Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಖೇಣಿ ಆಲಿಂಗನ, ಹೈದರಾಬಾದ್ ಕರ್ನಾಟಕ ಕಾಂಗ್ರೆಸ್​ನಲ್ಲಿ ಕಂಪನ

Tuesday, 13.03.2018, 3:04 AM       No Comments

|ವಾದಿರಾಜ ವ್ಯಾಸಮುದ್ರ

ಕಲಬುರಗಿ: ವಿವಾದಿತ ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರವು ಹೈದರಾಬಾದ್-ಕರ್ನಾಟಕದ ರಾಜಕೀಯದಲ್ಲಿ ಕಂಪನ ಮೂಡಿಸುತ್ತಿದೆ.

ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ಕುಟುಂಬವನ್ನು ಸೌಜನ್ಯಕ್ಕೂ ಕೇಳದೆ ಖೇಣಿಯನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಲಾಗಿದೆ ಎಂದು ಕೈ ನಾಯಕರು ಆಕ್ರೋಶಗೊಂಡಿದ್ದಾರೆ. ಬೀದರ್ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಧರಂ ಕುಟುಂಬದ ಆಕ್ರೋಶ ಕೇಳಿಸಿಕೊಂಡಿರುವ ಖರ್ಗೆ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಹೀಗಾಗಿ ನೈಸಾಗಿ ಕೈ ಜಾರಿದ್ದರಿಂದ ಅಶೋಕ್ ಖೇಣಿಗೆಷ್ಟು ಲಾಭವಾಗುತ್ತದೋ ಗೊತ್ತಿಲ್ಲ. ಆದರೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಇದು ಎಷ್ಟರಮಟ್ಟಿಗೆ ಹಾನಿ ತರಬಹುದೆಂಬ ಚರ್ಚೆ ಆರಂಭವಾಗಿದೆ. ಖೇಣಿ ಸೇರ್ಪಡೆ ಮೂಲಕ ಹೈಕ ಭಾಗದಲ್ಲೂ ತನ್ನ ಹಿಡಿತ ಸಾಬೀತುಪಡಿಸುವಿಕೆ ಸೇರಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕುಟಿಲ ನೀತಿಯಲ್ಲಿ ಮುಖ್ಯಮಂತ್ರಿ ಎಡವಿದರೇ ಎಂಬ ಪ್ರಶ್ನೆ ಎದ್ದಿದೆ.

ಮುನಿಸಿಕೊಂಡ ಖರ್ಗೆ: ಖೇಣಿ ಸೇರ್ಪಡೆ ಬಗ್ಗೆ ನನ್ನೊಂದಿಗೆ ಯಾರೂ ರ್ಚಚಿಸಿಲ್ಲ. ಖೇಣಿಯಿಂದ ಪಕ್ಷಕ್ಕೆ ಯಾವ ಲಾಭ ಆಗಬಹುದು ಎಂಬುದು ಸೇರಿಸಿಕೊಂಡವರೇ ಹೇಳಲಿ ಎಂದು ಟಾಂಗ್ ನೀಡಿದ್ದಾರೆ. ಧರಂ ಪರಿವಾರದ ಹಾಗೂ ಖರ್ಗೆ ಹೇಳಿಕೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಿಎಂ ಏಕಚಕ್ರಾಧಿಪತ್ಯ ಈ ಭಾಗದಲ್ಲೂ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸದೆ ಇರದು. ಇದು ರಾಜ್ಯ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆೆ.

ಕಳೆದ 10 ವರ್ಷದಿಂದ ಬೀದರ್ ಜಿಲ್ಲೆಯನ್ನು ಧರಂ ಮನೆತನ ಹಿಡಿತದಲ್ಲಿಟ್ಟುಕೊಂಡಿದೆ. ಆದರೆ ಧರಂ ಅಗಲಿಕೆ ನಂತರ ಈ ಮನೆತನಕ್ಕೆ ಜಿಲ್ಲಾ ರಾಜಕೀಯದಿಂದ ದೂರ ಇರಿಸಲು ಪ್ರಯತ್ನಿಸುತ್ತಿರುವ ಪಕ್ಷದ ಪ್ರಮುಖರ ಗುಂಪೊಂದು ಖೇಣಿ ಅವರನ್ನು ಕಾಂಗ್ರೆಸ್​ಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪೌರಾಡಳಿತ ಹಾಗೂ ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಖೇಣಿಯನ್ನು ಕಾಂಗ್ರೆಸ್​ಗೆ ತರಲಾಗಿದೆ ಎನ್ನಲಾಗಿದೆ.

ಧರ್ಮಸಿಂಗ್ ಪುತ್ರನಿಗೆ ಬುಲಾವ್

ಧರಂ ಪುತ್ರ, ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರನ್ನು ಸಿಎಂ ಸಿದ್ದರಾಮಯ್ಯ ಚರ್ಚೆಗೆ ಕರೆದಿದ್ದಾರೆ. ಧರಂ ಪರಿವಾರ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಸದ್ಯದ ಸ್ಥಿತಿಗತಿ ಬಗ್ಗೆ ರ್ಚಚಿಸಿದೆ. ತಮ್ಮ ಮೇಲೆ ಆಗುತ್ತಿರುವ ಅನ್ಯಾಯ ವಿವರಿಸಿದೆ. ಇದಾದ ಬಳಿಕ ಖರ್ಗೆ, ಆಪ್ತ ಸ್ನೇಹಿತನ ಪರಿವಾರದ ಬೆನ್ನಿಗೆ ನಿಂತಿದ್ದಾರೆ. ಈಗಿನ ಬೆಳವಣಿಗೆಯಲ್ಲಿ ಈ ಎರಡೂ ಕುಟುಂಬ ಅತೃಪ್ತವಾಗಿದ್ದರಿಂದ ಹಿಂದುಳಿದ, ದಲಿತ ಮತಗಳು ಕೈ ತಪ್ಪಿದರೆ ಹೇಗೆ ಎಂಬ ಪ್ರಶ್ನೆಯೂ ಕಾಂಗ್ರೆಸ್​ನಲ್ಲಿ ಕಾಡುತ್ತಿದೆ.

ಗುರುವಿಗೆ ಖಂಡ್ರೆ ತಿರುಮಂತ್ರ?

ಧರಂ ಪ್ರಯತ್ನದ ಫಲವೇ ಈಶ್ವರ ಖಂಡ್ರೆಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಈಗ ಖಂಡ್ರೆ ತಮ್ಮ ರಾಜಕೀಯ ಗುರುವಿನ ಮನೆತನವನ್ನು ಬೀದರ್​ನಿಂದ ಹೊರದಬ್ಬುವ ಕೆಲಸಕ್ಕೆ ಕೈಹಾಕಿದ್ದಾರೆಯೇ ಎಂಬ ಮಾತು ಪಕ್ಷದ ವಲಯದಿಂದಲೇ ಕೇಳಿಬರುತ್ತಿದೆ. ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ, ಧರಂ ಅಳಿಯ ಚಂದ್ರಾಸಿಂಗ್ ಪರೋಕ್ಷವಾಗಿ ಬೀದರ್ ಪ್ರಭಾವಿ ನಾಯಕರೊಬ್ಬರ ಮೇಲೆ ಟೀಕಾಸ್ತ್ರ ನಡೆಸಿದ್ದಾರೆ. ಧರಂ ಅವರಿಂದಲೇ ಎತ್ತರದ ಸ್ಥಾನಕ್ಕೆ ಹೋದವರು ಇಂದು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ ಎಂದಿದ್ದಾರೆ.

 

ತಂದೆ, ಚಿಕ್ಕಪ್ಪ ಸೇರಿ ನನ್ನ ಪೂರ್ವಜರು ಮೂಲತಃ ಕಾಂಗ್ರೆಸಿಗರು. ಹೀಗಾಗಿ ನಾನೂ ಕಾಂಗ್ರೆಸ್​ಗೆ ಸೇರ್ಪಡೆಯಾಗಿ ಘರ್ ವಾಪಸಿಯಾಗಿದ್ದೇನೆ. ಕಾಂಗ್ರೆಸ್​ನ ಜಾತ್ಯತೀತ ಮನೋಭಾವ ಹಾಗೂ ಸಿಎಂ ಸಿದ್ದರಾಮಯ್ಯ ಜನಪರ ಆಡಳಿತ ಮೆಚ್ಚಿ ಕೈಗೆ ಸೈ ಎಂದಿರುವೆ.

| ಅಶೋಕ್ ಖೇಣಿ ಶಾಸಕ

Leave a Reply

Your email address will not be published. Required fields are marked *

Back To Top