Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಖಾಲಿಹಾಳೆಯಂತೆ ಆಗುವುದೇ ಅಧ್ಯಾತ್ಮ ಸಾಧನೆ

Friday, 08.12.2017, 3:03 AM       No Comments

ಖಾಲಿಹಾಳೆಯಂತಿದ್ದರೆ ಏನನ್ನು ಬೇಕಾದರೂ ಗ್ರಹಿಸಬಹುದು. ಏನಾದರೂ ಬರೆದ ಹಾಳೆಯ ಮೇಲೆ, ಬೇರೇನನ್ನಾದರೂ ಬರೆದರೆ ಗೊಂದಲ ಉಂಟಾಗುತ್ತದೆ. ಅಧ್ಯಾತ್ಮ ಸಾಧನೆ ಎನ್ನುವುದು ಏನನ್ನೋ ತಿಳಿದುಕೊಳ್ಳುವುದಲ್ಲ, ಜ್ಞಾನಿಯಾಗುವುದಲ್ಲ; ಬದಲಿಗೆ ಖಾಲಿಹಾಳೆಯಂತೆ ಆಗುವುದು. ಅದರ ಮೇಲೆ ಏನನ್ನು ಬೇಕಾದರೂ ಬಿಡಿಸಬಹುದು, ‘ಜೀವನ’ವನ್ನು ರಚಿಸಬಹುದು.

ಈ ಜಗತ್ತಿನಲ್ಲಿ ತನ್ನ ಜತೆಯ ಇತರ ಸೃಷ್ಟಿಗಳಿಂದ ಮತ್ತು ಸೃಷ್ಟಿಯ ಮೂಲದಿಂದ ಮುಕ್ತವಾದ, ಸಂಬಂಧಗಳಿಂದ ಮುಕ್ತವಾದ ಯಾವುದೇ ಸೃಷ್ಟಿ ಇಲ್ಲವೆಂದಾದರೆ, ಮತ್ತು ಈಗಾಗಲೇ ಒಂದು ಅನಿವಾರ್ಯ ಸಂಬಂಧ ಇದೆಯಾದರೆ, ಮಾಡಲು ಇನ್ನೇನಿದೆ? ಕೇವಲ ಸಂಬಂಧದ ಗುಣಮಟ್ಟವನ್ನು ಬದಲಾಯಿಸುವುದು. ನೀವು ನೆಲದ ಮೇಲೆ ಕುಳಿತರೆ, ನೆಲ ನಿಮ್ಮನ್ನು ಚುಚ್ಚುತ್ತದೆಯಾ ಅಥವಾ ಕುಳಿತುಕೊಳ್ಳಲು ಆಸ್ಪದ ನೀಡಿದೆ ಎಂದು ನಿಮಗೆ ಸಂತೋಷವಾ? ನೀವು ಸಂಬಂಧವನ್ನು ಹೇಗೆ ಹಿಡಿದಿಟ್ಟುಕೊಳ್ಳುವಿರಿ ಎನ್ನುವುದು ಭಾರಿ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂಬುದನ್ನು ಮರೆಯದಿರಿ. ಈ ನೆಲ-ಜಗತ್ತು ನಿಮ್ಮನ್ನು ಚುಚ್ಚುತ್ತಿದೆ ಎಂದು ಅದನ್ನು ಶಪಿಸಬಹುದು ಅಥವಾ ಕುಳಿತುಕೊಳ್ಳಲು ತನ್ನಲ್ಲಿ ಸ್ವಲ್ಪ ಜಾಗವನ್ನು ಕೊಟ್ಟಿದೆ ಎಂಬ ಕಾರಣಕ್ಕಾಗಿ ಈ ಜಗತ್ತನ್ನು ಹೊಗಳಬಹುದು. ಆಯ್ಕೆ ನಿಮ್ಮದು.

ಪರಿಪೂರ್ಣ ಅರಿವನ್ನು ಹೊಂದಿ: ಸಂಬಂಧವು ಭೌತಿಕ, ಮಾನಸಿಕ, ಮನೋವೈಜ್ಞಾನಿಕ, ಭಾವನಾತ್ಮಕವಾಗಿರಬಹುದು ಅಥವಾ ‘ಜೀವನ’ ಸಂಬಂಧವಾಗಿರಬಹುದು. ನೀವು ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರೆ ವಿವಿಧ ರೀತಿಯ ವಸ್ತುಗಳ ಬಗ್ಗೆ ತಿಳಿವಳಿಕೆ ಹೊಂದಬಹುದು. ಆದರೆ ನಿಮಗೆ ಅದು ‘ನಿಜವಾಗಿ’ ಏನೆಂಬುದು ತಿಳಿದಿರುವುದಿಲ್ಲ. ನಿಮಗೆ ಜೀವನದ ವಿವಿಧ ಪರಿಮಳಗಳು ತಿಳಿದಿರಬಹುದು; ಆದರೆ ಅವುಗಳ ರುಚಿ ಅಥವಾ ಸವಿ ಏನೆಂಬುದು ತಿಳಿದಿರುವುದಿಲ್ಲ. ಸಂಪೂರ್ಣ ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ, ಬದುಕನ್ನು ನಿಮ್ಮ ಶರೀರ, ಮನಸ್ಸು ಮತ್ತು ಭಾವನೆಗಳೆಡೆಗಷ್ಟೇ ಅಲ್ಲದೆ ಜೀವನದ ಸೂಕ್ಷ್ಮ ಆಯಾಮಗಳತ್ತ ಬದಲಿಸುವುದೇ ಆಗಿದೆ. ಎಲ್ಲಾ ತಿಳಿವಳಿಕೆಯೂ ಇದಿಷ್ಟರಿಂದಲೇ ಬರುತ್ತದೆ.

ನಾನು ಹೀಗೇ ಕವಿತೆಯೊಂದನ್ನು ಬರೆಯುತ್ತಿದ್ದೆ. ಅದು ಹೀಗಿದೆ-

‘ಒಬ್ಬ ಫಟಿಂಗ ಚೆನ್ನಾಗಿ ತಿಳಿದುಕೊಂಡಿರುವ

ಒಬ್ಬ ಅವಿವೇಕಿ ತಿಳಿದುಕೊಂಡಿರುವ

ಆದರೆ ಒಬ್ಬ ಋಷಿ ಒಂದು ಖಾಲಿಹಾಳೆ’.

ಖಾಲಿಹಾಳೆಯಾಗಿರುವ ಕಾರಣ ಋಷಿಯು ಏನನ್ನು ಬೇಕಾದರೂ ಗ್ರಹಿಸಬಹುದು. ಏನಾದರೂ ಬರೆದ ಹಾಳೆಯ ಮೇಲೆ, ಬೇರೆ ಏನನ್ನಾದರೂ ಬರೆದರೆ, ಅದರಿಂದ ಗೊಂದಲ ಉಂಟಾಗುತ್ತದೆ. ಪೂರ್ತಿಯಾಗಿ ಬರೆದಿರುವ ಹಾಳೆಯ ಮೇಲೆ ನೀವು ಏನು ಬರೆದರೂ, ಅದು ಎಷ್ಟೇ ಬೆಲೆಬಾಳುವಂತಿದ್ದರೂ ಅದು ಗಜಿಬಿಜಿಯಾಗಿರುತ್ತದೆ.

ಅಧ್ಯಾತ್ಮ ಸಾಧನೆ ಎನ್ನುವುದು ಏನನ್ನೋ ತಿಳಿದುಕೊಳ್ಳುವುದಲ್ಲ, ಜ್ಞಾನಿಯಾಗುವುದಲ್ಲ; ಬದಲಿಗೆ ಒಂದು ಖಾಲಿಹಾಳೆಯಂತೆ ಆಗುವುದು. ಅದರ ಮೇಲೆ ಏನನ್ನು ಬೇಕಾದರೂ ಬಿಡಿಸಬಹುದು. ನೀವು ಖಾಲಿಹಾಳೆಯಂತೆ ಆಗಿ ಮತ್ತು ಹಾಗೆಯೇ ಉಳಿದರೆ, ‘ಜೀವನ’ವನ್ನು ಅದರ ಮೇಲೆ ರಚಿಸಬಹುದು. ನಿಮ್ಮ ಊರಿನ ಚಿಕ್ಕ ಸಿನಿಮಾ ಪರದೆಯ ಮೇಲೆ ಅದೆಷ್ಟೋ ಸಿನಿಮಾಗಳನ್ನು ನೋಡಿರಬಹುದು. ಆದರೆ ಬೆಳಕು ಎನ್ನುವುದು ಸೂಕ್ಷ್ಮವಾದ್ದರಿಂದ ಅದು ಪರದೆಯನ್ನೇನೂ ವಿಕೃತಗೊಳಿಸಿಲ್ಲ. ಬದಲಿಗೆ ಕ್ರೆಯಾನ್ ಅನ್ನೋ ಅಥವಾ ಬಣ್ಣದ ಬ್ರಷ್ ಅನ್ನೋ ಬಳಸಿದ್ದರೆ ಆ ಪರದೆಗಳನ್ನು ಬಹಳ ಕಾಲದ ಹಿಂದೆಯೇ ಎಸೆದುಬಿಡಬೇಕಾಗಿರುತ್ತಿತ್ತು. ಹಿಂದೆ ತೋರಿಸಿದ ಸಿನಿಮಾದ ಚಿಕ್ಕಪುಟ್ಟ ತುಣುಕುಗಳು ಪರದೆಯ ಮೇಲೆ ಉಳಿದುಬಿಟ್ಟರೆ, ಮುಂದಿನ ಸಿನಿಮಾವನ್ನು ಪರದೆಯ ಮೇಲೆ ಬಿಟ್ಟಾಗ ಆ ಸಿನಿಮಾ ದುರಂತವಾಗಿಬಿಡುತ್ತದೆ ಅಲ್ಲವೇ? ಇಷ್ಟೇ ಆಗುತ್ತಿರುವುದು ಜೀವನದಲ್ಲಿ, ಹಿಂದಿನ ಸಿನಿಮಾಗಳೆಲ್ಲಾ ತಮ್ಮ ತಮ್ಮ ಮುದ್ರೆಗಳನ್ನು ಉಳಿಸಿಬಿಟ್ಟಿವೆ.

ವೈಭವೀಕರಿಸಿಕೊಳ್ಳಬೇಡಿ: ಅಂದರೆ, ಬದುಕಿನ ಜತೆಗಿನ ಮತ್ತು ಅದರ ಸೃಷ್ಟಿಕರ್ತನೊಂದಿಗಿನ ಸಂಬಂಧವನ್ನು ಬದಲಾಯಿಸುವುದು ಹೇಗೆ? ಇದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇದೊಂದು ನಿಮ್ಮ ಆಯ್ಕೆಯ ಸಂಬಂಧವಲ್ಲ. ನೀವು ಹೇಗಾದರೂ ಕುಳಿತುಕೊಳ್ಳಿ, ನಿಂತುಕೊಳ್ಳಿ ಅಥವಾ ಮಲಗಿಕೊಳ್ಳಿ, ನೀವೊಂದು ಸಂಬಂಧವನ್ನು ಹಿಡಿದುಕೊಂಡಿದ್ದೀರಿ ಎಂದರ್ಥ. ಅದನ್ನು ನೀವೇನೂ ಮಾಡಲು ಬರುವುದಿಲ್ಲ. ನಿಮಗೆ ಅದರ ಬಗ್ಗೆ ತಿಳಿದಿಲ್ಲದಿರಬಹುದು. ಏನೇನು ಭೌತಿಕವೋ ಅವೆಲ್ಲವನ್ನೂ ನೀವು ಖಡಾಖಂಡಿತವಾಗಿ ಮೀರಿ ಮುಂದೆಹೋಗುವ ತನಕ ಬೇರೇನೂ ದಾರಿ ಇಲ್ಲ. ಸಮಸ್ಯೆಯ ಅರ್ಧಭಾಗ ಅಲ್ಲಿಗೆ ಪರಿಹಾರವಾಯಿತು. ಉಳಿದರ್ಧ ತೀರಾ ಸರಳ, ಸುಲಭ. ನಿಮ್ಮನ್ನು ನೀವು ವೈಭವೀಕರಿಸಿಕೊಳ್ಳಬೇಡಿ. ನೀವು ಈ ಸೃಷ್ಟಿಯಲ್ಲಿ ಅದೆಷ್ಟು ಸಣ್ಣಜೀವಿ ಎನ್ನುವುದನ್ನು ನಿರಂತರವಾಗಿ ಗಮನಿಸುತ್ತ ಹೋಗಿ.

ಯಾರೋ ಮೂರೂವರೆ ಅಡಿ ಇರುವವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ನೀವು ಯಾವಾಗಲೂ ಇದನ್ನೇ ಮಾಡುತ್ತಿದ್ದೀರಿ. ಒಬ್ಬ ಮೂರ್ಖನೊಂದಿಗೆ ನಿಮ್ಮನ್ನು ಹೋಲಿಸಿಕೊಂಡು ನೀವು ಬಹುದೊಡ್ಡ ಬುದ್ಧಿವಂತ ಎಂದುಕೊಳ್ಳುತ್ತಿದ್ದೀರಿ. ಪ್ರತಿದಿನದ ಊಟಕ್ಕೂ ಕಷ್ಟವಿರುವ ಬಡಜನರೊಂದಿಗೆ ಹೋಲಿಸಿಕೊಂಡು ನೀವು ಶ್ರೀಮಂತರು ಎಂದುಕೊಳ್ಳುತ್ತಿದ್ದೀರಿ. ಪರ್ವತದತ್ತ ಆಕಾಶದತ್ತ ಕಣ್ಣುಹಾಯಿಸಿ, ನೀವೆಷ್ಟು ಸಣ್ಣವರು ನೋಡಿಕೊಳ್ಳಿ. ಆಕಾಶದ ಅನಂತತೆಯತ್ತ, ಆ ದೂರದತ್ತ ನೋಡಿ, ನಿಮ್ಮ ದೃಷ್ಟಿ ಅದೆಷ್ಟು ಚಿಕ್ಕದಾಗಿದೆ ನೋಡಿಕೊಳ್ಳಿ. ಹೀಗೆ ನಿಮ್ಮನ್ನು ನೀವು ಸರಿಯಾದ ಜಾಗದಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಹೊಗಳಿಕೊಳ್ಳುವುದೂ ಬೇಕಿಲ್ಲ, ಹೀಯಾಳಿಸಿಕೊಳ್ಳುವುದೂ ಬೇಕಿಲ್ಲ. ಕೇವಲ ಈ ಸೃಷ್ಟಿಯಲ್ಲಿ, ಬದುಕಿನಲ್ಲಿ ನಿಮ್ಮ ಸ್ಥಾನ ಏನು, ಎಷ್ಟು ಎಂಬುದನ್ನು ಗಮನಿಸುತ್ತ ಹೋಗಿ. ‘ಇದಿಷ್ಟೇ ನಾನು, ನಾನು ಏನೂ ಅಲ್ಲ, ಏನೂ ಇಲ್ಲದರ ತುಣುಕು ಅಷ್ಟೇ’ ಎಂದು ನಿಮಗೆ ನೀವು ನಿರಂತರವಾಗಿ ಹೇಳಿಕೊಳ್ಳುತ್ತಿರಬೇಕು. ನೀವ್ಯಾರು ಮಹಾ? ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ? ನಿಮ್ಮ ದೊಡ್ಡತನ, ಪೆದ್ದುತನ ಅನ್ನುವುದಕ್ಕೆ ಏನೂ ಅರ್ಥವಿಲ್ಲ. ನಾಳೆ ಬೆಳಗ್ಗೆ ನೀವು ಕಾಣೆಯಾಗಿಬಿಟ್ಟರೂ, ಇಡೀ ಜಗತ್ತು ಸುಂದರವಾಗಿಯೇ ಇರುತ್ತದೆ.

ಜಾಣತನ ಎನ್ನುವುದು ಬುದ್ಧಿವಂತಿಕೆ ಅಲ್ಲ: ಇದು ನಿಮಗೆ, ನನಗೆ ಎಲ್ಲರಿಗೂ ಹೀಗೆಯೇ. ಇದನ್ನು ನೀವು ಹೆಚ್ಚೆಚ್ಚು ಮತ್ತು ಬೇಗ ಅರ್ಥಮಾಡಿಕೊಳ್ಳದಿದ್ದರೆ ನಿಮ್ಮ ಜೀವನ ಮೂರ್ಖತನದಲ್ಲೇ ಇರುತ್ತದೆ. ನೀವು ನಿಜಸ್ಥಿತಿಗೆ ಹತ್ತಿರವಾದಷ್ಟೂ ಹೆಚ್ಚು ಜಾಣರಾಗಿ ಬದುಕುತ್ತೀರಿ. ಜಾಣತನ ಎನ್ನುವುದು ಬುದ್ಧಿವಂತಿಕೆ ಅಲ್ಲ. ಈ ಜಗದಲ್ಲಿ ಜಾಣರಿದ್ದಾರೆ, ಬುದ್ಧಿವಂತರಿದ್ದಾರೆ. ಬುದ್ಧಿವಂತರು ಚೆನ್ನಾಗಿ ವಿಷಯ ತಿಳಿದುಕೊಂಡಿರುತ್ತಾರೆ. ಬುದ್ಧಿವಂತರು ಯಾರು ಎನ್ನುವುದನ್ನು ನಾನು ಈಗಾಗಲೇ ಹೇಳಿದ್ದೇನೆ. ವಿಚಾರವನ್ನು ತಿಳಿದುಕೊಂಡಿರುವುದು ಜಾಣತನವಲ್ಲ. ಬೇಕಾದಷ್ಟು ಅಸಂಬದ್ಧ-ಅವಿವೇಕವನ್ನು ನಿಮ್ಮಲ್ಲಿ ತುಂಬಿಸಲಾಗಿದೆ. ಅದರಲ್ಲೂ ನೀವು ಪಾಶ್ಚಾತ್ಯ ಸಮಾಜದಿಂದ ಬಂದವರಾದರೆ! ಅಲ್ಲಿ ಎಲ್ಲರೂ ‘ದೇವರೇ ಪ್ರೀತಿ’ ಎನ್ನುತ್ತಿರುತ್ತಾರೆ. ನಿಮಗೆ ಅದು ಗ್ಯಾರಂಟಿ ಗೊತ್ತು ಎಂದೇನೂ ಇಲ್ಲ, ಹೌದಲ್ಲವೇ? ಜೀವನ ನಿಮ್ಮನ್ನು ಎಡಬಲದಿಂದ ಗುದ್ದುತ್ತ ಇದ್ದರೆ ‘ದೇವರು ಅಂದರೆ ಚಿತ್ರಹಿಂಸೆ’ ಎನ್ನುತ್ತೀರಿ. ಜೀವನ ಚೆನ್ನಾಗಿ ನಡೆಯುತ್ತಿದ್ದಾಗ ‘ದೇವರು ಅಂದರೆ ಪ್ರೀತಿ’ ಎಂದು ನಿಮಗನ್ನಿಸುತ್ತದೆ. ನಿಮಗೆ ಅವನು ಪ್ರೀತಿಯಾ ಅಲ್ಲವಾ ಅಂತ ಗೊತ್ತಿಲ್ಲ. ಅವನು ಸಹಾನುಭೂತಿ ಉಳ್ಳವನೇ ಅಲ್ಲವೇ ಗೊತ್ತಿಲ್ಲ. ಅವನ ಬಗ್ಗೆ ಜನ ಮಾತನಾಡುವ ಏನೆಲ್ಲಾ ಅಸಂಬದ್ಧದ ಬಗ್ಗೆ ಗೊತ್ತಿಲ್ಲ. ಆದರೆ ಪ್ರತಿಯೊಂದು ಅಣು, ಪ್ರತಿಯೊಂದು ಕೋಶ, ಪ್ರತಿಯೊಂದು ಎಲೆ, ಪ್ರತಿಯೊಂದು ಮರ, ಈ ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಯನ್ನೂ ನೀವು ನೋಡಿದರೆ ಒಂದಂತೂ ಸ್ಪಷ್ಟ… ಅವನು ಅತಿ ಅತಿಜಾಣ, ಹೌದಲ್ಲವಾ?

ಅವನೊಂದಿಗಿನ ಪ್ರೀತಿಯ ಸಂಬಂಧಗಳ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೆ ನೀವು ಅವನ ಜಾಣತನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವನ ಪ್ರೀತಿ ವ್ಯಕ್ತಪಡುವಂಥದ್ದಲ್ಲ. ನೀವು ಎಲ್ಲೆಲ್ಲಿ ನೋಡುತ್ತೀರೋ ಅಲ್ಲೆಲ್ಲ ಸೃಷ್ಟಿಕರ್ತನ ಜಾಣತನ ವ್ಯಕ್ತವಾಗುತ್ತದೆ. ಇಷ್ಟೆಲ್ಲ ಮೇಧಾಶಕ್ತಿಯಿರುವ ನಮಗೆ, ಲಕ್ಷಾಂತರ ವರ್ಷಗಳ ವಿಕಾಸದ ನಂತರವೂ ಒಂದೇ ಒಂದು ಅಣುವನ್ನೂ ಜತೆಮಾಡಲು ಸಾಧ್ಯವಿಲ್ಲ. ಜಾಣತನದ ಒಂದು ಅತ್ಯಂತ ಪ್ರಮುಖ ಗುಣವೆಂದರೆ ಭೇದಭಾವವಿಲ್ಲದ ಗುಣ. ಭೇದಭಾವ ಅನ್ನುವುದು ನಿಮಗೆ ಬುದ್ಧಿವಂತಿಕೆಯಿಂದ ಬರುತ್ತೆ. ಜಾಣತನಕ್ಕೆ ಭೇದಭಾವದ ಗುಣ ಇಲ್ಲ.

ನೀವು ಭೇದಭಾವ ಮಾಡುವುದಿಲ್ಲ ಎಂಬುದನ್ನು ಅಂತರಾಳದಲ್ಲಿ ಬೇರೂರಿಸಿಕೊಳ್ಳಿ. ಯಾರೋ ಒಬ್ಬರು ದೊಡ್ಡ ಮನುಷ್ಯರು, ಮತ್ತೊಬ್ಬರು ಸಣ್ಣವರು, ಒಬ್ಬರು ಗಂಡು, ಮತ್ತೊಬ್ಬರು ಹೆಣ್ಣು, ಒಬ್ಬರು ದೇವರು, ಮತ್ತೊಬ್ಬರು ರಾಕ್ಷಸ, ಅದೊಂದು ಪರ್ವತ, ಇದೊಂದು ಗುಡ್ಡ- ಇವೆಲ್ಲವನ್ನೂ ಒಂದೇ ರೀತಿ ನೋಡಿ. ಎಲ್ಲವನ್ನೂ ಒಂದೇ ಎಂದು ನೋಡಿ. ದೇವರ ವಿಚಾರದಲ್ಲೂ ಇದೇ ಮಾಡಿ. ಏಕೆಂದರೆ, ಭಕ್ತಿ ಎನ್ನುವುದು ಭೇದಭಾವ ಮಾಡದ ಬುದ್ಧಿಶಕ್ತಿ. ನೀವು ಭೇದಭಾವ ಮಾಡುವ ಬುದ್ಧಿ ಹೊಂದಿದರೆ ಆಗ ಸೃಷ್ಟಿಕರ್ತನಿಂದ ದೂರ, ಬಹುದೂರ ಹೋಗುತ್ತೀರಿ. ನಿಮ್ಮನ್ನು ನೀವೇ ಅತಿ ದೊಡ್ಡದಾಗಿ ಕಲ್ಪಿಸಿಕೊಂಡರೆ, ತನ್ನೊಳಗೆ ತಾನೇ ಬೃಹತ್ತಾಗಿ ಹಿಗ್ಗಿಕೊಂಡ ಈ ಸೃಷ್ಟಿಯ ಅಣುರೇಣು ತೃಣದಲ್ಲಿ ಮತ್ತಷ್ಟು ತೃಣವಾಗಿ ಹೋಗುತ್ತೀರಿ. ನೀವು ಭೇದಭಾವ ಮಾಡದಿರುವ ಬುದ್ಧಿಯವರಾದರೆ ಆಗ ಈ ಸೃಷ್ಟಿಯ ಮೂಲಕರ್ತನಿಗೆ ಹತ್ತಿರವಾಗುತ್ತಾ ಹೋಗುತ್ತೀರಿ.

ಸಂಬಂಧಗಳನ್ನು ಬದಲಾಯಿಸುವುದು ಅಂದರೆ ಎಲ್ಲವನ್ನೂ ನಾನು, ಅದು, ಇದು ಎಂದು ಕಾಣುವುದನ್ನು ಬಿಟ್ಟು ಎಲ್ಲವೂ ‘ಇದು’ ಮತ್ತು ‘ಇದೇ’ ಎಂದು ಕಾಣುವುದು ಎಂದರ್ಥ. ದರ್ಶನದಲ್ಲಿ ಇರುವುದು ಎಂದರೆ ಸಂಬಂಧಗಳನ್ನು ಬದಲಾಯಿಸುವುದು, ಭೇದಭಾವ ರಹಿತವಾದ ಬುದ್ಧಿಶಕ್ತಿಯನ್ನು ಹೊಂದುವುದು, ಸುಮ್ಮನೇ ಒಂದು ಜೀವವಾಗಿ ಇರುವುದು.

ದರ್ಶನದಲ್ಲಿ ಇರುವುದು ಎಂದರೆ ಸಂಬಂಧಗಳನ್ನು ಬದಲಾಯಿಸುವುದು, ಭೇದಭಾವ ರಹಿತವಾದ ಬುದ್ಧಿಶಕ್ತಿಯನ್ನು ಹೊಂದುವುದು, ಸುಮ್ಮನೇ ಒಂದು ಜೀವವಾಗಿ ಇರುವುದು

-ಸದ್ಗುರು

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

(ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ[email protected]))

Leave a Reply

Your email address will not be published. Required fields are marked *

Back To Top