Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಗದ್ದೆ-ಕೃಷಿ ಉಳಿದಾಗ ಕಂಬಳವೂ ಉಳಿಯುತ್ತದೆ!

Saturday, 04.02.2017, 4:00 AM       No Comments

ಎಷ್ಟೋ ಕಾಲ ಬೇಸಾಯವೇ ಇಲ್ಲದ ಒಣಗದ್ದೆಯ ಮೇಲೆಯೇ ಪೆಂಡಾಲ್ ಹಾಕಿ ದೈವಾರಾಧನೆಗಳು ನಡೆಯುತ್ತವೆ. ನೇಮಕ್ಕೆ ಮೂರುದಿನ ಮುಂಚಿತವಾಗಿ ಮುಂಬಯಿಯೋ, ಡೆಲ್ಲಿಯೋ, ದುಬಾಯಿಯಿಂದಲೋ ಬಂದು ಗುತ್ತಿನ ಮನೆ, ಭೂತದ ಚಾವಡಿಯನ್ನು ಗುಡಿಸಿ, ಅಂಗಳಕ್ಕೆ ಸಗಣಿ ಸಾರಿಸಿ ನೇಮ ಮುಗಿಸಿ ಮಹಾಮನೆಗೆ ಬೀಗಜಡಿದು ಮಹಾನಗರಕ್ಕೆ ಹಿಂದಿರುಗುತ್ತಾರೆ.

 ಲ್ಲಿಕಟ್ಟು ಇಡೀ ತಮಿಳರ ಒಗ್ಗಟ್ಟಿನಿಂದಾಗಿ ಗೆದ್ದಾಗ ತುಳುನಾಡಿನ ಕಂಬಳ ಇಡೀ ಕನ್ನಡನಾಡಿನ ಜನಪದ ಕಲೆ-ರೂಪಕವಾಗಿ ಹಿಗ್ಗುತ್ತಿರುವುದು, ರಾಜಕೀಯ ನಾಯಕರೂ ಕಂಬಳವನ್ನು ತಮ್ಮ ಮೂಗಿನ ನೇರಕ್ಕೆ ಹಿಗ್ಗಿಸಿ, ಬಗ್ಗಿಸಿ, ಜೋಡಿಸಿ ವ್ಯಾಖ್ಯಾನಿಸುತ್ತಿರುವುದು, ಅಲ್ಲಲ್ಲಿ ಸಾಂಘಿಕ ಆಕ್ರೋಶಗಳು ನಡೆಯುತ್ತಿರುವುದು ಇತ್ತೀಚಿನ ಬೆಳವಣಿಗೆ. ಜೀವಮಾನದಲ್ಲಿ ಒಮ್ಮೆಯೂ ನೋಡದ, ಕಂಬಳದಲ್ಲಿ ಭಾಗವಹಿಸದ ಮಂದಿಯೂ ಅದರ ಅಗತ್ಯ, ಮಹತ್ವದ ಬಗ್ಗೆ ಮಾತನಾಡಲಾರಂಭಿಸಿರುವುದು ಈ ನೆಲದ ಸಾಂಸ್ಕೃತಿಕ ರಾಜಕಾರಣವೇ. ಹಾಗೆ ನೋಡಿದರೆ, ತಮಿಳುನಾಡು, ಕೇರಳಗಳಲ್ಲಿ ಅಧಿಕಾರಕ್ಕೆ ಬಂದವರಿಗೆಲ್ಲ ಗದ್ದುಗೆಗಿಂತ ಆ ನೆಲದ ಸಂಸ್ಕೃತಿ, ಭಾಷೆ, ಕಲೆ, ಜನಪದಗಳು ಮುಖ್ಯವಾದವು. ಆಚೆ-ಈಚೆ ಅಂಟಿಕೊಂಡೇ ಇದ್ದರೂ, ನಮಗೆ ಅವರು ಮಾದರಿಯಾಗುವುದೇ ಇಲ್ಲ. ಈ ಮಿತಿ ಮತ್ತು ಸಾಧ್ಯತೆಗಳನ್ನು ರಾಜ್ಯದ ಅಭ್ಯುದಯದ ಪರ ಮತ್ತು ವಿರೋಧದ ನೆಲೆಯಲ್ಲೂ ವ್ಯಾಖ್ಯಾನಿಸಬಹುದು. ಅತಿಭಾವುಕತೆಯೂ ಕೆಲವೊಮ್ಮೆ ಅಪಾಯವೇ.

ಮೊದಲು ಕೃಷಿಯನ್ನು ಉಳಿಸಬೇಕಿದೆ: ತಮಿಳುನಾಡಿನ ಜಲ್ಲಿಕಟ್ಟೇ ಇರಲಿ, ಕರ್ನಾಟಕದ ಕಂಬಳವೇ ಇರಲಿ, ಇವೆರಡೂ ಅರಳುವುದು, ಬಿಚ್ಚಿಕೊಳ್ಳುವುದು ಕೃಷಿ ಅಥವಾ ನೆಲದ ಕ್ಯಾನ್​ವಾಸ್ ಮೇಲೆಯೇ. ಇವೆರಡೂ ನೆಲದ ಪಾಯದ ಮೇಲೆಯೇ ನಿಂತವುಗಳು. ಹಾಗಂತ ಈ ಕೃಷಿಯಾಧಾರಿತ ಜನಪದ ಕಲೆಯನ್ನು ಉಳಿಸಲೇಬೇಕೆಂದು ಹಕ್ಕೊತ್ತಾಯ ಮಾಡುವ ನಾವು ಕೃಷಿಯನ್ನು ಉಳಿಸಿದ್ದೇವೆಯೇ ಎಂಬುದು ಗಂಭೀರವಾದ ಪ್ರಶ್ನೆ. ಭಾಷೆ, ಸಂಸ್ಕೃತಿ ಮತ್ತು ಕಲೆಗೂ ಆ ಪ್ರದೇಶದ ನೆಲಕ್ಕೂ ಹತ್ತಿರದ ಸಂಬಂಧವಿದೆ. ಈ ಕಾರಣಕ್ಕಾಗಿ ಕಂಬಳಕ್ಕಿಂತ, ಜಲ್ಲಿಕಟ್ಟಿಗಿಂತ ಈ ನೆಲದವರು ಮೊದಲು ಹೋರಾಟ ಮಾಡಬೇಕಾದುದು ಕೃಷಿ ಉಳಿಸುವ ಬಗ್ಗೆ. ಕೃಷಿ ಉಳಿಯದೇ ಹೋದರೆ ಬರೀ ಕಂಬಳವಲ್ಲ, ಈ ನೆಲದ ಅನೇಕ ಜನಪರ ಸಾಧ್ಯತೆಗಳು ಮರೆಯಾಗಬಲ್ಲವು.

ಬಹುಶಃ ಇದನ್ನು ಪಡಿಪದಾರ್ಥ ಸಂಬಂಧದಿಂದ ಹೀಗೇ ನಿರೂಪಿಸಬಹುದು. ನಮ್ಮಲ್ಲಿಂದು ಅನೇಕ ಪಡಿ ಅಂದರೆ ವಸ್ತುಗಳು ಸಾಯುತ್ತಿವೆ. ಆದರೆ ಆ ಕ್ರಿಯೆಗೆ ಸಂಬಂಧಿಸಿದ ಹೆಸರು ಮಾತ್ರ ಉಳಿದಿವೆ. ಭಾಷೆ ಅದನ್ನು ಅನುಭವಿಸಿದ, ಭಾಗವಹಿಸಿದ, ಗಮನಿಸಿದವರಿಂದ ಹೊಸ ತಲೆಮಾರಿಗೆ ರವಾನಿಸಿದೆ. ಅದು ಭಾಷೆಯ ಶಕ್ತಿ. ವಸ್ತು ಸತ್ತರೂ ಗಮನಿಸಿದ-ಮುಟ್ಟಿದ ಜೀವ, ಮನಸ್ಸು, ಕಣ್ಣು ಅದನ್ನು ಹಾಗೆಯೇ ಹೊಸ ತಲೆಮಾರಿಗೆ ತಲುಪಿಸುತ್ತದೆ. ಈ ಕಾರಣಕ್ಕಾಗಿಯೇ ಮನುಷ್ಯ ಸತ್ತರೂ, ವಸ್ತು ಸತ್ತರೂ ಭಾಷೆ ಅದನ್ನು ಮತ್ತೆ ಮತ್ತೆ ಸ್ಥಾಪಿಸುತ್ತಾ ಹೋಗುತ್ತದೆ, ಉಳಿಸುತ್ತದೆ. ಬಳಸದಿದ್ದರೂ ಶಬ್ದ ಬಾಳುತ್ತದೆ.

ಉದಾಹರಣೆಗೆ, ತುಳು-ಕರಾವಳಿಯ ಗದ್ದೆಗಳಲ್ಲಿ ಸಿಗುವ ‘ನರ್ತೆ’ ಎಂಬ ಒಂದು ಜೀವಿ. ಗದ್ದೆ ಕೊಯ್ಲು ಆದಮೇಲೆ ಕತ್ತರಿಸಿದ ಒಡ್ಡುಗಳ ಎಡೆಯಲ್ಲಿ ಹೇರಳವಾಗಿರುತ್ತಿದ್ದ ಇವುಗಳನ್ನು ಇಲ್ಲಿಯ ರೈತಾಪಿಗಳು ಗದ್ದೆಗಿಳಿದು ಹೆಕ್ಕಿ ಆಯ್ದು ಬೇಯಿಸಿ ಮಸಾಲೆ ಸೇರಿಸಿ ತಿನ್ನುತ್ತಿದ್ದರು. ಅದು ಒಂದು ರೀತಿ ಚಿಪ್ಪಿನೊಳಗಡೆಯ ಮೃದುಜೀವಿ. ಚಿಪ್ಪನ್ನು ಬಗೆದು-ಒಡೆದು ತಿನ್ನಬೇಕು. ‘ನರ್ತತ್’ ಅಂದರೆ ತುಳುವಿನಲ್ಲಿ ಬಗೆದು-ಒಡೆದು ತಿನ್ನುವುದೇ ನರ್ತೆ ಎಂಬರ್ಥ. ಇಲ್ಲಿ ಕ್ರಿಯಾಪದವೂ ಇದೆ, ನಾಮಪದವೂ ಇದೆ. ಯಾವಾಗ ತುಳುನಾಡಿನ ಭತ್ತದ ಗದ್ದೆಗಳಿಗೆ ಕೆಂಪುಮಣ್ಣು ಬಿತ್ತೊ ಈ ನರ್ತೆ ನಾಪತ್ತೆಯಾಯಿತು. ಇಲ್ಲಿ ನಾಪತ್ತೆಯಾದುದು ಬರೀ ಗದ್ದೆಯಲ್ಲಿರುತ್ತಿದ್ದ ಈ ಜೀವಿಯೊಂದೇ ಅಲ್ಲ, ಒಂದು ನಾಮಪದ ಮತ್ತು ಒಂದು ಕ್ರಿಯಾಪದವೂ ಸತ್ತುಹೋಯಿತು. ಹೀಗೆಯೇ ಒಡ್ಡು ಇರಬಹುದು, ನೊಗ, ನೇಗಿಲು, ಸಂಧಿ, ಪಾಡ್ದನ, ಬೀಜ… ಹೀಗೇ. ಗದ್ದೆ ಇದ್ದಾಗ ಈ ಪದಗಳು ಜೀವಂತವಿದ್ದವು. ಆದರೆ ಈಗ ಗದ್ದೆ ಇಲ್ಲ. ಸಂಬಂಧಿಸಿದ ಪದಗಳಿವೆ. ಕೇವಲ ಪದಗಳೊಂದಿಗಿನ ಸಂಬಂಧ ಸಾಕೆ? ಅವುಗಳ ಬುನಾದಿಯೂ ಬೇಕೆ? ಎಂಬ ಪ್ರಶ್ನೆ ಬಂದಾಗ ಕಂಬಳ ಗದ್ದೆಯ ಮೇಲಿನ ಪರಿಕರ-ಪರಿಕಲ್ಪನೆಯಾಗಿ ಕಾಣಿಸುತ್ತದೆಯೇ ಹೊರತು ಕೃಷಿಯ ಪಾಯವಾಗಿ ಕಾಣಿಸಲಾರದು.

ಕೃಷಿಯಾಧಾರಿತ ಕರಾವಳಿಯ ಭೂತ ಅಥವಾ ದೈವದ ನೇಮಗಳನ್ನೊಮ್ಮೆ ಗಮನಿಸಿ. ಇಲ್ಲಿ ಎಷ್ಟೋ ಕಾಲ ಬೇಸಾಯವೇ ಇಲ್ಲದ ಒಣಗದ್ದೆಯ ಮೇಲೆಯೇ ಪೆಂಡಾಲ್ ಹಾಕಿ ದೈವಾರಾಧನೆಗಳು ನಡೆಯುತ್ತವೆ. ನೇಮಕ್ಕೆ ಮೂರುದಿನ ಮುಂಚಿತವಾಗಿ ಮುಂಬಯಿಯೋ, ಡೆಲ್ಲಿಯೋ, ದುಬಾಯಿಯಿಂದಲೋ ಬಂದು ಗುತ್ತಿನ ಮನೆ, ಭೂತದ ಚಾವಡಿಯನ್ನು ಗುಡಿಸಿ, ಅಂಗಳಕ್ಕೆ ಸಗಣಿ ಸಾರಿಸಿ ನೇಮ ಮುಗಿಸಿ ಮಹಾಮನೆಗೆ ಬೀಗಜಡಿದು ಮಹಾನಗರಕ್ಕೆ ಹಿಂದಿರುಗುತ್ತಾರೆ. ನೇಮದ ದಿನ ದೈವದ ಮುಂದೆ ದೊಂದಿ-ದೀವಟಿಗೆ ಹಿಡಿಯುವವರು ಯಾವುದೋ ಪ್ರೖೆಮರಿ ಶಾಲೆಯ ಮೇಷ್ಟ್ರು. ವಾದ್ಯ ಊದುವವರು ಬ್ಯಾಂಕಿನಲ್ಲಿ ಕ್ಲರ್ಕ. ಪಾತ್ರಿ ಇನ್ನೆಲ್ಲಿಯೋ ಸಾರಣೆಯ ಮೇಸ್ತ್ರಿ. ಇವರಿಗೆಲ್ಲ ನೇರ ಗದ್ದೆಯ ಸಂಬಂಧವಿಲ್ಲ. ಬರೀ ಜಾತಿಯಾಧಾರಿತ ಸಂಬಂಧದ ಸಂಬಂಧ ಮಾತ್ರ ಉಳಿದಿದೆ.

ತೀವ್ರವಾಗುತ್ತಿರುವ ಬದಲಾವಣೆ: ಆಧುನಿಕತೆ ಕರಾವಳಿಯ ಪಡಿಯನ್ನು ತೀವ್ರತರದಲ್ಲಿ ಬದಲಾಯಿಸುತ್ತಿದೆ. ಈ ಜಿಲ್ಲೆಯಿಂದು ಇಡೀ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಗದ್ದೆಗೆ ಕೆಂಪುಮಣ್ಣು ತುಂಬಿಸಿಕೊಳ್ಳುವ ನೆಲೆ. ರಿಯಲ್ ಎಸ್ಟೇಟು ಉದ್ಯಮ ಇದೇ ಗದ್ದೆಗಳ ಮೇಲೆ ರಾಶಿರಾಶಿ ಹಣ ಸುರಿದಿದೆ. ಇಷ್ಟಾದರೂ, ನೆಲ-ಕೃಷಿ ಸಂಬಂಧದ ಮೂಲಮನಸ್ಸುಗಳಲ್ಲಿ ಇನ್ನೂ ಬೇರು ಹುಡುಕುವ ಚಾಳಿ ಉಳಿದಿದೆ. ಅದು ಯಾವುದೇ ಯಶಸ್ಸಿನ ಬೇರುಗಳಿಗೆ ಇರುವ ಸಹಜ ಅಭ್ಯಾಸ. ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಎಲ್ಲೇ ಇದ್ದರೂ, ಏನೇ ಆಗಿದ್ದರೂ, ಎಷ್ಟೇ ಶ್ರೀಮಂತನಾದರೂ ಮೂಲ ಅಥವಾ ಬೇರು ಹುಡುಕುತ್ತಾ ಸಾಗುವುದು. ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಅಷ್ಟಮಂಗಲ, ಬ್ರಹ್ಮಕಲಶ ಇವುಗಳೂ ಹೀಗೆಯೇ. ಕಂಬಳದ ಹಾಗೆಯೇ ಮೂಲ-ಬೇರು ಹುಡುಕುವ ಧಾರ್ವಿುಕ-ಸಾಂಸ್ಕೃತಿಕ ಪ್ರಯತ್ನಗಳು.

ವೇದಿಕೆಗಳ ಮೇಲೆ ಹಣ್ಣಡಿಕೆಯ ಮಾಲೆ, ಭತ್ತದ ತೆನೆಯ ಅಲಂಕಾರ, ಕಾಲೇಜು ಕ್ಯಾಂಪಸ್​ನೊಳಗೆ ಒಂದು ಮಾದರಿ ಗದ್ದೆ, ಸಭಾಂಗಣದ ಮುಂದೆ ಭತ್ತದ ರಾಶಿ, ಕಣಜ, ನೊಗ, ನೇಗಿಲ ಪ್ರದರ್ಶನ ಇವೆಲ್ಲವೂ ನೆಲಾಧಾರಗಳು ತಪ್ಪಿದ ಮೇಲೆ ನಾವು ನಾವಾಗಿಯೇ ಕೇವಲ ಭ್ರಮೆಗಳ ಆಧಾರದಲ್ಲಿ ಮೂಲವನ್ನು ಸೃಷ್ಟಿಸಲು ಪ್ರಯತ್ನಿಸುವುದು. ಇಂಥ ಭ್ರಮಾ ಪ್ರಭಾವಿತ ಮನಸ್ಸಿನ ಹಿಂದೆ ಭ್ರಮನಿರಸನದ ನೋವೂ ಇದೆ.

ಜಲ್ಲಿಕಟ್ಟು, ಕಂಬಳ- ಇವೆರಡೂ ಉಳಿಯಲೇಬೇಕು. ಇವೆರಡನ್ನೂ ರಕ್ಷಿಸಬೇಕೆನ್ನುವುದಾದರೆ ಇವೆರಡರ ನಾಶಕರು, ವೈರಿಗಳು ಯಾರು? ಸರ್ಕಾರವೋ ಸಮಾಜವೋ, ಕೋಟೋ? ಪ್ರಭುತ್ವವೋ, ಸಮುದಾಯವೋ? ಕರಾವಳಿಯಲ್ಲಿಂದು ಅನೇಕ ಪ್ರತಿರೋಧ-ಪ್ರತಿಭಟನೆಗಳಿಗೆ ನಿಖರವಾದ ಕಾರಣ, ವೈರಿಗಳೇ ಇಲ್ಲ. ಬಹುಮಂದಿಗೆ ಅದು ಬೇಕಾಗಿಯೂ ಇಲ್ಲ. ಜಾಗತೀಕರಣದ ಮತ್ತು ನಾಗರಿಕತೆಯ ಸಫಲತೆ ಇರುವುದೇ ನಿಖರ ವೈರಿಗಳು ಇಲ್ಲೆಯೇ ಇರುವುದು. ಅಥವಾ ಅವರನ್ನು ಗುರುತಿಸದೇ ಇರುವುದು. ಭ್ರಮಾತ್ಮಕ ವೈರಿಗಳನ್ನು ಸೃಷ್ಟಿಸುವುದೇ ಜಾಗತೀಕರಣದ ಬಹುದೊಡ್ಡ ಸಾಧ್ಯತೆ.

ಹಠ ಬಿಡದ ಬ್ಯಾರಿ: ಕಳೆದ ಇಪ್ಪತೆôದು ವರ್ಷಗಳಿಂದ ಕರಾವಳಿಯ ಹತ್ತಾರು ಕಂಬಳಗಳಿಗೆ ಕೋಣಗಳನ್ನು ಒಯ್ಯುವ ಅದ್ರಾಮ ಬ್ಯಾರಿಯ ಕೋಣಗಳು ಈವರೆಗೆ ಒಂದು ಬಾರಿಯೂ ಗೆದ್ದದ್ದು ಪದಕ ಪಡೆದದ್ದು ನನಗೆ ಗೊತ್ತೇ ಇಲ್ಲ. ಮತ್ತೆ ಮತ್ತೆ ಆ ಬಡಪಾಯಿ ಬ್ಯಾರಿ ಪ್ರತಿವರ್ಷ ಸಾವಿರಾರು ರೂಪಾಯಿ ವೆಚ್ಚಮಾಡಿ ಅವುಗಳನ್ನು ಪೋಷಿಸುತ್ತಲೇ ಇದ್ದಾರೆ. ಒಂದು ತಿಂಗಳಿಗೆ ಮಾಡುವ ಆ ಖರ್ಚಿನಲ್ಲಿ ವರ್ಷವಿಡೀ ಮೂರು ಬೆಳೆ ಗದ್ದೆಯನ್ನು ಟಿಲ್ಲರ್ ಬಳಸಿ ಅವರಿಗೆ ಸಾಗುವಳಿ ಮಾಡಬಹುದು. ಆದರೂ ಬ್ಯಾರಿ ಹಠ ಬಿಡುವುದಿಲ್ಲ. ಕೋಣಗಳನ್ನು ಮಾರುವುದಿಲ್ಲ. ಪಿಕ್​ಅಪ್ ಮೇಲೆ ಅವುಗಳನ್ನು ಹೇರಿಕೊಂಡು ವರ್ಷಂಪ್ರತಿ ಕಂಬಳಕ್ಕೆಂದು 400-500 ಕಿಲೋಮೀಟರ್ ಸುತ್ತುತ್ತಾರೆ.

ಅದ್ರಾಮ ಬ್ಯಾರಿಯ ಪ್ರಕಾರ, ಅವರು ಕಂಬಳಕ್ಕಾಗಿಯೇ ಕೋಣ ಸಾಕುವುದಲ್ಲ. ಕೋಣಗಳನ್ನು ಸಾಕುವುದಕ್ಕಾಗಿಯೇ ಕಂಬಳ ಇರುವುದು! ಕೃಷಿ, ಗದ್ದೆ ಹೇಗೆ ಅವರಿಗೆ ಹಿರಿಯರಿಂದ ಬಂದ ಬಳುವಳಿಯೋ ಹಾಗೆಯೇ ಕೋಣ ಕೂಡ ಇಲ್ಲಿಯ ಬೇಸಾಯದ ಒಂದು ಸಾಧ್ಯತೆ ಎಂಬುದು ಅವರ ತಿಳಿವಳಿಕೆ. ಕಂಬಳಕ್ಕಾಗಿ ಕೋಣ ಸಾಕುವುದೆಂದರೆ ಅದೊಂದು ಮಾದರಿ. ಬೇಸಾಯದ ಮಾದರಿ, ಶ್ರಮ-ಪ್ರೀತಿಯ ಮಾದರಿ. ಇಂಥ ಮಾದರಿಯಲ್ಲಿ ಕಂಬಳ ಎಲ್ಲೇ ಇರಲಿ, ಯಾವುದೇ ಗದ್ದೆ ಇರಲಿ ಅಲ್ಲಿ ಕೋಣಗಳು ಓಡುತ್ತವೆ. ಅವುಗಳಿಗೆ ಚಿನ್ನದ ಪದಕ, ಬಹುಮಾನ, ಸನ್ಮಾನಗಳು ಬೇಕಾಗಿಲ್ಲ. ಅವುಗಳು ನಿರಂತರ ಓಡುತ್ತವೆ. ಪಳಗುತ್ತವೆ, ಕೃಷಿಗಾಗಿ ತರಬೇತು ಪಡೆಯುತ್ತವೆ. ಕಂಬಳ ಎನ್ನುವುದು ಅವುಗಳ ಪಾಲಿಗೆ ಒಂದು ತಯಾರಿ-ತರಬೇತಿ ಶಿಬಿರವೇ ಹೊರತು ಸ್ಪರ್ಧೆ ಅಲ್ಲವೇ ಅಲ್ಲ.

ಆದರೆ ಈಗ ಕರಾವಳಿಯಲ್ಲಿ ಕಂಬಳಕ್ಕಾಗಿಯೇ ಕೋಣ ಸಾಕುವ ಪ್ರವೃತ್ತಿಯೂ ಕಂಡುಬರುತ್ತಿರುವುದು ದುರಂತವೆನ್ನದೆ ವಿಧಿಯಿಲ್ಲ. ಈ ಕಾರಣಕ್ಕಾಗಿಯೇ ಇಂಥವರಿಗೆ ಕಂಬಳ ನಿಂತಾಗ ವಿಪರೀತ ತಲೆನೋವು ಉಂಟಾಗುತ್ತದೆ. ಮತ್ತು ಅದಕ್ಕೆ ಸಾಂಸ್ಕೃತಿಕ ರಾಜಕಾರಣವೂ ಸೇರಿಕೊಳ್ಳುತ್ತದೆ.

‘ಕಂಬಳಕ್ಕಾಗಿ ಕೋಣ’ ಎಂಬ ಉದ್ದೇಶ ಬದಲಾಗಿ ‘ಕೋಣಕ್ಕಾಗಿ ಕಂಬಳ’ ಎಂದಾದಾಗ ನಾವು ಮತ್ತೆ ನಿಜವಾದ ಅರ್ಥದಲ್ಲಿ ಜನಪರರಾಗಬೇಕಾಗುತ್ತದೆ. ನೆಲಕ್ಕೆ ಇಳಿಯಲೇಬೇಕಾಗುತ್ತದೆ. ನೆಲ, ಕೃಷಿ, ಹಸಿರು, ಬೇರು ಉಳಿಯುವ ಹೋರಾಟ ಈ ಜಿಲ್ಲೆಯಲ್ಲಿ ಮೊದಲು ಆಗಬೇಕು. ಕೃಷಿಗದ್ದೆ ಉಳಿಸಿ ಎಂಬ ಆಂದೋಲನ ಇಡೀ ಕರಾವಳಿಯಾದ್ಯಂತ ನಡೆದರೆ ಬರೀ ಕಂಬಳವಲ್ಲ ನೆಲಾಧಾರಿತ ಅನೇಕ ಕಲೆ, ಸಂಸ್ಕೃತಿ ಸಹಜವಾಗಿಯೇ ಉಳಿಯುತ್ತವೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top