Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಖಾಸಗಿ ಶಾಲೆ ವಿರುದ್ಧ ಪಾಲಕರ ಆಕ್ರೋಶ

Thursday, 14.09.2017, 3:00 AM       No Comments

ಬೆಂಗಳೂರು: ಬಾಗಲಗುಂಟೆಯ ಖಾಸಗಿ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ನೂರಾರು ಪಾಲಕರು ಬುಧವಾರ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ಬಾಲಕಿ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆರೋಗ್ಯ ಸುಧಾರಿಸಿದ ಬಳಿಕ ಬಾಲಕಿಗೆ ಹಿರಿಯ ತಜ್ಞರಿಂದ ಕೌನ್ಸೆಲಿಂಗ್ ನಡೆಸಿ ಮತ್ತೊಮ್ಮೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದಾರೆ.

ಮಂಗಳವಾರ ಖಾಸಗಿ ಶಾಲೆಯ ಎಲ್​ಕೆಜಿ ಬಾಲಕಿ ಮನೆಗೆ ಮರಳಿದಾಗ ಅನಾರೋಗ್ಯ ಉಂಟಾಗಿದ್ದು, ವಾಂತಿ ಮಾಡಿಕೊಂಡಿದ್ದಳು. ತಕ್ಷಣ ಪಾಲಕರು ಆರೋಗ್ಯ ತಪಾಸಣೆಗೆ ವೈದ್ಯರ ಬಳಿ ಕರೆದೊಯ್ದಾಗ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ಹೇಳಿದ್ದರು.

ಯಾರು ಏನು ಮಾಡಿದರು ಎಂದು ಕೇಳಿದಾಗ ‘ಸೆಕ್ಯೂರಿಟಿ ಗಾರ್ಡ್ ಅಂಕಲ್’ ಎಂದು ಬಾಲಕಿ ಹೇಳಿದ್ದಳು ಎನ್ನಲಾಗಿದೆ. ಕೂಡಲೇ ಬಾಲಕಿ ಪಾಲಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದ್ದ ಐವರು ಸೆಕ್ಯೂರಿಟಿ ಗಾರ್ಡ್​ಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

ಬಾಲಕಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ ಎಂದು ಐವರು ವಿಚಾರಣೆಯಲ್ಲಿ ಹೇಳಿದರು. ಐವರ ಫೋಟೋಗಳನ್ನು ತೆಗೆದುಕೊಂಡು ಬಾಲಕಿ ಪಾಲಕರಿಗೆ ರವಾನಿಸಿ ಬಾಲಕಿಗೆ ತೋರಿಸಿ ಗುರುತು ಹಿಡಿಯಲು ಪ್ರಯತ್ನಿಸಿದರು. ಬಾಲಕಿ 2 ಬಾರಿ ಒಬ್ಬ ಸೆಕ್ಯೂರಿಟಿ ಗಾರ್ಡ್​ನನ್ನು ಗುರುತಿಸಿದ್ದಳು. ಅದರ ಆಧಾರದ ಮೇಲೆ ಸೆಕ್ಯೂರಿಟಿ ಗಾರ್ಡ್​ನನ್ನು ತೀವ್ರ ವಿಚಾರಣೆಗೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಶಾಲೆ ಆವರಣ, ಪ್ರತಿ ಕ್ಲಾಸ್​ರೂಮ್ ಕಾರಿಡಾರ್, ಶೌಚಗೃಹದ ಬಳಿ, ಗೇಟ್ ಸೇರಿ ಶಾಲೆಯ ಎಲ್ಲ ಆವರಣ ಸೆರೆಯಾಗುವಂತೆ 16 ಸಿಸಿ ಕ್ಯಾಮರಾಗಳನ್ನು ಅಳಡಿಸಲಾಗಿದೆ. ಪ್ರತಿಯೊಂದು ಕ್ಯಾಮರಾದ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ಬಾಲಕಿ ಗುರುತಿಸಿರುವ ಸೆಕ್ಯೂರಿಟಿ ಗಾರ್ಡ್ ಎಲ್ಲಿಯೂ ಬಾಲಕಿಯ ಸಂಪರ್ಕಕ್ಕೆ ಬಂದಿರುವ ದೃಶ್ಯವಿಲ್ಲ.

ಕೊನೆಗೆ ಬಾಲಕಿಯ ತಾಯಿಯನ್ನು ವಿಚಾರಿಸಿದಾಗ, ‘ಈತನೇ ಇರಬಹುದಾ ಎಂದು ಒಂದು ಫೋಟೋ ತೋರಿಸಿದಾಗ ಮಗಳು ಒಂದನ್ನು ತೋರಿಸಿದಳು. ಹೀಗಾಗಿ, ನಾನು ಅದನ್ನು ನಿಮಗೆ ಹೇಳಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಪ್ರಕರಣ ಗೊಂದಲವಾಗಿದೆ. ‘ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಅನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶೌಚಗೃಹ ಬಳಿ ದೌರ್ಜನ್ಯ?

ಬಾಲಕಿ ಹೇಳುವಂತೆ, ಶೌಚಗೃಹದ ಬಳಿ ದೌರ್ಜನ್ಯ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆ ಶೌಚಗೃಹ ಬಳಿ ಬಂದಿರುವುದು ಸಿಸಿ ಕ್ಯಾಮರಾಗಳಲ್ಲಿ ಪತ್ತೆಯಾಗಿಲ್ಲ. ಬಾಲಕಿ ಆತನ ವಿರುದ್ಧ ಆರೋಪ ಮಾಡಲು ಕಾರಣ ಏನು ಎಂದು ತಿಳಿದುಬಂದಿಲ್ಲ. ಸಂತ್ರಸ್ತೆ ಪಾಲಕರಿಗೂ ವಿಡಿಯೋ ತೋರಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾತ್​ರೂಮ್ ಬಳಿ ಆಯಾ ಸ್ವಚ್ಛಗೊಳಿಸಿದ್ದಾರೆ

ಅನಾರೋಗ್ಯದಿಂದ ಬಾಲಕಿ ಶಾಲೆಯಲ್ಲಿ ವಾಂತಿ ಮಾಡಿಕೊಂಡಿದ್ದಳು. ಬಾಲಕಿಯನ್ನು ಆಯಾ ಬಾತ್​ರೂಮ್ ಬಳಿ ಕರೆದೊಯ್ದು ಸ್ವಚ್ಛಗೊಳಿಸಿದ್ದಾರೆ. ಈ ಎಲ್ಲ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೌರ್ಜನ್ಯವನ್ನು ಆಯಾ ಎಸಗಿದ್ದರೆ ಅದರಲ್ಲಿ ರೆಕಾರ್ಡ್ ಆಗಿರಬೇಕಿತ್ತು. ಇಲ್ಲವಾದರೆ ಆಕೆಯ ಹೆಸರನ್ನಾದರೂ ಬಾಲಕಿ ಹೇಳಬೇಕಿತ್ತು. ಅದ್ಯಾವುದು ಕೂಡ ಇದುವರೆಗಿನ ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

 

ಬಾಲಕಿ ಮೇಲಿನ ದೌರ್ಜನ್ಯ ಅತ್ಯಂತ ಸೂಕ್ಷ್ಮ ಪ್ರಕರಣ. ಬಾಲಕಿ ಸುಳ್ಳು ಹೇಳಲು ಕಾರಣಗಳು ಇರುವುದಿಲ್ಲ. ಆರೋಗ್ಯ ಸುಧಾರಿಸಿದ ಬಳಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಿ ಮಾಹಿತಿ ಪಡೆಯುತ್ತೇವೆ.

| ಚೇತನ್ ಸಿಂಗ್ ರಾಥೋಡ್ ಉತ್ತರ ವಿಭಾಗ ಡಿಸಿಪಿ

 

ಮಧ್ಯರಾತ್ರಿವರೆಗೂ ಪ್ರತಿಭಟನೆ

ಬಾಲಕಿ ಮೇಲಿನ ದೌರ್ಜನ್ಯ ಸುದ್ದಿ ತಿಳಿದು ಆತಂಕಗೊಂಡ ನೂರಾರು ಪಾಲಕರು ಮಂಗಳವಾರ ರಾತ್ರಿ ಶಾಲೆ ಮುಂಭಾಗ ಜಮಾಯಿಸಿದರು. ಘಟನೆ ಕುರಿತು ಉತ್ತರ ನೀಡುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಒತ್ತಾಯಿಸಿದರು. ರಾತ್ರಿ 12 ಗಂಟೆಯವರೆಗೂ ಪಾಲಕರು ಶಾಲೆ ಆವರಣದಲ್ಲೇ ಮೊಕ್ಕಾಂ ಹೂಡಿದ್ದರು. ಬುಧವಾರ ಬೆಳಗ್ಗೆ ಕೂಡ ಪ್ರತಿಭಟನೆ ನಡೆಸಿದರು. ಘಟನೆ ಬಗ್ಗೆ ಪೂರಕ ಸಾಕ್ಷ್ಯಾಧಾರ ಸಂಗ್ರಹಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಮನವರಿಕೆ ಮಾಡಿ ಕಳುಹಿಸಿದರು.

Leave a Reply

Your email address will not be published. Required fields are marked *

Back To Top