Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಖಾಸಗಿತನದ ಹಕ್ಕಿನ ಸಂರಕ್ಷಣೆ ಸರ್ಕಾರದ ಹೊಣೆ

Thursday, 21.09.2017, 3:00 AM       No Comments

ಮೂಲಭೂತ ಹಕ್ಕುಗಳನ್ನು ವಿಶ್ಲೇಷಿಸುವುದಕ್ಕಾಗಿ, ಚಾಲ್ತಿಯಲ್ಲಿರುವ ಮತ್ತು ಹಳತಾಗಿರುವ ಸಂವಿಧಾನದ ಕಟ್ಟುನಿಟ್ಟಿನ ಅರ್ಥವ್ಯಾಖ್ಯಾನದ ಮಾನದಂಡಗಳನ್ನು ಅನ್ವಯಿಸುವುದು, ಪ್ರಸಕ್ತ ಕಾಲಘಟ್ಟದಲ್ಲಿ ಅಸಂಬದ್ಧ ನಡೆಯಾಗುತ್ತದೆ ಎಂಬ ಅಭಿಪ್ರಾಯಕ್ಕೆ ಪೂರಕವಾಗುವಂಥ ಅಂಶಗಳನ್ನು ನಿನ್ನೆಯ ಕಂತಿನಲ್ಲಿ ನೋಡಿದೆವು. ಡಿಜಿಟಲೀಕೃತ ಪ್ರಪಂಚದಲ್ಲಿ ವ್ಯಕ್ತಿಯೋರ್ವನ ಖಾಸಗಿತನದ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತಾದ ಮತ್ತಷ್ಟು ಹೊಳಹುಗಳನ್ನು ಇಂದು ಅವಲೋಕಿಸೋಣ.

ಸಂವಿಧಾನವನ್ನು ಅಕ್ಷರಶಃ ಅನುಸರಿಸುವುದು ಎಷ್ಟು ಮುಖ್ಯವೋ, ಅದರ ಭಾವವನ್ನು ಅನುಸರಿಸುವುದೂ ಅಷ್ಟೇ ಮುಖ್ಯ. ಇಂಥದೊಂದು ಚಿತ್ತಸ್ಥಿತಿಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ, ಮೂಲಭೂತ ಹಕ್ಕುಗಳ ಅದರಲ್ಲೂ ನಿರ್ದಿಷ್ಟವಾಗಿ ಖಾಸಗಿತನದ ಹಕ್ಕಿನ ಒಂದು ಉದಾರವಾದಿ ಹಾಗೂ ವ್ಯಾಪಕ ಅರ್ಥವಿವರಣೆಯ ಪರವಾಗಿ ನ್ಯಾಯಾಂಗದ ಆದ್ಯತೆಯಿರಬೇಕು. ಎಲ್ಲ ವ್ಯಕ್ತಿಗಳಿಗೂ ಅವರದೇ ಆದ ಒಂದು ಲೋಕವಿರುತ್ತದೆ; ಇಂಥ ‘ವೈಯಕ್ತಿಕ ಸಾಮ್ರಾಜ್ಯ‘ದ ಅಸ್ತಿತ್ವಕ್ಕೆ ನೀಡಲಾಗಿರುವ ಸಾಂವಿಧಾನಿಕ ಭರವಸೆಯನ್ನು ಇದು ನಿಸ್ಸಂಶಯವಾಗಿ ಬಲಪಡಿಸುತ್ತದೆ ಮತ್ತು ಅದು ಸರ್ಕಾರದ ಪ್ರವೇಶ/ಹಸ್ತಕ್ಷೇಪಕ್ಕೆ ಅನುಜ್ಞಾರ್ಹವಲ್ಲದ ರೀತಿಯಲ್ಲಿರುತ್ತದೆ ಎನ್ನಲಡ್ಡಿಯಿಲ್ಲ. ಇಂಥದೊಂದು ಭರವಸೆಯಿಲ್ಲದಿದ್ದಲ್ಲಿ, ಅಂದರೆ, ‘ತಮ್ಮ ಸಾಹಚರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಉತ್ಸಾಹವನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರವು ಕಣ್ಗಾವಲಿಟ್ಟಿರಬಹುದು‘ ಎಂಬ ಅರಿವು ಜನರಲ್ಲಿ ಮೂಡುತ್ತದೆ ಮತ್ತು ಮೇಲುನೋಟಕ್ಕೆ ನ್ಯಾಯಸಮ್ಮತವೆಂದು ತೋರುವ, ಖಾಸಗಿತನದ ಮಾಹಿತಿ ಸಂಗ್ರಹಿಸುವ ಮತ್ತು ದುರುಪಯೋಗಪಡಿಸಿಕೊಳ್ಳುವ ಸರ್ಕಾರೀ ಪರಿಪಾಠದಿಂದಾಗಿ ವೈಯಕ್ತಿಕ ಸ್ವಾತಂತ್ರ್ಯದ ದಮನವಾದಂತಾಗುತ್ತದೆ.

ಸಂವಿಧಾನದ ಭಾಗ 3ರ ಅಡಿಯಲ್ಲಿ ನೀಡಲಾಗಿರುವ ಹಕ್ಕುಗಳ ಸರಮಾಲೆ ಹೀಗೆ ಬೆಳೆಯುತ್ತಲೇ ಹೋಗುತ್ತಿದ್ದರೂ, ಅವುಗಳ ಪೈಕಿ ಯಾವೊಂದರ ಮೇಲೆ ಇರಿಸಬಹುದಾದ ವಿಧ್ಯುಕ್ತವಾಗಿ ಅನುಜ್ಞಾರ್ಹವಾದ ಕಟ್ಟುಪಾಡುಗಳು ಸೀಮಿತವಾಗಿ ಮತ್ತು ವ್ಯಾಪಕವಾಗೇ ಉಳಿದುಬಿಡುತ್ತವೆ. ಏಕೆಂದರೆ, ಸಂವಿಧಾನವೆಂಬುದು ಜನರ ಸಾರ್ವಭೌಮತೆಯ ಪ್ರಕಟರೂಪವಾಗಿರುವುದರಿಂದಾಗಿ, ಸಂವಿಧಾನದಲ್ಲಿ ಸೂತ್ರೀಕರಿಸಲ್ಪಟ್ಟಿರುವ ವಿಧಾನದಲ್ಲೇ ಸರ್ಕಾರವು ತನ್ನ ಸೀಮಿತ ಅಧಿಕಾರವನ್ನು ಚಲಾಯಿಸಬಹುದೇ ಹೊರತು ಬೇರಿನ್ನಾವ ವಿಧಾನದಲ್ಲೂ ಅಲ್ಲ. ಸರ್ಕಾರವು ನಮ್ಮೆಲ್ಲರ ಜೀವನದ ಎಲ್ಲ ಕಾಲಘಟ್ಟ/ಸಂದರ್ಭಗಳಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲಾಗದು. ಆದ್ದರಿಂದ, ಸೀಮಿತ ಸರ್ಕಾರಿ ಅಸ್ತಿತ್ವ ಎಂಬುದೇ ಸಂವಿಧಾನದ ಮಂತ್ರವಾಗಿದೆ.

ಮೇಲಾಗಿ, ಸಾರ್ವಜನಿಕ ಆರೋಗ್ಯ ಸಂರಕ್ಷಣೆಯಂಥ ನಿರ್ದಿಷ್ಟ ಉದ್ದೇಶಕ್ಕಾಗಿ ರೂಪಿಸಲ್ಪಟ್ಟ ಜವಾಬ್ದಾರಿಯುತ ಪುರಸಭಾ ಪರಿಷತ್ತೊಂದು ತನ್ನ ಬಳಿ ಆರ್ಥಿಕ ಶಕ್ತಿಮ ಇಲ್ಲ ಎಂಬ ಕಾರಣಕ್ಕೆ ತನ್ನ ಮೂಲಭೂತ ಕರ್ತವ್ಯವನ್ನು ಕೈಬಿಡುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಹಕ್ಕಿನ ಜೀವಿವರ್ಗೀಕರಣದ ಗುರುತಿನ ಅನುಪಸ್ಥಿತಿಯಂಥ ತೋರಿಕೆಯ ಆಧಾರವನ್ನಿಟ್ಟುಕೊಂಡು ಪ್ರತಿಯೊಬ್ಬ ನಾಗರಿಕನಿಗೂ ಇರುವ ಖಾಸಗಿತನದ ಹಕ್ಕಿನ ಸಂರಕ್ಷಣೆ ಹಾಗೂ ಮುಂದುವರಿಕೆಗೆ ಸಂಬಂಧಿಸಿದ ತನ್ನ ಹೊಣೆಗಾರಿಕೆಯನ್ನು ಸರ್ಕಾರವೂ ಕೈಬಿಡಲಾಗದು. ಆದ್ದರಿಂದ, ವ್ಯಕ್ತಿಯೊಬ್ಬನ ಖಾಸಗಿತನದ ಹಕ್ಕಿನೊಳಗೆ ಅತಿಕ್ರಮಿಸುವಂಥ ಹಾದಿಗಳನ್ನು ಸೃಷ್ಟಿಸುವ, ಕಾನೂನಿನಿಂದ ಪ್ರಮಾಣೀಕರಿಸಲ್ಪಟ್ಟ ಯಾವುದೇ ಕಾರ್ಯವಿಧಾನವು ಯುಕ್ತ, ನ್ಯಾಯಸಮ್ಮತ ಮತ್ತು ಸಮಂಜಸವಾಗಿರಬೇಕೇ ವಿನಾ ಸ್ವೇಚ್ಛಾನುಸಾರಿ, ಅವಾಸ್ತವಿಕ ಅಥವಾ ದಮನಕಾರಿ ಆಗಿರಬಾರದು.

ಖಾಸಗಿತನದ ಮೂಲಭೂತ ಹಕ್ಕಿಗೆ ಸಂಬಂಧಿಸಿದ ನ್ಯಾಯಶಾಸ್ತ್ರದ ವಿಕಸನವು ಪ್ರಕರಣದಿಂದ ಪ್ರಕರಣಕ್ಕೆ ಮುಂದುವರಿಯುತ್ತಿರುವಾಗಲೇ, ಸಂಸತ್ತು ಸ್ವತಃ ಖಾಸಗಿತನದ ಹಕ್ಕೊಂದನ್ನು ಸ್ಪಷ್ಟವಾಗಿ ಗುರುತಿಸಿಬಿಟ್ಟಿದೆ/ಮಾನ್ಯಮಾಡಿಬಿಟ್ಟಿದೆ; ಖಾಸಗಿತನದ ಹಕ್ಕಿನ ಚಲಾವಣೆಯ ಕುರಿತಾಗಿರುವ, ಸಾಂವಿಧಾನಿಕವಾಗಿ ಅನುಜ್ಞಾರ್ಹವೆನಿಸಿರುವ ತರ್ಕಬದ್ಧ ಕಟ್ಟುಪಾಡುಗಳಿಗೆ ಹೊಂದಿಕೊಳ್ಳುವಂತೆ, ಶಾಸನಾತ್ಮಕ ಉಪಬಂಧಗಳಲ್ಲಿರುವ ಸದರಿ ಹಕ್ಕಿನ ಸಂರಕ್ಷಣೆಯನ್ನು ಪುನರುಚ್ಚರಿಸುವ ಮೂಲಕ ಅಥವಾ ಸೀಮಿತ ನಿರ್ಬಂಧಗಳನ್ನು ಪರಿಚಯಿಸುವ ಮೂಲಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಂವಿಧಾನಾತ್ಮಕ ಸ್ಥಾಪಿತ ವ್ಯವಸ್ಥೆಯ ಒಂದು ಅಂಗಭಾಗವೇ ಆಗಿರುವ ಸಂಸತ್ತು ಹೀಗೆ ಅಭಿವ್ಯಕ್ತಿಸಿರುವುದರಿಂದ, ಸರ್ಕಾರವು ನುಣುಚಿಕೊಳ್ಳಲಾಗದು; ಕಾರಣ, ಸರ್ಕಾರವು ಅದೇ ಸಂವಿಧಾನದ ಒಂದು ಸೃಷ್ಟಿಯಾಗಿದೆ ಮತ್ತು ಅದು ಸಂಸತ್ತಿಗೆ ಉತ್ತರದಾಯಿಯಾಗಿರುತ್ತದೆ.

ಈ ಹಿನ್ನೆಲೆಯಿಟ್ಟುಕೊಂಡು, ಸವೋಚ್ಚ ನ್ಯಾಯಾಲಯದ 9 ನ್ಯಾಯಮೂರ್ತಿಗಳ ನ್ಯಾಯಪೀಠವೊಂದು ‘ಕೆ.ಎಸ್. ಪುಟ್ಟಸ್ವಾಮಿ, (2017)‘ ಪ್ರಕರಣದಲ್ಲಿ, ಸಂವಿಧಾನದ ಭಾಗ 3ರ, ಅಂದರೆ ಮೂಲಭೂತ ಹಕ್ಕುಗಳನ್ನು ಒಳಗೊಂಡಿರುವ ಭಾಗದ ಅಡಿಯಲ್ಲಿ, ಖಾಸಗಿತನದ ಮೂಲಭೂತ ಹಕ್ಕೊಂದರ ಅಸ್ತಿತ್ವವಿದೆಯೇ ಎಂಬ ಸೀಮಿತ ಪ್ರಶ್ನೆಯನ್ನು ಪರಿಶೀಲಿಸುವಾಗ, ಖಾಸಗಿತನವು ಸಂವಿಧಾನದ ಭಾಗ 3ರ ಅಡಿಯಲ್ಲಿ ಒಂದು ಮೂಲಭೂತ ಹಕ್ಕಾಗಿದೆ ಎಂಬುದಾಗಿ ನಿಸ್ಸಂದಿಗ್ಧವಾಗಿ ಮತ್ತು ಏಕಭಿಪ್ರಾಯದೊಂದಿಗೆ ಸಮರ್ಥಿಸಿತು. ‘ಖಾಸಗಿತನ‘ ಎಂಬುದು, ಸಂವಿಧಾನದ ವಿಧಿ 21ರ ಅಡಿಯಲ್ಲಿನ ಜೀವನದ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಮೂಲತಃ ನೆಲೆಗೊಂಡಿರುವಂಥದ್ದು ಮಾತ್ರವಲ್ಲದೆ, ಸಂವಿಧಾನದ ಭಾಗ 3ರಲ್ಲಿ ಅಂತರ್ಗತವಾಗಿರುವ ಇತರ ಮೂಲಭೂತ ಹಕ್ಕುಗಳಿಂದ ಖಾತರಿಪಡಿಸಲಾಗಿರುವ ಸ್ವಾತಂತ್ರ್ಯ ಮತ್ತು ಘನತೆಯ ವಿಭಿನ್ನ ಮಗ್ಗುಲುಗಳಿಂದ ಹುಟ್ಟಿಕೊಂಡಿರುವಂಥದ್ದು ಎಂಬುದಾಗಿಯೂ ಈ ತೀರ್ಪು ಅಭಿಪ್ರಾಯಪಟ್ಟಿದೆ.

‘ವೈಯಕ್ತಿಕ ಅನ್ಯೋನ್ಯತೆಗಳು‘, ‘ಕೌಟುಂಬಿಕ ಜೀವನದ ಪಾವಿತ್ರ್ಯ‘, ‘ವಿವಾಹ‘, ‘ಸಂತಾನೋತ್ಪತ್ತಿ‘, ‘ಮನೆ‘, ಮತ್ತು ‘ಲೈಂಗಿಕ ದೃಷ್ಟಿಕೋನ‘ ಇವೆಲ್ಲವೂ ಖಾಸಗಿನದ ಕೇಂದ್ರಭಾಗದಲ್ಲಿ ಬರುವಂಥವು ಎಂಬುದು ನ್ಯಾಯಮೂರ್ತಿ ಚಂದ್ರಚೂಡ್​ರಿಂದ ಹೊಮ್ಮಿದ ಅಂತಿಮ ಅಭಿಪ್ರಾಯವಾಗಿದೆ. ಮೇಲಾಗಿ, ‘ಮಾಹಿತಿಯ ಖಾಸಗಿತನ‘ವು ಹಕ್ಕಿನ ಒಂದು ಸಾರಭೂತ ಮಗ್ಗುಲಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಚಂದ್ರಚೂಡ್, ಚೆಲಮೇಶ್ವರ್, ನಾರಿಮನ್ ಮತ್ತು ಕೌಲ್ ಅವರುಗಳು ಸಮರ್ಥಿಸಿರುವುದು ಸಮಂಜಸವಾಗೇ ಇದೆ.

ಆದ್ದರಿಂದ, ವ್ಯಕ್ತಿಯೋರ್ವನ ಖಾಸಗಿತನಕ್ಕೆ ಅತಿಕ್ರಮಪ್ರವೇಶವಾಗಿ ಪರಿಣಮಿಸುವ ಸರ್ಕಾರದ ಯಾವುದೇ ಕ್ರಮ ಅಥವಾ ನಡೆಯು, ಯುಕ್ತವೆಂದು ಅಂಗೀಕೃತವಾಗುವ ನಿಟ್ಟಿನಲ್ಲಿ 21ನೇ ವಿಧಿಯ ಪರೀಕ್ಷೆಯನ್ನು ಕನಿಷ್ಠಪಕ್ಷ ನೆರವೇರಿಸಬೇಕಾಗುತ್ತದೆ. ಒಂದು ‘ಪರಾಮರ್ಶನ ನ್ಯಾಯಾಲಯ‘ವಾಗಿ ತನ್ನ ಸ್ವರೂಪದ ಕುರಿತು ಜಾಗೃತವಾಗಿರುವ ಸವೋಚ್ಚ ನ್ಯಾಯಾಲಯವು, ಖಾಸಗಿತನವು ಮೂಲಭೂತ ಹಕ್ಕು ಹೌದೇ ಅಲ್ಲವೇ ಎಂಬುದನ್ನು ಗುರುತಿಸುವುದಕ್ಕೆ ಮಾತ್ರವೇ ತನ್ನ ನಿರ್ಣಯವನ್ನು ಸೀಮಿತಗೊಳಿಸಿಕೊಂಡಿದೆ ಮತ್ತು ಅದರ ಪರೀಕ್ಷೆಗಳು, ತರುವಾಯದ ಇತಿಮಿತಿಗಳ ಪಟ್ಟೀಕರಣವನ್ನು ಅಥವಾ ದಾಖಲು ಮಾಡುವಿಕೆಯನ್ನು ಅರ್ಧಕ್ಕೇ ನಿಲ್ಲಿಸಿದೆ. ಕಾರಣ, ಆಯಾ ಪ್ರಕರಣದ ಸ್ವರೂಪವನ್ನು ಆಧರಿಸಿ ನ್ಯಾಯಾಂಗವು ಶಾಸನರೀತ್ಯಾ ತೀರ್ಪನ್ನು ನೀಡಬೇಕಾಗುತ್ತದೆ.

ಸರ್ಕಾರೇತರ ಕಾರ್ಯಭಾಗಿಗಳ ವಿಷಯದಲ್ಲಿ ಹೇಳುವುದಾದರೆ, ‘ದತ್ತಾಂಶ/ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದ ಆಡಳಿತ ವ್ಯವಸ್ಥೆಯೊಂದರ ಸೂತ್ರೀಕರಣವು ಒಂದು ಸಂಕೀರ್ಣ ಕಸರತ್ತಾಗಿದ್ದು, ಇದರ ನಿರ್ವಹಣೆಯನ್ನು ಸರ್ಕಾರವೇ ಕೈಗೆತ್ತಿಕೊಳ್ಳುವುದು ಅಗತ್ಯವಾಗಿದೆ‘ ಎಂಬ ಅಭಿಪ್ರಾಯ ಹೊರಹೊಮ್ಮಿರುವುದು ಸಮಂಜಸವಾಗೇ ಇದೆ. ಅದೇನೇ ಇದ್ದರೂ, ದತ್ತಾಂಶ ಸಂರಕ್ಷಣೆಯ ರೂಢಮಾದರಿಗಳ ಮರುಪರಿಶೀಲನೆ ಹಾಗೂ ದತ್ತಾಂಶ ಸಂರಕ್ಷಣೆಯ ಕರಡು ಮಸೂದೆಯೊಂದರ ಶಿಫಾರಸಿನ ಉದ್ದೇಶಕ್ಕಾಗಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅಧ್ಯಕ್ಷತೆಯ ಸಮಿತಿಯೊಂದನ್ನು ರೂಪಿಸಿರುವುದನ್ನು ಅರಿತಿರುವ ಸವೋಚ್ಚ ನ್ಯಾಯಾಲಯವು, ‘ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಕೇಂದ್ರ ಸರ್ಕಾರ‘ ಪ್ರಕರಣದಲ್ಲಿ ಸೂಚಿಸಲಾಗಿರುವ ಅಂಶಗಳಡೆಗೆ ಯಥೋಚಿತ ಗಮನ ಹರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

‘ನಿನ್ನೆಯೆಂಬುದೊಂದು ಇತಿಹಾಸ, ನಾಳೆಯೆಂಬುದೊಂದು ನಿಗೂಢ ಮತ್ತು ವರ್ತಮಾನವೆಂಬುದು ದೇವರ ಒಂದು ಕೊಡುಗೆ‘ ಎಂಬ ಜಾಣನುಡಿ ಗೊತ್ತಿರುವಂಥದ್ದೇ. ಆದ್ದರಿಂದ, ಡಿಜಿಟಲೀಕೃತ ಪ್ರಪಂಚದಿಂದ ಮತ್ತು ನಾಳಿನ ನಿಗೂಢತೆಗಳಿಂದ ಒದಗುವ ಸಂಭಾವ್ಯ ಅಪಾಯಗಳಿಂದ ಖಾಸಗಿತನದ ಹಕ್ಕನ್ನು ಸರ್ಕಾರವು ಸಕಾರಾತ್ಮಕವಾಗಿ ಮತ್ತು ಸಕ್ರಿಯವಾಗಿ ರಕ್ಷಿಸುತ್ತದೆ ಎಂಬುದರ ಕುರಿತು ನಾವು ಆಶಾವಾದಿಗಳಾಗಿದ್ದೇವೆ. ಇಂಥದೊಂದು ಹಕ್ಕಿನ ಅಸ್ತಿತ್ವ ಮತ್ತು ಮಾನ್ಯತೆಯನ್ನು ನಿರಾಕರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಕಂಡುಬಂದ ಯತ್ನಗಳ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನೂ ನಾವಿಟ್ಟುಕೊಂಡಿದ್ದೇವೆ. ಇಂದು ಎದುರಾಗಿರುವ ಸವಾಲನ್ನು ಸರ್ಕಾರ ಸಮರ್ಥವಾಗಿ ಎದುರಿಸುವಂತಾಗಲಿ ಎಂಬುದು ನಮ್ಮ ಹಾರೈಕೆ.

(ಲೇಖಕರು ಸುಪ್ರೀಂ ಕೋರ್ಟಿನಲ್ಲಿ ಈಚೆಗೆ ಖಾಸಗಿತನದ ಅರ್ಜಿಯ ಪರವಾಗಿ ವಾದಿಸಿದ್ದರು. ಹಾಗೂ ಮುಂದೆ ನಡೆಯುವ ಆಧಾರ್ ಕುರಿತ ವಿಚಾರಣೆಯಲ್ಲಿಯೂ ವಾದ ಮಂಡಿಸಲಿದ್ದಾರೆ).

ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

 

Leave a Reply

Your email address will not be published. Required fields are marked *

Back To Top