Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಕ್ರೆಡಿಟ್ ರೇಟಿಂಗ್ ಹೆಚ್ಚಳ ಅನುಕೂಲ ಬಹಳ

Friday, 08.12.2017, 3:02 AM       No Comments

ಮೂಡಿ’ಸ್ ನೀಡಿದ ಶ್ರೇಯಾಂಕ ವರ್ಧನೆಯಿಂದಾಗಿ ಷೇರುಮಾರುಕಟ್ಟೆಗಳು ಏರುಗತಿ ಕಾಯ್ದುಕೊಂಡಿವೆ. ರೂಪಾಯಿಯ ಬಲವರ್ಧನೆಗೂ ಇದು ಪೂರಕವಾಗಿದೆ. ಅಂತಾರಾಷ್ಟ್ರೀಯ ಸಾಲಗಾರಿಕೆಯ ವೆಚ್ಚಗಳು ತಗ್ಗಲಿದ್ದು, ಬ್ಯಾಂಕುಗಳು ಬಡ್ಡಿದರಗಳನ್ನು ತಗ್ಗಿಸಬೇಕಾದ ನಿರ್ಬಂಧಕ್ಕೆ ಒಳಗಾಗಲಿವೆ. ಒಟ್ಟಾರೆ ಹೇಳುವುದಾದರೆ, ಆರ್ಥಿಕತೆಗೆ ಮಹತ್ತರ ಹುರುಪು, ರಭಸ ದಕ್ಕಲಿವೆ.

ದೇಶವೊಂದರ ಅರ್ಥವ್ಯವಸ್ಥೆ, ವಿದೇಶಿ ಹೂಡಿಕೆ, ಸಾಲಯೋಗ್ಯತೆಯ ಪರಿಸ್ಥಿತಿ ಮುಂತಾದವುಗಳನ್ನು ಮೌಲ್ಯಮಾಪನ ಮಾಡುವ ಸಂಸ್ಥೆಯಾದ ಮೂಡಿ’ಸ್ ಇತ್ತೀಚೆಗೆ ಭಾರತದ ಕ್ರೆಡಿಟ್ ರೇಟಿಂಗ್​ನಲ್ಲಿ ಹೆಚ್ಚಳ ಮಾಡಿದ್ದು ಗೊತ್ತಿರುವಂಥದ್ದೇ. ಈ ಕುರಿತಾದ ವಿಸõತ ಚರ್ಚೆಗಳು ಇನ್ನೂ ನಡೆಯುತ್ತಿವೆ. ಕ್ರೆಡಿಟ್ ರೇಟಿಂಗ್ ಪರಿಕಲ್ಪನೆ ಅದರಿಂದಾಗುವ ಪರಿಣಾಮ ಇತ್ಯಾದಿ ಬಗ್ಗೆ ಒಂದಷ್ಟು ಅಂಶಗಳ ಕುರಿತು ಇಲ್ಲಿ ಅವಲೋಕಿಸೋಣ.

‘ಯಾವುದೇ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಸುದೀರ್ಘ ಕಾಲದವರೆಗೆ ನಿಮ್ಮ ಅಂಕೆಯಲ್ಲಿ/ಅಧೀನದಲ್ಲಿ ಇಟ್ಟುಕೊಳ್ಳಲಾಗದು’ ಎಂಬುದೊಂದು ಮಾತಿದೆ. ಮೂಡಿ’ಸ್​ನಂಥ ಅಗ್ರಗಣ್ಯ ಅಂತಾರಾಷ್ಟ್ರೀಯ ಸಂಸ್ಥೆ ಘೋಷಿಸಿದ ಭಾರತದ ಕ್ರೆಡಿಟ್ ರೇಟಿಂಗ್ ಉನ್ನತೀಕರಣದ ವಿಷಯದಲ್ಲಂತೂ ಈ ಮಾತು ಸೂಕ್ತವಾಗೇ ಹೊಂದಿಕೊಳ್ಳುತ್ತದೆ ಎನ್ನಬೇಕು. ಒಂದು ದಶಕಕ್ಕೂ ಹೆಚ್ಚಿನ ಸುದೀರ್ಘ ಅಂತರದ ನಂತರ, ಭಾರತದ ರೇಟಿಂಗ್ ಹೀಗೆ ಒಂದು ಮೆಟ್ಟಿಲು ಮೇಲಕ್ಕೇರಿದೆ. ‘ಬಿಎಎ3’ರಿಂದ ಬಿಎಎ2’ ಶ್ರೇಯಾಂಕಕ್ಕೆ ಆದ ಈ ಬದಲಾವಣೆಯು, ದೇಶದ ಆರ್ಥಿಕ ಪರಿಸ್ಥಿತಿ ಕುರಿತಾದ ಅಭಿಪ್ರಾಯ/ಎಣಿಕೆಗೆ ನಿರ್ಣಾಯಕವಾಗಿದೆ. ಅಷ್ಟೇ ಅಲ್ಲ, ಸರ್ಕಾರ ಚಾಲನೆ ನೀಡಿದ ಸುಧಾರಣಾ ಕ್ರಮಗಳನ್ನು ಇಂಥ ಶ್ರೇಯಾಂಕ ವರ್ಧನೆಗಳಷ್ಟೇ ಊರ್ಜಿತಗೊಳಿಸುವುದರಿಂದಾಗಿ, ಈ ಹೆಚ್ಚಳದಿಂದಾಗಿ ಸರ್ಕಾರಕ್ಕೆ ಸಹಜವಾಗಿಯೇ ಖುಷಿಯಾಗಿದೆ. ಶ್ರೇಯಾಂಕದ ಉನ್ನತೀಕರಣದಿಂದಾಗಿ, ಉತ್ತಮವಾದ ಹಾಗೂ ಸುಲಭವಾಗಿರುವ ಷರತ್ತುಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಂಡವಾಳ ಸಂಗ್ರಹಿಸುವ ಭಾರತ ಸರ್ಕಾರದ ಹಾಗೂ ಖಾಸಗಿ ಸಾಲಗಾರರ ಸಾಮರ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮವಾಗಿರುವುದಂತೂ ದಿಟ. ಆದಾಯ ಮತ್ತು ಅಪಾಯ ಎರಡನ್ನೂ ಅನುಸರಿಸಬೇಕಾಗಿ ಬರುವ ಜಾಗತಿಕ ಮಾರುಕಟ್ಟೆಯಲ್ಲಿನ ಹಣದರಾಶಿಯು, ಸಾಕಷ್ಟು ಅನುಕೂಲಕರ ವಿಧಾನದಲ್ಲಿ ಭಾರತದೆಡೆಗೆ ಹರಿಯುವ ಸಾಧ್ಯತೆ ಇದೆ. ಅದೇನೇ ಇರಲಿ, ಅಲ್ಪಕಾಲದ ವ್ಯಾಪ್ತಿಯಲ್ಲಿ ಅದರ ಪ್ರಭಾವ ಸಾಕೂಸಾಲದಷ್ಟಿರುತ್ತದೆ ಎನ್ನಬೇಕು.

ನಿರ್ದಿಷ್ಟ ಸಾಲಗಾರ ಅಥವಾ ಬಾಂಡ್ ನೀಡಿಕೆದಾರನು ಋಣಭಾರದ ಹೊಣೆಗಾರಿಕೆಯನ್ನು ನೆರವೇರಿಸಲು ಹೊಂದಿರುವ ಸಾಮರ್ಥ್ಯದ ಕುರಿತಾಗಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಹೂಡಿಕೆದಾರರಿಗೆ ಮಾಹಿತಿ ಒದಗಿಸುತ್ತವೆ. ಹೂಡಿಕೆದಾರನು ತನ್ನೆದುರು ಇರುವ ಆಯ್ಕೆಗಳನ್ನು ಮೌಲ್ಯಮಾಪನ ಮಾಡಲಿಕ್ಕೆ ಸಾಲಗಾರನ ದೇಶದ ರೇಟಿಂಗ್ ಕೂಡ ನಿರ್ಣಾಯಕವಾಗಿರುತ್ತದೆ. ಒಂದೊಂದೂ ದೇಶದ ಹಾಗೂ ಬೃಹತ್ ಸಾಲಗಾರರ ಕುರಿತಾದ ಇಂಥ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಏಜೆನ್ಸಿಗಳ ಬಳಿಯಲ್ಲಿ ನಿಗದಿತ ಅಥವಾ ಪ್ರಮಾಣಕವಾಗಿಸಲ್ಪಟ್ಟ ವ್ಯವಸ್ಥೆಯಿರುತ್ತದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಂಥ ಸಂಕೀರ್ಣ ಮತ್ತ ಚಲನಶೀಲ ಪ್ರಪಂಚದಲ್ಲಿ, ಸ್ವತಂತ್ರ ಏಜೆನ್ಸಿಯೊಂದರಿಂದ ಲಭ್ಯವಾಗುವ ಇಂಥ ರೇಟಿಂಗ್​ಗಳು ಹೂಡಿಕೆದಾರರ ಪಾಲಿಗೆ ‘ಸಿದ್ಧಗಣಕ’ವಾಗಿ ಪರಿಣಮಿಸುತ್ತದೆ. ಎಲ್ಲ ಪ್ರಮುಖ ದೇಶಗಳಲ್ಲಿ ಕಚೇರಿಗಳನ್ನು ಹೊಂದುವುದರೊಂದಿಗೆ ಹಾಗೂ ಆ ದೇಶಗಳಲ್ಲಿನ ಬೆಳವಣಿಗೆಗಳ ಮೇಲೆ ನಿಯತವಾಗಿ ಕಣ್ಣಿಡುವುದರೊಂದಿಗೆ ಈ ಏಜೆನ್ಸಿಗಳು ಬದಲಾವಣೆಗಳಿಗೆ ಸಮಸಮನಾಗಿ ಸ್ಪಂದಿಸುತ್ತವೆ ಹಾಗೂ ಬಹುತೇಕ ನಿಜಾವಧಿಯ ಆಧಾರದ ಮೇಲೆ ಒಂದು ವಷ್ತುನಿಷ್ಠ ಮೌಲ್ಯಮಾಪನವನ್ನು ಸಾದರಪಡಿಸುತ್ತವೆ ಎಂದು ಭಾವಿಸಲಾಗುತ್ತದೆ.

ಹಣಕಾಸು ಮಾರುಕಟ್ಟೆಗಳು ವಿಕಸನ ಹೊಂದಿದಂತೆ, 1900ರ ವರ್ಷದಲ್ಲಿ ಜಾನ್ ಮೂಡಿ ಎಂಬಾತ ಮೂಡಿ’ಸ್ ಎಂಬ ಈ ಏಜೆನ್ಸಿಯನ್ನು ಶುರುಮಾಡಿದ; ವಿವಿಧ ಉದ್ಯಮಗಳ ಎಲ್ಲ ಷೇರುಗಳು ಮತ್ತು ಬಾಂಡ್​ಗಳ ಕುರಿತಾದ ಸಾಮಾನ್ಯ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಪ್ರಕಟಿಸುವುದು ಅದರ ಮೂಲೋದ್ದೇಶವಾಗಿತ್ತು. ಕಾಲಕ್ರಮೇಣ, ವಿವಿಧ ದೇಶಗಳಲ್ಲಿನ ವಾಣಿಜ್ಯ ಪತ್ರಗಳು, ಬ್ಯಾಂಕ್ ಠೇವಣಿಗಳು, ಏಕೋದ್ದಿಷ್ಟ ಸಾಲಗಾರರನ್ನೊಳಗೊಂಡಂತೆ ಎಲ್ಲ ತೆರನಾದ ಹಣಕಾಸು ಪತ್ರಗಳ ಮೌಲ್ಯಮಾಪನ ಮಾಡುವ ಒಂದು ಪ್ರಮುಖ ಸಂಸ್ಥೆಯಾಗಿ ಮೂಡಿ’ಸ್ ಮಾರ್ಪಟ್ಟಿತು. ಹೂಡಿಕೆದಾರರು ನೆಚ್ಚಿರುವ Standard & Poor’s ಮತ್ತು Flitch ಎಂಬ ಇಂಥ ಮತ್ತೆರಡು ಏಜೆನ್ಸಿಗಳಿದ್ದು, ಅವು ಕೂಡ ಜಾಗತಿಕ ಮನ್ನಣೆ ಪಡೆದಿವೆ.

ಭಾರತದ ಮಟ್ಟಿಗೆ ಹೇಳುವುದಾದರೆ, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ಅಸ್ತಿತ್ವ ಮತ್ತು ಕಾರ್ಯ ಇತ್ತೀಚಿನದು ಎನ್ನಬೇಕು. 1980ರ ದಶಕದಿಂದ ಶುರುವಾಗಿ, ‘ಸೆಬಿ’ಯಲ್ಲಿ ನೋಂದಾಯಿಸಿಕೊಂಡ ಇಂಥ ಆರು ಏಜೆನ್ಸಿಗಳಿವೆ. ಈ ಪೈಕಿ CRISIL, ICRA, SMERA, Fitch India, Brickwork ಅಗ್ರಗಣ್ಯ ಸ್ಥಾನದಲ್ಲಿದ್ದು, ಭಾರತೀಯ ಹೂಡಿಕೆದಾರರಿಗೆ ಇಂಥದೇ ಸೇವೆಯನ್ನು ಒದಗಿಸುತ್ತಿವೆ. ಎಲ್ಲ ಬ್ಯಾಂಕರ್​ಗಳೂ ಸಾಲನೀಡಿಕೆಗೆ ಸಂಬಂಧಿಸಿದ ತಮ್ಮ ನಿರ್ಣಯಗಳಿಗೆ ಆಧಾರವಾಗಿಟ್ಟುಕೊಳ್ಳುವುದು ಈ ರೇಟಿಂಗ್​ಗಳನ್ನೇ ಆದ್ದರಿಂದ, ದಿನಗಳೆದಂತೆ ಈ ಏಜೆನ್ಸಿಗಳು ಸಾಲಗಾರರ ಪಾಲಿಗೆ ಹೆಚ್ಚೆಚ್ಚು ಮಹತ್ವವನ್ನು ದಕ್ಕಿಸಿಕೊಂಡವೆನ್ನಬೇಕು. BASIL ಏಜೆನ್ಸಿಯ ರೂಢಮಾದರಿಗಳ ಅಡಿಯಲ್ಲಿನ ಬ್ಯಾಂಕುಗಳ ಸಾಲನೀಡಿಕಾ ಸಾಮರ್ಥ್ಯವೂ ಈ ರೇಟಿಂಗ್​ಗಳ ಪ್ರಭಾವಕ್ಕೆ ಒಳಪಡುವಂಥದ್ದೇ ಆಗಿರುತ್ತವೆಯಾದ್ದರಿಂದ, ದೇಶದ ಹಣಕಾಸು ಮಾರು ಕಟ್ಟೆಗಳಲ್ಲಿ ಈ ಏಜೆನ್ಸಿಗಳು ಗಮನಾರ್ಹ ಪಾತ್ರವನ್ನೇ ವಹಿಸುತ್ತಿವೆ ಎನ್ನಬೇಕು.

ಪ್ರಸ್ತುತ, ಮೂಡಿ’ಸ್ ನೀಡಿದ ‘ಶ್ರೇಯಾಂಕ ವರ್ಧನೆ’ ನಮ್ಮ ದೇಶದ ಬಹುತೇಕ ಅರ್ಥಶಾಸ್ತ್ರಜ್ಞರು, ಬ್ಯಾಂಕರ್​ಗಳು ಮತ್ತು ಕೈಗಾರಿಕೋದ್ಯಮಿಗಳು ಸ್ವಾಗತಿಸಲ್ಪಟ್ಟಿತು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಈ ಬೆಳವಣಿಗೆಯನ್ನು ವರದಿ ಮಾಡಿದವು ಹಾಗೂ ಇದರ ಕಾರಣ ಮತ್ತು ಪರಿಣಾಮದ ಕುರಿತು ಅನೇಕರು ತಮಗೆ ತೋಚಿದ ಸುದ್ದಿಗಳನ್ನು ಹೊಸೆಯಲಾರಂಭಿಸಿದರು. ದೇಶದ ಆರ್ಥಿಕತೆಯು ಆರೋಗ್ಯಕರ ಘಟ್ಟದಲ್ಲಿದೆ, ಹಿಂದಿನ ತ್ರೖೆಮಾಸಿಕದಲ್ಲಿ ದಾಖಲಾಗಿದ್ದ ಕಡಿಮೆ ಬೆಳವಣಿಗೆ ಪ್ರಮಾಣಗಳು ಒಂದು ಕ್ಷಣಿಕ ಪಥಭ್ರಂಶವಷ್ಟೇ ಮತ್ತು ಆರ್ಥಿಕತೆಯು ಉನ್ನತ ಬೆಳವಣಿಗೆಯ ಹಂತಕ್ಕೆ ಮರಳಲಿದೆ- ಎಂಬುದು ಈ ಸಂದರ್ಭದಲ್ಲಿ ಹೊಮ್ಮಿದ ಸರ್ವೆಸಾಮಾನ್ಯ ಪ್ರತಿಕ್ರಿಯೆಯಾಗಿತ್ತು.

ಮೂಡಿ’ಸ್ ಇನ್ವೆಸ್ಟರ್ಸ್ ಸರ್ವೀಸ್​ನ Sovereign Risk Group’ನ ಉಪಾಧ್ಯಕ್ಷ ವಿಲಿಯಂ ಫಾಸ್ಟರ್, ಆರ್ಥಿಕ ನಿಯತಕಾಲಿಕವೊಂದರ ಜತೆಗಿನ ಸಂದರ್ಶನದಲ್ಲಿ ಇದಕ್ಕಿರುವ ತರ್ಕಾಧಾರವನ್ನು ಸಂಕ್ಷೇಪವಾಗಿ ವಿವರಿಸಿದ್ದು ಅದರ ಮುಖ್ಯಾಂಶಗಳು ಹೀಗಿವೆ:

1) ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳು ಮುಂದುವರಿಯಬೇಕು. ಇದರಿಂದಾಗಿ ಸರ್ಕಾರಿ ಸಾಲಕ್ಕೆ ಒಂದು ಸುಸ್ಥಿರ ನೆಲೆಗಟ್ಟು ಒದಗಿದಂತಾಗುತ್ತದೆ.

2) ಆರ್ಥಿಕತೆಯನ್ನು ವಿಧ್ಯುಕ್ತಗೊಳಿಸುವಿಕೆ, ವ್ಯವಹಾರ ಸಂಬಂಧಿ ವಾತಾವರಣವನ್ನು ಸುಧಾರಿಸುವಿಕೆ ಮತ್ತು ಸುಸ್ಥಿರ ಹಣದುಬ್ಬರದಿಂದಾಗಿ ಮಾರುಕಟ್ಟೆಯಲ್ಲಿ ಒದಗುವ ಆಘಾತ/ಅಪಾಯಗಳನ್ನು ಮೈಗೂಡಿಸಿಕೊಳ್ಳುವಲ್ಲಿನ ಆರ್ಥಿಕತೆಯ ಸಾಮರ್ಥ್ಯ ವರ್ಧಿಸುತ್ತದೆ.

3) 2017-18ರ ಹಣಕಾಸು ವರ್ಷದಲ್ಲಿ ಶೇ. 6.7ರ ಬೆಳವಣಿಗೆ ದರ ದಾಖಲಾಗುವ ಸಂಭವವಿದ್ದು, 2018-19ರ ವರ್ಷದಲ್ಲಿ ಇದು ಶೇ. 7.5ಕ್ಕೆ ವರ್ಧಿಸುವ ಸಾಧ್ಯತೆಯಿದೆ.

4) ಬ್ಯಾಂಕಿನ ಅನುತ್ಪಾದಕ ಆಸ್ತಿಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಬ್ಯಾಂಕುಗಳ ಮರುಬಂಡವಾಳೀಕರಣ ಒಂದು ಸಕಾರಾತ್ಮಕ ನಡೆಯಾಗಿದೆ.

5) ರಾಜ್ಯ ಸರ್ಕಾರಗಳ ಸಾಲಮನ್ನಾ ಉಪಕ್ರಮಗಳು ಒಟ್ಟಾರೆ ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಸಂಭವವಿದೆ ಮತ್ತು ಇದು ಕಳವಳಕಾರಿ ಸಂಗತಿಯಾಗಿದೆ.

6) ಜಿಎಸ್​ಟಿ ಉಪಕ್ರಮವು ಅನುಮೋದನಾರ್ಹವಾಗಿದ್ದು ಇದು ಅನುಸರಣೆಯನ್ನು ಮತ್ತು ಭಾರತ ಉದ್ದಗಲಕ್ಕೂ ಇರುವ ವ್ಯವಹಾರ ಸಂಸ್ಥೆಗಳ ಕಾರ್ಯಪಟುತ್ವವನ್ನು ಸುಧಾರಿಸಲಿದೆ.

ಪ್ರಸಕ್ತ ಸರ್ಕಾರ ಕೈಗೊಂಡಿರುವ ಬಹುತೇಕ ಕ್ರಮಗಳು, ಆರ್ಥಿಕತೆಯ ಪಾಲಿಗೆ ಸರಿಯಾದ ದಿಕ್ಕಿನಲ್ಲೇ ಇವೆ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳು ಇದನ್ನು ಸಕಾರಾತ್ಮಕವಾಗೇ ಸ್ವೀಕರಿಸಿವೆ ಎಂಬುದಿಲ್ಲಿ ಸುಸ್ಪಷ್ಟ. ‘ಸುಲಲಿತ ವ್ಯವಹಾರ ನೀತಿ’ಯ ವಿಷಯದಲ್ಲಿ ವಿಶ್ವಬ್ಯಾಂಕು ಭಾರತಕ್ಕೆ ನೀಡಿರುವ ರೇಟಿಂಗ್​ನಲ್ಲಿ ಇತ್ತೀಚೆಗೆ ಸುಧಾರಣೆಯಾಗಿರುವುದು ಕೂಡ ಇಂಥದೊಂದು ಅನುಮೋದನೆಯಾಗಿತ್ತು ಎಂಬುದಿಲ್ಲಿ ಸ್ಮರಣಾರ್ಹ.

ಆದರೆ, ಎರಡು ಪ್ರಮುಖ ಚರ್ಚಾವಿಷಯಗಳಲ್ಲಿನ ಸಂಭಾವ್ಯ ಅಪಾಯಗಳ ಕುರಿತಾಗಿ ಅನೇಕ ವಿಶ್ಲೇಷಕರು ಎಚ್ಚರಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಗಮನಹರಿಸಬೇಕಾಗಿದೆ. ಉದ್ಯೋಗ ಮಾರುಕಟ್ಟೆಗೆ ಪುನಶ್ಚೇತನ ನೀಡುವ ಹಾಗೂ ದೇಶದ ಬೆಳವಣಿಗೆಯನ್ನು ತೀವ್ರಗೊಳಿಸುವ ವಿಷಯದಲ್ಲಿ ಭೂಮಿ ಮತ್ತು ಕಾರ್ವಿುಕ ಕಾನೂನು ಸುಧಾರಣೆಗಳಿಗೆ ಅಗಾಧ ಸಾಮರ್ಥ್ಯವಿದೆ. ಇದು ತೀರಾ ಸೂಕ್ಷ್ಮ ವಿಷಯವಾದರೂ, ಸಂಬಂಧಪಟ್ಟ ಎಲ್ಲರೊಂದಿಗೆ ರ್ಚಚಿಸುವ ಮೂಲಕ ಸರ್ಕಾರ ಈ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಜಿಎಸ್​ಟಿ ಅನುಷ್ಠಾನದ ವಿಷಯದಲ್ಲಿ ಎಲ್ಲ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ, ಜತೆಗಿಟ್ಟುಕೊಂಡ ಅನುಭವವು, ಈ ವಲಯದಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿ ಒಂದು ಮಾದರಿಯಾಗಬಲ್ಲದು.

ಅದೇನೇ ಇರಲಿ, ಮೂಡಿ’ಸ್ ನೀಡಿದ ಶ್ರೇಯಾಂಕ ವರ್ಧನೆಯಿಂದಾಗಿ ಷೇರುಮಾರುಕಟ್ಟೆಗಳು ಏರುಗತಿ ಕಾಯ್ದುಕೊಂಡಿವೆ ಹಾಗೂ ರೂಪಾಯಿಯ ಬಲವರ್ಧನೆಗೂ ಇದು ಪೂರಕವಾಗಬಲ್ಲದು ಎಂದು ನಿರೀಕ್ಷಿಸಲಾಗಿದೆ. ಜತೆಗೆ ಅಂತಾರಾಷ್ಟ್ರೀಯ ಸಾಲಗಾರಿಕೆಯ ವೆಚ್ಚಗಳು ತಗ್ಗಲಿದ್ದು, ಬ್ಯಾಂಕುಗಳು ಬಡ್ಡಿದರಗಳನ್ನು ಮತ್ತಷ್ಟು ತಗ್ಗಿಸಬೇಕಾದ ನಿರ್ಬಂಧಕ್ಕೆ ಒಳಗಾಗಲಿವೆ. ಒಟ್ಟಾರೆ ಹೇಳುವುದಾದರೆ, ಆರ್ಥಿಕತೆಯ ಕುರಿತಾದ ಅಭಿಪ್ರಾಯಕ್ಕೆ ಮಹತ್ತರ ಹುರುಪು, ರಭಸ ದಕ್ಕಲಿವೆ.

ಈಗ, ಮೂಡಿ’ಸ್ ಕ್ರಮವನ್ನು ಅನುಸರಿಸುವುದು ಮತ್ತು ಭಾರತದ ರೇಟಿಂಗ್ ಅನ್ನು ಉನ್ನತೀಕರಿಸುವುದು, Standard & Poor’s ಮತ್ತು Flitchನಂಥ ಮತ್ತೆರಡು ಏಜೆನ್ಸಿಗಳ ಪಾಲಿನ ಬಾಬತ್ತು ಎಂಬ ನಿರೀಕ್ಷೆ ಸಹಜವಾಗಿಯೇ ಗರಿಗೆದರಿದೆ; ಅಂಥ ಕ್ಷಣಗಳಿಗಾಗಿ ನಿರೀಕ್ಷಿಸೋಣ.

ಇಂಥ ಎಲ್ಲ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಯಾವಾಗಲೂ ನಿಷ್ಪಕ್ಷಪಾತಿಯಾಗಿರುವುದಿಲ್ಲ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಅನ್ಯಾಯವಾಗುವುದು ವಾಡಿಕೆ ಎಂಬುದೊಂದು ಸಾರ್ವತ್ರಿಕ ಅಭಿಪ್ರಾಯವಿದೆ. ಅದೇನೇ ಇರಲಿ, ಪ್ರಸ್ತುತ ಭಾರತಕ್ಕೆ ದಕ್ಕಿರುವ ‘ಶ್ರೇಯಾಂಕ ವರ್ಧನೆ’ ಕುರಿತು ಹೆಮ್ಮೆ ಪಡೋಣ ಮತ್ತು ಮುಂಬರುವ ದಿನಗಳಲ್ಲಿ ಇದಕ್ಕಿಂತ ಉತ್ತಮ ಸಾಧನೆಯಾಗುವಂತಾಗಲಿ ಎಂದು ಆಶಿಸೋಣ.

(ಲೇಖಕರು ಆರ್ಥಿಕ ತಜ್ಞರು)

Leave a Reply

Your email address will not be published. Required fields are marked *

Back To Top