Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಕೋಟಿ ಕನಸುಗಳನ್ನು ಅರಳಿಸಿದ ಮಹಾನುಭಾವ

Wednesday, 26.04.2017, 3:05 AM       No Comments

ಕ್ರಿಕೆಟ್ ಅಭಿಮಾನಿಗಳ ಆರಾಧ್ಯದೈವ, ಉದಯೋನ್ಮುಖ ಕ್ರಿಕೆಟಿಗರ ಆದರ್ಶ- ಸಚಿನ್ ತೆಂಡುಲ್ಕರ್. ಡೊನಾಲ್ಡ್ ಬ್ರಾಡ್ಮನ್​ರಿಂದ ಮೊದಲ್ಗೊಂಡು ಬ್ರಿಯಾನ್ ಲಾರಾವರೆಗಿನ ಹತ್ತು ಹಲವು ಕ್ರಿಕೆಟ್ ದಿಗ್ಗಜರನ್ನು ಅವರ ಆಟದ ಶೈಲಿ, ಸಾಧನೆಯ ಅಂಕಿ-ಅಂಶಗಳ ಮೂಲಕ ನೆನೆಯುವುದು ವಾಡಿಕೆ. ಆದರೆ, ಆಟದಲ್ಲಿಯೂ, ವ್ಯಕ್ತಿತ್ವದಲ್ಲೂ ಅನನ್ಯರೆನಿಸಿರುವವರು ಸಚಿನ್.

 ಶಾಲೆ ಮುಗಿದ ಕೂಡಲೇ ಹತ್ತಿರದಲ್ಲೇ ಇದ್ದ ಚಿಕ್ಕಮ್ಮನ ಮನೆಗೆ ಓಡಿ ಗಡಿಬಿಡಿಯಲ್ಲಿ ಊಟ ಮಾಡಿ, ಕ್ರಿಕೆಟ್ ಪ್ರಾಕ್ಟೀಸ್​ಗೆ ಓಡುವುದು ಸಚಿನ್ ತೆಂಡುಲ್ಕರ್​ರ ನಿತ್ಯದ ದಿನಚರಿಯಾಗಿತ್ತು. ಆದರೆ, ಆ ದಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶಾರದಾಶ್ರಮ ಶಾಲೆಯ ಇಂಗ್ಲಿಷ್ ಮಾಧ್ಯಮ ಹಾಗೂ ಮರಾಠೀ ಮಾಧ್ಯಮ ತಂಡಗಳ ನಡುವೆ ಕ್ರಿಕೆಟ್ ಪಂದ್ಯವೊಂದು ಏರ್ಪಾಡಾಗಿತ್ತು. ಹಾಗಾಗಿ ಸಚಿನ್ ದೈನಂದಿನ ಅಭ್ಯಾಸಕ್ಕೆ ಚಕ್ಕರ್ ಹಾಕಿ ಕ್ರಿಕೆಟ್ ಪಂದ್ಯ ನೋಡಲು ಬಂದಿದ್ದರು.

ಆದರೆ, ಗ್ರಹಚಾರವೆಂಬಂತೆ ಆ ದಿನ ಸಚಿನ್​ರ ಕೋಚ್ ರಮಾಕಾಂತ್ ಅಚ್ರೇಕರ್ ಕೂಡ ಆ ಪಂದ್ಯ ನೋಡಲು ಬಂದಿದ್ದರು. ಸಚಿನ್​ರನ್ನು ನೋಡುತ್ತಿದ್ದಂತೆಯೇ ಅವರಿಗೆ ಈ ದಿನ ಈತ ಅಭ್ಯಾಸಕ್ಕೆ ಹೋಗಿಲ್ಲ ಎನ್ನುವುದು ಮನದಟ್ಟಾಯಿತು. ಆದರೆ, ಅವರು ಅದನ್ನು ತೋರಿಸಿಕೊಳ್ಳದೆ, ಅಭ್ಯಾಸ ಮುಗಿಯಿತೇ ಎಂದು ಕೇಳಿದರು. ಆದರೆ, ಈ ಪಂದ್ಯದಲ್ಲಿ ಸ್ನೇಹಿತರನ್ನು ಹುರಿದುಂಬಿಸುವ ಸಲುವಾಗಿ ಗೈರುಹಾಜರಾಗಿದ್ದಾಗಿ ಸಚಿನ್ ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಮರುಕ್ಷಣದಲ್ಲೇ ಅಚ್ರೇಕರ್ ಛಟೀರೆಂದು ಸಚಿನ್​ಗೆ ಕಪಾಳಮೋಕ್ಷ ಮಾಡಿದ್ದರು. ನೀನು ಇಲ್ಲಿ ಕುಳಿತು ಬೇರೆಯವರ ಆಟಕ್ಕೆ ಚಪ್ಪಾಳೆ ಹೊಡೆಯಬೇಕಿಲ್ಲ. ಬೇರೆಯವರು ನಿನ್ನ ಆಟ ನೋಡಿ ಚಪ್ಪಾಳೆ ಹೊಡೆಯುವಂತೆ ಆಡಬೇಕು ಎಂದು ಖಡಕ್ಕಾಗಿ ಅವರು ಹೇಳಿದ ಮಾತು ಸಚಿನ್ ಜೀವನದ ಬಹುದೊಡ್ಡ ತಿರುವಾಗಿತ್ತು. ಅನಂತರ ಜೀವನದಲ್ಲಿ ಅವರೆಂದೂ ಅಭ್ಯಾಸವನ್ನು ತಪ್ಪಿಸಲಿಲ್ಲ.

ಸಚಿನ್ ತೆಂಡುಲ್ಕರ್ ಮಹಾನ್ ಆಟಗಾರ, ಶ್ರೇಷ್ಠ ಕ್ರಿಕೆಟಿಗ ಎಂದು ಹೊಗಳಿಬಿಡುವುದು ಸುಲಭ. ಆದರೆ, ಅವರು ಆ ಎತ್ತರಕ್ಕೇರಿದ ದುರ್ಗಮ ಪಯಣ ಕ್ರಿಕೆಟ್ ಜಗತ್ತಿನಲ್ಲಿ ಅವರ ಹೆಜ್ಜೆಜಾಡನ್ನೇ ಅನುಕರಿಸಲು ಕೋಟ್ಯಂತರ ಮಕ್ಕಳಿಗೆ ಪ್ರೇರಣೆ.

ಕನಸು ಕಾಣುವುದು ಸುಲಭ. ಎಲ್ಲರೂ ಕನಸು ಕಾಣುತ್ತಾರೆ. ಎಂಥ ಸಂದರ್ಭದಲ್ಲೂ ಕನಸಿನ ಹಾದಿಯಿಂದ ವಿಮುಖರಾಗದೇ ಇರುವವರು ಯಶಸ್ವಿಯಾಗುತ್ತಾರೆ. ಸಾಧನೆ ಮಾಡಲೇಬೇಕೆಂದು ಗುರಿ ಹಾಕಿಕೊಂಡರೆ ಸಾಲದು; ಅದನ್ನು ಸಾಧಿಸುವ ಬದ್ಧತೆ, ತಾಳ್ಮೆ ಇರಬೇಕು. ಆಟದಲ್ಲಾಗಲೀ, ಪಾಠದಲ್ಲಾಗಲೀ ಅಡ್ಡದಾರಿ ಹಿಡಿಯಬಾರದು. ದೊಡ್ಡ ಸಾಧನೆ ಮಾಡಬೇಕಾದರೆ, ಶಿಸ್ತು, ನಿಯಮಪಾಲನೆ ಬಹಳ ಮುಖ್ಯ ಎನ್ನುವುದು ಸಚಿನ್​ರ ಅನುಭವದ ಮಾತು.

ಇದು ನಿಜವೂ ಹೌದು. ಸಚಿನ್ ತೆಂಡುಲ್ಕರ್ ಎಂಬ ಆಟಗಾರ ರಾತ್ರೋರಾತ್ರಿ ಉದ್ಭವಿಸಿದವರಲ್ಲ. ಅವರು ಅಷ್ಟೊಂದು ಯಶಸ್ವಿ ಕ್ರಿಕೆಟಿಗರಾಗಿದ್ದು ಯಾರದ್ದೋ ಪ್ರಭಾವ, ಅದೃಷ್ಟ ಅಥವಾ ಯೋಗಾಯೋಗದ ಬಲದಿಂದಲೂ ಅಲ್ಲ. ತೆಂಡುಲ್ಕರ್ ಕ್ರಿಕೆಟ್ ಜೀವನದ ಹಾದಿಯನ್ನು ಬಲ್ಲವರು ಈ ವಿಚಾರಗಳನ್ನೆಲ್ಲಾ ಬಲ್ಲರು. ತೆಂಡುಲ್ಕರ್ ಮೊನ್ನೆ 44ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ರೂಪದಲ್ಲಿ ಈಗಲೂ ವೃತ್ತಿಪರ ಕ್ರಿಕೆಟ್​ನೊಂದಿಗೆ ಸಕ್ರಿಯ ಒಡನಾಟ ಹೊಂದಿರುವ ಅವರ ಕ್ರಿಕೆಟ್ ತಜ್ಞತೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನೂ ಸೂಕ್ತರೂಪದಲ್ಲಿ ಬಳಸಿಕೊಳ್ಳುತ್ತಿಲ್ಲ ಎನ್ನುವುದೇ ವಿಷಾದಕರ. ಏಕೆಂದರೆ, ತೆಂಡುಲ್ಕರ್​ರಂಥ ಆಟಗಾರರು ದಿನವೂ ಹುಟ್ಟುವುದಿಲ್ಲ. ಅವರ ಲಭ್ಯತೆಯನ್ನು ಬಳಸಿಕೊಳ್ಳದೇ ಇರುವುದರಿಂದ ನಷ್ಟ ಕ್ರಿಕೆಟ್​ಗೇ ಹೊರತು ಅವರಿಗಲ್ಲ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನೂರು ಶತಕ ಬಾರಿಸಿದ ಸಂದರ್ಭದಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಮುಂಬೈನಲ್ಲಿ ಅಭಿನಂದನಾ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು, ಉದ್ಯಮಿಗಳು, ಬಾಲಿವುಡ್​ನ ಸೂಪರ್​ಸ್ಟಾರ್​ಗಳು ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯಾತಿಗಣ್ಯರು ಆಹ್ವಾನಿತರಾಗಿದ್ದರು. ಎಲ್ಲರೂ ತಾವು ಕಂಡಂತೆ ಸಚಿನ್​ರನ್ನು ಬಣ್ಣಿಸಿದರು. ಕೊನೆಯಲ್ಲಿ ಸಚಿನ್ ಹೇಳಿದ್ದಿಷ್ಟು. ‘ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಅವನಿಗೆ ನಾನು ಚಿರಋಣಿ. ಆದರೆ, ಈಗ ದೇವರ ಬಳಿ ನನ್ನ ಇನ್ನೂ ಒಂದು ಕೋರಿಕೆ ಇದೆ. ನನ್ನ ಕಾಲು ಸದಾ ನೆಲದ ಮೇಲೆಯೇ ಇರುವಂತೆ ಅನುಗ್ರಹಿಸು ಎಂಬುದೇ ನನ್ನ ಪ್ರಾರ್ಥನೆ…’

ನಾನೂ ಸಚಿನ್ ಆಗಬೇಕು ಎಂದು ಕನಸು ಕಾಣುವ ದೇಶದ ಕೋಟ್ಯಂತರ ಯುವಕರು ಉಳಿದೆಲ್ಲ ಸಂಗತಿಗಳಿಗಿಂತ ಮೊದಲು ಸಚಿನ್​ರ ಈ ಗುಣವನ್ನು ಅನುಸರಿಸಬೇಕು… ಸಚಿನ್ ಓರ್ವ ಕ್ರಿಕೆಟಿಗನಾಗಿ ಮಾತ್ರ ಮಹಾನ್ ಅಲ್ಲ, ಓರ್ವ ವ್ಯಕ್ತಿಯಾಗಿಯೂ ಶ್ರೇಷ್ಠತೆಯ ಮಜಲು ಮುಟ್ಟಿದವರು.

ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಶ್ರೇಷ್ಠರಿದ್ದಾರೆ. ಡೊನಾಲ್ಡ್ ಬ್ರಾಡ್ಮನ್​ರಿಂದ ಬ್ರಿಯಾನ್ ಲಾರಾವರೆಗೆ ವಿವಿಧ ದೇಶಗಳ ಈ ದಿಗ್ಗಜರನ್ನು ಇವತ್ತಿಗೂ ಅವರ ಆಟ, ಅಂಕಿ-ಅಂಶಗಳ ಮೂಲಕ ನೆನಪು ಮಾಡಿಕೊಳ್ಳಲಾಗುತ್ತದೆ. ಆದರೆ, ತೆಂಡುಲ್ಕರ್ ವಿಚಾರದಲ್ಲಿ ಹಾಗಲ್ಲ, ಅವರ ಬ್ಯಾಟಿಂಗ್ ವಿಕ್ರಮಗಳ ಜತೆಗೆ ಓರ್ವ ವ್ಯಕ್ತಿಯಾಗಿಯೂ ಸಚಿನ್ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಟೀಕಿಸುವವರು ಎಲ್ಲರನ್ನೂ ಟೀಕಿಸುತ್ತಾರೆ. ಸಚಿನ್​ಗೆ ದೇವರ ಪಟ್ಟ ಕಟ್ಟುವುದು ಒಂದು ಬಗೆಯ ಅತಿರೇಕವಾದರೆ, ಫೆರಾರಿ ಕಾರಿನ ತೆರಿಗೆ ಪ್ರಕರಣದಂಥ ಇತರ ಸಣ್ಣಪುಟ್ಟ ವಿಚಾರಗಳಲ್ಲಿ ತಪ್ಪು ಕಂಡುಹಿಡಿದು ಟೀಕಿಸುವುದು ಇನ್ನೊಂದು ಬಗೆ. ಆದರೆ, ಇದೆಲ್ಲವನ್ನೂ ಮೀರಿದ ಸರಳ, ಸಜ್ಜನಿಕೆಯ, ವಿಧೇಯ, ಸಕಾರಾತ್ಮಕ ವ್ಯಕ್ತಿ ಸಚಿನ್. 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಸಚಿನ್, ಬಹಳ ಬೇಗನೆ ಯಶಸ್ಸು, ಪ್ರಸಿದ್ಧಿ, ಸಂಪತ್ತು ಎಲ್ಲವನ್ನೂ ಕಂಡವರು. ಆದರೆ, ಯಾವತ್ತೂ ಅವರು ಆಟದ ಬಗ್ಗೆ, ಜೀವನದ ಬಗ್ಗೆ ಉಡಾಫೆ ತೋರಿದವರಲ್ಲ. ಭಾರತ ತಂಡದಲ್ಲಿ ಅವರಿಗೆ ಯಾವತ್ತೂ ಸ್ಥಾನ ಕಳೆದುಕೊಳ್ಳುವ ಭಯವಿರಲಿಲ್ಲ. ಆದರೂ, ಅವರು ತಮ್ಮ ಆಟದ ಬಗ್ಗೆ, ಪೂರ್ವಾಭ್ಯಾಸದ ಬಗ್ಗೆ ಅನಾದರ ತೋರಿದವರಲ್ಲ. ಪ್ರತಿಯೊಂದು ಪಂದ್ಯ, ಪ್ರತಿಯೊಂದು ಸರಣಿಗೆ ಮುನ್ನ, ವಾರ್ಷಿಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಯಂತೆ ಸಿದ್ಧತೆ ನಡೆಸುತ್ತಿದ್ದರು. 1998-99ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಶೇನ್ ವಾರ್ನ್​ರನ್ನು ಎದುರಿಸುವ ಸಲುವಾಗಿ ಚೆನ್ನೈನಿಂದ ಸ್ಪಿನ್ ದಿಗ್ಗಜ ಶಿವರಾಮ ಕೃಷ್ಣನ್ ಅವರನ್ನು ಮುಂಬೈಗೆ ಕರೆಸಿಕೊಂಡು ವಿಶೇಷವಾಗಿ ಅಭ್ಯಾಸ ನಡೆಸಿದ್ದರು. ಆಸ್ಟ್ರೇಲಿಯಾ ಪ್ರವಾಸವಿರಲಿ, ವಿಂಡೀಸ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಪ್ರವಾಸವಿರಲಿ, ಸವಾಲಿಗೆ ತಕ್ಕಂತೆ ತಮ್ಮದೇ ರಣತಂತ್ರ ರೂಪಿಸಿ ಅಭ್ಯಾಸ ನಡೆಸುವ, ಪ್ರತಿಯೊಬ್ಬ ಬೌಲರ್​ಗಳ ಶಕ್ತಿ, ಯುಕ್ತಿ, ದೌರ್ಬಲ್ಯಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್​ನಲ್ಲಿ ಮಾರ್ಪಾಟು ಮಾಡಿಕೊಳ್ಳುವ ಶಿಸ್ತುಬದ್ಧ ಅಭ್ಯಾಸ ಸಚಿನ್​ರಿಗಿತ್ತು. ಹಾಗೆ ನೋಡಿದರೆ, ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಗಮಿಸಿದ ಸಂದರ್ಭವೇ ಒಂದು ರೀತಿ ಭಾರತೀಯ ಕ್ರಿಕೆಟ್​ಗೆ ಸಂಕೀರ್ಣ ಕಾಲಘಟ್ಟವಾಗಿತ್ತು. ಅದಾಗ ತಾನೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರಿ ಮುಖಭಂಗ ಅನುಭವಿಸಿ ತಂಡ ಆಗಮಿಸಿತ್ತು. ಕ್ರಿಕೆಟ್ ಮಂಡಳಿ, ಮಾಧ್ಯಮಗಳು ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ತಂಡ ತುತ್ತಾಗಿತ್ತು. ಇಂಥ ಸಂದರ್ಭದಲ್ಲಿ ಜನರ ಆಕ್ರೋಶ ತಣಿಸಿ, ವಿಷಯಾಂತರ ಮಾಡುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ರಾಜ್​ಸಿಂಗ್ ಡುಂಗಾರ್​ಪುರ್ ಪಾಕ್ ಪ್ರವಾಸಕ್ಕೆ 16 ವರ್ಷದ ಹಾಲುಗಲ್ಲದ ಹುಡುಗ ಸಚಿನ್​ರನ್ನು ಆಯ್ಕೆ ಮಾಡಿದ್ದರು. ಆಯ್ಕೆಗೆ ಮುನ್ನವೇ ದಿಲೀಪ್ ವೆಂಗ್ಸರ್ಕಾರ್, ಕಪಿಲ್ ದೇವ್​ರಂಥ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದ ಸಚಿನ್, ಪಾಕ್ ಪ್ರವಾಸದ ಮೊದಲ ಟೆಸ್ಟ್​ನಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಂ, ವಕಾರ್ ಯೂನಸ್, ಅಬ್ದುಲ್ ಖಾದರ್​ರಂಥ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿ ಗಮನ ಸೆಳೆದಿದ್ದರು. ಫೈಸಲಾಬಾದ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಸಚಿನ್ 4 ಗಂಟೆಗೂ ಹೆಚ್ಚುಕಾಲ ದಿಟ್ಟ ಆಟವಾಡಿ ಚೊಚ್ಚಲ ಅರ್ಧಶತಕ ಗಳಿಸಿದ್ದಲ್ಲದೆ, ಸಂಜಯ್ ಮಂಜ್ರೇಕರ್ ಜೊತೆ 5ನೇ ವಿಕೆಟ್​ಗೆ 143 ರನ್ ಜತೆಯಾಟವಾಡಿದ್ದರು. ಸಚಿನ್ 16 ವರ್ಷದ ಹುಡುಗನಿಗಿಂತ 16 ವರ್ಷ ಅನುಭವಿ ಕ್ರಿಕೆಟಿಗನಂತೆ ಬ್ಯಾಟಿಂಗ್ ಮಾಡಿದರು ಎಂದು ಮಾರನೇ ದಿನ ಮಾಧ್ಯಮಗಳು ಕೊಂಡಾಡಿದ್ದವು. ವಿಶೇಷವೆಂದರೆ, ತೆಂಡುಲ್ಕರ್ ತಮ್ಮ ವೃತ್ತಿಜೀವನ ಪ್ರಾರಂಭದ ಮೂರೂವರೆ ವರ್ಷಗಳಲ್ಲಿ ತವರಿನಲ್ಲಿ 1 ಟೆಸ್ಟ್ ಮಾತ್ರ ಆಡಿದ್ದರು. ಉಳಿದ 20 ಟೆಸ್ಟ್​ಗಳನ್ನು ಅವರು ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನದಂಥ ದುರ್ಗಮ ಪಿಚ್​ಗಳಲ್ಲಿ ಆಡಿದ್ದರು. ಯಾವತ್ತೂ ತಮ್ಮ ಸಾಮರ್ಥ್ಯವನ್ನಷ್ಟೇ ನೆಚ್ಚಿಕೊಳ್ಳದೆ, ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಆಟದ ಮಟ್ಟವನ್ನು ಎತ್ತರಿಸಿಕೊಳ್ಳುತ್ತಿದ್ದರು.

ಸಚಿನ್​ರ ಇಂಥ ಗುಣವೇ ಅವರನ್ನು ಉಳಿದವರಿಗಿಂತ ಭಿನ್ನ ಸ್ತರದಲ್ಲಿ ನಿಲ್ಲಿಸಿತು. ಸಚಿನ್​ಗಿಂತ ಹೆಚ್ಚಿನ ಪ್ರತಿಭಾವಂತ ಎಂದೇ ಬಿಂಬಿತಗೊಂಡಿದ್ದ ವಿನೋದ್ ಕಾಂಬ್ಳಿ 24ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಬಿದ್ದರು. ಕಾಂಬ್ಳಿ-ಸಚಿನ್ ಬಾಲ್ಯದ ಗೆಳೆಯರಾಗಿದ್ದರೂ, ಜೀವನ, ವೃತ್ತಿಜೀವನ ಎರಡೂ ಕಡೆ ಸಚಿನ್​ರ ಉತ್ತಮ ಅಂಶಗಳನ್ನು ಅವರು ಕಲಿಯದೆ ವಿಫಲರಾದರು. ಜೀವನವೇ ಒಂದು ಕಾಯಂ ಗುರುಕುಲ. ಇಲ್ಲಿ ಪ್ರತಿನಿತ್ಯ, ಪ್ರತಿಕ್ಷಣ ನಾವು ಕಲಿಯುವುದು ಏನಾದರೊಂದು ಇದ್ದೇ ಇರುತ್ತದೆ. ಹಾಗಾಗಿ ಇಲ್ಲಿ ಕಲಿತು ಮುಗಿಯಿತು ಎಂಬ ಅಹಂ ಆಗಲೀ, ಕಲಿತಿದ್ದೇ ಶ್ರೇಷ್ಠ ಎಂಬ ಹೆಚ್ಚುಗಾರಿಕೆಯಾಗಲೀ ಸಲ್ಲದು. ಬಾಂದ್ರಾದ ಬಡಕುಟುಂಬದ ಹುಡುಗ ಭಾರತದ ಪರ ಕ್ರಿಕೆಟ್ ಆಡಿದ ಸರ್ವಶ್ರೇಷ್ಠ ಆಟಗಾರನೆನಿಸಿ, ‘ಭಾರತರತ್ನ’ವೇ ಆದ ಕತೆ ‘ಸಚಿನ್-ಎ ಬಿಲಿಯನ್ ಡ್ರೀಮ್್ಸ’ ಶೀರ್ಷಿಕೆಯಲ್ಲಿ ಮುಂದಿನ ತಿಂಗಳು 26ಕ್ಕೆ ಬಿಡುಗಡೆ ಆಗಲಿದೆ. ಕೋಟಿ ಕನಸುಗಳನ್ನು ಅರಳಿಸಿದ ಸಚಿನ್ ಕ್ರಿಕೆಟ್ ಕಲಿಯುವವರಿಗಷ್ಟೇ ಅಲ್ಲ, ಬದುಕಿನಲ್ಲಿ ಯಶಸ್ವಿಯಾಗುವುದಕ್ಕೂ ಬಹುದೊಡ್ಡ ಪ್ರೇರಣೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top