ್ಕಾರದ ಕೇಂದ್ರ ಕಚೇರಿ ರೈಟರ್ಸ್ ಬಿಲ್ಡಿಂಗ್ ಬಳಿಯ ಹೇಸ್ಟಿಂಗ್ಸ್ ಸ್ಟ್ರೀಟ್ ಎಂಬ ರಸ್ತೆಗೆ ಬರುವ ವೇಳೆಗೆ ಧಡಧಡನೆ ಜನಜಂಗುಳಿಯನ್ನ ಭೇದಿಸಿಕೊಂಡು ಬಂದ ಖಾನ್ ಕುದುರೆಯನ್ನು ಬೀರೇಂದ್ರನಿಗೆ ಅಡ್ಡ ನಿಲ್ಲಿಸಿದ. ಬೀರೇಂದ್ರ ಕೈಯಲ್ಲಿದ್ದ ರಿವಾಲ್ವರ್​ನಿಂದ ಅವನ ಮೇಲೆ ಗುಂಡು ಹಾರಿಸಿದ. ಖಾನ್ ಸಾಹೇಬ ಆ ಗುಂಡಿನಿಂದ ತಪ್ಪಿಸಿಕೊಂಡು ಕುದುರೆಯಿಂದ ಕೆಳಕ್ಕೆ ನೆಗೆದು ಬೀರೇಂದ್ರನನ್ನು ಬಂಧಿಸಿದ.

ಆಲಿ ಅಹಮದ್ ಖಾನ್ ಬೀರೇಂದ್ರನನ್ನು ವಾಟರ್ಲೂ ರಸ್ತೆಯ ಪೊಲೀಸ್ ಠಾಣೆಗೆ ಕರೆದೊಯ್ದು ಎಫ್​ಐಆರ್ ಸಿದ್ಧಗೊಳಿಸಿದ. ಇಡೀ ರಾತ್ರಿ ಅವನ ವಿಚಾರಣೆ ನಡೆಯಿತು. ಡಿಐಜಿ ಡ್ಯಾಲಿ, ಅಸಿಸ್ಟೆಂಟ್ ಡಿಐಜಿ ಡೆನ್​ಹ್ಯಾಮ್ ಪೊಲೀಸ್ ಕಮೀಷನರ್ ಹ್ಯಾಲಿಡೆ ಧಾವಿಸಿ ಬಂದು ಮೂರನೆಯ ಡಿಗ್ರಿ ಶಿಕ್ಷೆಯನ್ನು ಪ್ರಯೋಗಿಸಿ ಬಾಯಿ ಬಿಡಿಸಲು ಪ್ರಯತ್ನಿಸಿದರಾದರೂ ಅವನು ಮಾತ್ರ ಕಮಕ್ ಕಿಮಕ್ ಅನ್ನಲಿಲ್ಲ. ಆದರೆ ಗುಪ್ತಚಾರರ ಮೂಲಕ ಅವನು ಛಾತ್ರ ಭಂಡಾರದ ಸದಸ್ಯ ಕ್ರಾಂತಿಕಾರಿ ಎಂಬ ಅಂಶ ತಿಳಿದು ಛಾತ್ರ ಭಂಡಾರದಿಂದ ಸೋದರ ಮಾವನ ಮನೆಗೆ ಹೋಗುತ್ತಿದ್ದ ಬಾಘಾ ಜತೀನನನ್ನು ಹಿಂಬಾಲಿಸಿ ಬಂಧಿಸಿದರು. ಪುರಾವೆಗಳಿಲ್ಲದೆ ಆ ಕ್ಷಣಕ್ಕೆ ಮುಕ್ತಗೊಳಿಸಿದರಾದರೂ ಮತ್ತೆ ಪುರಾವೆ ಕಲೆ ಹಾಕಿ ಬಂಧಿಸಿದರು. ಬಾಘಾ ಜತೀನ್ ಕೊಲ್ಕತಾದಲ್ಲಿ ನೆಲೆಸಿದ್ದ 10ನೆ ಜಾಟ್ ರೆಜಿಮೆಂಟ್ ಸೈನಿಕರನ್ನು ಬಂಡೇಳಲು ಸಂಘಟಿಸಿದ್ದನೆಂಬ ಗುರುತರ ಆರೋಪವನ್ನು ಹೊರಿಸಲಾಯಿತು.

ಚೀಫ್ ಪ್ರಸಿಡೆನ್ಸಿ ಮ್ಯಾಜಿಸ್ಟ್ರೇಟ್​ನ ಮುಂದೆ ಬೀರೇಂದ್ರನ ವಿಚಾರಣೆ ಶುರುವಾಗಿ, ಎಲ್ಲಕ್ಕೂ ಸಾಕ್ಷ್ಯಗಳಿದ್ದುದರಿಂದ ಹೆಚ್ಚು ಸಮಯ ತೆಗೆದುಕೊಳ್ಳದೆ ಸೆಷನ್ಸ್ ನ್ಯಾಯಾಲಯಕ್ಕೆ ಅವನನ್ನು ಒಪ್ಪಿಸಲಾಯಿತು. 1910ರ ಜನವರಿ 24ರಂದು ಅವನ ಮೇಲೆ ಷಂಸೂಲ್ ಆಲಂನ ಕೊಲೆಯ ಆರೋಪ ಹೊರಿಸಲಾಯಿತು. ಅವನು ತಪ್ಪಿತಸ್ಥನೆಂದು ತೀರ್ಪಿತ್ತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು.

ಪೊಲೀಸರು ಅವನಿಂದ ಇನ್ನೂ ಒಂದು ಮುಖ್ಯವಾದ ವಿಷಯವನ್ನು ಸಂಗ್ರಹಿಸಬೇಕಿತ್ತು. ಅದಕ್ಕಾಗಿ ಪೊಲೀಸರು ಒಂದು ಅಸಹ್ಯವಾದ ಮೋಸದ ಕೃತ್ಯ ಮಾಡಿದರು. ಯುಗಾಂತರ ಪತ್ರಿಕೆಯಲ್ಲಿ ಅನೇಕ ಮುಖಂಡರು ಬೀರೇಂದ್ರನ ಕೃತ್ಯವನ್ನು ಖಂಡಿಸಿದ್ದಾರೆಂದು ಸುಳ್ಳು ಸುಳ್ಳೇ ಮುದ್ರಿಸಿ ನಕಲಿ ಪತ್ರಿಕೆ ತಯಾರಿಸಿ ತೋರಿಸಿದರು. ಅವನು ಅದನ್ನು ನಂಬಲಿಲ್ಲ. ಯಾರು ಏನೇ ಹೇಳಲಿ ಗುರು ಬಾಘಾ ಜತೀನನ ನಂಬಿಕೆ ತನ್ನ ಮೇಲೆ ಇರುವವರೆಗೆ ತನಗೇನೂ ಚಿಂತೆ ಇಲ್ಲವೆಂದು ಅರಿವಿಲ್ಲದಂತೆ ನುಡಿದುಬಿಟ್ಟ. ಆಗ ಅವನು ಪೊಲೀಸರ ಘೊರ ಚಿತ್ರಹಿಂಸೆಯಿಂದ ಜಝುರಿತನಾಗಿದ್ದ. ಅಷ್ಟೇ ಸಾಕೆಂದು ಬಾಘಾ ಜತೀನನನ್ನು ಅಲ್ಲಿಗೆ ತಂದು ಷಂಸುಲ್ ಆಲಂನನ್ನು ಕೊಲ್ಲಲು ನೀನೇ ಆದೇಶಿಸಿದೆಯಂತೆ ಒಪ್ಪಿಕೊ ಎಂದು ಪೊಲೀಸರು ಒತ್ತಾಯ ಮಾಡಿದರು.

ಗಲ್ಲಿನ ಸಿಹಿ ಮುಹೂರ್ತ: ಅಲ್ಲಿಯೇ ಇದ್ದ ಬೀರೇಂದ್ರ ಒಮ್ಮೆಲೆ ಜತೀನನ ಬಳಿಗೆ ಧಾವಿಸಿ ಬಿಗಿಯಾಗಿ ಆಲಂಗಿಸಿಕೊಂಡು ತಾನು ಅಚಾನಕ್ಕಾಗಿ ತಪ್ಪು ನುಡಿದುದಾಗಿಯೂ ತನ್ನನ್ನು ಕ್ಷಮಿಸಬೇಕೆಂದೂ ಬೇಡಿಕೊಂಡ. ಜತೀನ್ ಅವನ ಬೆನ್ನು ಸವರುತ್ತಾ ‘ನೀನೇನೂ ತಪ್ಪು ಮಾಡಿಲ್ಲ. ನೀನು ಭಾರತಮಾತೆಗೆ ಪ್ರಾಣಪುಷ್ಪದಿಂದ ಅರ್ಚನೆ ಮಾಡಲು ಹೊರಟ ತಾಯಿಯ ಪುತ್ರರತ್ನ‘ ಎಂದು ಭಾವಗರ್ಭಿತನಾಗಿ ಹೇಳಿ ಬೀರೇಂದ್ರನ ಮನಸ್ಸನ್ನು ಹಗುರ ಮಾಡಿದ.

ಅಷ್ಟರಲ್ಲಿ ಜೈಲರ್ ಕಚೇರಿಯ ಪಕ್ಕದ ಕೋಣೆಯಲ್ಲಿ ಚೀಫ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಸ್ವಿನ್ ಹೋ ಎಂಬುವನ ಮುಂದೆ ಇನ್ನೊಂದು ವಿಚಾರಣಾ ನಾಟಕಕ್ಕೆ ರಂಗಭೂಮಿ ಸಿದ್ಧವಾಗಿತ್ತು. ಫೆಬ್ರವರಿ 21ರಂದು ಗಲ್ಲಿಗೇರಿಸಲ್ಪಡಬೇಕೆಂಬ ತೀರ್ಪಾ ಗಿದ್ದರೂ ಬೀರೇಂದ್ರನಿಗೆ ಕಾನೂನುಬಾಹಿರ ಸತ್ತ್ವಪರೀಕ್ಷೆ! ಅದರ ಹಿಂದೆ ಇದ್ದಿದ್ದು ಅವನಿಂದ ಜತೀನನ ವಿರುದ್ಧ ಸಾಕ್ಷ್ಯ ಹೇಳಿಸಿ ಜತೀನನನ್ನು ಶಿಕ್ಷಿಸುವ ದುರುದ್ದೇಶ. ಆ ವಿಚಾರಣೆಗೆ ಜತೀನನ ವಕೀಲ ಜೆ.ಎನ್. ರಾಯ್ ಎಂಬುವರನ್ನೂ ಅಲ್ಲಿಗೆ ಕರೆಸಲಾಗಿತ್ತು. ಅವರು ಕೋಪಾವಿಷ್ಟರಾಗಿ ಈ ವಿಚಾರಣೆ ಕಾನೂನು ಬಾಹಿರವೆಂದು ಅಬ್ಬರಿಸಿ, ಅದನ್ನು ಧಿಕ್ಕರಿಸಿ ಅಲ್ಲಿಂದ ತೆರಳಿದಾಗ ಆ ನಾಟಕಕ್ಕೆ ತೆರೆ ಬಿತ್ತು.

ವಧಾಪೀಠಕ್ಕೆ ಹೋಗುವ ಮುನ್ನ ಕೊನೆಯಾಸೆ ಏನೆಂದು ಬೀರೇಂದ್ರನನ್ನು ಕೇಳಿದಾಗ ತನಗೆ ರಸಗುಲ್ಲ ಬೇಕೆಂದ. ಅದನ್ನು ತರಿಸಲಾಯಿತು. ತಾನು ತನ್ನ ಗುರು ಜತೀನನನ್ನು ನೋಡಬೇಕೆಂದ. ಅವನನ್ನೂ ಕರೆಸಲಾಯಿತು. ಅವನು ತರಿಸಿದ್ದ ರಸಗುಲ್ಲ ಮಡಕೆಯಿಂದ ಒಂದನ್ನು ಜತೀನನ ಬಾಯಿಯಲ್ಲಿಟ್ಟು ‘ನಿಮ್ಮ ಬೀರೇನ್ ಹೆಮ್ಮೆಯಿಂದ ತಾಯಿನಾಡಿನ ಬಿಡುಗಡೆಗಾಗಿ ಗಲ್ಲಿಗೆ ಹೋಗಲಿರುವ ಈ ಮುಹೂರ್ತ ಸಿಹಿಯ ಕ್ಷಣವಲ್ಲವೇ! ಸಿಹಿ ತಿನ್ನಿರಿ ದಾದಾ‘ ಎಂದ. ಅದು ಅವನ ಕೊನೆಯಾಸೆ. ಜತೀನ್ ಕಣ್ಣೀರು ಸುರಿಸುತ್ತಾ ಅವನ ಕೊನೆಯಾಸೆಯನ್ನು ತೀರಿಸುತ್ತಾ ಬೀರೇಂದ್ರನ ತಲೆಯ ಮೇಲೆ ಕೈ ಇಟ್ಟು ‘ವಂದೇ ಮಾತರಂ‘ ಎಂದು ವಂದಿಸಿದ. ಹಸನ್ಮುಖನಾಗಿ ಮರುವಂದಿಸಿದ ಹದಿನೆಂಟು ವರ್ಷದ ಬೀರೇಂದ್ರನಾಥ ದತ್ತ ಗುಪ್ತ 1910ರ ಫೆಬ್ರವರಿ 21ರಂದು ‘ವಂದೇಮಾತರಂ‘ ಎನ್ನುತ್ತಲೇ ಆಲಿಪುರ ಸೆರೆಮನೆಯಲ್ಲಿ ಗಲ್ಲುಗಂಬವೇರಿ ನಮ್ಮ ಘನ ಚರಿತ್ರೆಕಾರರ ಚರಿತ್ರೆಯ ಪುಟಗಳಲ್ಲಿ ಎಲ್ಲೂ ದಾಖಲಾಗದೆ ಅನಂತದಲ್ಲಿ ಲೀನವಾಗಿ ಹೋದ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top