Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಕೊರಿಯಾ ಕಗ್ಗಂಟು ಎಚ್ಚರ ತಪ್ಪಿದರೆ ಆಪತ್ತು

Friday, 08.09.2017, 3:05 AM       No Comments

| ಎನ್​ ಪಾರ್ಥಸಾರಥಿ

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಿದೆ. ಚೀನಾವು ಉತ್ತರ ಕೊರಿಯಾ ಮೇಲೆ ತನಗಿರುವ ಪ್ರಭಾವ ಬಳಸಿ, ಆ ದೇಶ ಕ್ಷಿಪಣಿ ಪರೀಕ್ಷೆ ನಿಲ್ಲಿಸುವಂತೆ ಮಾಡಬೇಕೆಂಬುದು ಅಮೆರಿಕದ ಅಪೇಕ್ಷೆ. ಆದರೆ ತನ್ನದೇ ಸಮಸ್ಯೆಗಳಲ್ಲಿ ಸಿಲುಕಿರುವ ಚೀನಾ ಹೇಳಿದರೂ ಕಿಮ್ ಜಾಂಗ್ ಕೇಳುತ್ತಾರೆಯೇ ಎಂಬುದು ಪ್ರಶ್ನೆ.

 

ಕೊರಿಯಾ ಪರ್ಯಾಯದ್ವೀಪದಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ಉತ್ತರ ಕೊರಿಯಾ ಮೇಲೆ ಮುಗಿಬೀಳುವ ಸ್ಥಿತಿ ನಿರ್ವಣವಾಗಿದೆ. ಹೀಗಾದಲ್ಲಿ, ರಾಸಾಯನಿಕ, ಜೈವಿಕ ಮತ್ತು ಅಣ್ವಸ್ತ್ರಗಳು ಬಳಕೆಯಾಗಿ, ದ್ವಿತೀಯ ವಿಶ್ವಯುದ್ಧಕ್ಕಿಂತಲೂ ಹೆಚ್ಚಿನ ಅನಾಹುತ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಿದೆ. ನಿಖರವಾಗಿ ಗುರಿ ಸೇರುವಂತಹ ಖಂಡ, ಖಂಡಾಂತರ ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆಯನ್ನು ನಿರಂತರವಾಗಿ ಮುಂದುವರಿಸಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ‘ಉಲ್ಚಿ-ಫ್ರೀಡಂ ಗಾರ್ಡಿಯನ್’ ಎಂಬ ಹೆಸರಿನಲ್ಲಿ ‘ಸಾಮರ್ಥ್ಯಹರಣ ದಾಳಿ’ ಸೇರಿ ಭೂ, ವೈಮಾನಿಕ ಮತ್ತು ನೌಕಾ ಜಂಟಿ ಸಮರಾಭ್ಯಾಸದಲ್ಲಿ ತೊಡಗಿವೆ. ಇದರ ಮೂಲಕ ಆ ಎರಡು ರಾಷ್ಟ್ರಗಳು ತನ್ನ ಮೇಲೆ ಮುಗಿಬೀಳಲು ಮುನ್ನುಡಿ ಬರೆಯುತ್ತಿವೆ ಎಂಬುದು ಉತ್ತರ ಕೊರಿಯಾದ ಬಲವಾದ ಶಂಕೆ.

ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆಯನ್ನು ಹೆಚ್ಚಿಸುತ್ತಲೇ ಇದೆ. ಜುಲೈ 28ರಂದು ಅದು ಅತಿ ದೂರ ಸಾಗಬಲ್ಲ ಖಂಡಾಂತರ ಪ್ರಕ್ಷೇಪಣಾ ಕ್ಷಿಪಣಿಯ (ಐಸಿಬಿಎಂ) ಪ್ರಾಯೋಗಿಕ ಪರೀಕ್ಷೆ ನಡೆಸಿತುತ. ಹಾಗೂ, ಅಮೆರಿಕವನ್ನು ಮುಖ್ಯಭಾಗವನ್ನು ಉಡಾಯಿಸುವ ಸಾಮರ್ಥ್ಯ ಈ ಕ್ಷಿಪಣಿಗೆ ಇದೆ ಎಂದು ಕೊಚ್ಚಿಕೊಂಡಿತು. ಇದರಿಂದ ಸಿಟ್ಟಾದ ವಿಶ್ವಸಂಸ್ಥೆ, ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿಷೇಧಗಳನ್ನು ಹೇರಿತು. ಇನ್ನೊಂದೆಡೆ ಜಂಟಿ ಸಮರಾಭ್ಯಾಸವೂ ಮುಂದುವರಿಯಿತು.

ತನಗಿರುವ ಸ್ನೇಹ ಮತ್ತು ಪ್ರಭಾವ ಬಳಸಿಕೊಂಡು ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ಉತ್ತರ ಕೊರಿಯಾ ಮೇಲೆ ಒತ್ತಡ ಹೇರುವಂತೆ ಚೀನಾವನ್ನು ಅಮೆರಿಕ ಒತ್ತಾಯಿಸುತ್ತಲೇ ಇದೆ. ಕಳೆದ ವಾರ ಕ್ಸಿಯಾಮೆನ್​ನಲ್ಲಿ ಆಯೋಜನೆಗೊಂಡಿದ್ದ ಬ್ರಿಕ್ಸ್ ಸಮಾವೇಶದಲ್ಲಿ, ದಕ್ಷಿಣ ಏಷ್ಯಾದಲ್ಲಿ ತಾವು ಹೊಂದಿರುವ ರಾಜತಾಂತ್ರಿಕ ಪ್ರಭಾವದ ಬಗ್ಗೆ ವಿವರಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸಜ್ಜಾಗುತ್ತಿದ್ದರೆ, ಉತ್ತರ ಕೊರಿಯಾ ತನ್ನ 6ನೇ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಪರೀಕ್ಷೆಯಲ್ಲಿ ಬಳಸಲಾದ ಹೈಡ್ರೋಜನ್ ಬಾಂಬ್, ಜಪಾನ್​ನ ನಾಗಸಾಕಿಯ ಮೇಲೆ ಅಮೆರಿಕ ಹಾಕಿದ್ದ ಹೈಡ್ರೋಜನ್ ಬಾಂಬ್​ಗಿಂತಲೂ ನಾಲ್ಕರಿಂದ ಐದು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು ಎಂದು ಅದು ಹೇಳಿಕೊಂಡಿತು. ಇದು ಸಾಲದು ಎಂಬಂತೆ, ಖಂಡಾಂತರ ಕ್ಷಿಪಣಿಗಳಲ್ಲಿ (ಐಸಿಬಿಎಂ)ಗಳಲ್ಲಿ ಇಂತಹ ಬಾಂಬ್​ಗಳನ್ನು ಅಳವಡಿಸಿ, ಪ್ರಯೋಗಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿ ಗಾಯದ ಮೇಲೆ ಉಪ್ಪು ಸವರಿತು. ಇಂತಹ ಐಸಿಬಿಎಂಗಳಿಂದ ಸದ್ಯಕ್ಕೆ ಅಮೆರಿಕದ ಮುಖ್ಯಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಕಡಿಮೆ. ಆದರೆ, ಈ ಕ್ಷಿಪಣಿಗಳು ದಕ್ಷಿಣ ಕೊರಿಯಾ, ಜಪಾನ್ ಮತ್ತು ಗಡಿಭಾಗ ಗುವಾಂನಲ್ಲಿ ಇರುವ ಅಮೆರಿಕದ ಅತ್ಯಾಧುನಿಕ ಬಿ52 ಬಾಂಬರ್ಸ್ ಮತ್ತು ಫೈಟರ್​ಜೆಟ್​ಗಳಿರುವ ಆಂಡರ್ಸನ್ ವಾಯುನೆಲೆಯನ್ನು ಪುಡಿಗಟ್ಟಬಲ್ಲದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಇದರ ಹಿನ್ನೆಲೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ, ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಆರ್. ಹ್ಯಾಲೆ ಮಾತನಾಡಿ, ಉತ್ತರ ಕೊರಿಯಾದ ನಾಯಕ ರಣಕಹಳೆ ಮೊಳಗಿಸಿದ್ದಾರೆ ಎಂದರು. ಹೀಗಾಗಿ, ಈ ರಾಷ್ಟ್ರಕ್ಕೆ ತೈಲ ಪೂರೈಕೆ ಸೇರಿ ಎಲ್ಲ ಬಗೆಯ ಪೂರೈಕೆಗಳನ್ನು ಸ್ಥಗಿತಗೊಳಿಸಿ, ಬುದ್ಧಿಕಲಿಸಬೇಕು ಎಂದು ಆಗ್ರಹಿಸಿದರು.

ತನ್ನ ಸ್ನೇಹ ಮತ್ತು ಪ್ರಭಾವ ಬಳಸಿ, ಇಂತಹ ಶಕ್ತಿಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಉತ್ತರ ಕೊರಿಯಾದ ಮನವೊಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಮನವಿಗೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಕಡಿಮೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ.

ಮೊದಲನೆಯದ್ದು, ಉತ್ತರ ಕೊರಿಯಾದ ನಾಯಕನ ನಡವಳಿಕೆ ಬಗ್ಗೆ ಚೀನಾಕ್ಕೆ ಬೇಸರ ಇರಬಹುದು. ಹಾಗೆಂದು, ತನ್ನ ಪರಮಾಪ್ತ ಮಿತ್ರನೊಂದಿಗೆ ಸಂಬಂಧ ಕಡಿದುಕೊಳ್ಳಲು ಅದು ಬಯಸುವುದಿಲ್ಲ. ಆ ರಾಷ್ಟ್ರದ ಒಟ್ಟಾರೆ ವ್ಯಾಪಾರ ವಹಿವಾಟಿನಲ್ಲಿ ಚೀನಾ ಶೇ.90 ಪಾಲು ಹೊಂದಿರುವುದು ಇದಕ್ಕೆ ಕಾರಣ. ಆ ದೇಶದ ಬಹುತೇಕ ತೈಲ ಪೂರೈಕೆ ಚೀನಾವನ್ನು ಅವಲಂಬಿಸಿದೆ. ಹಾಗಾಗಿ, ಉತ್ತರ ಕೊರಿಯಾ ಮೇಲೆ ನಿರ್ಬಂಧವನ್ನು ಒಪ್ಪಲು ಅದು ಸಿದ್ಧವಿಲ್ಲ. ಉತ್ತರ ಕೊರಿಯಾ ದುರ್ಬಲಗೊಂಡರೆ, ಅಲ್ಲಿನ ಲಕ್ಷಾಂತರ ನಿರಾಶ್ರಿತರು ಚೀನಾಕ್ಕೆ ವಲಸೆ ಬರುತ್ತಾರೆ. ಇದರ ಜತೆಗೆ, ಉತ್ತರ ಕೊರಿಯಾದಲ್ಲಿ ಪಾಶ್ಚಿಮಾತ್ಯ-ಪರ ಆಡಳಿತ ಬರುವುದು ಚೀನಾಕ್ಕೆ ಇಷ್ಟವಿಲ್ಲ. ಹಾಗಾದಲ್ಲಿ ಅಮೆರಿಕ ತನ್ನ ಮನೆಬಾಗಿಲಿಗೆ ಬಂದಂತೆಯೇ ಸರಿ ಎಂಬುದು ಚೀನಾದ ಲೆಕ್ಕಾಚಾರ.

ಎರಡನೆಯದಾಗಿ, ಉತ್ತರ ಕೊರಿಯಾ ’ಜೂಚೆ’ ಎಂಬ ಪರಿಕಲ್ಪನೆ ಹೊಂದಿದ್ದು, ಆ ಮೂಲಕ, ರಾಜಕೀಯ, ಆರ್ಥಿಕ ಸ್ವಾವಲಂಬನೆ ಹೊಂದುವುದು, ಬಾಹ್ಯ ಬೆಂಬಲವಿಲ್ಲದೆ ತನ್ನನ್ನು ರಕ್ಷಿಸಿಕೊಳ್ಳುವುದು ಈ ಪರಿಕಲ್ಪನೆಯ ಮುಖ್ಯಾಂಶಗಳು. ಇದಕ್ಕೆ ಪೂರಕವಾಗಿ ‘ಬ್ಯುಂಗ್​ಜಿನ್’ ಎಂಬ ಮತ್ತೊಂದು ನೀತಿಯನ್ನು ರೂಪಿಸಿ, ಆರ್ಥಿಕತೆ ಮತ್ತು ಅಣ್ವಸ್ತ್ರಗಳ ಅಭಿವೃದ್ಧಿಗೆ ಅದು ಮುಂದಾಗಿದೆ. ಅದರ ಮಿಲಟರಿ ಬಲಿಷ್ಠವಾಗಿದೆ. ಹಾಗಾಗಿ, ಚೀನಾ ಒತ್ತಾಯಿಸಿದರೂ ಅದು ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾರದು. ಅಣ್ವಸ್ತ್ರಗಳು ರಕ್ಷಣೆಯ ವಿಮೆ ಎಂದೇ ಅದು ಪರಿಗಣಿಸಿದೆ. ಹಾಗಾಗಿ, ಎಂತಹ ಬೆಲೆಯನ್ನು ತೆತ್ತಾದರೂ ಅದನ್ನು ರಕ್ಷಿಸಿಕೊಳ್ಳಲು ಅದು ಸಜ್ಜಾಗಿದೆ. ಇರಾಕ್, ಸಿರಿಯಾ ಮತ್ತಿತರ ರಾಷ್ಟ್ರಗಳು ಸಿಲುಕಿರುವ ಮತ್ತು ಅನುಭವಿಸುತ್ತಿರುವ ಸಂಕಷ್ಟಗಳಿಂದ ಅದು ಕಲಿತಿರುವ ಪಾಠದ ಪರಿಣಾಮವಿದು.

ಅಂತಾರಾಷ್ಟ್ರೀಯ ಕಾನೂನಿಗೆ ಮಾನ್ಯತೆ ನೀಡದ ಉತ್ತರ ಕೊರಿಯಾಕ್ಕೆ ಮಾಧ್ಯಮಗಳು ’ಧೂರ್ತ ರಾಷ್ಟ್ರ’ ಎಂಬ ಹಣೆಪಟ್ಟಿ ಲಗತ್ತಿಸಿವೆ. ಇತರೆ ರಾಷ್ಟ್ರಗಳನ್ನು ಬ್ಲಾ್ಯಕ್ ಮೇಲ್ ಮಾಡಲು ಮತ್ತು ಹೆದರಿಸಲು ಅದು ಹಿಂಜರಿಯುವುದಿಲ್ಲ ಎಂದು ಆರೋಪಿಸಿದ್ದಾರೆ. ಇದು ವಾಸ್ತವವೇ?

ಪ್ಯೋಂಗ್​ಯಾಂಗ್​ನ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ 1994ರಲ್ಲಿ ಕ್ಲಿಂಟನ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರಿಂದ, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುವ ಆಶಾಭಾವ ಮೂಡಿತ್ತು.

ಈ ಒಪ್ಪಂದದ ಪ್ರಕಾರ ಅಮೆರಿಕ ನೇತೃತ್ವ ಮೈತ್ರಿಕೂಟ, ಹಗುರಜಲ ರಿಯಾಕ್ಟರ್​ಗಳನ್ನು ನಿರ್ವಿುಸಿಕೊಡಬೇಕಿತ್ತು. ಜತೆಗೆ, 5 ಲಕ್ಷ ಟನ್ ಭಾರತೈಲವನ್ನು ಪೂರೈಕೆ ಮಾಡಬೇಕಿತ್ತು, ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರಗಳ ಪಟ್ಟಿಯಿಂದ ಉತ್ತರ ಕೊರಿಯಾದ ಹೆಸರನ್ನು ಕೈಬಿಡಬೇಕಿತ್ತು. ಈ ಒಪ್ಪಂದದ ಪ್ರತಿ ಅಂಶವನ್ನೂ ಉತ್ತರ ಕೊರಿಯಾ ಪಾಲಿಸುತ್ತಿದೆ ಎಂದು ಅಮೆರಿಕ ಅಧಿಕಾರಿಗಳು 1998ರಲ್ಲಿ ಹೇಳಿದ್ದರು ಕೂಡ. ಆದರೆ, ಈ ಒಪ್ಪಂದವನ್ನು ಸ್ವತಃ ಅಮೆರಿಕವೇ 2002ರಲ್ಲಿ ಉಲ್ಲಂಘಿಸಿತು. ಆಗ ಅಧಿಕಾರಕ್ಕೆ ಬಂದ ಬುಷ್, ಮತ್ತೆ ಉತ್ತರ ಕೊರಿಯಾವನ್ನು ದುಷ್ಟಕೂಟ ಎಂಬ ಪಟ್ಟಿಗೆ ಸೇರ್ಪಡೆಗೊಳಿಸಿ, 1994ರಲ್ಲಿ ಆಗಿದ್ದ ಒಪ್ಪಂದವನ್ನು ರದ್ದುಗೊಳಿಸಿದರು. ಹೀಗಾಗಿ ಉತ್ತರ ಕೊರಿಯಾ, ಅಣ್ವಸ್ತ್ರ ಪ್ರಸರಣ ನಿಷೇಧ (ಎನ್​ಪಿಟಿ) ಒಪ್ಪಂದದಿಂದ ಹೊರಬಂದಿತು. ನಿಷೇಧಗಳ ಭಾರ ಹೆಚ್ಚಾಗುತ್ತಿದ್ದಂತೆ, 2016ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಬೆದರಿಸಲು ಆರಂಭಿಸಿತು. ಇದಕ್ಕಾಗಿ ಅದು ಪಾಕಿಸ್ತಾನಕ್ಕೆ ಕ್ಷಿಪಣಿ ತಂತ್ರಜ್ಞಾನವನ್ನು ಕೊಟ್ಟು, ಬದಲಾಗಿ ಅಣ್ವಸ್ತ್ರ ತಂತ್ರಜ್ಞಾನವನ್ನು ಪಡೆದುಕೊಂಡಿತ್ತು.

ಅದಾದ ಹಲವು ವರ್ಷಗಳ ಬಳಿಕ, ಐಸಿಬಿಎಂ ಸಾಮರ್ಥ್ಯ ಹೊಂದಿರುವ ಉತ್ತರ ಕೊರಿಯಾದ ಅಣ್ವಸ್ತ್ರಗಳ ದಾಳಿಯ ಆತಂಕದ ಬಲೆಯಲ್ಲಿ ಜಗತ್ತು ಸಿಕ್ಕಿಬಿದ್ದಿದೆ. ಆದರೆ, ಸದ್ಯ ಪ್ರಾದೇಶಿಕ ಕಾರ್ಯತಂತ್ರ ವಾತಾವರಣ ಸಾಕಷ್ಟು ಬದಲಾವಣೆಗಳಿಗೆ ಒಳಪಟ್ಟಿರುವುದರಿಂದ ದಾಳಿ ದಾಳಿ ಮಾಡುವುದು ಒಳ್ಳೆಯ ಆಯ್ಕೆ ಎನಿಸಿಕೊಳ್ಳುವುದಿಲ್ಲ.

ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಅಥವಾ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಸ್ವಲ್ಪ ಎಡವಿದರೂ, ಪರಿಸ್ಥಿತಿ ನಿಯಂತ್ರಿಸಲಾರದಷ್ಟು ಹದಗೆಡಲಿದೆ. ಚೀನಾ ಮತ್ತು ರಷ್ಯಾ ಸಲಹೆ ನೀಡಿರುವಂತೆ, ಮಾತುಕತೆ ಮೂಲಕ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ಉತ್ತರ ಕೊರಿಯಾದ ಮನವೊಲಿಸುವುದು ಉತ್ತಮ ಎನಿಸುತ್ತದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸ ಸ್ಥಗಿತಗೊಳಿಸಿದರೆ, ಈ ಪ್ರಯತ್ನಕ್ಕೆ ಉತ್ತಮ ಆರಂಭ ದೊರೆತಂತಾಗುತ್ತದೆ. ಇದಾದ ಬಳಕ, ಆರು ಪಕ್ಷಗಳನ್ನು ಒಳಗೊಂಡ ಮಾತುಕತೆ ಮೂಲಕ ನಂಬಿಕೆ ಮತ್ತು ವಿಶ್ವಾಸವೃದ್ಧಿಗೆ ಮುಂದಾಗಬೇಕು. ಈ ವಿಷಯದಲ್ಲಿ ಯಾವೊಬ್ಬ ನಾಯಕರು ಇಡುವ ತಪ್ಪುಹೆಜ್ಜೆ ಭಾರಿ ಅನಾಹುತವನ್ನೇ ಸೃಷ್ಟಿಸಬಹುದಾಗಿದೆ. ಇದು ಯುದ್ಧ ಮಾಡುವ ಸಮಯವಲ್ಲ. ಬದಲಿಗೆ, ರಾಜತಾಂತ್ರಿಕ ನೈಪುಣ್ಯ ಬಳಸಿಕೊಂಡು ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದರಲ್ಲಿ ಜಾಣತನ ಅಡಗಿದೆ. ಈ ನಿಟ್ಟಿನಲ್ಲಿ ಅಮೆರಿಕ ನಾಯಕತ್ವ ವಹಿಸುವುದೇ?

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top