Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಕ್ರಾಂತಿಕಾರಿಗಳಿಗೆ ಬೆನ್ನೆಲುಬಾದ ಸುಬೋಧ ಚಂದ್ರ

Thursday, 24.08.2017, 3:00 AM       No Comments

ಕೋಲ್ಕತಾದ ವೆಲಿಂಗ್ಟನ್ ಸ್ಕೆ್ವೕರ್ ಒಂದು ಪ್ರಸಿದ್ಧ ಚೌಕ. ಇತಿಹಾಸದ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುವ ಈ ವೆಲಿಂಗ್ಟನ್ ಸ್ಕೆ್ವೕರ್​ನಲ್ಲಿ ಇಂದಿಗೂ ಇತಿಹಾಸದ ಇನ್ನೊಂದು ಸಾಕ್ಷಿಯಾಗಿ ನಿಂತಿದೆ ಪಾಳುಬಿದ್ದಿರುವ ಬೃಹತ್ ಅರಮನೆಯಂಥ ತಿಳಿಗುಲಾಬಿ ಬಣ್ಣದ ಬಂಗಲೆ. ಕಳೆದ ಶತಮಾನದ ಮೊದಲ ದಶಕದಲ್ಲಿದ್ದ ಭವ್ಯತೆ ಮಾಯವಾಗಿ ಇಂದು ಅದು ಕಳಾಹೀನವಾಗಿ, ಹಾಳು ಸುರಿಯುವ ದೆವ್ವದಮನೆಯಂತಿದೆ.

ಮೂರಂತಸ್ತಿನ, ಹಲವು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ‘ನಂ. 12, ವೆಲಿಂಗ್ಟನ್ ಸ್ಕೆ್ವೕರ್’ ಬಂಗಲೆಯಲ್ಲೇ ಕಿಂಗ್ಸ್​ಫೋರ್ಡ್​ನ ಹತ್ಯೆ ಮಾಡಬೇಕೆಂದು ಸಂಕಲ್ಪ ಮಾಡಿ ಮುಝುಫ್ಪರಪುರ್ ಹತ್ಯಾಕಾಂಡಕ್ಕೆ, ತನ್ಮೂಲಕ ರಾಷ್ಟ್ರೀಯ ಜಾಗೃತಿಯ ವೀರಾವೇಶ ಹೋರಾಟದ ಪರ್ವ ಒಂದಕ್ಕೆ ನಾಂದಿ ಹಾಡಿದ್ದು. 1906ರ ಡಿಸೆಂಬರ್​ನಲ್ಲಿ ಅರವಿಂದ ಘೊಷ್, ಬಾರೀಂದ್ರ ಘೊಷ್, ಭೂಪೇಂದ್ರನಾಥ ದತ್ತ, ಅವಿನಾಶ್ ಚಕ್ರವರ್ತಿ, ಜತೀಂದ್ರನಾಥ ಮುಖರ್ಜಿ, ಸತ್ಯೇಂದ್ರ ಸೇನ್, ಪುಲಿನ್ ಬಿಹಾರಿ ದಾಸ್ ಮುಂತಾದ 30-40 ಬಂಗಾಳಿ ಘಟಾನುಘಟಿಗಳು ಸಭೆ ಸೇರಿ ಕ್ರಾಂತಿಕಾರ್ಯದ ರೂಪರೇಷೆಗಳನ್ನು ಸಿದ್ಧಗೊಳಿಸಿದ್ದು ಈ ಬಂಗಲೆಯಲ್ಲೇ! ಸಿಸ್ಟರ್ ನಿವೇದಿತಾರ ಆಹ್ವಾನದಂತೆ ಬರೋಡಾದ 750 ರೂ. ಸಂಬಳದ ಕೆಲಸವನ್ನು ತ್ಯಜಿಸಿ ಕೇವಲ 150 ರೂ. ಸಂಬಳದ ಬೆಂಗಾಲ್ ನ್ಯಾಷನಲ್ ಕಾಲೇಜು ಪ್ರಿನ್ಸಿಪಾಲ್ ಹುದ್ದೆಯನ್ನು ಒಪ್ಪಿಕೊಂಡು ಕಲ್ಕತ್ತೆಗೆ ಅರವಿಂದ ಘೊಷರು ಹಿಂದಿರುಗಿದಾಗ ಮನೆಯ ಮಾಲೀಕರ ಆಹ್ವಾನದ ಮೇರೆಗೆ ಈ ಬಂಗಲೆಯಲ್ಲೇ ಸುಮಾರು 2 ವರ್ಷ ತಮ್ಮ ನಿವಾಸವನ್ನು ಏರ್ಪಡಿಸಿಕೊಂಡದ್ದು.

‘ಬಂದೇಮಾತರಂ’ ಪತ್ರಿಕೆ ಜನಿಸಿದ ಸ್ಥಳ: ಬಂಗಾಳ ವಿಭಜನೆಯ ನಂತರ ಜನಜಾಗೃತಿಯ ಪತ್ರಿಕೋದ್ಯಮಕ್ಕೆ ಓನಾಮ ಬರೆದಿದ್ದು ‘ನಂ. 12, ವೆಲಿಂಗ್ಟನ್ ಸ್ಕೆ್ವೕರ್’ ಭವ್ಯಭವನದಲ್ಲೇ. ‘ಬಂದೇಮಾತರಂ’ ಪತ್ರಿಕೆಯನ್ನು, ಸಿಂಹವಾಣಿಯ ಬಿಪಿನ್ ಚಂದ್ರಪಾಲ್​ರ ಸಂಪಾದಕತ್ವದಲ್ಲಿ ಅರವಿಂದ ಘೊಷರ ನಾಯಕತ್ವದಲ್ಲಿ ಪ್ರಕಟಿಸಬೇಕೆಂದು ನಿರ್ಧರಿಸಿದ್ದು ಇಲ್ಲೇ ಈ ಬಂಗಲೆಯಲ್ಲೇ. ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಹಲವು ಬಾರಿ ಪೊಲೀಸ್ ದಾಳಿಗೆ ತುತ್ತಾದ ಹೆಮ್ಮೆ ಈ ಭವನದ್ದು. ಹೇಳುತ್ತ ಹೋದರೆ ಈ ಬಂಗಲೆಯ ಕೀರ್ತಿ ಪರಂಪರೆಯ ಪಟ್ಟಿಗೆ ಕೊನೆಯೇ ಇರುವುದಿಲ್ಲ.

ಮೇಲ್ಕಂಡ ಘಟನೆಗಳ ಸರಪಳಿಗೆ ತಾಣವಾದ ಈ ಬಂಗಲೆಯ ಅಂದಿನ ಮಾಲೀಕ ರಾಜಾ ಸುಬೋಧ ಚಂದ್ರ ಮಲ್ಲಿಕ್. ಸ್ಪುರದ್ರೂಪಿ ಕಲಾರಸಿಕ. ಕೋಮಲ ಹೃದಯದ ವಿಶಾಲ ಮನಸ್ಸಿನ ಶ್ರೇಷ್ಠದಾನಿ. ಚರಿತ್ರೆಯ ಪುಟಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ತನು-ಮನ-ಧನಪೂರ್ವಕವಾಗಿ ನಿಷ್ಕಾಮ ದೇಶಸೇವೆ ಮಾಡಿದ ಮಹಾನ್ ದೇಶಭಕ್ತ. ತನ್ನ ಧನಸಂಪತ್ತು ದೇಶದ ಉಪಯೋಗಕ್ಕೆ ಬಾರದೆ ಹೋದಲ್ಲಿ ಅದರ ಅಸ್ತಿತ್ವಕ್ಕೆ ಅರ್ಥವೇ ಇಲ್ಲ ಎಂದು ಹೇಳಿ ಸಮಯದ ಕರೆ ಬಂದಾಗಲೆಲ್ಲ ಹಿಂದು-ಮುಂದು ನೋಡದೆ ತನ್ನ ತಿಜೋರಿಯ ಬಾಗಿಲುಗಳನ್ನು ದೇಶಕಾರ್ಯಕ್ಕಾಗಿ ತೆರೆದಿಟ್ಟ ದಾನಶೂರ ಕರ್ಣ.

ಬಂಗಾಳಿ ಜಮೀನುದಾರರ ಪಟ್ಟಿಯಲ್ಲಿ ದಶರಥ ಬಸು ಬಹುದೊಡ್ಡ ಹೆಸರು. ದಶರಥ ಬಸುವಿನ 26ನೇ ತಲೆಮಾರಿನ ಕುಡಿ ಪ್ರಬೋಧ ಚಂದ್ರ. ಅವನ ಮಗನೇ ರಾಜಾ ಸುಬೋಧ ಚಂದ್ರ ಬಸು ಮಲ್ಲಿಕ್. ರಾಜಾ ಎಂಬುದು ಬ್ರಿಟಿಷರು ಕೊಟ್ಟ ಅಥವಾ ವಂಶಪಾರಂಪರ್ಯವಾಗಿ ಬಂದ ಉಪಾದಿ ಆಗಿರಲಿಲ್ಲ. ಅದು ಜನರಿತ್ತ ಪ್ರೀತಿಯ ಹೆಸರು. ಅವರ ರಾಜಸಮಾನ ನಡೆನುಡಿಗಳನ್ನು ಕಂಡ ಕಲ್ಕತ್ತಾ ಪ್ರಜೆಗಳು ಅವರನ್ನು ಅನಭಿಷಿಕ್ತ ರಾಜಾ ಎಂದರು. ಸ್ವತಃ ಅನಭಿಷಿಕ್ತ ರಾಜರಾಗಿದ್ದ ಅಪ್ರತಿಮ ದೇಶಭಕ್ತ ಸುರೇಂದ್ರನಾಥ ಬ್ಯಾನರ್ಜಿಯಂಥವರು, ‘‘ಸುಬೋಧ ಚಂದ್ರರು ‘ರಾಜ’ರಷ್ಟೇ ಅಲ್ಲ ರಾಜಾಧಿರಾಜ, ಸಾಮ್ರಾಟ!’ ಎಂದು ಉದ್ಗರಿಸಿದ್ದರು.

ಬಂಗಾಳ ವಿಭಜನೆಯ ನಂತರ ಭುಗಿಲೆದ್ದ ರಾಷ್ಟ್ರಾಭಿಮಾನದ ವಾತಾವರಣದಲ್ಲಿ ರಾಷ್ಟ್ರೀಯ ಚಳವಳಿ ಎಲ್ಲ ರಂಗಗಳಲ್ಲೂ ಬಿರುಸಿನಿಂದ ಸಾಗಿದ್ದಾಗ ತಾವೇ ಆರಂಭಿಸಿದ್ದ ‘ಫೀಲ್ಡ್ ಆಂಡ್ ಅಕಾಡೆಮಿ’ ಕ್ಲಬ್​ನ ಕಟ್ಟಡದಲ್ಲಿ ಸುಬೋಧ ಚಂದ್ರ ಕುಳಿತಿದ್ದಾಗ ಅದೇ ಕ್ಲಬ್​ನ ಹೊರವಲಯದ ಮೈದಾನದಲ್ಲಿ ಒಂದು ಸಾರ್ವಜನಿಕ ಸಭೆ ನಡೆಯುತ್ತದೆ. ಗುರುದೇವ ರವೀಂದ್ರನಾಥ ಟ್ಯಾಗೋರರು ಭಾಗವಹಿಸಿದ್ದ ಆ ಸಭೆಯಲ್ಲಿ ಬ್ರಿಟಿಷರ ಶಿಕ್ಷಣ ನೀತಿಯನ್ನು ವಿರೋಧಿಸುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ನಿರ್ಣಯದ ಸುದ್ದಿ ಸುಬೋಧ ಚಂದ್ರರ ಕಿವಿಗೆ ಬೀಳುತ್ತದೆ. ‘ನಮ್ಮ ಹುಡುಗ-ಹುಡುಗಿಯರಿಗೆ ರಾಷ್ಟ್ರೀಯ ಶಿಕ್ಷಣ ನೀಡುವ ಸಲುವಾಗಿ ನೀವು ನಿಜವಾಗಿಯೂ ಶಾಲಾ ಕಾಲೇಜುಗಳನ್ನು ಆರಂಭಿಸುವಿರಾದರೆ ಇದೋ ತೆಗೆದುಕೊಳ್ಳಿ ನನ್ನ ಒಂದು ಲಕ್ಷ ರೂ. ದೇಣಿಗೆ’ ಎಂದು ಅಲ್ಲಿಂದಲ್ಲಿಯೇ ಘೊಷಿಸಿದರು, ಧೀಮಂತ ಶ್ರೀಮಂತ ಸುಬೋಧ ಚಂದ್ರ. ಅಂದಿನ ಒಂದು ಲಕ್ಷ ಇಂದಿನ ಹಲವು ಕೋಟಿಗಳಿಗೆ ಸಮ! 1905ರ ನವೆಂಬರ್ 9ರಂದು ನಡೆದ ಸಭೆಯ ಅಧ್ಯಕ್ಷತೆ ಸುಬೋಧ ಚಂದ್ರರದೇ. ಚಿತ್ತರಂಜನ ದಾಸರು ನ್ಯಾಷನಲ್ ಕಾಲೇಜು ಸ್ಥಾಪನೆಗೆ ಅಂದು ಕರೆ ನೀಡಿದರು. ಇದೇ ಮುಂದೊಮ್ಮೆ ಜಾಧವಪುರ ಯೂನಿವರ್ಸಿಟಿಯ ಸ್ಥಾಪನೆಗೆ ಮೂಲವಾಯಿತು. ಇಂದು ಅದೊಂದು ಪ್ರಮುಖ ವಿಶ್ವವಿದ್ಯಾಲಯ.

ವಿದೇಶಿ ಶಿಕ್ಷಣ, ಸ್ವದೇಶಿ ಚಿಂತನ: ಸುಬೋಧ ಚಂದ್ರರಿಗೆ 9 ವರ್ಷವಿದ್ದಾಗಲೇ ತಂದೆ ಪ್ರಬೋಧ ಚಂದ್ರರು ಕಾಲವಾಗಿ, ಚಿಕ್ಕಪ್ಪ ಹೇಮಚಂದ್ರ ಮಲ್ಲಿಕ್ ಆ ಕುಟುಂಬದ ಯಜಮಾನನಾಗುತ್ತಾನೆ. ಐಷಾರಾಮಿ ಜೀವನದ ಶೋಕಿಲಾಲ ಹೇಮಚಂದ್ರ, ಸುಬೋಧನನ್ನು ವಿದ್ಯಾಭ್ಯಾಸಕ್ಕಾಗಿ ಕೇಂಬ್ರಿಜ್​ನ ಟ್ರಿನಿಟಿ ಕಾಲೇಜಿಗೆ ಕಳಿಸುತ್ತಾನೆ. ಹುಟ್ಟಿನಿಂದಲೇ ಸಾತ್ತಿ್ವಕ, ಸುಸಂಸ್ಕೃತ ಸ್ವಭಾವದ ಸುಬೋಧನ ಮೇಲೆ ಚಿಕ್ಕಂದಿನಿಂದಲೇ ರಾಮಕೃಷ್ಣ-ವಿವೇಕಾನಂದರ ಪ್ರಭಾವ ಆಗಿರುತ್ತದೆ. ಇಂಗ್ಲೆಂಡಿನಿಂದ 1903ರಲ್ಲಿ ಕಲ್ಕತ್ತೆಗೆ ಹಿಂದಿರುಗಿದ ಸುಬೋಧ ಚಂದ್ರ್ರಗೆ ಅಲ್ಲಿನ ಆಗಿನ ವಾತಾವರಣ ದೇಶಭಕ್ತಿಗೆ ಪ್ರೇರಣೆ ನೀಡುತ್ತದೆ. ದೇಶಭಕ್ತ ಸಜ್ಜನರನ್ನು, ಪ್ರಭಾವಿ ವ್ಯಕ್ತಿಗಳನ್ನು ಒಟ್ಟಿಗೆ ಸೇರಿಸಲು ‘ಫೀಲ್ಡ್ ಆಂಡ್ ಅಕಾಡೆಮಿ’ ಎಂಬ ಕ್ಲಬ್ ಸ್ಥಾಪಿಸುತ್ತಾನೆ. ಅಲ್ಲಿ ಚಿತ್ತರಂಜನ ದಾಸ್, ಬಿಪಿನ್​ಚಂದ್ರ ಪಾಲ್, ರವೀಂದ್ರನಾಥ ಟ್ಯಾಗೋರ್, ಅಬ್ದುಲ್ ರಸೂಲ್ ಮುಂತಾದ ಗಣ್ಯರು ಸದಸ್ಯರಾಗಿರುತ್ತಾರೆ. ಈ ಕ್ಲಬ್ ಐಷಾರಾಮಿ ಸೋಮಾರಿಗಳ ಕ್ಲಬ್ ಅಲ್ಲ. ಸ್ವಾತಂತ್ರ್ಯಕ್ಕಾಗಿ ಚಡಪಡಿಸುತ್ತಿದ್ದಂಥ ಚೇತನಗಳ ಕ್ಲಬ್. ಬಂಗಾಳ ವಿಭಜನೆಯ ಚಟುವಟಿಕೆಯನ್ನು ವೈಸರಾಯ್ ಲಾರ್ಡ್ ಕರ್ಜನ್ ಆರಂಭಿಸುತ್ತಿದ್ದಂತೆ ಸುಬೋಧ ಚಂದ್ರ ಹೋರಾಟಕ್ಕೆ ಆರ್ಥಿಕ ಸಹಾಯ ನೀಡುವುದರ ಜತೆಗೆ ಎಲ್ಲ ಹಂತಗಳಲ್ಲೂ ಅದರಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಾರೆ.

ಅವನ ಮಾವ ಕ್ಷೇತ್ರಚಂದ್ರ ಮಲ್ಲಿಕ್​ಗೆ ಸೇರಿದ್ದ ಇನ್ನೊಂದು ಭವ್ಯ ಬೃಹತ್ ಬಂಗಲೆಯಲ್ಲಿ ಒಂದು ಸಾವಿರ ಜನರು ಸೇರಬಹುದಿದ್ದ ವಿಶಾಲ ಪ್ರಾಂಗಣವಿತ್ತು. ಅಲ್ಲಿ ‘ಫೀಲ್ಡ್ ಆಂಡ್ ಅಕಾಡೆಮಿ’ ಕ್ಲಬ್ ವತಿಯಿಂದ, ಬಂಗಾಳ ವಿಭಜನೆಯನ್ನು ವಿರೋಧಿಸುವ ಬೃಹತ್ ಸಭೆ ಏರ್ಪಡಿಸಲಾಗಿತ್ತು. ಅದರ ಸಂಚಾಲನೆ, ಸಂಘಟನೆ, ಸಂಯೋಜನೆ ಎಲ್ಲ ಸುಬೋಧ ಚಂದ್ರರದೇ. ರವೀಂದ್ರನಾಥ ಟ್ಯಾಗೋರ್ ಅಧ್ಯಕ್ಷತೆಯ ಈ ಸಭೆಯಲ್ಲಿ ಬಿಪಿನ್​ಚಂದ್ರ ಪಾಲ್, ಅಬ್ದುಲ್ ರಸೂಲ್ ಮುಂತಾದವರು ವಿದ್ಯಾರ್ಥಿಗಳಿಗೆ ವಿಭಜನೆಯ ವಿರುದ್ಧ ಹೋರಾಡಲು ನೀಡಿದ ಕರೆ ಮುಂದೆ ದೇಶೋವಿಶಾಲ ಪ್ರತಿಭಟನೆಗಳಿಗೆ ನಾಂದಿಯಾಗುತ್ತದೆ.

ಹದಿನಾಲ್ಕು ತಿಂಗಳು ಜೈಲುವಾಸ: 1904ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನ ಸದಸ್ಯರಾದ ಸುಬೋಧ ಚಂದ್ರ ಬಂಗಾಳದ ಅಂದಿನ ಕಾಂಗ್ರೆಸ್ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು. 1906ರ ಏಪ್ರಿಲ್​ನಲ್ಲಿ ಬಾರಿಸಾಲ್​ನಲ್ಲಿ ನಡೆದ ಬಂಗಾಳ ಪ್ರಾಂತೀಯ ಸಮ್ಮೇಳನ ಅನೇಕ ದೃಷ್ಟಿಯಿಂದ ಐತಿಹಾಸಿಕ. ಸುರೇಂದ್ರನಾಥ ಬ್ಯಾನರ್ಜಿ, ಅರವಿಂದ ಘೊಷ್ ಮುಂತಾದ ಮಹಾಮಹಿಮರ ಜತೆಯಲ್ಲಿ ಬಾರಿಸಾಲ್​ಗೆ ಹೋದ ಸುಬೋಧ ಚಂದ್ರ ಸಮ್ಮೇಳನದಲ್ಲಿ ಸಂಪೂರ್ಣ ಸಕ್ರಿಯಪಾತ್ರ ವಹಿಸಿದ್ದರು. ಅಬ್ದುಲ್ ರಸೂಲ್ ಸಮ್ಮೇಳನದ ಅಧ್ಯಕ್ಷರು. ಬ್ಯಾನರ್ಜಿಯವರು ‘ತ್ವರಿತದಲ್ಲಿಯೇ ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಅಂತ್ಯಕ್ರಿಯೆ ಮಾಡಲಾಗುವುದು’ ಎಂದು ಉದ್ಘೋಷಿಸಿ ಬಂಧಿತರಾದ ಆ ಸಮ್ಮೇಳನದ ತೆರೆಯ ಹಿಂದಿನ ಸೂತ್ರಧಾರಿಗಳ ಪೈಕಿ ಸುಬೋಧ ಚಂದ್ರ ಪ್ರಮುಖರು. ಮೆರವಣಿಗೆಯ ಮುಂಚೂಣಿಯಲ್ಲಿ ಚಿತ್ತರಂಜನ ದಾಸ್, ಅಬ್ದುಲ್ ರಸೂಲ್, ಅರವಿಂದ ಘೊಷರ ಜತೆ ‘ವಂದೇಮಾತರಂ’ ಎಂದು ಗರ್ಜಿಸುತ್ತ ಹೆಜ್ಜೆ ಹಾಕಿದರು.

ಆ ದಿನಗಳಲ್ಲಿ ಬಂಗಾಳದಲ್ಲಿ ಭಾರತೀಯರದೇ ಆದ ಒಂದು ಬ್ಯಾಂಕ್ ಇರಲಿಲ್ಲ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿರಬೇಕೆಂಬುದರ ಜತೆಗೆ ರಾಷ್ಟ್ರೀಯ ಬ್ಯಾಂಕ್, ಇನ್ಶೂರೆನ್ಸ್ ಕಂಪನಿಗಳಿರಬೇಕೆಂಬ ಕಳಕಳಿಯಿಂದ ‘ರೀಡ್ ಆಂಡ್ ಕಂಪನಿ’ ಎಂಬ ಹೆಸರಿನಲ್ಲಿ ಬ್ಯಾಂಕ್ ಆರಂಭಿಸಿದರು. ಜೀವವಿಮಾ ಕಂಪನಿಯೊಂದನ್ನು 1912ರಲ್ಲಿ ಶುರುಮಾಡಿದರು. ರಾಷ್ಟ್ರದ ಸರ್ವತೋಮುಖ ಪ್ರಗತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಕಳೆದ ಶತಮಾನದ ಮೊದಲ ದಶಕದಲ್ಲಿಯೇ ಚಿಂತನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತಂದ ಎಲೆಮರೆಯ ಕಾಯಿಯಂತಿದ್ದ ಇವರು ಸದಾಕಾಲ ಬ್ರಿಟಿಷರ ಕಾಕದೃಷ್ಟಿಯಲ್ಲಿದ್ದವರೇ. ಅವರ ಎಲ್ಲ ಚಲನವಲನಗಳು, ಅವರು ಸ್ವಾತಂತ್ರ್ಯ ಚಳವಳಿಗೆ ನೀಡುತ್ತಿದ್ದ ಬೆಂಬಲ, ಅರವಿಂದ ಘೊಷರಾದಿಯಾಗಿ ಎಲ್ಲ ಕ್ರಾಂತಿಕಾರಿಗಳಿಗೆ ನೀಡುತ್ತಿದ್ದ ಆರ್ಥಿಕ ಸಹಾಯ ಹಾಗೂ ಕುಮ್ಮಕ್ಕು, ರಾಷ್ಟ್ರೀಯ ಪತ್ರಿಕೆಗಳ ಬೆನ್ನೆಲುಬೇ ಅವರಾಗಿದ್ದರೆಂಬ ಸಂಗತಿ ಪೊಲೀಸರ ರಹಸ್ಯ ದಾಖಲೆಗಳಲ್ಲಿ ಸೇರಿಹೋಗಿದ್ದವು. ಅವರನ್ನು ಬಗ್ಗುಬಡಿಯಲು ಎಲ್ಲ ಬಗೆಯ ಸಿದ್ಧತೆಗಳು ಆಗಿ ಗುಪ್ತಚಾರರ ಹದ್ದಿನ ಕಣ್ಣು ಅವರನ್ನು ಹಿಂಬಾಲಿಸುತ್ತಿತ್ತು. ಅತ್ತ ಆಲಿಪುರ ಮೊಕದ್ದಮೆ ಜರುಗುತ್ತಿತ್ತು. ಅರವಿಂದ ಮತ್ತು ಸಹಕಾರಿಗಳು ಜೈಲುವಾಸ ಅನುಭವಿಸುತ್ತಿದ್ದಾಗಲೇ ಸುಬೋಧ ಚಂದ್ರರನ್ನು ಹೇಗೆ ಒಳಗೆ ಹಾಕುವುದೆಂದು ಪೊಲೀಸರ ಯೋಚನೆ ಸಾಗಿತ್ತು.

1908ರ ಅಕ್ಟೋಬರ್. ಸುಬೋಧ ಚಂದ್ರ ತುಸು ಅನಾರೋಗ್ಯದ ಕಾರಣ, ಸಂಸಾರ ಸಮೇತ ಬದಲಾವಣೆಗಾಗಿ ವಾರಾಣಸಿಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಕಲ್ಕತ್ತೆಯ ಪೊಲೀಸ್ ಪಡೆ ವಾರಂಟ್ ಸಹಿತ ವಾರಾಣಸಿಗೆ ಧಾವಿಸಿತು. ಅವರ ವಾರಾಣಸಿಯ ಬೃಹತ್ ಬಂಗಲೆಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿ ಕುಟುಂಬದವರಿಂದ ಬೇರ್ಪಡಿಸಿತು. ಬಾಯಲ್ಲಿ ಬಂಗಾರದ ಚಮಚವನ್ನು ಇಟ್ಟುಕೊಂಡೇ ಹುಟ್ಟಿದ್ದ ಈ ಆಗರ್ಭ ಶ್ರೀಮಂತ ಧೀಮಂತ ದೇಶಪ್ರೇಮಿಯ ಕೈಗೆ ಬ್ರಿಟಿಷ್ ಸರ್ಕಾರದ ಕೈಕೋಳಗಳು ಬಿದ್ದವು! ಹೆಂಡತಿ-ಮಕ್ಕಳು, ಬಂಧು-ಬಳಗ ಗೊಳೋ ಎಂದು ಅಳುತ್ತಾ ಕಣ್ಣೀರು ಸುರಿಸುತ್ತಿರಲು ಸುಬೋಧ ಚಂದ್ರರನ್ನು ಪೊಲೀಸರು ವ್ಯಾನಿನಲ್ಲಿ ಹತ್ತಿಸಿಕೊಂಡು ಹೋದರು. ಮೊದಲು ಬರೈಲಿ ಜೈಲಿನಲ್ಲಿ ನಂತರ ಆಲ್ಮೋರಾ ಜೈಲಿನಲ್ಲಿ ಇರಿಸಿ 14 ತಿಂಗಳುಗಳ ಕಾಲ ಅಲ್ಲಿ ಕೊಳೆಯುವಂತೆ ಮಾಡಿದರು. ಅನಂತರ 1910ರ ಫೆಬ್ರವರಿ 10ರಂದು ಅವರ ಬಿಡುಗಡೆಯಾಯಿತು. ಅವರು ಹೊರಬರುವ ವೇಳೆಗೆ ಅರವಿಂದರು ಪಾಂಡಿಚೆರಿ ತಲಪಿದ್ದರು. ಇತರ ಕ್ರಾಂತಿಕಾರಿಗಳು ಅಂಡಮಾನ್ ಜೈಲಿನಲ್ಲಿ ಅಥವಾ ಇತರ ಜೈಲುಗಳಲ್ಲಿ ಬಂಧಿಯಾಗಿದ್ದರು.

ಸುಬೋಧ ಚಂದ್ರ ಮಲ್ಲಿಕ್ ನಿಧನರಾದಾಗ ಅವರ ವಯಸ್ಸು ಕೇವಲ ನಲವತ್ತೊಂದು! ದೇಶದ ಆಪತ್ಸಮಯದಲ್ಲಿ ಉಪಯೋಗಕ್ಕೆ ಬಾರದ ಸಂಪತ್ತಿದ್ದರೆ ಏನು ಬಂತು ಭಾಗ್ಯ? ‘ರಾಷ್ಟೀಯ ಇದಂ ನ ಮಮ’ ಎಂಬ ರಾಷ್ಟ್ರನಾಯಕರ ಮಾತಿನಂತೆ ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಜೀವನವನ್ನು ಸಾರ್ಥಕಗೊಳಿಸಿಕೊಂಡ ಸ್ವನಾಮ ಧನ್ಯರು ಸುಬೋಧ ಚಂದ್ರ ಮಲ್ಲಿಕರು. ಅಂದಿನ ನಾಯಕರು ದೇಶಕ್ಕಾಗಿ ತಮ್ಮ ಸಂಪತ್ತನ್ನು ನೀಡಿದರೆ ಇಂದಿನ ನಾಯಕರು ದೇಶವನ್ನೇ ಲೂಟಿ ಹೊಡೆಯುತ್ತಿದ್ದಾರೆ! ಎಂಥ ವಿಪರ್ಯಾಸ!

(ಲೇಖಕರು ಹಿರಿಯ ಪತ್ರಕರ್ತರು)

 

Leave a Reply

Your email address will not be published. Required fields are marked *

Back To Top