Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಕ್ರಾಂತಿಕಾರಕ ನಾಯಕತ್ವಕ್ಕೆ ಮಾದರಿ ಯುಗಪುರುಷ

Saturday, 29.04.2017, 3:05 AM       No Comments

ಸಂಕೀರ್ಣ ಜನಾಂದೋಲನ ಎನಿಸಿದ್ದ ‘ಕಲ್ಯಾಣ ಕ್ರಾಂತಿ’ ಅನೇಕ ಅನುಕರಣೀಯ ಅಂಶಗಳನ್ನು ಒಡಲಲ್ಲಿ ತುಂಬಿಕೊಂಡಿತ್ತು. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ಅಡಿಗಲ್ಲಾಗಿರಬೇಕು ಎಂಬುದನ್ನು ಸಾರಿದ ಈ ಸಮಾಜಮುಖಿ ಚಳವಳಿಯ ಅಧ್ವರ್ಯುವಾಗಿದ್ದ ಬಸವಣ್ಣನವರು ‘ನಾಯಕತ್ವದ ಗುಣ’ ಎಂಬ ಪರಿಕಲ್ಪನೆಯ ಸಾಕಾರಮೂರ್ತಿಯಾಗಿದ್ದರು. ಆ ಕುರಿತಾದ ಒಂದು ಕಿರುನೋಟವಿದು.

| ಡಿ.ಪಿ. ಪ್ರಕಾಶ್

ಜಗತ್ತು ವಿವಿಧ ರಂಗಗಳಲ್ಲಿ ಅನೇಕ ಆಂದೋಲನಗಳನ್ನು ಕಂಡಿದೆ. ಯಾವುದೇ ಆಂದೋಲನಕ್ಕೆ ನಾಯಕನ ಅಗತ್ಯ ಎಷ್ಟು ಮುಖ್ಯವೋ ನಾಯಕತ್ವದ ಗುಣವೂ ಅಷ್ಟೇ ಮುಖ್ಯ. ವಿವಿಧ ಕಾಲಘಟ್ಟಗಳಲ್ಲಿ ನಡೆದುಹೋಗಿರುವ ಆಂದೋಲನಗಳನ್ನು ಪರಾಮಶಿಸಿದಾಗ, ಕೆಲವು ನಾಯಕತ್ವ ಗುಣಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅಂಥವುಗಳನ್ನು ಮಾದರಿ ನಾಯಕನಿಗಿರಬೇಕಾದ ಗುಣಗಳಿಗೆ ಹೋಲಿಸಿ ನೋಡಲಾಗುತ್ತದೆ. ಎಲ್ಲ ಸ್ತರಗಳಲ್ಲಿನ ವ್ಯಕ್ತಿಗಳನ್ನು ಸಂಘಟಿಸಿ ಅವರಲ್ಲಿ ಹೊರಹೊಮ್ಮಿದ ಒಮ್ಮತದ ಶಕ್ತಿಯಿಂದ ಪರ್ಯಾಯ ಸಮಾಜ ನಿರ್ವಿುಸಿದ ಬಸವಣ್ಣನವರ ಕ್ರಾಂತಿಕಾರಕ ನಾಯಕತ್ವ ಇಂದಿಗೂ ಜಗತ್ತನ್ನು ಬೆರಗುಗೊಳಿಸುವಂಥದ್ದು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಕೇವಲ ಬಾಯಿಂದ ಬಾಯಿಗೆ ಸಂಗತಿಗಳು ಪ್ರಚಾರಗೊಳ್ಳುತ್ತಿದ್ದ ಆ ಕಾಲದಲ್ಲಿ ಕೆಲವೇ ದಶಕಗಳಲ್ಲಿ ಒಂದು ಪರ್ಯಾಯ ಸಮಾಜ ಅಸ್ತಿತ್ವಕ್ಕೆ ಬಂದಿತೆಂದರೆ ಬಸವಣ್ಣನವರದು ಒಂದು ರೀತಿಯಲ್ಲಿ ಅಸಾಧಾರಣ ನಾಯಕತ್ವವೇ ಸರಿ.

‘ಕಲ್ಯಾಣ ಕ್ರಾಂತಿ’ ಒಂದು ಸಂಕೀರ್ಣ ಜನಾಂದೋಲನ. ಪ್ರಗತಿಪರ ಚಳವಳಿಗಳಿಗೆ ಅನೇಕ ಅನುಕರಣೀಯ ಅಂಶಗಳು ಅಲ್ಲಿ ಅಡಕವಾಗಿರುವುದನ್ನು ಗಮನಿಸಬಹುದು. ಇದು ಪ್ರಮುಖವಾಗಿ ಸಮಾಜಮುಖಿಯಾಗಿದ್ದು, ಸಾಮೂಹಿಕ ನಾಯಕತ್ವ ಮತ್ತು ಬಸವಣ್ಣನವರ ನಾಯಕತ್ವ ಎರಡೂ ಅದರಲ್ಲಿ ಐಕ್ಯಗೊಂಡಿವೆ. ಸಮಷ್ಟಿಯ ಹಿತಕ್ಕಾಗಿ ವ್ಯಷ್ಟಿಪ್ರಜ್ಞೆ ತನ್ನನ್ನು ತಾನು ಅಡಿಗಲ್ಲಾಗಿರಿಸಿಕೊಂಡಿರುವುದು ಈ ಕ್ರಾಂತಿಯ ವೈಶಿಷ್ಟ್ಯ ಆದ್ದರಿಂದಲೇ ಇಂದಿನ ಅನೇಕ ಸಮಸ್ಯೆ, ಪಿಡುಗುಗಳಿಗೆ ಮತ್ತೊಮ್ಮೆ ಸಮಷ್ಟಿಹಿತ ಕ್ರಾಂತಿಯಾಗಬೇಕೆಂದರೆ ಕಲ್ಯಾಣ ಕ್ರಾಂತಿ ಮಾದರಿಯಾಗಿ ನಿಲ್ಲುತ್ತದೆ. ಜನಾಂದೋಲನಕ್ಕೆ ಹೊಸ ವ್ಯಾಖ್ಯಾನ ಬರೆಯಿತೇನೋ ಎನ್ನುವಂತೆ ಕಲ್ಯಾಣ ಕ್ರಾಂತಿ ನಡೆಯಿತು. ಸಮಾಜದ ಎಲ್ಲ ವಲಯಗಳಿಂದ ಜನರನ್ನು ಸೆಳೆದು ಸಾಮೂಹಿಕ ಶಕ್ತಿಗೆ ಉದಾಹರಣೆಯಾಯಿತು. ಆದ್ದರಿಂದಲೇ ಕಲ್ಯಾಣ ಕ್ರಾಂತಿ ಇಂದು ಜಗತ್ತು ಬಯಸುವ ಪರಿವರ್ತನೆಯ ಶಕ್ತಿಗೆ ಪರಮೋಚ್ಚ ಉದಾಹರಣೆ. ಅಲ್ಲಿ ಉತ್ತರದಾಯಿತ್ವದ ನೆರಳಡಿಯಲ್ಲೇ ಅನೇಕ ಶರಣರು ಸಂದಭೋಚಿತ ನಾಯಕತ್ವದೊಂದಿಗೆ ಸಹಜವೊ ಎಂಬಂತೆ ಕೈ ಜೋಡಿಸಿದರು. ಅಸಾಧ್ಯವಾದುದನ್ನು ಸಾಧಿಸಿದರು. ಈ ಯಶೋಗಾಥೆಯೇ ಕಲ್ಯಾಣ ಕ್ರಾಂತಿಯ ವ್ಯಾಕರಣವಾಗಿದೆ.

ಉತ್ತರದಾಯಿತ್ವಕ್ಕೆ ಉತ್ತಮ ಉದಾಹರಣೆ: ಕಲ್ಯಾಣ ಕ್ರಾಂತಿಯುದ್ದಕ್ಕೂ ಪ್ರತಿ ಶರಣರಲ್ಲೂ ನಿಚ್ಚಳವಾಗಿ ಕಾಣುವುದೆಂದರೆ ಜವಾಬ್ದಾರಿ ಹಾಗೂ ಉತ್ತರದಾಯಿತ್ವ. ಇದು ಮೇಲಿಂದ ಹೇರಲ್ಪಟ್ಟದ್ದಲ್ಲ; ಅದು ಅವಶ್ಯಕ ಮತ್ತು ಅನಿವಾರ್ಯ ಎನ್ನುವ ಪ್ರಜ್ಞೆ ಶರಣರಲ್ಲಿ ತಂತಾನೇ ಬೆಳೆಯಿತು. ಬಸವಣ್ಣನವರ ಹೊಸನೋಟದಲ್ಲಿ ತಮ್ಮ ಹೊಸಜೀವನದ ದಿಕ್ಕು-ದೆಸೆ ಅಡಗಿದೆ ಎಂಬುದು ಅವರಿಗೆ ವೇದ್ಯವಾಗಿತ್ತು. ಆದ್ದರಿಂದಲೇ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಹಿಂಜರಿಯಲಿಲ್ಲ; ಎಂಥ ಬಲಿದಾನಕ್ಕೂ ಸಿದ್ಧರಾದರು. ಹೊಸ ವ್ಯವಸ್ಥೆ ಕಟ್ಟುವಲ್ಲಿ ಸಮಷ್ಟಿಪ್ರಜ್ಞೆಯೇ ದಿಕ್ಸೂಚಿಯಾಗಬೇಕು ಎಂದರಿತರು. ವ್ಯಷ್ಟಿಪ್ರಜ್ಞೆ ಸೋಪಾನವಾಯಿತು. ಸಮಷ್ಟಿಪ್ರಜ್ಞೆ ಅದನ್ನೇರಿ ಮಾನವನ ಔನ್ನತ್ಯದ ಅರಿವನ್ನು ಸಾರಿಹೇಳಿತು. ಬಸವಣ್ಣನವರ ನಾಯಕತ್ವ ಪ್ರತಿಯೊಬ್ಬರಲ್ಲೂ ಪ್ರತಿಫಲನಗೊಂಡಿತು. ಅವರ ಕಾಳಜಿ ಪ್ರತಿ ಶರಣರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿತು.

ಪರಿವರ್ತನೆಗೆ ಮುನ್ನುಡಿ: ಇವೆಲ್ಲವನ್ನೂ ಸಾಧ್ಯಗೊಳಿಸಿದ ಬಸವಣ್ಣನವರ ಕಾರ್ಯಕ್ಷಮತೆ ಹೇಗಿತ್ತು ಎಂಬುದೇ 12ನೇ ಶತಮಾನದ ಕುತೂಹಲಕರ ಸಂಗತಿ. ಸಾಮಾನ್ಯರ ಆಧ್ಯಾತ್ಮಿಕ ಉನ್ನತಿಯ ಜತೆಗೆ ಇಡೀ ವ್ಯವಸ್ಥೆಯ ಸುಧಾರಣೆಯಲ್ಲಿ ಅವರೆಲ್ಲರೂ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡಿದ ಬಸವಣ್ಣನವರ ಮುಂದಾಳತ್ವ ಅಚ್ಚರಿದಾಯಕ. ಸ್ಪಷ್ಟವಾದ ತಾತ್ತಿ್ವಕ ನಿಲುವಿನಿಂದ ಸಾವಿರಾರು ಶರಣರನ್ನು ಸೆಳೆದ ಅವರ ನಿಲುವು ಹಾಗೂ ಸಮರ್ಪಣಾ ಮನೋಭಾವ, ನಾಯಕತ್ವಕ್ಕೆ ಹಿಂದೆಂದೂ ಸಿಗದ ಹೊಸ ಆಯಾಮ ದೊರಕಿಸಿಕೊಡುತ್ತವೆ. ಯಾವ ಧಾರ್ವಿುಕ ಸಂಸ್ಕಾರವಿಲ್ಲದೆ ನಿಕೃಷ್ಟರೆನಿಸಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ವಿಧಾನ ಇಂದಿಗೂ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳುತ್ತದೆ. ಬಸವಣ್ಣನವರ ವ್ಯಕ್ತಿತ್ವದ ಅಂಥ ಒಳಸುಳಿವುಗಳನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. ಅವುಗಳಲ್ಲಿ ಒಂದು-

ಭಕ್ತಿಯಿಲ್ಲದ ಬಡವ ನಾನಯ್ಯ

ಕಕ್ಕಯ್ಯನ ಮನೆಯಲ್ಲೂ ಬೇಡಿದೆ

ಚನ್ನಯ್ಯನ ಮನೆಯಲ್ಲೂ ಬೇಡಿದೆ

ದಾಸಯ್ಯನ ಮನೆಯಲ್ಲೂ ಬೇಡಿದೆ

ಎಲ್ಲಾ ಪುರಾತರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.

ಬಸವಣ್ಣನವರು ಹೇಳುತ್ತಿದ್ದಾರೆ ‘ಭಕ್ತಿಯಿಲ್ಲದ ಬಡವ ನಾನಯ್ಯ’ ಎಂದು!

ವ್ಯವಸ್ಥೆಯು ಮಾನವನ ಕಲ್ಯಾಣಗುಣಗಳನ್ನು ಪೋಷಿಸದೆ, ಸಮಾಜದ ಆಮೂಲಾಗ್ರ ಬೆಳವಣಿಗೆಗೆ ಪೂರಕವಾಗಿ ನಿಲ್ಲದೆ ಹೋದಾಗ ನಾಗರಿಕತೆ ಮುಗ್ಗರಿಸುತ್ತದೆ. ಅದನ್ನು ಎತ್ತಲು ಹೊಸ ವ್ಯವಸ್ಥೆಯೊಂದು ಅನಿವಾರ್ಯವಾಗುತ್ತದೆ. ಅಂಥ ಪರ್ಯಾಯ ವ್ಯವಸ್ಥೆಯ ನಿರ್ಮಾಣ ಕಠಿಣವೇ. ವ್ಯವಸ್ಥೆಯಲ್ಲಿ ಮೂಲೆಗುಂಪಾದವರನ್ನು ಸಂಘಟಿಸಿ ಆತ್ಮವಿಶ್ವಾಸ ತುಂಬುವ ಜತೆಗೆ ಅವರೊಂದಿಗೆ ಯಾವುದೇ ಮಾನಸಿಕ ದೂರ ಇಲ್ಲದಂತೆ ನೋಡಿಕೊಳ್ಳುವುದು ಆ ನಾಯಕನ ದೂರದೃಷ್ಟಿಗೆ ಒಡ್ಡಿದ ಸವಾಲೇ ಸರಿ. ಅಂಥ ಸವಾಲನ್ನು ಬಸವಣ್ಣ ಸಹಜವಾಗಿ, ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸದೆ, ಮೂಲೆಯವರಿಗಿಂತ ಮೂಲೆಯವನೆಂದು ತನ್ನನ್ನು ಕರೆದುಕೊಂಡು, ಮೂಲೆಗುಂಪಾಗಿದ್ದವರ ಮನಸ್ಸನ್ನು ಅಣಿಗೊಳಿಸಲು ಅನುವಾಗುವ ಮಾನಸಿಕ ಬುನಾದಿಯನ್ನು ಈ ವಚನದಲ್ಲಿ ಗಮನಿಸಬಹುದು. ‘ನಾನು ಭಕ್ತಿಭಂಡಾರಿ ಬಸವಣ್ಣ; ಬನ್ನಿ ನಾವೆಲ್ಲರೂ ಭಕ್ತಿಪಥದಲ್ಲಿ ಸಾಗೋಣ’ ಎಂದು ಕರೆನೀಡಿದ್ದರೆ, ಶೋಷಿತರ ಮನವನ್ನು ಅವರು ಮುಟ್ಟುತ್ತಿದ್ದರೇ? ಬದಲಿಗೆ ಅವರ ನಡುವೆ ಸಾಗರದಷ್ಟು ಅಂತರ ಬೆಳೆಯುತ್ತಿತ್ತು. ‘ನಾವೆಲ್ಲಿ, ಬಸವಣ್ಣನೆಲ್ಲಿ?’ ಎಂದು ಮನಸ್ಸುಗಳು ತಮ್ಮ ಮತ್ತು ಬಸವಣ್ಣನವರ ನಡುವಿನ ಅಂತರವನ್ನು ತೂಗಿನೋಡಲು ಪ್ರಾರಂಭಿಸುತ್ತಿದ್ದವು. ಅಲ್ಲಿಗೆ ದುರ್ಬಲರನ್ನು ಸಂಘಟಿಸುವ ಕಾರ್ಯ ಸೋತುಬಿಡುತ್ತಿತ್ತು. ‘ಭಕ್ತಿಯಿಲ್ಲದ ಬಡವ ನಾನಯ್ಯಾ’ ಎನ್ನುವ ಬಸವಣ್ಣನವರ ‘ಕಿಂಕರ ಮನೋಭಾವ’ ಅವರ ಹಾಗೂ ಶೋಷಿತರೊಂದಿಗಿನ ಮಾನಸಿಕ ಬೆಸುಗೆಗೆ ಅನುವುಮಾಡಿಕೊಡುವುದಲ್ಲದೆ ಮುಂದೆ ಜರುಗುವ ಭಾರಿ ಪರಿವರ್ತನೆಗೆ ಮುನ್ನುಡಿ ಬರೆಯುತ್ತದೆ.

ಬಸವಣ್ಣ ಮುಂದುವರಿದು ಹೇಳುತ್ತಾರೆ- ‘ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ’ ಎಂದು! ‘ಬೇಡಿದೆ’ ಎನ್ನುವ ಅವರ ನಿಲುವು ಇಡೀ ನಾಯಕತ್ವಕ್ಕೆ ಹೊಸ ಆಯಾಮ ತಂದುಕೊಡುತ್ತದೆ. ಬೇಡಿದೆ ಎನ್ನುವ ಶಬ್ದ ಸಾಂಕೇತಿಕವಾಗಿದ್ದು ಶರಣರ ಆಮೂಲಾಗ್ರ ಬದಲಾವಣೆಯ ಸಚೇತಕ ಶಕ್ತಿ ಯಾವುದೆಂಬುದನ್ನು ನಿರ್ದೇಶಿಸುತ್ತದೆ. ‘ಬೇಡಿದೆ’ ಎಂಬ ಈ ನಿಲುವೇ ನಾಯಕತ್ವ ವಿಚಾರದಲ್ಲಿ ಕ್ರಾಂತಿಕಾರಿಯಾದುದು. ಇದು ‘ನಿರ್ದೇಶನಯುಕ್ತ ನಾಯಕತ್ವ’ದ ಸಂಪ್ರದಾಯಕ್ಕೆ ಹೊರತಾಗಿ ‘ಉತ್ತೇಜನಯುಕ್ತ ನಾಯಕತ್ವ’ದ ನಡೆಗೆ ಒತ್ತುಕೊಡುವಂತಿದೆ. ಮಾನವಕುಲವನಲ್ಲದೆ ಸಕಲ ಜೀವಿಗಳ ಶ್ರೇಯಸ್ಸನ್ನೇ ಬಯಸುವ ಬಸವಣ್ಣನವರ ಸಹಜ ಗುಣದಿಂದ ಮೂಡಿದ ಸಹಜ ನಾಯಕತ್ವದ ಲಕ್ಷಣ ಇದು. ಆದ್ದರಿಂದಲೇ ಬಸವಣ್ಣನವರು ಪ್ರತಿಯೊಬ್ಬರನ್ನೂ ‘ಇವ ನಮ್ಮವ, ಇವ ನಮ್ಮವ’ ಎಂದು ಜತೆಗಿಟ್ಟುಕೊಂಡೇ ವ್ಯವಸ್ಥೆಯ ಪಲ್ಲಟಕ್ಕೆ ಹೆಜ್ಜೆಯಿಟ್ಟರು. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಚೈತನ್ಯಶಕ್ತಿಯನ್ನು ಸಚೇತನಗೊಳಿಸುವುದು ಬಹುಶಃ ಮಾನವಕುಲಕ್ಕೆ ನೀಡಬಹುದಾದ ಅಮೂಲ್ಯ ಕೊಡುಗೆ. ಅದು ಯಾವುದೇ ಸಾಂಪ್ರದಾಯಿಕ ನಾಯಕತ್ವದಿಂದ ಸಾಧ್ಯವಾಗುವಂಥದಲ್ಲ. ಬಸವಣ್ಣನವರ ‘ಬೇಡುವ’ ಪರಿ ಅವರ ಹೃದಯದಲ್ಲಿ ಶಾಶ್ವತ ಬದಲಾವಣೆಗೆ ನಾಂದಿಹಾಡಿತು. ಶೋಷಿತರ ಸಾಮರ್ಥ್ಯ ಗುರುತಿಸಿ ಅವರ ವ್ಯಕ್ತಿತ್ವದ ರೂಪಾಂತರಕ್ಕೆ ಸಾಧಕವಾಗುವ ನಡೆಯಿದು.

ನೇರಹೇರಿಕೆಯಿಂದ ಕೆಲಸಗಳು ನಡೆಯುವುದಿಲ್ಲ. ಇದನ್ನು ಆಧುನಿಕ ಸಮಾಜ ಅರಿತಿದೆ. ಹೇರಿಕೆಯಿಲ್ಲದೆ ಮುನ್ನಡೆದರಷ್ಟೇ ಆಂದೋಲನ ರ್ತಾಕ ಅಂತ್ಯ ಕಂಡೀತು. ಆದ್ದರಿಂದಲೇ ನಾಯಕತ್ವದ ಬಗ್ಗೆ ಅಸಂಖ್ಯ ವಿಚಾರಧಾರೆಗಳು ಹರಿದಿವೆ. ಆದರೂ ಹೇರಿಕೆಯಿಲ್ಲದೇ ಕಾಯಾ-ವಾಚಾ-ಮನಸಾ ಪಾಲ್ಗೊಳ್ಳುವಂತೆ ಮಾಡುವಲ್ಲಿ ಆಧುನಿಕ ನಾಯಕತ್ವ ಅನೇಕ ಸಲ ಸೋತಿರುವುದನ್ನು ಕಾಣುತ್ತೇವೆ. ಅಸಾಧ್ಯ ಕೆಲಸಗಳಿಗೆ ಮನಸುಗಳನ್ನು ಪರೋಕ್ಷವಾಗಿ ಅಣಿಗೊಳಿಸುವುದು ಕಠಿಣ ಸವಾಲೇ ಸರಿ. ವ್ಯವಸ್ಥೆಯೊಂದಿಗೆ ಒಲ್ಲದ ಮನಸ್ಸಿನಿಂದ ಒಗ್ಗಿಕೊಂಡು ಬದುಕುತ್ತಿರುವ ಶೋಷಿತರನ್ನು ಪ್ರೇರೇಪಿಸಲು ಸೂಕ್ಷ್ಮಮನದ ನಾಯಕನೇ ಬೇಕು. ಆತ ಸಂಕೀರ್ಣತೆ ಅರಿಯುವುದರ ಜತೆಗೆ ಅದನ್ನು ಸರಳಗೊಳಿಸಿ ಸಹಜಮಾರ್ಗ ಹಾಕುವ ಚಾಣಾಕ್ಷನಾಗಿರಬೇಕು. ಬಸವಣ್ಣನವರ ‘ಬೇಡುವ’ ನಿಲುವು ಒಂದು ರೀತಿಯಲ್ಲಿ ದೂಡಲ್ಪಟ್ಟವರ ಮೇಲೆ ಆದರದ ಸೂಚನೆಯಂತೆ ಕೆಲಸ ಮಾಡುತ್ತದೆ. ಬಿಜ್ಜಳನ ಅರಸೊತ್ತಿಗೆಯಲ್ಲಿ ಪ್ರಧಾನ ಮಂತ್ರಿಯಾಗಿದ್ದು, ಅಂದಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲುಕುಲದವರಾಗಿದ್ದ ಬಸವಣ್ಣನವರೇ ನಮ್ಮ ಕೇರಿಗೆ ಬಂದಿದ್ದಾರೆ, ಬೇಡುತ್ತಿದ್ದಾರೆ ಎನ್ನುವ ಸಂಗತಿಯೇ ಊಹೆಗೂ ನಿಲುಕದಷ್ಟು ಇವರನ್ನು ಉತ್ತೇಜಿಸುತ್ತದೆ. ತಮ್ಮ ಕೇರಿಯಿಂದಾಚೆ ಹೆಜ್ಜೆಯಿಡಲು ನಡುಗುತ್ತಿದ್ದ ಕಕ್ಕಯ್ಯ, ಚೆನ್ನಯ್ಯ, ಹರಳಯ್ಯ, ಧೂಳಯ್ಯ, ನಾಗಿದೇವರಂಥವರು ಬಸವಣ್ಣನವರ ಜತೆ ಬೆರೆಯಲು, ತಮ್ಮ ಚಿಪ್ಪಿನಿಂದ ಹೊರಬರಲು ಅಣಿಯಾಗುತ್ತಾರೆ. ದೇವರು-ಧರ್ಮದ ಪರಿಕಲ್ಪನೆಗಳನ್ನು ಬಸವಣ್ಣನವರ ಅರ್ಥಕೋಶದ ಮೂಲಕ ಅರಿತು ಬದಲಾವಣೆಗೆ ಒಡ್ಡಿಕೊಳ್ಳುತ್ತಾರೆ.

ಕಲ್ಯಾಣ ಕ್ರಾಂತಿ: ನಾಯಕನ ಯಶಸ್ಸು ಅವಲಂಬಿತವಾಗಿರುವುದೇ ಆತ ಮನಸ್ಸುಗಳನ್ನು ಎಷ್ಟರಮಟ್ಟಿಗೆ ಪ್ರಭಾವಿಸುತ್ತಾನೆ ಎಂಬುದರ ಮೇಲೆ. ಅದರಲ್ಲೂ ಯುಗದ ವ್ಯವಸ್ಥೆಯ ಪಲ್ಲಟಕ್ಕೆ ಸಜ್ಜಾಗುವ ಆಂದೋಲನ ತಾತ್ತಿ್ವಕವಾಗಿ ಗಟ್ಟಿಯಿದ್ದರೆ ಮಾತ್ರ ಅದರ ದಿಕ್ಕು-ದೆಸೆಯೂ ಸರಿಯಿರುತ್ತದೆ. ಆ ಗಟ್ಟಿತನ ಕೊಡುವ ಬಸವಣ್ಣನವರು ಶರಣರನ್ನು ಹುರಿದುಂಬಿಸುವ ವಿಧಾನ ವಿನೂತನ. ಯಾರಿಗಾಗಿ ಆಂದೋಲನವೋ ಅವರೇ ಅದಕ್ಕೆ ಕೇಂದ್ರಿತವಾಗಬೇಕು; ಇಲ್ಲದಿದ್ದರೆ ಅದು ಯಶಸ್ಸಾಗದು. ಬಸವಣ್ಣ ‘ಭಕ್ತಿಪಾತ್ರೆ’ ಹಿಡಿದು ಸಮಾಜದಲ್ಲಿ ನಿಕೃಷ್ಟಕ್ಕೆ ಒಳಗಾಗಿದ್ದ ಕಕ್ಕಯ್ಯನ ಮನೆಯ ಮುಂದೆ ಭಕ್ತಿಯ ಭಿಕ್ಷೆ ‘ಬೇಡಿ’ದರೆ ಕಕ್ಕಯ್ಯನವರಿಗೆ ಹೇಗಾಗಿರಬೇಡ? ಯುಗಪುರುಷನೊಬ್ಬ ತಮ್ಮ ಮೇಲೆ ಅಂಥ ನಂಬಿಕೆ, ಭರವಸೆಯಲ್ಲಿ ಕೈಚಾಚಿದ್ದು ಅವರ ಮೇಲೆ ಬೀರಿರಬಹುದಾದ ಸಕಾರಾತ್ಮಕ ಪರಿಣಾಮ ಊಹಾತೀತ.

ಎಲ್ಲ ಪುರಾತರು ನೆರೆದು ಭಕ್ತಿ ಭಿಕ್ಷೆಯನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ

ಬಸವಣ್ಣನವರ ಇಡೀ ಕಲ್ಯಾಣ ಕ್ರಾಂತಿಯನ್ನು ಈ ಎರಡು ಸಾಲಿನಲ್ಲಿ ಹಿಡಿದಿಟ್ಟಂತೆ ತೋರುತ್ತಿದೆ! ಚೆನ್ನಯ್ಯ, ದಾಸಯ್ಯ, ಕಕ್ಕಯ್ಯ ಮುಂತಾದವರೆಲ್ಲರೂ ಶ್ರೇಷ್ಠ ಶರಣರಾಗಿ ಹೊಮ್ಮಿ ಬಸವಣ್ಣನವರ ಪಾತ್ರೆಗೆ ಭಕ್ತಿಭಿಕ್ಷೆಯನಿತ್ತರು! ಯಾರೂ ಊಹಿಸಲಾಗದ ಪರಿವರ್ತನೆ ಹಾಗೂ ಅದರ ಫಲಿತಾಂಶ ಸಾಧ್ಯವಾದದ್ದು ತನ್ನಿಂದಲ್ಲ, ಚೆನ್ನಯ್ಯ, ಕಕ್ಕಯ್ಯ, ದಾಸಯ್ಯ ಇವರ ಸಾಧನೆಯಿಂದ ಎಂಬ ತೃಪ್ತಿ ಬಸವಣ್ಣನವರಲ್ಲಿ ಕಾಣುತ್ತದೆ. ಭಿಕ್ಷಾಪಾತ್ರೆಯೂ, ಅದು ತುಂಬುವುದೂ ಕಲ್ಯಾಣ ಕ್ರಾಂತಿಯಲ್ಲಿನ ಎರಡು ಪ್ರಮುಖ ಬೆಳವಣಿಗೆಗಳ ಸೂಚಕ. ಭಿಕ್ಷಾಪಾತ್ರೆ ಎಂದರೆ ಬಸವಣ್ಣನವರ ಯಾಚನೆಯನ್ನೂ, ತುಂಬಿತ್ತು ಎಂಬುದು ಆ ಬೇಡಿಕೆ ಈಡೇರಿದ್ದು ಎಂಬುದನ್ನೂ ಸಂಕೇತಿಸುತ್ತವೆ. ಜಗತ್ತಿನ ಇತರೆಡೆ ಮಾನವಕುಲ ಅವೈಜ್ಞಾನಿಕ ಮನೋಭಾವದಿಂದ ತೆವಳುತ್ತಿದ್ದರೆ, ಕಲ್ಯಾಣದಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವದ ಮೇಲೆ ಹೊಸ ಸಮಾಜವನ್ನು ಪರ್ಯಾಯವಾಗಿ ಕಟ್ಟುತ್ತಿತ್ತು. ‘ಭಕ್ತಿಯ ಭಿಕ್ಷೆ’ ಎನ್ನುವ ಬಸವಣ್ಣನವರು ಕಲ್ಯಾಣ ಕ್ರಾಂತಿಯನ್ನು ಭಕ್ತಿಯ ಸೋಪಾನದಲ್ಲಿ ಸಾಧಿಸುತ್ತಾರೆ. ಇದೊಂದು ನವೀನ ನಾಯಕತ್ವದ ಶೈಲಿ. ರಾಜಾಜ್ಞೆಯ ಹೇರಿಕೆ, ಕಾನೂನಿನ ಬೆದರಿಕೆಯಿಲ್ಲದೆ, ನಾಯಕನ ವ್ಯಕ್ತಿತ್ವ ಎಲ್ಲೂ ವಿಜೃಂಭಿಸದೆ ಸಾಧ್ಯವಾದದ್ದು! ಒಂದು ಮೂರ್ಖ ಮನಸ್ಸು ಸಾಕು ವ್ಯವಸ್ಥೆಯನ್ನು ಕೆಡಿಸಲು, ಆದರೆ ಅದನ್ನು ಸರಿಪಡಿಸಲು ಒಬ್ಬ ಯುಗಪುರುಷನೇ ಬರಬೇಕು. ಬಸವಣ್ಣನವರು ಇದನ್ನೇ ಮಾಡಿದ್ದು. ಹದಗೆಟ್ಟಿದ್ದ ಸಮಾಜವನ್ನು ಸರಿಪಡಿಸಿದ್ದು ಅವರ ಈ ಅದ್ಭುತ ನಾಯಕತ್ವದ ನಡೆಯೇ!

ಕೇವಲ ಕೆಲ ದಶಕಗಳಲ್ಲಿ ಸ್ಥಾಪನೆಗೊಂಡ ಇಂಥ ಪರ್ಯಾಯ ಸಮಾಜವನ್ನು 900 ವರ್ಷಗಳಾದರೂ ಸರಿಯಾಗಿ ಅರ್ಥೈಸಿಕೊಳ್ಳಲು ವಿಫಲರಾಗಿದ್ದೇವೆ. ಹೀಗೆ ನಿರ್ವಿುತ ವಾದ ಸಮಾಜವು ಒಳಜಾತಿಗಳ ಹೆಸರಿನಲ್ಲಿ ಒಂದೊಂದು ಪಂಗಡಗಳಾಗಿ ಮೂಲ ಆಶಯವನ್ನೇ ಮರೆತುಬಿಟ್ಟಿವೆ. ರಾಷ್ಟ್ರ ರಾಷ್ಟ್ರಗಳ ನಡುವಿನ ಗೋಡೆಗಳು ಬಿದ್ದಿದ್ದರೂ, ಮನಸು ಮನಸುಗಳ ನಡುವೆ ಗೋಡೆಗಳು ಎದ್ದುನಿಲ್ಲುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಪರರಾಷ್ಟ್ರವೊಂದು ಬಸವಣ್ಣನವರ ನಾಯಕತ್ವದ ಪಾಠಗಳನ್ನು ನಮಗೇ ಮನವರಿಕೆ ಮಾಡಿಕೊಡುವ ಕಾಲ ಮುಂದೊಮ್ಮೆ ಬಂದರೂ ಅಚ್ಚರಿಯಿಲ್ಲ!

(ಲೇಖಕರು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು)

Leave a Reply

Your email address will not be published. Required fields are marked *

Back To Top