Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಖಾಸಗಿತನವಿಲ್ಲದ ಪಾರದರ್ಶಕ ಪ್ರಪಂಚ

Sunday, 10.09.2017, 3:03 AM       No Comments

| ಎನ್​​. ರವಿಶಂಕರ್​

ಸುರಕ್ಷತೆಯ ದೃಷ್ಟಿಯಿಂದ ಹದ್ದಿನಕಣ್ಣು ಇಡುವುದರಲ್ಲಿ ತಪ್ಪಿಲ್ಲ. ಆದರೆ, ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವೈಯಕ್ತಿಕ ಲಾಭಕ್ಕೆ ಬಳಸಿದರೆ, ಆಗ ಅದು ಬೇರೆಯದೇ ಚರ್ಚೆ. ನಮ್ಮ ಗೌಪ್ಯತೆಗೆ ಅಪಾಯ ಇರುವುದು, ಕಂಡು ಕೇಳಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುವುದು ‘ಕ್ಯಾಷುಯಲ್ ಚಟ’ ಆಗುತ್ತಿರುವ ಪ್ರವೃತ್ತಿ ಬೆಳೆಯುತ್ತಿರುವುದರಲ್ಲಿ.

 

ಖಾಸಗಿತನದ ಹಕ್ಕು ಅಥವಾ ‘ರೈಟ್ ಟು ಪ್ರೈವೆಸಿ’ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ, ನಮ್ಮ ದೇಶದ ಮಟ್ಟಿಗೆ ಅಚಾನಕ್ ಆಗಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಮೂರು ವಾರದ ಕೆಳಗೆ ಈ ವಿಷಯವಾಗಿ ಸವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಾಗ. ಈ ತೀರ್ಪಿನ ಪರಿಣಾಮಗಳನ್ನೂ, ಅದರ ಆಶಯವನ್ನು ಅನುಷ್ಠಾನಕ್ಕೆ ತರುವಲ್ಲಿನ ತೊಡಕುಗಳನ್ನೂ ಆಯಾ ಕ್ಷೇತ್ರಗಳಿಗನ್ವಯವಾಗುವಂತೆ ತಜ್ಞರೂ, ನ್ಯಾಯವಾದಿಗಳೂ ವಿಶ್ಲೇಷಿಸಬೇಕಾದ್ದು ಸಾಧುವಾದರೂ, ಖಾಸಗಿ ವ್ಯಕ್ತಿಗಳ ಖಾಸಗಿ ಬದುಕು ಬಟಾಬಯಲಾಗುತ್ತಿರುವುದರ ಬಗ್ಗೆ ನಮ್ಮಂಥ ಸಾಮಾನ್ಯರೂ ವಿವೇಚಿಸಬಹುದು. ಖಾಸಗಿತನದ ಹಕ್ಕಿನ ನೆವದಲ್ಲಿ ವ್ಯಕ್ತಿಗಳ ಖಾಸಗಿತನದ ಬಗೆಗಿನ (ಅಥವಾ ಅದರ ಕೊರತೆಯ ಬಗೆಗಿನ) ಮೂರು ಭಾಗಗಳ ಲೇಖನಮಾಲೆಯಿದು.

ಮೂರ್ನಾಲ್ಕು ವರ್ಷದ ಕೆಳಗೆ ಖಾಸಗಿತನದ ಚರ್ಚೆ ಶುರುವಾದದ್ದು ಸ್ಥೂಲವಾಗಿ, ಹೀಗೆ- ಅಮೆರಿಕಕ್ಕೆ ನಾವು ಮಾಡುವುದೆಲ್ಲವೂ ಗೊತ್ತಾಗುತ್ತದೆಯಂತೆ. ಈಗ, ಈ ಹಿರಿಯಣ್ಣನ ಚಾಳಿ, ಬೇರೆ ದೇಶಗಳಿಗೂ ಹರಡುತ್ತಿದೆಯಂತೆ. ನಾವು ಮೊಬೈಲ್​ನಲ್ಲಾಡುವ ಮಾತು, ಅಂತರ್ಜಾಲದಲ್ಲಿ ನಡೆಸುವ ವ್ಯವಹಾರ, ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಮಾಡುವ ಸಲ್ಲಾಪಗಳೆಲ್ಲವನ್ನೂ ಅಲ್ಲೆಲ್ಲೋ ಕುಳಿತು ಕದ್ದಾಲಿಸುತ್ತಾರೆ ಎಂದೂ, ಜಾಗತಿಕ ಮಟ್ಟದಲ್ಲಿ ಪೂರ್ವದ ಚೀನಾದಿಂದ ಪಶ್ಚಿಮದ ಅಮೆರಿಕವರೆಗೆ ಎಲ್ಲರಿಗೂ ನಮ್ಮ ನಿಮ್ಮ ಮನೆಗಳ ಸುದ್ದಿ ಸಮಾಚಾರಗಳು ಗೊತ್ತಾಗುತ್ತದೆಯೆಂದೂ ಮಾಧ್ಯಮಗಳು ಉತ್ಸಾಹದಿಂದ ವರದಿ ಮಾಡಿದರೆ, ಸಾಮಾಜಿಕ ಮಾಧ್ಯಮಗಳಲ್ಲಿನ ಅತ್ಯುತ್ಸಾಹಿಗಳು ಅದನ್ನು ಬೇರೆಯದೇ ಮಟ್ಟದ ಉತ್ಪ್ರೇಕ್ಷೆಗೆ ಕೊಂಡೊಯ್ದರು. ಇನ್ನು, ನಮ್ಮ ದೇಶದಲ್ಲೇ ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ (ಸಿಎಮ್​ಸ್) ಕೂಡ ಈ ರೀತಿ ಮೊಬೈಲ್ ಮತ್ತು ಅಂತರ್ಜಾಲದ ಮಾಹಿತಿಯನ್ನು ಟ್ಯಾಪ್ ಮಾಡುತ್ತಿದೆ ಎಂದು ಗೊತ್ತಾಗುತ್ತಲೇ ಮಾಧ್ಯಮಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರೂ ಹೌಹಾರಿದ್ದರು! ಇದರಿಂದ, ನಮ್ಮ ಖಾಸಗಿತನಕ್ಕೆ/ಗೌಪ್ಯತೆಗೆ ಧಕ್ಕೆ ಬರುತ್ತದೆ ಎಂದೂ ಹಲವೆಡೆ ಬಿಂಬಿಸಲಾಯಿತು.

ಆದರೆ, ಯೋಚಿಸಿ ನೋಡಿ. ನಮಗೆ ಬರುವ ಅಪಾಯಗಳಲ್ಲಿ ಹೆಚ್ಚಿನವು ಮೊಬೈಲ್ ಮತ್ತು ಅಂತರ್ಜಾಲದ ಮುಖೇನ ಬರುತ್ತವೆ ಎಂದಾದರೆ, ನಮ್ಮ ಸುರಕ್ಷಾ ವಿಧಾನಗಳನ್ನೂ ಅಲ್ಲಿಯೇ ಅಳವಡಿಸಬೇಕು ತಾನೆ? ಹಣಕಾಸು ವಂಚನೆಗಳು, ಭಯೋತ್ಪಾದನೆ ಇತ್ಯಾದಿಗಳ ಹೆಬ್ಬಾಗಿಲು ಮೊಬೈಲ್ ಮತ್ತು ಅಂತರ್ಜಾಲ ಎಂದಾದರೆ, ಕಾವಲುಗಾರರನ್ನೂ ಅಲ್ಲಿಯೇ ಹಾಕಬೇಕಲ್ಲವೇ? ನಾವು ನಿತ್ಯವೂ ಓಡಾಡುವ ಬಸ್, ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ, ಹೋಟೆಲ್​ಗಳಲ್ಲಿ, ಎಟಿಎಂಗಳಲ್ಲಿ ಸಿಸಿಟಿವಿ ಅಳವಡಿಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದರೆ, ಅಂತರ್ಜಾಲ ಮತ್ತು ಮೊಬೈಲ್ ಮುಖೇನ ನಮ್ಮ ವಹಿವಾಟುಗಳ ಮೇಲೆ ಮೇಲೆ ನಿಗಾ ಇಡುವುದಕ್ಕೆ ಸರ್ಕಾರಗಳು ಸಿಎಮ್​ಸ್/ಅಧಾರ್ ಅಥವಾ ಅಂಥದ್ದೇನನನ್ನಾದರೂ ಜಾರಿಗೆ ತಂದರೆ ಆಕ್ಷೇಪಣೆ ವ್ಯಕ್ತವಾಯಿತು! ನಿತ್ಯ ಜೀವನದಲ್ಲಿ ನಮ್ಮ ಮೇಲೆ ನಡೆಯುವ ಬೇಹುಗಾರಿಕೆಯಿಂದ ನಮ್ಮ ಗೌಪ್ಯತೆಗೆ ಭಂಗ ಬರುವುದಿಲ್ಲ ಎಂದರೆ, ಮಿಥ್ಯ (ವರ್ಚುಯಲ್) ಜೀವನದಲ್ಲಿ ನಡೆಯುವ ಗೂಢಚಾರಿಕೆಯಿಂದಲೂ ಬರಬಾರದು- ಎಂಬರ್ಥದ ಅಭಿಪ್ರಾಯಗಳೂ ಬಂದವು!

ಮೇಲ್ನೋಟಕ್ಕೆ ಇದೊಂದು ವಿತಂಡವಾದದಂತೆಯೇ ತೋರಿದರೂ ಚಿಂತೆ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ಸಾರ್ವತ್ರಿಕವಾಗಿ ಎಲ್ಲವನ್ನೂ ಗಮನಿಸುವ ಕಣ್ಣು-ಕಿವಿಗಳ ಸೃಷ್ಟಿಯಾದರೆ ಅದರಲ್ಲಿ ತಪ್ಪಿಲ್ಲ. ಆದರೆ, ಅಂತಹ ಮಾಹಿತಿಯನ್ನು ವೈಯಕ್ತಿಕ ಲಾಭಕ್ಕೆ ಅಥವಾ ನಿರ್ದಿಷ್ಟ ವ್ಯಕ್ತಿಗಳ ಮೇಲೆ ನಿಗಾ ಇಡುವುದಕ್ಕೆ ಬಳಸಿದರೆ, ಆಗ ಅದು ಬೇರೆಯದೇ ಚರ್ಚೆ.

ಇದರ ಹಿಂದಿರುವ ಸೈಕಾಲಜಿಯೇ ಕುತೂಹಲಕಾರಿ! ಅಮೆರಿಕ ಮತ್ತು ಚೀನಾಗಳು ನಮ್ಮೆಲ್ಲರ ಫೋನ್ ಮತ್ತು ಸಾಮಾಜಿಕ ಸಂಪರ್ಕ ತಾಣಗಳೊಳಗೆ ನುಸುಳಿವೆ ಎಂದು ಗೊತ್ತಾದ ಸಂದರ್ಭದಲ್ಲಿ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಭಾರತ ಸರ್ಕಾರ ಹಾಗೆ ಮಾಡಲಾರಂಭಿಸಿದೆ ಎಂದು ಗೊತ್ತಾದೊಡನೆ ಧಿಗ್ಗನೆದ್ದಿದ್ದೇವೆ. ಇದು ಹೀಗೇ ಮುಂದುವರಿದು, ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ರಾಜ್ಯ ಸರ್ಕಾರ ಜನರ ಸಂಭಾಷಣೆಯ ಮೇಲೆ ಕಣ್ಣಿಡುತ್ತಿದೆ, ನಮ್ಮ ಊರಿನ ಕಾರ್ಪೇರೇಷನ್​ನಲ್ಲಿ ಇದನ್ನೆಲ್ಲ ಕಲೆಹಾಕುವ ಮಾನಿಟರ್/ಸರ್ವರ್​ಗಳನ್ನು ತಂದು ಜೋಡಿಸುತ್ತಿದ್ದಾರೆ ಎಂದು ಗೊತ್ತಾದಾಗ ಆಗಬಹುದಾದ ಗಲಾಟೆ ಊಹಿಸಿ! ನಮ್ಮ ಭಯ ಹೆಚ್ಚಾಗುವುದು, ನಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಶಕ್ತಿಗಳು ನಮ್ಮ ಹತ್ತಿರಕ್ಕೆ ಬರಲಾರಂಭಿಸಿದಾಗ!

ಎಲ್ಲವೂ ಎಲ್ಲೋ ರೆಕಾರ್ಡ್ ಆಗುತ್ತಿದೆ ಮತ್ತು ನಮಗೆ ಪರಿಚಯವಿರದ ಯಾರೋ ನಮ್ಮನ್ನು ನೋಡುತ್ತಿದ್ದಾರೆ ಎನ್ನುವುದರ ಬಗ್ಗೆ ನಾವು ಅಷ್ಟಾಗಿ ಹೆದರಬೇಕಾಗಿಲ್ಲ. ಏಕೆಂದರೆ, ಅಷ್ಟು ಅಗಾಧ ಪ್ರಮಾಣದ ಡೇಟಾ/ಮಾಹಿತಿಯ ತುಣುಕುಗಳನ್ನು ಶೋಧಿಸಿ, ನಿಮ್ಮ ಮನೆಯ ದೋಸೆಯಲ್ಲಿ ಎಷ್ಟು ತೂತಿದೆ ಎಂದು ಎಣಿಸಲು, ಸರ್ಕಾರದ ಕಡೆಯಿಂದಂತೂ ಬಹುಶಃ ಯಾರೂ ಬರುವುದಿಲ್ಲವೇನೋ! ನಾವು ನಿಜಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿರುವುದು ಎಲ್ಲೋ ಕುಳಿತು ಕದ್ದಾಲಿಸುತ್ತಿರುವ ಕಳ್ಳಗಿವಿಗಳ ಬಗ್ಗೆ ಅಲ್ಲ. ಇದಕ್ಕಿಂತಲೂ ಆತಂಕಕಾರಿಯಾದ ಪ್ರವೃತ್ತಿಯೊಂದು ನಮ್ಮ ಸುತ್ತಲೂ ಬೆಳೆಯುತ್ತಿರುವ ಬಗ್ಗೆ. ಅದು ಏನು ಎಂದು, ಕೆಲವು ದಿನಗಳ ಹಿಂದೆ ನಡೆದ ಘಟನೆಯೊಂದನ್ನು ವಿವರಿಸುವ ಮೂಲಕ ಹೇಳುತ್ತೇನೆ.

ನಮ್ಮ ಕಕ್ಷಿಗಾರ ಕಂಪನಿಯ ಜತೆಗಿನ ಕಾನ್ಪರೆನ್ಸ್-ಕಾಲ್ ಆಗ ತಾನೆ ಮುಗಿದಿತ್ತು. ಆ ಕರೆಯಲ್ಲಿ ರ್ಚಚಿಸಲಾದ ಅಂಶವೊಂದರ ಬಗ್ಗೆ ಸ್ಪಷ್ಟತೆ ಇರದಿದ್ದ ಕಾರಣ, ಅದೇ ಕರೆಯಲ್ಲಿ ನಮ್ಮ ಜತೆಗಿದ್ದ ಸಹೋದ್ಯೋಗಿಯನ್ನು ಆ ಬಗ್ಗೆ ವಿಚಾರಿಸಿದೆ- ‘ಅವರು ಏನು ಹೇಳಿದರು ಎಂದು ನಿಮಗೆ ಸ್ಪಷ್ಟವಾಗಿ ತಿಳಿಯಿತಾ?‘. ಅವರೆಂದರು- ‘ನನಗೂ ವಿವರಗಳು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಹತ್ತು ನಿಮಿಷ ಅವಕಾಶ ಕೊಡಿ. ಅವರು ಏನೆಂದರು ಎಂದು ನಿಮಗೆ ತಿಳಿಸುತ್ತೇನೆ‘. ಅವರ ಉತ್ಸಾಹವನ್ನು ಮೆಚ್ಚಿದ ನಾನು ‘ಥ್ಯಾಂಕ್ಸ್. ಆದರೆ, ಪರವಾಗಿಲ್ಲ ಬಿಡಿ. ನಾನೇ ಅವರಿಗೆ ಫೋನ್ ಮಾಡಿ ಕೇಳಿಕೊಳ್ಳುತ್ತೇನೆ’ ಎಂದೆ.

ಆಗ ಅವರು, ‘ಮತ್ತೆ ಫೋನ್ ಮಾಡಿ ಕ್ಲೈಂಟ್ ಅನ್ನು ಕೇಳುವುದು ಮುಜುಗರದ ವಿಷಯ ಅಲ್ಲವೇ… ಅದರ ಅಗತ್ಯವೇನೂ ಇಲ್ಲ. ಈ ಇಡೀ ಕರೆಯ ರೆಕಾರ್ಡಿಂಗ್ ನಮ್ಮ ಬಳಿ ಇದೆ. ಅದನ್ನು ಕಂಪ್ಯೂಟರ್​ಗೆ ವರ್ಗಾಯಿಸಿ ನಿಮಗೆ ಕಳುಹಿಸಲು ಸ್ವಲ್ಪ ಕಾಲಾವಕಾಶ ಬೇಕು ಅಷ್ಟೆ‘. ಇಡೀ ಕರೆ ರೆಕಾರ್ಡ್ ಆಗಿದೆಯಂತೆ! ಅಷ್ಟು ದೊಡ್ಡ ವಿಷಯವನ್ನು ಅಷ್ಟು ಸರಾಗವಾಗಿ ಅವರು ಹೇಳಿದ್ದು ಕೇಳಿ ನನಗೆ ಗಾಬರಿಯಾಯಿತು.

‘ಇಡೀ ಕರೆ ರೆಕಾರ್ಡ್ ಆಗಿದೆ ಎಂದರೆ ಏನರ್ಥ? ನಿಮಗೆ ರೆಕಾರ್ಡ್ ಮಾಡಲು ಅನುಮತಿ ಕೊಟ್ಟವರು ಯಾರು?‘- ಅರ್ಧ ಕೋಪದಲ್ಲಿ, ಮತ್ತರ್ಧ ಭಯದಲ್ಲಿ ವಿಚಾರಿಸಿದೆ. ನನ್ನ ಸಹೋದ್ಯೋಗಿ ಶಾಂತರಾಗಿಯೇ ಉತ್ತರಿಸಿದರು- ‘ಇದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಏಕೆಂದರೆ, ಇದು ನಮ್ಮ ಪೋನ್​ನಲ್ಲಿರುವ ಆಪ್. ಕರೆಯಲ್ಲಿ ತೊಡಗಿಸಿಕೊಂಡಿರುವ ಯಾರಿಗೂ ಗೊತ್ತಾಗದಂತೆ ಇದು ನಡೆಯುವ ಸಂಭಾಷಣೆಗಳೆಲ್ಲವನ್ನೂ ರೆಕಾರ್ಡ್ ಮಾಡುತ್ತದೆ‘.

‘ಅರೆ! ಅದು ಆಪ್ ಆದ ಮಾತ್ರಕ್ಕೆ, ನೀವು ಮತ್ತೊಬ್ಬರ ಮಾತನ್ನು ಅನುಮತಿ ಇಲ್ಲದೆಯೇ ರೆಕಾರ್ಡ್ ಮಾಡಬಹುದು ಎಂದರ್ಥವಲ್ಲ. ನಿಮ್ಮ ಆಪ್ ಒಂದು ಸಾಧನ ಮಾತ್ರ. ಇನ್ನೊಬ್ಬರ ಖಾಸಗಿತನಕ್ಕೆ/ಗೌಪ್ಯತೆಗೆ ನೀವು ಮರ್ಯಾದೆ ಕೊಡಲೇಬೇಕು… ಜತೆಗೆ, ಕಾನೂನಿನ ಪ್ರಕಾರವೂ ಇದು ತಪ್ಪು. ವ್ಯಕ್ತಿಯೊಬ್ಬರ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ತೆಗೆಯುವುದು, ವಿಡಿಯೋ ಸೆರೆಹಿಡಿಯುವುದು, ಹೀಗೆ ಕರೆಗಳನ್ನು ಟ್ಯಾಪ್ ಮಾಡುವುದು ತಪ್ಪು’ ಎಂದು ವಿವರಿಸಲು ಯತ್ನಿಸಿದೆ.

ಅಷ್ಟು ಹೊತ್ತಿಗೆ ಅಲ್ಲಿ ಆರೇಳು ಜನ ಸಹೋದ್ಯೋಗಿಗಳು ಜತೆಗೂಡಿದ್ದರು. ನನ್ನ ಮೊದಲನೇ ಸಹೋದ್ಯೋಗಿ ‘ನೀವು ಇದನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾ ಇದ್ದೀರಿ! ಜತೆಗೆ ಟ್ಯಾಪ್ ಈಸ್ ಎ ವೆರಿ ಸ್ಟ್ರಾಂಗ್ ವರ್ಡ್… ನಾವು ಸುಮ್ಮನೆ ಬ್ಯಾಕ್-ಅಪ್ ಇರಲಿ ಎಂದು ರೆಕಾರ್ಡ್ ಮಾಡ್ತಾ ಇದೀವಿ ಅಷ್ಟೇ‘. ಈ ಮಾತಿಗೆ, ಅಲ್ಲಿ ನೆರೆದಿದ್ದ ಎಲ್ಲ ಸಹೋದ್ಯೋಗಿಗಳ ಸಹಮತ ಇತ್ತು. ‘ನಾವು ಕೂಡ ಕಾಲ್​ಗಳನ್ನು ನಮ್ಮ ಫೋನ್​ನಲ್ಲಿ ರೆಕಾರ್ಡ್ ಮಾಡ್ತೀವಿ. ದಿಸ್ ಈಸ್ ನಾಟ್ ಟ್ಯಾಪಿಂಗ್… ಜತೆಗೆ, ಕರೆಯ ಕೊನೆಗೆ ಕಾಲ್ ಡಿಲೀಟ್ ಮಾಡುವ ಆಯ್ಕೆ ಇದೆಯಲ್ಲಾ…’.

ಈ ಸ್ಮಾರ್ಟ್​ಫೋನ್​ಗಳಲ್ಲಿರುವ ಕರೆಗಳನ್ನು ದಾಖಲಿಸುವ ಆಪ್​ಗಳ ಹೆಸರು ಕೇಳಿದಾಗ ಅವುಗಳು ಮಾಡುವ ಕೆಲಸ ಸ್ಪಷ್ಟವಾಗುತ್ತದೆ. ‘ಕಾಲ್ ರೆಕಾರ್ಡರ್‘, ‘ಆಟೋ ಕಾಲ್ ರೆಕಾರ್ಡರ್‘, ‘ರೆಕಾರ್ಡ್ ಮೈಕಾಲ್‘- ಇವು ಉದಾಹರಣೆಗಳು ಮಾತ್ರ. ಒಳಬರುವ ಮತ್ತು ಹೊರಹೋಗುವ ಎಲ್ಲ ಕರೆಗಳನ್ನು ಗುಪ್ತವಾಗಿ ರೆಕಾರ್ಡ್ ಮಾಡುವ ಈ ಆಪ್​ಗಳಲ್ಲಿ ಕರೆಯ ಕೊನೆಗೆ ಆ ಕರೆಯನ್ನು ಅಳಿಸಿಹಾಕುವ ಅಥವಾ ಸೇವ್ ಮಾಡಿಕೊಳ್ಳುವ ಆಯ್ಕೆ ಇರುತ್ತದೆಯಂತೆ.

ನನಗೂ ಪಿತ್ತ ನೆತ್ತಿಗೇರಿತ್ತು. ‘ನಿಮಗೆ ಡಿಲೀಟ್ ಮಾಡದಿರುವ ಆಯ್ಕೆಯೂ ಇದೆಯಲ್ಲಾ! ಹಾಗಾಗಿ, ನೀವು ಮಾಡುತ್ತಿರುವುದು ಟ್ಯಾಪಿಂಗೇ. ಅದನ್ನು ನೀವು ಆಪ್ ಮೂಲಕವಾದರೂ ಮಾಡಿ, ಮತ್ತೊಂದರ ಮೂಲಕವಾದರೂ ಮಾಡಿ. ಇದು ಕಾನೂನುಬಾಹಿರ..‘. ಅಷ್ಟು ಹೊತ್ತಿಗೆ, ಅವರಿಗೆ ನನ್ನ ಬಗ್ಗೆ ಅನುಕಂಪ ಬರಲು ಆರಂಭವಾಗಿತ್ತು! ನನ್ನನ್ನು ಕೂಡಲೆ ‘ಹಳೆಯ ಕಾಲದವನು, ಪಾಪ’ ಎನ್ನುವ ದನಿಯಲ್ಲಿ ಮಾತನಾಡಿಸಲು ಶುರುಮಾಡಿದರು- ‘ನೀವು ಟೆಕ್ನಾಲಜಿಯನ್ನು ವಿರೋಧಿಸುತ್ತಿದ್ದೀರಿ…’ ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬರು ‘ಬಹುತೇಕ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಇಂತಹ ಆಪ್​ಗಳು ಇರುತ್ತವೆ. ಆಂಡ್ ಎವೆರಿಬಡಿ ಡಸ್ ಇಟ್‘. ‘ನಿಮ್ಮ ಕಾಲದಲ್ಲಿ(!) ಇದು ಇರದೇ ಇದ್ದುದರಿಂದ, ನಿಮಗೆ ಸಹಜವಾಗಿಯೇ ಇದರ ಬಗ್ಗೆ ಭಯ!’ ಎಂದು ಅನುಕಂಪ ತೋರಿದವರು ಮತ್ತೋರ್ವ ಸಹೋದ್ಯೋಗಿ!

ಆ ವಾದದಲ್ಲಿ ನಾನು ಗೆಲ್ಲಲಾಗದಿದ್ದರೂ, ‘ನಿಮ್ಮ ಖಾಸಗಿ ಜೀವನದಲ್ಲಿ ಏನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಆದರೆ, ಕಚೇರಿಯ ಕರೆಗಳನ್ನು ಇನ್ನು ಮುಂದೆ ರೆಕಾರ್ಡ್ ಮಾಡಬೇಡಿ’ ಎಂದು ಕಟ್ಟಪ್ಪಣೆ ಹೊರಡಿಸಬೇಕಾಯಿತು. ಅಲ್ಲಿಗೆ, ಆ ಪ್ರಕರಣ ಮುಗಿದಂತೆ ಕಂಡರೂ ಇವರೆಲ್ಲರೂ ಸಂಭಾಷಣೆಗಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿದ್ದಾರೋ ಇಲ್ಲವೋ ಎನ್ನುವುದನ್ನು ನಿಖರವಾಗಿ ಹೇಳುವಂತಿಲ್ಲ. ಅದೇ ಈ ಆಪ್​ಗಳ ವೈಶಿಷ್ಟ್ಯ ತಾನೆ?

ನಮ್ಮ ಗೌಪ್ಯತೆಗೆ ನಿಜವಾದ ಅಪಾಯ ಇರುವುದು, ಹೀಗೆ ಕಂಡು ಕೇಳಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುವುದು ‘ಕ್ಯಾಷುಯಲ್ ಚಟ‘ವಾಗಿ ಬೆಳೆಯುತ್ತಿರುವುದರಲ್ಲಿ. ಇಲ್ಲಿ ಇರುವ ವೈರುಧ್ಯವೆಂದರೆ- ಯಾರಿಗೂ, ಯಾರ ಮೇಲೂ ಹಗೆಯಾಗಲೀ ಅಥವಾ ದೊಡ್ಡ ಮಟ್ಟದ ಅಪನಂಬಿಕೆಯಾಗಲೀ ಇಲ್ಲ. ಆದರೂ, ತನ್ನಿಂತಾನೇ ರೆಕಾರ್ಡ್ ಆದರೆ ಆಗಲಿ, ಮುಂದೊಂದು ದಿನ ಬೇಕಾದರೂ ಬೇಕಾಗಬಹುದು ಎನ್ನುವ ರಕ್ಷಣಾತ್ಮಕ ಧೋರಣೆ ಅಥವಾ ಇದರಲ್ಲಿ ದೊಡ್ಡ ವಿಷಯವೇನಿದೆ ಎನ್ನುವ ಉಢಾಫೆ!

ರಾಷ್ಟ್ರಗಳು ನಮ್ಮ ವಹಿವಾಟು, ಕರೆ, ಸಂಭಾಷಣೆಗಳನ್ನು ಕದ್ದು ಕೇಳುವುದರಿಂದ ಅಥವಾ ನೋಡುವುದರಿಂದ ನಮ್ಮ ಗೌಪ್ಯತೆಗೆ ಧಕ್ಕೆ ಬರುತ್ತದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದೆಲ್ಲಾ ದೊಡ್ಡ ಮಟ್ಟದಲ್ಲಿ ರ್ಚಚಿಸಬೇಕಾದದ್ದು ಪ್ರಾಯಶಃ ಪ್ರಸ್ತುತವೇ. ಆದರೆ, ನಮ್ಮ ಗೌಪ್ಯತೆಗೆ ಈಗಾಗಲೇ ನಿಜಕ್ಕೂ ಧಕ್ಕೆ ಬಂದಿರುವುದು, ನಾವು ಮುಕ್ತ ಸಂಭಾಷಣೆಗಳಲ್ಲಿ ತೊಡಗಲು ಸಾಧ್ಯವಾಗದಂತೆ ಆಗಿರುವುದು, ನಮ್ಮ ಆಪ್ತರು ತಮಗೆ ಪರಿಚಯವಿರುವ ವ್ಯಕ್ತಿಗಳ ಖಾಸಗಿತನ ಮತ್ತು ಗೌಪ್ಯತೆಯ ಬಗ್ಗೆ ತೋರುತ್ತಿರುವ ಅಸಡ್ಡೆಯಿಂದಾಗಿ.

ಪ್ರಪಂಚ ಪಾರದರ್ಶಕವಾಗುತ್ತಿದೆ. ನಾವೂ ನಗ್ನರಾಗುತ್ತಿದ್ದೇವೆ. ಮಾಹಿತಿ ಯುಗದಲ್ಲಿ ನಮ್ಮ ಸುತ್ತಲೂ ಸಾವಿರಾರು ಕಣ್ಣುಗಳು, ಲಕ್ಷಾಂತರ ಕಿವಿಗಳು. ಆದರೆ, ಒಂದಂತೂ ದಿಟ. ನಮ್ಮ ಸರ್ಕಾರಗಳ ‘ಅಧಿಕೃತ’ ಮಾರ್ಗದ ಖಾಸಗಿತನದ ಉಲ್ಲಂಘನೆಗಿಂತಲೂ, ಕಾಣದ ದೇಶಗಳ ಅಧಿಕೃತ ಗೂಢಚಾರರಿಗಿಂತಲೂ, ನಮ್ಮ ಸುತ್ತಲೂ ಇರುವ ಈ ಅನಧಿಕೃತ ‘ನಿಗೂಢ‘ಚಾರರೇ ಹೆಚ್ಚು ಅಪಾಯಕಾರಿಯೇನೋ ಅನಿಸುತ್ತದೆ!

ಇದು ಪ್ರಸ್ತಾವನೆಯಷ್ಟೇ! ಖಾಸಗಿತನದ ಬಗೆಗಿನ ಇನ್ನಷ್ಟು ವಿಚಾರಗಳು ಈ ಲೇಖನಮಾಲೆಯ ಮುಂದಿನ ಎರಡು ಕಂತುಗಳಲ್ಲಿ.

Leave a Reply

Your email address will not be published. Required fields are marked *

Back To Top