Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಗದ್ದೆಯ ಕಳೆ, ಕಮಲಾ, ಗರಂ ಮಸಾಲಾ ಮತ್ತು ಏಂಜೆಲಾ ಮರ್ಕೆಲ್!

Wednesday, 28.06.2017, 3:00 AM       No Comments

ಬದುಕು ಕಟ್ಟಿಕೊಳ್ಳಲು ಹೊರಗಿನ ಸಾಧನಗಳಲ್ಲ, ಆಂತರ್ಯದ ಕಿಡಿ ಬೇಕು. ಶಿಕ್ಷಣ ಇಲ್ಲದ, ಬಡತನವೇ ಆಸ್ತಿಯಾಗಿದ್ದ ಕೂಲಿ ಮಾಡುವ ಹೆಣ್ಣುಮಗಳೊಬ್ಬಳು ಸ್ವಸಹಾಯ ಸಂಘದ ಮೂಲಕ ಹುಟ್ಟುಹಾಕಿದ ಕಿರು ಉದ್ಯಮ ಇಂದು ವಿದೇಶಗಳೂ ತಲೆಯೆತ್ತಿ ನೋಡುವಷ್ಟು ದೊಡ್ಡದಾಗಿ ಬೆಳೆದಿದೆ. ಕಮಲಾಬಾಯಿಯ ಜೀವನ ಪ್ರತಿಯೊಬ್ಬನಿಗೂ ಹಲವು ಪಾಠಗಳನ್ನು ಕಲಿಸುತ್ತದೆ.

 

ದಿನ ಬೆಳಗಾದರೆ ಯಾರ ಗದ್ದೆಯಲ್ಲಿ ಕೂಲಿ ಹುಡುಕಬೇಕೋ ಎಂಬ ಚಿಂತೆ. ‘ಹೋಯ್ ಅಕ್ಕ ಊರ ಹೊರಗಿನ ಜಮೀನದಾಗೂ ಕಬ್ಬು-ಗಿಬ್ಬು ಕೊಯಲಿಕತ್ರ, ಇಲ್ ಗದ್ದೆ ಹಸನ್ (ಸ್ವಚ್ಛ) ಮಾಡೋದಿದ್ರ ನಂಗೂ ಹೇಳವ್ವ. ಸಂಜಿಗಿ ಒಲಿ ಹೊತ್ತಿಸೋಣ ಅಂದ್ರೆ ಮನ್ಯಾಗ್ ಒಂದ್ ದಾಣಿನೂ ಅನಾಜ್ ಇಲ್ಲ’-ಹೀಗೆ ಅಕ್ಕಪಕ್ಕದವರು, ಪರಿಚಯದವರಿಗೆಲ್ಲ ಹೇಳುತ್ತ ಎಂಟು-ಹತ್ತು ಮಹಿಳೆಯರೊಂದಿಗೆ ಕೂಲಿಗೆ ಹೊರಟು ಬಿಡುವಳು ಆಕೆ. ಹೆಸರು ಕಮಲಾ ಶಂಕರ್ ಪರದೇಶಿ. ಇವತ್ತು ಒಬ್ಬರ ಗದ್ದೆಯಾದರೆ, ನಾಳೆ ಮತ್ಱಾರದ್ದೋ. ಕರೆದಲ್ಲಿ ಕೆಲಸಕ್ಕೆ ಹೋಗಿ, ಬರುವ ದಿನಗೂಲಿಯಲ್ಲಿ ದಿನಸಿ ತಂದು ಅಡುಗೆ ಎಂಬ ಶಾಸ್ತ್ರ ಮುಗಿಸುತ್ತಿದ್ದಳು. ಗದ್ದೆಯಲ್ಲಿ ಇತರೆ ಮಹಿಳೆಯರು ಕಳೆ ಕೀಳುತ್ತಿದ್ದರೆ ಈಕೆ ಕಳೆ ಕಿತ್ತು ತನ್ನ ಕನಸುಗಳನ್ನೂ ಬಿತ್ತುತ್ತಿದ್ದಳು. ಈ ಕಿತ್ತುತಿನ್ನುವ ಬಡತನದಿಂದ ಆಚೆ ಬರುವುದು ಹೇಗೆ ಎಂದು ಚಿಂತಿಸುತ್ತಿದ್ದಳು. ಅವತ್ತೊಂದು ದಿನ ಗೆಳತಿ ತಡವಾಗಿ ಕೂಲಿಗೆ ಬಂದಾಗ ‘ಯಾಕೆ ತಡವಾಯ್ತು’ ಎಂಬ ಕಮಲಾಳ ಪ್ರಶ್ನೆಗೆ ‘ಸಂಘಕ್ಕೆ ದುಡ್ಡು ಕಟ್ಟಬೇಕಿತ್ತು’ ಅಂತ ಉತ್ತರಿಸಿದಳು ಅವಳು. ‘ಅದ್ಯಾವ ಸಂಘ, ಅಲ್ಲಿ ಕಟ್ಟೋವಷ್ಟು ದುಡ್ಡು ನಿನ್ನಲ್ಲಿ ಮಿಕ್ಕತೈತಿ ಹೇಗೆ’ ಎಂಬೆಲ್ಲ ಪ್ರಶ್ನೆಗಳ ಸುರಿಮಳೆಗೈದಾಗ ಅದು ಪಕ್ಕದೂರಿನ ಮಹಿಳಾ ಸ್ವಸಹಾಯ ಸಂಘ ಎಂಬುದು ಆಕೆಗೆ ತಿಳಿಯಿತು. ಅದೇನೋ, ಹೊಸ ಕನಸೊಂದು ಸುಳಿದಂತಾಯಿತು.

ತಡ ಮಾಡಲಿಲ್ಲ ಕಮಲಾ. ತನ್ನೊಡನೆ ಇದ್ದ 10 ಹೆಣ್ಣುಮಕ್ಕಳನ್ನು ಸೇರಿಸಿ ‘ಅಂಬಿಕಾ ಮಹಿಳಾ ಸ್ವಸಹಾಯ ಸಂಘ’ ಕಟ್ಟಿದಳು (2004). ತಿಂಗಳಿಗೆ ತಲಾ 100 ರೂಪಾಯಿ ಇದರಲ್ಲಿ ಉಳಿತಾಯ ಮಾಡತೊಡಗಿದರು. ಮೂರು ಸಾವಿರ ರೂಪಾಯಿ ಜಮೆಯಾಗುತ್ತಿದ್ದಂತೆ ಸಂತೆಗೆ ಹೋಗಿ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಕರಿ ಮೆಣಸು, ಧನಿಯಾ ಪೌಡರ್ ತಂದು ಜೋಪಡಿಯೊಳಗೆ ಮಸಾಲೆ ತಯಾರಿಸಲು ಶುರು ಮಾಡಿದರು! ಈ ಮಸಾಲೆ ಪರಿಮಳ ಈಗ ದೂರದೂರದ ದೇಶಗಳಿಗೂ ತಲುಪಿದೆ.

ಈ ಯಶಸ್ಸಿನ ಕಥನ ಜೀವ ತಳೆದದ್ದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ್ ತಾಲೂಕಿನ ಖುಟಬಾವ್ ಎಂಬ ಪುಟ್ಟ ಗ್ರಾಮದಲ್ಲಿ. ಕಮಲಾ ಎಂದೂ ಶಾಲೆ ಮೆಟ್ಟಿಲು ಹತ್ತಿದವಳಲ್ಲ. ಪತಿ ಶಂಕರ್ ಕೂಡ ಕೂಲಿ ಮಾಡುತ್ತಿದ್ದ. ಆದರೆ, ಅವಳು ತುಂಬ ಚೆನ್ನಾಗಿ ಅಡುಗೆ ಮಸಾಲೆ ಅರೆಯುತ್ತಿದ್ದಳು. ಇದನ್ನೇ ತಯಾರಿಸಿ, ಮಾರಾಟ ಮಾಡಿದರೆ ಹೇಗೆ ಎಂಬ ಯೋಚನೆ ಬರುತ್ತಿದ್ದಂತೆ 10 ಮಹಿಳೆಯರು ಸೇರಿ ಮೂರು ಬಗೆಯ ಮಸಾಲೆಗಳನ್ನು ತಯಾರು ಮಾಡಿದರು. ಆದರೆ ಮಾರಾಟ? ಆ ಗ್ರಾಮದ ಮಹಿಳೆಯರು ಪುರುಷರನ್ನು ಮುಖಯೆತ್ತಿ ಮಾತಾಡಿಸಿದ್ದಿಲ್ಲ, ಕೂಲಿ, ಸಂತೆಗೆ ಹೋಗಿದ್ದು ಬಿಟ್ಟರೆ ಬೇರೆ ಸ್ಥಳಗಳ ಪರಿಚಯವಿಲ್ಲ. ಆದರೆ, ಸಂಘದ ಮುಖ್ಯಸ್ಥೆಯಾಗಿ ಕಮಲಾ ಧೈರ್ಯ ಮಾಡಲೇ ಬೇಕಿತ್ತು. ಗ್ರಾಮ ಪಂಚಾಯಿತಿ, ಎಪಿಎಂಸಿ ಹೊರಗೆ ಮಸಾಲೆ ಮಾರಲು ನಿಂತಳು. ‘ಮನೆಯಲ್ಲೇ ಎರಡು ವರ್ಷಕ್ಕೆ ಬೇಕಾಗುವಷ್ಟು ಮಸಾಲೆ ತಯಾರಿಸಿದ್ದಿದೆ, ನಿನ್ನ ಮಸಾಲೆ ಯಾರಿಗೆ ಬೇಕು’ ಎಂದು ಜನ ನಿರಾಕರಿಸಿದರು. ಅಲ್ಲಿಂದ ಜಿಲ್ಲಾ ಪಂಚಾಯತ್ ಆಫೀಸ್​ಗೆ ಹೋಗಿ ಅಲ್ಲಿನ ಮಹಿಳಾ ಸಿಬ್ಬಂದಿಗೆ ಮಸಾಲೆ ವೈಶಿಷ್ಟ್ಯನ್ನು ವಿವರಿಸಿ ನೀಡಿದಳು. ಅವರಿಗೆಲ್ಲ ಅದು ತುಂಬ ಇಷ್ಟವಾಯಿತು. ಆ ಬಳಿಕ ಅವರು ಕಮಲಾಗೆ ತಮ್ಮಿಂದಾದ ಸಹಾಯ ಮಾಡತೊಡಗಿದರು.

‘ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಮಸಾಲೆ ತಯಾರಿಸುವ ತರಬೇತಿ ಪಡೆದುಕೊಳ್ಳಿ, ಮುಂದೆ ಸರ್ಕಾರದಿಂದ ನೆರವು ಸಿಗುತ್ತೆ’ ಎಂದರು ಅಧಿಕಾರಿಯೊಬ್ಬರು. ಈ ತರಬೇತಿ ಪಡೆದುಕೊಳ್ಳಬೇಕಾದರೆ ಕನಿಷ್ಠ ಪಕ್ಷ 9 ಅಥವಾ 10ನೇ ಕ್ಲಾಸು ಪಾಸಾಗಿರಬೇಕು. ಕಮಲಾ ಸೇರಿ ಆಕೆ ಗುಂಪಿನಲ್ಲಿನ ಯಾವುದೇ ಮಹಿಳೆ ಇಷ್ಟು ಓದಿರಲಿಲ್ಲ. ತರಬೇತಿ ಪಡೆದುಕೊಂಡು ಬಂದ ಬೇರೊಬ್ಬ ಮಹಿಳೆಯನ್ನೇ ಕಾಡಿ-ಬೇಡಿ ಆಕೆಯಿಂದ ಮತ್ತಷ್ಟು ಬಗೆಯ ಮಸಾಲೆಗಳನ್ನು ತಯಾರಿಸುವುದನ್ನು ಕಲಿತರು. ಸ್ವಲ್ಪ ಬೇಡಿಕೆ ಹೆಚ್ಚುತ್ತಿದ್ದಂತೆ ‘ಅಂಬಿಕಾ ಮಹಿಳಾ ಕೈಗಾರಿಕಾ ಸಹಕಾರ ಸಂಘ’ ಎಂಬ ನಾಮಕರಣ ಮಾಡಿದರು. ವಾರದಲ್ಲಿ ಮೊದಲ ಮೂರು ದಿನ ಮಸಾಲೆ ತಯಾರಿಸೋದು, ಮೂರು ದಿನ ಮಾರಾಟ ಮಾಡೋದು ಕ್ರಮವಾಯಿತು. ಭರತ್​ಗಾವ್, ಯವತ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸ್ವಸಹಾಯ ಸಂಘದ 103 ಮಹಿಳೆಯರು ಇದರಲ್ಲಿ ತೊಡಗಿದರು.

ಉತ್ಪನ್ನದ ಗುಣಮಟ್ಟ ಎಷ್ಟೇ ಚೆನ್ನಾಗಿದ್ದರೂ ಒಳ್ಳೆ ಪ್ಯಾಕಿಂಗ್, ಸ್ಟಿಕರ್ ಅಗತ್ಯ ಎಂದು ಗ್ರಾಹಕರೊಬ್ಬರು ಹೇಳಿದ್ದನ್ನು ಕೇಳಿ ಆ ಸುಧಾರಣೆಯನ್ನೂ ಅನುಷ್ಠಾನಕ್ಕೆ ತಂದರು. ಪ್ಯಾಕೆಟ್ ಮೇಲೆ ಮೊಬೈಲ್ ನಂಬರ್ ಹಾಕತೊಡಗಿದ ಮೇಲೆ ಬೇಡಿಕೆ ಹೆಚ್ಚತೊಡಗಿತು. ಆದರೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತರಲು ಹಣವಾಗಲಿ, ಅಷ್ಟು ಪ್ರಮಾಣದ ಮಸಾಲೆ ತಯಾರಿಸಲು ಬೇಕಾಗುವ ಜಾಗವಾಗಲಿ ಅವರಲ್ಲಿ ಇರಲಿಲ್ಲ. ಇಚ್ಛಾಶಕ್ತಿಗೆ ಸೋಲಿಲ್ಲ ಎಂಬಂತೆ ರಾಷ್ಟ್ರೀಕೃತ ಬ್ಯಾಂಕೊಂದು 5 ಲಕ್ಷ ರೂ. ಸಾಲ ನೀಡಿತು. ಆ ಹಣದಲ್ಲಿ ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡರು. ನಗರಪ್ರದೇಶಗಳಲ್ಲಿ ಇಂಥ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿ ಎಂದು ತಿಳಿಯುತ್ತಿದ್ದಂತೆ ಕಮಲಾ ಪುಣೆಗೆ ಧಾವಿಸಿದರು (2006). ಮೊದಲಬಾರಿ ಪುಣೆ ಪ್ರವೇಶಿಸಿದ್ದ ಆಕೆ ನಗರಪ್ರದೇಶಗಳಲ್ಲಿ ಮಾರುಕಟ್ಟೆ ಅವಕಾಶಗಳನ್ನು ಕಂಡು ಉತ್ಸಾಹಗೊಂಡಳು. ಮುಂಬೈನಲ್ಲಿ ನಡೆದ ಸ್ವಸಹಾಯ ಸಂಘಗಳ ಮೇಳದಲ್ಲಿ (2007) ಪಾಲ್ಗೊಂಡು ಒಂದೇ ದಿನದಲ್ಲಿ 35 ಸಾವಿರ ರೂ.ಗಳ ಮಸಾಲೆ ಮಾರಿದಾಗ ಇವಳ ಕನಸುಗಳಿಗೆ ಹೊಸ ದಿಕ್ಕು ಸಿಕ್ಕಿತು. ದಾದರ್​ನ ಜನದಟ್ಟಣೆ ಪ್ರದೇಶಗಳಲ್ಲಿ ನಿಂತು ಮಸಾಲೆ ಮಾರತೊಡಗಿದಳು. ಆ ಬಳಿಕ ನಿಯಮಿತವಾಗಿ 10-15 ದಿನಕ್ಕೊಮ್ಮೆ ಮುಂಬೈಗೆ ಹೋಗಿ 12-15 ಕಿಲೋ ಮಸಾಲೆ ಮಾರಾಟ ಮಾಡಿ ಬರುತ್ತಿದ್ದಳು.

ಅದೊಮ್ಮೆ ಸಂಸದೆ ಸುಪ್ರಿಯಾ ಸುಳೆ ಇವರ ಬಗ್ಗೆ ಕೇಳಿ ಕಮಲಾರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಅವರು ‘ಬಿಗ್ ಬಜಾರ್’ ಅಧಿಕಾರಿಗಳಿಗೆ ಈ ಮಸಾಲೆರುಚಿಯ ಬಗ್ಗೆ ಹೇಳಿದರು. ಆ ಅಧಿಕಾರಿಗಳಿಗೂ ಉತ್ಪನ್ನ ಇಷ್ಟವಾಗಿ ಎಂಟು ಬಗೆಯ ಮಸಾಲೆಗಳನ್ನು ಆರ್ಡರ್ ಮಾಡಿದಾಗ ಕೆಲಸ ಮಾಡುವ ಕೈಗಳು ಹೆಚ್ಚಾದವು (ಪ್ರಸಕ್ತ 50 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ). ಅಷ್ಟೇ ಅಲ್ಲ, ಮುಂಬೈ, ರತ್ನಾಗಿರಿ, ನಾಸಿಕ್ ಸೇರಿದಂತೆ ಹಲವು ನಗರಗಳ ಮಾಲ್​ಗಳು ‘ಅಂಬಿಕಾ ಮಸಾಲೆ’ಯ ರುಚಿಯ ಮೋಡಿಗೊಳಗಾಗಿವೆ. ಸ್ವಸಹಾಯ ಸಂಘದ ಮೂಲಕ ಗ್ರಾಮೋದ್ಯೋಗದಲ್ಲಿ ಉತ್ತಮ ಸಾಧನೆ ತೋರಿದ್ದಕ್ಕೆ ಆಗಿನ ಅರ್ಥ ಸಚಿವ ಪ್ರಣಬ್ ಮುಖರ್ಜಿ ಕಮಲಾರನ್ನು ಸನ್ಮಾನಿಸಿದಾಗ ಎಲ್ಲ ಮಹಿಳೆಯರ ಕಣ್ಣಂಚು ಖುಷಿಯಿಂದ ಒದ್ದೆಯಾಗಿತ್ತು, ‘ಆಮ್ಚಿ ಕಮಲಾ ಜಿಂಕಲಿ ಬಘಾ’ (ನಮ್ಮ ಕಮಲಾ ಗೆದ್ದುಬಿಟ್ಟಳು ನೋಡಿ) ಎಂದಾಗ ಆಕೆಕೂಡ ಮಗುವಿನಂತೆ ಬಿಕ್ಕಿ-ಬಿಕ್ಕಿ ಅತ್ತಿದ್ದಳು.

ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಭಾರತ ಭೇಟಿಗೆ ಬಂದಾಗ ಇಲ್ಲಿನ ಸ್ತ್ರೀಸ್ವಾವಲಂಬನೆಯ ಪರಿಯನ್ನು ತೋರಿಸಲು ಕೆಲ ಸ್ವಸಹಾಯ ಸಂಘಗಳನ್ನು ಪರಿಚಯಿಸಲಾಯಿತು. ಆಗ ಕಮಲಾರ ಕಥೆ ಕೇಳಿದ ಮರ್ಕೆಲ್​ರಿಂದ ಹೊರಟ ಮೊದಲ ಉದ್ಗಾರ ‘ರಿಯಲಿ ಇನಸ್ಪೈರಿಂಗ್’! ‘ನನಗೂ ನೀನು ತಯಾರಿಸಿದ ಮಸಾಲೆ ಕೊಡುತ್ತಿಯಲ್ಲ’ ಎಂದು ಕೇಳಿ ಕಮಲಾರಿಂದ ಎರಡು ಪ್ಯಾಕೆಟ್ ಪಡೆದುಕೊಂಡ ಮರ್ಕೆಲ್ ಜರ್ಮನಿಯ ರೇಡಿಯೋಗೆ ಈಕೆ ಸಂದರ್ಶನ ಮಾಡಲು ಸೂಚಿಸಿದರು. ಕಮಲಾ ಸ್ಪೂರ್ತಿಗಾಥೆ ಜರ್ಮನಿಯ ಆಕಾಶವಾಣಿಯಲ್ಲಿ ಮೊಳಗುತ್ತಿದ್ದಂತೆ ಅಲ್ಲಿನ ಹಲವು ಕಂಪನಿಗಳು ಸಂರ್ಪಸಿ ಅಂಬಿಕಾ ಮಸಾಲೆಯನ್ನು ಆಮದು ಮಾಡಿಕೊಳ್ಳುತ್ತಿವೆ! ಎಲ್ಲಿಯ ಖುಟಬಾವ್ ಗ್ರಾಮ! ಎಲ್ಲಿಯ ಜರ್ಮನಿ! ಅಂದ ಹಾಗೆ, ಈಗ ಉದ್ಯಮ ವಿಸ್ತರಿಸಲು ಕೇಂದ್ರ ಸರ್ಕಾರದಿಂದ ನೆರವು ಬಂದಿದ್ದು, ಸ್ವಂತ ಜಾಗದಲ್ಲಿ ಕಾರ್ಖಾನೆ ತಲೆಯೆತ್ತಲಿದೆ. ಹಿಂದೆ ಗದ್ದೆಗಳಲ್ಲಿ ದುಡಿಯುತ್ತಿದ್ದ ಮಹಿಳೆಯರು ಈಗ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಉದ್ಯಮಶೀಲತೆಯ ಪಾಠ ಮಾಡುತ್ತಿದ್ದಾರೆ. ಪ್ರಬಲ ಇಚ್ಛಾಶಕ್ತಿ, ಕಷ್ಟಗಳನ್ನು ಗೆಲ್ಲಬೇಕೆಂಬ ಛಲದಿಂದ ಮುನ್ನಡೆದ ಕಮಲಾ ತನ್ನ ಬಾಳು ರೂಪಿಸಿಕೊಂಡಿದ್ದಲ್ಲದೆ, ಹತ್ತಾರು ಮಹಿಳೆಯರ ಬಾಳಿಗೆ ಬೆಳಕಾಗಿರುವುದು ಜೀವನದ ಸೊಬಗಲ್ಲದೆ ಮತ್ತೇನು?

ಮಸಾಲೆಯಿಂದ ಜೀವನದ ರುಚಿ ಹೆಚ್ಚಿಸಬಹುದು, ಬಡತನವನ್ನು ಸೋಲಿಸಬಹುದು, ಸ್ವಾವಲಂಬನೆಗೆ ಹೊಸ ಭಾಷ್ಯ ಬರೆಯಬಹುದು ಅಂತ ತೋರಿಸಿಕೊಟ್ಟ ಈ ಮಹಿಳಾಮಣಿಗಳಿಗೆ ಉಘೇ, ಉಘೇ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

 

Leave a Reply

Your email address will not be published. Required fields are marked *

Back To Top