Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಖಾಸಗಿತನದ ಹಕ್ಕು ಮಾಹಿತಿ ಹಕ್ಕಿಗಿಂತಲೂ ದೊಡ್ಡದು

Sunday, 24.09.2017, 3:00 AM       No Comments

ಕೆಲವು ದಿನದ ಹಿಂದೆ, ‘ರೈಟ್ ಟು ಪ್ರೖೆವೆಸಿ/ಖಾಸಗಿತನದ ಹಕ್ಕಿನ ಬಗೆಗಿನ ಸವೋಚ್ಚ ನ್ಯಾಯಾಲಯದ ನಿರ್ಧಾರದ ಬಗೆಗಿನ ಪೋಸ್ಟ್ ಒಂದಕ್ಕೆ ಫೇಸ್​ಬುಕ್​ನಲ್ಲಿ ನನ್ನ ಸ್ನೇಹಿತರೊಬ್ಬರು ಪ್ರತಿಕ್ರಿಯಿಸುತ್ತಾ, ತಮಾಷೆಗೆಂದು ಮಾಡಿದ್ದ ಟಿಪ್ಪಣಿ ಹೀಗಿತ್ತು-‘ಇತ್ತೀಚೆಗೆ ಬಂದ ವರದಿಯ ಪ್ರಕಾರ, ಸರ್ಕಾರ ಗೂಢಾಚಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾರಾದರೂ ಗೂಢಾಚಾರಿಕೆ ಮಾಡುತ್ತಿದ್ದರೆ ಅವರನ್ನು ಹಿಡಿದು ಶಿಕ್ಷಿಸಲು ದೊಡ್ಡ ಗುಪ್ತದಳವೊಂದನ್ನು ರಚಿಸಲಾಗಿದೆ!’ ಗೂಢಾಚಾರಿಕೆಯಲ್ಲಿ ಇರುವ ಸಮಸ್ಯೆಯೊಳಗಿನ ಸಮಸ್ಯೆ ಇದೇ! ನಮ್ಮ ಮೇಲೆ ಯಾರಾದರೂ ಅನಧಿಕೃತವಾಗಿ ಕಣ್ಣಿಡುತ್ತಿದ್ದಾರೆಯೋ ಇಲ್ಲವೋ ನೋಡಲು, ನಾವು ಅವರ ಮೇಲೆ ಅನಧಿಕೃತವಾಗಿ ಕಣ್ಣಿಡಬೇಕು! ಇದೇ ತರ್ಕದಲ್ಲಿ ಮುಂದುವರಿದರೆ, ಗೂಢಾಚಾರಿಕೆಗೆ ಮೂಲ ಕಾರಣ ಭಯ ಅಥವಾ ಸ್ವಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದು ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲಿಗೆ, ಖಾಸಗಿತನದ ಬಗೆಗಿನ ಚರ್ಚೆ ಎಲ್ಲಿಗೆ ಬಂದು ನಿಂತಂತಾಯಿತು, ನೀವೇ ಹೇಳಿ!

ಬಹುಶಃ ಈ ಕಾರಣಕ್ಕಾಗಿಯೇ, ಸರ್ಕಾರಗಳು, ಖಾಸಗಿ ಉದ್ಯಮಗಳು ಮತ್ತು ವ್ಯಕ್ತಿಗಳು-ಭಯದಿಂದಲೋ ಅಥವಾ ಸ್ವಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದಲೋ ಅನಧಿಕೃತ ಬೇಹುಗಾರಿಕೆಗೆ ಇಳಿಯುವುದು ಸರ್ವೆಸಾಮಾನ್ಯವಾದ ಪ್ರವೃತ್ತಿಯಾಗಿದೆ. ವಿಚಿತ್ರವೆಂದರೆ, ಈ ಮೂವರಿಗೂ ಪರಸ್ಪರರ ಬೇಹುಗಾರಿಕೆಯ ಬಗ್ಗೆ ಬೇಸರವಿದೆ. ಅನುಮಾನ, ಆತಂಕಗಳಿವೆ. ಕೆಲವೊಮ್ಮೆ ಇಬ್ಬಂದಿತನದ ಧೋರಣೆ ಇದೆ.

ಉದಾಹರಣೆಗೆ, ಭಾರತ ಸರ್ಕಾರ ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್​ಸಿಎಮ್​ಸ್)ಅನ್ನು ಸ್ಥಾಪಿಸಿ, ಜನರು ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಮಾಡುವ ವ್ಯವಹಾರಗಳ ಮೇಲೆ ನಿಗಾ ಇಟ್ಟರೆ ಅಥವಾ ಕೆಲವು ವಹಿವಾಟುಗಳಿಗೆ ಆಧಾರ್ ಕೇಳಿದರೆ ನಮಗೆ ಕೋಪ ಬರುತ್ತದೆ. ನಮ್ಮ ಆತ್ಮಗೌರವಕ್ಕೆ ಧಕ್ಕೆ ಆಯಿತೆಂದು, ಸರ್ಕಾರಗಳು ನಮ್ಮಂಥವರನ್ನು ಕಳ್ಳರಂತೆ ನೋಡುವುದು ಸರಿಯಲ್ಲವೆಂದೂ ಸಿಟ್ಟಾಗುತ್ತೇವೆ. ಅಮೆರಿಕದಂತಹ ದೇಶಗಳಲ್ಲಂತೂ, ಜನರಿಗೆ ಏನು ಮಾಡಲೂ ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿಯ (ಎನ್​ಎಸ್​ಎ) ಭಯ. ಈ ಭಯ, ನಾಲ್ಕು ವರ್ಷದ ಕೆಳಗೆ ದೊಡ್ಡ ಸುದ್ದಿಯಾಗಿದ್ದ ಎಡ್ವರ್ಡ್ ಸ್ನೋಡೆನ್ (ಅಮೆರಿಕದ ಗುಪ್ತದಳ ಸಿಐಎನ ಮಾಜಿ ಉದ್ಯೋಗಿಯಾಗಿದ್ದ ಆತ ಅಮೆರಿಕ ಯಾವ ರೀತಿಯಲ್ಲಿ ದೂರಸಂಪರ್ಕ ಕಂಪನಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡು ಜಗತ್ತಿನ ಮಾಹಿತಿಯನ್ನೆಲ್ಲ ಕಲೆಹಾಕುತ್ತಿದೆ ಎನ್ನುವುದನ್ನು ಮಾಧ್ಯಮಗಳ ಮೂಲಕ ಜಗಜ್ಜಾಹೀರು ಮಾಡಿದ್ದ) ಪ್ರಕರಣಕ್ಕೆ ಸಾಕಷ್ಟು ಮುಂಚಿನಿಂದಲೂ ಇದೆ ಎನ್ನುವುದು ಗಮನಾರ್ಹ. ಸಾಮಾಜಿಕ ತಾಣವೊಂದರಲ್ಲಿ ತಮ್ಮ ಬ್ರಾ್ಯಂಡ್ ಒಂದಕ್ಕೆ ಕಾಮೆಂಟುಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತಮಾಷೆಗೆ ಯಾರೋ ಕೇಳಿದ್ದರು- ‘ನೀವು ಈವರೆಗೂ ಯಾರ ಬಳಿಯೂ ಹೇಳಿಕೊಳ್ಳದಿರುವ ಸಣ್ಣ ತಪ್ಪು ಯಾವುದು?’ ಅದಕ್ಕೆ ಅಮೆರಿಕದ ಯಾರೋ ಒಬ್ಬರು ಪ್ರತಿಕ್ರಿಯಿಸಿದ್ದರು, ‘ನೈಸ್ ಟ್ರೈ ಎನ್​ಎಸ್​ಎ! ಆದರೆ, ನಿಮ್ಮ ಕೃತ್ರಿಮ ನಮಗೆ ಗೊತ್ತಾಗಿದೆ. ನಾವು ತಪ್ಪೊಪ್ಪಿಕೊಳ್ಳುವಂತೆ ಮಾಡಿ, ಅದರ ಆಧಾರದ ಮೇಲೆ ನಮಗೆ ಶಿಕ್ಷೆ ನೀಡಲು, ಹೀಗೆಲ್ಲ ಗಾಳ ಹಾಕುತ್ತಿರುವಿರಿ ತಾನೆ?’

ಹೀಗೆ, ಎನ್​ಎಸ್​ಎ ಮಾರುವೇಷದಲ್ಲಿ ಯಾವಾಗಲೂ ತಮ್ಮ ಮೇಲೆ ಕಣ್ಣಿಡುತ್ತಿದೆ ಎನ್ನುವುದು ಅಮೆರಿಕನ್ನರ ಮತ್ತು ಅಮೆರಿಕಕ್ಕೆ ಸಂಬಂಧಪಟ್ಟ ಮೊಬೈಲ್ ಮತ್ತು ಅಂತರ್ಜಾಲ ಸಲಕರಣಗಳನ್ನು ಉಪಯೋಗಿಸುವ ಅನೇಕರ ಆತಂಕ. ಅಂತಹ ದೊಡ್ಡ ಮಟ್ಟದ ಪ್ಯಾರಾನೋಯ/ಅತೀವ ಸಂಶಯ ಜನರನ್ನು ಕಾಡಹತ್ತಿದೆ. ಅದಕ್ಕೆ ತಕ್ಕನಾಗಿ, ಕನಿಷ್ಠ ಮಟ್ಟ ಅಂತರ್ಜಾಲದ ಬಳಕೆಯಲ್ಲಾದರೂ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸಿಕೊಳ್ಳುವ ವಿವೇಚನೆ ಬೆಳೆಯುತ್ತಿದೆ.

ವಿಶ್ವದ ಕೆಲವೆಡೆಗಳಲ್ಲಂತೂ ಇದಕ್ಕೆ ಅತಿರೇಕದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ದೇಶಗಳಲ್ಲಿ, ಸಾರ್ವತ್ರಿಕವಾಗಿ ಅಮೆರಿಕ, ಚೀನಾ, ರಷ್ಯಾ ಮೊದಲಾದ ಸಂಶಯಾಸ್ಪದ ಮೂಲದ ಅಂತರ್ಜಾಲ ಸಂಸ್ಥೆಗಳನ್ನು ಬಹಿಷ್ಕರಿಸಿ ಎನ್ನುವ ಕೂಗು ಕೇಳಿಬರುತ್ತಿದೆ. ಉದಾಹರಣೆಗೆ, ಕೆಲವು ವರ್ಷದ ಕೆಳಗೆ ಜರ್ಮನಿಯ ಆಂತರಿಕ ವ್ಯವಹಾರಗಳ ಸಚಿವರು, ಅಮೆರಿಕದ ಗೂಢಾಚಾರಿಕೆಯನ್ನು ನಿವಾರಿಸಬೇಕಾದರೆ, ಗೂಗಲ್ ಮತ್ತು ಫೇಸ್​ಬುಕ್​ಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದೊಂದೇ ಮಾರ್ಗ ಎಂದು ಸಾರ್ವಜನಿಕವಾಗಿ ಘೊಷಿಸಿದ್ದಾರೆ. ಇದರಲ್ಲಿರುವ ವೈರುಧ್ಯವೆಂದರೆ, ಎಲ್ಲಿ ಸರ್ಕಾರಗಳು ನಮ್ಮ ಮೇಲೆ ನಿಗಾ ಇಡುತ್ತದೆಯೋ, ಅಲ್ಲಿನ ನಾಗರಿಕರಲ್ಲಿ ಸುರಕ್ಷಿತ ಭಾವವೂ ಮನೆಮಾಡಿರುತ್ತದೆ ಎನ್ನುವುದು! ಉದಾಹರಣೆಗೆ- ಬಿಟ್ಟುಹೋಗಿದ್ದ ಗ್ರಾಹಕರೊಬ್ಬರ ಮೊಬೈಲನ್ನು ಅವರ ಕಚೇರಿಯವರೆಗೂ ಹುಡುಕಿಕೊಂಡು ಹೋಗಿ ಹಿಂದಿರುಗಿಸುತ್ತಿದ್ದ ಸಿಂಗಾಪುರದ ಟ್ಯಾಕ್ಸಿ ಡ್ರೈವರ್ ಒಬ್ಬರು ಹೇಳಿದ ಮಾತು-‘ಇಲ್ಲಿ ನಮ್ಮ ಪ್ರಾಮಾಣಿಕತೆಗಿಂತ ಹೆಚ್ಚಿನ ವಿಷಯವೊಂದಿದೆ. ಅದೇನೆಂದರೆ, ಸರ್ಕಾರಕ್ಕೆ ನಾವು ಮಾಡುವುದೆಲ್ಲವೂ ಗೊತ್ತಾಗುತ್ತದೆ. ಆದ್ದರಿಂದ, ಯಾರೂ ಏನನ್ನೂ ಕದಿಯುವುದು ಸಾಧ್ಯವಿಲ್ಲ!’

ಹಾಗಾಗಿ, ಎನ್​ಎಸ್​ಎಗಳಂತಹ ಸಂಸ್ಥೆಗಳನ್ನೂ, ಸರ್ಕಾರ ಗುಪ್ತವಾಗಿ ಸಂಗ್ರಹಿಸುವ ಮಾಹಿತಿಯನ್ನೂ ಕೆಟ್ಟದೆಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಭಯೋತ್ಪಾದನೆಯನ್ನು ಜಾಗತೀಕರಣದ ಅಡ್ಡಪರಿಣಾಮ ಎಂದು ನಾವು ನಂಬುವುದಾದರೆ, ಅಂತಾರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾವಲುಗಾರರೆಂದರೆ ಅಂತರ್ಜಾಲ ಮತ್ತು ಮೊಬೈಲ್​ಗಳ ಬೇಹುಗಾರರೇ! ಹಾಗಾಗಿ, ರಾಷ್ಟ್ರಗಳು ಸಿಎಮ್​ಸ್ಗಳನ್ನು ರಚಿಸಿ ನಿಗಾ ವಹಿಸುವ ವ್ಯವಸ್ಥೆಯನ್ನು ಬಲಿಷ್ಠವಾಗಿಸುತ್ತ ಹೋದರೆ, ಸಾಮಾನ್ಯರಾದ ನಾವು ಅಭ್ಯಂತರ ವ್ಯಕ್ತಪಡಿಸುವುದು ಉಚಿತವೋ ಇಲ್ಲವೋ ಸುಲಭದ ನಿರ್ಧಾರವಲ್ಲ. ಆದರೆ, ಅಂತರ್ಜಾಲದ ಪ್ರಪಂಚದಲ್ಲಿ ನಾವು ಮಾಡುವ ಪ್ರತಿ ನಡೆಯನ್ನೂ ಗಮನಿಸುವ ಖಾಸಗಿ ಸಂಸ್ಥೆಗಳನ್ನು ನಾವು ನಿಜಕ್ಕೂ ಅನಧಿಕೃತ ಗುಪ್ತಚರರಂತೆಯೇ ನೋಡಬೇಕು. ಏಕೆಂದರೆ, ಅವರು ನಮ್ಮ ಬಗ್ಗೆ ಸೆರೆಹಿಡಿಯುವ ಮಾಹಿತಿಯನ್ನು ನಮ್ಮ ವಿರುದ್ಧ ಬಳಸುವುದು ಬಹುತೇಕ ಖಚಿತ. ಈ ವಿಷಯವಾಗಿ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ವಿಚಾರಿಸಲು ಕಾಪೋರೇಟ್ ಕಾನೂನು ತಜ್ಞರನ್ನು ಕೇಳಿದಾಗ-‘‘ಇನ್ನೊಬ್ಬರ ಅನುಮತಿ ಇಲ್ಲದೆ ನಾವು ಏನನ್ನಾದರೂ ಚಿತ್ರೀಕರಿಸುವುದಾಗಲೀ, ದಾಖಲಿಸುವುದಾಗಲೀ ಕಾನೂನು ಬಾಹಿರ. ಉದಾಹರಣೆಗೆ, ಖಾಸಗಿ ಕಂಪನಿಗಳು ಮತ್ತು ರೀಟೇಲ್ ಮಳಿಗೆಗಳು ತಮ್ಮ ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಇರಿಸಬಹುದಾದರೂ, ಹಾಗೆ ರೆಕಾರ್ಡ್ ಮಾಡುವ ವಿಷಯವನ್ನು ಸ್ಪಷ್ಟವಾಗಿ ಮತ್ತು ಬಹಿರಂಗವಾಗಿ ಪ್ರಕಟಿಸಬೇಕು. ಇದೇ ಕಾನೂನು, ಇನ್ನೊಬ್ಬರ ಸಂಭಾಷಣೆಯನ್ನು ದಾಖಲಿಸುವ ವಿಷಯಕ್ಕೂ ಅನ್ವಯಿಸುತ್ತದೆ’ ಎನ್ನುವುದು ಅವರ ಸ್ಪಷ್ಟ ನಿಲುವು. ಆದರೆ, ಇದನ್ನು ಪಾಲಿಸುವ ಖಾಸಗಿ ಸಂಸ್ಥೆಗಳ ಸಂಖ್ಯೆ ಎಷ್ಟಿರಬಹುದು ಎನ್ನುವುದರ ಅಂದಾಜು ಎಲ್ಲರಿಗೂ ಇದೆ!

ಉದಾಹರಣೆಗೆ- ನೀವು ಕೊಂಡದ್ದೇನೋ ಸರಿಯಿಲ್ಲವೆಂದು ದೂರು ನೀಡಲು ಅಥವಾ ನಿಮ್ಮ ಮೊಬೈಲ್ ಬಿಲ್​ನ ಬಗ್ಗೆ ವಿವರಣೆ ಕೇಳಲು ಅದಕ್ಕೆ ಸಂಬಂಧಪಟ್ಟ ಕಸ್ಟಮರ್ ಕೇರ್​ಗೆ ಫೋನ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆಗ, ನಿಮ್ಮ ಕಿವಿಗೆ ಈಗಾಗಲೇ ಅಭ್ಯಾಸವಾಗಿಹೋಗಿರುವ ಅಡಿಬರಹದ ಮಾತೊಂದು ಕೇಳಿಬರುತ್ತದೆ-ಆಂತರಿಕವಾಗಿ, ನಮ್ಮ ಕಂಪನಿಯು ತನ್ನ ಗ್ರಾಹಕರೊಡನೆ ವ್ಯವಹರಿಸುವ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿರಬಹುದು. ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಒಂದು, ನಿಮಗೆ ಅವರ ಸೇವೆಯನ್ನು ನಿರಾಕರಿಸುವ ಆಯ್ಕೆ ಇದೆಯಾದರೂ, ಅವರ ರೆಕಾರ್ಡಿಂಗ್ ನಿರಾಕರಿಸುವ ಆಯ್ಕೆ ಇಲ್ಲ! ಎರಡು, ನಿಮಗೆ ಈ ರೆಕಾರ್ಡಿಂಗ್​ನ ಪ್ರತಿ ಎಂದಿಗೂ ಲಭಿಸುವುದಿಲ್ಲವದ್ದರಿಂದ, ಇದು ಏಕಮುಖವಾದ ನಿರ್ಧಾರ. ಇದು, ವಿನಾಕಾರಣವಾದ ಮತ್ತು ಅನಧಿಕೃತ ಸ್ಪೈಯಿಂಗ್ ಅಲ್ಲದೆ ಬೇರೇನು?

ಇನ್ನು, ಮೂರನೆಯ ಮತ್ತು ಅತ್ಯಂತ ಭಯಂಕರ ಬೇಹುಗಾರಿಕೆ ನಮ್ಮ ಕಚೇರಿಗಳಲ್ಲೂ, ನಮ್ಮ ಮನೆಗಳಲ್ಲೂ ಆಗುವಂತಹದ್ದು! ನಮ್ಮ ಜೊತೆಗೇ ಇದ್ದು, ನಮ್ಮ ಮೇಲೆ ಸುಮ್ಮನೆ ಬಿದ್ದಿರಲಿ ಎಂದು ಒಂದು ಕಣ್ಣಿಟ್ಟಿರುವ ನಮ್ಮ ಸ್ನೇಹಿತರು; ಇವನು ಒಳ್ಳೆಯವನೇ ಆದರೂ, ಮುಂದೊಂದು ದಿನ ವೃತ್ತಿಯಲ್ಲಿನ ಪ್ರಗತಿಗೆ ಸಹಾಯಕವಾಗುವ ಏನಾದರೂ ಸಿಕ್ಕೀತೆಂಬ ನಂಬಿಕೆಯಿಂದ ಎಲ್ಲ ಸಂಭಾಷಣೆಗಳನ್ನೂ ನಿಷ್ಠೆಯಿಂದ ರೆಕಾರ್ಡ್ ಮಾಡಿಕೊಳ್ಳುತ್ತ ಕುಳಿತಿರುವ ಸಹೋದ್ಯೋಗಿ; ಕೆಲಸಗಾರರ ನಿಯತ್ತಿನ ಮೇಲಿನ ಅನುಮಾನದಿಂದ ಕಚೇರಿಯ ಎಲ್ಲ ಮೂಲೆಗಳಲ್ಲೂ ಸ್ಪೈಕ್ಯಾಮ್ಳನ್ನು ಇಟ್ಟಿರುವ ಉದ್ಯಮಿ ಇವರೆಲ್ಲರೂ ನಮ್ಮ ಹಿತಶತ್ರುಗಳು. ಕ್ಯಾಷುಯಲ್ ಗೂಢಾಚಾರರು. ಇವರ ಪಟ್ಟಿ ಬಹಳ ದೊಡ್ಡದು!

ಹಾಗಾದರೆ, ಈ ಎಲ್ಲ- ಸರ್ಕಾರ, ಖಾಸಗಿ ಕಂಪನಿಗಳು ಮತ್ತು ಪರಿಚಿತ ವ್ಯಕ್ತಿಗಳು- ಮೂಲಗಳಿಂದ ಆಗುವ ಅನಧಿಕೃತ ಬೇಹುಗಾರಿಕೆ ತಡೆಗಟ್ಟಲು ಏನು ಮಾಡಬಹುದು?

=ಸಾಧ್ಯವಾದಷ್ಟೂ ನಿಮ್ಮ ಮೊಬೈಲ್ ನಂಬರ್/ಇಮೇಲ್ ಐಡಿ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ಅಪರಿಚಿತ ವ್ಯಕ್ತಿಗಳಿಗೆ ನೀಡದಿರಿ. =ನಿಮ್ಮ ಮೊಬೈಲ್​ನಲ್ಲಿ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಾಗ ಅಥವಾ ಜಾಲತಾಣಗಳನ್ನು ಬಳಸುವಾಗ ಅವರು ನಿಮ್ಮ ಫೋನಿನ ಒಳಮಾಹಿತಿಯನ್ನು ಓದಲು/ಆಕ್ಸೆಸ್ ಮಾಡಲು ಅನುಮತಿ ಕೇಳುತ್ತಾರೆ. ಅದರ ಬಗ್ಗೆ ಜಾಗೃತವಾಗಿದ್ದು, ಎಷ್ಟು ಅವಶ್ಯಕವೋ ಅಷ್ಟಕ್ಕೆ ಮಾತ್ರ ಆಕ್ಸೆಸ್ ಅನುಮತಿ ನೀಡುವುದು. =ಸಾಮಾಜಿಕ ಮಾಧ್ಯಮಗಳು ಮತ್ತು ಅಂತರ್ಜಾಲವನ್ನು ಖಾಸಗಿ ವಿಷಯಗಳ ಚರ್ಚೆಗೆ ಬಳಸದೆ ಇರುವುದು. ಇನ್ನೂ ಒಂದು ಹೆಜ್ಜೆ ಮುಂದುವರಿದು, ಇವುಗಳನ್ನು ತುರ್ತು ಸಂವಹನಕ್ಕೆ ಮತ್ತು ವೃತ್ತಿ ಆಧಾರಿತ ಬಳಕೆಗೆ ಮಾತ್ರ ಸೀಮಿತಗೊಳಿಸಲು ಯತ್ನಿಸುವುದು. =ಮಾಲ್​ಗಳು, ಕಚೇರಿಗಳು, ಹೋಟೆಲ್​ಗಳು, ಷೋರೂಮ್ಳು ಇತ್ಯಾದಿಗಳನ್ನು ಪ್ರವೇಶಿಸುವಾಗ ಒಮ್ಮೆ ಕತ್ತೆತ್ತಿ ನೋಡಿ. ವೀಡಿಯೋ ಕ್ಯಾಮರಾದ ಬಗ್ಗೆ ನಿಗಾ ಇರಲಿ. ನಿಮಗರಿವಿಲ್ಲದೆ ನಿಮ್ಮನ್ನು ಗಮನಿಸುವ ಹಕ್ಕು ಯಾರಿಗೂ ಇಲ್ಲ. =ಸಾಮಾಜಿಕ ತಾಣಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳಸದೆ ಇರುವುದು. ತಮ್ಮ ಬ್ಯಾಂಕ್/ ಕ್ರೆಡಿಟ್ ಕಾರ್ಡ್ ಖಾತೆಯ ಮಾಹಿತಿ ಸೋರಿಕೆಯಾದ ಜನರಲ್ಲಿ ಬಹುಪಾಲು ಜನರು, ಸಾಮಾಜಿಕ ತಾಣಗಳಲ್ಲಿ ಅಪರಿಚಿತರೊಂದಿಗೆ ಆನ್​ಲೈನ್ ಸ್ನೇಹ ಮಾಡಿದವರೇ ಆಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. =ಫೋನ್/ಅಂತರ್ಜಾಲದಲ್ಲಿ ವ್ಯವಹರಿಸುವಾಗ ದೊಡ್ಡ ಬ್ರಾ್ಯಂಡ್ ಇದ್ದರೆ ಅದು ಸುರಕ್ಷಿತ ಎನ್ನುವ ಭ್ರಮೆಯಿಂದ ಹೊರಬರುವುದು. ಮಾಹಿತಿಯನ್ನು ಕದ್ದಾಲಿಸುವವರು ಮೊದಲು ಪ್ರಯತ್ನಿಸುವುದು ದೊಡ್ಡ ಬ್ರಾ್ಯಂಡ್​ಗಳನ್ನೇ ಎನ್ನುವುದು ಸ್ಥಾಪಿತವಾಗಿರುವ ವಿಷಯ. ಏಕೆಂದರೆ, ದೊಡ್ಡ ಸಂಸ್ಥೆಗಳ ಮಾಹಿತಿ ವಾಹಿನಿಯನ್ನು ಅಡ್ಡಗಟ್ಟಿದರೆ, ಅತಿಹೆಚ್ಚು ಜನರನ್ನು ಒಮ್ಮೆಗೇ, ಅವರಿಗರಿವಿಲ್ಲದೆಯೇ ಹಿಂಬಾಲಿಸಬಹುದು. =ಮೊಬೈಲ್ ಮತ್ತು ಕಂಪ್ಯೂಟರ್​ಗಳಲ್ಲಿ ಆಂಟಿ ವೈರಸ್ ಅಳವಡಿಸುವುದು. =ನಮ್ಮ ಎಲ್ಲ ಪಾಸ್​ವರ್ಡ್​ಗಳನ್ನು ತಿಜೋರಿಯ ಬೀಗವನ್ನು ರಕ್ಷಿಸುವಷ್ಟೇ ಜೋಪಾನವಾಗಿ ಇಟ್ಟುಕೊಳ್ಳುವುದು.

ಒಟ್ಟಿನಲ್ಲಿ, ವಿಶ್ವಾದ್ಯಂತ ಖಾಸಗಿತನ ಚರ್ಚೆಯ ವಿಷಯವಾಗಿದೆ. ಮೊಬೈಲ್ ಫೋನ್​ಗಳಲ್ಲಿ ಪ್ರೋಫೆಷನಲ್ ಮಟ್ಟದ ಕ್ಯಾಮರಾಗಳು ಬರುವ ಮುನ್ನ, ಫೋನ್ ಟ್ಯಾಪ್ ಮಾಡುವ ಸರಳ ಆಪ್​ಗಳು ಮಾರುಕಟ್ಟೆ ಪ್ರವೇಶಿಸುವ ಮುನ್ನ, ಈ ಖಾಸಗಿತನದ ಬಗೆಗಿನ ಚರ್ಚೆ ಮೊದಲುಗೊಂಡಿದ್ದರೆ, ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಗಳದ್ದಾಗಿರುತ್ತಿತ್ತು. ಆದರೆ, ಕಟ್ಟೆಯೊಡೆದು ನಮ್ಮ ಮನೆಯೊಳಗೆ ನೀರು ನುಗ್ಗಿರುವ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಖಾಸಗಿತನವನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮ ಮೇಲೆಯೇ ಇದೆ.

ಅಂತೂ, ರೈಟ್ ಟು ಇನ್ಪಮೇಷನ್​ನಷ್ಟೇ ಬಲಿಷ್ಠವಾದ ಖಾಸಗಿತನದ ಹಕ್ಕು ಕಾನೂನಿಗೆ ಚಾಲನೆ ದೊರೆತಿದೆ. ಮಾಹಿತಿಯೇ ಎಲ್ಲವೂ ಆಗಿರುವ ಈ ಹೊತ್ತಿನಲ್ಲಿ ನಾವು ಮಾಹಿತಿಯನ್ನು ಅಮೂಲ್ಯ ಎಂದು ಪರಿಗಣಿಸುವುದೇ ಆದರೆ ಸ್ವಸ್ಥ ಸಮಾಜವನ್ನು ಬೆಳೆಸುವ ದೃಷ್ಟಿಯಿಂದ ಮಾಹಿತಿಯನ್ನು ನೈಜ ರೂಪದಲ್ಲಿ ಪಡೆಯುವುದು ಎಷ್ಟು ಮುಖ್ಯವೋ, ನಮ್ಮ ಖಾಸಗಿ ಮಾಹಿತಿಯ ಸೋರಿಕೆಯನ್ನು ತಡೆಗಟ್ಟುವುದು ಅದಕ್ಕಿಂತಲೂ ಮುಖ್ಯ. ಏಕೆಂದರೆ, ಮಾಹಿತಿ ಹಕ್ಕು ನ್ಯಾಯಾಂಗ ಮತ್ತು ಸಾಂವಿಧಾನಿಕವಾಗಿ ಲಭಿಸಿದ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾದರೆ ಖಾಸಗಿತನ ಮಾನವನ ಸಹಜಧರ್ಮಕ್ಕೆ ಪೂರಕವಾದದ್ದು. ಏಕೆಂದರೆ, ಖಾಸಗಿತನ ಎನ್ನುವುದು ಒಂದಿಲ್ಲೊಂದು ಮಟ್ಟದಲ್ಲಿ ಜಗತ್ತಿನ ಎಲ್ಲರೂ ಗೌರವಿಸುವ ಸಾಮೂಹಿಕ ಮೌಲ್ಯ (ಕಲೆಕ್ಟಿವ್ ವ್ಯಾಲ್ಯು). ನಾವಿರುವ ಕಾಲಘಟ್ಟದಲ್ಲಿ ನಮ್ಮ ವ್ಯಕ್ತಿತ್ವ /ಐಡೆಂಟಿಟಿಗೆ ಸಂಬಂಧಿಸಿದ ಮಾಹಿತಿಯ ತುಣುಕುಗಳ ಒಟ್ಟು ಮೊತ್ತವೇ ನಾವು. ಜಗತ್ತಿನ ಮಾಹಿತಿ ಸಾಧನಗಳ ನಡುವಿನ ಸಂಪರ್ಕ ಮತ್ತು ಸಾಧ್ಯತೆಗಳು ಹೆಚ್ಚಾದಷ್ಟೂ, ಸೇರಬಾರದ ಕೈಸೇರಿದ ಮಾಹಿತಿಯ ಒಂದು ತುಣುಕು ಕೂಡ ಬ್ರಹ್ಮರಾಕ್ಷಸನಾಗಿ ನಮ್ಮನ್ನು ಕಾಡಬಲ್ಲುದು. ನಮ್ಮ ಸುತ್ತಲಿನ ಜಗವೆಲ್ಲವೂ ಈ ಮಾಹಿತಿಯ ತುಣುಕುಗಳಿಗೇ ನೇಯ್ದುಕೊಂಡಿರುವುದರಿಂದ, ನಮ್ಮ ಐಡೆಂಟಿಟಿಯನ್ನು ನಾವು ಸುಲಭವಾಗಿ ಬದಲಾಯಿಸಿಕೊಳ್ಳುವುದೂ ಅಸದಳ. ಆದ್ದರಿಂದ, ವ್ಯಕ್ತಿಗಳಾಗಿ ನಾವು ಸುರಕ್ಷಿತವಾಗಿ ಬದುಕಬೇಕಾದರೆ ಹಾಗೂ ನಮ್ಮತನವನ್ನು ನಾವು ಕಾಯ್ದುಕೊಳ್ಳಬೇಕಾದರೆ ಈ ಮಾಹಿತಿ ತುಣುಕುಗಳನ್ನು ಜೋಪಾನವಾಗಿ ರಕ್ಷಿಸಿಕೊಳ್ಳಬೇಕಾದ್ದು ಅತ್ಯಗತ್ಯ.

(ಲೇಖಕರು ಸಂವಹನ ಸಲಹೆಗಾರರು)

 

Leave a Reply

Your email address will not be published. Required fields are marked *

Back To Top