Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕ್ರೀಡೋಲ್ಲಾಸ ಕ್ಷೀಣಿಸಿದ ವೈವಿಧ್ಯ, ವಸಾಹತುಶಾಹಿಯ ಪರಿಣಾಮ

Sunday, 06.08.2017, 3:00 AM       No Comments

ಕ್ರೀಡಾಮನೋಭಾವ ನಮ್ಮ ಬದುಕಿನಿಂದಲೇ ಕಾಣೆಯಾದಂತಿದೆ. ಕ್ರೀಡೆಯೆಂದರೆ ಮನೋಲ್ಲಾಸ ಎಂಬ ಮೂಲತತ್ವದತ್ತ ನಾವು ಹೋಗಬೇಕಾಗಿದೆ. ಆಟಕ್ಕೆ ಅಂಟಿರುವ ಉದ್ಯಮದ ಸ್ವರೂಪವನ್ನು ನಿಭಾಯಿಸುವ ಸವಾಲು ನಮ್ಮ ಮುಂದಿದೆ.

ಹಯವದನ ನಾಟಕದ ಪದ್ಮಿನಿಗೆ ದೇವದತ್ತ ಹಾಗೂ ಕಪಿಲ ಇಬ್ಬರ ಬಗೆಗೂ ಆಕರ್ಷಣೆ. ದೇವದತ್ತ ಬುದ್ಧಿವಂತ. ಆದರೆ ದುರ್ಬಲದೇಹಿ. ಕಪಿಲ ದೃಢಕಾಯ, ಗಟ್ಟಿಮುಟ್ಟಾದ ಸೊಗಸಾದ ದೇಹವಿದೆ, ಆದರೆ ದೇವದತ್ತನಂತೆ ಬುದ್ಧಿವಂತನಲ್ಲ. ಪದ್ಮಿನಿಗೆ ದೇವದತ್ತನ ತಲೆ, ಕಪಿಲನ ದೇಹ ಬೇಕು. ಇದು ಮನುಷ್ಯನ ನಿರಂತರ ಡೈಕಾಟಮಿ. ಒಂದು ಕಾಲಕ್ಕೆ ನಮ್ಮ ಸಾಮಾಜಿಕ ಬದುಕಿನಲ್ಲಿ ತಲೆಯಷ್ಟೇ ದೇಹಕ್ಕೂ ಪ್ರಾಮುಖ್ಯತೆ ಇತ್ತು. ಆದರೆ ಸಂಸ್ಕೃತಿಯ ವಿಕಾಸ ಕ್ರಮದಲ್ಲಿ ಬರಬರುತ್ತಾ ತಲೆಯೇ ಮುಖ್ಯವಾಗಿ ಕೈ ಬೆರಳುಗಳ ಕೌಶಲ್ಯ ಹಿಂದೆ ಸರಿಯಿತು. ನಮ್ಮ ಕುಶಲ ಕಲೆಗಳು ಪ್ರಾಮುಖ್ಯತೆ ಕಳೆದುಕೊಂಡದ್ದು ಹೀಗೆ. ನಮ್ಮ ಶಿಕ್ಷಣ ಕ್ರಮದಲ್ಲೂ ಈಗ ತಲೆಗೇ ಪ್ರಾಧಾನ್ಯ. ದೇಹದಲ್ಲೂ ತಲೆಯೇ ಉತ್ತಮಾಂಗವೆಂದು ಕರೆಯಲ್ಪಡುವುದು ಈ ಹಿನ್ನೆಲೆಯಲ್ಲಿಯೇ.

ಪ್ರಕೃತಿಗೂ ಸಂಸ್ಕೃತಿಗೂ ಅಂತರವಿರುವುದು ಇಲ್ಲಿಯೇ. ಪ್ರಕೃತಿಯಲ್ಲಿ ಎಲ್ಲದಕ್ಕೂ ಬೆಳೆಯುವ, ಬದುಕುವ ಅವಕಾಶವಿದೆ. ವೈವಿಧ್ಯವೇ ಅದರ ಜೀವಸತ್ವ. ಚೆಲುವಿರುವುದೇ ಈ ವಿವಿಧತೆಯಲ್ಲಿ. ಆದರೆ ಸಂಸ್ಕೃತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಮೇಲು ಕೀಳಿನ ಅಸಮಾನತೆ ಇದರ ಲಕ್ಷಣ. ಕೆಲವರಿಗೆ ವಿಪುಲ ಅವಕಾಶ. ಮತ್ತೆ ಕೆಲವರು ಅವಕಾಶ ವಂಚಿತರು. ಜೀವರಾಶಿಗಳಲ್ಲೂ ಕೆಲವು ಶ್ರೇಷ್ಠ, ಮತ್ತೆ ಕೆಲವು ಕನಿಷ್ಠ. ಚೆಲುವಿನ ಕಲ್ಪನೆಯಲ್ಲೂ ತಾರತಮ್ಯ. ಬಣ್ಣಗಳಿಗೂ ಕಳಂಕದ ಅಂಟು. ತಿನ್ನುವ ಆಹಾರದಲ್ಲೂ ತರತಮ. ಸಮಗ್ರ ಬೆಳವಣಿಗೆ ಅದರ ಪರಿಕಲ್ಪನೆಯಲ್ಲ. ಒಂದು ಮತ್ತೊಂದನ್ನು ನಾಶ ಮಾಡಿ ಬೆಳೆಯುವುದೇ ಇದರ ಪರಿ. ಪರಸ್ಪರ ಪೂರಕ ಬೆಳವಣಿಗೆಗೆ ಇಲ್ಲಿ ಅವಕಾಶವಿಲ್ಲ. ಸಂಸ್ಕೃತಿಯ ಬೆಳವಣಿಗೆಯ ಕ್ರಮದಲ್ಲಿಯೇ ವಿಕೃತಿ ಇದ್ದಂತಿದೆ. ದೇಹದ ಯಾವುದೋ ಒಂದು ಅಂಗ ಉಳಿದ ಅಂಗಗಳ ಜೊತೆ ಸಮನ್ವಯ ಸಾಧಿಸದೆ ಅಡ್ಡಾದಿಡ್ಡಿ ಬೆಳೆದರೆ ಅದು ವಿಕೃತಿ ಅಲ್ಲದೆ ಮತ್ತೇನು? ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನು ಗಮನಿಸಿ. ನಮ್ಮ ಶಿಕ್ಷಣದ ಬೆಳವಣಿಗೆಯೂ ಅದೇ ರೀತಿ ಇದ್ದಂತಿದೆ.

ನಮ್ಮ ಶಿಕ್ಷಣ ಕ್ರಮದಲ್ಲಿ ದೈಹಿಕ ಶಿಕ್ಷಣಕ್ಕೆ ಯಾವ ಬಗೆಯ ಪ್ರಾಮುಖ್ಯತೆಯೂ ಇದ್ದಂತಿಲ್ಲ. ಅಂಥದೊಂದು ವಿಭಾಗ ಶಾಲಾ ಕಾಲೇಜುಗಳಲ್ಲಿ ಹೆಸರಿಗೆ ಇದೆ. ಆದರೆ ಅಗತ್ಯ ಅನುಕೂಲಗಳಿಲ್ಲ. ಎಷ್ಟು ಶಾಲಾ ಕಾಲೇಜುಗಳಿಗೆ ತಮ್ಮದೇ ಆದ ಕ್ರೀಡಾಂಗಣವಿದೆ? ಸರಿಯಾಗಿ ಕೊಠಡಿಗಳೇ ಇರುವುದಿಲ್ಲ, ಇನ್ನು ಕ್ರೀಡಾಂಗಣದ ಮಾತೆಲ್ಲಿ? ಅನೇಕ ಶಾಲಾ ಕಾಲೇಜುಗಳಲ್ಲಿ ಅತ್ಯುತ್ತಮ ಗ್ರಂಥಾಲಯ ವ್ಯವಸ್ಥೆಯೂ ಇಲ್ಲ. ನಾಲ್ಕಾರು ಬೀರುಗಳಲ್ಲಿ ಕೆಲವು ಪುಸ್ತಕಗಳಿದ್ದರೆ ಅದೇ ಗ್ರಂಥಾಲಯ. ಬೋರ್ಡ, ಬೆಂಚುಗಳಿದ್ದರೆ ಸಾಕೆನ್ನುವ ಮನೋಭಾವ. ಕೆಲವೊಮ್ಮೆ ಕಾರಿಡಾರ್ ಮೂಲೆಗಳೂ ಕ್ಲಾಸುಗಳಾಗಿ ಪರಿವರ್ತನೆಯಾಗುವುದುಂಟು. ಇದು ನಮ್ಮ ಶಿಕ್ಷಣದ ಸ್ವರೂಪ.

ನಾವು ಚಿಕ್ಕವರಿದ್ದಾಗ ಕ್ರೀಡಾಂಗಣಗಳಿಲ್ಲದಿದ್ದರೂ ಆಡಲು ಸಾಕಷ್ಟು ಜಾಗವಿತ್ತು. ಸಮಯವೂ ಇತ್ತು. ವಿವಿಧ ಬಗೆಯ ಆಟಗಳಿದ್ದವು. ಸುಮ್ಮನೆ ಹಾಗೇ ನೆನಪಿಸಿಕೊಳ್ಳೋಣ: ಹಾಕಿ, ಕಬಡಿ, ಖೋಖೋ, ವಾಲಿಬಾಲ್, ಫುಟ್​ಬಾಲ್, ಬಾಸ್ಕೆಟ್​ಬಾಲ್, ಥ್ರೋಬಾಲ್, ಟೆನಿಕಾಯ್್ಟ ಬ್ಯಾಡ್ಮಿಂಟನ್, ಕ್ರಿಕೆಟ್ ಇತ್ಯಾದಿ.. ಇನ್ನು ಒಳಾಂಗಣ ಕ್ರೀಡೆಗಳೂ ಸಾಕಷ್ಟಿದ್ದವು. ಕೇರಂ, ಚೆಸ್, ಟೇಬಲ್ ಟೆನಿಸ್ ಮೊದಲಾದವು. ಇವುಗಳ ಜೊತೆಗೆ ಅಥ್ಲೆಟಿಕ್ಸ್…ರನ್ನಿಂಗ್​ರೇಸ್, ಲಾಂಗ್​ಜಂಪ್, ಹೈಜಂಪ್, ಶಾಟ್​ಪುಟ್, ಲೆಮನ್ ಅಂಡ್ ಸ್ಪೂನ್, ತ್ರೀಲೆಗ್ಗಡ್ ರೇಸ್, ಸ್ಲೋಸೈಕಲ್ ರೇಸ್, ಮ್ಯೂಸಿಕಲ್​ಚೇರ್ ಇನ್ನು ಮುಂತಾದವು… ಮನೆಯಲ್ಲಿ ಆಡುತ್ತಿದ್ದ ಆಟಗಳೇ ಬೇರೆ – ಪಗಡೆ, ಕವಡೆ, ಅಳಗುಳಿಮಣೆ, ಹುಲಿಕಲ್ಲು ಆಟ, ಕುಂಟೋಬಿಲ್ಲೆ, ಲಗೋರಿ, ಬುಗುರಿ, ಚಿಣ್ಣಿದಾಂಡು, ಐಸ್​ಪೈಸ್, ಕಳ್ಳ ಪೋಲಿಸ್ ಇತ್ಯಾದಿ…

ಈ ಆಟಗಳೆಲ್ಲ ಈಗೆಲ್ಲಿ ಹೋದವು? ಇವುಗಳಲ್ಲಿ ಎಷ್ಟು ಉಳಿದಿವೆ? ಬಲ್ಲವರು ಹೇಳಬೇಕು. ಯಾಕೆ ಹೀಗಾಯಿತು? ಹೋಂವರ್ಕ್ ಹೊರೆಯಿಂದ ಬಳಲುತ್ತಿರುವ ನಮ್ಮ ಮಕ್ಕಳ ಮನಸ್ಸಿಗೆ ಉಲ್ಲಾಸ ಬೇಡವೇ? ಅವರ ದೈಹಿಕ ಕ್ಷಮತೆಯೂ ಮುಖ್ಯವಲ್ಲವೇ?

ಆಟಗಳ ನಾಶವೆಂದರೆ ಮನೋಲ್ಲಾಸದ ನಾಶ. ಆಟದ ಪರಿಕಲ್ಪನೆಯಲ್ಲಿಯೇ ಉಲ್ಲಾಸವಿದೆ. ಪ್ರತಿಭೆಯ ಅನಾವರಣಕ್ಕೆ ಅದೊಂದು ಅತ್ಯುತ್ತಮ ಅವಕಾಶ. ಸೃಜನಶೀಲತೆಯ ಸಾಧ್ಯತೆಗಳ ಅರಿವಾಗುವುದು ಆಟವಾಡುವಾಗಲೇ. ಆಟವೆಂದರೆ ದೇಹ ಮನಸ್ಸುಗಳ ಹೊಂದಾಣಿಕೆ. ಜಗಳಾಟಾನೂ ಆಟಾನೇ ಎಂಬುದು ಕವಿವಾಣಿ. ಕಂಬಾರರ ಇತ್ತೀಚಿನ ಕಾದಂಬರಿ ‘ಶಿವನ ಡಂಗುರ’ದಲ್ಲಿ ಒಂದು ಸಂದರ್ಭ ಬರುತ್ತದೆ: ಮಕ್ಕಳಿಗೆ ಓಟದ ಸ್ಪರ್ಧೆ ಇರುತ್ತದೆ. ಒಬ್ಬಳು ಹುಡುಗಿ ಎಲ್ಲರಿಗಿಂತ ಮುಂದೆ ಓಡುತ್ತಿರುತ್ತಾಳೆ. ಇನ್ನೇನು ಗುರಿ ಮುಟ್ಟಿ ಬಹುಮಾನ ಪಡೆಯಬೇಕು ಎನ್ನುವಷ್ಟರಲ್ಲಿ ಹಿಂದೆ ಬರುತ್ತಿದ್ದ ಒಬ್ಬಳು ಹುಡುಗಿ ಎಡವಿ ಬಿದ್ದು ನೋವಿನಿಂದ ನರಳುತ್ತಿರುತ್ತಾಳೆ. ಆಗ ಗುರಿ ತಲುಪಲಿದ್ದ ಹುಡುಗಿ ಹಿಂದೆ ಬಂದು ಬಿದ್ದ ಹುಡುಗಿಯನ್ನು ಮೇಲೆತ್ತಿ ಉಪಚರಿಸುತ್ತಾಳೆ. ಉಳಿದ ಸ್ಪರ್ಧಿಗಳೂ ಅವಳ ಜೊತೆಗೂಡುತ್ತಾರೆ. ಆ ನಂತರ ಎಲ್ಲರೂ ಒಟ್ಟಿಗೇ ಓಡುತ್ತಾರೆ. ಆಯೋಜಕರು ತರತಮ ಮಾಡದೆ ಎಲ್ಲರಿಗೂ ಬಹುಮಾನ ನೀಡುತ್ತಾರೆ. ಇದು ಕ್ರೀಡಾ ಮನೋಭಾವದ ಮಾದರಿ. ಆದರೆ ಇಂದು ಎಲ್ಲ ಕ್ಷೇತ್ರಗಳಂತೆ ಕ್ರೀಡೆಗಳೂ ಸ್ಪರ್ಧಾಕಣಗಳಾಗಿಬಿಟ್ಟಿವೆ. ಸಂತೋಷಕ್ಕಾಗಿ ಆಡುವುದನ್ನು ನಾವೆಲ್ಲ ಮರೆತಂತಿದೆ. ಕ್ರೀಡಾಂಗಣಗಳಿಗೂ ರಣರಂಗಗಳಿಗೂ ಅಂತರ ಈಗ ಕಡಿಮೆ ಅಥವಾ ಹೀಗೂ ಹೇಳಬಹುದು- ಕ್ರೀಡೆಗಳೂ ಈಗ ‘ಉದ್ಯಮ’ಗಳಾಗಿ ರೂಪಾಂತರಗೊಂಡಿವೆ. ಉಲ್ಲಾಸಕ್ಕಿಂತ ಲಾಭ ನಷ್ಟಗಳ ಲೆಕ್ಕಾಚಾರವೇ ಪ್ರಮುಖವಾಗಿಬಿಟ್ಟಿದೆ. ಕ್ರೀಡಾ ಮನೋಭಾವ ಕ್ರೀಡಾಂಗಣದಲ್ಲಿ ಮಾತ್ರವಲ್ಲ ಬದುಕಿನಿಂದಲೇ ಮರೆಯಾದಂತಿದೆ.

ಪ್ರಭುತ್ವ ಯಾವಾಗಲೂ ಏಕಾಕೃತಿಯನ್ನು ಬಯಸುತ್ತದೆ. ಬಹುಮುಖೀ ನೆಲೆಗಳನ್ನು ಏಕಾಕೃತಿಯ ತೆಕ್ಕೆಗೆ ತರುತ್ತದೆ. ಆಗ ಆಡಳಿತ ನಿರ್ವಹಣೆ ಸುಲಭ ಎನ್ನುವುದು ಅದರ ನಂಬಿಕೆ. ಇದು ಸರ್ವಾಧಿಕಾರದ ಸ್ವರೂಪ. ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಭಾರತದಲ್ಲಿ ಆದದ್ದೂ ಇದೇ. ವೈವಿಧ್ಯತೆಯಲ್ಲಿ ಏಕತೆ ಎಂಬುದಕ್ಕೆ ಬದಲಾಗಿ ಏಕಾಕೃತಿಯ ಸ್ವರೂಪ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬಂದಿತು. ನಮ್ಮ ಶಿಕ್ಷಣ ಕ್ಷೇತ್ರದಲ್ಲೂ ಇದರ ಪರಿಣಾಮವನ್ನು ಕಾಣಬಹುದು. ಬಹುಮುಖೀ ಜ್ಞಾನಕ್ಕೆ ಬದಲಾಗಿ ಅಕ್ಷರಜ್ಞಾನ ಮಾತ್ರ ಶ್ರೇಷ್ಠವೆಂಬ ನಂಬಿಕೆ ಬಲವಾಯಿತು. ರೂಢಿಯಲ್ಲಿದ್ದ ಅರವತ್ತನಾಲ್ಕು ಕಲೆಗಳಲ್ಲಿ ಅಕ್ಷರಕಲೆ ಮಾತ್ರ ಪ್ರಾಮುಖ್ಯತೆ ಪಡೆಯಿತು. ಆಧುನಿಕ ಶಿಕ್ಷಣ ಜ್ಞಾನದ ಎದುರು ದೇಸೀ ತಿಳುವಳಿಕೆಗಳೆಲ್ಲಾ ಮಂಕಾದವು. ಕ್ರೀಡೆಯಲ್ಲೂ ಇದೇ ಪಾಡು.

ಇವತ್ತು ಆಟವೆಂದರೆ ಕ್ರಿಕೆಟ್ ಮಾತ್ರ ಎಂಬಂತಾಗಿರುವುದರ ಹಿನ್ನೆಲೆಯನ್ನು ಗಮನಿಸಿ. ಕ್ರಿಕೆಟ್​ನ ಮೂಲ ಇಂಗ್ಲೆಂಡ್. ಇದು ಮೂಲತಃ ಬ್ರಿಟೀಷರ ಆಟ. ಹಾಗಾಗಿಯೇ ಅವರು ತಾವು ಹೋದ ಕಡೆಯಲ್ಲೆಲ್ಲಾ ಈ ಆಟವನ್ನು ಜನಪ್ರಿಯಗೊಳಿಸಿದರು. ಹೀಗಾಗಿಯೇ ಕಾಮನ್​ವೆಲ್ತ್ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್​ಇಂಡೀಸ್, ಸೌತ್​ಆಫ್ರಿಕಾ ಮೊದಲಾದ ದೇಶಗಳಲ್ಲಿ ಮಾತ್ರ ಕ್ರಿಕೆಟ್ ಜನಪ್ರಿಯ. ಉಳಿದಂತೆ ಯಾವ ರಾಷ್ಟ್ರಗಳಲ್ಲಿಯೂ ಕ್ರಿಕೆಟ್​ಗೆ ಮಾನ್ಯತೆ ಇಲ್ಲ.

ಕ್ರಿಕೆಟ್ ಬಗ್ಗೆ ಇರುವ ಪ್ರಖ್ಯಾತ ಮಾತು: ‘ಹನ್ನೊಂದು ಜನ ಮೂರ್ಖರು ಆಡುತ್ತಾರೆ, ಸಾವಿರಾರು ಜನ ಮೂರ್ಖರು ನೋಡುತ್ತಾರೆ’. ಈ ಮಾತುಗಳಿಗೆ ಕಾರಣವಿದೆ. ಇದೊಂದು ಸೋಮಾರಿಗಳ ಆಟ. ಯಾವುದಾದರೂ ಆಟವನ್ನು ದಿನಗಟ್ಟಲೆ ಆಡುವುದುಂಟೆ? ಐದು ದಿನ ಒಂದು ಆಟ ಆಡಿ, ಅದನ್ನು ಆ ಐದು ದಿನಗಳೂ ಜನ ನೋಡುತ್ತಾರೆಂದರೆ ಅವರು ಸೋಮಾರಿಗಳಲ್ಲದೆ ಮತ್ತೇನು? ಈ ಐದು ದಿನಗಳು ಒಂದು ರಾಷ್ಟ್ರಕ್ಕೆ ಆಗುವ ನಷ್ಟವೆಷ್ಟು? ಉತ್ಪಾದನೆ ಎಷ್ಟು ಕುಂಠಿತವಾಗುತ್ತದೆ? ಮಾನವಶಕ್ತಿ ಎಷ್ಟೊಂದು ವ್ಯಯವಾಗುತ್ತದೆ? ಈಗ ಈ ಆಟದ ಸ್ವರೂಪ ಬದಲಾಗಿರಬಹುದು. ಒಂದು ದಿನದ ಆಟವಾಗಿ, ನಿಯಮಿತ ಓವರ್​ಗಳ ಆಟವಾಗಿ ರೂಪಾಂತರವಾಗಿದೆ ನಿಜ. ಆದರೂ ಇಡೀ ದಿನ ಒಂದು ಆಟವನ್ನು ಬೇರೆ ಯಾವ ಕೆಲಸವನ್ನೂ ಮಾಡದೆ ನೋಡುವುದೆಂದರೆ ಆಗುವ ನಷ್ಟವೆಷ್ಟು? ಲಕ್ಷಾಂತರ ಜನರ ಮಾನವಶಕ್ತಿಯನ್ನು ಹೀಗೆ ನಿಷ್ಕ್ರಿಯಗೊಳಿಸುವ ಇಂತಹ ಆಟ ಅಭಿವೃದ್ಧಿ ರಾಷ್ಟ್ರಗಳ ಪ್ರಗತಿಯನ್ನು ಹೇಗೆ ಕುಂಠಿತಗೊಳಿಸಬಹುದು-ಯೋಚಿಸಿದರೂ ಭಯವಾಗುತ್ತದೆ. ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವನ್ನು ಈ ಆಟದಿಂದ ಒಂದು ದೇಶ ಅನುಭವಿಸುತ್ತಿರುತ್ತದೆ. ಈ ಪರಿಣಾಮದ ಕಿಂಚಿತ್ ಯೋಚನೆಯೂ ಇಲ್ಲದೆ ನಮ್ಮಂಥ ಕೆಲ ರಾಷ್ಟ್ರಗಳು ಈ ಆಟವನ್ನು ವಸಾಹತುಶಾಹಿ ಮನೋಭಾವದಿಂದ ಬಿಡಿಸಿಕೊಳ್ಳಲಾಗದೆ ಮೆರೆಸುತ್ತಿವೆ. ಹಾಗೆ ನೋಡಿದರೆ ಅಭಿವೃದ್ಧಿ ಬಯಸುವ ಯಾವುದೇ ರಾಷ್ಟ್ರ ಕ್ರಿಕೆಟ್ ಪ್ರೋತ್ಸಾಹಿಸುವುದಿಲ್ಲ. ಯಾವುದೇ ಮುಂದುವರಿದ ರಾಷ್ಟ್ರಗಳಲ್ಲಿಯೂ ಕ್ರಿಕೆಟ್ ಇಲ್ಲ.

ಉಳಿದ ಯಾವ ಆಟವೂ ಇಷ್ಟು ದೀರ್ಘ ಅವಧಿಯದಾಗಿಲ್ಲ. ಒಂದು, ಒಂದೂವರೆ ಗಂಟೆಯ ಅವಧಿಯಲ್ಲಿ ಮುಗಿದುಹೋಗುತ್ತವೆ. ಟೆನಿಸ್ ಮಾತ್ರ ಆಟಗಾರರ ಪರಿಣತಿಯನ್ನವಲಂಬಿಸಿ ಹೆಚ್ಚು ಅವಧಿ ತೆಗೆದುಕೊಳ್ಳಬಹುದು. ಅದೂ ಸ್ವಲ್ಪ ಹೆಚ್ಚು ಸಮಯ ಮಾತ್ರ. ಆದರೆ ಕ್ರಿಕೆಟ್​ನಂತೆ ದಿನಗಟ್ಟಲೆ ಯಾವ ಆಟವನ್ನೂ ಆಡುವುದಿಲ್ಲ.

ನಮ್ಮಂಥ ರಾಷ್ಟ್ರಗಳಲ್ಲಿ ಕ್ರಿಕೆಟ್​ನಿಂದ ಆದ ದುಷ್ಪರಿಣಾಮವೆಂದರೆ ಉಳಿದ ಎಲ್ಲ ಆಟಗಳನ್ನೂ ಇದು ನುಂಗಿ ನೀರು ಕುಡಿಯಿತು. ನಮ್ಮ ಪ್ರಮುಖ ಆಟಗಳಾದ ಹಾಕಿ, ಕಬಡಿ, ಖೋಖೊ, ವಾಲಿಬಾಲ್ ಮೊದಲಾದವೆಲ್ಲ ಕ್ರಿಕೆಟ್​ನ ಜನಪ್ರಿಯತೆಯಲ್ಲಿ ಕೊಚ್ಚಿಹೋದವು. ವಸಾಹತುಶಾಹಿಯ ಪ್ರಮುಖ ಲಕ್ಷಣವೆಂದರೆ ಬಹುಮುಖೀ ಸಂಸ್ಕೃತಿಯ ನಾಶ. ಇದನ್ನು ಅದು ವ್ಯವಸ್ಥಿತವಾಗಿ ಮಾಡುತ್ತದೆ. ಒಂದು ಶತಮಾನದ ಅವಧಿಯಲ್ಲಿ ಎಲ್ಲ ರಂಗಗಳಲ್ಲೂ ಇದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ದೇಸೀ ಶಕ್ತಿಯನ್ನು ಕುಂಠಿತಗೊಳಿಸುತ್ತಾ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುವುದು ಅದರ ಹುನ್ನಾರ. ಮೇಲ್ನೋಟಕ್ಕೆ ಅಭಿವೃದ್ಧಿ ಪಥದಂತೆ ಕಾಣುವ ಈ ಪರಿ ಆಳದಲ್ಲಿ ಸ್ಥಳೀಯರನ್ನು ಗುಲಾಮರನ್ನಾಗಿಸಿ ಆಳುವ ಕಲೆಯಾಗಿರುತ್ತದೆ. ಕ್ರೀಡಾ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಈಗಂತೂ ಕ್ರಿಕೆಟ್ ಒಂದು ಆಟವಾಗಿಯೂ ಉಳಿದಿಲ್ಲ. ಅದೂ ಒಂದು ಉದ್ಯಮವಾಗಿ ರೂಪಾಂತರವಾಗಿಬಿಟ್ಟಿದೆ. ಅದೀಗ ಕೋಟ್ಯಂತರ ರೂಪಾಯಿಗಳ ವ್ಯವಹಾರ. ನಮ್ಮ ಆಟಗಾರರು ಹರಾಜಿಗೆ ಬಿಕರಿಯಾಗುವ ಸರಕುಗಳು. ಲಜ್ಜೆಯಿಲ್ಲದೆ ತಮ್ಮನ್ನು ತಾವು ಹರಾಜಿಗಿಟ್ಟುಕೊಳ್ಳುವ ಈ ಆಟಗಾರರಲ್ಲಿ ಕ್ರೀಡಾ ಮನೋಭಾವವನ್ನು ನಿರೀಕ್ಷಿಸುವುದಾದರೂ ಹೇಗೆ? ಜೀತದಾಳು ಪದ್ಧತಿ ಹೋಗಬೇಕೆನ್ನುತ್ತೇವೆ. ಇದೊಂದು ರೀತಿ ನವವಸಾಹತುಶಾಹಿ ತರುತ್ತಿರುವ ಹೊಸ ಜೀತದಾಳು ಪದ್ಧತಿಯಲ್ಲವೇ?

ಈಗ ಕ್ರಿಕೆಟ್ ಆಟಗಾರರೆಂದರೆ ಎಲ್ಲಿಲ್ಲದ ಮಾನ್ಯತೆ. ಅವರನ್ನು ದೇವರೆಂದೂ ಕರೆಯುವವರಿದ್ದಾರೆ. ಇದೊಂದು ರೀತಿ ಆಧುನಿಕ ಮೌಢ್ಯ. ಇದು ಮಾರುಕಟ್ಟೆಯ ತಂತ್ರವೂ ಹೌದು. ಆಧುನಿಕ ಸಂದರ್ಭದಲ್ಲಿ ಪ್ರತಿಭೆಯಿದ್ದರೆ ಸಾಲದು. ಅದನ್ನು ಮಾರ್ಕೆಟಿಂಗ್ ಮಾಡುವ ಕಲೆಯೂ ಕರಗತವಾಗಿರಬೇಕು. ಆಗ ಮಾತ್ರ ಪ್ರಸಿದ್ಧರಾಗಲು ಸಾಧ್ಯ. ಈ ಶತಮಾನದ ಪ್ರಮುಖ ಕಲೆ ಮಾರ್ಕೆಟಿಂಗ್. ವ್ಯಕ್ತಿಯಾಗಿರಬಹುದು, ಸಂಸ್ಥೆಯಾಗಿರಬಹುದು, ದೇಶವಾಗಿರಬಹುದು ಮಾರ್ಕೆಟಿಂಗ್ ಮಾಡುವ ಕಲೆಯನ್ನು ಚೆನ್ನಾಗಿ ತಿಳಿದಿರಬೇಕೆನ್ನುವುದು ಆಧುನಿಕ ಜಗತ್ತಿನ ಯಶಸ್ಸಿನ ಸೂತ್ರ ಎಂದು ಗುರ್ತಿಸುತ್ತಾರೆ. ಕ್ರೀಡಾ ಕ್ಷೇತ್ರದಲ್ಲೂ ಈಗ ಇದೇ ಮುಖ್ಯವಾಗಿದೆ. ಪ್ರತಿಭೆ, ಪರಿಶ್ರಮಕ್ಕಿಂತ ಅದನ್ನು ಮಾರ್ಕೆಟಿಂಗ್ ಹೇಗೆ ಮಾಡುವುದೆನ್ನುವುದೇ ಪ್ರಧಾನವಾಗಿದೆ. ಹೀಗಾಗಿಯೇ ಮಾರುಕಟ್ಟೆಯ ತಂತ್ರ, ಸಂಚು, ಹುನ್ನಾರಗಳೆಲ್ಲವೂ ಇಲ್ಲಿಯೂ ಬಳಕೆಯಾಗುತ್ತಿವೆ. ಆಟವಾಡುವವರಿಗಿಂತ ಅವರನ್ನು ಆಡಿಸುವವರೇ ಮುಖ್ಯರಾಗಿದ್ದಾರೆ. ಇದು ಕ್ರೀಡೆಯ ದುರಂತ.

ಕ್ರೀಡೆಯೆಂದರೆ ಮನೋಲ್ಲಾಸ ಎಂಬ ಮೂಲತತ್ವದ ಕಡೆಗೆ ಈಗ ನಮ್ಮ ಚಿಂತನೆ ಮತ್ತೆ ಹೋಗಬೇಕಾಗಿದೆ. ಅದನ್ನು ಉದ್ಯಮಪತಿಗಳಿಂದ ಪಾರು ಮಾಡಬೇಕಾದ ಸವಾಲು ಈಗ ಬೃಹದಾಕಾರದ ರೂಪದಲ್ಲಿ ನಮ್ಮ ಮುಂದಿದೆ. ಎಲ್ಲ ಕ್ಷೇತ್ರಗಳಂತೆಯೇ ಕ್ರೀಡಾರಂಗವನ್ನೂ ಕಾರ್ಪೆರೇಟ್ ವಲಯ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಪರಿಣಾಮ ಹಣಸಂಪಾದನೆಯೇ ಗುರಿಯಾಗಿ ಕ್ರೀಡೆಯೂ ಮಾರಾಟದ ಸರಕಾಗಿಬಿಡುತ್ತದೆ. ಈಗಾಗಲೇ ಕ್ರಿಕೆಟ್ ಹಾಗಾಗಿದೆ. ಉಳಿದ ಆಟಗಳೂ ಆ ಹಾದಿಯಲ್ಲಿವೆ.

ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕ್ರೀಡೆಗೆ ಬೇಕಾದ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು ಶಿಕ್ಷಣ ಕ್ರಮದ ಒಂದು ಭಾಗವಾಗಬೇಕು. ಶಾಲಾ ಕಾಲೇಜುಗಳಲ್ಲಿ ಅದಕ್ಕೆ ತಕ್ಕ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವುದು ಮಾತ್ರವಲ್ಲ, ಅದನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಕ್ರೀಡೆ ದೇಹಬಲ ಮಾತ್ರವಲ್ಲ, ಮನೋಸ್ಥೈರ್ಯವನ್ನೂ ನೀಡುತ್ತದೆ, ಸವಾಲುಗಳನ್ನು ಎದುರಿಸುವ ಮನೋಭಾವ ರೂಪಿಸುತ್ತದೆ ಎಂಬ ಅರಿವಿನಿಂದ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ರೀತಿಯಲ್ಲಿ ಶಿಕ್ಷಣ ಕ್ರಮ ರೂಪುಗೊಳ್ಳಬೇಕು. ಸ್ಪರ್ಧಾಸಂಕಟದಿಂದ ಪಾರಾಗಲು ಕ್ರೀಡಾಮನೋಭಾವ ಅತ್ಯಗತ್ಯವೆಂಬ ಅರಿವು ಮೂಡಬೇಕು. ಇಷ್ಟೊಂದು ಬೃಹತ್ ಜನಸಂಖ್ಯೆಯ ನಮ್ಮ ದೇಶ ಒಲಿಂಪಿಕ್ ಸ್ಪರ್ಧೆಗಳಲ್ಲಿ ಪಡೆಯುವ ಪದಕಗಳೆಷ್ಟು? ಯಾಕೆ ನಮ್ಮ ದೇಶಕ್ಕೆ ಇಂತಹ ದುಸ್ಥಿತಿ? ಇದು ವಸಾಹತುಶಾಹಿ ಮನೋಭಾವದ ಪರಿಣಾಮವಲ್ಲವೇ? ಕ್ರೀಡೆಯೂ ನಗರಕೇಂದ್ರಿತವಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಾಧ್ಯವಾದರೆ ಕ್ರೀಡಾರಂಗದ ಚಿತ್ರವೇ ಬದಲಾಗಬಹುದು.

ಯಾವುದೋ ಒಂದು ಕ್ರೀಡೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕಡೆ ನಾವು ಗಮನ ನೀಡಬೇಕಾಗಿದೆ. ಎಲ್ಲ ಕ್ರೀಡಾಪಟುಗಳನ್ನೂ ಸಮಾನ ನೆಲೆಯಲ್ಲಿ ಗುರ್ತಿಸುವ, ಪ್ರೋತ್ಸಾಹಿಸುವ ಮನೋಭಾವ ಇಂದಿನ ತುರ್ತು ಅಗತ್ಯ. ಕ್ರೀಡೆಗೂ ಈಗ ರಾಜಕೀಯದ ನಂಟು. ಹೀಗಾಗಿಯೇ ಅಲ್ಲಿಯೂ ಪಕ್ಷಪಾತದ ಪಾರ್ಶ್ವವಾಯು. ರಾಜಕೀಯದ ಬೇನೆ ಅದನ್ನೂ ಆವರಿಸಿದೆ. ಆರೋಗ್ಯ, ಶಿಕ್ಷಣ, ಕ್ರೀಡೆ- ಈ ಕ್ಷೇತ್ರಗಳಾದರೂ ಈ ಬೇನೆಯಿಂದ ಬಿಡುಗಡೆ ಪಡೆಯುವಂತಾದರೆ?

Leave a Reply

Your email address will not be published. Required fields are marked *

Back To Top